ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾಂವ ಬಂದಾನ |
ಗುಣುಗುಣು ಗುಟ್ಟುತ, ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ |
ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬವಂತನ ಹಿಡಿದು ತಂದಾನ |
ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
ಧಣಿ ದಾನ ಕೊಡುವನು ಅಂದಾನ |…
ದ.ರಾ ಬೇಂದ್ರೆಯವರ ಈ ಪದ್ಯ ಯಾರಿಗೆ ತಾನೆ ಗೊತ್ತಿಲ್ಲ. ಪ್ರಾಥಮಿಕ ಶಾಲೆಯ ಪಠ್ಯದಲ್ಲೂ ಇದನ್ನು ಕಲಿತಿದ್ದೇವೆ. ಆಗ ಈ ಪದ್ಯದ ಅರ್ಥ ಎಷ್ಟರ ಮಟ್ಟಿಗೆ ಅರ್ಥವಾಗಿತ್ತು ಗೊತ್ತಿಲ್ಲ. ಬೆಳೆಯುತ್ತಾ ಈ ಪದ್ಯದ ಒಡಲ ದನಿ ಅರ್ಥ ಮಾಡಿಕೊಂಡಿದ್ದೇವೆ. ಆದರೆ, ಈ ಸಂಪ್ರದಾಯ ಮಾಯವಾಗಿ ವರ್ಷಗಳೇ ಕಳೆದಿವೆ. ಆಧುನಿಕತೆ ಬೆಳೆದಂತೆ, ಗ್ರಾಮೀಣ ಪ್ರದೇಶಗಳು ನಗರಗಳ ಸಂಪ್ರದಾಯಕ್ಕೆ ಒಗ್ಗಿಕೊಂಡು, ಕರಡಿ ಕುಣಿತದಂತೆ ಹಾವು-ಕೋತಿ ಆಟ, ಸರ್ಕಸ್‌ಗಳಂತಹ ಸಂಪ್ರದಾಯಗಳು ಸಂಪೂರ್ಣವಾಗಿ ಮರೆಗೆ ಸರಿದಿವೆ. ಈ ಆಟಗಳು ಪ್ರಾಣಿ ಹಿಂಸೆಗೆ ಎಡೆ ಮಾಡಿಕೊಡುತ್ತವೆ ಎನ್ನುವ ವಾದ ಒಂದೆಡೆಯಿದ್ದರೂ, ಹಲವು ಸಮುದಾಯಗಳಿಗೆ ಇದೇ ಹೊಟ್ಟೆ ಹೊರೆಯುವ ಮಾರ್ಗವಾಗಿತ್ತು.
ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿದ್ದ ಅತ್ಯಾಕರ್ಷಕ ʼಕರಡಿ ಕುಣಿತʼ ದೃಶ್ಯ ಇಂದು ಸಂಪೂರ್ಣವಾಗಿ ಮಾಯವಾಗಿದೆ. ʼಕರಡಿ ಖಲಂದರ್ʼ ಎಂದೇ ಪರಿಚಿತವಾದ ಈ ಸಮುದಾಯದ ಪರಂಪರೆ ಈಗ ಕೇವಲ ನೆನಪುಗಳಲ್ಲಿ ಮಾತ್ರ ಉಳಿದಿದೆ. ಬೆಳಗಿನ ಸಮಯ ಹಳ್ಳಿಯ ಬೀದಿಗಳಲ್ಲಿ ಧೂಳು ಎಬ್ಬಿಸುತ್ತ ಕರಡಿ ಕುಣಿತ ಆರಂಭವಾದರೆ, ಜೋರು ಕೂಗು ಕೂಗುತ್ತಾ, ಚಪ್ಪಾಳೆ ತಟ್ಟುತ್ತಾ ಹೆದರಿಕೆಯಿಂದಲೇ ಆಟ ನೋಡುತ್ತಿದ್ದ ಮಕ್ಕಳೂ ಕರಡಿಯೊಂದಿಗೆ ಆಡುತ್ತಿದ್ದವು. ದೊಡ್ಡವರು ಹೆಗಲ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಕರಡಿ ಆಟ ತೋರಿಸುತ್ತಿದ್ದರು. ಕಂಬಳಿ ಹೊದ್ದ ಮನುಷ್ಯನೊಬ್ಬ ಕೈಯಲ್ಲಿ ಕುಣಿಕೋಲು ಹಿಡಿದು ಆಡಿಸುತ್ತಿದ್ದರೆ, ಕರಡಿ ಕುಣಿಯುವುದ ನೋಡುವುದೇ ಚೆಂದ.

ಕರಡಿ ಕುಣಿಸುವ ಸಂಪ್ರದಾಯವನ್ನು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಸುಗ್ಗಿ ಹಬ್ಬದ ಸಮಯದಲ್ಲಿ ನಡೆಸಲಾಗುತ್ತಿತ್ತು.
ಕರಡಿ ಕುಣಿಸುವವರು ಗ್ರಾಮದಿಂದ ಗ್ರಾಮಕ್ಕೆ ತೆರಳಿ ಪ್ರದರ್ಶನ ನೀಡಿ, ಜನರಿಂದ ಹಣ, ದವಸ-ಧಾನ್ಯ ಅಥವಾ ಆಹಾರ ಪದಾರ್ಥಗಳನ್ನು ಸ್ವೀಕರಿಸುತ್ತಿದ್ದರು. ಇದೇ ಅವರ ಮುಖ್ಯ ಜೀವನೋಪಾಯವಾಗಿತ್ತು.
ಕರ್ನಾಟಕದ ಬಳ್ಳಾರಿ, ಕೊಪ್ಪಳ, ಕೋಲಾರ, ಬೆಳಗಾವಿ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ಖಲಂದರ್ ಸಮುದಾಯ ನೆಲೆಸಿದೆ. ಕರಡಿಯನ್ನು ಕಾಡಿನಿಂದ ತರಿಸಿ ಮನೆಯ ಸದಸ್ಯನಂತೆ ಬೆಳೆಸಿ, ಗ್ರಾಮದಿಂದ ಗ್ರಾಮಕ್ಕೆ ತೆರಳಿ ಕರಡಿ ಕುಣಿಸಿ ಜೀವನ ನಡೆಸುವುದು ಇವರ ಮೂಲ ಉದ್ಯೋಗವಾಗಿತ್ತು. ಆದರೆ, ಮುಂದಿನ ದಿನಗಳಲ್ಲಿ ಕಾನೂನುಗಳ ಕಟ್ಟುನಿಟ್ಟಿನ ಅನುಷ್ಠಾನದ ಪರಿಣಾಮ ಈಗ ಈ ಆಟಗಳು ಎಲ್ಲೂ ಕಾಣಸಿಗುತ್ತಿಲ್ಲ. ಪ್ರಾಣಿ ಹಿಂಸೆ ತಡೆಯಲು ಅರಣ್ಯ ಇಲಾಖೆ ಹಾಗೂ ಪ್ರಾಣಿ ದಯಾ ಸಂಘಗಳು ಹೇರಿದ ನಿಯಮಗಳ ಹಿನ್ನೆಲೆ ಕರಡಿಗಳನ್ನು ಹಿಡಿದು ಪಳಗಿಸುವುದು ಮತ್ತು ಅದರಿಂದ ಆದಾಯ ಗಳಿಸುವುದನ್ನು ಸಂಪೂರ್ಣ ನಿಷೇಧಿಸಲಾಯಿತು. ಇದರಿಂದ ʼಕರಡಿ ಕುಣಿತʼ ಎನ್ನುವ ಒಂದು ವಿಶಿಷ್ಟ ಸಂಪ್ರದಾಯವೇ ನಿಂತು, ಖಲಂದರ್‌ಗಳ ಜೀವನದ ಮುಖ್ಯ ಆಧಾರವೇ ಕುಸಿದುಬಿದ್ದಿದೆ.
ಕರಡಿ ಕುಣಿಸಿ ಜೀವನ ನಡೆಸುತ್ತಿದ್ದ ಕುಟುಂಬಗಳು ಇಂದು ಪ್ಲಾಸ್ಟಿಕ್ ಹಾಗೂ ಈಚಲು ಚಾಪೆಗಳನ್ನು ತಯಾರಿಸುತ್ತಿವೆ. ಕೆಲವರು ಕೃಷಿ ಕೂಲಿ ಕೆಲಸಗಳಲ್ಲಿ ತೊಡಗಿದರೆ, ಮತ್ತೆ ಕೆಲವರು ಸಣ್ಣ ವ್ಯಾಪಾರಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಶಿಕ್ಷಣದ ಕೊರತೆಯಿಂದ ಇವರಲ್ಲಿ ಬಹುತೇಕರು ಯಾವುದೇ ಪದವಿ ಅಥವಾ ವಿಶೇಷ ಕೌಶಲ್ಯ ಗಳಿಸದೆ ಇದ್ದರೂ, ಬದುಕು ಮುಂದುವರಿಸಲು ಹೊಸ ಮಾರ್ಗಗಳನ್ನು ಹುಡುಕಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಈ ಸಮುದಾಯದ ಕೆಲವು ಕುಟುಂಬಗಳು ಇನ್ನೂ ಕಂಡುಬರುತ್ತವೆ.
ಕರಡಿ ಕುಣಿತದ ಹಳೆಯ ನೆನಪುಗಳನ್ನು ಹಂಚಿಕೊಂಡ ಸಾಹಿತಿ ದೊಡ್ಡನಿಂಗಪಗೊಳ ಈದಿನಕ್ಕೆ ಪ್ರತಿಕ್ರಿಯಿಸಿ, “ಚಿಕ್ಕ ವಯಸ್ಸಿನಲ್ಲಿ ಕರಡಿ ಕುಣಿತ ಸಾಮಾನ್ಯ ದೃಶ್ಯವಾಗಿತ್ತು. ಅದು ಮಕ್ಕಳಿಗಷ್ಟೇ ಅಲ್ಲ ವಯಸ್ಕರಿಗೆ, ವಯೋವೃದ್ಧರಿಗೂ ಮನರಂಜನೆ ನೀಡುತ್ತಿತ್ತು. ಕರಡಿ ಕೂದಲಿನಿಂದ ಮಾಡಿದ ಕರಿ ದಾರವನ್ನು ಮಕ್ಕಳಿಗೆ ಕಟ್ಟಿದರೆ ಹಾಗೂ ಕರಡಿಯ ಮೇಲೆ ಕೂರಿಸಿದರೆ ಮಕ್ಕಳು ಹೆದರುವುದಿಲ್ಲ ಎಂಬ ನಂಬಿಕೆಯೂ ಇತ್ತು. ನಂತರ ಅರಣ್ಯ ಇಲಾಖೆಯ ಕಾನೂನು ನಿಯಮಗಳಿಂದ ಖಲಂದರ್ ಗಳು ಬೇರೆ ಉದ್ಯೋಗಗಳಲ್ಲಿ ತೊಡಗಿಕೊಳ್ಳುವುದು ಅನಿವಾರ್ಯವಾಯಿತು. ಇದರಿಂದ ಜಾನಪದ ಕಲೆಯೊಂದು ಮರೆಯಾಗಿರುವುದು ಸತ್ಯ. ಒಬ್ಬರಿಂದ ಒಂದು ಕಲೆಯನ್ನೋ, ವೃತ್ತಿಯನ್ನೋ ಕಸಿದುಕೊಳ್ಳುವುದಾರೆ, ಅಂತಹವರನ್ನು ಗುರುತಿಸಿ ಪರ್ಯಾಯ ಮಾರ್ಗಗಳನ್ನು ತೋರಿಸಬೇಕು, ಸರ್ಕಾರದ ಕೆಲಸ. ಆದರೆ ಆ ಕೆಲಸ ನಿಜವಾಗಿಯೂ ಆಗಿಲ್ಲ ಎನ್ನುವುದು ಬೇಸರದ ಸಂಗತಿ” ಎಂದರು.

ಊರಿನ ಓಣಿಗಳಲ್ಲಿ ಸಾಮಾನ್ಯವಾಗಿದ್ದ ಕರಡಿ ಕುಣಿತ ಇಂದು ಹಿರಿಯರ ನೆನಪುಗಳಲ್ಲಿ, ಮಕ್ಕಳ ಪಠ್ಯಪುಸ್ತಕಗಳಲ್ಲಿ ಮಾತ್ರ ಉಳಿದಿದೆ. ಪ್ರಾಣಿ ಹಿಂಸೆ ತಡೆಯುವ ನಿಟ್ಟಿನಲ್ಲಿ ಮತ್ತು ಕರಡಿ ಸಂತತಿ ಉಳಿಸಲು ಸರ್ಕಾರ ತೆಗೆದುಕೊಂಡ ಕಾನೂನಾತ್ಮಕ ನಿರ್ಧಾರವು ಸ್ವಾಗತಾರ್ಹ ವಿಷಯವಾದರೂ ಒಳ್ಳೆಯದಾದರೂ, ಅದರ ಪರಿಣಾಮದಿಂದ ಬದುಕು ಬದಲಾದ ಈ ಸಮುದಾಯಕ್ಕೆ ಸರಿಯಾದ ಶಿಕ್ಷಣ ಮತ್ತು ಪುನರ್ವಸತಿ ಅಗತ್ಯವಿದೆ.
ಇದನ್ನೂ ಓದಿ: ಬೆಳಗಾವಿ | ಕಬ್ಬು ಬೆಳೆಗಾರರಿಗೆ ತೂಕದಲ್ಲಿ ಮೋಸ; ಆದೇಶ ಗಾಳಿಗೆ ತೂರಿದವೇ ಕಾರ್ಖಾನೆಗಳು?
ಕರಡಿ ಕುಣಿತ ಕೇವಲ ಗ್ರಾಮೀಣ ಮನರಂಜನೆ ಅಥವಾ ಜಾನಪದ ಕಲೆಯಾಗಿಯಷ್ಟೇ ಅಲ್ಲ, ಅದೊಂದು ಸಮುದಾಯದ ಶತಮಾನಗಳ ಬದುಕಿನ, ಸಂಪ್ರದಾಯದ, ಸಂಸ್ಕೃತಿಯ ಹಾದಿಯ ಗುರುತಾಗಿತ್ತು. ಕಾನೂನುಬದ್ಧ ನಿರ್ಬಂಧಗಳಿಂದ ಈ ಕಲೆ ನಿಂತದ್ದು ಪ್ರಾಣಿ ಹಿಂಸೆ ತಡೆಯುವ ಮಾನವೀಯ ಮತ್ತು ಅಗತ್ಯ ಕ್ರಮವಾಗಿದ್ದರೂ, ಅದರ ಪರಿಣಾಮವಾಗಿ ಬದುಕಿನ ಆಧಾರವನ್ನೇ ಕಳೆದುಕೊಂಡ ಖಲಂದರ್ ಸಮುದಾಯದ ಸಂಕಷ್ಟವನ್ನು ಕಡೆಗಣಿಸಲಾಗದು. ಒಂದು ಸಂಪ್ರದಾಯದ ಅಂತ್ಯ ಮತ್ತೊಂದು ಜೀವನದ ಅನಿಶ್ಚಿತತೆಯನ್ನು ತಂದಾಗ, ಕೇವಲ ನಿಷೇಧವೇ ಪರಿಹಾರವಲ್ಲ; ಪರ್ಯಾಯ ಬದುಕಿನ ಭರವಸೆ ನೀಡುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ. ಪ್ರಾಣಿ ಹಿತರಕ್ಷಣೆಯ ಜೊತೆಗೆ ಮನುಷ್ಯನ ಬದುಕಿನ ಹಿತ ಕಾಪಾಡಿದಾಗ ಮಾತ್ರ ಇಂತಹ ಕಾನೂನುಗಳು ಸಾರ್ಥಕತೆ ಪಡೆಯುತ್ತವೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು




