2025ರ ರೈತ ಚಳವಳಿಗಳು ಕರ್ನಾಟಕದ ಕೃಷಿ ಸಂಕಷ್ಟವನ್ನು ಮತ್ತೊಮ್ಮೆ ಬೆಳಕಿಗೆ ತಂದವು. ಭೂ ಸ್ವಾಧೀನದಲ್ಲಿ ರೈತರು ವಿಜಯ ಸಾಧಿಸಿದರೂ, ದೀರ್ಘಕಾಲೀನ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳತ್ತ ನೋಡುವುದು ಮುಂದುವರೆದಿದೆ...
ರಾಜ್ಯಾದ್ಯಂತ 2025ರ ವರ್ಷದಲ್ಲಿ ರೈತರು ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಬೆಳೆ ಬೆಲೆ ಕುಸಿತ, ಉತ್ಪಾದನಾ ವೆಚ್ಚ ಹೆಚ್ಚಳ, ಸಾಲದ ಹೊರೆ, ಭೂ ಸ್ವಾಧೀನ ಸಮಸ್ಯೆಗಳು ಮತ್ತು ಸರ್ಕಾರಿ ನೀತಿಗಳ ತೊಡಕುಗಳು ರೈತರನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ, ಧರಣಿ, ಸತ್ಯಾಗ್ರಹ, ಜಾಥಾ, ರ್‍ಯಾಲಿ, ಹೋರಾಟಗಳಿಗೆ ಈಡುಮಾಡಿದವು. ಈ ವರ್ಷದ ಪ್ರಮುಖ ಹೋರಾಟಗಳು ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ಕೇಂದ್ರೀಕೃತವಾಗಿದ್ದವು. ಅಲ್ಲಿ ಕಬ್ಬು, ಜೋಳ ಮತ್ತು ಇತರ ಬೆಳೆಗಳ ಬೆಲೆ ಸಮಸ್ಯೆಗಳು ತೀವ್ರಗೊಂಡವು.
ಕರ್ನಾಟಕ ರಾಜ್ಯ ರೈತ ಸಂಘ (KRRS), ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ (KPRS) ಮತ್ತು ಇತರ ಸಂಘಟನೆಗಳು ಈ ಚಳವಳಿಗಳನ್ನು ಮುನ್ನಡೆಸಿದವು. ಈ ಹೋರಾಟಗಳು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ನಿರ್ದೇಶಿತವಾಗಿದ್ದವು ಮತ್ತು ಅವುಗಳು ರಾಜಕೀಯ ಬಣ್ಣ ಪಡೆದವು. ಬಿಜೆಪಿ ವಿರೋಧ ಪಕ್ಷವಾಗಿ ಭಾಗವಹಿಸಿದರೆ, ಕಾಂಗ್ರೆಸ್ ಸರ್ಕಾರ ಕೇಂದ್ರವನ್ನು ದೂಷಿಸಿತು.
ದೇವನಹಳ್ಳಿ-ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಚಳವಳಿ(ಜನವರಿ-ಜುಲೈ 2025)
ದೇವನಹಳ್ಳಿ-ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಚಳವಳಿ 2025ರ ಮೊದಲಾರ್ಧದಲ್ಲಿ ಅತ್ಯಂತ ದೀರ್ಘಕಾಲೀನ ಮತ್ತು ಐತಿಹಾಸಿಕ ಚಳವಳಿಯಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾ ಡೆವಲಪ್‌ಮೆಂಟ್ ಬೋರ್ಡ್(KIADB) 1,777 ಎಕರೆ ಫಲವತ್ತಾದ ಭೂಮಿಯನ್ನು ಉದ್ಯಮಗಳಿಗಾಗಿ ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿತು. ಇದು ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್‌ಗಾಗಿ ಎಂದು ಹೇಳಲಾಗಿತ್ತು. ಆದರೆ ರೈತರು ಇದನ್ನು ಕಾರ್ಪೊರೇಟ್ ಲಾಭಕ್ಕಾಗಿ ಭೂ ಕಬಳಿಕೆ ಎಂದು ಆರೋಪಿಸಿದರು.

2022ರಿಂದ ಮುಂದುವರೆದ ಪ್ರತಿಭಟನೆ ನಿರಂತರವಾಗಿ 1,198 ದಿನಗಳವರೆಗೆ ನಡೆಯಿತು. ರೈತರು ಚನ್ನರಾಯಪಟ್ಟಣ ಉಪಕಚೇರಿಯಲ್ಲಿ ನಿತ್ಯವೂ ಧರಣಿ ನಡೆಸಿದರು. ಜೂನ್‌ನಲ್ಲಿ ಬೆಂಗಳೂರಿಗೆ ಅನಿರ್ದಿಷ್ಟಾವಧಿ ಧರಣಿ ಯೋಜನೆ, ಜುಲೈನಲ್ಲಿ ಸ್ವಾಮಿನಾಥನ್ ಆಯೋಗದಂತೆ MSP ಕಾನೂನು ಜಾರಿಗೆ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಜುಲೈ 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಧೀನ ನೋಟಿಸ್‌ಗಳನ್ನು ರದ್ದುಗೊಳಿಸಿ, ರೈತರ ಹೋರಾಟವನ್ನು ʼಐತಿಹಾಸಿಕ ಹೋರಾಟʼ ಎಂದು ಕರೆದರು. ಇದು ರೈತರ ಬೃಹತ್ ವಿಜಯವಾಯಿತು. ರಾಜ್ಯದಲ್ಲಿ ಭೂ ಸ್ವಾಧೀನ ನೀತಿಗಳ ವಿರುದ್ಧ ರೈತರು ಒಗ್ಗಟ್ಟಾಗಿ ಸರ್ಕಾರದ ನಿದ್ದೆಗೆಡಿಸಿದ್ದು, ಈ ಹೋರಾಟದಿಂದ ಸಾಬೀತಾಗಿದೆ.
ಬೆಂಬಲ ಬೆಲೆಗೆ ಕಬ್ಬು ಬೆಳೆಗಾರರ ಹೋರಾಟ (ನವೆಂಬರ್ 2025)
ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ತೀವ್ರ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ನಿಗದಿಪಡಿಸಿದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ(FRP) ₹3,550 ಪ್ರತಿ ಟನ್ ಆದರೆ, ಕಟಾವು ಮತ್ತು ಸಾಗಾಣಿಕೆ ವೆಚ್ಚ ಕಳೆದ ನಂತರ ರೈತರಿಗೆ ₹2,600-3,000 ಮಾತ್ರ ಬರುತ್ತಿತ್ತು. ರೈತರು ಪ್ರತಿ ಟನ್‌ಗೆ ₹3,500ಕ್ಕೆ ಆಗ್ರಹಿಸಿದರು.

ನವೆಂಬರ್ ಆರಂಭದಲ್ಲಿ ಗುರ್ಲಾಪುರ ಕ್ರಾಸ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭವಾಯಿತು. ಹೆದ್ದಾರಿ ತಡೆ, ಬಂದ್, ರಾತ್ರಿ ಧರಣಿ, ಟೈಯರ್ ಸುಡುವಿಕೆ ಸೇರಿದಂತೆ ಹಲವು ರೀತಿಯ ಪ್ರತಿಭಟನೆಗಳು ನಡೆದವು. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿದಂತೆ ವಿರೋಧ ಪಕ್ಷಗಳು ಬೆಂಬಲ ನೀಡಿದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದು, ಬಿಜೆಪಿ ಸರ್ಕಾರವನ್ನು ʼರೈತ ವಿರೋಧಿʼ ಎಂದು ಆರೋಪಿಸಿದರು.
ನಿರಂತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ನವೆಂಬರ್ 7ರ ವೇಳೆಗೆ ಕೆಲವು ರಾಜಿ ಮಾತುಕತೆಗಳು ನಡೆದವು. ಆದರೆ ಸಂಪೂರ್ಣ ಪರಿಹಾರ ಸಿಗಲಿಲ್ಲ. ಸಕ್ಕರೆ ಕಾರ್ಖಾನೆಗಳು ಕ್ರಷಿಂಗ್ ನಿಲ್ಲಿಸಿದ್ದರಿಂದ ರೈತರಿಗೆ ಹೆಚ್ಚಿನ ನಷ್ಟ ಉಂಟಾಯಿತು. ಈ ಚಳವಳಿ ರಾಜ್ಯದ ಸಕ್ಕರೆ ಉದ್ಯಮದ ಸಂಕಷ್ಟವನ್ನು ಬಯಲುಮಾಡಿತು ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ತಂದಿತು.
ಮೆಕ್ಕೆಜೋಳ ಬೆಳೆಗಾರರ ಪ್ರತಿಭಟನೆ (ನವೆಂಬರ್-ಡಿಸೆಂಬರ್ 2025)
ಅತಿವೃಷ್ಟಿ ಮತ್ತು ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ್ದ ರೈತರು ಕಿತ್ತೂರು ಕರ್ನಾಟಕ ಭಾಗದ ಧಾರವಾಡ, ಹಾವೇರಿ, ಗದಗ ಹಾಗೂ ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆಗಾರರು ಪ್ರತಿ ಕ್ವಿಂಟಲ್‌ಗೆ MSP ₹3,000ಕ್ಕೆ ಆಗ್ರಹಿಸಿ ಪ್ರತಿಭಟಿಸಿದರು.

ನವೆಂಬರ್ 24ರಂದು ಹಾವೇರಿ, ಗದಗ ಜಿಲ್ಲೆಗಳಲ್ಲಿ ಜಾಥಾ, ಧರಣಿ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ, ಹೆದ್ದಾರಿ ತಡೆಯಂತಹ ಪ್ರತಿಭಟನೆಗಳು ನಡೆದವು. ಕೆಲವು ಕಡೆ ಉಪವಾಸ ಹಿಂಪಡೆಯಲಾಯಿತು. ಆದರೆ ಸಂಪೂರ್ಣ ಬೇಡಿಕೆ ಈಡೇರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗಳು ಹೆಚ್ಚಾದಾಗ ₹2500 ಬೆಂಬಲ ಬೆಲೆಯಲ್ಲಿ ತಲಾ 5 ಕ್ವಿಂಟಲ್, 20 ಕ್ವಿಂಟಲ್‌ನಿಂದ, 50 ಕ್ವಿಂಟಲ್ ಜೋಳ ಖರೀದಿಸಲು ಖರೀದಿ ಕೇಂದ್ರ ತೆರೆಯಲಾಗುವುದು ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತು. ಆದರೂ ಇದು ಸಮರ್ಪಕವಾಗಿ ಅನುಷ್ಠಾನಗೊಳ್ಳದೆ ಹೆಚ್ಚಿನ ರೈತರಿಗೆ ಇದರ ಪ್ರಯೋಜನವಾಗಿಲ್ಲ.
ಇತರ ಹೋರಾಟಗಳು
ಕಲಬುರಗಿ ಕೊಪ್ಪಳ ಜಿಲ್ಲೆಗಳಲ್ಲಿ ತೊಗರಿ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ತೊಗರಿಕಾಳುಗಳನ್ನು ರಸ್ತೆಗೆ ಸುರಿದ ರೈತರು ಪ್ರತಿಭಟನೆ ನಡೆಸಿದರು. ಕಲಬುರಗಿ, ಬೀದರ್‌ನಲ್ಲಿ ವಿದ್ಯುತ್ ಪೂರೈಕೆ ಮತ್ತು ನೀರಾವರಿ ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಕೇಂದ್ರ ನೀತಿಗಳನ್ನು ವಿರೋಧಿಸಿ ಧರಣಿ ನಡೆಸಿದರು.
ಆನೇಕಲ್ ಭೂ ಸ್ವಾಧೀನ ವಿರೋಧಿ ರೈತರ ಹೋರಾಟ
2025ರಲ್ಲಿ ಬೆಂಗಳೂರು ನಗರದ ಹೊರವಲಯದಲ್ಲಿರುವ ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯಲ್ಲಿ ರೈತರು ತೀವ್ರ ಭೂ ಸ್ವಾಧೀನ ವಿರೋಧಿ ಹೋರಾಟ ನಡೆಸಿದರು. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(KIADB) ಸುಮಾರು 2,000-2,500 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. AI, ಫಿನ್‌ಟೆಕ್, ಡೇಟಾ ಅನಾಲಿಟಿಕ್ಸ್ ಮುಂತಾದ ಕ್ಷೇತ್ರಗಳ ಸ್ಟಾರ್ಟಪ್ ಹಬ್ ಆಗಿ ಮಾರ್ಪಡಲಿದ್ದು, SWIFT City (Startups, Workspaces, Innovation, Finance and Technology) ಎಂಬ ಮಹತ್ವಾಕಾಂಕ್ಷಿ ಯೋಜನೆಗಾಗಿ ಬೆಂಗಳೂರಿನ ಮೂರನೇ ತಾಂತ್ರಿಕ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಧಿಕಾರಿಗಳು ರೈತರ ಕೃಷಿ ಭೂಮಿಯನ್ನು ಬಂಜರು ಭೂಮಿ ಎಂದು ಹೆಸರಿಸಿ ಸರ್ಕಾರಕ್ಕೆ ವರದಿ ನೀಡಿದ್ದರು.

2024ರ ಅಂತ್ಯದಲ್ಲಿ ಘೋಷಣೆಯಾದ SWIFT City ಯೋಜನೆಯಡಿ ಸರ್ಜಾಪುರ ಸುತ್ತಮುತ್ತಲಿನ ಹಂಡೇನಹಳ್ಳಿ, ಮುತ್ತನಲ್ಲೂರು, ಯಮರೆ, ಬಿ.ಹೊಸಹಳ್ಳಿ ಮುಂತಾದ ಗ್ರಾಮಗಳಲ್ಲಿ ಸುಮಾರು 1,000-2,535 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು. ಆದರೆ ರೈತರು ತಮ್ಮ ಜೀವನಾಧಾರಕ್ಕೆ ಧಕ್ಕೆ ತರುವ ಕಾರ್ಪೊರೇಟ್ ಲಾಭಕ್ಕಾಗಿ ಭೂಕಬಳಿಕೆ ಮಾಡುತ್ತಿರುವ ಸರ್ಕಾರದ ಯೋಚನೆ ಖಂಡನೀಯ ಎಂದು ಹೋರಾಟಕ್ಕಿಳಿದರು.
“KIADB 2024ರಿಂದಲೇ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆಗಳನ್ನು ಹೊರಡಿಸಿದೆ. ರೈತರ ಸಮಾಲೋಚನೆ ಇಲ್ಲದೆ ಇಂತಹ ಯೋಜನೆ ನಡೆದಿದೆ. ಈಗಾಗಲೇ ಆನೇಕಲ್‌ನಲ್ಲಿ ಸಾವಿರಾರು ಎಕರೆ ಭೂಮಿ ಉದ್ಯಮ ಮತ್ತು ರಿಯಲ್ ಎಸ್ಟೇಟ್‌ಗೆ ಹೋಗಿದೆ. ಆದರೆ ಈ ಭೂಮಿ ಫಲವತ್ತಾದ ಕೃಷಿ ಭೂಮಿ. ರಾಗಿ, ತರಕಾರಿ, ಹೂವುಗಳು, ರೇಷ್ಮೆ ಕೃಷಿ ಮತ್ತು ಕೋಳಿ ಸಾಕಾಣಿಕೆಗೆ ಹೆಸರುವಾಸಿಯಾಗಿದೆ. ನಮ್ಮ ಭೂಮಿ, ನಮ್ಮ ಹಕ್ಕು” ಎಂಬ ಘೋಷಣೆಯೊಂದಿಗೆ ರೈತರು ಹೋರಾಟ ಮಾಡುತ್ತಿದ್ದಾರೆ.
ಸರ್ಜಾಪುರ ಹೋಬಳಿಯ ಎಂಟು ಗ್ರಾಮಗಳ 700ಕ್ಕೂ ಹೆಚ್ಚು ರೈತರಿಗೆ KIADB ಜನವರಿಯಲ್ಲಿ ನೋಟಿಸ್ ನೀಡಿದೆ. ರೈತರು ಮೂರು ಬಾರಿ ಪ್ರತಿಭಟನೆ ನಡೆಸಿ, ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಿದ್ದಾರೆ. ಜನವರಿ 4ರಂದು 5,000 ಜನರೊಂದಿಗೆ ರೈತರ ಸಭೆ ನಡೆದಿದೆ. ಜುಲೈನಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಬೈಕ್ ರ್‍ಯಾಲಿ, ಸರ್ಜಾಪುರದಲ್ಲಿ ಬೃಹತ್ ರ್‍ಯಾಲಿ. ಡ್ರೋನ್ ಸರ್ವೇಗೆ ವಿರೋಧಿಸಿ ಡ್ರೋನ್ ನಾಶದಂತಹ ಹೋರಾಟಗಳು ನಡೆದಿವೆ. ಆಗಸ್ಟ್‌ನಲ್ಲಿ ಆನೇಕಲ್ ತಾಲೂಕು ಕಚೇರಿಗೆ ಸಾವಿರಾರು ರೈತರು ಮುತ್ತಿಗೆ ಹಾಕಿ ʼನಮ್ಮ ಭೂಮಿ, ನಮ್ಮ ಹಕ್ಕುʼ ಘೋಷಣೆಗಳೊಂದಿಗೆ ರ್‍ಯಾಲಿ ನಡೆಸಿದರು. ಪೊಲೀಸರು ತಡೆಯಲು ಪ್ರಯತ್ನಿಸಿದರೂ ರೈತರು ಒಳನುಗ್ಗಿ ಪ್ರತಿಭಟನೆ ನಡೆಸಿದರು. ಮುತ್ತನಲ್ಲೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ನೇಗಿಲು ಪೂಜೆ ನಡೆಸಿ ಸಂಕಲ್ಪ ಮಾಡುವ ಮೂಲಕ ಅಹೋರಾತ್ರಿ ಧರಣಿ ನಡೆಸಿದರು.

ಭೂ ಸ್ವಾಧೀನ ಪೂರ್ಣ ರದ್ದುಗೊಳಿಸಿ, ಸಾರ್ವಜನಿಕರೊಂದಿಗೆ ಸಭೆ ನಡೆಸಿ, ಫಲವತ್ತಾದ ಭೂಮಿಯ ಬದಲು ಬಂಜರು ಭೂಮಿ ಬಳಸಲು, ಈಗಾಗಲೇ ಸ್ವಾಧೀನವಾದ ಭೂಮಿಗಳನ್ನು ಉದ್ಯಮಕ್ಕೆ ಬಳಸದಿರುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ, ಭೂ ಸ್ವಾಧೀನ ವಿರೋಧಿ ಸಮಿತಿಗಳ ನಾಯಕತ್ವದೊಂದಿಗೆ ಸಚಿವರು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ.
ಪರಿಣಾಮ ಮತ್ತು ಪ್ರಸ್ತುತ ಸ್ಥಿತಿ
2025ರ ಅಂತ್ಯದವರೆಗೆ(ಡಿಸೆಂಬರ್ 31) ಹೋರಾಟ ಮುಂದುವರೆದಿದೆ. ದೇವನಹಳ್ಳಿ ರೈತರು 1,777 ಎಕರೆ ಸ್ವಾಧೀನ ರದ್ದುಗೊಳಿಸಿ ಗೆದ್ದ ನಂತರ ಆನೇಕಲ್ ರೈತರಿಗೆ ಪ್ರೇರಣೆಯಾಗಿದೆ. ಬಂಜರು ಭೂಮಿ ಎಂದು ವರದಿ ಸಲ್ಲಿಸಿದ್ದ ಭೂಮಿಯಲ್ಲಿ ಬೆಳೆದ ರಾಗಿಯನ್ನು ರಾಶಿ ಮಾಡುವ ಮೂಲಕ ಸರ್ಕಾರಕ್ಕೆ ಇದು ಕೃಷಿ ಭೂಮಿ ಎನ್ನುವ ಉತ್ತರ ನೀಡಿದ್ದಾರೆ. ಸರ್ಕಾರ ಭೂಸ್ವಾಧೀನ ಕೈಬಿಡುವುದಾಗಿ ಇನ್ನೂ ಸಂಪೂರ್ಣ ಹಿಂದೆ ಸರಿದಿಲ್ಲ. ಆದರೆ ರೈತರು ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟ ಬೆಂಗಳೂರು ವಿಸ್ತರಣೆಯಲ್ಲಿ ಕೃಷಿ ಭೂಮಿ ಕಳೆದುಕೊಳ್ಳುವ ಸಮಸ್ಯೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ತಂದಿದೆ. ರೈತರ ಒಗ್ಗಟ್ಟು ಮತ್ತು ನಿರಂತರ ಪ್ರತಿಭಟನೆಗಳಿಂದ ಭವಿಷ್ಯದಲ್ಲಿ ಜಯ ಸಾಧಿಸುವ ಸಾಧ್ಯತೆ ಇದೆ.
ಇದನ್ನೂ ಓದಿದ್ದೀರಾ? 2025ರ ಹಿನ್ನೋಟ | ಕೃಷಿ ಬದುಕಿನ ಕಠೋರತೆ: ಮುಗಿಯದ ರೈತರ ಸಂಕಷ್ಟ
2025ರ ರೈತ ಚಳವಳಿಗಳು ಕರ್ನಾಟಕದ ಕೃಷಿ ಸಂಕಷ್ಟವನ್ನು ಮತ್ತೊಮ್ಮೆ ಬೆಳಕಿಗೆ ತಂದವು. ಭೂ ಸ್ವಾಧೀನದಲ್ಲಿ ರೈತರು ವಿಜಯ ಸಾಧಿಸಿದರೂ, ಬೆಳೆ ಬೆಲೆ ಮತ್ತು MSP ಸಮಸ್ಯೆಗಳು ಪರಿಹಾರವಿಲ್ಲದೆ ಉಳಿದಿವೆ. ಈ ಹೋರಾಟಗಳು ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಕಾರಣವಾದವು ಮತ್ತು ರೈತರ ಒಗ್ಗಟ್ಟನ್ನು ಬಲಪಡಿಸಿದವು. ಆದರೆ, ದೀರ್ಘಕಾಲೀನ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರ ಅಗತ್ಯ. ರೈತರ ಹೋರಾಟ 2026ಕ್ಕೂ ಮುಂದುವರೆಯುವ ಸಾಧ್ಯತೆ ಇದೆ.





