ಅಡಗಿದ ‘ಸಿಂಗಂ’ ಸದ್ದು; ಬಿಜೆಪಿಯ ಜವಾಬ್ದಾರಿ ತೊರೆದರೇಕೆ ಐಪಿಎಸ್‌ ಅಣ್ಣಾಮಲೈ!

Date:

ಅಣ್ಣಾಮಲೈ ಒಬ್ಬ ಸಮರ್ಥ ರಾಜಕಾರಣಿಯಾಗಬೇಕಾದರೆ ‘ಸಿಂಗಂ’ ಸಿನಿಮಾದ ಹ್ಯಾಂಗೋವರ್ ನಿಂದ ಹೊರಬಂದು, ಸಾರ್ವಜನಿಕವಾಗಿ ತೊಡಗಿಸಿಕೊಳ್ಳಬೇಕಿದೆ. ಜೊತೆಗೆ ತಾಳ್ಮೆಯನ್ನು ಪ್ರದರ್ಶಿಸಬೇಕಿದೆ. ಚಾಟಿಯಿಂದ ಹೊಡೆದುಕೊಳ್ಳುವುದು, ಬರಿಗಾಲಿನಿಂದ ನಡೆಯುವುದು, ಬೋಟ್ ಸವಾರಿಯಂತಹ ‘ಗಿಮಿಕ್’ಗಳು ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್ ತಂದುಕೊಡಬಹುದು, ಆದರೆ ಮತಗಳನ್ನಲ್ಲ.

ಕರ್ನಾಟಕದಲ್ಲಿ ‘ಸಿಂಗಂ’ ಖ್ಯಾತಿಯ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಕೆ ಅಣ್ಣಾಮಲೈ, ಖಾಕಿ ಕಳಚಿ ಖಾದಿ ಧರಿಸಿ ತಮಿಳುನಾಡು ರಾಜಕೀಯಕ್ಕೆ ಧುಮುಕಿದಾಗ ಅಲ್ಲಿನ ಬಿಜೆಪಿಯಲ್ಲಿ ಒಂಚೂರು ಸಂಚಲನ ಮೂಡಿತ್ತು. ದ್ರಾವಿಡ ಪಕ್ಷಗಳ ಅಬ್ಬರದ ನಡುವೆ ಕಮಲ ಅರಳಿಸುವ ಅವರ ಉತ್ಸಾಹ ಭರವಸೆ ಮೂಡಿಸಿತ್ತು. ಆದರೆ, ಇತ್ತೀಚೆಗೆ ತಮಿಳುನಾಡು ಉಪಚುನಾವಣೆಯ ಉಸ್ತುವಾರಿ ಸ್ಥಾನಕ್ಕೆ ಅವರು ನೀಡಿದ ಹಠಾತ್ ರಾಜೀನಾಮೆ ಅವರ ರಾಜಕೀಯ ಶೈಲಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಐಪಿಎಸ್ ಅಧಿಕಾರಿಯ ಶಿಸ್ತು ಮತ್ತು ರಾಜಕಾರಣಿಯ ಮುತ್ಸದ್ದಿತನದ ನಡುವಿನ ಗೊಂದಲವೇ ಅವರ ಹಿನ್ನಡೆಗೆ ಕಾರಣವಾಯಿತೇ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

​ಅಣ್ಣಾಮಲೈ ಅವರ ವಿರುದ್ಧ ಸ್ವಪಕ್ಷೀಯರೇ ಮತ್ತು ಮಿತ್ರಪಕ್ಷಗಳು ಪ್ರಮುಖವಾಗಿ ಮಾಡುತ್ತಿರುವ ಆರೋಪವೆಂದರೆ ‘ಅಪ್ರಬುದ್ಧ ನಡವಳಿಕೆ’. ರಾಜಕೀಯ ಎಂದರೆ ಕೇವಲ ಆವೇಷದ ಮಾತುಗಳಲ್ಲ, ಅದು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕಲೆ. ಆದರೆ, ಅಣ್ಣಾಮಲೈ ಅವರು ಪೊಲೀಸ್ ಇಲಾಖೆಯ ‘ಲಾಠಿ ಪ್ರಹಾರ’ದ ಮನಸ್ಥಿತಿಯನ್ನೇ ರಾಜಕೀಯದಲ್ಲೂ ಮುಂದುವರಿಸಿದರು. ತಾನು ಹಿಡಿದಿದ್ದೇ ಹಠ ಎಂಬಂತೆ ವರ್ತಿಸಿದ್ದು, ಪಕ್ಷದ ಹಿರಿಯ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಮುಜುಗರಕ್ಕೀಡುಮಾಡಿದ ಪ್ರಸಂಗಗಳು ಒಂದೆರಡಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

​ಇದಕ್ಕೆ ಅತ್ಯಂತ ಸ್ಪಷ್ಟ ಮತ್ತು ನಾಟಕೀಯ ಉದಾಹರಣೆಯೆಂದರೆ ಚೆನ್ನೈ ಪ್ರವಾಹದ ಸಂದರ್ಭದಲ್ಲಿ ನಡೆದ ‘ಬೋಟ್ ಸವಾರಿ’. ಚಂಡಮಾರುತದ ಹೊಡೆತಕ್ಕೆ ಸಿಲುಕಿ ಚೆನ್ನೈ ತತ್ತರಿಸಿದ್ದಾಗ, ರಸ್ತೆಯಲ್ಲಿ ಕೇವಲ ಒಂದು ಅಡಿ ನೀರಿತ್ತು. ಸಾಮಾನ್ಯ ಜನರು ನಡೆದುಕೊಂಡೇ ಹೋಗುತ್ತಿದ್ದ ಜಾಗದಲ್ಲಿ, ಅಣ್ಣಾಮಲೈ ಅವರು ರಕ್ಷಣಾ ಕಾರ್ಯದ ಸೋಗಿನಲ್ಲಿ ದೋಣಿಯ ಮೇಲೆ ಕುಳಿತು ಸಾಗಿದ್ದು ವಿಪರ್ಯಾಸವಾಗಿತ್ತು. ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಧಾವಿಸುವ ಬದಲು, ಫೋಟೋ ಮತ್ತು ವಿಡಿಯೋ ರೀಲ್ಸ್‌ಗಳಿಗಾಗಿ ಇಂತಹ ಕೃತಕ ಪ್ರವಾಹದ ದೃಶ್ಯ ಸೃಷ್ಟಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿತ್ತು. ಇದು ಅವರ ಗಂಭೀರತೆಯನ್ನು ಪ್ರಶ್ನಿಸುವಂತೆ ಮಾಡಿತ್ತು.

​ಮತ್ತೊಂದು ಅತಿರೇಕದ ನಡೆ ಕಂಡುಬಂದಿದ್ದು ಕೊಯಮತ್ತೂರಿನಲ್ಲಿ. ಚೆನ್ನೈ ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಖಂಡಿಸಿ ಡಿಎಂಕೆ ಸರ್ಕಾರದ ವಿರುದ್ಧ ಪ್ರತಿಭಟಿಸುವ ಭರದಲ್ಲಿ, ಅಣ್ಣಾಮಲೈ ಅವರು ತಮ್ಮ ನಿವಾಸದ ಎದುರು ಸಾರ್ವಜನಿಕವಾಗಿ ಚಾವಟಿಯಿಂದ ತಮಗೆ ತಾವೇ ಹೊಡೆದುಕೊಂಡರು. ತೆಲಂಗಾಣದ ದೇವಾಲಯದಲ್ಲಿ ಭಕ್ತಿಯ ಭಾಗವಾಗಿ ನಡೆದಿದ್ದ ಆಚರಣೆಯನ್ನು, ತಮಿಳುನಾಡಿನಲ್ಲಿ ರಾಜಕೀಯ ಅಸ್ತ್ರವನ್ನಾಗಿ ಬಳಸಿದ್ದು ‘ಡ್ರಾಮಾ’ದಂತೆ ಕಂಡಿತು. ಒಬ್ಬ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನಾಗಿ ಕಾನೂನಾತ್ಮಕ ಹೋರಾಟ ನಡೆಸುವ ಬದಲು, ಬೀದಿಯಲ್ಲಿ ನಿಂತು ಮೈಮೇಲೆ ಬಾರಿಸಿಕೊಳ್ಳುವ ವರ್ತನೆ ತೋರಿದ್ದು ಅವರ ‘ಅಪ್ರಬುದ್ಧತೆ’ಗೆ ಸಾಕ್ಷಿ ಎಂದು ಟೀಕಿಸಲಾಯಿತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೊಬೈಲ್ ಮೃತ್ಯು ಮೋಡಿಯಿಂದ ಮಕ್ಕಳನ್ನು ರಕ್ಷಿಸುವವರಾರು?

​ಅಣ್ಣಾಮಲೈ ಅವರ ರಾಜಕೀಯ ಗ್ರಾಫ್ ಕುಸಿಯಲು ಪ್ರಮುಖ ಕಾರಣ ಎಐಎಡಿಎಂಕೆ ಜೊತೆಗಿನ ಮೈತ್ರಿ ಮುರಿದುಬಿದ್ದದ್ದು. ತಮಿಳುನಾಡಿನಲ್ಲಿ ಬಿಜೆಪಿಗೆ ಅಸ್ತಿತ್ವ ಕಂಡುಕೊಳ್ಳಲು ದ್ರಾವಿಡ ಪಕ್ಷದ ಬೆಂಬಲ ಅನಿವಾರ್ಯವಾಗಿತ್ತು. ಆದರೆ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಸಿ ಎನ್  ಅಣ್ಣಾದುರೈ ಮತ್ತು ಜಯಲಲಿತಾ ಅವರ ಬಗ್ಗೆ ಅಣ್ಣಾಮಲೈ ಆಡಿದ ಲಘುವಾದ ಮಾತುಗಳು ಮೈತ್ರಿಗೆ ಕೊಡಲಿಪೆಟ್ಟು ನೀಡಿದವು. “ನನ್ನ ಸಿದ್ಧಾಂತಕ್ಕೆ ನಾನು ಬದ್ಧ” ಎಂದು ಹೇಳುತ್ತಲೇ, ದಶಕಗಳ ಇತಿಹಾಸವಿರುವ ಮಿತ್ರಪಕ್ಷದ ಭಾವನೆಗಳನ್ನು ಘಾಸಿಗೊಳಿಸಿದ್ದು ರಾಜಕೀಯ ಪ್ರಮಾದವಾಗಿತ್ತು. ಇದರ ಪರಿಣಾಮವೇ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡಬೇಕಾಯಿತು.

​ಪಕ್ಷದ ಆಂತರಿಕ ವಲಯದಲ್ಲೂ ಅಣ್ಣಾಮಲೈ ಅವರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನವಿತ್ತು. ತಮ್ಮದೇ ಪಕ್ಷದ ಭಿನ್ನಮತೀಯರನ್ನು ಹತ್ತಿಕ್ಕಲು ‘ವಾರ್ ರೂಮ್’ ಬಳಸಿಕೊಂಡರು ಎಂಬ ಗಂಭೀರ ಆರೋಪ ಅವರ ಮೇಲಿತ್ತು. ಗಾಯತ್ರಿ ರಘುರಾಮ್ ಅವರಂತಹ ಮಹಿಳಾ ನಾಯಕಿಯರು ಪಕ್ಷ ಬಿಡಲು ಅಣ್ಣಾಮಲೈ ಅವರ ಏಕಚಕ್ರಾಧಿಪತ್ಯ ಧೋರಣೆಯೇ ಕಾರಣ ಎಂದು ಬಹಿರಂಗವಾಗಿಯೇ ಹೇಳಿಕೊಂಡರು. ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು, ಅವರನ್ನು ಶತ್ರುಗಳಂತೆ ಕಾಣುವ ಮನಸ್ಥಿತಿ ಪಕ್ಷದ ಸಂಘಟನೆಯನ್ನು ದುರ್ಬಲಗೊಳಿಸಿತು.

​ಮಾಧ್ಯಮಗಳ ಜೊತೆಗಿನ ಸಂಘರ್ಷ ಕೂಡ ಅವರ ವರ್ಚಸ್ಸಿಗೆ ಕಪ್ಪುಚುಕ್ಕೆ ತಂದಿತು. ಪತ್ರಕರ್ತರು ಕೇಳುವ ಕಠಿಣ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುವ ಬದಲು, ಅವರನ್ನೇ ಪ್ರಶ್ನಿಸುವುದು, ಅಣಕಿಸುವುದು ಮತ್ತು ಪಕ್ಷಪಾತದವರೆಂದು ಜರಿಯುವುದು ಅಣ್ಣಾಮಲೈ ಅವರ ಶೈಲಿಯಾಗಿತ್ತು. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳನ್ನು ಒಳಗೊಂಡು ರಾಜಕೀಯ ಮಾಡಬೇಕು ಎಂಬ ಕನಿಷ್ಠ ಪ್ರಜ್ಞೆಯನ್ನೂ ಅವರು ತೋರಲಿಲ್ಲ.

​ಇನ್ನು ಬಹುಚರ್ಚಿತ ‘ರಾಫೇಲ್ ವಾಚ್’ ವಿವಾದ ಕೂಡ ಅನಗತ್ಯವಾಗಿ ಎಳೆದುಕೊಂಡ ಪ್ರಸಂಗವಾಗಿತ್ತು. ತಮ್ಮ ಕೈಗಡಿಯಾರದ ಬಿಲ್ ಬಗ್ಗೆ ತಿಂಗಳುಗಟ್ಟಲೆ ಚರ್ಚೆ ನಡೆಸಿ, ಜನರ ನೈಜ ಸಮಸ್ಯೆಗಳಿಗಿಂತ ವೈಯಕ್ತಿಕ ಇಮೇಜ್‌ಗೆ ಹೆಚ್ಚು ಒತ್ತು ನೀಡಿದರು. ಆಡಳಿತ ಪಕ್ಷದ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ‘ಡಿಎಂಕೆ ಫೈಲ್ಸ್’ ಬಿಡುಗಡೆ ಮಾಡಿದರೂ, ಅದಕ್ಕಿಂತ ಹೆಚ್ಚು ಸದ್ದು ಮಾಡಿದ್ದು ಇವರ ವಾಚ್ ಮತ್ತು ಆಡಿಯೋ ಟೇಪ್ ವಿವಾದಗಳು. ಇದು ಹೋರಾಟದ ದಾರಿತಪ್ಪಿಸಿತು.

​ಚುನಾವಣಾ ರಾಜಕೀಯದಲ್ಲಿ ಸೋಲು-ಗೆಲುವು ಸಹಜ. ಆದರೆ, ಕೊಯಮತ್ತೂರು ಲೋಕಸಭಾ ಕ್ಷೇತ್ರದಲ್ಲಿ ಅಣ್ಣಾಮಲೈ ಸೋತ ರೀತಿ ಮತ್ತು ನಂತರದ ದಿನಗಳಲ್ಲಿ ಅವರು ತೋರಿದ ನಿರ್ಲಿಪ್ತತೆ ಪಕ್ಷದ ಹೈಕಮಾಂಡ್‌ಗೂ ಬೇಸರ ತರಿಸಿದೆ. ಇದೀಗ ವಿಧಾನಸಭಾ ಉಪಚುನಾವಣೆಯ ಉಸ್ತುವಾರಿ ಸ್ಥಾನಕ್ಕೂ ರಾಜೀನಾಮೆ ನೀಡಿರುವುದು, ಅವರು ಪಕ್ಷದ ಜವಾಬ್ದಾರಿಗಳಿಂದ ವಿಮುಖರಾಗುತ್ತಿದ್ದಾರೆಯೇ ಎಂಬ ಅನುಮಾನ ಮೂಡಿಸಿದೆ. ತಮಿಳುನಾಡು ಬಿಜೆಪಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರವೂ, ಅವರ ಪ್ರಭಾವ ಕುಗ್ಗಿಲ್ಲವಾದರೂ, ಒಂಟಿತನ ಕಾಡಲಾರಂಭಿಸಿದೆಯೇ ಎಂಬ ಅನುಮಾನ ಬರುತ್ತಿದೆ.

ಅಣ್ಣಾಮಲೈ ಒಬ್ಬ ಸಮರ್ಥ ರಾಜಕಾರಣಿಯಾಗಬೇಕಾದರೆ ‘ಸಿಂಗಂ’ ಸಿನಿಮಾದ ಹ್ಯಾಂಗೋವರ್ ನಿಂದ ಹೊರಬಂದು, ಸಾರ್ವಜನಿಕವಾಗಿ ತೊಡಗಿಸಿಕೊಳ್ಳಬೇಕಿದೆ. ಜೊತೆಗೆ ತಾಳ್ಮೆಯನ್ನು ಪ್ರದರ್ಶಿಸಬೇಕಿದೆ. ಚಾವಟಿ ಏಟು, ಬೋಟ್ ಸವಾರಿಯಂತಹ ‘ಗಿಮಿಕ್’ಗಳು ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್ ತಂದುಕೊಡಬಹುದು, ಆದರೆ ಮತಗಳನ್ನಲ್ಲ. ಆತ್ಮಾವಲೋಕನ ಮಾಡಿಕೊಂಡು, ಪ್ರಬುದ್ಧತೆ ಮತ್ತು ತಾಳ್ಮೆಯನ್ನು ಮೈಗೂಡಿಸಿಕೊಂಡರೆ ಮಾತ್ರ ತಮಿಳುನಾಡಿನ ಕಲ್ಲುಮುಳ್ಳಿನ ರಾಜಕೀಯ ಹಾದಿಯಲ್ಲಿ ಅವರು ಉಳಿಯಲು ಸಾಧ್ಯ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...