ಮೋದಿಯವರನ್ನ ವಿಶ್ವಗುರುವನ್ನಾಗಿ ಮಾಡಲು ಹೊರಟಿರುವವರೇ, ನಿಜವಾದ ಪಪ್ಪುಗಳಾಗುತ್ತಿದ್ದಾರೆ. ಈ ಪದ ಮೋದಿಯನ್ನ ಉತ್ತುಂಗಕ್ಕೆ ಏರಿಸುವ ಬದಲು ಇನ್ನಷ್ಟು ಟ್ರೋಲ್‌ಗೆ, ವ್ಯಂಗ್ಯಗಳಿಗೆ, ಮಿಮ್‌ಗಳಿಗೆ ಹಾಗೂ ವಿಮರ್ಶೆಗಳಿಗೆ ದಾರಿ ಮಾಡಿಕೊಟ್ಟಿದೆ.
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನ ಎದುರಿಸಲಾಗದವರು ಅವರನ್ನು ಪಪ್ಪು ಎಂದು ಜರೆದರು. ಪ್ರಶ್ನೆ ಮಾಡಿದರೇ ಗೇಲಿ ಮಾಡಿ ನಕ್ಕರು. ಪ್ರಶ್ನೆಗಳಿಗೆ ಉತ್ತರಿಸದವರು, ಜನರಿಗೆ ನೀಡಿದ ಮಾತನ್ನ ನಡೆಸಿಕೊಳ್ಳದವರು ಸ್ವಯಂಘೋಷಿತ ವಿಶ್ವಗುರುವಾದರು. ಈ ವಿಶ್ವಗುರು ಎಂಬ ಕಾನ್ಸೆಪ್ಟ್ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಒಂದು ದೊಡ್ಡ ಬ್ರ್ಯಾಂಡಿಂಗ್ ಆಗಿ ಮಾರ್ಪಟ್ಟಿದೆ. ಇದು ಘೋಷಣೆಯಾಗಿಯಷ್ಟೇ ಉಳಿಯದೇ, ಸರ್ಕಾರದ ಪ್ರಚಾರಗಳಲ್ಲಿ, ಸೋಷಿಯಲ್ ಮೀಡಿಯಾ ಕ್ಯಾಂಪೇನ್‌ಗಳಲ್ಲಿ, ಅಂತಾರಾಷ್ಟ್ರೀಯ ಸಭೆಗಳಲ್ಲಿ ಈ ಪದವನ್ನು ಪದೇಪದೇ ಬಳಸಲಾಗುತ್ತಿದೆ. ಆದರೆ, ಮೋದಿಯವರನ್ನ ವಿಶ್ವಗುರುವನ್ನಾಗಿ ಮಾಡಲು ಹೊರಟಿರುವವರೇ, ನಿಜವಾದ ಪಪ್ಪುಗಳಾಗುತ್ತಿದ್ದಾರೆ. ಈ ಪದ ಮೋದಿಯನ್ನ ಉತ್ತುಂಗಕ್ಕೆ ಏರಿಸುವ ಬದಲು ಇನ್ನಷ್ಟು ಟ್ರೋಲ್‌ಗೆ, ವ್ಯಂಗ್ಯಗಳಿಗೆ, ಮಿಮ್‌ಗಳಿಗೆ ಹಾಗೂ ವಿಮರ್ಶೆಗಳಿಗೆ ದಾರಿ ಮಾಡಿಕೊಟ್ಟಿದೆ.
ಮೋದಿ ಭಜನೆಯಲ್ಲಿ ಮುಳುಗಿರುವ ಬಿಜೆಪಿಯ ಐಟಿ ಸೆಲ್ ಮತ್ತು ಬೆಂಬಲಿಗರು ದಿನನಿತ್ಯ ಮೋದಿಯನ್ನು ವಿಶ್ವದ ಅತ್ಯಂತ ಶಕ್ತಿಶಾಲಿ, ಗೌರವಾನ್ವಿತ ನಾಯಕ ಎನ್ನುವಂತೆ ಚಿತ್ರಿಸಲು ಮುಂದಾಗುತ್ತಾರೆ. ಜಿ-20 ಶೃಂಗಸಭೆಯಲ್ಲಿ ಭಾರತದ ಮಹತ್ವವನ್ನು ಒತ್ತಿ ಹೇಳುವುದು, ಟ್ರಂಪ್ ಮೋದಿಗೆ ಕುಳಿತುಕೊಳ್ಳಲು ಚೇರ್ ಎಳೆದ್ದದ್ದನ್ನೆಲ್ಲ ದೊಡ್ಡದು ಎಂದು ಬಿಂಬಿಸುವುದು, ಯೋಗ ದಿನಾಚರಣೆಯನ್ನ ಜಾರಿಗೆ ತಂದಿರುವುದರ ಬಗ್ಗೆ ಬಡಬಡಾಯಿಸುವುದು, ಸನಾತನದ ಪ್ರಚಾರ, ಉಕ್ರೇನ್ ಸಂಘರ್ಷದಲ್ಲಿ ಭಾರತದ ನಿಲುವು ಸೇರಿದಂತೆ ಈ ಎಲ್ಲವನ್ನೂ ಸೇರಿಸಿ ವಿಶ್ವಗುರು ಎಂಬ ಲೇಬಲ್‌ಗೆ ಜೋಡಿಸಿ ಪ್ರಚಾರ ಮಾಡಲಾಗುತ್ತಿದೆ. ಆದರೆ, ಈ ಪ್ರಚಾರದ ದೊಡ್ಡ ಸಮಸ್ಯೆ ಏನೆಂದರೆ, ಅದು ವಾಸ್ತವಿಕತೆಯೊಂದಿಗೆ ಹೊಂದಿಕೊಳ್ಳುತ್ತಿಲ್ಲ. ಜನರು ನೋಡುತ್ತಿರುವುದೇ ಭಿನ್ನ ಚಿತ್ರಣ.

2025ರ ವರ್ಷವನ್ನು ನೋಡಿದರೆ, ಭಾರತದ ವಿದೇಶಾಂಗ ನೀತಿಯಲ್ಲಿ ದೊಡ್ಡ ಸವಾಲುಗಳು ಎದುರಾಗಿವೆ. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರದ ಪತನವು ಭಾರತಕ್ಕೆ ದೊಡ್ಡ ಗುಪ್ತಚರ ಮತ್ತು ರಾಜತಾಂತ್ರಿಕ ವೈಫಲ್ಯವಾಗಿ ಕಂಡುಬಂದಿದೆ. ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಒತ್ತಡ ಹೆಚ್ಚಾಗಿದೆ. ಅಮೆರಿಕದೊಂದಿಗಿನ ಸಂಬಂಧಗಳು ತಣ್ಣಗಾಗಿವೆ – ಟ್ರಂಪ್‌ನೊಂದಿಗಿನ ವ್ಯಕ್ತಿಗತ ಸ್ನೇಹದ ಹೊರತಾಗಿಯೂ ವಾಣಿಜ್ಯ ಒಪ್ಪಂದಗಳು ಸಿಗದೇ ಇರುವುದು, ಭಾರತದ ರಫ್ತುಗಳ ಮೇಲೆ ತೆರಿಗೆ ಹಾಕುವುದು, ಪರಿಸರ ಸಮಸ್ಯೆಗಳು, ಆರ್ಥಿಕ ಒತ್ತಡಗಳು, EU (ಯುರೋಪಿಯನ್ ಯೂನಿಯನ್) ಮತ್ತು US (ಯುನೈಟೆಡ್ ಸ್ಟೇಟ್ಸ್)ನಿಂದ ಬರುವ ಒತ್ತಡದಿಂದಾಗಿ ಕೃಷಿ ಮತ್ತು ಔಷಧಿ ಕ್ಷೇತ್ರದ ಸ್ವಾಯತ್ತತೆ ಕಳೆದುಕೊಳ್ಳುವ ಸಾಧ್ಯತೆ – ಇವೆಲ್ಲವೂ “ವಿಶ್ವಗುರು” ಎಂಬ ಚಿತ್ರಣಕ್ಕೆ ವಿರುದ್ಧವಾಗಿವೆ.
ಅಂತಾರಾಷ್ಟ್ರೀಯ ಮಾಧ್ಯಮಗಳು ಮತ್ತು ವಿಶ್ಲೇಷಕರು ಭಾರತವನ್ನು ‘ಜೂನಿಯರ್ ಪಾರ್ಟ್ನರ್’ ಎಂದು ವರ್ಣಿಸುತ್ತಿದ್ದಾರೆ. ದಿ ಹಿಂದೂ ಪತ್ರಿಕೆಯಂತಹ ಮಾಧ್ಯಮಗಳು 2025 ಅನ್ನು ‘ಮೋದಿಯ ವಿದೇಶಾಂಗ ನೀತಿಯ ವೈಫಲ್ಯದ ವರ್ಷ’ ಎಂದು ಕರೆದಿವೆ. ‘ವಿಶ್ವಗುರು’ಯಿಂದ ‘ವಿಶ್ವ ವಿಕ್ಟಿಮ್’ಗೆ ಇಳಿದಿದೆ ಎಂಬ ಟೀಕೆ ಬಂದಿದೆ.
ಒಳಾಡಳಿತದಲ್ಲಿಯೂ ಸಹ ಸಮಸ್ಯೆಗಳು ದೊಡ್ಡದಾಗಿವೆ. ಉದ್ಯೋಗ ಸೃಷ್ಟಿ ಕಡಿಮೆಯಾಗಿದೆ, ಬೆಲೆ ಏರಿಕೆ ನಿಯಂತ್ರಣಕ್ಕೆ ಬಂದಿಲ್ಲ, ಭ್ರಷ್ಟಾಚಾರದ ಆರೋಪಗಳು ಮುಂದುವರೆದಿವೆ. ಆರೋಗ್ಯ-ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳು ನಿಧಾನವಾಗಿವೆ. ಕಾಶ್ಮೀರ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಪಹಲ್ಗಾಮ್ ದಾಳಿ, ಸಿಂದೂರ್ ಆಪರೇಷನ್‌ನಂತಹ ಘಟನೆಗಳು ಭದ್ರತಾ ವೈಫಲ್ಯವನ್ನು ಟೀಕಿಸಲ್ಪಟ್ಟಿವೆ. ವಿರೋಧ ಪಕ್ಷಗಳು ‘ವಿಶ್ವಗುರು ತನ್ನ ದೇಶದ ಜನರನ್ನೇ ರಕ್ಷಿಸಲು ವಿಫಲರಾಗಿದ್ದಾರೆ’ ಎಂದು ನೇರವಾಗಿ ಟೀಕೆ ಮಾಡುತ್ತಿದ್ದಾರೆ. ‘ಇಂಡಿಪೆಂಡೆನ್ಸ್ ಡೇ’ ಭಾಷಣದಲ್ಲಿ ಮೋದಿ ಅವರು 103 ನಿಮಿಷಗಳ ಕಾಲ ಮಾತನಾಡಿದರೂ, ಅದನ್ನು ‘ದಿಕ್ಕು ತಪ್ಪಿದ ಭಾಷಣ’ ಎಂದು ವಿಮರ್ಶಿಸಲಾಗಿದೆ – ಹೊಸ ಆಲೋಚನೆಗಳಿಲ್ಲ, ಹಳೆಯ ಪುನರಾವರ್ತನೆ ಮಾತ್ರವಿದೆ.

ಈಗ ಸೋಷಿಯಲ್ ಮೀಡಿಯಾದಲ್ಲಿ ‘ವಿಶ್ವಗುರು’ ಎಂಬ ಪದವೇ ಟ್ರೋಲ್‌ಗೆ ಅತಿ ಸುಲಭ ಗುರಿಯಾಗಿದೆ. ಮೋದಿಯವರನ್ನು ‘ವಿಶ್ವ ಜೋಕರ್’ ಎಂದು ಕರೆಯುವುದು, ‘ಹಗ್ ಡಿಪ್ಲೊಮಸಿ’ಯನ್ನು ವ್ಯಂಗ್ಯ ಮಾಡುವುದು, ಟ್ರೋಲ್ ಮಾಡುವುದು – ಇವೆಲ್ಲ ಸಾಮಾನ್ಯವಾಗಿವೆ.
ಒಂದು ಉದಾಹರಣೆಗೆ, ಚೀನಾದಲ್ಲಿ ಭಾರತೀಯ ಮೂಲದ ಅರುಣಾಚಲ ಪ್ರದೇಶದ ಮಹಿಳೆಯನ್ನು 18 ಗಂಟೆಗಳ ಕಾಲ ಹಿಡಿದಿಟ್ಟ ಘಟನೆಯನ್ನು ಉಲ್ಲೇಖಿಸಿ ‘ವಿಶ್ವಗುರು ಚೀನಾಕ್ಕೆ ಲೇಸರ್ ಐ ಮೆಮ್ ಮಾತ್ರ ಮಾಡಬಲ್ಲ’ ಎಂದು ಟ್ರೋಲ್ ಮಾಡಲಾಗುತ್ತದೆ. ಇನ್ನೊಂದು ಸಂದರ್ಭದಲ್ಲಿ, ರಾಹುಲ್ ಗಾಂಧಿ ಇಂದೋರ್‌ನಲ್ಲಿ ಕಲುಷಿತ ನೀರು ಬಾಧಿತರನ್ನು ಭೇಟಿಯಾದಾಗ ‘ವಿಶ್ವಗುರುಗಿಂತ ರಾಹುಲ್ ದಯಾಳು’ ಎಂದು ಹೋಲಿಕೆ ಮಾಡಿದ ವೀಡಿಯೊಗಳು ವೈರಲ್ ಆಗಿವೆ. ಇನ್ನು ಕೆಲವರು ‘ಮೋದಿ ಎಂದಿಗೂ ತಾವು ವಿಶ್ವಗುರು ಎಂದು ಹೇಳಿಕೊಂಡಿಲ್ಲ, ಭವಿಷ್ಯದ ಗುರಿ ಮಾತ್ರ’ ಎಂದು ಡಿಫೆಂಡ್ ಮಾಡುತ್ತಾರೆ. ಆದರೆ, ಟ್ರೋಲರ್‌ಗಳು ‘ಅದೇ ಗುರಿಯನ್ನು ಪದೇ ಪದೇ ತೋರಿಸಿ ಹೈಪ್ ಮಾಡುತ್ತಿದ್ದೀರಿ’ ಎಂದು ಹಿಂದಕ್ಕೆ ತಳ್ಳುತ್ತಾರೆ.
ಈ ಸುದ್ದಿ ಓದಿದ್ದೀರಾ? ಬಂಗಾಳ ಚುನಾವಣೆ | ಮುಸ್ಲಿಂ ಪ್ರಾಬಲ್ಯವಿರುವ ಟಿಎಂಸಿ ಭದ್ರಕೋಟೆಯನ್ನು ಭೇದಿಸುವುದೇ ಬಿಜೆಪಿ?
ಈ ಎಲ್ಲದರ ಹಿಂದೆ ಒಂದು ಮೂಲ ಕಾರಣವಿದೆ: ಅತಿಯಾದ ಪ್ರಚಾರ ಮತ್ತು ಹೈಪ್ ವಾಸ್ತವಿಕತೆಯೊಂದಿಗೆ ಹೊಂದಿಕೊಳ್ಳದಿದ್ದಾಗ, ಅದು ವಿರುದ್ಧ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಬಿಜೆಪಿ ಸಾವಿರಾರು ಪೋಸ್ಟ್‌ಗಳ ಮೂಲಕ ಮೋದಿಯವರನ್ನು ಸೂಪರ್ ಹೀರೋ ಎಂದು ತೋರಿಸಿದರೂ, ಜನರು ನೋಡುತ್ತಿರುವುದು ದೈನಂದಿನ ಸಮಸ್ಯೆಗಳು, ವೈಫಲ್ಯಗಳು, ಅಂತಾರಾಷ್ಟ್ರೀಯ ಅವಮಾನಗಳು. ಇದರಿಂದಾಗಿ “ವಿಶ್ವಗುರು” ಎಂಬ ಪದವೇ ಒಂದು ಜೋಕ್ ಆಗಿ ಪರಿವರ್ತನೆಯಾಗಿದೆ. ಜನರು ಅದನ್ನು ಕೇಳಿದ ಕೂಡಲೇ ನಗುತ್ತಾರೆ ಮತ್ತು ವ್ಯಂಗ್ಯ ಮಾಡುತ್ತಾರೆ.
ಇದೆಲ್ಲವೂ ತಿಳಿದೂ ತಿಳಿಯದಂತೆ, ಚಕ್ರವರ್ತಿ ಸೂಲಿಬೆಲೆ, ನಟ ಜಗ್ಗೇಶ್, ಸಂಸದೆ ಕಂಗನಾ ರಣಾವತ್, ಅನುಪಮ್ ಖೇರ್, ಚೇತನ್ ಭಗತ್, ಪರೇಶ್ ರಾವಲ್, ವಿವೇಕ ಅಗ್ನಿಹೋತ್ರಿ, ಅನುರಾಗ್ ಠಾಕೂರ್, ಸ್ಮೃತಿ ಇರಾನಿ, ಸದ್ಗುರು ಸೇರಿದಂತೆ ಹಲವರು ಮೋದಿ ಭಜನೆ ಮಾಡುತ್ತಿದ್ದಾರೆ. ಮೋದಿಯವರನ್ನು ವಿಶ್ವಗುರು ಮಾಡಲೇಂದೇ ಬಿಜೆಪಿಯಲ್ಲಿ ಇಂತಹ ನೂರಾರು ಪಪ್ಪುಗಳು ಹುಟ್ಟಿಕೊಂಡಿದ್ದಾರೆ. ಇವರು ಎಷ್ಟೇ ಪ್ರಯತ್ನಪಟ್ಟರೂ ಮೋದಿ ಆ ಎತ್ತರಕ್ಕೆ ಏರುತ್ತಲೇ ಇಲ್ಲ.
ವಿಶ್ವಗುರು ಎಂಬುದು ಒಂದು ಸುಂದರ ಕನಸು. ಆದರೆ, ಅದನ್ನು ಸಾಧಿಸಲು ಕೇವಲ ಪ್ರಚಾರ ಮತ್ತು ಘೋಷಣೆಗಳು ಸಾಕಾಗುವುದಿಲ್ಲ. ಅದಕ್ಕೆ ನಿಜವಾದ ಆರ್ಥಿಕ ಬಲ, ಸಾಮಾಜಿಕ ನ್ಯಾಯ, ಭದ್ರತಾ ಯಶಸ್ಸು, ವಿದೇಶಾಂಗದಲ್ಲಿ ಗೌರವಯುತ ಸ್ಥಾನ, ಒಳಾಡಳಿತದಲ್ಲಿ ಫಲಿತಾಂಶಗಳು ಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಹೈಪ್ ಮೋದಿಯವರನ್ನು ಎತ್ತರಕ್ಕೆ ಏರಿಸುವ ಬದಲು, ಅವರನ್ನು ಮತ್ತಷ್ಟು ಟ್ರೋಲ್ ಮಾಡಲು, ವಿಮರ್ಶಿಸಲು ಅವಕಾಶಗಳನ್ನು ಹೆಚ್ಚಿಸುತ್ತಿದೆ. ಜನರು ಹೈಪ್‌ಗಿಂತ ವಾಸ್ತವವನ್ನು ಹೆಚ್ಚಾಗಿ ನಂಬುತ್ತಿದ್ದಾರೆ.




