"ಚಳಿಗೆ ಮೂರು ದಿನವಾದರೂ ಮೊಗ್ಗು ಅರಳುವ ಮುನ್ಸೂಚನೆ ಇಲ್ಲ. ಅಲ್ಲಲ್ಲಿ ಅರಳಿದರೂ ಕಟಾವು ಮಾಡಲು ಕೂಲಿ ಆಳು ಬರುತ್ತಿಲ್ಲ. ಸಂಜೆ ಕಟಾವು ಮಾಡಿದರೆ ಬೆಳಿಗ್ಗೆ ಮಾರುಕಟ್ಟೆಯಲ್ಲಿ ಅದಕ್ಕೆ ಉತ್ತಮ ಬೆಲೆ ಸಿಗುವುದಿಲ್ಲ"
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ತೀವ್ರ ಚಳಿ ಮತ್ತು ದಟ್ಟ ಮಂಜು ಕಾಡುತ್ತಿದ್ದು, ಇದು ಗುಲಾಬಿ ಬೆಳೆಗಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಗುಲಾಬಿ ಸಸ್ಯಗಳು ಸಾಮಾನ್ಯವಾಗಿ ತಂಪು ಹವಾಮಾನವನ್ನು ಸಹಿಸಬಲ್ಲವಾದರೂ, ಅತಿಯಾದ ಚಳಿ ಮತ್ತು ಮಂಜು ಮೊಗ್ಗುಗಳ ಅರಳುವಿಕೆಗೆ ಅಡ್ಡಿಯಾಗಿದ್ದು, ಹೂವುಗಳ ಗುಣಮಟ್ಟವನ್ನು ಕುಗ್ಗಿಸುತ್ತಿದೆ. ಇದು ವ್ಯಾಪಾರಿ ಮತ್ತು ರೈತರಿಗೆ ದೊಡ್ಡ ತೊಂದರೆಯಾಗಿ ಪರಿಣಮಿಸಿದೆ.
2025ರಲ್ಲಿ ಫೆಬ್ರವರಿ ಅತ್ಯಂತ ಅನುಕೂಲಕರವಾಗಿ ಪರಿಣಮಿಸಿದರೆ ನವೆಂಬರ್ ಡಿಸೆಂಬರ್ ತಿಂಗಳುಗಳು ರೈತರನ್ನು ಕಂಗಾಲಾಗಿಸಿವೆ. ತೀವ್ರ ಚಳಿ ಮತ್ತು ದಟ್ಟ ಮಂಜಿನಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ನಿಭಾಯಿಸಲು ರೈತರು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಅನೇಕರು ಪಾಲಿಹೌಸ್ ಅಥವಾ ಶೆಡ್ ನೆಟ್‌ಗಳನ್ನು ಬಳಸಿ ಸಸ್ಯಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಮಂಜು ಮತ್ತು ಕಡಿಮೆ ತಾಪಮಾನದಿಂದಾಗಿ ಹೂವುಗಳ ಬಣ್ಣ ಮಬ್ಬಾಗುವುದು, ಮೊಗ್ಗುಗಳು ಒಣಗುವುದು ಅಥವಾ ಅರಳದೇ ಉಳಿಯುವುದು ಸಾಮಾನ್ಯವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಗುಣಮಟ್ಟದ ಹೂವುಗಳ ಕೊರತೆ ಉಂಟಾಗಿ, ದರಗಳು ಕುಸಿಯುತ್ತಿವೆ. ಇದರಿಂದ ರೈತರ ಆದಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಲಾಬಿ ಬೆಳೆಗಾರ ಯಾರಪ್ಪ ಅವರು ಮಾತನಾಡಿ, “ಚಳಿ ಮತ್ತು ಮಂಜಿನಿಂದ ಗುಲಾಬಿ ಮೊಗ್ಗು ನಿಗದಿತ ಸಮಯದಲ್ಲಿ ಅರಳುತ್ತಿಲ್ಲ. ಗಿಡಕ್ಕೆ ಚಳಿ ಮತ್ತು ಮಂಜಿನಿಂದ ರಕ್ಷಿಸುವ ಸಲುವಾಗಿ ಔಷದಿ ಸಿಂಪಡಿಸುತ್ತಿದ್ದೇವೆ. ಇಲ್ಲವೆಂದರೆ ನಿತ್ಯ ರೋಸ್ ಕಟಾವು ಮಾಡಲು ಆಗುವುದಿಲ್ಲ. ಅವಧಿ ಮೀರಿ ಅರಳುವ ಹೂ ಮಾರುಕಟ್ಟೆಗೆ ಸಾಗಿಸುವ ಮುನ್ನವೇ ಬಾಡಿ ಹೋಗುತ್ತದೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ” ಎಂದು ಅಲವತ್ತುಕೊಂಡರು.

ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಿಂದ ಕೌಲಾಲಂಪುರ, ಸಿಂಗಾಪುರ, ಕುವೈತ್, ಮನಿಲಾ, ಆಕ್ಲೆಂಡ್, ನ್ಯೂಯಾರ್ಕ್, ಮಾಲ್ಡೀವ್ಸ್, ಜೋರ್ಡಾನ್, ದುಬೈ ಮತ್ತು ಲೆಬನಾನ್ ಸೇರಿದಂತೆ ವಿವಿಧ ಸ್ಥಳಗಳಿಗೆ ಸುಮಾರು 10.8 ಮಿಲಿಯನ್ ಕೆಂಪು ಗುಲಾಬಿ ಕಾಂಡಗಳನ್ನು ರಫ್ತು ಮಾಡಲಾಗಿದೆ. ಆದರೆ ಈಗ ಚಳಿಗೆ ಮೊಗ್ಗು ಮೂರು ದಿನವಾದರೂ ಅರಳುವ ಮುನ್ಸೂಚನೆ ಇಲ್ಲ. ಅಲ್ಲಲ್ಲಿ ಅರಳಿದರೂ ಕಟಾವು ಮಾಡಲು ಕೂಲಿ ಆಳು ಬರುತ್ತಿಲ್ಲ. ಸಂಜೆ ಕಟಾವು ಮಾಡಿದರೆ ಬೆಳಿಗ್ಗೆ ಮಾರುಕಟ್ಟೆಯಲ್ಲಿ ಅದಕ್ಕೆ ಉತ್ತಮ ಬೆಲೆ ಸಿಗುವುದಿಲ್ಲವೆಂದು ಗುಲಾಬಿ ಬೆಳೆಗಾರರು ಕಂಗಾಲಾಗಿದ್ದಾರೆ.
ಬೆಳೆಗಾರರ ಸವಾಲುಗಳು ಮತ್ತು ಸುಧಾರಣೆಗಳು
ಗುಲಾಬಿ ಬೆಳೆಗಾರರು ಹಲವು ಸವಾಲುಗಳನ್ನು ಎದುರಿಸುತ್ತಾರೆ. ಹವಾಮಾನ ಬದಲಾವಣೆಯಿಂದಾಗಿ ಆರಂಭದಲ್ಲಿ ತಂಪು ಹವೆ ಸರಬರಾಜನ್ನು ಕಡಿಮೆ ಮಾಡಿತು. ಅಲ್ಲದೆ, ಕೀಟನಾಶಕಗಳು, ರಸಗೊಬ್ಬರಗಳ ಬೆಲೆ ಹೆಚ್ಚಳ ಮತ್ತು ಕಾರ್ಮಿಕರ ಕೊರತೆ ಸಮಸ್ಯೆಗಳು ಇವೆ. ರಫ್ತುಗೆ ಸಂಬಂಧಿಸಿದಂತೆ GST ಮತ್ತು ಫ್ಲೈಟ್ ಚಾರ್ಜ್‌ಗಳು ಬೆಳೆಗಾರರನ್ನು ಕಾಡುತ್ತಿವೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BIAL)ನಲ್ಲಿ ವಿಮಾನ ರದ್ದತಿಗಳು ರಫ್ತಿನ ಮೇಲೆ ಹೆಚ್ಚು ಪರಿಣಾಮ ಬೀರಿವೆ. ಆದರೆ ಸರ್ಕಾರದ ಕೆಲವು ಯೋಜನೆಗಳು ಸಹಾಯ ಮಾಡುತ್ತಿವೆ. ಕರ್ನಾಟಕ ಸರ್ಕಾರದ ಫ್ಲೋರಿಕಲ್ಚರ್ ಪ್ರೋತ್ಸಾಹಕಗಳು, ಸಬ್ಸಿಡಿ ಮತ್ತು ತರಬೇತಿ ಕಾರ್ಯಕ್ರಮಗಳು ಬೆಳೆಗಾರರನ್ನು ಬೆಂಬಲಿಸುತ್ತಿವೆ. ಆನ್‌ಲೈನ್ ಮಾರುಕಟ್ಟೆಗಳ ಬೆಳವಣಿಗೆಯಿಂದ ಚಿಲ್ಲರೆ ವ್ಯಾಪಾರ ಹೆಚ್ಚಾಗಿದೆ.
ರಫ್ತು ಸವಾಲುಗಳು ಮತ್ತು ದೇಶೀಯ ಮಾರುಕಟ್ಟೆಯ ಬಲ
ಬೆಂಗಳೂರಿನ ಗುಲಾಬಿಗಳು ವ್ಯಾಲೆಂಟೈನ್ಸ್ ಡೇ ಸೀಸನ್‌ನಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಮಲೇಷ್ಯಾ, ಸಿಂಗಾಪುರ ಮತ್ತು ಜಪಾನ್‌ನಂತಹ ದೇಶಗಳಿಗೆ ರಫ್ತು ಆಗುತ್ತವೆ. ಆದರೆ 2025ರಲ್ಲಿ ರಫ್ತುಗಳು ಗಣನೀಯವಾಗಿ ಕಡಿಮೆಯಾಗಿವೆ. ಸರಕು ಸಾಗಾಣಿಕೆ ಶುಲ್ಕದ ಮೇಲಿನ GST, ಹೆಚ್ಚಿನ ಇಂಧನ ಬೆಲೆಗಳು ಮತ್ತು ಅಂತಾರಾಷ್ಟ್ರೀಯ ವಿಮಾನ ಸಂಚಾರದ ತೊಂದರೆಗಳು ಇದಕ್ಕೆ ಕಾರಣ. ಹಿಂದಿನ ವರ್ಷಗಳಲ್ಲಿ 40-90 ಲಕ್ಷ ಕಾಂಡಗಳು ರಫ್ತು ಆಗುತ್ತಿದ್ದರೆ, 2025ರಲ್ಲಿ ಇದು ಶೇ.80ರಷ್ಟು ಕಡಿಮೆಯಾಗಿದೆ.
“ರಫ್ತು ಕುಸಿತಕ್ಕೆ ಮುಖ್ಯ ಕಾರಣ ಸಾಗಾಣಿಕೆ ವೆಚ್ಚ. ಆದರೆ ದೇಶೀಯ ಮಾರುಕಟ್ಟೆ ಉತ್ತಮವಾಗಿದೆ. ಅನೇಕ ಮದುವೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳು ಗುಲಾಬಿ ಬೇಡಿಕೆಯನ್ನು ಹೆಚ್ಚಿಸಿವೆ. ಈ ವರ್ಷ ಮಲೇಷ್ಯಾ ಮತ್ತು ಸಿಂಗಪುರದಿಂದ ಹೆಚ್ಚು ಬೇಡಿಕೆ ಬಂದಿತ್ತು. ಆದರೆ ಯುರೋಪ್‌ನಲ್ಲಿ ಚಳಿಗಾಲದ ಕಾರಣ ಬೆಂಗಳೂರಿನ ಗುಲಾಬಿಗಳಿಗೆ ಸ್ಪರ್ಧೆ ಹೆಚ್ಚಿತ್ತು” ಎಂಬುದು ಹರಾಜು ಬಿಡ್ಡರ್ ಮತ್ತು ಫ್ಲವರ್ ವ್ಯಾಪಾರಿ ಅಶ್ವತ್ಥ್ ನಾರಾಯಣ ಅವರ ಅಭಿಪ್ರಾಯವಾಗಿದೆ.

ಗುಲಾಬಿ ಬೆಳೆಯ ಇತಿಹಾಸ ಮತ್ತು ಬೆಂಗಳೂರಿನ ಪಾತ್ರ
ಗುಲಾಬಿ ಬೆಳೆಯಲು ಬೆಂಗಳೂರು ಅತ್ಯಂತ ಉತ್ತಮ ಸ್ಥಳವಾಗಿದೆ. ಇಲ್ಲಿನ ಮಧ್ಯಮ ಹವಾಗುಣ, ಉತ್ತಮ ಮಣ್ಣು ಮತ್ತು ನೀರಾವರಿ ಸೌಲಭ್ಯಗಳು ಗುಲಾಬಿ ಬೆಳೆಗಾರರನ್ನು ಪ್ರೋತ್ಸಾಹಿಸುತ್ತವೆ. ಕರ್ನಾಟಕದಲ್ಲಿ ಸುಮಾರು 15,000 ಹೆಕ್ಟೇರ್ ಪ್ರದೇಶದಲ್ಲಿ ಕಟ್ ಫ್ಲವರ್‌ಗಳನ್ನು ಬೆಳೆಯಲಾಗುತ್ತದೆ. ಅದರಲ್ಲಿ ಗುಲಾಬಿಯು ಮುಖ್ಯವಾಗಿದೆ.

ಗುಲಾಬಿ, ಕ್ರೈಸಾಂಥೆಮಮ್, ಗೆರ್ಬೆರಾ, ಜಿಪ್ಸೋಫಿಲಾ, ಕಾರ್ನೇಷನ್, ಆಂಥೂರಿಯಂ, ಲಿಮೋನಿಯಂ ಮತ್ತು ಇತರ ಪ್ರಭೇದಗಳನ್ನು ಒಳಗೊಂಡ ವಾಣಿಜ್ಯ ಹೂವಿನ ವಲಯವು ಬಲವಾದ ಬೆಳವಣಿಗೆಯನ್ನು ಕಂಡಿದೆ.
ಕರ್ನಾಟಕವು ಸಾಂಪ್ರದಾಯಿಕ ಮತ್ತು ವಾಣಿಜ್ಯ ಹೂವುಗಳ ಕೃಷಿ ವಿಸ್ತಾರವನ್ನು ಪಡೆದುಕೊಂಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನೂ ಹೊಂದಿದೆ. ಭಾರತದ ಹೂವಿನ ರಾಜಧಾನಿ ಎಂದು ಹೆಸರಾದ ಬೆಂಗಳೂರು, ಪ್ರತಿ ವರ್ಷ ವ್ಯಾಲೆಂಟೈನ್ಸ್ ಡೇ ಸೀಸನ್‌ನಲ್ಲಿ ಕೆಂಪು ಗುಲಾಬಿ ಬೆಳೆಗಾರರಿಗೆ ಒಂದು ದೊಡ್ಡ ಅವಕಾಶವನ್ನು ತಂದುಕೊಡುತ್ತದೆ.
ವರ್ಷದ ಆರಂಭದಲ್ಲಿ ಮದುವೆಗಳ ಸರಣಿ, ಪ್ರೇಮಿಗಳ ದಿನದ ಉತ್ಸಾಹ ಮತ್ತು ದೇಶೀಯ ಬೇಡಿಕೆಯ ಹೆಚ್ಚಳದಿಂದಾಗಿ ಕೆಂಪು ಗುಲಾಬಿಯ ಬೆಲೆಗಳು ಗಗನಕ್ಕೇರುತ್ತವೆ. ಅಂತಾರಾಷ್ಟ್ರೀಯ ಹೂವಿನ ಹರಾಜು ಬೆಂಗಳೂರು ಲಿಮಿಟೆಡ್(IFAB)ನಲ್ಲಿ 2025ರಂದು ಒಂದು ಕಾಂಡಕ್ಕೆ ಸರಾಸರಿ 12 ರಿಂದ 20 ರೂಪಾಯಿಗಳವರೆಗೆ ಮಾರಾಟವಾಗಿದೆ. ಇದು ಹಿಂದಿನ ವರ್ಷಗಳಿಗಿಂತ ಗಣನೀಯ ಹೆಚ್ಚಳವನ್ನು ತೋರಿಸುತ್ತದೆ.

ಅಂತಾರಾಷ್ಟ್ರೀಯ ಹೂವಿನ ಹರಾಜು ಬೆಂಗಳೂರು ಲಿಮಿಟೆಡ್(IFAB) ಉತ್ತಮ ಗುಣಮಟ್ಟದ ಹೂವುಗಳನ್ನು ಹರಾಜಿಗೆ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಮುಖ್ಯವಾಗಿ ಡಚ್ ಗುಲಾಬಿಗಳು, ಸರಿಸುಮಾರು ಶೇ.95ರಷ್ಟು ವಹಿವಾಟುಗಳನ್ನು ಹೊಂದಿದೆ. ಉಳಿದ ಜಿಪ್ಸೋಫಿಲಾ, ಕ್ರೈಸಾಂಥೆಮಮ್, BOP ಈ ರೀತಿಯ ಹೂಗಳನ್ನೂ ಒಳಗೊಂಡಿದೆ.

ಬೆಂಗಳೂರಿನ ಸುತ್ತಮುತ್ತಲ 70-80 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗುಲಾಬಿ ಉತ್ಪಾದನೆ ಕೇಂದ್ರೀಕೃತವಾಗಿದೆ. ಇಲ್ಲಿಂದ ದೇಶಾದ್ಯಂತ ಮುಂಬೈ, ಚೆನ್ನೈ, ದೆಹಲಿ, ನಾಗಪುರ ಮತ್ತು ಜೈಪುರದಂತಹ ನಗರಗಳಿಗೆ ಹೂವುಗಳು ಸರಬರಾಜಾಗುತ್ತವೆ.
ಪ್ರತಿ ವರ್ಷ ಫೆಬ್ರವರಿ ತಿಂಗಳು ವ್ಯಾಲೆಂಟೈನ್ಸ್ ಡೇಯಿಂದಾಗಿ ವಿಶೇಷವಾಗುತ್ತದೆ. ಈ ಸಮಯದಲ್ಲಿ ಬೇಡಿಕೆ ಗಣನೀಯವಾಗಿ ಹೆಚ್ಚಾಗುತ್ತದೆ. 2025ರಲ್ಲಿ ಫೆಬ್ರವರಿ 1ರಿಂದಲೇ ದಿನಕ್ಕೆ ಸರಾಸರಿ 5-6 ಲಕ್ಷ ಗುಲಾಬಿ ಕಾಂಡಗಳು ಮಾರಾಟವಾಗುತ್ತವೆ. ಕೆಲವು ದಿನಗಳಲ್ಲಿ ಇದು 8-9 ಲಕ್ಷಕ್ಕೂ ಮೀರುತ್ತದೆ.

IFABನಲ್ಲಿ ಹರಾಜು ಬೆಲೆಗಳು ಹಿಂದಿನ ವರ್ಷದ 6-7 ರೂಪಾಯಿಗಳಿಂದ ದ್ವಿಗುಣಗೊಂಡು 12-14 ರೂಪಾಯಿಗಳವರೆಗೆ ಏರಿಕೆಯಾಯಿತು. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆಂಪು ಗುಲಾಬಿ 20 ರೂಪಾಯಿಗಳವರೆಗೆ ಮಾರಾಟವಾಯಿತು. ಇದರಿಂದ ಬೆಳೆಗಾರರಿಗೆ ಉತ್ತಮ ಲಾಭ ಸಿಕ್ಕಿದೆ.

ವ್ಯಾಲೆಂಟೈನ್ಸ್ ಡೇ ಸೀಸನ್ ಗುಲಾಬಿಗೆ ಬೇಡಿಕೆ
“ಫೆಬ್ರವರಿಯಲ್ಲಿ ಮದುವೆಗಳು ಮತ್ತು ವ್ಯಾಲೆಂಟೈನ್ಸ್ ಡೇ ಬರುವುದರಿಂದ ಬೇಡಿಕೆ ಉತ್ತುಂಗಕ್ಕೇರುತ್ತದೆ. ಕಾಂಡದ ಗಾತ್ರವನ್ನು ಅವಲಂಬಿಸಿ, ಗುಲಾಬಿಗಳು 10 ರಿಂದ 20 ರೂಪಾಯಿಗಳ ನಡುವೆ ಮಾರಾಟವಾಗುತ್ತವೆ. ಕೆಂಪು ಗುಲಾಬಿಯೇ ಫೆಬ್ರವರಿ ತಿಂಗಳಲ್ಲಿ ಅತ್ಯಂತ ಜನಪ್ರಿಯವಾದ ಹೂವಾಗಿದೆ. ಆದರೆ ಆರಂಭದಲ್ಲಿ ತಂಪಾದ ಹವಾಮಾನದಿಂದ ಹೂಗಳು ಅರಳದ ಕಾರಣ ಸರಬರಾಜು ಸ್ವಲ್ಪ ಕಡಿಮೆಯಾಗಿದೆ. ವ್ಯಾಲೆಂಟೈನ್ಸ್ ಡೇಗೆ ಮುಂಚಿತವಾಗಿ ಬೆಲೆಗಳು 20 ರೂಪಾಯಿಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ” ಎಂದು IFABನ ಸಿಬ್ಬಂದಿ ಈ ದಿನ.ಕಾಮ್‌ನೊಂದಿಗೆ ಮಾಹಿತಿ ಹಂಚಿಕೊಂಡರು.
“ದಿನಕ್ಕೆ ಸರಾಸರಿ 20 ಲಕ್ಷ ಗುಲಾಬಿಗಳು ಹರಾಜು ಆಗುತ್ತಿದ್ದವು. 2025ರಲ್ಲಿ ಈ ಸಂಖ್ಯೆ ಸ್ವಲ್ಪ ಕಡಿಮೆಯಾಯಿತು. ಆದರೆ ಮಾರಾಟದ ಮೊತ್ತವು ದಾಖಲೆಯಾಗಿತ್ತು. ಉದಾಹರಣೆಗೆ, ಫೆಬ್ರವರಿ 13ರಂದು ಮಾತ್ರ ಸುಮಾರು 40 ಲಕ್ಷ ಗುಲಾಬಿಗಳು ಮಾರಾಟವಾದವು. ಒಟ್ಟಾರೆಯಾಗಿ ಆರು ದಿನಗಳಲ್ಲಿ ಸುಮಾರು 4.80 ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ. ಇದು ಹಿಂದಿನ ವರ್ಷಕ್ಕಿಂತ ಶೇ.75ರಷ್ಟು ಹೆಚ್ಚಳವಾಗಿದೆ” ಎಂದರು.
ಕೆಂಪು ಗುಲಾಬಿಯ ತಳಿಗಳಲ್ಲಿ ‘ತಾಜ್ ಮಹಲ್’ ಅತ್ಯಂತ ಜನಪ್ರಿಯವಾಗಿದೆ. ಮದುವೆಗಳಿಗೆ ಪೀಚ್, ಪಿಂಕ್, ಬಿಳಿ ಮತ್ತು ಹಳದಿ ಬಣ್ಣಗಳು ಹೆಚ್ಚು ಬೇಡಿಕೆಯಲ್ಲಿವೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ 10-12 ಗುಲಾಬಿಗಳ ಬೊಕ್ಕೆ 650 ರಿಂದ 1,000 ರೂಪಾಯಿಗಳ ನಡುವೆ ಮಾರಾಟವಾಗುತ್ತಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆಗಳು ಹರಾಜುಗಿಂತ ದುಪ್ಪಟ್ಟು ಆಗುತ್ತವೆ. ಏಕೆಂದರೆ ಸಾಗಾಣಿಕೆ, ಪ್ಯಾಕೇಜಿಂಗ್ ಮತ್ತು ಲಾಭಾಂಶಗಳೂ ಕೂಡ ಸೇರಿಕೊಳ್ಳುತ್ತವೆ. ಹಾಗಾಗಿ ಬೆಲೆ ಹೆಚ್ಚಳವಾಗುತ್ತದೆ.

ಸೌತ್ ಇಂಡಿಯಾ ಫ್ಲೋರಿಕಲ್ಚರ್ ಅಸೋಸಿಯೇಷನ್(SIFA) ಪ್ರಕಾರ, “ದೇಶೀಯ ಮಾರುಕಟ್ಟೆಯಲ್ಲಿ ಬೆಳೆಗಾರರು ಲಾಭದಲ್ಲಿದ್ದರು. 2025ರಲ್ಲಿ ಉತ್ಪಾದನೆಯಲ್ಲಿ ಶೇ.20ರಷ್ಟು ಹೆಚ್ಚಳವಾಯಿತು. ಉತ್ತಮ ಋತುವಿನಲ್ಲಿ ದಿನಕ್ಕೆ 15-20 ಲಕ್ಷ ಕಾಂಡಗಳು ಉತ್ಪಾದನೆಯಾಗುತ್ತವೆ. ಸೀಸನ್‌ನಲ್ಲಿ ಇದು 20 ಲಕ್ಷಕ್ಕಿಂತ ಹೆಚ್ಚು ಆಗುತ್ತದೆ. ಹೊಸ ತಳಿಗಳಾದ ‘ರಿವೈವಲ್'(ಲೈಟ್ ಪಿಂಕ್) ಮತ್ತು ‘ತಾಜ್ ಮಹಲ್’ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿವೆ” ಎಂದು ತಿಳಿಸಿದೆ.
ಭವಿಷ್ಯದ ನಿರೀಕ್ಷೆಗಳು: 2026ರ ದೃಷ್ಟಿಕೋನ
2026ರ ವ್ಯಾಲೆಂಟೈನ್ಸ್ ಡೇಗೆ ಮುಂಚೆಯೇ(ಜನವರಿ 2026ರಲ್ಲಿ) ಗುಲಾಬಿ ಹೂವುಗಳ ಬೇಡಿಕೆ ಕಂಡುಬರುತ್ತಿದೆ. ತಜ್ಞರು ಶೇ.15-18ರಷ್ಟು ಮಾರಾಟ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ, ಆನ್‌ಲೈನ್ ಶಾಪಿಂಗ್ ಮತ್ತು ಯುವಜನರಲ್ಲಿ ವ್ಯಾಲೆಂಟೈನ್ಸ್ ಡೇಯ ಜನಪ್ರಿಯತೆಯಿಂದ ಇದು ಸಾಧ್ಯ. ಆದರೆ ರಫ್ತು ಸುಧಾರಣೆಗೆ ಸರ್ಕಾರಿ ಹಸ್ತಕ್ಷೇಪ ಅಗತ್ಯ.
ಇದನ್ನೂ ಓದಿದ್ದೀರಾ? 2025ರಲ್ಲಿ ಸರ್ಕಾರದ ನಿದ್ದೆಗೆಡಿಸಿದ ರೈತ ಚಳವಳಿಗಳು: ಎಲ್ಲೆಲ್ಲಿ ಏನೇನಾಯ್ತು?
ಬೆಂಗಳೂರಿನ ಗುಲಾಬಿ ಮಾರುಕಟ್ಟೆ ಭಾರತದ ಆರ್ಥಿಕತೆಯ ಒಂದು ಮುಖ್ಯ ಭಾಗವಾಗಿದೆ. ಹೊಸ ತಳಿಗಳ ಅಭಿವೃದ್ಧಿ ಮತ್ತು ಸುಸ್ಥಿರ ಕೃಷಿ ವಿಧಾನಗಳಿಂದ ಮಾರುಕಟ್ಟೆಯನ್ನು ಮತ್ತಷ್ಟು ಬಲಪಡಿಸಬಹುದು. 2025ರ ಆರಂಭಿಕ ಯಶಸ್ಸು ಬೆಳೆಗಾರರಿಗೆ ಹೊಸ ಭರವಸೆಯನ್ನು ತಂದಿದೆ. ಆದರೆ ಸವಾಲುಗಳನ್ನು ಎದುರಿಸಿ ಮುಂದುವರೆಯುವುದು ಅಗತ್ಯ. ಒಟ್ಟಾರೆಯಾಗಿ, ಕೆಂಪು ಗುಲಾಬಿಗಳಂತಹ ಸೌಂದರ್ಯದ ಹೂವುಗಳು ಪ್ರೇಮದ ಸಂಕೇತವಷ್ಟೇ ಅಲ್ಲ, ರೈತರ ಆರ್ಥಿಕ ಸಬಲೀಕರಣದ ಸಂಕೇತವೂ ಆಗಿದೆ. ಹವಾಮಾನ ವೈಪರೀತ್ಯದಂತಹ ಸವಾಲುಗಳನ್ನು ಎದುರಿಸಿ ರೈತನ ಮುಖದಲ್ಲಿ ಗುಲಾಬಿ ರಂಗು ತುಂಬಲಿ.





