ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಉತ್ತರಾಯಣದ ಕ್ಷಣವನ್ನು ಆಧಾರವಾಗಿಟ್ಟುಕೊಂಡು ಸಾವಿರಾರು ವರ್ಷಗಳ ಹಿಂದೆ ರೂಪುಗೊಂಡ ಹಬ್ಬ ಈ ಮಕರ ಸಂಕ್ರಾಂತಿ. ಭಾರತದ ಕೃಷಿ ಪ್ರಧಾನ ಸಮಾಜದಲ್ಲಿ ಈ ಆಚರಣೆ ಭೂಮಿಯೊಂದಿಗಿನ ಮಾನವ ಸಂಬಂಧ, ಪ್ರಕೃತಿಯ ಚಕ್ರ, ಆಹಾರ ಪದ್ಧತಿ, ಆರೋಗ್ಯ ಹಾಗೂ ಸಾಮಾಜಿಕ ಸಹಬಾಳ್ವೆಯನ್ನು ಒಟ್ಟುಗೂಡಿಸುತ್ತದೆ.
ವೈಜ್ಞಾನಿಕ ಹಿನ್ನೆಲೆ ಜೊತೆಗೂ ಮಿಳಿತಗೊಂಡಿರುವ ಈ ಸುಗ್ಗಿ ಹಬ್ಬ, ರೈತನ ಬದುಕಿನ ಅತ್ಯಂತ ಮಹತ್ವದ ಹಂತವಾದ ಬೆಳೆ ಕಟಾವು ಪೂರ್ಣಗೊಂಡ ಸಂತಸವನ್ನು ಪ್ರತಿಬಿಂಬಿಸುತ್ತದೆ. ಹೊಸ ವರ್ಷದ ಮೊದಲ ಹಬ್ಬವಾಗಿರುವ ಈ ಸಂಕ್ರಾಂತಿ, ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಭಾರತೀಯ ಕೃಷಿ ಸಂಸ್ಕೃತಿಯ ಜೀವಂತ ಪ್ರತೀಕವಾಗಿದೆ. ಸೂರ್ಯನು ಉತ್ತರಾಯಣವನ್ನು ಆರಂಭಿಸುವ ಈ ಕ್ಷಣ, ಖಗೋಳಶಾಸ್ತ್ರದ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ದಿನದಿಂದ ಸೂರ್ಯನ ಕಿರಣಗಳು ಉತ್ತರ ದಿಕ್ಕಿನತ್ತ ಚಲಿಸುವುದರಿಂದ ಹಗಲು ನಿಧಾನವಾಗಿ ಹೆಚ್ಚಾಗುತ್ತದೆ. ಇದು ಬೆಳಕಿನ ಅವಧಿ ಹೆಚ್ಚಾಗುವ ಕಾಲವಾಗಿದ್ದು, ಮಾನವನ ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಹಳೆಯ ಕಾಲದಲ್ಲಿಯೇ ನಮ್ಮ ಪೂರ್ವಜರು ಸೂರ್ಯನ ಚಲನೆ, ಋತುಚಕ್ರ ಮತ್ತು ಕೃಷಿಯ ನಡುವಿನ ಸಂಬಂಧವನ್ನು ಅರಿತು ಈ ದಿನವನ್ನು ಹಬ್ಬವಾಗಿ ರೂಪಿಸಿದ್ದಾರೆ. ಚಳಿಗಾಲದ ಮಂಕು ನಿಧಾನವಾಗಿ ಸರಿದು, ಬೆಳಕಿನ ದಿನಗಳು ಆರಂಭವಾಗುವ ಈ ಸಮಯದಲ್ಲಿ, ಬದುಕಿನಲ್ಲೂ ಹೊಸತನವೊಂದು ಆರಂಭವಾಗಲಿದೆ ಎನ್ನುವ ನಂಬಿಕೆ ಈ ನಾಡಿನದ್ದು.
ಕರ್ನಾಟಕದ ಹಳ್ಳಿಗಳಲ್ಲಿ ಸಂಕ್ರಾಂತಿ ಎಂದರೆ, ಮನೆಮನೆಗಳಲ್ಲಿ ಎಳ್ಳು–ಬೆಲ್ಲದ ಸಿಹಿ. ʼಎಳ್ಳು ಬೆಲ್ಲ ತಿಂದು, ಒಳ್ಳೆ ಮಾತಾಡಿʼ ಎನ್ನುವ ಸಾಮಾಜಿಕ ಬದುಕಿನ ತತ್ವ. ಹೊಸ ಅಕ್ಕಿಯಿಂದ ಮಾಡಿದ ಅನ್ನ, ಸಕ್ಕರೆ ಅಚ್ಚುಗಳು, ಎಳ್ಳಿನ ಲಡ್ಡುಗಳು, ಎತ್ತುಗಳ ಅಲಂಕಾರ, ಹಬ್ಬದ ಊಟ—ಇವೆಲ್ಲವೂ ರೈತ ಸಂಸ್ಕೃತಿಯ ಹೆಮ್ಮೆಯ ಸಂಕೇತಗಳು. ಸಂಕ್ರಾಂತಿ ಇಲ್ಲಿ ಬೆಳೆ ಕಟಾವು ಮುಗಿದ ಸಂತೋಷದ ಘಳಿಗೆಯಾಗಿ, ಕೃತಜ್ಞತೆಯ ಹಬ್ಬವಾಗಿ ಕಾಣಿಸುತ್ತದೆ.
ಅದೇ ಸಂಕ್ರಾಂತಿ ತಮಿಳುನಾಡಿನಲ್ಲಿ ಪೊಂಗಲ್ ಆಗಿ ನಾಲ್ಕು ದಿನಗಳ ಉತ್ಸವವಾಗಿ ನಡೆಯುತ್ತದೆ. ಭೋಗಿಯಿಂದ ಆರಂಭವಾಗಿ ತೈ ಪೊಂಗಲ್, ಮಟ್ಟು ಪೊಂಗಲ್ ಮತ್ತು ಕಾನೂಂ ಪೊಂಗಲ್‌ವರೆಗೆ, ಕೃಷಿ, ಜಾನುವಾರು ಮತ್ತು ಕುಟುಂಬ ಎಲ್ಲವೂ ಹಬ್ಬದ ಕೇಂದ್ರವಾಗುತ್ತವೆ. ಹೊಸ ಅಕ್ಕಿಯನ್ನು ಹಾಲಿನಲ್ಲಿ ಕುದಿಸಿ ಉಕ್ಕಿಸುವ ಕ್ಷಣದಲ್ಲಿ ಕೇಳಿಸುವ “ಪೊಂಗಲೋ ಪೊಂಗಲ್” ಎನ್ನುವ ಉತ್ಸಾಹಭರಿತ ಘೋಷಣೆ ಪ್ರಕೃತಿಯೊಂದಿಗೆ ಮನುಷ್ಯನ ಸಂಭಾಷಣೆಯಂತಿರುತ್ತದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಇದು ಗಾಳಿಪಟದ ಹಬ್ಬ. ಭೋಗಿ ಮಂಟಪದ ಬೆಂಕಿಯ ಸುತ್ತ ಸೇರಿ, ಹಳೆಯದನ್ನು ಬಿಟ್ಟು ಹೊಸದನ್ನು ಸ್ವೀಕರಿಸುವ ಸಂಕೇತಾತ್ಮಕ ಕ್ರಿಯೆಗೆ ಇಲ್ಲಿನ ಜನರು ಸಾಕ್ಷಿಯಾಗುತ್ತಾರೆ. ಹೊಸ ಬಟ್ಟೆ, ಸಿಹಿ ಪದಾರ್ಥಗಳು ಮತ್ತು ಸಂಬಂಧಗಳ ಒಟ್ಟುಗೂಡುವಿಕೆ ಇಲ್ಲಿ ಹಬ್ಬದ ನಿಜವಾದ ಅಂತರಾಳ. ಮಹಾರಾಷ್ಟ್ರಕ್ಕೆ ಬಂದರೆ, ಸಂಕ್ರಾಂತಿ ಮಕರ ಸಂಕ್ರಾಂತ್ ಆಗಿ ‘ತಿಲ್‌ಗುಳ್ ಘ್ಯಾ, ಗೋದ್ ಗೋದ್ ಬೋಲಾ’ ಎಂಬ ಮಾತುಗಳಲ್ಲಿ ಆಚರಿಸಲ್ಪಡುತ್ತದೆ. ಗುಜರಾತಿನ ಸಂಕ್ರಾಂತಿಯಲ್ಲಿ ನಗರದ ಮೇಲ್ಛಾವಣಿಗಳಲ್ಲಿ ನಡೆಯುವ ಸ್ಪರ್ಧೆಗಳು, ರಾತ್ರಿ ಹೊತ್ತು ಬೆಳಗುವ ದೀಪ ಗಾಳಿಪಟಗಳು ಸೂರ್ಯನ ಉತ್ತರಾಯಣವನ್ನು ಸಂಭ್ರಮದಿಂದ ಸ್ವಾಗತಿಸುವ ಸ್ವರೂಪಗಳೇ ಆಗಿವೆ. ಉತ್ತರ ಭಾರತದ ಪಂಜಾಬ್ ಮತ್ತು ಹರಿಯಾಣದಲ್ಲಿ ಸಂಕ್ರಾಂತಿ ಲೋಹ್ರಿಯಾಗಿ ಆಚರಿಸಲ್ಪಡುತ್ತದೆ. ಹೊಸ ಬೆಳೆಗೆ ಕೃತಜ್ಞತೆ ಸಲ್ಲಿಸುವ ಈ ಹಬ್ಬದಲ್ಲಿ, ಎಳ್ಳು, ಕಡಲೆ ಸೇರಿ ಹಲವು ಬೆಳೆಗಳು ಬೆಂಕಿಗೆ ಅರ್ಪಿತವಾಗುತ್ತವೆ.
ಪಶ್ಚಿಮ ಬಂಗಾಳದಲ್ಲಿ ಪೌಷ ಸಂಕ್ರಾಂತಿಯಾಗಿ, ಬೆಲ್ಲ ಮತ್ತು ತೆಂಗಿನಕಾಯಿಯ ಸಿಹಿಯ ಜೊತೆಗೆ ಗಂಗಾಸಾಗರ ಮೇಳದ ಭಕ್ತಿಭಾವ ಸೇರಿ, ಹಬ್ಬಕ್ಕೆ ಆಧ್ಯಾತ್ಮಿಕ ಕಳೆ ನೀಡುತ್ತದೆ. ಅಸ್ಸಾಂನಲ್ಲಿ ಅದೇ ಹಬ್ಬ ಮಘ್ ಬಿಹು ಅಥವಾ ಭೋಗಾಲಿ ಬಿಹು ಆಗಿ, ಸಮೂಹ ಊಟ ಮತ್ತು ಗ್ರಾಮೀಣ ಸಂಭ್ರಮದ ಹಬ್ಬವಾಗುತ್ತದೆ. ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಸಂಕ್ರಾಂತಿಯು ಅಕ್ಕಿ ಮತ್ತು ಬೇಳೆಯಿಂದ ಮಾಡುವ ಖಿಚ್ಡಿಯ ರುಚಿ ಬೀರುತ್ತದೆ. ಒಡಿಶಾದಲ್ಲಿ ನದಿ ಸ್ನಾನ, ಪೂಜೆ, ಮಕರ ಚೌಳಾ ಅನ್ನ ಇತ್ಯಾದಿ. ಇನ್ನೂ ದಕ್ಷಿಣಕ್ಕೆ ಇಳಿದರೆ, ಕೇರಳದಲ್ಲಿ ಸಂಕ್ರಾಂತಿ ಮಕರವಿಳಕ್ಕು ಎಂಬ ಹೆಸರಿನಲ್ಲಿ ಶಬರಿಮಲೆಯ ಬೆಳಕಾಗಿ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ.
ಹೀಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಂಕ್ರಾಂತಿ ತನ್ನ ಹೆಸರು, ರೂಪ ಮತ್ತು ರುಚಿಯನ್ನು ಬದಲಿಸಿಕೊಂಡರೂ, ಅದರ ಅಂತರಾರ್ಥ ಮಾತ್ರ ಒಂದೇ. ಬೆಳಕಿನ ಆರಂಭದ ಸೂಚನೆ, ಬದುಕಿನಲ್ಲಿ ಬದಲಾವಣೆ ಅನಿವಾರ್ಯ ಎಂಬ ದೃಢ ಸಂಕಲ್ಪಕ್ಕೆ ದಾರಿ. ವೈವಿಧ್ಯಮ ಆಚರಣೆಗೆ ಸಾಕ್ಷಿಯಾಗುವ ಈ ಹಬ್ಬ ಪ್ರಕೃತಿಗೆ ಕೃತಜ್ಞನಾಗಿರು, ಸಹಬಾಳ್ವೆ ನಡೆಸು, ಒಗ್ಗಟ್ಟಿನಿಂದ ಮುನ್ನಡೆ ಎನ್ನುವ ಒಂದೇ ಸಂದೇಶವನ್ನು ಸಾರುತ್ತದೆ.
ಕರ್ನಾಟಕದಲ್ಲಿ ಸಂಕ್ರಾಂತಿಯ ಮುನ್ನ ಎಳ್ಳಮಾವಾಸ್ಯೆ ಆಚರಣೆ ಮಾಡಲಾಗುತ್ತದೆ. ಈ ದಿನ ರೈತ ಕುಟುಂಬಗಳು ಮನೆಗಳಲ್ಲಿ ವಿವಿಧ ರೀತಿಯ ತಿಂಡಿ–ತಿನಿಸುಗಳನ್ನು ತಯಾರಿಸಿಕೊಂಡು ಕುಟುಂಬ ಸಮೇತ ಹೊಲಗಳಿಗೆ ತೆರಳಿ ಭೂಮಿ ಪೂಜೆಯನ್ನು ನೆರವೇರಿಸುತ್ತಾರೆ. ತಯಾರಿಸಿದ ಎಲ್ಲ ಆಹಾರ ಪದಾರ್ಥಗಳನ್ನು ಒಟ್ಟಾಗಿ ಮಿಶ್ರಣ ಮಾಡಿ ಹೊಲದ ಸುತ್ತ ಚರಗ ಹೊಡೆಯುವ ಪದ್ಧತಿ ಇದೆ. ಪಕ್ಷಿ–ಪ್ರಾಣಿಗಳು ಈ ಆಹಾರವನ್ನು ಸೇವಿಸಿ ಭೂಮಿಯನ್ನು ಹರಸಬೇಕು ಎಂಬ ನಂಬಿಕೆ ಇದರ ಹಿಂದಿದೆ. ಭೂಮಿಯಲ್ಲಿ ಬಿತ್ತಿದ ಬೆಳೆಗಳು ಉತ್ತಮ ಫಸಲು ನೀಡಲಿ, ರೈತನ ಬದುಕು ಸಮೃದ್ಧವಾಗಲಿ ಎಂಬ ಪೂರ್ವಜರ ಆಶಯ ಈ ಆಚರಣೆಯಲ್ಲಿ ವ್ಯಕ್ತವಾಗುತ್ತದೆ.

ಸಂಕ್ರಾಂತಿ ಹಬ್ಬದ ವಿಶೇಷ ತಿಂಡಿ–ತಿನಿಸುಗಳಲ್ಲಿಗೆ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಶೇಂಗಾ ಹೋಳಿಗೆ, ಅವರೆ–ಮೇತೆ ಸೇರಿಸಿ ಮಾಡಿದ ವಿಶೇಷ ಪಲ್ಯ, ಬೇಳೆಯ ಹೋಳಿಗೆ (ಒಬ್ಬಟ್ಟು), ಕಬ್ಬು, ಕಡಲೆಕಾಯಿ, ಶೇಂಗಾ, ಸಜ್ಜೆ, ತರಕಾರಿಗಳು, ಗಜ್ಜರಿ, ಗೆಣಸು, ಎಳ್ಳು, ಬಾರೆಹಣ್ಣು ಸೇರಿವೆ. ಈ ಆಹಾರ ಪದಾರ್ಥಗಳು ಹಬ್ಬದ ಸಂಭ್ರಮಕ್ಕೆ ರುಚಿಯ ಜೊತೆಗೆ ಸಂಸ್ಕೃತಿಯ ಛಾಯೆಯನ್ನೂ ನೀಡುತ್ತವೆ.
ಪ್ರತಿ ವರ್ಷ ಜನವರಿ 14 ಅಥವಾ 15ರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮೊದಲ ದಿನವನ್ನು ಹೆಂಗಸರ ಬೋಗಿ ಎಂದು ಆಚರಿಸುವ ಸಂಪ್ರದಾಯವಿದೆ. ಈ ದಿನ ಮಹಿಳೆಯರು ಕಾಯಿಸಿದ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು, ಕುಟ್ಟಿ ಪುಡಿ ಮಾಡಿದ ಎಳ್ಳು–ಅರಿಶಿಣವನ್ನು ಮೈಗೆ ಹಚ್ಚಿಕೊಂಡು ತಲೆಸ್ನಾನ ಮಾಡುತ್ತಾರೆ. ನಂತರ ಬಾರೆಹಣ್ಣನ್ನು ತಲೆಯ ಮೇಲೆ ಇಟ್ಟುಕೊಂಡು ನೀರು ಸುರಿದುಕೊಳ್ಳುವ ಪದ್ಧತಿಯೂ ಇದೆ. ಸ್ನಾನದ ಬಳಿಕ ಹೊಸ ಬಟ್ಟೆ ಧರಿಸಿ, ಕಣ್ಣಿಗೆ ಕಾಡಿಗೆ ಹಚ್ಚಿ ಸಿಂಗರಿಸಿಕೊಂಡು ಹೊಲದಲ್ಲಿ ಬೆಳೆದ ಫಲಗಳನ್ನು ಸೇವಿಸುತ್ತಾರೆ. ನಂತರ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ ಹಾಗೂ ವಿಶೇಷ ಪಲ್ಯಗಳೊಂದಿಗೆ ಹಬ್ಬದ ಊಟ ಸವಿಯುತ್ತಾರೆ.
ಎರಡನೇ ದಿನವನ್ನು ಗಂಡಸರ ಬೋಗಿ ಎಂದು ಆಚರಿಸಲಾಗುತ್ತದೆ. ಈ ದಿನ ಗಂಡಸರು ಕಾಯಿಸಿದ ಎಣ್ಣೆಯನ್ನು ತಲೆ, ಕಿವಿ ಹಾಗೂ ಮೈಗೆ ಹಚ್ಚಿಕೊಂಡು, ಕುಟ್ಟಿ ಪುಡಿ ಮಾಡಿದ ಎಳ್ಳು–ಅರಿಶಿಣವನ್ನು ಮುಖ ಹಾಗೂ ಮೈಗೆ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ. ನಂತರ ಹೊಸ ಬಟ್ಟೆ ಧರಿಸಿ ಹೊಲದಲ್ಲಿ ಬೆಳೆದ ಗೆಣಸು, ಗಜ್ಜರಿ, ಬೆಂಡಖಜುರ್, ಕಬ್ಬು, ಕಡಲೆಕಾಯಿ (ಸುಲುಗಾಯಿ), ಬಾರೆಹಣ್ಣು ಮೊದಲಾದವುಗಳನ್ನು ಸೇವಿಸುತ್ತಾರೆ. ಈ ದಿನವೇ ಹಬ್ಬದ ಪ್ರಮುಖ ಆಚರಣೆ ನಡೆಯುವುದರಿಂದ ಮನೆಯ ಎಲ್ಲಾ ಸದಸ್ಯರು ಸೇರಿ ವೈವಿಧ್ಯಮಯ ವಿಶೇಷ ಭೋಜನ ಸವಿಯುತ್ತಾರೆ. ಈ ಎಲ್ಲ ಆಹಾರಗಳು ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ಶಕ್ತಿ, ಉಷ್ಣತೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತವೆ. ಎಳ್ಳು ಕ್ಯಾಲ್ಸಿಯಂ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲ; ಬೆಲ್ಲದಲ್ಲಿ ಕಬ್ಬಿಣ ಹಾಗೂ ಖನಿಜಗಳು ಇರುತ್ತವೆ. ಕಬ್ಬು ತಕ್ಷಣದ ಶಕ್ತಿಯನ್ನು ನೀಡುತ್ತದೆ. ಹೀಗಾಗಿ ಸಂಕ್ರಾಂತಿಯ ಆಹಾರ ಪದ್ಧತಿ ಋತುಮಾನಕ್ಕೆ ತಕ್ಕ ಆರೋಗ್ಯ ವಿಜ್ಞಾನಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಮಹಿಳೆಯರ ಮೇಲಿನ ʼಪುರುಷಹಂಕಾರʼದ ದೌರ್ಜನ್ಯಕ್ಕೆ ಕೊನೆ ಎಂದು?
ಸಂಕ್ರಾಂತಿ ಹಬ್ಬದ ವಿಶೇಷ ತಿಂಡಿ–ತಿನಿಸುಗಳಾದ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಶೇಂಗಾ ಹೊಳಿಗೆ, ಅವರೆ–ಮೇತೆ ಪಲ್ಯ, ಬೆಳೆಯ ಹೊಳಿಗೆ, ತುಪ್ಪ, ಹಾಲು ಮುಂತಾದವುಗಳು ದೇಹಕ್ಕೆ ಉಷ್ಣತೆ ನೀಡುವ ಆಹಾರಗಳಾಗಿವೆ. ಇವುಗಳನ್ನು ಚಳಿಗಾಲದ ಆರಂಭದಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಎಂಬುದನ್ನು ಆಯುರ್ವೇದವೂ ಹೇಳುತ್ತದೆ. ನಮ್ಮ ಸಂಪ್ರದಾಯಗಳಲ್ಲಿ ಅಡಗಿರುವ ಆಹಾರ ವಿಜ್ಞಾನವನ್ನು ಇದು ಸ್ಪಷ್ಟಪಡಿಸುತ್ತದೆ.

ಮಕರ ಸಂಕ್ರಾಂತಿಯ ಅತ್ಯಂತ ಮಹತ್ವದ ಆಚರಣೆಯಾಗಿ ಎಳ್ಳು–ಬೆಲ್ಲ ಹಂಚುವ ಸಂಪ್ರದಾಯ ಇದೆ. ಒಬ್ಬರ ಬಾಯಿಗೆ ಇನ್ನೊಬ್ಬರು ಎಳ್ಳು–ಬೆಲ್ಲ ಹಾಕುವ ಮೂಲಕ ಪರಸ್ಪರ ಸಿಹಿ ಹಂಚಿಕೊಳ್ಳುತ್ತಾರೆ. ಮನೆಯ ಹಿರಿಯರು, ಕಿರಿಯರು, ಸಂಬಂಧಿಕರು, ಓಣಿ–ನೆರೆಯವರು ಎಲ್ಲರೂ ಈ ಸಂಪ್ರದಾಯದಲ್ಲಿ ಭಾಗವಹಿಸುತ್ತಾರೆ. ಕಿರಿಯರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಹಬ್ಬದ ದಿನ ಜಗಳವಾಡಿದರೆ ವರ್ಷಪೂರ್ತಿ ಜಗಳ ಮುಂದುವರಿಯುತ್ತದೆ ಎಂಬ ಜನಪದ ನಂಬಿಕೆ ಇರುವುದರಿಂದ, ಸಂಕ್ರಾಂತಿಯಂದು ಎಲ್ಲರೂ ಒಳ್ಳೆಯ ಮಾತಾಡಿ, ಎಳ್ಳು–ಬೆಲ್ಲ ತಿಂದು ಪರಸ್ಪರ ಪ್ರೀತಿ, ಸಾಮರಸ್ಯ ಮತ್ತು ಸಹಬಾಳ್ವೆಯನ್ನು ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ. ಒಟ್ಟಿನಲ್ಲಿ, ಮಕರ ಸಂಕ್ರಾಂತಿ ಕೇವಲ ಒಂದು ಹಬ್ಬವಲ್ಲ; ಅದು ಭೂಮಿಯ ಆರಾಧನೆ, ಕೃಷಿ ಸಂಸ್ಕೃತಿ, ಕುಟುಂಬ ಬಂಧ, ಸಾಮಾಜಿಕ ಒಗ್ಗಟ್ಟು ಮತ್ತು ಮಾನವೀಯ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಸಾರುವ ಮಹತ್ವದ ಪರಂಪರೆಯಾಗಿದೆ.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.




