ಅಮೆರಿಕವು ತನ್ನ ಸ್ವಾರ್ಥಕ್ಕಾಗಿ ಪ್ಯಾಲೆಸ್ತೀನ್ ರೀತಿಯಲ್ಲಿ ಇಡೀ ಇರಾನ್ ಅನ್ನೇ ನಿರ್ನಾಮ ಮಾಡಿಬಿಡುವ ಅಪಾಯವಿದೆ. ಆದರೆ, ಅಮೆರಿಕಗೆ ಇರಾನ್ ಸಡ್ಡು ಹೊಡೆದು ನಿಂತಿದೆ. ಏಟಿಗೆ ಎದಿರೇಟು ಕೊಡುತ್ತಿದೆ. ಈ ಸಮಯದಲ್ಲಿ, ಶಾಂತಿ ಮತ್ತು ಕದನ ವಿರಾಮಕ್ಕಾಗಿ ಅಮೆರಿಕ ಮೇಲೆ ಜಾಗತಿಕ ಒತ್ತಡ ಹೇರಬೇಕಾದ ಅಗತ್ಯವಿದೆ.
ಸ್ವಾರ್ಥಕ್ಕೋಸ್ಕರ ಇರಾನ್ ಮೇಲೆ ಯುದ್ಧ ಸಾರಿರುವ ಇಸ್ರೇಲ್ ಮತ್ತು ಅಮೆರಿಕ ಹಲವರ ಸಾವು – ನೋವುಗಳಿಗೆ ಕಾರಣವಾಗಿವೆ. ಇರಾನ್ ನಾಗರಿಕರನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿರುವ ಅಮೆರಿಕ-ಇಸ್ರೇಲ್ ಎಂಬ ಈ ದುಷ್ಟ ರಾಷ್ಟ್ರಗಳು ಶಾಲೆಯೊಂದರ ಮೇಲೆ ದಾಳಿ ನಡೆಸಿ 165 ಮಕ್ಕಳ ಸಾವಿಗೆ ಕಾರಣವಾಗಿವೆ. ತೈಲಕ್ಕಾಗಿ ಅಮಾಯಕ ಜನರ ಜೀವವನ್ನ ತೆಗೆಯುತ್ತಿವೆ. ಇರಾನ್ ಸರ್ವೋಚ್ಚ ನಾಯಕ ಖಮೇನಿ ಅವರ ಹತ್ಯೆಗೈದಿವೆ. ಖಮೇನಿ ಅವರ ಹತ್ಯೆಯನ್ನ ಇಡೀ ವಿಶ್ವವೇ ಖಂಡಿಸಿದೆ. ಇರಾನ್‌ನಲ್ಲಿ 40 ದಿನಗಳ ಶೋಕಾಚರಣೆ ಇದ್ದರೇ, ಭಾರತದಲ್ಲಿಯೂ ಮೂರು ದಿನದ ಶೋಕಾಚರಣೆ ಗ್ರಾಮವೊಂದರಲ್ಲಿದೆ. ಭಾರತಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ.
ಖಮೇನಿ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದರೇ, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಅಲಿಪುರ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗಿದೆ. ಮೂರು ದಿನ ಶೋಕಾಚರಣೆ ಕೂಡ ನಡೆಸಲಾಗಿತ್ತು. ಇನ್ನು ಜಮ್ಮು ಕಾಶ್ಮೀರದಲ್ಲಿಯೂ ಖಮೇನಿ ಸಾವಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕಾಶ್ಮೀರ ಕಣಿವೆಯಿಂದ ಲಡಾಖ್‌ನಿಂದ ಕಾರ್ಗಿಲ್‌ವರೆಗೆ, ಜನರು ಬೀದಿಗಿಳಿದು ಹುತಾತ್ಮತೆಯ ಸಂಕೇತವಾಗಿ ಕಪ್ಪು ಮತ್ತು ಕೆಂಪು ಧ್ವಜಗಳನ್ನು ಹೊತ್ತು ನಡೆದಿದ್ದಾರೆ. ಶ್ರೀನಗರದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಕರ್ನಾಟಕದಲ್ಲಿ ಬೆಂಗಳೂರು, ಅಲಿಪುರ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಖಂಡನಾ ಪ್ರತಿಭಟನೆಗಳು ನಡೆದವು. ಇವುಗಳಲ್ಲಿ ಶಿಯಾ ಮುಸ್ಲಿಂ ಸಮುದಾಯದವರು ಮುಖ್ಯವಾಗಿ ಭಾಗವಹಿಸಿದ್ದರು. ಕೆಲವು ಪ್ರದೇಶಗಳಲ್ಲಿ ಮೆರವಣಿಗೆ, ಪ್ರಾರ್ಥನೆ ಮತ್ತು ಅಮೆರಿಕ-ಇಸ್ರೇಲ್ ವಿರೋಧಿ ಘೋಷಣೆಗಳು ಇದ್ದವು.
ಒಟ್ಟಾರೆಯಾಗಿ, ಇಡೀ ಭಾರತದಾದ್ಯಂತ ಖಮೇನಿ ಸಾವಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಸ್ರೇಲ್ ಮತ್ತು ಅಮೆರಿಕ ಯುದ್ಧ ನೀತಿಗೆ ವಿರೋಧ ವ್ಯಕ್ತಪಡಿಸಿವೆ. ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಗೆ ಹಲವೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಂಗಳೂರಿನಲ್ಲೂ ಖಮೇನಿ ಸಾವು ಖಂಡಿಸಿ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಗಳ ಕುರಿತು ಮಾಧ್ಯಮಗಳ ಜತೆಗೆ ಮಾತನಾಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್, “ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ಖಂಡಿಸಿ ಕರ್ನಾಟಕದಲ್ಲೂ ಪ್ರತಿಭಟನಾ ಪ್ರದರ್ಶನಗಳು ನಡೆದಿವೆ. ಆದರೆ, ಇಂತಹ ಪ್ರತಿಭಟನೆಗಳನ್ನು ನಡೆಸದಂತೆ ನಿಗಾ ಇಡಬೇಕು ಎಂದು ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ” ಎಂದು ಹೇಳಿದ್ದಾರೆ.
ಇದೇ ವೇಳೆ, “ನಗರದ ರಸ್ತೆಗಳಲ್ಲಿ ಪ್ರತಿಭಟನೆ ಮಾಡಿದ್ದು ನಿಯಮಬಾಹಿರ. ಕೋರ್ಟ್ ಸೂಚನೆಯಂತೆ ಪ್ರತಿಭಟನೆ ಮಾಡುವವರು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಿ. ಆದರೆ, ಮೊನ್ನೆ ರಸ್ತೆಗಳಲ್ಲೇ ಪ್ರತಿಭಟನೆ ನಡೆದಿದೆ” ಎಂದಿದ್ದಾರೆ.
ಆದರೂ, ಪರಮೇಶ್ವರ್ ಅವರು ಹೇಳುತ್ತಿರುವ ಕ್ರಮದ ಹೇಳಿಕೆಗಳು ಕಾಂಗ್ರೆಸ್‌ನ ಹೈಕಮಾಂಡ್ ನಿಲುವಿಗೆ ವ್ಯತಿರಿಕ್ತವಾಗಿವೆ. ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕರು ಇರಾನ್ ಮೇಲಿನ ಇಸ್ರೇಲ್-ಅಮೆರಿಕದ ದಾಳಿಯನ್ನು ಖಂಡಿಸಿ, ತಕ್ಷಣ ಶಾಂತಿ ಕೋರಿದ್ದಾರೆ. ಇದು ಇರಾನ್ ಜೊತೆಗಿನ ಭಾರತದ ಸಾಂಪ್ರದಾಯಿಕ ಸೌಹಾರ್ದ ನಿಲುವನ್ನ ಹೊಂದಿದೆ. ಅಲ್ಲದೆ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಘರ್ಷದಲ್ಲಿ ಸಿಲುಕಿದ ಕನ್ನಡಿಗರ ಸುರಕ್ಷತೆಗೆ ಆದ್ಯತೆ ನೀಡಿ, ಶಾಂತಿ ಮನವಿ ಮಾಡಿದ್ದಾರೆ. ಆದರೆ, ಪರಮೇಶ್ವರ್ ಅವರ ಹೇಳಿಕೆಗಳು ಜಾಗತಿಕ ಶಾಂತಿ ಮತ್ತು ಸಂಬಂಧಗಳಿಗಿಂತ ಹೆಚ್ಚು ‘ಕಾನೂನುಬದ್ಧತೆ’ ಮತ್ತು ‘ಸುವ್ಯವಸ್ಥೆ’ ಕೇಂದ್ರಿತವಾಗಿದೆ. ಇದು ಪಕ್ಷದ ಸಾಮಾನ್ಯ ನಿಲುವಿಗಿಂತ ಭಿನ್ನವಲ್ಲವೆಂದು ಹೇಳಿದರೂ, ಪ್ರತಿಭಟನೆಗಳ ಮೇಲಿನ ಎಚ್ಚರಿಕೆಯು ಭಾರತದ ಪ್ರತಿರೋಧಕ್ಕೆ ಒಡ್ಡಿದ ಅಡ್ಡಿಯೂ ಆಗುತ್ತದೆ. ಇದನ್ನೇ ಪ್ಯಾಲೆಸ್ತೀನ್ ಪರ ಪ್ರತಿಭಟನೆಗಳ ಸಮಯದಲ್ಲಿಯೂ ಹೇಳಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಅನ್ಯ ರಾಷ್ಟ್ರಗಳಲ್ಲಿ ಮೂಗು ತೂರಿಸಿದ ಅಮೆರಿಕ ಸೃಷ್ಟಿಸಿದ ಘೋರತೆ ಇದು!
ಪ್ರತಿರೋಧವನ್ನು ದಾಖಲಿಸಲು ಶಾಂತಿಯುತ ಪ್ರತಿಭಟನೆಗೆ ಸರ್ಕಾರವು ಅವಕಾಶ ನೀಡಬೇಕು ಎಂಬ ಆಗ್ರಹಗಳೂ ಕೇಳಿಬಂದಿದ್ದವು.
ಸದ್ಯ, ಜಗತ್ತಿನಾದ್ಯಂತ ಇರಾನ್ ಮತ್ತೊಂದು ಪ್ಯಾಲೆಸ್ತೀನ್ ಆಗಿಬಿಡುತ್ತದೆಯೇ ಎಂಬ ಆತಂಕವಿದೆ. ಯಾಕೆಂದರೆ, ಕಳೆದ 15 ತಿಂಗಳಿಗೂ ಹೆಚ್ಚು ಕಾಲ ಇಸ್ರೇಲ್ ದಾಳಿಯಿಂದ ಪ್ಯಾಲೆಸ್ತೀನ್ ನಲುಗಿಹೋಗಿದೆ. ಸದ್ಯ ಕದನ ವಿರಾಮ ಘೋಷಣೆಯಾದರೂ ಸಹ ಇಸ್ರೇಲ್‌ನ ಕ್ರೌರ್ಯ ನಿಂತಿಲ್ಲ. ಅಮೆರಿಕ ಪೋಷಿತ ಇಸ್ರೇಲ್‌ನ ಕ್ರೌರ್ಯದಿಂದಾಗಿ ಗಾಜಾದಲ್ಲಿ ಸುಮಾರು 45,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಇಸ್ರೇಲ್‌ನ ಅತ್ಯಂತ ಭಯಾನಕ ದಾಳಿಯಲ್ಲಿ ಜನರು ನಿತ್ಯ ನರಕಯಾತನೆ ಅನುಭವಿಸಿದ್ದಾರೆ. ಊಟಕ್ಕಾಗಿ, ವಸತಿಗಾಗಿ, ಔಷಧಿಗಾಗಿ ಪರದಾಡಿದ್ದಾರೆ. ತಮ್ಮ ಮಕ್ಕಳು, ಕುಟುಂಬದವರನ್ನು ಕಳೆದುಕೊಂಡಿದ್ದಾರೆ. ಸ್ವಂತ ಮನೆ, ಮನೆಯವರನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇಲ್ಲಿಯೂ ಕೂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾರ್ಥದಾಸೆಯಿದೆ.
ಗಾಜಾವನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ಗಾಜಾವನ್ನು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಿ, ಅಲ್ಲಿನ ಜನರನ್ನು ತನ್ನ ಗುಲಾಮರನ್ನಾಗಿ ಮಾಡಿಕೊಳ್ಳಲು ಅಮೆರಿಕ ಹವಣಿಸುತ್ತಿದೆ. ಜೊತೆಗೆ, ಈಗಾಗಲೇ ತೈಲದ ನಾಡು ವೆನೆಜುವೆಲಾವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಅಮೆರಿಕ, ಇದೀಗ ಅತ್ಯಧಿಕ ತೈಲ ಸಂಪತ್ತುಳ್ಳ ಇರಾನ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಶತಪ್ರಯತ್ನ ಪಡುತ್ತಿದೆ.
ಅಮೆರಿಕವು ತನ್ನ ಸ್ವಾರ್ಥಕ್ಕಾಗಿ ಪ್ಯಾಲೆಸ್ತೀನ್ ರೀತಿಯಲ್ಲಿ ಇಡೀ ಇರಾನ್ ಅನ್ನೇ ನಿರ್ನಾಮ ಮಾಡಿಬಿಡುವ ಅಪಾಯವಿದೆ. ಆದರೆ, ಅಮೆರಿಕಗೆ ಇರಾನ್ ಸೆಡ್ಡು ಹೊಡೆದು ನಿಂತಿದೆ. ಏಟಿಗೆ ಎದಿರೇಟು ಕೊಡುತ್ತಿದೆ. ಈ ಸಮಯದಲ್ಲಿ, ಶಾಂತಿ ಮತ್ತು ಕದನ ವಿರಾಮಕ್ಕಾಗಿ ಅಮೆರಿಕ ಮೇಲೆ ಜಾಗತಿಕ ಒತ್ತಡ ಹೇರಬೇಕಾದ ಅಗತ್ಯವಿದೆ.




