ನಮ್ಮ ನಿಮ್ಮೊಳಗಿನ ʼಸ್ಟೀರಿಯೋಟೈಪ್‌ʼ ಗುಮ್ಮ, ಹೆಗಲೇರೀತು ಜೋಕೆ!

Date:

ನಾವು ಇತರರನ್ನು ಜಡ್ಜ್‌ ಮಾಡುತ್ತಿದ್ದೇವೆ ಎಂಬುದು ಅರಿವಿಗೆ ಬಂದಾಗ, ನಿಜವಾಗಿ ನಮ್ಮ ಮಾನವೀಯತೆಯನ್ನೇ ತೂಕಕ್ಕೆ ಹಾಕುತ್ತಿದ್ದೇವೆ ಎನ್ನುವುದನ್ನೂ ಅರಿತುಕೊಳ್ಳಬೇಕು. ನಮ್ಮೊಳಗಿನ ʼಸ್ಟೀರಿಯೋಟೈಪ್‌ʼ ಗುಮ್ಮನ ಜೊತೆ ನಿತ್ಯ ಕಸರತ್ತು ಮಾಡುವುದಕ್ಕಿಂತ ಅಖಾಡದೊಳಕ್ಕೆ ಅದನ್ನು ನಿರ್ಬಂಧಿಸುವುದು ಜಾಣತನ.

ʼಅವಳು ನೋಡೋಕೆ ತುಂಬಾನೆ ಚೆನ್ನಾಗಿದ್ದಾಳೆ, ಅದಕ್ಕೆ ಅವಳಿಗೆ ಆ ಕೆಲಸ ಸಿಕ್ಕಿರಬೇಕುʼ, ʼಎಲ್ಲಾ ಅವನ ಲುಕ್‌ಗೆ ಇಂಪ್ರೆಸ್ ಆಗ್ತಾರೆʼ, ʼನೋಡೋಕೆ ಇಷ್ಟು ಚೆನ್ನಾಗಿದ್ದವನು ಕೆಟ್ಟವನಾಗಿರೋದಿಲ್ಲ ಬಿಡಿʼ, ʼಆ ಮಗು ಎಷ್ಟು ಮುದ್ದಾಗಿದೆ, ಅದು ಜಗಳ ಮಾಡಿರಲಿಕ್ಕಿಲ್ಲʼ..

ಈ ಸಂಭಾಷಣೆಯನ್ನು ಯಾವುದೋ ದೊಡ್ಡ ಚರ್ಚಾ ಕಾರ್ಯಕ್ರಮದಲ್ಲಿ ಅಲ್ಲ, ಸಾಮಾನ್ಯವಾಗಿ ನಾವು ನೀವೂ ಕಾಫಿ ಅಂಗಡಿಯಲ್ಲೋ, ಬಸ್ ನಿಲ್ದಾಣದಲ್ಲೋ, ಕಚೇರಿಯ ಮಧ್ಯಾಹ್ನದ ಮಾತುಕತೆಯಲ್ಲೋ ಕೇಳಿರುತ್ತೇವೆ. ಒಮ್ಮೊಮ್ಮೆ ನಾವೂ ಮಾತಾಡಿರುತ್ತೇವೆ. ಇವನ್ನು ಹೇಳುವಾಗ ಅಥವಾ ಕೇಳುವಾಗ, ಅದರಲ್ಲಿನ ಅಪಾಯಕಾರಿ ಅಂತರಾರ್ಥವೊಂದು ಬಹುಶ ನಮ್ಮ ಅರಿವಿಗೆ ಬಂದಿರುವುದಿಲ್ಲ. ಅದೇ ದೈಹಿಕ ಆಕರ್ಷಣೆಯ ಸ್ಟೀರಿಯೊಟೈಪ್.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೊದಲನೆಯದಾಗಿ ಸ್ಟೀರಿಯೋಟೈಪ್‌ ಎಂದರೆ, ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯದ ಬಗ್ಗೆ ಕೆಲವು ಸೀಮಿತ ಲಕ್ಷಣಗಳನ್ನು ಆಧಾರವಾಗಿಟ್ಟುಕೊಂಡು, ಎಲ್ಲರಿಗೂ ಅದೇ ಗುಣಗಳಿವೆ ಎಂದು ಸಾಮಾನ್ಯೀಕರಣ ಮಾಡುವ ಮನೋವೃತ್ತಿ. ಸರಳವಾಗಿ ಹೇಳುವುದಾದರೆ, ಒಬ್ಬರ ಬಗ್ಗೆ ಸರಿಯಾಗಿ ತಿಳಿಯದೇ, ಅವರನ್ನೂ ಜೊತೆಗೆ ʼಎಲ್ಲರೂ ಹೀಗೆಯೇ ಇರ್ತಾರೆʼ ಎಂದು ಮೊದಲೇ ತೀರ್ಪು ಕೊಡುವುದೇ ಸ್ಟೀರಿಯೊಟೈಪ್.

ಉದಾಹರಣೆಗೆ: ಸುಂದರವಾಗಿರುವವರು ಬುದ್ಧಿವಂತರು, ಹಳ್ಳಿಯವರು ಹಿಂದುಳಿದವರು, ಮಹಿಳೆಯರು ಹೆಚ್ಚು ಭಾವನಾತ್ಮಿಗಳು, ಯುವಕರು ಜವಾಬ್ದಾರಿ ಇಲ್ಲದವರು.. ಇವುಗಳಲ್ಲಿ ಕೆಲವು ಪ್ರಕರಣ, ಕೆಲವೊಂದು ಸನ್ನಿವೇಶಗಳಲ್ಲಿ ಚೂರು ಪಾರು ಸತ್ಯದ ತುಣುಕು ಇದ್ದಿರಬಹುದು. ಆದರೆ ಅದನ್ನೇ ಎಲ್ಲರ ಮೇಲೂ ಅನ್ವಯಿಸುವ ಮನಸ್ಥಿತಿ ʼಸ್ಟೀರಿಯೊಟೈಪ್ʼ.

image 2026 02 02T182900.674

ಮಾನವ ಮೆದುಳು ಸಂಕೀರ್ಣ ಮಾಹಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ʼಶಾರ್ಟ್‌ಕಟ್ʼ ಬಳಸುತ್ತದೆ. ಆ ಶಾರ್ಟ್‌ಕಟ್‌ಗಳೇ ಸ್ಟೀರಿಯೊಟೈಪ್‌ಗಳು ಎನ್ನುತ್ತದೆ ಮನೋವಿಜ್ಞಾನ. ಇವುಗಳನ್ನು cognitive bias (ಮನಸ್ಸಿನ ಪೂರ್ವಗ್ರಹ) ಎಂದು ಕರೆಯಲಾಗುತ್ತದೆ.

ಕೆಲವೊಮ್ಮೆ ಸ್ಟೀರಿಯೋಟೈಪ್‌ ಎಂದರೆ ಪೂರ್ವಗ್ರಹ ಎಂದು ಅರ್ಥೈಸುವುದುಂಟು. ಆದರೆ ಎರಡೂ ಬೇರೆ ಬೇರೆ. ಸ್ಟೀರಿಯೊಟೈಪ್ ಎನ್ನುವುದು ಒಬ್ಬರ ಬಗೆಗಿನ ನಂಬಿಕೆ ಅಥವಾ ಕಲ್ಪನೆ. ಪೂರ್ವಗ್ರಹ (Prejudice) ಎಂದರೆ, ಆ ನಂಬಿಕೆಯಿಂದ ಹುಟ್ಟುವ ಭಾವನೆ. ಆ ಭಾವನೆಯಿಂದ ಉಂಟಾಗುವ ವರ್ತನೆ ಅಥವಾ ಪ್ರತಿಕ್ರಿಯೆ ಭೇದಭಾವ (Discrimination).

ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರದಲ್ಲಿ ಸ್ಟೀರಿಯೊಟೈಪ್‌ಗಳನ್ನು ಹಲವು ರೀತಿಯಲ್ಲಿ ವರ್ಗೀಕರಿಸಲಾಗುತ್ತದೆ. ಪ್ರಮುಖ ಹಾಗೂ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ವಿಧಗಳು ಹೀಗಿವೆ..

1. ದೈಹಿಕ ಸ್ಟೀರಿಯೊಟೈಪ್ (Physical Stereotype): ವ್ಯಕ್ತಿಯ ದೇಹ ರೂಪ, ಬಣ್ಣ, ಎತ್ತರ, ತೂಕ, ಮುಖದ ಆಕರ್ಷಣೆ ಇತ್ಯಾದಿಗಳ ಆಧಾರದ ಮೇಲೆ ರೂಪುಗೊಳ್ಳುವ ಸಾಮಾನ್ಯೀಕರಣ. ಉದಾಹರಣೆಗೆ, ಎತ್ತರವಾಗಿರುವವರು ನಾಯಕತ್ವ ಗುಣ ಹೊಂದಿರುತ್ತಾರೆ, ಒಳ್ಳೆ ಡ್ರೆಸ್‌ ಮಾಡಿಕೊಂಡವರು ಶ್ರೀಮಂತರು, ಬೆಳ್ಳಗಿರುವವರು ಬಾರೀ ಒಳ್ಳೆಯವರು ಇತ್ಯಾದಿ.

2. ಲಿಂಗಾಧಾರಿತ ಸ್ಟೀರಿಯೊಟೈಪ್ (Gender Stereotype): ಪುರುಷರು ಮತ್ತು ಮಹಿಳೆಯರು ʼಹೀಗೇ ಇರಬೇಕುʼ ಎಂಬ ಸಮಾಜ ರೂಪಿಸಿದ ನಿರೀಕ್ಷೆಗಳು. ಉದಾಹರಣೆ, ಮಹಿಳೆಯರು ಅಳುಮುಂಜಿಗಳು, ಪುರುಷರು ಕಣ್ಣೀರು ಹಾಕಕೂಡದು, ಗಂಡ ಹೆಂಡತಿ ಒಟ್ಟಿಗೆ ತಿನ್ನಬಾರದು, ಅಳುವ ಗಂಡಸರನ್ನು ನಂಬಬಾರದು..

3. ವಯಸ್ಸಿನ ಸ್ಟೀರಿಯೊಟೈಪ್ (Age Stereotype): ವಯಸ್ಸಿನ ಆಧಾರದಲ್ಲಿ ವ್ಯಕ್ತಿಗಳ ಸಾಮರ್ಥ್ಯ ಅಥವಾ ಸ್ವಭಾವ ನಿರ್ಧರಿಸುವುದು. ಉದಾಹರಣೆಗೆ, ಯುವಕರಿಗೆ ಜವಾಬ್ದಾರಿ ಇಲ್ಲ, ಹಿರಿಯರು ತಂತ್ರಜ್ಞಾನಕ್ಕೆ ಅಸಮರ್ಥರು ಇತ್ಯಾದಿ.

4. ಜಾತಿ ಮತ್ತು ಸಮುದಾಯ ಸ್ಟೀರಿಯೊಟೈಪ್ (Caste / Community Stereotype): ಜಾತಿ, ವರ್ಗ ಅಥವಾ ಸಮುದಾಯದ ಆಧಾರದ ಮೇಲೆ ರೂಪುಗೊಳ್ಳುವ ಸಾಮಾನ್ಯೀಕರಣ. ಉದಾಹರಣೆಗೆ, ಕೆಲವು ಜಾತಿಯವರು ಹೀಗೇ ಇರುತ್ತಾರೆ, ಹೀಗಿದ್ದಾರೆಂದರೆ, ಅವರು ಅದೇ ಧರ್ಮದವರು ಎಂಬ ಕಲ್ಪನೆ.

5. ವೃತ್ತಿ ಆಧಾರಿತ ಸ್ಟೀರಿಯೊಟೈಪ್ (Occupational Stereotype): ವ್ಯಕ್ತಿಯ ಉದ್ಯೋಗದ ಆಧಾರದ ಮೇಲೆ ಅವನ ವ್ಯಕ್ತಿತ್ವ ನಿರ್ಧರಿಸುವುದು. ಯಾವ ರಾಜಕಾರಣಿಯೂ ಪ್ರಾಮಾಣಿಕನಲ್ಲ, ಕಲಾವಿದರು ಅಸ್ಥಿರ ಜೀವನ ನಡೆಸುತ್ತಾರೆ.

6. ಆರ್ಥಿಕ ಸ್ಥಿತಿಯ ಸ್ಟೀರಿಯೊಟೈಪ್ (Economic Stereotype): ಧನಿಕ–ಬಡ ಎಂಬ ಆಧಾರದ ಮೇಲೆ ವ್ಯಕ್ತಿಯ ಮೌಲ್ಯ ಅಳೆಯುವುದು. ಬಡವರು ಸೋಮಾರಿಗಳು, ಶ್ರೀಮಂತರು ಅಹಂಕಾರಿಗಳು..

7. ಶಿಕ್ಷಣ ಆಧಾರಿತ ಸ್ಟೀರಿಯೊಟೈಪ್ (Educational Stereotype): ವ್ಯಕ್ತಿಯ ವಿದ್ಯಾಭ್ಯಾಸದ ಮಟ್ಟವನ್ನು ಅವನ ಬುದ್ಧಿಮತ್ತೆಯೊಂದಿಗೆ ಸಮೀಕರಿಸುವುದು. ಡಿಗ್ರಿ ಇಲ್ಲದವರು ಅಜ್ಞಾನಿಗಳು, ಇಂಗ್ಲಿಷ್ ಚೆನ್ನಾಗಿ ಮಾತನಾಡುವವರು ಬುದ್ಧಿವಂತರು ಎಂಬಿತ್ಯಾದಿ.

ಮೀಡಿಯಾ ನಿರ್ಮಿತ ಸ್ಟೀರಿಯೊಟೈಪ್ (Media-driven Stereotype) ಕೂಡ ಇದೆ. ಚಲನ ಚಿತ್ರ, ಟಿವಿ, ಸೋಷಿಯಲ್ ಮೀಡಿಯಾ ಮೂಲಕ ನಿರಂತರವಾಗಿ ಪುನರಾವರ್ತನೆಯಾಗಿ ರೂಪುಗೊಳ್ಳುವ ಮನಸ್ಥಿತಿ. ನಾಯಕಿ ಎಂದರೆ ನಿರ್ದಿಷ್ಟ ದೇಹ ವಿನ್ಯಾಸ, ವಿಲನ್ ಎಂದರೆ ವಿಕೃತ ರೂಪ. ಇವು ಕೆಲ ಉದಾಹರಣೆಗಳಷ್ಟೆ. ಬಾಕಿ ಸಾಕಷ್ಟಿವೆ.

ಈ ವಿಧಗಳಲ್ಲಿ ದೈಹಿಕ ಆಕರ್ಷಣೆಯ ಸ್ಟೀರಿಯೊಟೈಪ್‌ನ್ನು ಎಲ್ಲಾ ಸ್ಟೀರಿಯೊಟೈಪ್‌ಗಳಿಗಿಂತ ಅತ್ಯಂತ ಸೂಕ್ಷ್ಮವೂ, ಅಪಾಯಕಾರಿಯೂ ಎಂದು ಹೇಳಲಾಗುತ್ತದೆ. ಇದು ಸ್ಪಷ್ಟವಾಗಿ ಕಾಣಿಸುವುದಿಲ್ಲ, ಆದರೆ ಸಮಾಜದ ಪ್ರತಿ ನಿರ್ಧಾರದ ಒಳಗೂ ಮೌನವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಅದರಲ್ಲೂ ಮಹಿಳೆಯರ ವಿಷಯದಲ್ಲಿ ಇದೊಂದು ನಿರಂತರ ಸಾಮಾಜಿಕ ನಿಯಂತ್ರಣವಾಗಿ ರೂಪುಗೊಂಡಿದೆ.

ದೈಹಿಕ ಆಕರ್ಷಣೆಯ ಸ್ಟೀರಿಯೊಟೈಪ್ ಪುರುಷರು ಮತ್ತು ಮಹಿಳೆಯರು ಎರಡರ ಮೇಲೂ ಕೆಲಸ ಮಾಡುತ್ತದೆ. ಆದರೆ ಅದರ ಪರಿಣಾಮ ಮಹಿಳೆಯರ ಮೇಲೆ ಹೆಚ್ಚು ಗಂಭೀರವಾಗಿರುತ್ತದೆ. ಒಬ್ಬ ಪುರುಷ ಸುಂದರವಾಗಿ, ಗಟ್ಟಿ ದೇಹದೊಂದಿಗೆ ಕಾಣಿಸಿಕೊಂಡರೆ, ಅವನನ್ನು ಲೀಡರ್, ಕಾನ್ಫಿಡೆಂಟ್, ಡೈನಮಿಕ್ ಎಂದು ಬಣ್ಣಿಸಲಾಗುತ್ತದೆ. ಅವನ ಸಾಮರ್ಥ್ಯಕ್ಕೆ ಲುಕ್ ಒಂದು ಪ್ಲಸ್ ಪಾಯಿಂಟ್ ಆಗುತ್ತದೆ.

ಆದರೆ, ಒಬ್ಬ ಮಹಿಳೆಯನ್ನು ಸಮಾಜ ಮೊದಲಿಗೆ ನೋಡುವುದು ಅವಳ ವ್ಯಕ್ತಿತ್ವದಿಂದಲ್ಲ, ಅವಳ ದೇಹದಿಂದ. ವದನ, ತೊಗಲು, ರಂಗು, ತೂಕ, ಆಕರ್ಷಣೆ.. ಇವೆಲ್ಲವೂ ಅವಳ ಬುದ್ಧಿಮತ್ತೆ, ನೈತಿಕತೆ, ಸಾಮರ್ಥ್ಯಕ್ಕೆ ಮುನ್ನ ಮೌಲ್ಯಮಾಪನಕ್ಕೆ ಒಳಪಡುತ್ತವೆ. ಇದು ದೈಹಿಕ ಆಕರ್ಷಣೆಯ ಸ್ಟೀರಿಯೊಟೈಪ್‌ನ ಮೂಲ ಸಮಸ್ಯೆ. ಸುಂದರಳಾಗಿದ್ದರೆ, ʼಸೌಮ್ಯ, ಸಂಸ್ಕಾರವಂತೆ, ಚಾಣಾಕ್ಷೆʼ ಎಂದು ಊಹಿಸಲಾಗುತ್ತದೆ. ಆಕರ್ಷಕವಾಗಿಲ್ಲ ಎಂದರೆ ʼಅಷ್ಟೇನೂ ಸಮರ್ಥಳಲ್ಲʼ ಎನ್ನುವ ತೀರ್ಪು. ಎರಡೂ ತೀರ್ಪುಗಳು ಅಮಾನವೀಯ, ಅನ್ಯಾಯವೇ. ಏಕೆಂದರೆ ಈ ಎರಡೂ ನಿಲುವುಗಳು ಮಹಿಳೆಯನ್ನು ವ್ಯಕ್ತಿಯಾಗಿ ನೋಡದೇ, ದೇಹವಾಗಿ ಮಾತ್ರ ನೋಡುತ್ತವೆ. ವಿಶ್ವಸುಂದರಿ, ಸಿನಿಮಾ ನಟಿ, ಮಾಡೆಲ್ ಕಾನ್ಸೆಪ್ಟ್‌ಗಳು ಕೂಡ ಈ ಮನೋ ವ್ಯಾಕುಲತೆಯ ಮೇಲೆಯೇ ನಿಂತಿರುವುದು ನಿಜ.

ಈ ಸ್ಟೀರಿಯೊಟೈಪ್ ರೋಗ ಮಹಿಳೆಯ ಸಾಧನೆಗಳನ್ನು ನಿರಂತರವಾಗಿ ಕುಗ್ಗಿಸುತ್ತದೆ. ಸುಂದರಿಯೊಬ್ಬಳು ಯಶಸ್ಸು ಸಾಧಿಸಿದರೆ, ಅವಳ ಶ್ರಮಕ್ಕಿಂತ ಅವಳ ರೂಪಕ್ಕೆ ಶ್ರೇಯಸ್ಸು ಕೊಡಲಾಗುತ್ತದೆ. ಶ್ರೇಯಸ್ಸು ಅಲ್ಲಿರಲಿ ಕೊಂಕೂ ಸಾಕಷ್ಟಿರುತ್ತದೆ. ʼಅವಳಿಗೆ ಲುಕ್ ಸಹಾಯ ಮಾಡಿದೆʼ, ʼಯಶಸ್ಸಿಗೆ ರೂಪ ಎಷ್ಟು ಸಹಾಯ ಮಾಡಿದ್ಯೋ ಏನೋ?ʼ ಎಂಬ ಮಾತುಗಳು ಸಾಮಾನ್ಯ. ಇದರಿಂದ ಅವಳ ಬೌದ್ಧಿಕ ಮಟ್ಟ ಮತ್ತು ಶ್ರಮ ಎರಡನ್ನೂ ಸಾರಾ ಸಗಟಾಗಿ ನಿರಾಕರಿಸಲಾಗುತ್ತದೆ. ಇನ್ನೊಂದೆಡೆ, ಸಮಾಜದ ʼಸೌಂದರ್ಯʼದ ಮಾನದಂಡಗಳಿಗೆ ಹೊಂದಿಕೆಯಾಗದ ಮಹಿಳೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಹೆಚ್ಚುವರಿ ಶ್ರಮ ಹಾಕಬೇಕಾಗುತ್ತದೆ. ಅವಳಿಗೆ ಅವಕಾಶ ಪಡೆಯಲು ಎರಡು ಪಟ್ಟು ಯತ್ನ ಬೇಕಾಗುತ್ತದೆ.

ster

ಉದ್ಯೋಗ ಕ್ಷೇತ್ರದಲ್ಲಿ ದೈಹಿಕ ಆಕರ್ಷಣೆಯ ಸ್ಟೀರಿಯೊಟೈಪ್ ಹೆಚ್ಚೆಚ್ಚು ಓಡಾಡುತ್ತದೆ. ವಿಶೇಷವಾಗಿ ಕಾರ್ಪೊರೇಟ್‌ಗಳಲ್ಲಿ. ಸಂದರ್ಶನಗಳಲ್ಲಿ, ಪ್ರೆಸೆಂಟೇಶನ್‌ಗಳಲ್ಲಿ, ನಾಯಕತ್ವ ಆಯ್ಕೆಗಳಲ್ಲಿ, ಆಕರ್ಷಕವಾಗಿ ಕಾಣಿಸುವ ಮಹಿಳೆಯರು ಹೆಚ್ಚು ಗಮನ ಸೆಳೆಯುತ್ತಾರೆ. ಆಕರ್ಷಕ ಮಹಿಳೆ ಹೆಚ್ಚು ಮಾತನಾಡಿದರೆ ಆಟಿಟ್ಯೂಡ್ ಎಂದೂ ಕರೆಯುವುದುಂಟು. ಕಡಿಮೆ ಮಾತನಾಡಿದರೆ ಬುದ್ದಿ ಇಲ್ಲ. ಸಣ್ಣಗಿದ್ದರೆ ನಿಯತ್ತಿಲ್ಲ, ದಪ್ಪಗಿದ್ದರೆ ದಢೂತಿ, ಸಿಂಗರಿಸಿಕೊಂಡರೆ‌ ಶೋ ಆಫ್‌, ಸಿಂಪಲ್‌ ಆಗಿದ್ದರೆ ಗುಗ್ಗು.. ಇದು ಸ್ಟೀರಿಯೊಟೈಪ್‌ನ ಅತ್ಯಂತ ಕ್ರೂರ ರೂಪ. ಹಾಗಾದರೆ ಈ ಮನಸ್ಥಿತಿಯವರು ಮೆಚ್ಚುವುದಾದರೂ ಯಾವುದನ್ನ?

ಚಿತ್ರಗಳು, ಜಾಹೀರಾತುಗಳು, ಸೋಷಿಯಲ್ ಮೀಡಿಯಾ ಎಲ್ಲವೂ ಒಂದೇ ರೀತಿಯ ದೇಹ, ಒಂದೇ ಬಣ್ಣ, ಒಂದೇ ವಯಸ್ಸಿನ ʼಆದರ್ಶ ಮಹಿಳೆʼಯನ್ನು ಪದೇ ಪದೇ ಪ್ರದರ್ಶನಕ್ಕಿಡುವುದು ನೋಡಿದ್ದೇವೆ. ಇದರಿಂದ ಮಹಿಳೆಯರಿಗೆ ತಮ್ಮದೇ ದೇಹದ ಕುರಿತು ಅದೆಂಥ ಭಾವನೆ ಹುಟ್ಟಬಹುದು? ಫಿಲ್ಟರ್‌ಗಳು, ಎಡಿಟ್ ಮಾಡಿದ ಚಿತ್ರಗಳು, ಅಸಾಧ್ಯ ಎನಿಸುವ ಸೌಂದರ್ಯ ಮಾನದಂಡಗಳು ಮಹಿಳೆಯರನ್ನು ನಿರಂತರ ಸ್ವಯಂ ಮೌಲ್ಯಹೀನತೆಗೆ ತಳ್ಳುವುದಿಲ್ಲವೇ? ದೇಹವೇ ಮೌಲ್ಯದ ಮಾನದಂಡವಾಗಿರುವ ಸಮಾಜದಲ್ಲಿ, ಆತ್ಮವಿಶ್ವಾಸ ಉಳಿಯುವುದಾದರೂ ಹೇಗೆ?

ಈ ಸ್ಟೀರಿಯೊಟೈಪ್‌ನ ಪರಿಣಾಮ ಕೇವಲ ಸಾಮಾಜಿಕ ಮಟ್ಟಕ್ಕೆ ಸೀಮಿತವಾಗಿಲ್ಲ. ಇದು ಮಹಿಳೆಯ ಮನಸ್ಸಿನೊಳಗೆ ಗಾಢವಾಗಿ ಬೇರು ಬಿಡುತ್ತದೆ. ದೇಹದ ಬಗ್ಗೆ ಅತಿಯಾದ ಅಸಮಾಧಾನ, ಆತಂಕ, ಹೀನಭಾವನೆ, ಕೆಲವೊಮ್ಮೆ ಡಿಪ್ರೆಶನ್‌ಗೂ ಕಾರಣವಾಗುತ್ತದೆ. ʼನಾನು ಹೇಗೆ ಕಾಣಿಸುತ್ತೇನೆ?ʼ ಎಂಬ ಪ್ರಶ್ನೆ ʼನಾನು ಏನು ಮಾಡಬಲ್ಲೆ?ʼ ಎಂಬ ಪ್ರಶ್ನೆಯನ್ನು ಮರೆಮಾಡುತ್ತದೆ. ಇದು ವ್ಯಕ್ತಿಯ ಸಂಪೂರ್ಣ ಬೆಳವಣಿಗೆಯ ಕಾಲೆಳೆಯುವ ಅಪಾಯ.

ನಾವು ಇತರರನ್ನು ಅಳೆಯುತ್ತಿದ್ದೇವೆ ಅಥವಾ ಜಡ್ಜ್‌ ಮಾಡುತ್ತಿದ್ದೇವೆ ಎಂದು ಅರಿವಿಗೆ ಬಂದಾಗ, ನಿಜವಾಗಿ ಅದು ನಮ್ಮ ಮಾನವೀಯತೆಯನ್ನೇ ತೂಕಕ್ಕೆ ಹಾಕುತ್ತಿರುತ್ತದೆ ಎನ್ನುವುದನ್ನೂ ಅರಿತುಕೊಳ್ಳಬೇಕು. ನಮ್ಮೊಳಗಿನ ʼಸ್ಟೀರಿಯೋಟೈಪ್‌ʼ ಗುಮ್ಮನ ಜೊತೆ ನಿತ್ಯ ಕಸರತ್ತು ಮಾಡುವುದಕ್ಕಿಂತ ಅಖಾಡದೊಳಕ್ಕೆ ಅದನ್ನು ನಿರ್ಬಂಧಿಸುವುದು ಜಾಣತನ.

ಇದನ್ನೂ ಓದಿ: ಸ್ವರಗಳೊಂದಿಗೆ ಸ್ಪರ್ಧೆಗಿಳಿದ AI; ಭಾವಕ್ಕೆ ಬರುವುದೇ ಜೀವ?

ಇಂದಿನ ರಾಜಕೀಯದಲ್ಲೂ ದೈಹಿಕ ಆಕರ್ಷಣೆ ದೊಡ್ಡ ಪಾತ್ರವಹಿಸುತ್ತಿದೆ. ಚೆನ್ನಾಗಿ ಮಾತನಾಡುವ, ಸುವ್ಯವಸ್ಥಿತವಾಗಿ ಕಾಣಿಸಿಕೊಳ್ಳುವ ನಾಯಕರು ಹೆಚ್ಚು ಜನಪ್ರಿಯರಾಗುತ್ತಾರೆ. ಅವರ ನೀತಿಗಳು, ತೀರ್ಮಾನಗಳು, ವೈಫಲ್ಯಗಳು ಎರಡನೇ ಸಾಲಿಗೆ ಸರಿಯುತ್ತವೆ. ಸೋಷಿಯಲ್ ಮೀಡಿಯಾ ಯುಗದಲ್ಲಿ ರಾಜಕೀಯವೂ ಇಮೇಜ್‌ ಮೇಲೆ ನಿಂತಿದೆ. ಇಲ್ಲಿ ವ್ಯಕ್ತಿತ್ವಕ್ಕಿಂತ ಪ್ರಸ್ತುತೀಕರಣ ಮುಖ್ಯವಾಗುತ್ತದೆ. ಇದು ಜನತಂತ್ರಕ್ಕೆ ಅಪಾಯಕಾರಿ ಸೂಚನೆ. ದೈಹಿಕ ಆಕರ್ಷಣೆಯ ಸ್ಟೀರಿಯೊಟೈಪ್‌ನ ದೊಡ್ಡ ಅಪಾಯ ಎಂದರೆ, ಅದು ಅನೇಕ ಜನರನ್ನು ಮೌನವಾಗಿ ಒಳಗಿನಿಂದಲೇ ಹಿಂಡಿ ಹಿಪ್ಪೆ ಮಾಡುತ್ತದೆ. ʼನಾನು ಚೆನ್ನಾಗಿ ಕಾಣಿಸಲ್ಲʼ ಎಂದುಕೊಂಡೇ ಅವಕಾಶ ಕಳೆದುಕೊಳ್ಳುವವರು, ಆತ್ಮವಿಶ್ವಾಸ ಕಳೆದುಕೊಳ್ಳುವವರು ಸಮಾಜದಲ್ಲಿ ಅನೇಕರಿದ್ದಾರೆ.

ದೈಹಿಕ ಆಕರ್ಷಣೆಯ ಸ್ಟೀರಿಯೊಟೈಪ್ ಮನಸ್ಥಿತಿಯನ್ನು ಯಾರೂ ಬಾಯಿ ಬಿಟ್ಟು ಘೋಷಿಸುವುದಿಲ್ಲ. ಆದರೆ ವರ್ತನೆಯಲ್ಲಿ ಇಣುಕುತ್ತದೆ. ಅದೇ ಮನಸ್ಸಿನಲ್ಲಿ ಆಳವಾಗಿ ಕುಳಿತು ಅವಕಾಶಗಳನ್ನು ನಿರ್ಧರಿಸುತ್ತದೆ, ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ, ಸಾಧನೆಯನ್ನು ಶಂಕೆಗೆ ಒಳಪಡಿಸುತ್ತದೆ. ವಿಶೇಷವಾಗಿ ಮಹಿಳೆಯರನ್ನು ದೇಹಕ್ಕೆ ಸೀಮಿತಗೊಳಿಸಿ, ವ್ಯಕ್ತಿತ್ವವನ್ನು ಮರೆಗೆ ತಳ್ಳುತ್ತದೆ. ಒಬ್ಬರನ್ನು ಅವರು ಹೇಗೆ ಕಾಣಿಸುತ್ತಾರೆ ಎಂಬುದರಿಂದ ಅಲ್ಲ, ಅವರು ಏನು ಮಾಡುತ್ತಾರೆ, ಹೇಗೆ ಯೋಚಿಸುತ್ತಾರೆ ಎಂಬುದರಿಂದ ಅಳೆಯುವ ಸಂಸ್ಕೃತಿ ಬೆಳೆಯದೇ ಹೋದರೆ, ಸೋ ಕಾಲ್ಡ್ ‌ʼಸುಂದರʼವಲ್ಲದ ಮುಖಗಳ ಹಿಂದೆ ಎಷ್ಟೋ ಸಾಮರ್ಥ್ಯಗಳು ಕಳೆದುಹೋಗುತ್ತವೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...