‘ಅಂಗಗಳ ಸಹಿತ ಸಂಘದ ಜಾಡು ಹಿಡಿಯುವ ಕೆಲಸ ತಲೆ ಸುತ್ತು ತರುವುದು ಖಚಿತ; RSSಗೆ ಬೇಕಿರುವುದೂ ಇದೇ’

Date:

‘ದಿ ಕ್ಯಾರವಾನ್’ ನಡೆಸಿದ ವಿಶೇಷ ತನಿಖಾ ವರದಿಯ ಅನುವಾದ ಮಾಲಿಕೆ ಆರು ಕಂತುಗಳಲ್ಲಿ ‘ಈ ದಿನ’ ದಲ್ಲಿ ಪ್ರಕಟವಾಗಲಿದೆ. ಮೊದಲ ಕಂತು ನಿನ್ನೆ ಪ್ರಕಟವಾಗಿದೆ. ಇಲ್ಲಿದೆ ಎರಡನೇ ಕಂತು.

……. ಆದರೆ ಸಂಘವು ಅನಂತವಾದುದೂ ಅಲ್ಲ, ಹಾಗೆಯೇ ಅರಿಯಲು ಅಸಾಧ್ಯವಾದುದೂ ಅಲ್ಲ. ಸುಮಾರು ಆರು ವರ್ಷಗಳ ಕಾಲ ನಡೆಸಲಾದ, ನಾನು ಕೂಡ ನೇತೃತ್ವ ವಹಿಸಿದ್ದ ವಿಶೇಷ ತನಿಖೆಯೊಂದರ ಫಲವಾಗಿ, ಇದೇ ಮೊದಲ ಬಾರಿಗೆ ಆರ್‌ಎಸ್‌ಎಸ್‌ನ ಜಾಲದ ನಕ್ಷೆಯೊಂದನ್ನು ರೂಪಿಸಲಾಗಿದೆ. ಪ್ರಸ್ತುತ ‘ಸೈನ್ಸ್ ಪೋ’ನ ‘ಸೆಂಟರ್ ಡಿ ರಿಸರ್ಚಸ್ ಇಂಟರ್ನ್ಯಾಷನಲ್ಸ್’ನಲ್ಲಿ (CERI) ಸಂಗ್ರಹವಾಗಿರುವ ಮತ್ತು’ದಿ ಕ್ಯಾರವಾನ್’ ಪತ್ರಿಕೆಯು ಸತ್ಯಾಸತ್ಯತೆ (fact-check) ಪರಿಶೀಲಿಸಿ ಬಿಡುಗಡೆ ಮಾಡಿರುವ ಈ ದತ್ತಾಂಶಗಳು, ಸಂಘದೊಂದಿಗೆ ಸ್ಪಷ್ಟವಾದ, ಪತ್ತೆ ಹಚ್ಚಬಹುದಾದ ಮತ್ತು ಭೌತಿಕವಾದ ನಂಟು ಹೊಂದಿರುವ 2,500ಕ್ಕೂ ಹೆಚ್ಚು ಸಂಸ್ಥೆಗಳನ್ನು ಬಹಿರಂಗಪಡಿಸಿವೆ.

ಈ ದತ್ತಾಂಶವು ಕೇವಲ ಸಮಾನ ಸೈದ್ಧಾಂತಿಕ ನಿಲುವುಗಳನ್ನು ಹೊಂದಿರುವ ಸಂಸ್ಥೆಗಳ ಒಂದು ಸಡಿಲವಾದ ಪಟ್ಟಿಯಲ್ಲ. ಬದಲಾಗಿ, ಇದು ಭೌತಿಕವಾಗಿ ಒಂದಕ್ಕೊಂದು ಬೆಸೆದುಕೊಂಡಿರುವ ಸಂಸ್ಥೆಗಳ ಜಾಲವಾಗಿದ್ದು, ಇಲ್ಲಿನ ಸಂಸ್ಥೆಗಳು ಸಾಮಾನ್ಯವಾಗಿ ಅದೇ (ಒಂದು) ವ್ಯಕ್ತಿಗಳನ್ನು ಪದಾಧಿಕಾರಿಗಳನ್ನಾಗಿ ಹೊಂದಿರುತ್ತವೆ, ಅದೇ (ಒಂದು) ವಿಳಾಸದಿಂದ ಕಾರ್ಯನಿರ್ವಹಿಸುತ್ತವೆ, ನಿಯಮಿತವಾಗಿ ಜಂಟಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ, ಒಂದೇ ರೀತಿಯ ಕಾರ್ಯಕ್ಷೇತ್ರಗಳನ್ನು ಹಂಚಿಕೊಳ್ಳುತ್ತವೆ ಹಾಗೂ ದೇಶೀಯ ಮತ್ತು ವಿದೇಶಿ ಹಣಕಾಸಿನ ಹರಿವಿನ ಮೂಲಕ ಪರಸ್ಪರ ಬಂಧಿಸಲ್ಪಟ್ಟಿವೆ. ಈ ಸಂಸ್ಥೆಗಳು ಕೇವಲ ಒಂದು ಸಡಿಲವಾದ ಕುಟುಂಬದಂತಿರದೆ, ಒಂದೇ ಅಸ್ತಿತ್ವದ ಅವಿಭಾಜ್ಯ ಅಂಗಗಳಂತೆ ಪರಸ್ಪರ ಬಿಗಿಯಾಗಿ ಹೆಣೆದುಕೊಂಡಿವೆ ಎಂಬುದನ್ನು ಈ ಸಾಕ್ಷ್ಯಗಳು ಸೂಚಿಸುತ್ತವೆ. ಸ್ವತಃ ಸಂಘವೇ ತನ್ನ ಆಂತರಿಕ ಪ್ರಕಟಣೆಗಳಲ್ಲಿ ಈ ವಿಷಯವನ್ನು ಒಪ್ಪಿಕೊಂಡಿದೆ. ಈ ದೃಷ್ಟಿಕೋನದಿಂದ ನೋಡಿದಾಗ, ಮೋಹನ್ ಭಾಗವತ್ ಅವರು ಸತತವಾಗಿ ನಿರಾಕರಿಸುವ ಮತ್ತು ಮೋದಿ ಅವರು ನಿಯಮಿತವಾಗಿ ಕೊಂಡಾಡುವ ಈ ಸಂಸ್ಥೆಗಳ ಪರಸ್ಪರ ಸಂಬಂಧಗಳೇ ಸಂಘದ ನೈಜ ಸ್ವರೂಪವೇನು ಎಂಬುದನ್ನು ನಮಗೆ ತಿಳಿಸಿಕೊಡುತ್ತವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
mohan bhagwat modi

ಪ್ರತ್ಯೇಕವಾಗಿ ನೋಡಿದರೆ, ನಾವು ಗುರುತಿಸಿದ ಅನೇಕ ಸಂಘಟನೆಗಳು ಅಂತಹ ವಿಶೇಷವೆನಿಸುವುದಿಲ್ಲ. ಆದರೆ ಅವುಗಳನ್ನು ಒಟ್ಟಾಗಿ ಪರಿಗಣಿಸಿದಾಗಲೇ, ಅವು ಸ್ಪಷ್ಟವಾದ ಮತ್ತು ಬಹಿರಂಗಗೊಳಿಸುವಂತಹ ಚಿತ್ರಣವನ್ನು ರೂಪಿಸುತ್ತವೆ. ಇಲ್ಲಿ ಅವುಗಳ ನಡುವಿನ ಅಂತರಾಳದ ಜಾಗವನ್ನು, ಯಾವ ಜಾಗವನ್ನು ಸಂಘ ಮರೆಮಾಚಲು ಯತ್ನಿಸುತ್ತದೆಯೋ, ಆ ಅಂಶವೇ—ಆರ್‌ಎಸ್‌ಎಸ್ ಒಂದು ಸಡಿಲವಾಗಿ ಹರಡಿರುವ ದ್ವೀಪಸಮೂಹವಲ್ಲ, ಬದಲಾಗಿ ಏಕೀಕೃತ ಜಾಲಬದ್ಧ ಘಟಕವಾಗಿದೆಯೆಂಬುದನ್ನು ಸ್ಪಷ್ಟಪಡಿಸುತ್ತದೆ.

ಉದಾಹರಣೆಗೆ, ನಾವು ಮಾಹಿತಿ ಕಲೆಹಾಕುತ್ತಿದ್ದ ಸಂದರ್ಭದಲ್ಲಿ, ಜಮ್ಮುವಿನ ಅಂಫಲ್ಲಾ ಬಡಾವಣೆಯ ಒಂದೇ ವಿಳಾಸದಲ್ಲಿ ಸಂಘದೊಂದಿಗೆ ನಂಟು ಹೊಂದಿರುವ ಹಲವಾರು ಸಂಸ್ಥೆಗಳು ನೆಲೆಗೊಂಡಿರುವುದು ಕಂಡುಬಂತು. ಸುಮಾರು ನಾಲ್ಕು ಹೆಕ್ಟೇರ್ ವಿಸ್ತೀರ್ಣದ ಈ ನಿವೇಶನವನ್ನು, ವೈದಿಕ ಶಿಕ್ಷಣದ ಪ್ರಚಾರಕ್ಕಾಗಿ 1916ರ ಡಿಸೆಂಬರ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರದ ಅಂದಿನ ಡೋಗ್ರಾ ಅರಸ ಪ್ರತಾಪ್ ಸಿಂಗ್ ಅವರು ಧಾರ್ಮಿಕ ಮುಖಂಡ ಚಂಪಾ ನಾಥ್ ಅವರಿಗೆ ಮಂಜೂರು ಮಾಡಿದ್ದರು.

ಇದರೊಂದಿಗೆ, ದೇವಾಲಯವೊಂದರ ನಿರ್ಮಾಣಕ್ಕಾಗಿ ಅಂದು 10,000 ರೂಪಾಯಿಗಳ ಅನುದಾನವನ್ನೂ ಕೂಡ ನೀಡಲಾಗಿತ್ತು. ಮುಂದೆ, ಈ ದೇವಾಲಯದ ನಿರ್ವಹಣೆಗಾಗಿ ಸ್ಥಾಪಿಸಲಾದ ‘ವೇದ್ ಮಂದಿರ ಸಮಿತಿ’ಯನ್ನು 1964ರ ಮೇ ತಿಂಗಳಲ್ಲಿ ಸೊಸೈಟಿಯೊಂದರ ರೂಪದಲ್ಲಿ ನೋಂದಾಯಿಸಲಾಯಿತು. ಇತಿಹಾಸದ ಯಾವುದೋ ಒಂದು ಹಂತದಲ್ಲಿ ಈ ಮಂದಿರ, ಸಮಿತಿ ಮತ್ತು ಅದರ ಆವರಣವನ್ನು ಸಂಘವು ತನ್ನ ವಶಕ್ಕೆ ತೆಗೆದುಕೊಂಡಿತು. ಇಂದು, ಇದೇ ವಿಳಾಸವು ಇಪ್ಪತ್ತಕ್ಕೂ ಅಧಿಕ ಸಂಖ್ಯೆಯ ಸಂಘದ ಹೆಚ್ಚುವರಿ ಸಂಸ್ಥೆಗಳಿಗೆ ಆಶ್ರಯ ನೀಡಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಘದ ಸಾಂಸ್ಥಿಕ ಅಸ್ತಿತ್ವದ ಅರ್ಧದಷ್ಟು ಭಾಗವನ್ನು ಪ್ರತಿನಿಧಿಸುತ್ತಿದ್ದು, ಅವು ಹೀಗಿವೆ:

1. ಹೋಮ್ ಫಾರ್ ದಿ ಏಜ್ಡ್ ಅಂಡ್ ಇನ್ಫರ್ಮ್ (ವೃದ್ಧರು ಮತ್ತು ಅಶಕ್ತರಿಗಾಗಿ ವಸತಿ ಕೇಂದ್ರ)

2. ಜಮ್ಮು ಮತ್ತು ಕಾಶ್ಮೀರ ಗೋ ರಕ್ಷಾ ಸಮಿತಿ (ಗೋಶಾಲೆ)

3. ಶಾಂತಿ ಸಾಧನಾ ಆಶ್ರಮ (ಪೂಜಾ ಸ್ಥಳ)

4. ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರಲ್ ಹೈಜೀನ್ (ರೋಗಗಳಿಗೆ ನೈಸರ್ಗಿಕ ಚಿಕಿತ್ಸಾ ಕೇಂದ್ರ)

5. ಜೈ ಕಾರ್ಗಿಲ್ ಜೈ ಭಾರತ್ ಕೋಶ್ ಟ್ರಸ್ಟ್ (ಕಾರ್ಗಿಲ್ ಯುದ್ಧದ ನಿವೃತ್ತ ಯೋಧರಿಗಾಗಿ ಎನ್‌ಜಿಒ)

6. ದಿಶಾ ಛಾತ್ರಾವಾಸದ ಕಚೇರಿಗಳು (ಕತ್ರಾ ನಗರದಲ್ಲಿರುವ ಹಾಸ್ಟೆಲ್)

7. ವೇದ್ ಮಂದಿರ ಬಾಲನಿಕೇತನ (ಬಾಲಕರ ಅನಾಥಾಶ್ರಮ)

8. ವೇದ್ ಮಂದಿರ ಬಾಲಿಕಾನಿಕೇತನ (ಬಾಲಕಿಯರ ಅನಾಥಾಶ್ರಮ)

9. ವೇದ್ ಮಂದಿರ ಪಾಠಶಾಲೆ (ಎರಡೂ ಅನಾಥಾಶ್ರಮಗಳಿಗೆ ಸೇವೆ ಸಲ್ಲಿಸುವ ಶಾಲೆ)

10. ವೇದ್ ಮಂದಿರ ವೊಕೇಶನಲ್ ಟ್ರೇನಿಂಗ್ ಸೆಂಟರ್ (ವೃತ್ತಿಪರ ತರಬೇತಿ ಕೇಂದ್ರ)

11. ಹೋಮಿಯೋಪತಿ ಚಿಕಿತ್ಸಾಲಯ

12. ಸ್ವಾಮಿ ವಿವೇಕಾನಂದ ಮೆಡಿಕಲ್ ಮಿಷನ್ (ದತ್ತಿ ಆಸ್ಪತ್ರೆ)

13. ಜಮ್ಮು ಕಾಶ್ಮೀರ ಸಹಾಯತಾ ಸಮಿತಿ (ಗಡಿ ಪ್ರದೇಶದ ನಿವಾಸಿಗಳಿಗಾಗಿ ಸಮಾಜ ಕಲ್ಯಾಣ ಸಂಸ್ಥೆ)

14. ಭಾರತೀಯ ಶಿಕ್ಷಣ ಸಮಿತಿ (ಸಂಘದ ಶೈಕ್ಷಣಿಕ ವಿಭಾಗವಾದ ವಿದ್ಯಾಭಾರತಿಯ ಒಂದು ಅಂಗ)

15. ಸೇವಾ ಭಾರತಿಯ ಜಮ್ಮು ಮತ್ತು ಕಾಶ್ಮೀರ ಕಚೇರಿ (ಸಂಘದ ಸೇವಾ ವಿಭಾಗ)

16. ಕೇಸರ್ ಬೆನ್ ವೆಲ್ಜಿ ಪೋಪಟ್ ಭವನ (ಬಾಲಕಿಯರಿಗಾಗಿ ಮತ್ತೊಂದು ಅನಾಥಾಶ್ರಮ)

17. ಅಖಿಲ ಭಾರತೀಯ ಪೂರ್ವ ಸೈನಿಕ ಸೇವಾ ಪರಿಷತ್‌ನ ಜಮ್ಮು ಘಟಕ (ಮಾಜಿ ಸೈನಿಕರಿಗಾಗಿ ಕೆಲಸ ಮಾಡುವ ಆರ್‌ಎಸ್‌ಎಸ್ ಅಂಗಸಂಸ್ಥೆ)

18. ಮಾತಾ ವೈಷ್ಣೋ ಲೋಕ ಕಲ್ಯಾಣ ಸಂಸ್ಥೆ (ಯಾತ್ರಾರ್ಥಿಗಳಿಗಾಗಿ ವಸತಿಗೃಹವನ್ನು ನಡೆಸುತ್ತದೆ)

19. ಜನಕ್ ಮದನ್ ಗರ್ಲ್ಸ್ ಹಾಸ್ಟೆಲ್ ಕಚೇರಿಗಳು (ಸೇವಾಭಾರತಿಯು ನಡೆಸುತ್ತಿರುವ ಶಾಲಾ ಬಾಲಕಿಯರ ಹಾಸ್ಟೆಲ್)

20. ಭಾರತ್ ವಿಕಾಸ್ ಪರಿಷತ್‌ನ ಜಮ್ಮು ಘಟಕ (ಸಂಘದ ಲಾಭರಹಿತ ಸಂಸ್ಥೆಯ ಜಮ್ಮು ಶಾಖೆ)

21. ಮಹಾರಾಜ ಪ್ರತಾಪ್ ಸಿಂಗ್ ವೇದ ವಿದ್ಯಾಲಯ (ವೇದಗಳ ಅಧ್ಯಯನಕ್ಕಾಗಿ ಇರುವ ಶಾಲೆ)

unnamed 2

ಈ ಸಂಸ್ಥೆಗಳ ಗುಂಪು ಸಂಘದೊಂದಿಗೆ ಭೌತಿಕವಾಗಿ ಮತ್ತು ಸಾಂಸ್ಥಿಕವಾಗಿ ಬೆಸೆದುಕೊಂಡಿದೆ ಎಂಬುದಕ್ಕೆ ಬಲವಾದ ಸಾಕ್ಷಿಯೆಂದರೆ, ಸಂಘದ ಸೇವಾ ಮತ್ತು ಶೈಕ್ಷಣಿಕ ವಿಭಾಗಗಳೆರಡೂ ಒಂದೇ ಸ್ಥಳದಿಂದ ಕಾರ್ಯನಿರ್ವಹಿಸುವುದು. ಆದರೆ ಇನ್ನೂ ಆಳಕ್ಕೆ ಬಗೆದು ನೋಡಿದಾಗ, ಇವೆಲ್ಲವನ್ನೂ ಕೇವಲ ಬೆರಳೆಣಿಕೆಯಷ್ಟು ವ್ಯಕ್ತಿಗಳೇ ನಿರ್ವಹಿಸುತ್ತಿದ್ದಾರೆ ಮತ್ತು ಅವರು ಒಂದೇ ಸಮಯದಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ.

ವೇದ ಮಂದಿರ ಬಾಲನಿಕೇತನದ ಪಟ್ಟಿಯಲ್ಲಿರುವ ನಾಲ್ವರೂ ಪದಾಧಿಕಾರಿಗಳು ಸಂಘದ ಕಾರ್ಯಕರ್ತರಾಗಿದ್ದಾರೆ. ಅದರ ಅಧ್ಯಕ್ಷರಾದ ಗೌತಮ್ ಮೆಂಗಿ ಅವರು ಜಮ್ಮುವಿನ ಆರ್‌ಎಸ್‌ಎಸ್ ಸಂಘಚಾಲಕರು (ಸಂಯೋಜಕರು) ಮತ್ತು ವೇದ ಮಂದಿರ ಸಂಕೀರ್ಣದೊಂದಿಗೆ ದೀರ್ಘಕಾಲದಿಂದ ಸಂಬಂಧ ಹೊಂದಿರುವ ಕುಟುಂಬದಿಂದ ಬಂದವರು. ಮೆಂಗಿ ಅವರು, ಸಂಘದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭೆ ಸೇರಿದಂತೆ ಹಲವಾರು ಹಿರಿಯ ಆರ್‌ಎಸ್‌ಎಸ್ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಅದರ ಉಪಾಧ್ಯಕ್ಷರಾದ ಬಾಲಕೃಷ್ಣ ಗುಪ್ತಾ, ವೇದ ಮಂದಿರ ಸಮಿತಿಯ ಸದಸ್ಯರೂ ಹೌದು. ಇವರು ಸಂಘದ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ ವ್ಯಕ್ತಿ. ಅದರ ಕಾರ್ಯದರ್ಶಿ ಸುದೇಶ್ ಪಾಲ್ ಮತ್ತು ಉಪಕಾರ್ಯದರ್ಶಿ ಸತೀಶ್ ಮಿತ್ತಲ್ ಕೂಡ ಇದೇ ರೀತಿ ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ಮಿತ್ತಲ್ ಭಾರತೀಯ ಶಿಕ್ಷಣ ಸಮಿತಿಯ ಖಜಾಂಚಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ವೇದ ಮಂದಿರ ಸಮಿತಿಯ ಅಧ್ಯಕ್ಷರಾದ ಸುರೇಶ್ ಚಂದರ್ ಗುಪ್ತಾ, ಮಾತಾ ವೈಷ್ಣೋ ಲೋಕ ಕಲ್ಯಾಣ ಸಂಸ್ಥಾನದ ಅಧ್ಯಕ್ಷರೂ ಹೌದು. ಅದರ ಉಪಾಧ್ಯಕ್ಷರಾದ ಅಮಿತಾ ಶರ್ಮಾ, ಭಾರತ್ ವಿಕಾಸ್ ಪರಿಷತ್‌ನ ಜಮ್ಮು ಘಟಕದ ಅಧ್ಯಕ್ಷರೂ ಆಗಿದ್ದಾರೆ. ಇವೆಲ್ಲವನ್ನೂ ಗಮನಿಸಿದಾಗ, ಈ ಸಂಸ್ಥೆಗಳು ಸ್ವತಂತ್ರ ಘಟಕಗಳಲ್ಲ, ಬದಲಾಗಿ ಒಂದೇ ಜಾಲದ ಘಟಕ ಭಾಗಗಳಾಗಿವೆ ಎಂಬುದು ಸ್ಪಷ್ಟವಾಗುತ್ತದೆ.

ಸಂಘದೊಂದಿಗಿನ ಈ ಸಂಬಂಧಗಳು ಇನ್ನೂ ಆಳವಾಗಿದ್ದು, ಜಮ್ಮುವಿನ ಆಚೆಗೂ, ವಾಸ್ತವದಲ್ಲಿ ಭಾರತದ ಆಚೆಗೂ ವ್ಯಾಪಿಸಿವೆ. ಉದಾಹರಣೆಗೆ, ಮಹಾರಾಜ ಪ್ರತಾಪ್ ಸಿಂಗ್ ವೇದ ವಿದ್ಯಾಲಯವನ್ನು ಸ್ಥಾಪಿಸಿದ್ದು ಪುಣೆ ಮೂಲದ ಮಹರ್ಷಿ ವೇದ ವ್ಯಾಸ ಪ್ರತಿಷ್ಠಾನ. ಇದರ ಸಂಸ್ಥಾಪಕರಾದ ಗೋವಿಂದದೇವ ಗಿರಿ ಅವರು ಆರ್‌ಎಸ್‌ಎಸ್ ಸದಸ್ಯರಾಗಿದ್ದಾರೆ, ವಿಎಚ್‌ಪಿ ನಿಯಂತ್ರಿತ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿಯಾಗಿದ್ದಾರೆ ಮತ್ತು ಮಾಜಿ ಆರ್‌ಎಸ್‌ಎಸ್ ಮುಖ್ಯಸ್ಥ ಮಾಧವ ಸದಾಶಿವ ಗೋಳ್ವಲ್ಕರ್ ಹೆಸರಿನಲ್ಲಿರುವ ನಾಗಪುರ ಆಸ್ಪತ್ರೆ ಮಾಧವ ನೇತ್ರಾಲಯದ ಸಲಹಾ ಮಂಡಳಿಯಲ್ಲೂ ಇದ್ದಾರೆ. ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಸರ್’ ಪ್ರಕಾರ, ಗೋವಿಂದದೇವ ಗಿರಿ ಅವರ ‘ಆರ್‌ಎಸ್‌ಎಸ್ ಸ್ವಯಂಸೇವಕರಾಗಿದ್ದಾಗಿನ ಆರಂಭಿಕ ಸಂಸ್ಕಾರಗಳು’ ಪ್ರತಿಷ್ಠಾನದಲ್ಲಿ ವ್ಯಕ್ತವಾಗುತ್ತವೆ.

ಜಮ್ಮುವಿನ ಆವರಣದಲ್ಲಿರುವ ಮತ್ತೊಂದು ಸಂಸ್ಥೆಯಾದ ಕೇಸರ್ ಬೆನ್ ವೇಲ್ಜಿ ಪೋಪಟ್ ಭವನವನ್ನು ಇಂಡಿಯಾ ಡೆವಲಪ್‌ಮೆಂಟ್ ಅಂಡ್ ರಿಲೀಫ್ ಫಂಡ್ (India Development and Relief Fund) ನಿಂದ ಸಂಗ್ರಹಿಸಿದ ನಿಧಿಯಿಂದ ಸ್ಥಾಪಿಸಲಾಯಿತು. ಇದು ಅಮೆರಿಕ ಮೂಲದ ನಿಧಿ ಸಂಗ್ರಹಣಾ ಸಂಸ್ಥೆಯಾಗಿದ್ದು, ಸಂಘದೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದೆ. ಇದಕ್ಕೆ ಅಮೆರಿಕದ ವಿಎಚ್‌ಪಿ ಕೂಡ ಹಣವನ್ನು ನೀಡಿದೆ. ಅಂತೆಯೇ, ಜನಕ್ ಮದನ್ ಗರ್ಲ್ಸ್ ಹಾಸ್ಟೆಲ್ ಅನ್ನು ಸೇವಾ ಇಂಟರ್‌ನ್ಯಾಷನಲ್‌ನ ಕೆನಡಾ ವಿಭಾಗವು ಪ್ರಾಯೋಜಿಸಿದೆ. ಪರಸ್ಪರ ಸಂಪರ್ಕ ಹೊಂದಿರುವ ಸಂಸ್ಥೆಗಳ ಈ ಜಾಲವು ಸಂಘಕ್ಕೆ ಪ್ರಧಾನವಲ್ಲದ ಅಥವಾ ನಗಣ್ಯವಾದ ಅಂಶವಾಗಿರಲು ಸಾಧ್ಯವಿಲ್ಲ. ಒಂದು ಸಣ್ಣ ಹಾಸ್ಟೆಲ್ ನಡೆಸುವಲ್ಲಿಯೂ ಆರ್‌ಎಸ್‌ಎಸ್‌ನ ‘ಸಂಘಚಾಲಕ್’ (ಸಂಯೋಜಕ) ಭಾಗಿಯಾಗಿರುವುದು – ಇವೆಲ್ಲ ಕೇವಲ ಕಾಲಹರಣದ ಅಥವಾ ಆಟಗಳಲ್ಲ, ಬದಲಾಗಿ, ಸಂಘವು ಸಮಾಜದೊಂದಿಗೆ ಬೆರೆಯಲು, ಸದಸ್ಯತ್ವ ಹೆಚ್ಚಿಸಲು ಮತ್ತು ಸಮಾಜದ ಪ್ರತಿಯೊಂದು ಸ್ತರದಲ್ಲೂ ವ್ಯಾಪಿಸಲು ಪ್ರಮುಖ ಮಾರ್ಗವಾಗಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ವೇದ ಮಂದಿರ ಸಮುಚ್ಚಯವು ರಾಜ್ಯದಾದ್ಯಂತ ನಡೆಯುವ ಸಂಘದ ಕಾರ್ಯಗಳಿಗೆ ಕೇಂದ್ರ ಬಿಂದುವಾಗಿದೆ ಎಂದು ನಮ್ಮ ಸಂಶೋಧನೆಯು ಬಹಿರಂಗಪಡಿಸಿದೆ. ಪ್ರಕಟಣೆಗಳಲ್ಲಿ ಈ ಆವರಣವನ್ನು ಕೇಶವ ಭವನ ಎಂದು ಕರೆಯಲಾಗಿದೆ. ಇದು, ಸ್ಥಳೀಯ ಆರ್‌ಎಸ್‌ಎಸ್ ಪ್ರಧಾನ ಕಚೇರಿಗಳಿಗೆ ಸಂಘದ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಹೆಸರಿಡುವ ಪದ್ಧತಿಯ ಭಾಗವಾಗಿದೆ. ಭಾಗವತ್ ಅವರಂತಹ ಹಿರಿಯ ಆರ್‌ಎಸ್‌ಎಸ್ ಪದಾಧಿಕಾರಿಗಳು ಆ ಪ್ರದೇಶಕ್ಕೆ ಭೇಟಿ ನೀಡಿದಾಗ ಅವರ ಆತಿಥ್ಯದ ವ್ಯವಸ್ಥೆಯನ್ನು ಈ ಸಮುಚ್ಚಯದಲ್ಲಿಯೇ ಮಾಡಲಾಗುತ್ತದೆ. ಸ್ಥಳೀಯ ಪ್ರಕಟಣೆಗಳು ಇದನ್ನು ಸಂಘದ ನರ್ವ್ ಸೆಂಟರ್ ಎಂದು ಬಣ್ಣಿಸುತ್ತವೆ. ಅವುಗಳ ವರದಿಯಂತೆ – ಜಮ್ಮು ಮತ್ತು ಕಾಶ್ಮೀರದ ಆರ್‌ಎಸ್‌ಎಸ್‌ನ ಉನ್ನತ ಪದಾಧಿಕಾರಿಗಳು; ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಸನಾತನ ಧರ್ಮ ಸಭೆ, ಸಂಸ್ಕಾರ ಭಾರತಿ, ವಿದ್ಯಾ ಭಾರತಿ, ಸೇವಾ ಭಾರತಿ, ಹಿಂದೂ ಜಾಗರಣ ಮಂಚ್, ಭಾರತೀಯ ಮಜ್ದೂರ್ ಸಂಘ, ಅಧಿವಕ್ತ ಪರಿಷತ್, ಸ್ವದೇಶಿ ಜಾಗರಣ ಮಂಚ್, ಇತ್ಯಾದಿ ಸೇರಿದಂತೆ ಅದರ ಕವಲು ಸಂಸ್ಥೆಗಳೊಂದಿಗೆ ಮುಚ್ಚಿದ ಬಾಗಿಲುಗಳ ಹಿಂದೆ ಸಭೆ ನಡೆಸುವ ಕೇಶವ ಭವನವು, ವೇದ ಮಂದಿರದಲ್ಲಿ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಯನ್ನು ಹೊಂದಿದೆ. ಆರ್‌ಎಸ್‌ಎಸ್ ಮುಖ್ಯಸ್ಥರು ಈ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ಚರ್ಚೆ ನಡೆಸುತ್ತಾರೆ ಮತ್ತು ಅವುಗಳ ಕಾರ್ಯಕ್ಷಮತೆಯ ವಿಚಾರಣೆ ನಡೆಸುತ್ತಾರೆ.

RSS Arms Training

ಇದಲ್ಲದೆ, ಸಂಸ್ಕೃತ ಭಾಷೆಯನ್ನು ಪುನರುಜ್ಜೀವನಗೊಳಿಸುವ ಸಂಘದ ವಿಭಾಗವಾದ ಸಂಸ್ಕೃತ ಭಾರತಿಯ ವೇದ ವಿದ್ವಾಂಸರ ಸಮ್ಮೇಳನದಿಂದ ಹಿಡಿದು ಸ್ಥಳೀಯ ಹಬ್ಬಗಳ ಆಚರಣೆ ಹಾಗೂ ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮಗಳವರೆಗೆ ಎಲ್ಲವನ್ನೂ ಈ ಸಮುಚ್ಚಯವು ಆಯೋಜಿಸಿದೆ. 2012ರಲ್ಲಿ ಸೇವಾ ಭಾರತಿ ಜಮ್ಮು ಮತ್ತು ಕಾಶ್ಮೀರ ಆಯೋಜಿಸಿದ ಕಾರ್ಯಕ್ರಮವೊಂದಕ್ಕಾಗಿ ಇದು ರಾಜ್ಯದ ಸಂಘದ ವ್ಯವಸ್ಥಾಪಕರ ಬೃಹತ್ ಗುಂಪಿಗೆ ಆತಿಥ್ಯ ನೀಡಿತ್ತು. ಈ ಸಂದರ್ಭದಲ್ಲಿ ಐವತ್ತು ಸಂಸ್ಥೆಗಳು ಅಲ್ಲಿದ್ದವು ಎಂದು ಸಂಘದ ಪ್ರಕಟಣೆಯಾದ ‘ಸಂವಾದ’ ಹೇಳಿಕೊಂಡಿದೆ. (ಇಲ್ಲಿಯೂ ಸಹ, ಆರ್‌ಎಸ್‌ಎಸ್‌ನೊಂದಿಗೆ ನೇರ ಸಂಪರ್ಕ ಹೊಂದಿರುವ ಕೆಲವನ್ನು ಬಿಟ್ಟರೆ ಬೇರೆ ಯಾವುದೇ ರೀತಿಯಲ್ಲಿ ಪತ್ತೆಹಚ್ಚಲಾಗದಂತಹ ಸಂಸ್ಥೆಗಳೇ ಹೆಚ್ಚಾಗಿದ್ದವು).

ತನ್ನದೇ ಹೇಳಿಕೆಗಳಲ್ಲಿ ಸಂಘವು ಈ ಸಭೆಗಳನ್ನು ಹಿಂದುತ್ವ, ರಾಷ್ಟ್ರೀಯತೆ ಅಥವಾ ಸಮಾಜ ಸೇವೆಯ ಕಾರ್ಯಗಳನ್ನು ಹಂಚಿಕೊಂಡು, ಅದರ ನಿರ್ವಹಣೆಗೆ ಬದ್ಧವಾಗಿರುವ ಸಮಾನ ಮನಸ್ಕ ಸಂಸ್ಥೆಗಳ ಸಡಿಲವಾದ ಒಕ್ಕೂಟ ಎಂದು ಹೇಳಿಕೊಂಡಿದೆ. ವಾಸ್ತವದಲ್ಲಿ ಜಂಟಿ ಕಾರ್ಯಕ್ರಮಗಳು, ಹಂಚಿಕೊಳ್ಳಲಾದ ಕಚೇರಿಗಳು ಮತ್ತು ಅಧಿಕಾರಿಗಳು ಎಲ್ಲವೂ ಅತ್ಯಂತ ಔಪಚಾರಿಕವಾದ ಪಾತ್ರ ಮತ್ತು ಹುದ್ದೆಗಳನ್ನು ಹೊಂದಿರುವ ಕೇಂದ್ರೀಕೃತ ಅಧಿಕಾರಶಾಹಿಯತ್ತ ಬೊಟ್ಟು ಮಾಡುತ್ತವೆ.

ಹೀಗಾಗಿ, ವೇದ ಮಂದಿರ ಸಂಕೀರ್ಣವು ಸಂಘದ ವಿಶಾಲವಾದ ಕಾರ್ಯತಂತ್ರದ ಒಂದು ಕಿರು ಘಟಕವಾಗಿ ಕಾರ್ಯನಿರ್ವಹಿಸುತ್ತದೆ ಎನ್ನಬಹುದು. ಈ ಕಾರ್ಯತಂತ್ರದ ಮೂಲಕ ಅದು ವ್ಯವಸ್ಥಿತವಾದ ಅಧಿಕಾರಶಾಹಿಯ ಮೂಲಕ ನಿರ್ವಹಿಸಲ್ಪಡುವ ಸಂಸ್ಥೆಗಳನ್ನು ಸೃಷ್ಟಿಸುತ್ತದೆ. ಮೇಲ್ನೋಟಕ್ಕೆ ಇಪ್ಪತ್ತಕ್ಕೂ ಹೆಚ್ಚು ಸ್ವತಂತ್ರ ಸಂಸ್ಥೆಗಳು ವಿವಿಧ ಕ್ಷೇತ್ರಗಳು ಮತ್ತು ಉದ್ದೇಶಿತ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವಂತೆ ಕಂಡುಬಂದರೂ ವಾಸ್ತವದಲ್ಲಿ ಇದು ನಕಲು ಸಂಸ್ಥೆಗಳ ದಟ್ಟವಾದ, ಸುಸಂಘಟಿತ ಸಮೂಹವಾಗಿದೆ. ಒಂದೇ ರೀತಿಯ ಜನರು, ಒಂದೇ ಕಾರಣಗಳಿಗಾಗಿ, ‘ಸಿಮೆಟ್ರಿಕಲ್’ ಆದ ಸಾಂಸ್ಥಿಕ ರಚನೆಗಳಲ್ಲಿ, ಒಬ್ಬರೇ ನಾಯಕರನ್ನು ಅನುಸರಿಸುತ್ತಾ, ಒಂದೇ ಶಿಸ್ತಿಗೆ ಒಳಪಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವಾಗ, ಆರ್‌ಎಸ್‌ಎಸ್ಅನ್ನು ಒಂದೇ ಸಮಗ್ರ ಜಾಲ ಎಂದಲ್ಲದೆ ಬೇರೆ ಮತ್ತೇನೆಂದು ಕರೆಯಲು ಸಾಧ್ಯ?

ಈ ವಿಧಾನವು ಸಂಘದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕುರಿತಾದ ಎಲ್ಲ ರೀತಿಯ ಪ್ರಮುಖವಾದ ಮತ್ತು ಈವರೆಗೂ ಉತ್ತರ ಸಿಕ್ಕಿಲ್ಲದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಉದಾಹರಣೆಗೆ, ಈ ‘ಕ್ಲಸ್ಟರ್‌’ನಲ್ಲಿರುವ (ಗೊಂಚಲಿನಲ್ಲಿರುವ) ಏಳು ಸಂಸ್ಥೆಗಳು ಒಂದೇ ಕೆಲಸವನ್ನು ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತವೆ. ಅದು, ಶಾಲೆ ಮತ್ತು ಹಾಸ್ಟೆಲ್‌ಗಳನ್ನು ನಡೆಸುವುದು. ಹಾಗೆಯೇ ಪಟ್ಟಿ ಮಾಡಲಾದ ಸಮಾಜ ಕಲ್ಯಾಣ ಸಂಸ್ಥೆಗಳಲ್ಲಿ ಕೆಲವು ಒಂದೇ ರೀತಿಯ ಚಟುವಟಿಕೆಗಳನ್ನು ಹೊಂದಿರುವಂತೆ ತೋರುತ್ತವೆ. ಕೆಲವು ಸಂಸ್ಥೆಗಳು ಸಹಾನುಭೂತಿಯುಳ್ಳ ಟ್ರಸ್ಟ್‌ಗಳ ಮೂಲಕ ಅಥವಾ ಕಾರ್ಪೊರೇಟ್ ದೇಣಿಗೆಗಳ ಮೂಲಕ ದೇಶೀಯವಾಗಿ ನಿಧಿಯನ್ನು ಸಂಗ್ರಹಿಸುತ್ತವೆ, ಆದರೆ ಇತರೆಯವು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ, 2010ರ ಅಡಿಯಲ್ಲಿ ಮೇಲ್ನೋಟಕ್ಕೆ ವಿದೇಶಿ ನಿಧಿಯನ್ನು ಪಡೆಯುತ್ತವೆ. ಈ ವಿವರಗಳ ಜಾಡು ಹಿಡಿಯುವ ಕೆಲಸ ಯಾರಿಗಾದರೂ ತಲೆ ಸುತ್ತು ತರುವುದು ಖಚಿತ. ಹಾಗೂ ಸಂಘಕ್ಕೆ ನಿಖರವಾಗಿ ಬೇಕಿರುವುದೂ ಅದೇ ಆಗಿದೆ.

ಅನುವಾದ ಮಾಲಿಕೆ ಭಾಗ-೧ RSS ಬೃಹತ್ ಗೌಪ್ಯ ಜಾಲವು ಅಧಿಕಾರವನ್ನು ಹೇಗೆ ನಿರ್ಮಿಸುತ್ತಿದೆ ಮತ್ತು ನಿರ್ವಹಿಸುತ್ತಿದೆ?

ಆದರೆ ವಿಷಯ ಕೇವಲ ಸಂಘವು ಹಲವಾರು ಮುಖವಾಡ ಸಂಸ್ಥೆಗಳ ಮೂಲಕ ಕೆಲಸ ಮಾಡುತ್ತದೆ ಎನ್ನುವುದಲ್ಲ. ವೇದ ಮಂದಿರದ ಉದಾಹರಣೆ ಮತ್ತು ನಮ್ಮ ಸಂಶೋಧನೆಯು ಇನ್ನೂ ಆಳವಾದ ಪ್ರಶ್ನೆಯನ್ನು ಎತ್ತುತ್ತವೆ. ಸರಳವಾಗಿ ಹೇಳುವುದಾದರೆ, ಜಮ್ಮು–ಕಾಶ್ಮೀರದಲ್ಲಿನ ಸಂಘದ ಚಟುವಟಿಕೆಗಳ ಅರ್ಧಕ್ಕಿಂತ ಹೆಚ್ಚು ಒಂದೇ ಆಸ್ತಿಗೆ ಸಂಬಂಧಪಟ್ಟಿರುವುದಾದರೆ, ಆರ್‌ಎಸ್‌ಎಸ್‌ನ್ನು ನಾವು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬ ನಮ್ಮ ಮೂಲ ಕಲ್ಪನೆಗಳನ್ನೇ—ಹಾಗೂ ಅದು ”ಪ್ರೇರೇಪಿಸುತ್ತದೆ” ಎನ್ನಲಾಗುವ ಹಿಂದೂತ್ವದ ಸಹಜ ವಿಸ್ತರಣೆಯ ಕಲ್ಪನೆಯನ್ನು—ಮತ್ತೆ ಪರಿಶೀಲಿಸಬೇಕಾಗುತ್ತದೆ. ಸಂಘದ ಅತ್ಯಂತ ಮೂಲಭೂತ ವ್ಯವಸ್ಥೆಯನ್ನು ನಾವು ಮತ್ತೆ ಗಮನಿಸಬೇಕಾಗಿದೆ.

(ನಾಳೆ ಅನುವಾದ ಮಾಲಿಕೆ -3)
ಅನುವಾದ-ಚೇತನಾ ತೀರ್ಥಹಳ್ಳಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...