ಸ್ವಂತ ಮನೆಯ ಕನಸು ಕಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಬಡ, ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಕುಟುಂಬಗಳು ಕರ್ನಾಟಕ ಗೃಹ ಮಂಡಳಿಯನ್ನು (KHB) ನಂಬಿ ಕಟ್ಟಿದ್ದ ಸುಮಾರು ₹2 ಕೋಟಿ 22 ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಲೆಕ್ಕವೇ ಇಲ್ಲ. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದವರ ಸ್ವಂತ ಮನೆ ಕನಸು ವರ್ಷಗಳುರಿಳಿದರೂ ನನಸಾಗುವ ಲಕ್ಷಣಗಳೇ ಕಾಣುತ್ತಿಲ್ಲ.
ನಿವೇಶನ ಬೇಡಿಕೆ ಸಮೀಕ್ಷೆಯ ಹೆಸರಿನಲ್ಲಿ ಬರೋಬ್ಬರಿ 22,425 ಅರ್ಜಿಗಳನ್ನು ಸ್ವೀಕರಿಸಿರುವ ಗೃಹ ಮಂಡಳಿ, ವರ್ಷಗಳೇ ಕಳೆದರೂ ನಿವೇಶನ ಹಂಚಿಕೆ ಮಾಡದೇ, ಹಣವನ್ನೂ ಹಿಂತಿರುಗಿಸದೆ ಸಾರ್ವಜನಿಕರನ್ನು ಸತಾಯಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಶಿರಸಿ, ಸಿದ್ದಾಪುರ, ದಾಂಡೇಲಿ, ಮುಂಡಗೋಡ, ಯಲ್ಲಾಪುರ, ಭಟ್ಕಳ, ಮುರುಡೇಶ್ವರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ, ಆರ್ಥಿಕವಾಗಿ ದುರ್ಬಲ ವರ್ಗದಿಂದ (EWS) ಹಿಡಿದು ಉತ್ತಮ ಆದಾಯ ವರ್ಗದವರವರೆಗೆ (HIG) 500 ಚದರ ಅಡಿಯಿಂದ 2500 ಚದರ ಅಡಿವರೆಗಿನ ನಿವೇಶನಗಳಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ₹300 ರಿಂದ ₹1550 ರವರೆಗೆ ಅರ್ಜಿ ಶುಲ್ಕ ನಿಗದಿಪಡಿಸಿ, ಒಟ್ಟು ₹2,22,20,500/- ಮೊತ್ತವನ್ನು ಸಂಗ್ರಹಿಸಲಾಗಿದೆ.
ಸಾರ್ವಜನಿಕರಿಂದ ಅರ್ಜಿ ಶುಲ್ಕದ ಹೆಸರಲ್ಲಿ ಕೋಟ್ಯಂತರ ರೂ ಹಣ ಸಂಗ್ರಹಿಸಿದರೂ, ನಿವೇಶನ ಹಂಚಿಕೆ ಯೋಜನೆಗಳು ಕೈಗೂಡಿಲ್ಲ. 2009ರಲ್ಲಿ ಕಾರವಾರದ ಸದಾಶಿವಗಡದ ಬಿಡ್ಡುಲಾ ಭಾಗದಲ್ಲಿ ನಿವೇಶನ ಗುರುತಿಸಿದ್ದ ಮಂಡಳಿ, 3126 ಅರ್ಜಿದಾರರಿಂದ ₹31,62,100 ಶುಲ್ಕ ಪಾವತಿಸಿಕೊಂಡಿತ್ತು. ಆದರೆ, ಭೂಸ್ವಾಧೀನಕ್ಕೆ ರೈತರ ಒಪ್ಪಿಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಯೋಜನೆ ಕೈಬಿಡಲಾಯಿತು. 2015ರಲ್ಲಿ ಕಾರವಾರದ ಹಣಕೋಣದಲ್ಲಿ ಜಾಗ ಗುರುತಿಸಿ, ಅದನ್ನು ಸ್ವಾಧೀನಪಡಿಸಿಕೊಳ್ಳುವ ಮುನ್ನವೇ 2075 ಬಡವರಿಂದ ಡಿಡಿ ಮೂಲಕ ₹21,11,300 ಸಂಗ್ರಹಿಸಲಾಯಿತು. ಆದರೆ, ಆ ಸ್ಥಳವು ಕಾಳಿ ನದಿ ತೀರದಲ್ಲಿದ್ದು ಮಳೆಗಾಲದಲ್ಲಿ ಜಲಾವೃತವಾಗುವ ಭೀತಿ ಇದೆ ಎಂಬ ಕಾರಣ ನೀಡಿ ಈ ಯೋಜನೆಯನ್ನೂ ಮೂಲೆಗುಂಪು ಮಾಡಲಾಯಿತು. 2009ರಿಂದಲೂ ಬೆಂಗಳೂರಿನ ಕೇಂದ್ರ ಕಚೇರಿಗೆ ಜಮೆಯಾದ ಈ ಕೋಟಿಗಟ್ಟಲೆ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದರೆ ಬಡ್ಡಿ ಸೇರಿ ಅದರ ಮೌಲ್ಯ ಇಂದು ಸುಮಾರು ₹8 ಕೋಟಿಯಾಗುತ್ತಿತ್ತು. ದುರಂತವೆಂದರೆ, ಅಂದು ಆಸೆಗಣ್ಣಿನಿಂದ ಅರ್ಜಿ ಸಲ್ಲಿಸಿದ ಎಷ್ಟೋ ಹಿರಿ ಜೀವಗಳು ಇಂದು ಇಹಲೋಕ ತ್ಯಜಿಸಿವೆ.
ಈ ಬಗ್ಗೆ ಮಾತನಾಡಿದ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡ ಜ್ಞಾನೇಶ್ವರ ಗುಡಿಯಾಳ, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಫಲಾನುಭವಿಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ. “ಇದೇ ಕೃತ್ಯವನ್ನು ಖಾಸಗಿ, ರಿಯಲ್ ಎಸ್ಟೇಟ್‌ನವರು ಮಾಡಿದರೆ ವಂಚನೆ ಪ್ರಕರಣದಡಿ ಜೈಲು ಸೇರುತ್ತಿದ್ದರು. ಆದರೆ, ಸರ್ಕಾರಿ ಸಂಸ್ಥೆಯೇ ಇಂತಹ ಕೆಲಸ ಮಾಡಿದರೆ ಬಡವರು ನ್ಯಾಯ ಕೇಳಲು ಎಲ್ಲಿಗೆ ಹೋಗಬೇಕು? ನಂಬಿ ಹಣ ಕಟ್ಟಿದ್ದವರು ಬೀದಿ ಪಾಲಾಗುವ ಮೊದಲು, ಸ್ಥಳೀಯ ಶಾಸಕರು ಹಾಗೂ ಸಚಿವರು ಗಮನಹರಿಸಬೇಕು. ಯೋಜನೆಯ ಜಾರಿ ಬಗ್ಗೆ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.
ಈ ವಿಳಂಬಕ್ಕೆ ಭೂಸ್ವಾಧೀನ ಕಾಯ್ದೆಯೇ ಕಾರಣ ಎಂದು KHB ಸಮರ್ಥಿಸಿಕೊಂಡಿದೆ. ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಜ್ಯೋತಿ ನಾಜರೆ ಅವರು ಈ ಕುರಿತು ಮಾಹಿತಿ ನೀಡಿದ್ದು, “2013ರಲ್ಲಿ ಭೂಸ್ವಾಧೀನ ಕಾಯ್ದೆ ಬದಲಾವಣೆಯಾದನಂತರ ಶೇ. 75ರಷ್ಟು ಭೂಮಾಲೀಕರ ಒಪ್ಪಿಗೆ ಇದ್ದರೆ ಮಾತ್ರ ಭೂಸ್ವಾಧೀನ ಪ್ರಕ್ರಿಯೆ ಸಾಧ್ಯ. ಈ ಹಿಂದೆ ಸರ್ಕಾರವು ಕಡಿಮೆ ಮೊತ್ತದ ಪರಿಹಾರ ನೀಡುತ್ತದೆ ಎಂದು ರೈತರು ಭೂಮಿ ನೀಡಲು ನಿರಾಕರಿಸಿದ್ದರು” ಎಂದು ತಿಳಿಸಿದರು.

“ಈ ಸಮಸ್ಯೆಯನ್ನು ಬಗೆಹರಿಸಲು, ಈಗ ಹೊಸ ಅನುಪಾತದಲ್ಲಿ ಸರ್ಕಾರಿ ಸುತ್ತೋಲೆ ಹೊರಡಿಸಲಾಗಿದೆ. ಭೂಮಿ ಕಳೆದುಕೊಳ್ಳುವ ರೈತರಿಗೆ 40×60 ಅಥವಾ 50×50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲಾಗುತ್ತಿದ್ದು, ಅವರ ಪಾಲಿಗೆ ಬಂದಂತಹ ಸೈಟ್ ಗಳನ್ನು ರೈತರು ಅವರಿಗೆ ತಿಳಿದ ದರದಲ್ಲಿ ಸಾರ್ವಜನಿಕರಿಗೆ ಮಾರಾಟ (ಕ್ರಯ) ಮಾಡಬಹುದು. ಹಾಗೂ ರೈತರಿಗೆ ಆರ್ಥಿಕ ಪರಿಹಾರವಾಗಿ ಪ್ರತಿ ಎಕರೆಗೆ ₹5 ಲಕ್ಷದಿಂದ ₹10 ಲಕ್ಷದವರೆಗೆ ಮುಂಗಡ ನೀಡಲು ಚಿಂತನೆ ನಡೆದಿದೆ” ಎಂದು ಹೇಳಿದರು.
“ಕಡಿಮೆ ಆದಾಯ ವರ್ಗ (LIG)ಕ್ಕೆ 1 ಗುಂಟೆ, ಮಧ್ಯಮ ಆದಾಯ ವರ್ಗ (MIG)ಕ್ಕೆ 1.5 ಗುಂಟೆ ಹಾಗೂ ಹೆಚ್ಚಿನ ಆದಾಯ ವರ್ಗ (HIG)ದವರಿಗೆ 2.25 ಗುಂಟೆ ನೀಡಲು ಪ್ರಸ್ತಾವನೆ ನೀಡಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನಿಗದಿಪಡಿಸಿದ ದರದಲ್ಲಿ ಶೇ. 50ರಷ್ಟು ರಿಯಾಯಿತಿಯೊಂದಿಗೆ ಭೂಮಿಯನ್ನು ನೀಡಿ, ಮನೆಗಳನ್ನು ಕಟ್ಟಿಕೊಡಲು ಅವಕಾಶ ಮಾಡಿಕೊಡಬೇಕೆಂದು ಯೋಜಿಸಲಾಗಿದೆ. ಮನೆ ನಿವೇಶನ ಹಂಚಿಕೆಯನ್ನು ಮಂಡಳಿಯು ಲಾಟರಿ ಮೂಲಕ ಆಯ್ಕೆ ಮಾಡುತ್ತದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿರಸಿ ನಿವಾಸಿ, ನಿವೃತ್ತ ಸರ್ಕಾರಿ ನೌಕರ ಶ್ರೀರಾಮಚಂದ್ರ ಹೆಗಡೆ ಈದಿನಕ್ಕೆ ಪ್ರತಿಕ್ರಿಯಿಸಿ, “ನಾನು ನಿವೃತ್ತಿಯಾಗುವ ಮೊದಲೇ ಸೂರು ಮಾಡಿಕೊಳ್ಳುವ ಆಸೆಯಿಂದ 2010ರಲ್ಲಿ ಅರ್ಜಿ ಹಾಕಿದ್ದೆ. ಅಂದು ಕಟ್ಟಿದ್ದ ₹1500 ನಮಗೆ ದೊಡ್ಡ ಮೊತ್ತವಾಗಿತ್ತು. 15 ವರ್ಷಗಳಾದರೂ ನಿವೇಶನ ಸಿಗಲಿಲ್ಲ, ಹಣವೂ ವಾಪಸ್ ಬರಲಿಲ್ಲ. ಈಗ ಹೊಸ ಪ್ರಸ್ತಾವನೆ ತರುತ್ತೇವೆ ಎನ್ನುತ್ತಾರೆ. ಆದರೆ, ಮೊದಲು ನಮ್ಮ ಹಳೆಯ ಅರ್ಜಿದಾರರ ಕತೆಗೆ ಯಾವ ಗತಿ ಕರುಣಿಸುತ್ತಾರೆ ಎಂಬ ಸ್ಪಷ್ಟತೆ ಬೇಕು. ಆ ಹಣವನ್ನು ಸರ್ಕಾರ ದುರುಪಯೋಗ ಮಾಡಿಕೊಂಡಂತೆ ಅನಿಸುತ್ತಿದೆ. ಬ್ಯಾಂಕ್‌ನಲ್ಲಿ ಇಟ್ಟಿದ್ದರೆ ಬಡ್ಡಿಯಾದರೂ ಸಿಗುತ್ತಿತ್ತು. ಹಿರಿಯ ಜೀವಗಳು ಕಮರಿ ಹೋದ ಮೇಲೆ ಈ ನಿವೇಶನ ಯಾರಿಗೆ ಬೇಕು? ಈ ಬಾರಿ ಅಧಿಕಾರಿಗಳು ಕೇವಲ ಭರವಸೆ ನೀಡದೆ, ಒಂದು ಸ್ಪಷ್ಟ ಕಾಲಮಿತಿ ನೀಡಿ ಕೆಲಸ ಮುಗಿಸಬೇಕು. ಇಲ್ಲವಾದರೆ, ಸರ್ಕಾರಿ ಕಚೇರಿಗಳ ಮೇಲೆ ವಿಶ್ವಾಸವೇ ಹೋಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ | ಯಲ್ಲಾಪುರದಲ್ಲಿ ಟೆಕ್ ಪಾರ್ಕ್ ನಿರ್ಮಾಣಕ್ಕೆ ಸಚಿವ ಎಂ.ಬಿ. ಪಾಟೀಲ್‌ಗೆ ನಿಯೋಗದ ಮನವಿ
ಮುಂಡಗೋಡದ ಕಾಲಿ ಕಾರ್ಮಿಕರಾದ ಶಕೀಲಾ ಬಾನು ಮಾತನಾಡಿ, “ನಾವು ಬಡವರು, ದಿನಗೂಲಿ ಮಾಡಿ ಬದುಕುವವರು. ನಮ್ಮಂತವರಿಗೆ ಕಡಿಮೆ ಬೆಲೆಯಲ್ಲಿ ಒಂದು ಸಣ್ಣ ಜಾಗ ಸಿಕ್ಕರೆ ಮನೆ ಕಟ್ಟಿಕೊಳ್ಳಬಹುದೆಂದು ಆಸೆಪಟ್ಟು ₹300 ಕಟ್ಟಿದ್ದೆವು. ಅದು ನಮಗೆ ಒಂದು ದಿನದ ಕೂಲಿಗಿಂತ ಜಾಸ್ತಿ ಇತ್ತು. ಆದರೆ, ಆ ಹಣ ಹೋಗಿ 10 ವರ್ಷಗಳೇ ಆಯ್ತು. ನಮ್ಮಂತ ಬಡವರಿಂದ ಹಣ ವಸೂಲಿ ಮಾಡಿ, ಸರ್ಕಾರ ದೊಡ್ಡವರಂತೆ ಸುಮ್ಮನೆ ಕೂತಿದೆ. ಈಗ ಜಾಗ ಕೊಡುತ್ತೇವೆ ಎನ್ನುವುದು ಖುಷಿಯ ವಿಚಾರ. ಆದರೆ, ಮೊದಲು ಹಣ ಕಟ್ಟಿದ ನಮಗೇನು ನ್ಯಾಯ? ನಮ್ಮ ಹಣಕ್ಕೆ ಬಡ್ಡಿ ಸೇರಿಸಿ ಕೊಡುತ್ತಾರೋ ಅಥವಾ ಬೇಗನೆ ನಮಗೆ ಜಾಗ ನಿಗದಿ ಮಾಡುತ್ತಾರೋ? ರಾಜಕಾರಣಿಗಳು, ಅಧಿಕಾರಿಗಳು ದಯವಿಟ್ಟು ಬಡವರ ಕನಸುಗಳ ಜೊತೆ ಆಟ ಆಡಬೇಡಿ. ಈಗಲಾದರೂ ಮಾತು ಕೊಟ್ಟಂತೆ ನಡೆದುಕೊಳ್ಳಿ” ಎಂದರು.
ಪ್ರಸ್ತುತ, ಕಾರವಾರ, ಕುಮಟಾ ಮತ್ತು ಉತ್ತರ ಕನ್ನಡ ಭಟ್ಕಳ ತಾಲ್ಲೂಕುಗಳಲ್ಲಿ ರೈತರೊಂದಿಗೆ ಮಾತುಕತೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಬಹುತೇಕ ರೈತರು ಈ ಹೊಸ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ನಂತರ ಈ ಯೋಜನೆಗಳನ್ನು ಅಧಿಕೃತವಾಗಿ ಘೋಷಿಸಲಾಗುವುದು. ರೈತರು ಯೋಜನೆಗೆ ಸ್ವ ಇಚ್ಛೆಯಿಂದ ಭೂಮಿ ನೀಡುವುದಾದರೆ ಬೆಂಗಳೂರಿನ ಕಾವೇರಿ ಭವನದಲ್ಲಿರುವ ಕರ್ನಾಟಕ ಗೃಹ ಮಂಡಳಿ ಹಾಗೂ ಕಾರವಾರ ವಿಭಾಗದ ಇಲಾಖಾ ಕಿರಿಯ ಅಭಿಯಂತರನ್ನು ನೇರವಾಗಿ ಸಂಪರ್ಕಿಸುವಂತೆ ಇಲಾಖೆಯ ಎಇಇ ಜ್ಯೋತಿ ನಾಜರೆ ಅವರು ಮಾಹಿತಿ ನೀಡಿದರು.
ದಶಕಗಳ ಹಿಂದೆ ಸರ್ಕಾರವೇ ಕೊಟ್ಟಿದ್ದ ಸ್ವಂತ ಸೂರಿನ ಕನಸು ಈಗಲಾದರೂ ಈಡೇರಲಿ. ಶುಲ್ಕದ ಹೆಸರಲ್ಲಿ ಕಟ್ಟಿಸಿಕೊಂಡ ಹಣ ಹಿಂತಿರುಗಿಸದೇ ಇದ್ದರೂ ಕಡೆಪಕ್ಷ ನಿವೇಶನವನ್ನಾದರೂ ನೀಡಲಿ. ಇಲ್ಲವಾದಲ್ಲಿ ಸರ್ಕಾರಿ ಸಂಸ್ಥೆಗಳು ತಮ್ಮ ಮೇಲಿರುವ ಅಷ್ಟೋ ಇಷ್ಟೋ ನಂಬಿಕೆಯನ್ನೂ ಕಳೆದುಕೊಳ್ಳುತ್ತವೆ ಎನ್ನುತ್ತಾರೆ ಸಾರ್ವಜನಿಕರು.




