ಗುರುಗಳ ಆಗಮನವು ವೈಕಂ ಹೋರಾಟಕ್ಕೆ ಹೆಚ್ಚು ಶಕ್ತಿ ತುಂಬಿತು. ಹೆಚ್ಚು ಖ್ಯಾತಿಯನ್ನು ಪಡೆದು ಆ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯಿತು. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ 1925 ಮಾರ್ಚ್ ತಿಂಗಳಲ್ಲಿ ಮಹಾತ್ಮ ಗಾಂಧೀಜಿಯವರು ಆಗಮಿಸಿ ವೈಕಂ ಸತ್ಯಾಗ್ರಹದಲ್ಲಿ ಭಾಗವಹಿಸಿ ಹೋರಾಟಗಾರರಿಗೆ ಹುರಿದುಂಬಿಸಿದರು.
1924-25ರಲ್ಲಿ ಮಲಬಾರ್ ವಿಪ್ಲವದ ಕಾವು ಇನ್ನೂ ಆರಿರಲಿಲ್ಲ. ಬ್ರಿಟಿಷರ ವಿರುದ್ಧ ದಂಗೆಗಳು ಅಲ್ಲಲ್ಲಿ ಭುಗಿಲೇಳುತ್ತಿದ್ದವು. ಮಹಾತ್ಮ ಗಾಂಧೀಜಿಯವರ ಮುಂದಾಳತ್ವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹಿಂದು ಮುಸ್ಲಿಮರು ಜೊತೆಯಾಗಿ ಸೆಟೆದು ನಿಂತಿದ್ದರು. ನಾವೆಲ್ಲರೂ ಒಂದು ಎಂಬ ಭಾವನೆ ಮೂಡುತ್ತಿದ್ದ ಕಾಲದಲ್ಲಿ ತಿರುವಾಂಕೂರಿನ ಪುರಾತನ ವೈಕಂ ಶಿವಾಲಯದ ಪಕ್ಕದ ಮಾರ್ಗದಲ್ಲಿ ನಡೆಯವ ಅವಕಾಶಕ್ಕಾಗಿ ಈಳವರು, ಹರಿಜನಾದಿ ಹಿಂದೂಗಳು ಸತ್ಯಾಗ್ರಹ ಕುಳಿತಿದ್ದರು. ಇದು ಸ್ವತಂತ್ರ ಪೂರ್ವ ಭಾರತದಲ್ಲಿ ಜಾತೀಯತೆಯಲ್ಲಿ ನರಳುತ್ತಿದ್ದ ಕೆಳವರ್ಗದ ಜನರ ಕರಾಳತೆಯ ಒಂದು ಚಿತ್ರಣವಾಗಿತ್ತು.
ತೆಕ್ಕನ್ ಕಾಶಿ (ದಕ್ಷಿಣ ಕಾಶಿ) ಎಂದು ಕರೆಯಲ್ಪಡುವ ವೈಕಂ ಶಿವ ದೇವಾಲಯವು ಕೊಟ್ಟಾಯಂ ತಾಲ್ಲೂಕಿನ ವೆಂಬನಾಡ್ ಪ್ರದೇಶದ ವೈಕಂನಲ್ಲಿದೆ. ಊರಿನ ಮುಖ್ಯ ದಾರಿ ವೈಕಂ ಶಿವಾಲಯವನ್ನು ಸುತ್ತುವರಿದು ಹೋಗುತ್ತದೆ. ಆ ಮಾರ್ಗಗಳಲ್ಲಿ ಅವರ್ಣರು ನಡೆದರೆ ಮೈಲಿಗೆ ಆಗುತ್ತದೆ ಮತ್ತು ಈಳವರಾದಿಯಾಗಿ ಕೆಳಜಾತಿಯವರು ದೇವಾಲಯದ ಎದುರಿನ ಮಾರ್ಗದಲ್ಲಿ ನಡೆಯುವುದು ಕೇರಳದ ಅಂದಿನ ವರ್ಣಾಶ್ರಮ ನೀತಿ ಮತ್ತು ಕಾನೂನಿನ ವಿರುದ್ಧವಾಗಿತ್ತು. 1905 ರಿಂದಲೇ ಈಳವರು ವೈಕಂ ಶಿವಾಲಯದ ಎದುರಿನ ಮಾರ್ಗದಲ್ಲಿ ನಡೆಯುವ ಹಕ್ಕಿಗಾಗಿ ಸರಕಾರವನ್ನು ಒತ್ತಾಯಿಸುತ್ತಲೇ ಇದ್ದರು. ಬ್ರಿಟಿಷರು ಮತ್ತು ಮೇಲ್ವರ್ಗದ ಒಳ ಒಪ್ಪಂದದಿಂದಾಗಿ ಹಲವು ಬಾರಿ ಹಕ್ಕು ನಿರಾಕರಿಸಲ್ಪಟ್ಟಿತ್ತು ಮತ್ತು ಅವರು ನಿರಂತರ ಶೋಷಣೆಗೆ ಒಳಪಟ್ಟಿದ್ದರು
“ಅಸ್ಪೃಶ್ಯತೆ ಹಿಂದೂಗಳಿಗೆ ಶಾಪವಾಗಿದೆ” ಎಂದು ಗಾಂಧೀಜಿಯವರು ಅಸ್ಪೃಶ್ಯತೆಯ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ರಾಷ್ಟ್ರದಾದ್ಯಂತ ನಿರಂತರವಾಗಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಕೇರಳದಲ್ಲಿ ಅಸ್ಪೃಶ್ಯರ ಮೇಲಾಗುವ ಅನ್ಯಾಯವನ್ನು, ಜಾತಿ ನಿಂದನೆಯನ್ನು ಇಲ್ಲವಾಗಿಸಲು ಅವರಿಗೆ ಹಕ್ಕನ್ನು ನೀಡಲು ಕಾಂಗ್ರೆಸಿನ ಮೂಲಕ ಈ ಚಳವಳಿಯನ್ನು ಹುಟ್ಟು ಹಾಕಬೇಕೆಂಬುವುದು ಸರ್ದಾರ್ ಕೆ. ಎಂ. ಪಣಿಕ್ಕರ್ ಅವರ ಯೋಜನೆಯಾಗಿತ್ತು. ಅದಕ್ಕಾಗಿ ಮಹಾತ್ಮ ಗಾಂಧಿಯ ಒಪ್ಪಿಗೆಯನ್ನು ಪಡೆದರು. ಕಾಂಗ್ರೆಸ್ ವೈಕಂ ಸತ್ಯಾಗ್ರಹಕ್ಕೆ ಪೂರ್ಣ ಸಹಕಾರವನ್ನು ಘೋಷಿಸಿತು.

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗದ ಸದಸ್ಯರು ಕಾಂಗ್ರೆಸಿನೊಂದಿಗೆ ಸೇರಿ ಈ ಚಳವಳಿಗೆ ಹೊಸ ರೂಪ ಕೊಟ್ಟರು. 1924ರಲ್ಲಿ ಗುರುಗಳು ಸತ್ಯಾಗ್ರಹ ಸ್ಥಳಕ್ಕೆ ಸಂದರ್ಶನ ಮಾಡಿ ಆಶೀರ್ವದಿಸಿದ್ದರು. ಅದಕ್ಕಾಗಿ ವೆಲ್ಲೂರು ಮಠವನ್ನು ಆರಂಭದಿಂದಲೇ ಬಿಟ್ಟು ಕೊಟ್ಟಿದ್ದರು. ಅನಂತರ ಅದು ಪ್ರಧಾನ ಕಚೇರಿಯಾಯಿತು. ಸತ್ಯಾಗ್ರಹಕ್ಕೆ ಒಂದು ಸಾವಿರ ರೂಪಾಯಿಗಳನ್ನು ದಾನ ಕೊಟ್ಟರಲ್ಲದೆ ದಾನ ಪೆಟ್ಟಿಗೆಯೊಂದನ್ನು ಶಿವಗಿರಿಯಲ್ಲಿ ಇಟ್ಟರು.
ಗುರುಗಳ ಆಗಮನವು ವೈಕಂ ಹೋರಾಟಕ್ಕೆ ಹೆಚ್ಚು ಶಕ್ತಿ ತುಂಬಿತು. ಹೆಚ್ಚು ಖ್ಯಾತಿಯನ್ನು ಪಡೆದು ಆ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆಯಿತು. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ 1925 ಮಾರ್ಚ್ ತಿಂಗಳಲ್ಲಿ ಮಹಾತ್ಮ ಗಾಂಧೀಜಿಯವರು ಆಗಮಿಸಿ ವೈಕಂ ಸತ್ಯಾಗ್ರಹದಲ್ಲಿ ಭಾಗವಹಿಸಿ ಹೋರಾಟಗಾರರಿಗೆ ಹುರಿದುಂಬಿಸಿದರು. ಆ ಸಂದರ್ಭದಲ್ಲಿ ನಾರಾಯಣ ಗುರುವಿನ ಮಹತ್ಕಾರ್ಯಗಳ ಬಗೆಗೆ ತಿಳಿದಿದ್ದ ಗಾಂಧೀಜಿ ಅವರ ಸಂದರ್ಶನ ಮಾಡಬೇಕೆಂದು ಇಚ್ಚೆ ವ್ಯಕ್ತಪಡಿಸಿದರು. ವೈಕಂ ಸತ್ಯಾಗ್ರಹ ವಿಖ್ಯಾತಿಗೆ ಕಾರಣಕರ್ತರಾದ ನಾರಾಯಣ ಗುರುವಿನ ಸನ್ನಿಧಿ ಶಿವಗಿರಿಗೆ ಬಂದು ಗುರುಗಳನ್ನು ಸಂದರ್ಶಿಸಿದರು.
1925ರಲ್ಲಿ ಗಾಂಧಿ ಮತ್ತು ಗುರುಗಳ ನಡುವೆ ನಡೆದ ಸಂಭಾಷಣೆಗೆ 2025 ಇದೀಗ ಶತಮಾನದ ಸಂಭ್ರಮ.
ಶಿಷ್ಯ ಎ.ಕೆ. ಗೋವಿಂದ ದಾಸರ ಮನೆಯನ್ನು ಗಾಂಧೀಜಿಗೆ ಉಳಿದುಕೊಳ್ಳಲು ಸಜ್ಜುಗೊಳಿಸಿದರು.
ಗಾಂಧೀಜಿಯವರೊಂದಿಗೆ ಇ.ವಿ. ರಾಮಸ್ವಾಮಿ ನಾಯ್ಕರ್, ಮಹಾದೇವ ದೇಸಾಯಿ, ಗಾಂಧೀಜಿಯ ಮಗ ರಾಮದಾಸ್ ಗಾಂಧಿಯವರೂ ಇದ್ದರು. ಈ ಮಹಾಪುರುಷರಿಬ್ಬರ ಸಂಭಾಷಣೆಯನ್ನು ಎನ್. ಕುಮಾರನ್ ಅನುವಾದ ಮಾಡಿಕೊಟ್ಟರು.
ಗಾಂಧಿ ಮತ್ತು ಗುರುವಿನ ಸಂಭಾಷಣೆ
ಗಾಂಧೀಜಿ – ಹಿಂದೂ ಧರ್ಮ ಗ್ರಂಥಗಳಲ್ಲಿ ಅಸ್ಪೃಶ್ಯತೆಯ ಆಚರಣೆಗಳ ಉಲ್ಲೇಖ ಏನಾದರೂ ಇದೆಯೇ?
ಗುರು – ಇಲ್ಲ.
ಗಾಂಧೀಜಿ –ಅಸ್ಪೃಶ್ಯತಾ ನಿವಾರಣೆಗಾಗಿ ವೈಕಂ ನಲ್ಲಿ ನಡೆಯುತ್ತಿರುವ ಸತ್ಯಾಗ್ರಹದ ಬಗೆಗೆ ಸ್ವಾಮಿಗಳಿಗೆ ಏನಾದರೂ ಭಿನ್ನಾಭಿಪ್ರಾಯಗಳಿವೆಯೋ?
ಗುರು – ಇಲ್ಲ
ಗಾಂಧೀಜಿ – ಅದರಲ್ಲಿ ಏನಾದರೂ ಬದಲಾವಣೆಯ ಅವಶ್ಯಕತೆ ಇದೆಯೇ?
ಗುರು – ಇಲ್ಲ. ಎಲ್ಲವೂ ಸರಿಯಾಗಿಯೇ ಆಗುತ್ತಿವೆ ಎಂದು ನಾವು ಕೇಳಿದ್ದೇವೆ.
ಗಾಂಧೀಜಿ – ಅಹಿಂಸೆ ಮತ್ತು ಸತ್ಯಾಗ್ರಹದಿಂದ ಅಧಿಕಾರದ ಉಪಲಬ್ಬಿ ಸಂಭವ ಇಲ್ಲವೆಂದು ಕೆಲವು ಜನರ ಅಭಿಪ್ರಾಯ. ಅವರ ಅಭಿಮತದಂತೆ ಅದಕ್ಕೆ ಹಿಂಸೆ ಮತ್ತು ಸಂಘರ್ಷದ ಅಗತ್ಯವಿದೆ. ಈ ವಿಷಯದಲ್ಲಿ ತಮ್ಮ ಅಭಿಪ್ರಾಯಗಳೇನು?
ಗುರು- ನಾವು ಹಿಂಸೆಯನ್ನು ಉಚಿತ ಎಂದು ತಿಳಿಯುವುದಿಲ್ಲ.
ಗಾಂಧೀಜಿ – ದಲಿತ ವರ್ಗದ ಉದ್ದಾರಕ್ಕಾಗಿ, ಅಸ್ಪೃಶ್ಯತೆಯ ಉಚ್ಚಾಟನೆಯ ಅತಿರಿಕ್ತವಾಗಿ, ಅವರಿಗೆ ಇನ್ನು ಏನೇನು ಉಪಲಬ್ಬಿ ಆಗಬೇಕು?
ಗುರು – ಅವರಿಗೆ ಆರ್ಥಿಕ ಮತ್ತು ಶಿಕ್ಷಣದ ಪರ್ಯಾಪ್ತ ಸುವಿಧಗಳು ಸಿಗಬೇಕು. ಸಹಪಂಕ್ತಿ ಭೋಜನ ಏವಂ ಅಂತರ್ಜಾತಿ ವಿವಾಹಗಳು ಪ್ರಸ್ತುತದ ಅನಿವಾರ್ಯಗಳಲ್ಲ. ಉನ್ನತಿಗಾಗಿ ಅವರಿಗೆ ಸವರ್ಣರೊಂದಿಗೆ ಸಮಾನ ಅಧಿಕಾರ ಪ್ರಾಪ್ತವಾಗಬೇಕು.
ಗಾಂಧೀಜಿ – ಸತ್ಯಾಗ್ರಹದಿಂದ ಏನೂ ಪ್ರಯೋಜನ ಇಲ್ಲವೆಂದು ಕೆಲವು ಜನರ ಮತವಾಗಿದೆ. ಅಧಿಕಾರದ ಉಪಲಬ್ಬಿಗಾಗಿ ಶಕ್ತಿ ಪ್ರಯೋಗ ಅಗತ್ಯವಿದೆ. ಈ ವಿಚಾರದಲ್ಲಿ ತಮ್ಮ ಅಭಿಪ್ರಾಯವೇನು?
ಗುರು- ಬಲಪ್ರಯೋಗ ಒಳ್ಳೆಯದಲ್ಲ.
ಗಾಂಧೀಜಿ – ಬಲಪ್ರಯೋಗದ ಕುರಿತಾದ ಪ್ರಮಾಣ ಹಿಂದೂ ಶಾಸ್ತ್ರಗಳಲ್ಲಿ ಉಪಲಬ್ಧ ಇವೆಯೆ?
ಗುರು – ರಾಜ ಮತ್ತು ಸಾಮರ್ಥ್ಯವಂತರು ಬಲ ಪ್ರಯೋಗ ಮಾಡುತ್ತಿದ್ದುದಕ್ಕೆ ಪುರಾಣಗಳಲ್ಲಿ ಉಲ್ಲೇಖ ಇವೆ. ಹೀಗಿದ್ದೂ ಬಲ ಪ್ರಯೋಗ ಉಚಿತ ಅಲ್ಲವೆಂದು ಹೇಳಲಾಗಿದೆ.
ಗಾಂಧೀಜಿ – ಧರ್ಮ ಪರಿವರ್ತನೆಯಿಂದ ಸ್ವತಂತ್ರ ಪ್ರಾಪ್ತಿ ಸುಲಭವಾಗುತ್ತದೆ ಎಂದು ಕೆಲವರ ಅಭಿಪ್ರಾಯವಿದೆ. ಈ ವಿಚಾರದಲ್ಲಿ ತಾವು ಸಹಮತ ಇದ್ದಿರಾ?
ಗುರು – ಧರ್ಮ ಪರಿವರ್ತಿತರಾದವರಿಗೆ ಸಮಾಜದಲ್ಲಿ ಅಪೇಕ್ಷೆಗಿಂತಲೂ ಅಧಿಕ ಸುವಿಧಗಳು ಲಭ್ಯವಾಗುತ್ತವೆ. ಇದನ್ನು ನೋಡಿ ಜನರು ಧರ್ಮ ಪರಿವರ್ತನೆಗೆ ಆಕರ್ಷಿತರಾಗುತ್ತಾರೆ. ಇದರಲ್ಲಿ ಅವರದ್ದೇನೂ ದೋಷವಿಲ್ಲ.
ಗಾಂಧೀಜಿ – ಆಧ್ಯಾತ್ಮಿಕ ಸಫಲತೆ ಹಾಗೆಯೇ ಮೋಕ್ಷಪ್ರಾಪ್ತಿ ಹೇತು ಹಿಂದೂ ಧರ್ಮ ಪರ್ಯಾಪ್ತವಾಗಿಲ್ಲವೇ?
ಗುರು – ಅನ್ಯ ಧರ್ಮಗಳಲ್ಲೂ ಮೋಕ್ಷ ಪ್ರಾಪ್ತಿಯ ಸಾಧನಗಳು ವಿದ್ಯಮಾನವಾಗಿವೆ.
ಗಾಂಧೀಜಿ – ಅನ್ಯ ಧರ್ಮಗಳ ಸಂಬಂಧದ ಬಗೆಗಲ್ಲ. ಹಿಂದೂ ಧರ್ಮ ಅದಕ್ಕೆ ಪರ್ಯಾಪ್ತವಾಗಿದೆಯೇ? ಇಲ್ಲವೇ?
ಗುರು – ಹಿಂದೂ ಧರ್ಮ ಪರ್ಯಾಪ್ತವಾಗಿದೆ. ಪರಂತು ಲೌಕಿಕ ಸ್ವಾತಂತ್ರದ ಪ್ರತಿ ಜನ ಅಧಿಕ ವ್ಯಗ್ರರಾಗಿದ್ದಾರೆ.
ಗಾಂಧೀಜಿ – ಅಸ್ಪೃಶ್ಯತೆಯಿಂದ ಉತ್ಪನ್ನವಾದ ಗುಲಾಮಗಿರಿಯಲ್ಲಿದೆ ಇದಕ್ಕೆ ಕಾರಣ. ಆಧ್ಯಾತ್ಮಿಕ ಮೋಕ್ಷ ಪ್ರಾಪ್ತಿಗೆ ಧರ್ಮ ಪರಿವರ್ತನೆ ಅಗತ್ಯವೆ?
ಗುರು – ಅಲ್ಲ
ಗಾಂಧೀಜಿ – ಭೌತಿಕ ಸ್ವಾಧೀನತೆ ಮತ್ತು ಸುಖಕ್ಕಾಗಿ ನಾವು ನಿರಂತರ ಪ್ರಯಾಸ ಮಾಡುತ್ತಿದ್ದೇವೆ.
ಅದು ಸಫಲವಾಗುವುದೆ?
ಗುರು – ಸಫಲ ಆಗುವುದು. ಆದರೆ ಅದರ ಪೂರ್ಣ ಫಲ ಪ್ರಾಪ್ತಿಗೆ ಮಹಾತ್ಮ ಜೀಯವರು ಪುನಃ ಜನ್ಮ ಪಡೆಯಬೇಕಾದೀತು.
ಗಾಂಧೀಜಿ – ಮುಗುಳ್ನಗುತ್ತ ನನ್ನ ಜೀವಿತಾವಧಿಯಲ್ಲಿಯೇ ಅದು ಸಫಲವಾಗುವುದೆಂದು ವಿಶ್ವಾಸ ನನ್ನದು. ಪತಿತ ವರ್ಗಗಳೊಳಗೂ ಅಸ್ಪೃಶ್ಯತೆ ವಿದ್ಯಮಾನವಿದೆ. ಸ್ವಾಮಿಗಳಿಂದ ಸ್ಥಾಪಿತವಾದ ದೇವ ಮಂದಿರಗಳಲ್ಲಿ ಎಲ್ಲರಿಗೂ ಪ್ರವೇಶ ಸಿಗುತ್ತಿದೆಯೇ?
ಗುರು – ಎಲ್ಲರಿಗೂ ಸಮಾನ ಭಾವದಿಂದ ಪ್ರವೇಶ ಕೊಡಲ್ಪಟ್ಟಿದೆ. ಪತಿತ ವರ್ಗದ ಮಕ್ಕಳಿಗೂ ಅನ್ನ ವರ್ಗದ ವಿದ್ಯಾರ್ಥಿಗಳೊಂದಿಗೆ ಇದ್ದುಕೊಂಡು ಶಿಕ್ಷಣ ಪಡೆಯುವ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ಹಾಗೆಯೇ ಅವರಿಗೆ ಪೂಜಾ-ಪಾಠಗಳಲ್ಲಿ ಭಾಗಿಗಳಾಗಲು ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ.
ಗಾಂಧೀಜಿ – ತುಂಬ ಒಳ್ಳೆಯ ವಿಚಾರ.
ಇಬ್ಬರೂ ಹಿಂದೂ ಧರ್ಮದಲ್ಲಿಯ ಪ್ರಚಲಿತ ಜಾತಿ-ಪಂಥ, ವರ್ಣ ಭೇದಗಳ ಬಗೆಗೆ ವಿಸ್ತಾರವಾಗಿ ಮಾತಾಡಿದರು. ಗುರುದೇವರ ಸಂದೇಶವಾದ ‘ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಮಾನವರಿಗೆ” ಎನ್ನುವ ವಿಚಾರದಲ್ಲಿ ಗಾಂಧೀಜಿ ತಮ್ಮ ಸಂದೇಹ ಪರಿಹರಿಸಿಕೊಳ್ಳಲು ಅನೇಕ ಜಾತಿ, ಸಮುದಾಯಗಳಿರುವ ಹಿಂದೂ ಧರ್ಮದಲ್ಲಿ ಒಂದೇ ಜಾತಿಯ ಭಾವನೆಗಳ ಸಂಭವ ಹೇಗೆ ಸಾಧ್ಯ? ಎಂದು ತಮ್ಮ ವಿಚಾರವನ್ನು ವ್ಯಕ್ತಪಡಿಸುತ್ತ ಅಲ್ಲಿದ್ದ ಮಾವಿನ ಮರವನ್ನು ತೋರಿಸುತ್ತ ಗಾಂಧೀಜಿ ಆ ಮರದಲ್ಲಿ ಎಲ್ಲಾ ಎಲೆಗಳು ವಿಭಿನ್ನ ಆಕಾರದವುಗಳಾಗಿವೆ. ಅವೆಲ್ಲವೂ ಸಮಾನವಾಗುವವೇ? ಎಂದ ಗಾಂಧೀಜಿಯ ಸಂದೇಹವನ್ನು ನಿವಾರಣೆ ಮಾಡುತ್ತ ಗುರುದೇವರು “ಬಾಹ್ಯ ಆಕಾರದಲ್ಲಿ ಅವು ಭಿನ್ನ-ಭಿನ್ನವಾಗಿ ತೋರುತ್ತವೆ. ಆದರೂ ಅವುಗಳ ಪ್ರತ್ಯೇಕ ಎಲೆಗಳ ರಸಸ್ವಾದವು ಒಂದೇ ಆಗಿರುವುದು” ಈ ರೀತಿಯಲ್ಲಿ ಮಾನವ ಜಾತಿ ವಿಭಿನ್ನ ಭಾವನೆಗಳಿಂದ ಗ್ರಸ್ತವಾಗಿದ್ದರೂ ಒಬ್ಬನೇ ಕರ್ತನ ಸಂತಾನವಾಗಿದ್ದಾರೆ. ಗುರುಗಳ ವಿಚಾರದಿಂದ ಗಾಂಧೀಜಿ ಸಂತುಷ್ಟರಾದರು. ಪ್ರಸ್ತುತ ಸಮಾಜದ ಜಾತಿ ಭೇದಗಳನ್ನು ನಿವಾರಿಸದೇ ಪೂರ್ಣ ಸ್ವರೂಪದ ಸ್ವಾತಂತ್ರ್ಯ ಪ್ರಾಪ್ತಿ, ಅಸಂಭವ ಎಂದು ಗುರುಗಳು ಸ್ಪಷ್ಟಪಡಿಸಿದರು. (ಶ್ರೀ ನಾರಾಯಣ ಗುರು ವಿಜಯ ದರ್ಶನ – ಬಾಬು ಶಿವ ಪೂಜಾರಿ ಪುಟ : 388 -390)
**
ಆ ದಿನ ತಿರುವನಂತಪುರಂ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಗಾಂಧೀಜಿ ಹೇಳಿದರು, “ಮನೋಜ್ಞವಾದ ತಿರುವಾಂಕೂರ್ ರಾಜ್ಯವನ್ನು ಸಂದರ್ಶಿಸುವ ಅವಕಾಶದೊಂದಿಗೆ, ಪುಣ್ಯಪುರುಷ ಶ್ರೀನಾರಾಯಣ ಗುರುದೇವರ ದರ್ಶನ ಪಡೆದು ನಾನು ಧನ್ಯನಾದೆ” ಎಂದು. ನಂತರ ಮಾತನಾಡಿದ ನಾರಾಯಣ ಗುರು “ನೀವೆಲ್ಲರೂ ಗಾಂಧೀಜಿಯ ವಿಚಾರಗಳನ್ನು ಅನುಷ್ಠಾನ ಮಾಡಬೇಕು” ಎಂದು ಸಾರ್ವಜನಿಕ ಕರೆ ಕೊಟ್ಟರು. ಈ ಕರೆ ಕೇರಳದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಮುನ್ನುಡಿ ಬರೆಯಿತು.
(ಆಕರ ಗ್ರಂಥ: ಶ್ರೀ ನಾರಾಯಣ ಗುರು ವಿಜಯ ದರ್ಶನ ಬಾಬು ಶಿವ ಪೂಜಾರಿ ಮತ್ತು ಲೇಖನಗಳು)





