ಬಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್ ಸೇರಿದಂತೆ ಯಾವ ʼವುಡ್ʼಗಳೂ ಹೊರತಲ್ಲ. ಆದರೆ, ನ್ಯಾಯಾಲಯದ ಮೆಟ್ಟಿಲೇರಿದ ನಂತರ “ಗೆದ್ದವರು ಸೋತರು, ಸೋತವರು ಸತ್ತರು” ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆಯಾಳಂ ಚಿತ್ರರಂಗದಲ್ಲಿ ನಟ ದಿಲೀಪ್ ಅವರನ್ನು ಎರ್ನಾಕುಲಂ ನ್ಯಾಯಾಲಯ ಸಾಕ್ಷಿಗಳ ಕೊರತೆ ಹಾಗೂ ಅಪರಾಧ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವೈಫಲ್ಯ ಎನ್ನುವ ಹೆಸರಿನಲ್ಲಿ ನಿರಪರಾಧಿ ಎಂದು ಬಿಡುಗಡೆ ಮಾಡಿದೆ.
ಚಿತ್ರರಂಗದ ʼಸ್ತ್ರೀ ಪೀಡಕʼ ಪ್ರವೃತ್ತಿ ಇಂದಿನದೂ ಅಲ್ಲ, ನಿನ್ನೆಯದೂ ಅಲ್ಲ, ಎಂದೆಂದಿನದು. ಈ ಮುನ್ನ ಈ ಬಗ್ಗೆ ಧ್ವನಿ ಎತ್ತುವುದೇ ಅಪರಾಧ ಎನ್ನುವ ಸ್ಥಿತಿ ಇತ್ತು. ಈಗೀಗ ನೊಂದ ಕಲಾವಿದೆಯರು ಧೈರ್ಯವಾಗಿ ಧ್ವನಿ ಎತ್ತುತ್ತಿದ್ದಾರೆ. ಆದರೆ, ಪುರುಷ ಪ್ರಧಾನವಾಗಿರುವ ಈ ಚಿತ್ರರಂಗದಲ್ಲಿ ಅವರ ಧ್ವನಿಯನ್ನು ಎಲ್ಲ ಶಕ್ತಿಗಳನ್ನು ಬಳಸಿ ಹತ್ತಿಕ್ಕಲಾಗುತ್ತಿದೆ. ಇದಕ್ಕೆ ಬಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್ ಸೇರಿದಂತೆ ಯಾವ ʼವುಡ್ʼಗಳೂ ಹೊರತಲ್ಲ. ಆದರೆ, ನ್ಯಾಯಾಲಯದ ಮೆಟ್ಟಿಲೇರಿದ ನಂತರ “ಗೆದ್ದವರು ಸೋತರು, ಸೋತವರು ಸತ್ತರು” ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಮಲೆಯಾಳಂ ಚಿತ್ರರಂಗದಲ್ಲಿ ನಟ ದಿಲೀಪ್ ಅವರನ್ನು ಎರ್ನಾಕುಲಂ ನ್ಯಾಯಾಲಯ ಸಾಕ್ಷಿಗಳ ಕೊರತೆ ಹಾಗೂ ಅಪರಾಧ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವೈಫಲ್ಯ ಎನ್ನುವ ಹೆಸರಿನಲ್ಲಿ ನಿರಪರಾಧಿ ಎಂದು ಬಿಡುಗಡೆ ಮಾಡಿದೆ. ಕನ್ನಡ ಚಿತ್ರರಂಗದಲ್ಲಿಯೂ ಸರ್ಕಾರ ಮತ್ತು ಚಿತ್ರರಂಗದ ಅಂತ ಸಂಸ್ಥೆಗಳು ನಡೆದುಕೊಂಡಿರುವ, ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸದರೆ, ಕನ್ನಡ ಚಿತ್ರರಂಗ ಕೂಡ ಇದಕ್ಕೆ ಹೊರತಲ್ಲ ಎನ್ನುವುದು ಸಾಬೀತಾಗುತ್ತದೆ.
ಸುಮಾರು 43 ವರ್ಷಗಳ ಹಿಂದೆ ಅಂದರೆ 1982ರಲ್ಲಿ ಆಕೆ 17 ಶಬ್ದಗಳನ್ನು ಬರೆದಳು. ಪ್ರಪಂಚದ ಹೆಣ್ಣುಮಕ್ಕಳು ಕೂಡಲೇ ಆ 17 ಶಬ್ದಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡರು. ಆಕೆ ಕೆನಡಾ ದೇಶದ ಕಾದಂಬರಿಗಾರ್ತಿ ಮಾರ್ಗರೇಟ್ ಆಟ್ವುಡ್ (Margaret Atwood) ಈಕೆ ಕವಿ ಮತ್ತು ಪ್ರಬಂಧಗಳ ಲೇಖಕಿ ತಮ್ಮ ಕೃತಿಗಳಾದ The Handmaid́s Tale 1985) ಮೂಲಕ ವಿಶ್ವದಾದ್ಯಂತ ಪ್ರಸಿದ್ಧರಾದವರು, ಈಕೆ ಮಹಿಳೆಯರ ಹಕ್ಕುಗಳು, ಧಾರ್ಮಿಕ ಮೂಲಭೂತವಾದ ಮತ್ತು ರಾಜಕೀಯದ ಕುರಿತು ಬರೆಯುವಲ್ಲಿ ಪ್ರಮುಖ ಬರಹಗಾರ್ತಿಯಾಗಿದ್ದಾರೆ. ಮತ್ತು ಅವರು 2019ರಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತರೂ ಆದವರು. ಆಟ್ವುಡ್ ಅವರ ಕೃತಿಗಳು ಲಿಂಗ ಗುರುತು, ಸಾಮಾಜಿಕ ರಚನೆಗಳು ಮತ್ತು ಕೆನಡಾದ ಸಾಹಿತ್ಯದ ಮೇಲೆ ಕೇಂದ್ರೀಕರಿಸುತ್ತವೆ. ಅವರು ಬರೆದ Second Words ಸಾಹಿತ್ಯ, ಸಂಸ್ಕೃತಿ ಮತ್ತು ಪ್ರಭುತ್ವದ ಅಧಿಕಾರವನ್ನು ಕುರಿತು ಚರ್ಚಿಸಿದ ಪ್ರಬಂಧ. ಈಕೆ ಬರೆದ ಆ 17 ಶಬ್ದಗಳು ಸ್ತ್ರೀಸ್ವಾತಂತ್ರ್ಯ ಕುರಿತ ಚರ್ಚೆಯಲ್ಲಿ ಹಲವು ಬಾರಿ ನೆನಪಿಸಲಾಗುತ್ತಿದೆ.
ಆಕೆ ಬರೆದ 17 ಶಬ್ದಗಳು ಈ ರೀತಿ ಇವೆ; “Men are afraid that women will laugh at them ̧ women are afraid that men will kill them” (ಹೆಂಗಸರು ತಮ್ಮನ್ನು ನೋಡಿ ನಗಬಹುದು ಎಂದು ಗಂಡಸರು ಭಯಪಡುತ್ತಾರೆ. ಆದರೆ ಹೆಂಗಸರು ಈ ಗಂಡಸರು ತಮ್ಮನ್ನು ಕೊಲ್ಲುತ್ತಾರೆ ಎಂದು ಭಯಪಡುತ್ತಾರೆ) ಈ ಸಾಲುಗಳು ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹಂಬಲಿಸುವ ಮಿಲಿಯಾಂತರ ಹೆಣ್ಣುಮಕ್ಕಳ ಧ್ವನಿಯಾಯಿತು.
ಈ 17 ಶಬ್ದಗಳೇಕೆ ಮುಖ್ಯ?
ಇಲ್ಲಿ ಮಾರ್ಗರೇಟ್ ಆಟ್ವುಡ್ ಈ ಕ್ಷಣದಲ್ಲಿ ಈ ಕವಿ, ಲೇಖಕಿಯನ್ನು ನೆನಪಿಸಿಕೊಳ್ಳಲು ಕಾರಣ; ಮಲಯಾಳಂ ನಟ ದಿಲೀಪ್‌ರನ್ನು 2017ರ ನಟಿಯೊಬ್ಬರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಕೇರಳದ ಎರ್ನಾಕುಲಂ ಜಿಲ್ಲಾ ನ್ಯಾಯಾಲಯವು ಇತ್ತೀಚೆಗೆ ಖುಲಾಸೆಗೊಳಿಸಿದೆ (ನಿರ್ದೋಷಿ ಎಂದು ತೀರ್ಪು ನೀಡಿದೆ). ಏಕೆಂದರೆ ಪ್ರಾಸಿಕ್ಯೂಷನ್ ಅವರಿಗೆ ವಿರುದ್ಧ ಸಾಕ್ಷ್ಯಗಳನ್ನು ಒದಗಿಸಲು ವಿಫಲವಾಯಿತು; ಈ ತೀರ್ಪಿನೊಂದಿಗೆ ಅವರೊಂದಿಗೆ ವಿಚಾರಣೆಯಲ್ಲಿದ್ದ ಇತರ ಮೂವರು ಆರೋಪಿಗಳೂ ನಿರ್ದೋಷಿಗಳಾಗಿ ಬಿಡುಗಡೆಗೊಂಡಿದ್ದಾರೆ. ಆದರೆ, ಇನ್ನುಳಿದ ಆರು ಆರೋಪಿಗಳಿಗೆ 20 ವರ್ಷ ಕಠಿಣ ಸಜೆಯನ್ನು ವಿಧಿಸಿದೆ.
ನ್ಯಾಯಾಂಗದ ತೀರ್ಪನ್ನು ಆಧರಿಸಿ, The Association of Malayalam Movie Artists (AMMA) ನಟ ದಿಲೀಪ್ ವಿರುದ್ಧ ಇದ್ದ ಅಮಾನತು ಆಜ್ಞೆಯನ್ನು ಹಿಂತೆಗೆದುಕೊಂಡು ಮತ್ತೆ ಅವರನ್ನು ಸಂಘಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದೆ. ಹೀಗೆಂದು Film Employees Federation of Kerala (FEFKA) ನ ಪ್ರಧಾನ ಕಾರ್ಯದರ್ಶಿ ಬಿ. ಉನ್ನಿಕೃಷ್ಣನ್ ಹೇಳಿದ್ದಾರೆ.

ತೀರ್ಪಿನ ಬಗ್ಗೆ ಅಸಮಾಧಾನ
ಆದರೆ ಇದರಿಂದ ನೊಂದ ನಟಿ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಕೆಯನ್ನು ಪ್ರತಿನಿಧಿಸಿದ ವಕೀಲೆ ಮಿನಿ ಟಿ ಬಿ ಈ ತೀರ್ಪಿನ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ತೀರ್ಪಿಗೆ ನಿಧಾನವಾಗಿಯಾದರೂ, ಸಂತ್ರಸ್ತ ಕಲಾವಿದೆ ಭಾವನಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪ್ರತಿಕ್ರಿಯೆ ಎಂತಹ ಹೃದಯವಿದ್ರಾವಕವೆಂದರೆ, ದಯವಿಟ್ಟು ಈ ಸಾಲನ್ನು ಓದಿ ಅರ್ಥಮಾಡಿಕೊಳ್ಳಿ: “ಈ ತೀರ್ಪನ್ನು, ನಾನು ಇಷ್ಟು ಕಾಲ ನಾನು ಹೇಳಿದ್ದು, ಹೇಳುತ್ತಿರುವುದು, ಮುಂದೆ ಹೇಳಲಿರುವುದು ಎಲ್ಲ ಸುಳ್ಳು ಎಂದು ತಪ್ಪಿತಸ್ಥರನ್ನು ಸಮರ್ಥಿಸಿಕೊಳ್ಳುತ್ತಿದ್ದವರಿಗೆ dedicate (ಸಮರ್ಪಣೆ) ಮಾಡುತ್ತಿದ್ದೇನೆ. ಅವರೆಲ್ಲರಿಗೆ ಈಗ ಒಂದು ರೀತಿಯ ಶಾಂತಿ ಸಿಕ್ಕಿರಬಹುದು” ಎಂಥಾ ಮಾತು ಅಲ್ಲವೇ. ಕೊನೆಗೂ ಭಾವನಾಗೆ ಅನ್ನಿಸಿದ್ದು, ತನಗೆ ಆಗಿದ್ದು ಸುಳ್ಳಲ್ಲ ಎಂಬುದು ನಿರೂಪಿತವಾದ ನೆಮ್ಮದಿ ಎಂದು ಕಾಣುತ್ತದೆ.
“ಎಂಟು ವರ್ಷ, ಒಂಭತ್ತು ತಿಂಗಳು, ಇಪ್ಪತ್ಮೂರು ದಿನಗಳ ನಂತರ ನೆಲಸುರಂಗದ ಕೊನೆಯಲ್ಲಿ ಕಂಡ ಒಂದು ಬಿಸಿಲ ಕೋಲು. ಅಷ್ಟು ಕಾಲ ನಾನು ಅನುಭವಿಸಿದ ಸಂಕಟ, ನೋವು, ಅವಮಾನದ ಪಯಣದ ಒಂದು ಅಂತ್ಯ. ನನ್ನನ್ನು ಹಿಂಸೆಗೊಳಪಡಿಸಿದ ಆರು ಮಂದಿಗೆ 20 ವರ್ಷ ಜೈಲು ಸಜೆ ನ್ಯಾಯಾಲಯ ವಿಧಿಸಿದೆ. ಆದರೆ ವಿಪರ್ಯಾಸವೆಂದರೆ ಈ ಹಿಂಸೆಯ ರೂವಾರಿ ತಮ್ಮ ಪ್ರಭಾವದಿಂದ ತಮ್ಮ ಚಾರಿತ್ರ್ಯದ ಮೇಲೆ ಒಂದು ಕಪ್ಪು ಗೆರೆಯೂ ಬೀಳದಂತೆ ಪಾರಾಗಿರುವುದು ಪರಿಸ್ಥಿತಿಯ ವ್ಯಂಗ್ಯವೆನ್ನದೆ ಬೇರೆ ದಾರಿ ಇಲ್ಲ. ಈ ಪ್ರಕರಣದಲ್ಲಿ ನನ್ನ ಡ್ರೈವರ್ Accused Number one ಎಂದು ಇಂದಿಗೂ ನಂಬಿರುವುದು ಖಂಡಿತ ದುರಂತ. ಅದು ಶುದ್ಧ ಸುಳ್ಳು. ಅವರು ನನ್ನ ಡ್ರೈವರ್ ಅಲ್ಲ, ನನ್ನ ನೌಕರನೂ ಅಲ್ಲ. ಹಾಗೆಯೇ ನನಗೆ ಗೊತ್ತಿರುವಾತನೂ ಅಲ್ಲ. ಆತ ಒಬ್ಬ ಅಪರಿಚಿತ. 2016ರಲ್ಲಿನ ಚಿತ್ರವೊಂದರಲ್ಲಿ ಡ್ರೈವರ್ ಪಾತ್ರ ಮಾಡಲು ಬಂದವನು. ವಿಪರ್ಯಾಸವೆಂದರೆ ಆ ಸಂದರ್ಭದಲ್ಲಿಯೂ ಆತನನ್ನು ನಾನು ಭೇಟಿ ಮಾಡಿದ್ದು ಒಂದೋ, ಎರಡು ಬಾರಿ ಅಷ್ಟೆ. ಈ ಪ್ರಕರಣ ನಡೆಯುವ ತನಕ ಆತ ಯಾರು ಎಂಬುದೇ ನನಗೆ ಗೊತ್ತಿರಲಿಲ್ಲ. ತೀರ್ಪಿನಿಂದ ಕೆಲವರಿಗೆ ಆಶ್ಚರ್ಯವಾಗಿರಬಹುದು. ಆದರೆ ನನಗೆ ಆಶ್ಚರ್ಯವಾಗಿಲ್ಲ. 2020ರ ವೇಳೆಗೆ ಎಲ್ಲವೂ ಸರಿಯಿಲ್ಲ ಎಂಬುದು ನನಗೆ ಅರ್ಥವಾಗಿತ್ತು. Prosecutionಗೆ ಕೂಡ ಇದರ ವಾಸನೆ ಬಂದಿತ್ತು. ಒಬ್ಬ accused ವ್ಯಕ್ತಿಗೆ ಸಂಬಂಧಿಸಿದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದು ಇನ್ನೂ ಹೆಚ್ಚು ದುರ್ವಾಸನೆ ಬರುತ್ತಿತ್ತು” ಎಂದಿದ್ದಾರೆ.

ಭಾವನಾ ಅವರ ಭಾವುಕ, ಆದರೆ ಅತ್ಯಂತ ನೋವಿನ ಮಾತುಗಳು ಇಲ್ಲಿಗೆ ಮುಗಿದಿಲ್ಲ. “ವರ್ಷಗಳ ನೋವು ಸಂಕಟ, ಅವಮಾನದ ನಂತರ ನನಗಾದ ನೋವಿನ ಅರಿವೆಂದರೆ, ದೇಶದ ಕಾನೂನು, ನೆಲದ ನ್ಯಾಯದ ಎದುರು ಎಲ್ಲ ನಾಗರಿಕರು ಒಂದೇ ಎಂಬುದರಲ್ಲಿ ಯಾವುದೇ ಅರ್ಥವಿಲ್ಲ. ಸಂವಿಧಾನದಡಿಯಲ್ಲಿ ನನಗೆ ನೀಡಿರುವ ಹಕ್ಕುಗಳ ರಕ್ಷಣೆಯಾಗಿಲ್ಲ. ಆದರೆ ನನ್ನನ್ನು ನನ್ನ ಕಷ್ಟದ ಕಾಲದಲ್ಲಿ ಬೆಂಬಲಿಸಿದ, ಭರವಸೆ ನೀಡಿದ, ಹೆಗಲಿಗೆ ಹೆಗಲುಕೊಟ್ಟು ನಿಂತವರಿಗೆ ನನ್ನ ಧನ್ಯವಾದಗಳನ್ನು ಹೇಳುತ್ತಾ, ನಾನು ಹೇಳುವುದೆಲ್ಲ ಸುಳ್ಳು ಎನ್ನುತ್ತಿದ್ದವರಿಗೆ ಇನ್ನು ಮುಂದೆ ಇಂಥ ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಪ್ರಾರ್ಥಿಸುತ್ತೇನೆ. ಎಂದು ಮನವಿ ಮಾಡಿದ್ದಾರೆ.
ಇಬ್ಬಗೆಯ ಪ್ರತಿಕ್ರಿಯೆ
ಈ ಪ್ರಕರಣದ ತೀರ್ಪು ಪ್ರಕಟವಾದ ನಂತರ ಮಲೆಯಾಳಂ ಚಿತ್ರರಂಗದಲ್ಲಿ ಇಬ್ಬಗೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಘಟನೆ ಬೆಳಕಿಗೆ ಬಂದ ನಂತರ ರಚಿತವಾದ Women in Cinema Collective (WCC) ಸಂತ್ರಸ್ತ ಕಲಾವಿದೆಗೆ ಹಾಗೂ ಇತರ ಕಲಾವಿದರಿಗೆ ಬೆಂಬಲವಾಗಿ ನಿಲ್ಲುವುದಾಗಿ ಹೇಳಿರುವುದು ನಿಜಕ್ಕೂ, ಸ್ವಲ್ಪ ಸಮಾಧಾನ ತಂದಿದೆ.
ಸುಳ್ಳು ಮಾಹಿತಿ ಹರಡದಂತೆ ಮನವಿ
ಈ ಪ್ರಕರಣದ ಬಗ್ಗೆ ಮಾತನಾಡುತ್ತಿರುವ ಮಂದಿಗೆ ಸುಳ್ಳು ಮಾಹಿತಿಗಳನ್ನು ಹರಡದಂತೆ ಮನವಿ ಮಾಡಿಕೊಂಡಿರುವ ಆಕೆ, “ಈ ತೀರ್ಪಿನಿಂದ ಹಲವರಿಗೆ ಆಶ್ಚರ್ಯವಾಗಿರಬಹುದು. ಆದರೆ ನನಗೆ ಆಗಿಲ್ಲ. 2020ಕ್ಕೆ ಮೊದಲೇ ನನಗೆ ಈ ಪ್ರಕರಣದ ತನಿಖೆ ಮತ್ತು ವಿಚಾರಣೆ ದಾರಿ ತಪ್ಪುತ್ತಿದೆ ಅನ್ನಿಸತೊಡಗಿತು. ಪ್ರಕರಣ ಹೀಗೆ ದಾರಿ ತಪ್ಪುತ್ತಿರುವುದು ಪ್ರಾಸಿಕೂಷನ್ ಗೆ ಕೂಡ ಮನವರಿಕೆಯಾಗಿತ್ತು. ಅದು ಕೂಡ ಒಬ್ಬ ಆರೋಪಿಯನ್ನು ಪ್ರಶ್ನಿಸುತ್ತಿರುವ ರೀತಿಯ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿದ್ದವು. ಈ ನಡುವೆ ನಾನೂ ಸಹ ಉಚ್ಛ ನ್ಯಾಯಲಯ ಹಾಗೂ ಸರ್ವೋಚ್ಛ ನ್ಯಾಯಾಲಯದ ಬಾಗಿಲು ತಟ್ಟಿದ್ದೇನೆ. ಸ್ಥಳೀಯ ನ್ಯಾಯಾಲಯಗಳಲ್ಲಿ ನ್ಯಾಯ ದೊರಕುವ ಭರವಸೆ ನನಗಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ನನ್ನ ಎಲ್ಲ ಮನವಿಗಳನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸುತ್ತಿರುವುದನ್ನು ಗಮನಕ್ಕೆ ತಂದಿದ್ದೇನೆ. ಈ ಎಲ್ಲ ವಿವರಗಳನ್ನು ಶೀಘ್ರವಾಗಿ ಸಾರ್ವಜನಿಕವಾಗಿ ಹಂಚಿಕೊಳ್ಳುತ್ತೇನೆ” ಎಂದು ನೊಂದು ನುಡಿದಿದ್ದಾರೆ.
ನ್ಯಾಯಾಲಯದಲ್ಲಿ ನಂಬಿಕೆ ಉಳಿದಿಲ್ಲ; Memory Card ರಹಸ್ಯ
“ಈಗ ನನಗೆ ಅರ್ಥವಾಗಿರುವುದೆಂದರೆ, ಮನುಷ್ಯನ ತೀರ್ಪುಗಳು ತೀರ್ಮಾನಗಳನ್ನು ಬದಲಿಸುವುದು ಖಚಿತ ಎಂಬ ತಿಳಿವಳಿಕೆ. ಪ್ರತಿ ನ್ಯಾಯಾಲಯವೂ ಒಂದೇ ರೀತಿ ಆಲೋಚಿಸಿ, ಒಂದೇ ರೀತಿ ತೀರ್ಪು ನೀಡುತ್ತದೆ ಎಂಬ ನಂಬಿಕೆ ಈಗ ನನ್ನಲ್ಲಿ ಉಳಿದಿಲ್ಲ. ಏಕೆಂದರೆ ಅದಕ್ಕೆ ಕಾರಣ; ಇದರಲ್ಲಿ ಅತಿ ಮುಖ್ಯ ಸಾಕ್ಷಿಯೆಂದು ಪರಿಗಣಿಸಲಾದ Memory Card ನ್ಯಾಯಾಲಯದ ಸುಪರ್ದಿನಲ್ಲಿರುವಾಗಲೇ ಮೂರು ಬಾರಿ ಕಾನೂನು ಬಾಹಿರವಾಗಿ ಬಳಸಿಕೊಳ್ಳಲಾಗಿದೆ. ಇಬ್ಬರು ಪ್ರಾಸಿಕ್ಯೂಟರ್‌ಗಳು, ಪ್ರಕರಣದ ವಿಚಾರಣೆ ನಡೆದಿರುವಾಗಲೇ ನ್ಯಾಯಾಲಯದ ವಾತಾವರಣ ಪ್ರಕರಣದ ನೊಂದವರಿಗೆ ನೆರವಾಗಿರುವಂತಿಲ್ಲ. ಇಬ್ಬರೂ ಪ್ರಾಸಿಕ್ಯೂಟರ್ ಗಳು ನನಗೆ ಹೇಳಿದ್ದು, ʼಈ ನ್ಯಾಯಾಲಯದಿಂದ ನ್ಯಾಯವನ್ನು ನಿರೀಕ್ಷಿಸಬೇಡಿ, ಅದು ಒಂದು ಕಡೆಗಷ್ಟೆ ವಾಲಿ ನಿಂತಿದೆ. ತಕ್ಕಡಿಯ ಒಂದು ಭಾಗದ ತೂಕ ಯಾವುದೋ ಕಾರಣಕ್ಕೆ ಒಂದು ಕಡೆಗೆ ತೂಗುತ್ತಿದೆʼ ಎಂದು ಎಚ್ಚರಿಸಿದ್ದರು. Memory Card ನ್ನು Tampering ಮಾಡುತ್ತಿರುವ ಬಗ್ಗೆ ಹಲವು ಬಾರಿ ನಾನು ನ್ಯಾಯಾಂಗಕ್ಕೆ ಮನವಿ ಮಾಡಿದ್ದೇನೆ. ನಾನು ಎಷ್ಟು ಬಾರಿ ಕೇಳಿದರೂ, ನನಗೆ ತನಿಖಾ ವರದಿಯ ಪ್ರತಿಯನ್ನು ಕೊಡಲೇ ಇಲ್ಲ. ವಿಚಾರಣೆ ನಡೆಯುತ್ತಿರವಾಗಲೇ, ಆರೋಪಿ “ಈ ನ್ಯಾಯಾಧೀಶರನ್ನು ಯಾವುದೇ ಕಾರಣಕ್ಕೂ ಬದಲಿಸಬೇಡಿ” ಎಂದು ಮನವಿ ಸಲ್ಲಿಸಿದಾಗ ನನಗೆ ಅನುಮಾನ ಆರಂಭವಾಯಿತು.

ಪ್ರಧಾನಿಗೆ, ರಾಷ್ಟ್ರಪತಿಗೆ ಮನವಿ
ಆ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳಿಗೆ ಹಾಗೂ ರಾಷ್ಟ್ರಪತಿಗಳಿಗೆ ಮಧ್ಯ ಪ್ರವೇಶ ಮಾಡಿ ನ್ಯಾಯ ದೊರಕಿಸಿಕೊಡುವಂತೆ ನಾನು ಮನವಿ ಮಾಡಿದೆ. ಆದರೆ ಅದರಿಂದ ಯಾವುದೇ ಪರಿಣಾಮವಾಗಲಿಲ್ಲ. ಈ ವಿಚಾರಣೆ In Camera ಬೇಡ, ತೆರೆದ ನ್ಯಾಯಾಲಯ Open Court ನಲ್ಲಿಯೇ ವಿಚಾರಣೆ ನಡೆಸಿ, ಸಾರ್ವಜನಿಕರಿಗೆ ಹಾಗೂ ಮಾಧ್ಯಮಕ್ಕೆ ಸತ್ಯ ತಿಳಿಯಲಿ ಎಂದು ಬೇಡಿಕೊಂಡೆ ಅದೂ ಪರಿಣಾಮ ಬೀರಲಿಲ್ಲ” ಎಂದು ನೊಂದಾಕೆ ಅಲವೊತ್ತು ಕೊಂಡಿದ್ದಾರೆ. ಅಂತಿಮವಾಗಿ, ತನ್ನನ್ನು ಗುರಿಯಾಗಿಸಿಕೊಂಡಿರುವವರು ಇದನ್ನು ಮುಂದುವರಿಸಲಿ ಎಂದಿರುವ ಆಕೆ, “ನನ್ನ ಬೆಂಬಲಕ್ಕೆ ನಿಂತವರು ಅವರ ಪ್ರಯತ್ನವನ್ನು ಮುಂದುವರಿಸಲಿ. ಆವರು ನನಗೆ ನೀಡಿರುವ ಬೆಂಬಲಕ್ಕೆ ನಾನು ಕೃತಜ್ಞೆ” ಎಂದು ಹೇಳಿದ್ದಾರೆ.
ನೊಂದ ನಟಿಗೆ ನ್ಯಾಯ ದೊರಕಿಲ್ಲ
ಇನ್ನೂ ಆಶ್ಚರ್ಯದ ಸಂಗತಿ ಎಂದರೆ, ಹಿರಿಯ ನಟಿ, ಈ ಪ್ರಕರಣದ ಪ್ರಮುಖ ಸಾಕ್ಷಿಯೂ ಆಗಿರುವ, ದಿಲೀಪ್ ಅವರ ಮಾಜಿ ಪತ್ನಿ ಮಂಜು ವಾರಿಯರ್; “ಈ ಪ್ರಕರಣದಲ್ಲಿ ನೊಂದ ಮಹಿಳೆಗೆ ನ್ಯಾಯ ದಕ್ಕಿಲ್ಲ” ಎಂದು ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. “ತಪ್ಪು ಮಾಡಿದವರು ಶಿಕ್ಷೆಯಿಂದ ತಪ್ಪಿಸಿಕೊಂಡು ನಿರ್ಭಯವಾಗಿ ಓಡಾಡುತ್ತಿದ್ದಾರೆ. ನ್ಯಾಯಾಂಗದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ ಈ ಪ್ರಕರಣದಲ್ಲಿ ನೊಂದ ಮಹಿಳೆಗೆ ಸಂಪೂರ್ಣ ನ್ಯಾಯ ದೊರಕಿಲ್ಲ. ಅಪರಾಧದ ಪಾತ್ರಧಾರಿಗಳಿಗೆ ಶಿಕ್ಷೆಯಾಗಿದೆ. ಅಪರಾಧಕ್ಕೆ ಪ್ರೇರೇಪಿಸಿದವರು, ಅದಕ್ಕಾಗಿ ಸಂಚು ರೂಪಿಸಿದವರು ನಿರ್ಭಯವಾಗಿ ತಲೆ ಎತ್ತಿ ಓಡಾಡುತ್ತಿರುವುದು ಭೀತಿಯನ್ನು ಹುಟ್ಟಿಸುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರಿಗೂ ಶಿಕ್ಷೆಯಾದಾಗ ಮಾತ್ರ ನ್ಯಾಯ ದೊರಕಿದೆ ಎಂದು ಭಾವಿಸಬಹುದು. ನಾನು ಕೇವಲ ಈ ಒಂದು ಪ್ರಕರಣಕ್ಕೆ ಪ್ರತಿಕ್ರಿಯಿಸುತ್ತಿಲ್ಲ. ನೊಂದಿರುವ ಇಂಥ ಸಾವಿರಾರು ಹೆಣ್ಣು ಮಕ್ಕಳ ರಕ್ಷಣೆ ಮತ್ತು ಕೆಲಸ ಮಾಡಲು ಮುಕ್ತ ವಾತಾವರಣದ ನಿರ್ಮಾಣಕ್ಕಾಗಿ ಈ ಪ್ರಶ್ನೆಗಳನ್ನು ಎತ್ತುತ್ತಿದ್ದೇನೆ. ನೊಂದಿರುವ ಮಹಿಳೆಗೆ ನಾನು ಮೊದಲಿನಿಂದ ಕೊಟ್ಟುಕೊಂಡು ಬಂದಿರುವ ಬೆಂಬಲವನ್ನು ಯಾವುದೇ ಎಗ್ಗಿಲ್ಲದೆ ಮುಂದುವರಿಸಿಕೊಂಡು ಹೋಗುತ್ತೇನೆ” ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.
In Camera ವಿಚಾರಣೆ
ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ, ಹಲವು ಸಂಗತಿಗಳು ನಡೆದವು. ಇಡೀ ಪ್ರಕರಣದ ವಿಚಾರಣೆ ಒಳಾಂಗಣ (in camera) ಸ್ವರೂಪದಲ್ಲಿ ನಡೆಯಿತು. ನೊಂದ ಕಲಾವಿದೆ ಸ್ತ್ರೀ ನ್ಯಾಯಾಧೀಶರು ಬೇಕೆಂದು ಕಾರಣ ೨೦೧೯ರಲ್ಲಿ ನ್ಯಾಯಾಧೀಶರಾದ ವರ್ಗೀಸ್ ಅವರಿಂದ ವಿಚಾರಣೆ ಆರಂಭವಾಯಿತು. ಒಂದು ವರ್ಷದ ನಂತರ ಪ್ರಾಸಿಕ್ಯೂಷನ್ ಪರ ವಕೀಲರು ನ್ಯಾಯಾಧೀಶರ ವಿರುದ್ಧವೇ ಆಕ್ಷೇಪ ವ್ಯಕ್ತಪಡಿಸಿ, ಬೇರೆ ನ್ಯಾಯಾಧೀಶರು ವಿಚಾರಣೆ ನಡೆಸುವಂತೆ ಮನವಿ ಸಲ್ಲಿಸಿದರು. ಇದನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿತು. ಈ ನಡುವೆ ವಿಶೇಷ ಪ್ರಾಸಿಕ್ಯೂಟರ್ ರಾಜಿನಾಮೆ ನೀಡಿದರು. ಒಟ್ಟಾರೆಯಾಗಿ ವಿಚಾರಣೆ ಹಾಗೂ ಹೀಗೂ ನಡೆದು ಈ ರೀತಿಯ ತೀರ್ಪು ಪ್ರಕಟವಾಗಿದೆ.
ಆಂತರಿಕ ದೂರು ಸಮಿತಿ
ಆದರೆ ಈ ಪ್ರಕರಣ ಚಲನಚಿತ್ರರಂಗದಲ್ಲಿ ಹಗಲೆನ್ನದೆ, ರಾತ್ರಿಯೆನ್ನದೆ ದುಡಿಯುತ್ತಿರುವ ಹೆಣ್ಣುಮಕ್ಕಳ ಸುರಕ್ಷೆ ಕುರಿತಾದ ಚರ್ಚೆಗೆ ನಾಂದಿ ಹಾಡಿತು. ಅಷ್ಟೇ ಅಲ್ಲ ಇಡೀ ದೇಶದಲ್ಲಿ ಚಿತ್ರರಂಗದಲ್ಲಿ (Internal Complaints Committee) ರಚನೆಯ ಅಗತ್ಯವನ್ನು ಎತ್ತಿ ಹಿಡಿಯಿತು. ಜೊತೆಯಲ್ಲಿ ಹುಟ್ಟಿಗೆ ಕಾರಣವೂ ಆಯಿತು. ಜೊತೆಯಲ್ಲಿ ಸಿನಿಮಾದ ಸಾಂಸ್ಥಿಕ ಸುಧಾರಣೆಗಳತ್ತ ಸರ್ಕಾರ ಗಮನಹರಿಸುವಂತಾಯಿತು. ಹೆಣ್ಣುಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆಯನ್ನು ತನಿಖೆ ನಡೆಸಲು ಹೇಮಾ ಸಮಿತಿ ನೇಮಕವಾಗಿ, ಅದು 2024ರಲ್ಲಿ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿದಾಗ ಇತ್ತೀಚಿನ ದಿನಗಳಲ್ಲಿ ತನ್ನ ಗುಣಮಟ್ಟದ ಚಿತ್ರಗಳಿಂದ ರಾಷ್ಟ್ರವ್ಯಾಪಿ ಖ್ಯಾತಿಗಳಿಸಿದ ಮಲೆಯಾಳಂ ಚಿತ್ರರಂಗ ಭಾರೀ ಮುಜುಗರವನ್ನುಂಟು ಮಾಡಿತು. ಜೊತೆಯಲ್ಲಿ ಚಿತ್ರರಂಗದಲ್ಲಿ ಆಂತರಿಕ ದೂರು ಸಮಿತಿ (Internal Complaints Committee) ರಚಿಸುವುದು ಕಡ್ಡಾಯವಾಯಿತು.
ಹೇಮಾ ಸಮಿತಿಯ ಶಿಫಾರಸ್ಸುಗಳು
ಹೇಮಾ ಸಮಿತಿಯ ವರದಿಯ ಮುಖ್ಯಾಂಶಗಳು ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ, ತಾರತಮ್ಯ, ಶೋಷಣೆ ಮತ್ತು ಪ್ರತಿಕಾರ ಪ್ರವೃತ್ತಿಯನ್ನು ಬಹಿರಂಗಪಡಿಸಿತು. ಇದರಲ್ಲಿ ಶಕ್ತಿಯುತ ಗುಂಪು, ಕಾಸ್ಟಿಂಗ್ ಕೌಚ್ ಹಾಗೂ ಸುರಕ್ಷಿತ ವಸತಿಗಳ ಕೊರತೆಯಂಥ ಆಳವಾದ ಸಮಸ್ಯೆಗಳನ್ನು ಕುರಿತು ಚರ್ಚಿಸಿ, ಈ ಅಕ್ರಮಗಳನ್ನು ಕುರಿತು ವ್ಯವಸ್ಥಿತ ಸುಧಾರಣೆಗಳನ್ನು ಶಿಫಾರಸು ಮಾಡಿತು. ಚಿತ್ರರಂಗದಲ್ಲಿ ಪಾತ್ರಗಳನ್ನು ಪಡೆಯಲು ಅಥವಾ ಕಪ್ಪುಪಟ್ಟಿಗೆ ಸೇರಿಸುವುದನ್ನು ತಪ್ಪಿಸಲು ಮಹಿಳೆಯರ ಮೇಲೆ ಲೈಂಗಿಕ ಅನುಕೂಲಗಳನ್ನು ಒದಗಿಸುವಂತೆ ಒತ್ತಡ ಹೇರಲಾಗುತ್ತಿದೆ. ಉದ್ಯಮದಲ್ಲಿ ಕೆಲವು ಪುರುಷರ ಪ್ರಭಾವವು ಮಹಿಳೆಯರ ದೂರುಗಳನ್ನು ಹತ್ತಿಕ್ಕುತ್ತದೆ ಮತ್ತು ಆಂತರಿಕ ಸಮಿತಿಗಳ (IC) ಪರಿಣಾಮಕಾರಿತ್ವವನ್ನು ಕುಗ್ಗಿಸುತ್ತದೆ. ಮಹಿಳೆಯರಿಗೆ ಅಸುರಕ್ಷಿತ ವಸತಿಗಳನ್ನು ಒದಗಿಸುವುದು ಮತ್ತು ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯದಂತಹ ಸಮಸ್ಯೆಗಳು ಇವೆ. ದೂರು ನೀಡಿದಲ್ಲಿ ವೃತ್ತಿಜೀವನ ಹಾಳಾಗಬಹುದು ಎಂಬ ಭಯದಿಂದಾಗಿ ಮಹಿಳೆಯರು ಮುಂದೆ ಬರಲು ಹಿಂಜರಿಯುತ್ತಾರೆ ಎಂದು ಹೇಮಾ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ. POSH -The POSH Act in Kannada refers to the “Sexual Harassment of Women at Workplace (Prevention, Prohibition and Redressal) Act, 2013” (ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013).ಅಥವಾ ಲೈಂಗಿಕ ಕಿರುಕುಳ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಮತ್ತು ಸುರಕ್ಷಿತ ವಸತಿಗಳ ಲಭ್ಯತೆಯನ್ನು ಖಚಿತಪಡಿಸುವುದು ಹೇಮಾ ಸಮಿತಿಯ ಶಿಫಾರಸ್ಸುಗಳಲ್ಲಿ ಪ್ರಮುಖವಾಗಿದೆ.
ನೊಂದವರ ಪರವಾಗಿ ಸರ್ಕಾರ
ಕೊಚ್ಚಿ ನ್ಯಾಯಾಲಯದ ಈ ತೀರ್ಪು ಕೇರಳದ ಸರ್ಕಾರಕ್ಕೆ ಸಮಾಧಾನ ತಂದಿಲ್ಲ, ಈ ನ್ಯಾಯಾಲಯದ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಕಾನೂನು ಸಚಿವ ಪಿ. ರಾಜೀವ್ ಹೇಳಿದ್ದಾರೆ.
“ನಾನು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಈ ಪ್ರಕರಣದಲ್ಲಿ ನೊಂದಿರುವವರೊಂದಿಗೆ ಸರ್ಕಾರ ನಿಂತಿದೆ. ಕೆಳ ನ್ಯಾಯಾಲಯದ ಆ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು” ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಅವರನ್ನು 2017ರ ಫೆಬ್ರುವರಿಯಲ್ಲಿ ಬಂಧಿಸಲಾಗಿತ್ತು. ಈ ನಡುವೆ ಸಂತ್ರಸ್ತ ಕಲಾವಿದೆ ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ ತಮಗಾಗಿರುವ ಅನ್ಯಾಯದ ಬಗ್ಗೆ ವಿವರಣೆ ನೀಡಿದ್ದಾರೆ. ವಿಜಯನ್ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ ನಂತರ ಮುಖ್ಯಮಂತ್ರಿಗಳು, ಭಾವನಾಗೆ ಎಲ್ಲ ರೀತಿಯಲ್ಲಿಯೂ ನ್ಯಾಯ ದೊರಕಿಸಲು ಸರ್ಕಾರ ಮುಂದಾಗುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ ಎಂದು ಭಾವನಾ ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಇದರ ಜೊತೆಯಲ್ಲಿ ಎರಡನೇ ಆರೋಪಿ ಮಾರ್ಟಿನ್ ಅವರು ಸಾರ್ವಜನಿಕವಾಗಿ ಬಿಡುಗಡೆ ಮಾಡಿರುವ ವಿಡಿಯೋ ಬಗ್ಗೆ ಕೂಡ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.

ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.




