ಶತಾಯುಷಿಯಾಗಿ 114 ವರ್ಷಗಳ ಕಾಲ ಜೀವಿಸಿದ, ತಮ್ಮ ಪುಟ್ಟ ಮೂರ್ತ ಸ್ವರೂಪವನ್ನು ಕನ್ನಡಿಗರು ನೆನಪಿಟ್ಟುಕೊಳ್ಳುವಂತೆ ಬದುಕಿದವರು ಸಾಲು ಮರದ ತಿಮ್ಮಕ್ಕ. ತಮ್ಮ ಕೆಲಸಗಳ ಮೂಲಕವೇ ಪರಿಸರವಾದಿ ಎನ್ನಿಸಿಕೊಂಡಿರುವ ತಿಮ್ಮಕ್ಕ, ರಾಮನಗರ ಜಿಲ್ಲೆಯ ಹುಲಿಕಲ್ ಮತ್ತು ಕಡೂರು ನಡುವೆ 4.5 ಕಿ.ಮೀ ರಸ್ತೆಯ ಉದ್ದಕ್ಕೂ 385 ಹಾಗೂ ನಾನಾ ಭಾಗಗಳಲ್ಲಿ 8,000 ಗಿಡಗಳನ್ನು ನೆಟ್ಟು, ಪೋಷಿಸಿ, ಹೆಮ್ಮರವಾಗಿ ಬೆಳೆಸಿದವರು. ಮರಗಳನ್ನು ಬೆಳೆಸುವುದಕ್ಕಾಗಿ ಶ್ರಮಿಸಿದ ಆ ಪುಟ್ಟ ಜೀವ ಪರಿಸರ ಸಂರಕ್ಷಣೆಯಲ್ಲಿ ಸ್ಪೂರ್ತಿಯ ಸೆಲೆಯಾಗಿ ಉಳಿದಿದೆ. ಮರಗಳನ್ನೇ ಮಕ್ಕಳಂತೆ ಬೆಳೆಸಿದ ಮಹಾತಾಯಿ ʼಮಕ್ಕಳ ದಿನʼದಂತೆ ಇಹಲೋಕ ತ್ಯಜಿಸಿದ್ದಾರೆ.
ತುಮಕೂರಿನ ಗುಬ್ಬಿ ತಾಲ್ಲೂಕಿನ ತಿಮ್ಮಕ್ಕ ಮದುವೆಯಾಗಿದ್ದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದ ಚಿಕ್ಕಯ್ಯ ಅವರನ್ನು. ದಂಪತಿಗೆ ಮಕ್ಕಳಿರಲಿಲ್ಲ. ಹೆಣ್ಣು ಇರುವುದೇ ಮಕ್ಕಳನ್ನು ಹೆರಲು ಎಂಬ ಅಘೋಷಿತ, ದರಿದ್ರ ನೀತಿ ಹೆಮ್ಮರವಾಗಿ ಬೇರೂರಿದ್ದ ಸಮಾಜದಲ್ಲಿ ತಿಮ್ಮಕ್ಕ ಸಾಕಷ್ಟು ಅಪಮಾನಗಳನ್ನು ಎದುರಿಸಿದ್ದರು. ಬಂಜೆ ಎಂದು ಅಪಹಾಸ್ಯಕ್ಕೀಡಾಗಿದ್ದರು. 40 ವರ್ಷ ಪ್ರಾಯದ ತಿಮ್ಮಕ್ಕ ಅಪಮಾನ ಮತ್ತು ಖಿನ್ನತೆಯಿಂದ ಆತ್ಮಹತ್ಯೆಯ ಕುರಿತು ಯೋಚಿಸಿದ್ದರು. ಆದರೆ, ಅವರಿಗೆ ಧೈರ್ಯವಾಗಿ ನಿಂತದ್ದು ಪತಿ ಚಿಕ್ಕಯ್ಯ. ತಮಗೆ ಮಕ್ಕಳಾಗದಿದ್ದರೆ ಏನಂತೆ, ಗಿಡಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಪೋಷಿಸುವ ನಿರ್ಧಾರಕ್ಕೆ ದಂಪತಿ ಬಂದರು.
ಗಿಡಗಳನ್ನು ನೆಡಲು ಆರಂಭಿಸಿದರು. ಪತಿ ಚಿಕ್ಕಯ್ಯ ಅವರ ಊರು ಹಲಿಕಲ್‌ನಲ್ಲಿ ರಸ್ತೆ ಬದಲಿಯಲ್ಲಿ ಮೊದಲ ವರ್ಷ 10, ಎರಡನೇ ವರ್ಷ 15, ನಂತರ 20 ಹೀಗೆ ಅವರು ಗಿಡ ನೆಡುವ ಮತ್ತು ಪೋಷಿಸುವ ಕಾರ್ಯ ವರ್ಷದಿಂದ ವರ್ಷಕ್ಕೆ ಸಾಗುತ್ತಲೂ -ಹೆಚ್ಚುತ್ತಲೂ ಹೋಯಿತು. ಮರಗಳನ್ನು ಬೆಳೆಸುವ ಕೆಲಸವು ಅವರನ್ನು ಪರಿಸರವಾದಿಯನ್ನಾಗಿಯೂ, ಪರಿಸರ ಸಂರಕ್ಷಕಿಯನ್ನಾಗಿಯೂ ಮಾಡಿತು.

ತಿಮ್ಮಕ್ಕ ಹುಟ್ಟಿದ್ದು, ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ, 1911ರ ಜೂನ್ 30ರಂದು. ಮೈಸೂರು ಸಂಸ್ಥಾನದ ಭಾಗವಾಗಿದ್ದ, ಈಗಿನ ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ. ಬಡ ಕುಟುಂಬದಲ್ಲಿ ಬದುಕು ಆರಂಭಿಸಿದ ತಿಮ್ಮಕ್ಕನವರಿಗೆ ಶಾಲಾ ಶಿಕ್ಷಣವೂ ದೊರೆಯಲಿಲ್ಲ. ಬಾಲ ಕಾರ್ಮಿಕಳಾಗಿ ಕಲ್ಲು ಕ್ವಾರಿಗಳಲ್ಲಿ ದುಡಿಯುತ್ತಿದ್ದ ಅವರಿಗೆ, ಶಾಲೆಯ ಮೆಟ್ಟಿಲು ಹತ್ತುವ ಅವಕಾಶವೂ ದೊರೆಯಲಿಲ್ಲ.
ಔಪಚಾರಿಕ ಶಿಕ್ಷಣದಲ್ಲಿ ತಿಮ್ಮಕ್ಕ ಅವಿದ್ಯಾವಂತೆಯಾಗಿದ್ದರೂ, ಅವರ ಪರಿಸರ ಕಾಳಜಿ ಮತ್ತು ಮರಗಳನ್ನು ಬೆಳೆಸುವಲ್ಲಿ ಅವರಿಗಿದ್ದ ನಿಪುಣತೆ ಯಾವ ಪದವೀಧರರನ್ನೂ ಮೀರಿಸುವಂತದ್ದು. ಅವಿದ್ಯಾವಂತೆಯಾದರೂ ಗೌವರ ಡಾಕ್ಟರೇಟ್ ಪಡೆದವರು. ‘ನಾನು ಮಕ್ಕಳನ್ನು ಹೆತ್ತಿಲ್ಲ. ಆದರೆ ಮರಗಳನ್ನು ಬೆಳೆಸಿದ್ದೇನೆ. ಅವೇ ನನ್ನ ಮಕ್ಕಳು’ ಎಂಬ ತಿಮ್ಮಕ್ಕನವರ ಮಾತು, ಅವರ ಘೋಷವಾಕ್ಯವಾಗಿಯೇ ಉಳಿದಿದೆ.
ಮರಗಳನ್ನು ನೆಡುವುದು ಸುಲಭ. ಪೋಷಿಸುವುದು ಕಷ್ಟ. ಅದರಲ್ಲೂ, ಆಗಷ್ಟೇ ಸ್ವಾತಂತ್ರ್ಯ ಕಂಡಿದ್ದ ಭಾರತದಲ್ಲಿ ಮೂಲಸೌಕರ್ಯಗಳ ಸಮಸ್ಯೆಗಳು ಸಾಲುಗಟ್ಟಿದ್ದವು. ಅಂತಹ ಸಮಯಲ್ಲೂ, ನಾಲ್ಕಾರು ಕಿ.ಮೀ.ಗಳಷ್ಟು ದೂರದಿಂದ ನೀರು ಹೊತ್ತು ತರುತ್ತಿದ್ದ ತಿಮ್ಮಕ್ಕನವರ ಇಡೀ ದಿನ ಮರಗಳಿಗೆ ನೀರುಣಿವುದಕ್ಕೆ ವ್ಯಯವಾಗುತ್ತಿತ್ತು. ಆದರೂ, ಎಂದಿಗೂ ದೃತಿಗೆಡದ ಅವರು ಮರಗಳನ್ನು ಪ್ರೀತಿಯಿಂದ ಪೋಷಿಸಿದ್ದರು. ದಶಕಗಳಲ್ಲಿ ಅವರು ನೆಟ್ಟು-ಬೆಳೆಸಿದ ಮರಗಳ ಸಂಖ್ಯೆ 8,000ಕ್ಕೆ ಏರಿಕೆಯಾಯಿತು. ಆ ಮರಗಳನ್ನು ಈಗ ರಾಜ್ಯ ಸರ್ಕಾರ ನಿರ್ವಹಿಸುತ್ತಿದೆ.
ಈ ಸುದ್ದಿ ಓದಿದ್ದೀರಾ? ಜೀವ ಉಳಿಸಬೇಕಾದ ವೈದ್ಯರೇ ಅಮಾಯಕರ ಪ್ರಾಣಕ್ಕೆ ಕುತ್ತು ತಂದರೇ?
ಆದರೆ, ತಿಮ್ಮಕ್ಕನವರ 70-80 ವರ್ಷಗಳ ಶ್ರಮವನ್ನು ಕ್ಷಣಾರ್ಧದಲ್ಲಿ ವ್ಯರ್ಥಗೊಳಿಸಲು ಮುಂದಾಗಿತ್ತು ಇದೇ ಸರ್ಕಾರ. 2019ರಲ್ಲಿ ಮಣ್ಣಿನ ಮಕ್ಕಳೆಂದು ಹೇಳಿಕೊಳ್ಳುವ ಕುಟುಂಬದ ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು. ಅವರ ಸರ್ಕಾರ ರಸ್ತೆ ವಿಸ್ತರಣೆಗಾಗಿ ತಿಮ್ಮಕ್ಕ ಬೆಳೆಸಿದ್ದ ಮರಗಳನ್ನು ಕಡಿಯಲು ಮುಂದಾಗಿತ್ತು. ಆಗ, ತಿಮ್ಮಕ್ಕ ಸರ್ಕಾರಕ್ಕೆ ಪತ್ರ ಬರೆದು, ಮರಗಳನ್ನು ಕಡಿಯದಂತೆ ಒತ್ತಾಯಿಸಿದರು. ಅವರೊಂದಿಗೆ ಹಲವು ಪರಿಸರವಾದಿಗಳು, ಗ್ರಾಮಸ್ಥರು ನಿಂತರು. ಪರಿಣಾಮವಾಗಿ, ತಿಮ್ಮಕ್ಕನ ಕೂಸುಗಳಾದ ಆಲದ ಮರಗಳು ಉಳಿದುಕೊಂಡವು.
ಪರಿಸರ ಕ್ಷೇತ್ರಕ್ಕೆ ತಿಮ್ಮಕ್ಕನವರ ಕೊಡುಗೆಗೆ 2019ರಲ್ಲಿಯೇ ಪದ್ಮಶ್ರೀ ಪುಸ್ಕಾರ ಸಂದಿದೆ. 2020ರಲ್ಲಿ ಕೇಂದ್ರೀಯ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅಷ್ಟು ಮಾತ್ರವಲ್ಲ, 2016ರಲ್ಲಿ ಬಿಬಿಸಿ ‘ವಿಶ್ವದ ಅತ್ಯಂತ ಪ್ರಭಾವಶಾಲಿ ಮತ್ತು ಸ್ಫೂರ್ತಿದಾಯಕ ಮಹಿಳೆಯರ ಪಟ್ಟಿ’ಯಲ್ಲಿ ತಿಮ್ಮಕ್ಕನವರನ್ನು ಸೇರಿಸಿದೆ.

1999ರಲ್ಲಿ ಪತಿ ಚಿಕ್ಕಯ್ಯರನ್ನ ಕಳೆದುಕೊಂಡ ತಿಮ್ಮಕ್ಕ, ದೃತಿಗೆಡಲಿಲ್ಲ. ಅದಾಗಲೇ ಅವರಿಗೆ 89 ವರ್ಷ ವಯಸ್ಸಾಗಿತ್ತು. ತಮ್ಮ ಮಕ್ಕಳ – ಮರಗಳ- ಪೋಷಣೆಯನ್ನು ಮುಂದುವರೆಸಿದರು. ಅದೇ ವರ್ಷ ಅವರ ಕೆಲಸಗಳನ್ನು ಆಧರಿಸಿದ ‘ತಿಮ್ಮಕ್ಕ ಮತ್ತು 284 ಮಕ್ಕಳು’ ಎಂಬ ಡಾಕ್ಯುಮೆಂಟರಿ ಚಿತ್ರ ನಿರ್ಮಾಣಗೊಂಡಿತು. 2000ರಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವನ್ನೂ ಕಂಡಿತು. ಆ ಮೂಲಕ, ತಿಮ್ಮಕ್ಕನವರ ಕೆಲಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನವನ್ನೂ ಸೆಳೆಯಿತು. ಅಮೆರಿಕವು ಕ್ಯಾಲಿಫೋರ್ನಿಯಾದಲ್ಲಿ ‘ತಿಮ್ಮಕ್ಕಸ್ ರಿಸೋರ್ಸಸ್ ಫಾರ್ ಎನ್ವೈರನ್‌ಮೆಂಟಲ್ ಎಜುಕೇಶನ್’ ಎಂಬ ಸಂಸ್ಥೆಯನ್ನೂ ತೆರೆದಿದೆ. ಇದು ಅವರ ಅಂತರರಾಷ್ಟ್ರೀಯ ಮಟ್ಟದ ಗುರುತಿಸುವಿಕೆಗೆ ಸಾಕ್ಷಿಯಾಗಿದೆ. ಇದಲ್ಲದೆ, ವೃಕ್ಷಮಿತ್ರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಅವರ ಸಾಧನೆಗೆ ಸಂದಿವೆ. ಕರ್ನಾಟಕ ಸರ್ಕಾರವು ಅವರನ್ನು “ಪರಿಸರ ರಾಯಭಾರಿ” ಎಂದು ಘೋಷಿಸಿ, ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿ ಗೌರವಿಸಿದೆ.
ತಮ್ಮ 104ನೇ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತಿಮ್ಮಕ್ಕ, 114ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ, ಅವರ ನೆಟ್ಟು-ಬೆಳೆಸಿದೆ 8,000 ಮರಗಳು ಇಂದಿಗೂ ಬದುಕಿವೆ. ಮುಂದೆಯೂ ಜೀವಿಸುತ್ತವೆ. ದಣಿದವರಿಗೆ ಆಶ್ರಯ ನೀಡುತ್ತಿವೆ.
ಮಕ್ಕಳಾಗಲಿಲ್ಲ ಎಂದು ಮರಗಳನ್ನು ಸುತ್ತುವ ಮಹಿಳೆಯರ ಮುಂದೆ ತಿಮ್ಮಕ್ಕ ಮರ ಬೆಳೆಸಿ ಮರಗಳ ತಾಯಿಯಾಗಿದ್ದಾರೆ. ಒಂದೆರಡು ಮಕ್ಕಳ ತಾಯಿಯಾಗುವ ಬದಲು ಸಾವಿರ ಮರಗಳ ಬೆಳೆಸಿ ವೃಕ್ಷಮಾತೆಯಾಗಿದ್ದಾರೆ. ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.




