ʼಕೇವಲ ರಾಜಧಾನಿ ಕೇಂದ್ರಿತ ಮಾಧ್ಯಮವಲ್ಲ, ನಮ್ಮದು ಕರ್ನಾಟಕ ಕೇಂದ್ರಿತ ಮಾಧ್ಯಮʼ ಎಂಬ ಅರ್ಥಗರ್ಭಿತವಾದ ಸ್ಲೋಗನ್ನೇ ಗಮನಸೆಳೆಯುವಂಥದ್ದು. ಅನ್ಯಾಯಕ್ಕೊಳಗಾಗಿರುವ ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳನ್ನು ಆಲಿಸುವುದಕ್ಕೆ ಕಲಬುರಗಿಯಲ್ಲಿ ಓದುಗರ ಸಮಾವೇಶ ಮಾಡಿರುವ ಈ ದಿನ.ಕಾಮ್ ಮಾಧ್ಯಮದ ನಿಲುವು ನಿಜಕ್ಕೂ ಶ್ಲಾಘನೀಯ ಎಂದು ಚಿಂತಕ, ಬಹುಭಾಷಾ ನಟ ಪ್ರಕಾಶ್ ರಾಜ್ ಅಭಿನಂದಿಸಿದರು.
ಈ ದಿನ.ಕಾಮ್ ಕಲಬುರಗಿಯಲ್ಲಿ ಆಯೋಜಿಸಿದ್ದ ಓದುಗರ ಸಮಾವೇಶ, ʼಜೈ ಹಿಂದ್- ಜಯ ಕರ್ನಾಟಕʼ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಂಥದ್ದೊಂದು ಸಮಾವೇಶ ಆಯೋಜಿಸಿರುವುದಕ್ಕೆ ಸಂತೋಷಪಡುವುದಾ? ಅಥವಾ ಈ ಭಾಗದಲ್ಲಿರುವ ಜನರು ಹೇಳಿಕೊಳ್ಳುವ ಆತಂಕಗಳ ಬಗ್ಗೆ ಯೋಚನೆ ಮಾಡುವುದಾ? ಅರ್ಥವಾಗುತ್ತಿಲ್ಲ. ಆದರೆ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಭಾಗದಲ್ಲೇ ಯಶಸ್ವಿಯಾಗಿ ಆಯೋಜಿಸಿರುವ ಈ ದಿನ ತಂಡಕ್ಕೆ ಅಭಿನಂದನೆ” ಎಂದರು.
“ಈ ದಿನ.ಕಾಮ್ ಸುಮ್ಮನೆ ಹುಟ್ಟುಹಾಕಬೇಕೆಂದುಕೊಂಡಾಗ ಹುಟ್ಟಿದ ಮಾಧ್ಯಮವಲ್ಲ ಅಥವಾ ಯಾವುದೋ ಒಂದು ಪಕ್ಷ ತನ್ನ ಮುಖವಾಣಿಗೆ ನಮ್ಮದೂ ಅಂತ ಒಂದಿರಲಿ ಎಂದು ಆರಂಭ ಮಾಡಿದ ಮಾಧ್ಯಮವಲ್ಲ. ಹಲವು ಸಂಘಟನೆಗಳನ್ನ, ಹಲವು ಹೋರಾಟಗಳನ್ನ ಉಸಿರಾಡುತ್ತಿರುವ, ಸಾಮಾಜಿಕ ನ್ಯಾಯಕ್ಕಾಗಿ ಮಾತನಾಡುತ್ತಿರುವ ಮನಸ್ಸುಗಳಿಂದ ಕಟ್ಟಲ್ಪಟ್ಟ ಮಾಧ್ಯಮ ಈ ದಿನ. ಇಂತಹ ಕಾರ್ಯಕ್ರಮಕ್ಕೆ ಬಂದಿರುವುದು ಸಂತಸ ತಂದಿದೆ. ಕೆಲವೇ ದಿನಗಳಲ್ಲಿ ಜನರಿಂದ ಗಳಿಸಿಕೊಂಡಿರುವ ನಂಬಿಕೆಯೇ, ಜನಪರವಾಗಿ ಕೆಲಸ ಮಾಡುವ ಈದಿನದ ಬದ್ಧತೆಯನ್ನು ತೋರುತ್ತದೆ. ಇಂದಿನ ದಿನಗಳಲ್ಲಿ ಮೇನ್‌ಸ್ಟ್ರೀಮ್ ಮಾಧ್ಯಮಗಳು ಮಾಡುತ್ತಿರುವ ಕೆಲಸ ನೋಡುತ್ತಿದ್ದೇವೆ. ಮಾಧ್ಯಮ ಎಂದರೆ ಸುಳ್ಳು! ಮೇನ್ ಸ್ಟ್ರೀಮ್ ಮಾಧ್ಯಮಗಳ ಅಬ್ಬರದ ನಡುವೆ ಈದಿನ ಮುಳ್ಳಿನ ಹಾದಿಯಲ್ಲಿ ನಡೆದುಕೊಂಡು ಬರುವ ಸಾಹಸಕ್ಕೆ ಕೈಹಾಕಿದೆ, ಅದರಲ್ಲಿ ಯಶಸ್ವಿಯೂ ಆಗಿತ್ತಿದೆ. ಅದಕ್ಕೆ ಇನ್ನಷ್ಟು ಬಲ ಬೇಕಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಸತ್ಯ ಹೇಳುವ ಜನಪರವಾಗಿ ನಡೆದುಕೊಳ್ಳುವ ಮಾಧ್ಯಮಗಳ ಅಗತ್ಯವಿದೆ. ಮಾರಿಕೊಂಡ ಮಾಧ್ಯಮಗಳ ಮಧ್ಯೆ ಈ ದಿನ.ಕಾಮ್ ಪ್ರಮಾಣಿಕ ಹೋರಾಟದ ದನಿಯಾಗಲಿ. ನಿಮ್ಮ ಜತೆಗೆ ನಾನಿರುತ್ತೇನೆ” ಎಂದು ತಿಳಿಸಿದರು.


ಆಳಂದ ಶಾಸಕ ಬಿ.ಆರ್ ಪಾಟೀಲ್ ಮಾತನಾಡಿ, “ಹಲವು ಮಾಧ್ಯಮಗಳು ಗಾಸಿಪ್, ವಿವಾದಗಳ ಕುರಿತೇ ಹೆಚ್ಚು ಮಾತನಾಡುತ್ತವೆ. ಜನರ ಅಳಲಿಗೆ ಕಿವಿಗೊಡುವುದಿಲ್ಲ. ಇಂತಹ ಸಮಯದಲ್ಲಿ ಜನರದನಿಯಾಗಿ ಕೆಲಸ ಮಾಡಲು ರೂಪುಗೊಂಡಿರುವ ಈ ದಿನ.ಕಾಮ್ ಮೇಲೆ ಜನರ ನಂಬಿಕೆ ಮೂಡಿದೆ. ರಾಜ್ಯದ ಹಿಂದುಳಿದ ಸಮುದಾಯಗಳು ಮತ್ತು ಪ್ರದೇಶಗಳ ದನಿಯಾಗಿರುವುದು ಸ್ವಾಗತಾರ್ಹ. ಕರ್ನಾಟಕದಲ್ಲಿ ಲಂಕೇಶ್ ಪತ್ರಿಕೆ ತನ್ನದೇ ಛಾಪು ಮೂಡಿಸಿತ್ತು. ಜನರನ್ನು ಜಾಗೃತಿಗೊಳಿಸಿತ್ತು. ಅಂತೆಯೇ ಕೆಲವು ಪತ್ರಿಕೆಗಳು ಕಾರ್ಟೂನ್‌ಗಳ ಮೂಲಕವೂ ಜನರನ್ನು ಎಚ್ಚರಿಸುವ ಕೆಲಸ ಮಾಡಿದೆ. ಅದೇ ಹಾದಿಯಲ್ಲಿ ಈ ದಿನ.ಕಾಮ್ ಸಾಗುತ್ತಿದೆ. ಲಂಕೇಶ್ ಪತ್ರಿಕೆಯಂತೆ ಈ ದಿನ.ಕಾಮ್ ಕೂಡ ಜನರ ದನಿಯಾಗಿ ಬೆಳೆಯುವ ವಿಶ್ವಾಸವಿದೆ ಎಂದರು.

ಈ ದಿನ.ಕಾಮ್ ದುಡಿವ ಜನರಿಗಾಗಿ ಬಹಳಷ್ಟು ಕೆಲಸ ಮಾಡುತ್ತಿದೆ. ಸುಳ್ಳು ಹೇಳುವವರಿಗೆ ಯಾವ ರೀತಿ ಉತ್ತರ ಕೊಡಬೇಕು. ಸತ್ಯವನ್ನು ಹೇಗೆ ಬಟಾಬಯಲು ಮಾಡಬೇಕು ಎಂಬುದನ್ನು ಈ ದಿನ ಮಾಧ್ಯಮ ತೋರಿಸಿದೆ. ಹಲವು ವರ್ಷಗಳಿಂದ ಮಾಧ್ಯಮಗಳು ಮಾಡದೇ ಇರುವ ಜನಪರ ಕೆಲಸಗಳನ್ನು ಕೆಲ ವರ್ಷಗಳಲ್ಲಿಯೇ ಈ ದಿನ.ಕಾಮ್ ಮಾಡಿದೆ. ಸಂಸ್ಥೆ ಮಾಡಿದ ವರದಿಯ ಫಲವಾಗಿ ಗ್ರಾಮೀಣ ಭಾಗದಲ್ಲಿ ಜನರ ಹಲವಾರು ರೀತಿಯ ಸಮಸ್ಯೆಗಳು ಬಗೆಹರಿದಿವೆ. ಮೂಲ ಸೌಕರ್ಯಗಳು ಗ್ರಾಮೀಣ ಭಾಗವನ್ನು ತಲುಪುವಂತಾಗಿದೆ. ಹಳ್ಳಿಯ ದನಿ ಆಳುವವರಿಗೆ ತಲುಪುವಂತೆ ಮಾಡಿದೆ” ಎಂದು ದಸಂಸ ಮುಖಂಡ ಮರಿಯಪ್ಪಹಳ್ಳಿ ಶ್ಲಾಘಿಸಿದರು.
‘ದಿ ನ್ಯೂಸ್ ಮಿನಿಟ್’ ಸುದ್ದಿ ಸಂಸ್ಥೆಯ ಸಂಪಾದಕಿ ಧನ್ಯ ರಾಜೇಂದ್ರನ್ ಮಾತಾನಡಿ, “ಕರ್ನಾಟಕದ ಬಹುತೇಕ ಮಾಧ್ಯಮಗಳಿಗೆ ಜನರ ವಿಚಾರಗಳು ಬೇಕಿಲ್ಲ. ಅವು ಕಾಂಗ್ರೆಸ್ ಸರ್ಕಾರದ ಭದ್ರತೆ, ಅಭದ್ರತೆ, ನಾಯಕತ್ವ ಬದಲಾವಣೆ, ಚಂದನ್ ಶೆಟ್ಟಿ ಮತ್ತು ನಿವೇದಿತಾ ವಿಚ್ಚೇದನ, ಜೈಲಿನಲ್ಲಿರುವ ನಟ ಏನು ತಿಂದ, ಹೇಗಿದ್ದಾನೆ ಎಂಬಿತ್ಯಾದಿ ಅನಗತ್ಯ ಸುದ್ದಿಗಳ ಕುರಿತೇ ಹೆಚ್ಚು ಆಸಕ್ತಿ ಹೊಂದಿವೆ. ಮಾಧ್ಯಮಗಳು ನ್ಯೂಟ್ರಲ್ ಆಗಬೇಕು ಎನ್ನಲಾಗುತ್ತದೆ. ಆದರೆ, ದಮನಿತರು, ಅಂಚಿನಲ್ಲಿರುವವರ ಜತೆಗೆ ಮಹಿಳೆಯರು ಮತ್ತು ಮಕ್ಕಳ ವಿಚಾರದಲ್ಲಿ ಮಾಧ್ಯಮಗಳು ಖಂಡಿತವಾಗಿಯೂ ಪಕ್ಷಪಾತಿಗಳಾಗಿರಬೇಕು. ಜನಪರ ನಿಲುವುಗಳನ್ನು ಹೊಂದಿರಬೇಕು” ಎಂದರು.

“ಮೋದಿ ಸರ್ಕಾರ ಎರಡು ವಾರಗಳ ಹಿಂದೆ ಜಾಹೀರಾತುಗಳಿಗೆ ನೀಡುವ ಹಣವನ್ನು 26%ರಷ್ಟು ಹೆಚ್ಚಿಸುತ್ತೇವೆ ಎಂದು ಘೋಷಿಸಿದೆ. ಸರ್ಕಾರದಿಂದ ಮೀಡಿಯಾಗಳಿಗೆ ಬರುವ ಹಣದಿಂದ ಅವರು ಸರ್ಕಾರವನ್ನು ಹೊಗಳಬೇಕಾಗುತ್ತದೆ. ಮಾರಿಕೊಂಡ ಮಾಧ್ಯಮಗಳು ಅದೇ ಮಾಡುತ್ತವೆ. ಆದರೆ, ಹೊರ ದೇಶಗಳಲ್ಲಿ ಜನರೇ ಮೀಡಿಯಾಗಳಿಗೆ ಹಣ ನೀಡುತ್ತಾರೆ. ಜನರಿಗೆ ಅಗತ್ಯವಾದ ಸುದ್ದಿಗಳನ್ನು ಅಲ್ಲಿನ ಮಾಧ್ಯಮಗಳು ಕೊಡುತ್ತವೆ. ಆದರೆ, ಇಲ್ಲಿ ನಾವು ಡೈವೋರ್ಸ್ ಕಥೆ ಕೇಳಬೇಕಾಗಿದೆ. ಆಳಂದದಲ್ಲಿ ನಡೆದ ಮತಗಳ್ಳತನದ ಬಗ್ಗೆ ಕನ್ನಡದ ಮಾಧ್ಯಮಗಳು ಪ್ರಕಟಿಸಲೇ ಇಲ್ಲ. ಆಡಳಿತ ಸರ್ಕಾರದ ಕೈಗೊಂಬೆಗಳಾಗಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಅದಕ್ಕೆ ವಿರುದ್ಧವಾಗಿ ಈ ದಿನ ಅತ್ಯಂತ ಸ್ಪಷ್ಟ ನಿಲುವುಗಳೊಂದಿಗೆ ಕಳೆದ ಮೂರು ವರ್ಷಗಳಿಂದ ಜನಪರ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ. ಅದೇ ರೀತಿ ನಮ್ಮಲ್ಲಿಯೂ ಸ್ವತಂತ್ರ ಸಣ್ಣ ಮಾಧ್ಯಮಗಳಿವೆ. ಫೈಲ್ ಇದೆ. ಅನೇಕ ಯೂಟ್ಯೂಬ್‌ಗಳಿವೆ. ಇವುಗಳನ್ನು ಬೆಂಬಲಿಸಬೇಕು” ಎಂದು ಹೇಳಿದರು.
ಈ ದಿನ.ಕಾಮ್‌ನ ಸಮುದಾಯದ ಮುಖ್ಯಸ್ಥ ಡಾ. ವಾಸು ಹೀಗೆ ಹೇಳುತ್ತಾರೆ. “ಈ ದಿನ.ಕಾಮ್ ಸಂಸ್ಥೆಯು ದುಡಿವ, ಹಿಂದುಳಿದ, ತಳ ಸಮುದಾಯಗಳ ಪರವಾಗಿ ಕೆಲಸ ಮಾಡುವ ಹಾಗೂ ಹಿಂದುಳಿದ ಪ್ರದೇಶಗಳ ಅಭಿವೃದ್ದಿಗಾಗಿ ಮಾತನಾಡುವ ಪಕ್ಷಪಾತಿ ಮಾಧ್ಯಮ. ನಾವು ಜನಸಾಮಾನ್ಯರ ಪರವಾಗಿ ದನಿ ಎತ್ತುತ್ತೇವೆ. ದಮನಿತರ ಕುರಿತು ಹೆಚ್ಚೆಚ್ಚು ವರದಿ ಮಾಡುತ್ತೇವೆ. ಆಳುವವರನ್ನು ಪ್ರಶ್ನೆ ಮಾಡುತ್ತೇವೆ. ದ್ವೇಷ ಮತ್ತು ಕೋಮು ರಾಜಕಾರಣದ ವಿರುದ್ಧ ಗಂಭೀರ ನಿಲುವು ಹೊಂದಿದ್ದೇವೆ. ಪಕ್ಷ ಯಾವುದೇ ಇರಲಿ, ಎಲ್ಲರ ಕುರಿತು ಒಂದೇ ರೀತಿಯ ನಿಷ್ಠುರ ನಿಲುವು ಹೊಂದಿದ್ದೇವೆ. ಇದೇ ನಿಲುವುಗಳೊಂದಿಗೆ ಮುಂದೆ ಸಾಗುತ್ತೇವೆ” ಎಂದರು.

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಸಮಾವೇಶಕ್ಕೆ ಸಭಾಂಗಣ ಕಿಕ್ಕಿರಿಯುವಷ್ಟು ಜನರು ಸೇರಿದ್ದರು. ಅವರಲ್ಲಿ, 80% ಜನರು ಗ್ರಾಮೀಣ ಭಾಗದವರು. ಅಲ್ಲಿ ನೆರೆದಿದ್ದವರನ್ನು ಕಂಡಾಗ ನಾವು ನಿರ್ಧರಿಸಿದೆವು – ಮುಂದಿನ ಸಮಾವೇಶ ಬೆಂಗಳೂರಿನಲ್ಲಿ ನಡೆಯಬಾರದು ಎಂದು. ಅದರಂತೆ, ಕಲಬುರಗಿಯಲ್ಲಿ ನಮ್ಮ ಸಮಾವೇಶ ನಡೆಯುತ್ತಿದೆ. ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗವನ್ನು ಹಿಂದುಳಿದ ಪ್ರದೇಶವನ್ನಾಗಿಯೇ ನೋಡಲಾಗುತ್ತಿದೆ. ಈಗಲೂ ಈ ಭಾಗಗಳಿಗೆ ಮಾಧ್ಯಮಗಳಲ್ಲಿ ಸ್ಥಾನವಿಲ್ಲ. ಮಾಧ್ಯಮಗಳು ಕೇವಲ ನಗರ ಕೇಂದ್ರಿತವಾಗಿವೆ. ಅಂತಹ ಮಾಧ್ಯಮಗಳ ನಡುವೆ ಈ ದಿನ ಶೋಷಿತರ ಸಮಸ್ಯೆಗಳು ಮತ್ತು ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಜನರನ್ನು ತಲುಪಲು ರಾಜ್ಯಾದ್ಯಂತ ಸಭೆ-ಸಮಾರಂಭಗಳನ್ನು ನಡೆಸುತ್ತದೆ” ಎಂದರು.
ಇದನ್ನೂ ಓದಿ: ಮಹಿಳೆಯರಿಗೆ ಆನ್‌ಲೈನ್ ಕಿರುಕುಳ; ಇದು ಡಿಜಿಟಲ್ ಭೂತಗಳ ಬೆನ್ನಟ್ಟುವ ಕಾಲ!
“ರಾಜ್ಯಕ್ಕೆ ಊಟ ಹಾಕುತ್ತಿರುವವರಲ್ಲಿ ಕಲ್ಯಾಣ ಕರ್ನಾಟಕ ಭಾಗದ ರೈತರ ಕೊಡುಗೆ ಇದೆ. ಈ ಭಾಗದ ರೈತರ ಕುರಿತು ಮಾತನಾಡಬೇಕಿದೆ. ಕಲ್ಯಾಣ ಕರ್ನಾಟಕದ ಕುರಿತು ಹೆಚ್ಚು ಚರ್ಚೆ ನಡೆಯುವಂತೆ, ಇಲ್ಲಿನ ವಿಷಯಗಳು ಮುನ್ನೆಲೆಗೆ ಬರುವಂತೆ ನೋಡಿಕೊಳ್ಳಬೇಕಿದೆ. ಅಂತಹ ಕೆಲಸವನ್ನು ಈದಿನ.ಕಾಮ್ ಮಾಡಲಿದೆ. ಕಳೆದ ವಾರ ರಾಜ್ಯದ ಎಲ್ಲ ಮಾಧ್ಯಮಗಳು ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದರ ಕುರಿತು ದಿನವಿಡೀ ಸುದ್ದಿ ಮಾಡುತ್ತಿದ್ದವು. ಆದರೆ, ʼಈದಿನʼ ರಾಯಚೂರಿನಿಂದ ಬೆಂಗಳೂರಿಗೆ ಬಂದು ಮದ್ಯ ನಿಷೇಧಕ್ಕಾಗಿ ಹೋರಾಟ ನಡೆಸುತ್ತಿದ್ದ ಮಹಿಳೆಯರ ಪ್ರತಿಭಟನೆಯನ್ನು ಕೇಂದ್ರೀಕರಿಸಿ ಸುದ್ದಿ ಮಾಡಿತು. ರೈತರಿಗಾಗಿ ನಡೆದ ಸಂಯುಕ್ತ ಹೋರಾಟ ಕರ್ನಾಟಕದ ಸುದ್ದಿಗಳನ್ನು ಪ್ರಕಟಿಸಿತು. ನಮ್ಮ ಕೆಲಸ ಜನರಿಗಾಗಿ ನಡೆಯುತ್ತದೆ. ಜನರ ದನಿಯನ್ನು ಮುನ್ನೆಲೆಗೆ ತರುತ್ತದೆ” ಎಂದು ಹೇಳಿದರು.

ಕಲಬುರಗಿಯಲ್ಲಿ ನಡೆದ ಈ ದಿನ.ಕಾಮ್ ಓದುಗರ ಸಮಾವೇಶವು ರಾಜ್ಯದ ಅಂಚಿನ ಪ್ರದೇಶಗಳು, ಮರೆಮಾಚಲ್ಪಟ್ಟ ಸಮುದಾಯಗಳು ಹಾಗೂ ದಮನಿತರ ವಾಸ್ತವ ಪರಿಸ್ಥಿತಿಗಳನ್ನು ರಾಜ್ಯಮಟ್ಟದಲ್ಲಿ ಮುನ್ನೆಲೆಗೆ ತರುವ ಒಂದು ಬೆಳಕು. ಈ ಮೂಲಕ ನಗರ ಕೇಂದ್ರಿತ ಮತ್ತು ಅಧಿಕಾರಸ್ಥರ ಪರ ಮಾಧ್ಯಮಗಳಿವೆ ಎನ್ನುವ ವಾತಾವರಣದಲ್ಲಿ ತನ್ನ ಜನಪರ ನಿಲುವುಗಳನ್ನು ಸ್ಪಷ್ಟವಾಗಿ ಎತ್ತಿ ಹಿಡಿದಿದೆ. ಕಲ್ಯಾಣ ಕರ್ನಾಟಕದ ಅಳಲನ್ನು ಕಿವಿಗೊಟ್ಟು ಕೇಳುವ ಬದ್ಧತೆ ತೋರುತ್ತಿದೆ. ತನ್ನ ಪ್ರಯತ್ನವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಓದುಗರು, ಚಿಂತಕರು, ಸಂಘಟನೆಗಳ ಮುಖಂಡರುಗಳಿಂದ ಬಂದ ಶ್ಲಾಘನೆ, ಬೆಂಬಲ ಹಾಗೂ ಅವರ ನಿರೀಕ್ಷೆಗಳು ಈ ದಿನ ಮಾಧ್ಯಮದ ಮೇಲಿರುವ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿವೆ. ವರದಿ ಮಾಡುವುದರ ಜೊತೆಗೆ ಸಮಾಜದ ಪರಿವರ್ತನೆಯಲ್ಲಿಯೂ ತನ್ನ ಪಾತ್ರವನ್ನು ಗಂಭೀರವಾಗಿ ನಿಭಾಯಿಸುವ ಸವಾಲು ಹಾಗೂ ಅವಕಾಶಗಳೆರಡನ್ನೂ ಸ್ವೀಕರಿಸಿದೆ. ಜನರ ಪ್ರೀತಿ, ಬೆಂಬಲಗಳೇ ʼಈ ದಿನʼದ ಭವಿಷ್ಯದ ದಿಕ್ಕನ್ನು ನಿರ್ಣಯಿಸುವ ದೊಡ್ಡ ಶಕ್ತಿ.






