‘ಬೌದ್ಧಿಕ ದಿಗ್ಗಜರಲ್ಲ, ಅಸಭ್ಯ ಜನಪ್ರಿಯವಾದಿ ಪ್ರಚೋದಕರು’ ಎಂಬ ಟೀಕೆಯನ್ನು RSS ಎದುರಿಸಿದ್ದು ಹೀಗೆ?!

Date:

ದಿ ಕ್ಯಾರವಾನ್’ ನಡೆಸಿದ RSS ಕುರಿತ ವಿಶೇಷ ತನಿಖಾ ವರದಿಯ ಅನುವಾದ ಮಾಲಿಕೆಯ ಕೊನೆಯ ಮತ್ತು ಆರನೇ ಕಂತು

…..ಇದಲ್ಲದೆ, ನಾವು “ಗುಪ್ತ ಸಂಸ್ಥೆಗಳು” ಎಂದು ಕರೆಯಬಹುದಾದ ಹಲವಾರು ಸಂಸ್ಥೆಗಳನ್ನೂ ಪತ್ತೆಹಚ್ಚಿದ್ದೇವೆ. ಸಾಮಾನ್ಯ ಜನರು ಸಂಘದ ಬಗ್ಗೆ ಯೋಚಿಸಿದಾಗ ತಕ್ಷಣ ನೆನಪಾಗುವುದು ಇಂತಹ ಸಂಸ್ಥೆಗಳೇ. ಏಕೆಂದರೆ, ಸಂಘದೊಂದಿಗೆ ತಳುಕುಹಾಕಿಕೊಂಡಿರುವ ಭೀಕರ ಹಿಂಸಾಚಾರದ ಕೃತ್ಯಗಳಲ್ಲಿ ಈ ಸಂಸ್ಥೆಗಳ ಪಾತ್ರ ಅಥವಾ ಕೈವಾಡವೇ ಹೆಚ್ಚಾಗಿರುತ್ತದೆ. ಈ ಗುಪ್ತ ಸಂಸ್ಥೆಗಳು ಕೇವಲ ಸಂಘದೊಂದಿಗಿನ ತಮ್ಮ ನಂಟನ್ನು ಮಾತ್ರ ಮುಚ್ಚಿಡುವುದಿಲ್ಲ; ಬದಲಾಗಿ ತಮ್ಮ ಅಸ್ತಿತ್ವವನ್ನೇ ಅಥವಾ ಕನಿಷ್ಠಪಕ್ಷ ತಮ್ಮ ಚಟುವಟಿಕೆಗಳನ್ನಾದರೂ ಗೌಪ್ಯವಾಗಿ ಇಡುತ್ತವೆ. ವಿಶಾಲವಾದ ಸಂಘ ಪರಿವಾರದ ವರ್ಚಸ್ಸಿಗೆ ಧಕ್ಕೆ ತರುವಂತಹ ಕಾನೂನುಬಾಹಿರ ಅಥವಾ ಹಾನಿಕಾರಕ ಚಟುವಟಿಕೆಗಳಲ್ಲಿ ಇವು ತೊಡಗಿಸಿಕೊಂಡಿರುವುದೇ, ಈ ಮಟ್ಟದ ಗೌಪ್ಯತೆಯನ್ನು ಕಾಯ್ದುಕೊಳ್ಳಲು ಪ್ರಮುಖ ಕಾರಣವಾಗಿದೆ.

ಹಿಂದೂ ರಾಷ್ಟ್ರದ ಭರವಸೆಯನ್ನು ಈಡೇರಿಸುವ ಪ್ರಯತ್ನಗಳಲ್ಲಿ ಬಲವಾದ, ಆಕ್ರಮಣಕಾರಿ ಸಮುದಾಯದ ಚಿತ್ರಣವನ್ನು ನಿರ್ಮಿಸುವುದು ಸಂಘದ ಉದ್ದೇಶಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ಕೆಲವು ರೀತಿಯ ಉಗ್ರಗಾಮಿ ಸಂಘಟನೆಗಳು ಮತದಾರರನ್ನು ಸೆಳೆಯಲು ಬಹಳ ಉಪಯುಕ್ತ ಸಾಧನವಾಗುತ್ತವೆ. ಆದರೆ ಇವು ಸಂಘದ ಹೆಸರಿಗೆ ದೊಡ್ಡ ಮಟ್ಟದ ಹಾನಿಯುಂಟುಮಾಡುವ ಅಪಾಯವನ್ನೂ  ಹೊಂದಿರುತ್ತವೆ. ಆದ್ದರಿಂದ, ಸಂಘದಲ್ಲಿನ ಗುಪ್ತ ಸಂಸ್ಥೆಗಳು ಬಹಳ ಕಡಿಮೆ ಗೋಚರ ಜಾಲ ಸಂಪರ್ಕಗಳನ್ನು ಹೊಂದಿರುತ್ತವೆ. ಮತ್ತು ತಮ್ಮ ಕುರಿತಾದ ಮಾಹಿತಿ ಸಾಧ್ಯವಾದಷ್ಟೂ ಕಡಿಮೆ ಲಭ್ಯವಾಗುವಂತೆ ನೋಡಿಕೊಳ್ಳುತ್ತವೆ. ಹಿಂದೂ ಜಾಗರಣ ಮಂಚ್, ಬಿಜೆಪಿ ನಾಯಕರು ಮತ್ತು ಜಾತಿ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಸೇನೆಗಳ ಸರಣಿ, ಹಿಂದೂ ಧರ್ಮ ರಕ್ಷಾ ಸಮಿತಿ ಮತ್ತು ರಾಷ್ಟ್ರೀಯ ಉತ್ಸವ ಮಂಡಲದಂತಹ ಸಂಸ್ಥೆಗಳು ಈ ಗುಪ್ತ ಸಂಸ್ಥೆಗಳಿಗೆ ಉದಾಹರಣೆಗಳಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದೇ ವೇಳೆ, ತನ್ನ ವರ್ಚಸ್ಸನ್ನು ಸುಧಾರಿಸಿಕೊಳ್ಳಲು ಮತ್ತು ಸಮಾಜದ ಕುರಿತಾದ ತನ್ನ ದೃಷ್ಟಿಕೋನದತ್ತ ಹೆಚ್ಚು ಜನರನ್ನು ಸೆಳೆಯಲು ಸಂಘವು ಒಂದು ರೀತಿಯ ‘ವ್ಯೂಹಾತ್ಮಕ ಸಂಕೇತ’ಗಳನ್ನು (strategic signalling) ರವಾನಿಸುವ ಪ್ರಯತ್ನಗಳನ್ನು ನಡೆಸಿದೆ. 1970ರ ದಶಕದ ನಂತರ ಸಂಘದ ಬಲ ಹೆಚ್ಚಾಗುತ್ತಿದ್ದಂತೆ, ಸಮಾಜದ ಕೆಲವು ವರ್ಗಗಳನ್ನು ಸಂಘವು ಹೊರಗಿಡುತ್ತಿದೆ ಎಂಬ ಸಾರ್ವಜನಿಕ ಟೀಕೆಗಳು ಜೋರಾದವು. ಇದಕ್ಕೆ ಪ್ರತಿಕ್ರಿಯಿಸಲು ಸಂಘವು ಆರಂಭಿಸಿತು. ಇದರ ಫಲವಾಗಿಯೇ, ‘ತೋರಿಕೆಗಾಗಿ ಪ್ರದರ್ಶನ ಸಂಸ್ಥೆ’ (showpiece organisation) ಎಂದು ಕರೆಯಬಹುದಾದ ಒಂದು ರೀತಿಯ ಸಂಘಟನೆಗಳು ಹುಟ್ಟಿಕೊಂಡವು.

ಈ ‘ಶೋಪೀಸ್ ಸಂಸ್ಥೆ’ಗಳ ಪ್ರಾಥಮಿಕ ಉದ್ದೇಶವೆಂದರೆ, ಕೇವಲ ತಮ್ಮ ಅಸ್ತಿತ್ವದ ಮೂಲಕವೇ ಸಂಘದ ಬಗ್ಗೆ ಒಂದು ತೀರ್ಮಾನವನ್ನು ಸಾಬೀತುಪಡಿಸುವುದು. ಈ ಸಂಸ್ಥೆಗಳಿಗೆ ಭಾರೀ ಪ್ರಚಾರ ನೀಡಲಾಗುತ್ತದೆಯಾದರೂ, ಸಾಂಸ್ಥಿಕವಾಗಿ ಇವು ಮೇಲ್ನೋಟದ ಸ್ವರೂಪವನ್ನು (two-dimensional) ಮಾತ್ರ ಹೊಂದಿರುತ್ತವೆ. ಸಂಘದ ದೃಷ್ಟಿಕೋನವು ಜಾತಿವಾದಿ, ಕೋಮುವಾದಿ ಮತ್ತು ಹಿಂದೂ ಪಾರಮ್ಯವಾದದಿಂದ ಕೂಡಿದೆ ಎಂಬ ಆರೋಪಗಳನ್ನು ಎದುರಿಸಲು ಅಥವಾ ಅವುಗಳನ್ನು ತಳ್ಳಿಹಾಕಲು ಹಾಗೂ ಹೆಚ್ಚಿನ ಜನರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಇವುಗಳನ್ನು ಬಳಸಲಾಗುತ್ತದೆ. 1981ರಲ್ಲಿ ಮೀನಾಕ್ಷಿಪುರಂನ ದಲಿತರು ಇಸ್ಲಾಂ ಧರ್ಮಕ್ಕೆ ಸಾಮೂಹಿಕವಾಗಿ ಮತಾಂತರಗೊಂಡ ಘಟನೆಗೆ ಪ್ರತಿಕ್ರಿಯೆಯಾಗಿ, 1983ರಲ್ಲಿ ‘ಸಾಮಾಜಿಕ್ ಸಮರಸತಾ ಮಂಚ್’ ಅನ್ನು ಸ್ಥಾಪಿಸಲಾಯಿತು. 1984ರ ಭೀಕರ ಸಿಖ್ ವಿರೋಧಿ ಹತ್ಯಾಕಾಂಡದ ನಂತರ, ಸಿಖ್ ಧರ್ಮ ಮತ್ತು ಹಿಂದೂ ರಾಷ್ಟ್ರೀಯತೆಯ ನಡುವೆ ಹೊಂದಾಣಿಕೆ ಇದೆ ಎಂದು ಬಿಂಬಿಸುವ ಸಲುವಾಗಿ 1986ರಲ್ಲಿ ‘ರಾಷ್ಟ್ರೀಯ ಸಿಖ್ ಸಂಗತ್’ ಅನ್ನು ಸ್ಥಾಪಿಸಲಾಯಿತು. ಅದೇ ರೀತಿ, 2002ರ ಗುಜರಾತ್ ಮುಸ್ಲಿಂ ವಿರೋಧಿ ಹತ್ಯಾಕಾಂಡ ನಡೆದ ಕೆಲವೇ ತಿಂಗಳುಗಳಲ್ಲಿ ‘ಮುಸ್ಲಿಂ ರಾಷ್ಟ್ರೀಯ ಮಂಚ್’ (MRM) ಸ್ಥಾಪನೆಯಾಯಿತು. ವಾಸ್ತವದಲ್ಲಿ ಸಂಘವು ಮುಸ್ಲಿಮರನ್ನು ದ್ವೇಷಿಸುವುದಿಲ್ಲ ಎಂದು ತೋರಿಸಿಕೊಳ್ಳುವ ಮೂಲಕ, ಹಾನಿಗೊಳಗಾದ ತನ್ನ ವರ್ಚಸ್ಸನ್ನು ಸರಿಪಡಿಸಿಕೊಳ್ಳುವ ಸಾಧನವಾಗಿ ಇದು ಬಳಕೆಯಾಯಿತು.

ಜಾಲದ ರಚನೆಯಲ್ಲಿ ಈ ಸಂಸ್ಥೆಗಳ ಸ್ಥಾನವು ಸಾಮಾನ್ಯವಾಗಿ ‘ಅಂತಿಮ ಬಿಂದು’ವನ್ನು ಪ್ರತಿನಿಧಿಸುತ್ತದೆ. ಅಂದರೆ, ಸಂಘದ ಇತರ ಸಂಸ್ಥೆಗಳಂತೆ ಈ ‘ಶೋಪೀಸ್ ಸಂಸ್ಥೆ’ಗಳು ತಮ್ಮದೇ ಆದ ಉಪಸಂಸ್ಥೆಗಳನ್ನು ಅಥವಾ ಕವಲುಗಳನ್ನು ಹುಟ್ಟುಹಾಕುವುದಿಲ್ಲ. ಇವು ಸಾಮಾನ್ಯವಾಗಿ ಆರ್‌ಎಸ್‌ಎಸ್‌ನ ನೇರ ಕುಡಿಗಳಾಗಿದ್ದು, ಇಲ್ಲಿ ಪ್ರಚಾರಕರ ಬಲವಾದ ಉಪಸ್ಥಿತಿ ಇರುತ್ತದೆ. ಸಂಘದ ಪ್ರಮುಖ ಸಂಘಟನಾ ತಂತ್ರಗಾರಿಕೆಗಳಿಗೆ ಈ ಶೋಪೀಸ್ ಸಂಸ್ಥೆಗಳು ವೇದಿಕೆಯಾಗುವುದಿಲ್ಲ ಎಂಬುದು ಸ್ಪಷ್ಟ. ಉದಾಹರಣೆಗೆ, ಎಂಆರ್‌ಎಂ (MRM) ಸ್ಥಾಪನೆಯಾಗಿ ಎರಡು ದಶಕಗಳೇ ಕಳೆದಿದ್ದರೂ, ಮುಸ್ಲಿಮರೊಂದಿಗಿನ ಸಂಘದ ಒಡನಾಟವು ಈ ಸಂಸ್ಥೆಗೆ ಬಂದು ಕೊನೆಯಾಗುತ್ತದೆ (ಅದರಾಚೆ ಬೆಳೆದಿಲ್ಲ) ಎಂಬ ವಾಸ್ತವವೇ, ಸಂಘಕ್ಕೆ ಈ ವಿಷಯದಲ್ಲಿ ಎಷ್ಟರಮಟ್ಟಿನ ಆದ್ಯತೆ ಇದೆ ಎಂಬುದನ್ನು ಹೇಳುತ್ತದೆ.

ನಾವು ಹಲವಾರು “ತರಬೇತಿ ಸಂಸ್ಥೆಗಳು” (training organisations) ಇರುವುದನ್ನೂ ಗುರುತಿಸಿದ್ದೇವೆ. ಶತಮಾನದ ಹಿಂದೆ ಸ್ಥಾಪನೆಯಾದಾಗಿನಿಂದಲೂ, “ವ್ಯಕ್ತಿ ನಿರ್ಮಾಣ”ವೇ (man-making) ತನ್ನ ಅಸ್ಮಿತೆಯ ತಿರುಳು ಎಂದು ಸಂಘವು ಸಾರ್ವಜನಿಕವಾಗಿ ಪದೇ ಪದೇ ಪ್ರತಿಪಾದಿಸುತ್ತಲೇ ಬಂದಿದೆ. ‘ವ್ಯಕ್ತಿ ನಿರ್ಮಾಣ’ ಎಂಬುದು ಜನರ ದೈಹಿಕ ಸಾಮರ್ಥ್ಯ, ಮನೋಭಾವ, ನಂಬಿಕೆಗಳು ಮತ್ತು ಅಸ್ಮಿತೆಯನ್ನು ರೂಪಿಸಿ, ಅವರನ್ನು ಹಿಂದೂ ರಾಷ್ಟ್ರದ ಆದರ್ಶ ಪ್ರಜೆಗಳನ್ನಾಗಿ ಮಾಡುವ ಪ್ರಕ್ರಿಯೆಯಾಗಿದೆ. ಶಾಖಾ ಪದ್ಧತಿಯ ಮೂಲಕ ನಡೆಯುವ ಈ ವ್ಯಕ್ತಿ ನಿರ್ಮಾಣದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಆದರೆ, ಈ ಕಾರ್ಯವನ್ನು ಕೈಗೆತ್ತಿಕೊಂಡಿರುವ ಸಂಘದ ಅನೇಕ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಕೂಡ ಒಂದು.

ಸಂಘದ ತೆಕ್ಕೆಗೆ ಸೇರದ ಜನರನ್ನು ಸಂಘದ ವಿಸ್ತರಣೆಯ ಸಾಧನಗಳನ್ನಾಗಿ ಪರಿವರ್ತಿಸುವ ಯಂತ್ರಗಳಂತೆ (machines) ಕಲ್ಪಿಸಿಕೊಳ್ಳಲಾದ ಇತರೆ ಹಲವಾರು ತರಬೇತಿ ಸಂಸ್ಥೆಗಳನ್ನೂ ಸಂಘ ಹೂಡಿದೆ. ‘ರಾಮಭಾವು ಮ್ಹಾಳ್ಗಿ ಪ್ರಬೋಧಿನಿ’ಯು ರಾಜಕೀಯ ನಾಯಕರನ್ನು ತರಬೇತುಗೊಳಿಸಿ ರೂಪಿಸುತ್ತದೆ. ‘ಸೆಂಟ್ರಲ್ ಹಿಂದೂ ಮಿಲಿಟರಿ ಎಜುಕೇಶನ್ ಸೊಸೈಟಿ’ಯು, ಮುಂದೊಂದು ದಿನ ಸೇನಾ ದಂಡನಾಯಕರಾಗಲಿ (Generals) ಎಂಬ ಆಶಯದೊಂದಿಗೆ ‘ಸಂಘಿ ಸೈನಿಕ’ರನ್ನು ರೂಪಿಸುತ್ತದೆ. ಇನ್ನು ‘ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ’ವು (S-VYASA), ಹಿಂದೂ ರಾಷ್ಟ್ರೀಯವಾದಿ ಯೋಗದ ‘ಮೃದು ಶಕ್ತಿ’ಯನ್ನು (soft power) ಪ್ರಪಂಚದಾದ್ಯಂತ ಹರಡಬಲ್ಲ ಯೋಗ ಶಿಕ್ಷಕರನ್ನು ತಯಾರು ಮಾಡುವ ಒಂದು ಬೃಹತ್ ಉತ್ಪಾದನಾ ಘಟಕದಂತೆ ಕಾರ್ಯನಿರ್ವಹಿಸುತ್ತದೆ.

ತರಬೇತಿ ಸಂಸ್ಥೆಗಳ ಜೊತೆಜೊತೆಗೇ, “ಜ್ಞಾನ ಉತ್ಪಾದನಾ ಸಂಸ್ಥೆಗಳು” (knowledge production organisations) ಎಂದು ಕರೆಯಬಹುದಾದ ಮತ್ತೊಂದು ವರ್ಗವಿದೆ. ಸಂಘದ ಇತರ ಸಂಸ್ಥೆಗಳು ಕೈಗೊಳ್ಳುವ ಕ್ರಮಗಳಿಗೆ ಒಂದು ನ್ಯಾಯಸಮ್ಮತತೆಯನ್ನು (legitimacy) ಒದಗಿಸಬಲ್ಲಂತಹ ಬೌದ್ಧಿಕ, ಸಾಂಸ್ಕೃತಿಕ, ಭಾವನಾತ್ಮಕ ಮತ್ತು ಕಲಾತ್ಮಕ ವಾತಾವರಣವನ್ನು ನಿರ್ಮಿಸುವುದು ಇವುಗಳ ಕೆಲಸ.

ಉದಾಹರಣೆಗೆ, ‘ಫೋರಂ ಫಾರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯುರಿಟಿ’, ‘ಫೋರಂ ಫಾರ್ ಸ್ಟ್ರಾಟೆಜಿಕ್ ಅಂಡ್ ಸೆಕ್ಯುರಿಟಿ ಸ್ಟಡೀಸ್’, ‘ಜಮ್ಮು ಕಾಶ್ಮೀರ್ ಸ್ಟಡಿ ಸೆಂಟರ್’ ಮತ್ತು ‘ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್’ನಂತಹ ಸಂಸ್ಥೆಗಳು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನೀತಿಗಳ ಕುರಿತು ಗಮನಹರಿಸುತ್ತವೆ. ‘ದಿ ಕಾರವಾನ್’ ಈಗಾಗಲೇ ವರದಿ ಮಾಡಿರುವಂತೆ, ಕಾಶ್ಮೀರದಲ್ಲಿ ಸೇನಾ ಹಸ್ತಕ್ಷೇಪದ ಕುರಿತು ‘ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್’ ವಿವರವಾದ ಪ್ರಸ್ತಾವನೆಗಳನ್ನು ಪ್ರಕಟಿಸುತ್ತದೆ. ನಂತರ, ಆ ಪ್ರದೇಶವನ್ನು ತಮ್ಮದಾಗಿಸಿಕೊಂಡ (annexation) ಕ್ರಮಕ್ಕೆ ಸಮರ್ಥನೆಯಾಗಿ ಸರ್ಕಾರಿ ಅಧಿಕಾರಿಗಳು ಅವೇ ಪ್ರಸ್ತಾವನೆಗಳನ್ನು ಆಧಾರವಾಗಿ ಬಳಸಿಕೊಳ್ಳುತ್ತಾರೆ.

ಈ ವರ್ಗದ ಅಡಿಯಲ್ಲಿ, ಸಂಘದ ‘ಚಿಂತಕರ ಚಾವಡಿ’ಗಳು (think tanks), ನೀತಿ ನಿರೂಪಣಾ ಸಂಸ್ಥೆಗಳು ಮತ್ತು ‘ಭಾರತೀಯ ಜ್ಞಾನ ಕೇಂದ್ರ’ಗಳ ಪರಿಸರ ವ್ಯವಸ್ಥೆಯು (ecosystems) ಹೊರತರುವ ಸಂಶೋಧನಾ ಫಲಿತಾಂಶಗಳನ್ನು ನಾವು ಪತ್ತೆಹಚ್ಚಿದ್ದೇವೆ. ‘ದೀನದಯಾಳ್ ಶೋಧ್ ಸಂಸ್ಥಾನ್’ ಮತ್ತು ‘ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್’ನಂತಹ ಸಂಸ್ಥೆಗಳು ಆರ್ಥಿಕ ಮತ್ತು ವಿಶೇಷವಾಗಿ ಗ್ರಾಮೀಣಾಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸುತ್ತವೆ. ಇತ್ತ ‘ಭಾರತೀಯ ವಿಚಾರ ಕೇಂದ್ರಂ’ ಮತ್ತು ‘ವಿಶ್ವ ಅಧ್ಯಯನ ಕೇಂದ್ರ’ಗಳು ನಾಗರಿಕತೆಯ ಸಾಧನೆಗಳ ಮೇಲೆ ಬೆಳಕು ಚೆಲ್ಲುತ್ತವೆ.

ಹಾಗೆಯೇ, ಲಿಂಗತ್ವಕ್ಕೆ (gender) ಸಂಬಂಧಿಸಿದ ವಿಷಯಗಳ ಮೇಲೆ ಕೆಲಸ ಮಾಡುವ ‘ದೃಷ್ಟಿ ಸ್ತ್ರೀ ಅಧ್ಯಯನ ಪ್ರಬೋಧನ ಕೇಂದ್ರ’; ಶಿಕ್ಷಣ ಕ್ಷೇತ್ರದಲ್ಲಿ ‘ಸಂವಿತ್ ರಿಸರ್ಚ್ ಫೌಂಡೇಶನ್’; ಮತ್ತು ದೇಶೀಯತೆಯ (indigeneity) ವಿಷಯದಲ್ಲಿ ‘ಇಂಟರ್ನ್ಯಾಷನಲ್ ಸೆಂಟರ್ ಫಾರ್ ಕಲ್ಚರಲ್ ಸ್ಟಡೀಸ್’ನಂತಹ ಚಿಂತಕರ ಚಾವಡಿಗಳೂ ಇವೆ. ಹಿಂದೂ ರಾಷ್ಟ್ರೀಯವಾದಿಗಳಲ್ಲಿ ಬೌದ್ಧಿಕ ದಿಗ್ಗಜರಿಲ್ಲ, ಅವರೇನಿದ್ದರೂ ಕೇವಲ ಅಸಭ್ಯ ಜನಪ್ರಿಯವಾದಿ ಪ್ರಚೋದಕರು (uncouth populist rabble rousers) ಮತ್ತು ಅವರಿಗೆ ಭಾರತದ ಆಡಳಿತದ ಬಗ್ಗೆ ಗಂಭೀರವಾದ ದೂರದೃಷ್ಟಿಯಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿದ್ದವು. ಈ ವೈವಿಧ್ಯಮಯ ಸಂಶೋಧನಾ ಸಂಸ್ಥೆಗಳ ಚಟುವಟಿಕೆಗಳು, ಅಂತಹ ಟೀಕೆಗಳಿಗೆ ಸಂಘವು ನೀಡಿದ ಪ್ರತ್ಯುತ್ತರದಂತಿದ್ದವು. ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹಿಂದೂ ರಾಷ್ಟ್ರೀಯವಾದಿಗಳು ತೀವ್ರ ಟೀಕೆಗೆ ಗುರಿಯಾಗುತ್ತಿದ್ದ ಸಂದರ್ಭದಲ್ಲಿಯೇ, ಅಂದರೆ 1990ರ ದಶಕದ ಅಂತ್ಯ ಮತ್ತು 2000ರ ದಶಕದ ಆರಂಭದವರೆಗೂ ಈ ಬಹುಪಾಲು ಸಂಶೋಧನಾ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಿರಲಿಲ್ಲ ಎಂಬುದು ಗಮನಾರ್ಹ.

ಅಂತಿಮವಾಗಿ ಮತ್ತು ಅತ್ಯಂತ ನಿರ್ಣಾಯಕವಾಗಿ, ಸಂಘದ ವ್ಯಾಪ್ತಿಯಲ್ಲಿರುವ ಬಹುದೊಡ್ಡ ಸಂಖ್ಯೆಯ ಸಂಸ್ಥೆಗಳೆಂದರೆ “ಅಂತಿಮ ಹಂತದ ಕಟ್ಟಕಡೆಯ ಕೊಂಡಿ ಸಂಸ್ಥೆಗಳು” (last-mile organisations). ಇವು ಸಂಘದ ಸಂಪನ್ಮೂಲಗಳು ಮತ್ತು ಸಂಘದ ಹೊರಗಿನ ಸಾರ್ವಜನಿಕರ ನಡುವಿನ ‘ಅಂತಿಮ ಸಂಪರ್ಕ ಸೇತುವೆ’ಯಂತೆ ಕಾರ್ಯನಿರ್ವಹಿಸುವ ಸಣ್ಣ ಸೇವಾ ಸಂಸ್ಥೆಗಳು. ಸಂಘವು ತಲುಪಲು ಬಯಸುವ ಸಮುದಾಯಗಳಲ್ಲಿ ಸೇವೆ ಒದಗಿಸುವ ಸಣ್ಣ ಕಣ್ಣಿನ ಆಸ್ಪತ್ರೆಗಳು, ರಕ್ತನಿಧಿಗಳು, ಹಳ್ಳಿಯ ಶಾಲೆಗಳು, ಅನಾಥಾಶ್ರಮಗಳು ಮತ್ತು ಕುಷ್ಠರೋಗ ನಿವಾರಣಾ ಕೇಂದ್ರಗಳು ಈ ವರ್ಗಕ್ಕೆ ಸೇರುತ್ತವೆ. ಈ ಸಂಸ್ಥೆಗಳ ವ್ಯಾಪ್ತಿ, ವಿಸ್ತಾರ ಮತ್ತು ಸಮುದಾಯಗಳೊಂದಿಗೆ ಅವು ಬೆರೆತುಹೋಗಿರುವ ರೀತಿ ಹಾಗೂ ಅವು ಒದಗಿಸುವ ಅತ್ಯಗತ್ಯ ಸೇವೆಗಳಿಂದಾಗಿ; ಅತ್ಯಂತ ವೈವಿಧ್ಯಮಯ ಭೌಗೋಳಿಕ ತಾಣಗಳಲ್ಲಿ, ದೊಡ್ಡ ಸಂಖ್ಯೆಯ ಜನರೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಇವುಗಳಿಂದ ಸಾಧ್ಯವಾಗುತ್ತಿದೆ.

ಐದನೇ ಕಂತು ‘ಭೀಕರ ಹಿಂಸಾಚಾರದಲ್ಲಿ ತೊಡಗಿಕೊಳ್ಳುವ ಗುಪ್ತ ಸಂಸ್ಥೆಗಳು!’

ಆರ್‌ಎಸ್‌ಎಸ್ ಜಾಲದ ರಚನೆಯಲ್ಲಿ ಈ ಸಂಸ್ಥೆಗಳು ಪ್ರಮುಖವಾಗಿ ಪರಿಧಿಯಲ್ಲಿವೆ. ಇವುಗಳಲ್ಲಿ ಬಹುತೇಕ ಸಂಸ್ಥೆಗಳು ಸಂಘದ ಜಾಲದ ‘ಅಂತಿಮ ಬಿಂದು’ವನ್ನು ಪ್ರತಿನಿಧಿಸುತ್ತವೆ. ಇವು ಸಮನ್ವಯ ಸಂಸ್ಥೆಯೊಂದಿಗೆ (co-ordinating organisation) ಕೇವಲ ಒಂದೇ ಒಂದು ಸಂಪರ್ಕ ಕೊಂಡಿಯನ್ನು ಹೊಂದಿರುತ್ತವೆಯೇ ಹೊರತು, ಪರಿಧಿಯಲ್ಲಿರುವ ಇತರ ಸಂಸ್ಥೆಗಳೊಂದಿಗೆ ಯಾವುದೇ ಸಮತಲ ಸಂಪರ್ಕವನ್ನು  ಹೊಂದಿರುವುದಿಲ್ಲ. ಈ ಸಂಸ್ಥೆಗಳು ಸಂಘದ ಪ್ರಬಲ ಸಾಮಾಜಿಕ ವಾತಾವರಣದ ಅಡಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಹಿಂದುತ್ವ ಸಿದ್ಧಾಂತಕ್ಕೆ ಅಷ್ಟಾಗಿ ಒತ್ತು ನೀಡುವುದಿಲ್ಲ. ಆ ಮೂಲಕ, ಹೊಸಬರಿಗೆ ಸಂಘದ ವಿಶಾಲ ಜಾಲವನ್ನು ಪ್ರವೇಶಿಸಲು ಇವು ಯಾವುದೇ ಅಪಾಯವಿಲ್ಲದ ಮತ್ತು ವಿವಾದರಹಿತ ದ್ವಾರಗಳಂತೆ (entry point) ಕಾಣಿಸಿಕೊಳ್ಳುತ್ತವೆ. ತಳಮಟ್ಟದ ಸೇವೆಯ ಮೇಲಿನ ಈ ಗಮನವು, ಸಂಘವು ತನ್ನನ್ನು ತಾನು ಹೇಗೆ ನೋಡಿಕೊಳ್ಳುತ್ತದೆ ಮತ್ತು ಜನರು ತನ್ನನ್ನು ಹೇಗೆ ನೋಡಬೇಕೆಂದು ಬಯಸುತ್ತದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಆದರೆ, ಇವೇ ಸಂಸ್ಥೆಗಳು ಸಿದ್ಧಾಂತ ಪ್ರಚಾರ ಮತ್ತು ಜನರ ಮಾನಸಿಕತೆಯನ್ನು ರೂಪಿಸುವ  ಪ್ರಮುಖ ತಾಣಗಳೂ ಆಗಿವೆ ಎಂಬುದನ್ನು ಮರೆಯುವಂತಿಲ್ಲ. ಅಲ್ಲದೆ, ಅನಿವಾಸಿ ಭಾರತೀಯರ ಸಂಘಟನೆಗಳಿಂದ ದತ್ತಿ ರೂಪದಲ್ಲಿ ಹರಿದುಬರುವ ಭಾರೀ ಮೊತ್ತದ ದೇಣಿಗೆಯನ್ನು ಸ್ವೀಕರಿಸುವ ವಾಹಕಗಳಾಗಿಯೂ (vectors) ಇವು ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಗಮನಿಸಬೇಕು.

ಈ ಸಂಶೋಧನೆಯು ಭವಿಷ್ಯದಲ್ಲಿ ಹೊಸ ಬಗೆಯ ತನಿಖೆಗಳಿಗೆ ಮತ್ತು ಪತ್ರಿಕೋದ್ಯಮದ ದಿಕ್ಕುಗಳಿಗೆ ಒಂದು ಭದ್ರ ಅಡಿಪಾಯ ಹಾಕಿಕೊಡಲಿದೆ ಎಂದು ನಮ್ಮ ತಂಡಕ್ಕೆ ಸಂಪೂರ್ಣ ವಿಶ್ವಾಸವಿದೆ. ಸಂಘವು ಹಣ ಮತ್ತು ಸಂಪನ್ಮೂಲಗಳನ್ನು ಹೇಗೆ ವರ್ಗಾಯಿಸುತ್ತದೆ ಎಂಬ ತನಿಖೆಗಳಿರಬಹುದು; ಪ್ರಚಾರಕ್ಕೆ ಬರದ ಸಂಘದ ಆದ್ಯತೆಗಳ (ಉದಾಹರಣೆಗೆ, ನೂರಾರು ವಸತಿ ಶಾಲೆಗಳು ಮತ್ತು ಹಾಸ್ಟೆಲ್‌ಗಳ ಜಾಲ) ಕುರಿತಾದ ಹೊಸ ತಿಳಿವಳಿಕೆಗಳಿರಬಹುದು; ಅಥವಾ ಸಂಘವು ಜಗತ್ತಿಗೆ ತಿಳಿಯದಂತೆ ಮುಚ್ಚಿಟ್ಟಿರುವ ತನ್ನ ಆಂತರಿಕ ಸಂಘರ್ಷಗಳನ್ನು ಭಿನ್ನವಾಗಿ ಗ್ರಹಿಸುವ ಮತ್ತು ಬಯಲಿಗೆಳೆಯುವ ಮಾರ್ಗಗಳಿರಬಹುದು – ಇವೆಲ್ಲದಕ್ಕೂ ಇದೊಂದು ಆರಂಭವಾಗಲಿದೆ. ಸಂಘದ ಬಗ್ಗೆ ಆಳವಾಗಿ ತಿಳಿಯಲು ಬಯಸುವವರಲ್ಲಿ ಏಳುವ ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು, ಅಸಲಿಗೆ ‘ಸಂಘ ಎಂದರೇನು’ ಎಂಬುದರ ವಾಸ್ತವ ಅರಿವಿರುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಇದೊಂದು ಪ್ರಾಥಮಿಕ ಮಾರ್ಗಸೂಚಿಯಾಗಲಿದೆ ಎಂದು ನಾವು ಭಾವಿಸುತ್ತೇವೆ. ಈ ಯೋಜನೆಯ ಕೊಡುಗೆ ಕೇವಲ ಪ್ರಾಯೋಗಿಕ ಮಾಹಿತಿಯಷ್ಟೇ ಅಲ್ಲ, ಅದು ‘ಪರಿಕಲ್ಪನಾತ್ಮಕ’ವಾದುದು ಕೂಡ ಹೌದು ಎಂದು ನಾವು ನಂಬುತ್ತೇವೆ.

ದಶಕಗಳಿಂದಲೂ, ಸಂಘದ ಬಗ್ಗೆ ಎರಡು ಬಗೆಯ ಸಮಾನಾಂತರ ತಿಳಿವಳಿಕೆಗಳು ಬೆಳೆಯಲು ಅವಕಾಶ ನೀಡಲಾಗಿದೆ. ಮೊದಲನೆಯದರ ಪ್ರಕಾರ; ಸಂಘದ ವಿವಿಧ ಘಟಕಗಳು ಅಸ್ಪಷ್ಟವಾಗಿ ಬೆಸೆದುಕೊಂಡಿದ್ದು, ಕೇವಲ ಸಮಾನ ಸೈದ್ಧಾಂತಿಕ ಗುರಿಯಿಂದ ಮಾತ್ರ ಒಂದಕ್ಕೊಂದು ಆತುಕೊಂಡಿವೆ ಮತ್ತು ಆರೆಸ್ಸೆಸ್‌ ತನ್ನನ್ನು ಕೇವಲ ನಿಷ್ಠಾವಂತ ಸ್ವಯಂಸೇವಕರು ಹಾಗೂ ಸಂಸ್ಥೆಗಳಿಗೆ “ಸ್ಫೂರ್ತಿ” ತುಂಬಲು ಸೀಮಿತಗೊಳಿಸಿಕೊಂಡಿದೆ. ಎರಡನೆಯ ತಿಳುವಳಿಕೆಯ ಪ್ರಕಾರ; ವಾಸ್ತವದಲ್ಲಿ ಸಂಘವು ಗೋಚರವಾಗುವ ಸೈದ್ಧಾಂತಿಕ ಏಕರೂಪತೆಗಿಂತ ಹೆಚ್ಚಾಗಿ, ಭೌತಿಕ ನಂಟುಗಳಿಂದ ಸಂಘಟಿತವಾಗಿದೆ. ನಿರ್ವಹಣೆ ಮತ್ತು ಸಮನ್ವಯವನ್ನೇ ತನ್ನ ಪ್ರಾಥಮಿಕ ಕರ್ತವ್ಯವನ್ನಾಗಿ ಮಾಡಿಕೊಂಡಿರುವ ಸಾಂಸ್ಥಿಕ ಆಡಳಿತಶಾಹಿಯು ಈ ನಂಟುಗಳನ್ನು ಸೃಷ್ಟಿಸಿದೆ ಎಂಬುದು.

ಈ ಎರಡನೆಯ ದೃಷ್ಟಿಕೋನದಲ್ಲಿ; ಸಂಘವು ಉದ್ದೇಶಪೂರ್ವಕವಾಗಿಯೇ ಬೇರೆ ಬೇರೆ ವರ್ಗದ ಜನರಿಗೆ ಬೇರೆ ಬೇರೆ ಮುಖಗಳನ್ನು ತೋರಿಸುತ್ತದೆ. ಆದರೆ ಈ ಎಲ್ಲ ಅವತಾರಗಳೂ ಒಂದೇ ‘ಮಾತೃಸಂಸ್ಥೆ’ಯಿಂದ (mothership) ಉದ್ಭವಿಸಿವೆ. ಈ ವಿಭಿನ್ನ ರೂಪಗಳೆಲ್ಲವೂ ಒಂದೇ ಏಕೀಕೃತ ಘಟಕದ ಅವಿಭಾಜ್ಯ ಅಂಗಗಳೆಂದು ಅದು ಪರಿಗಣಿಸುತ್ತದೆ ಮತ್ತು ಅದನ್ನು ಖಾತ್ರಿಪಡಿಸಲು ಗಣನೀಯ ಸಂಪನ್ಮೂಲಗಳನ್ನು ವ್ಯಯಿಸುತ್ತದೆ.

ನಾವು ನೆನಪಿಟ್ಟುಕೊಳ್ಳಬೇಕಾದ ವಿಷಯವೆಂದರೆ, ಈ ಎರಡೂ ಬಗೆಯ ತಿಳಿವಳಿಕೆಗಳನ್ನು ಸ್ವತಃ ಆರೆಸ್ಸೆಸ್‌ ಪ್ರಚುರಪಡಿಸುತ್ತದೆ. ಆದರೆ, ಒಂದು ಚೌಕಟ್ಟನ್ನು ಸತತವಾಗಿ ಸಾರ್ವಜನಿಕರ ಮುಂದೆ ಪ್ರದರ್ಶಿಸಿದರೆ, ಮತ್ತೊಂದನ್ನು ಕೇವಲ ಆಂತರಿಕ ವರ್ಗಕ್ಕಾಗಿ ಮೀಸಲಿಡಲಾಗಿದೆ. ಸಂಘವು ತನ್ನ ಶತಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸಂಘದ ನಿಜ ಸ್ವರೂಪವನ್ನು ತಿಳಿದುಕೊಳ್ಳುವ ಹಕ್ಕು ಜನರಿಗಿದೆ. ಆ ಮೂಲಕ ತಮ್ಮ ಆಯ್ಕೆಯ ತಿಳಿವಳಿಕೆಯನ್ನು ರೂಪಿಸಿಕೊಳ್ಳಲು ಜನರಿಗೆ ಅವಕಾಶ ಸಿಗಬೇಕಿದೆ.

ಅನುವಾದ : ಚೇತನಾ ತೀರ್ಥಹಳ್ಳಿ
(ಅನುವಾದ ಮಾಲಿಕೆ ಮುಕ್ತಾಯಗೊಂಡಿದೆ)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...