2014ರ ನಂತರ, ಕಠಿಣ ಕಾನೂನುಗಳ ಹೆಸರಿನಲ್ಲಿ ಅನೇಕ ಅಮಾಯಕರನ್ನು ಬಂಧಿಸಿ ವರ್ಷಗಟ್ಟಲೆ ಜೈಲಿನಲ್ಲಿಟ್ಟು ಹಿಂಸಿಸಲಾಗುತ್ತಿದೆ. ಕೆಲವರನ್ನು ಗಂಭೀರ ಆರೋಪದಡಿ ಬಂಧಿಸಿ ನಂತರ ಪುರಾವೆ ಇಲ್ಲ ಎಂದು ಖುಲಾಸೆಗೊಳಿಸಲಾಗಿದೆ. UAPA, TADA, POTA ಮುಂತಾದ ಕಠಿಣ ಕಾನೂನುಗಳು ದೇಶದ ಭದ್ರತೆಯ ಉದ್ದೇಶದಿಂದ ರೂಪಿತವಾದರೂ, ಇವುಗಳ ದುರ್ಬಳಕೆ ನಡೆಯುತ್ತಿದೆ ಎಂಬುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ
ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿ ನ್ಯಾಯ ನೀಡಬೇಕು. ಆದರೆ ಕಳೆದ ಕೆಲವು ವರ್ಷಗಳಿಂದ, ವಿಶೇಷವಾಗಿ ಅಲ್ಪಸಂಖ್ಯಾತ, ಮುಸ್ಲಿಂ ಸಮುದಾಯದವರನ್ನು ಭಯೋತ್ಪಾದನೆಯ ಆರೋಪದಲ್ಲಿ ಬಂಧಿಸುವ ಘಟನೆಗಳು ಹೆಚ್ಚಾಗಿವೆ. ಪೊಲೀಸರು “ಭಯೋತ್ಪಾದಕ” ಎಂದು ಸುಳ್ಳು ಆರೋಪ ಮಾಡಿ ಜನರನ್ನು ಬಂಧಿಸುತ್ತಾರೆ. ವರ್ಷಗಳ ಕಾಲ ಅವರು ಜೈಲಿನಲ್ಲಿ ಕಳೆಯಬೇಕಾಗಿ ಬರುತ್ತದೆ, ನಂತರ ಪುರಾವೆಗಳ ಕೊರತೆಯಿಂದ ನ್ಯಾಯಾಲಯಗಳು ಅವರನ್ನು ಖುಲಾಸೆಗೊಳಿಸುತ್ತವೆ. ಅಷ್ಟರಲ್ಲಿ ಕುಟುಂಬ, ಉದ್ಯೋಗ, ಗೌರವ, ಆತ್ಮವಿಶ್ವಾಸ ಎಲ್ಲವೂ ಕಳೆದು ಹೋಗಿರುತ್ತದೆ. ಇದು ಕೇವಲ ವ್ಯಕ್ತಿಗಳಿಗೆ ಆಗುವ ಅನ್ಯಾಯವಲ್ಲ, ನ್ಯಾಯ ವ್ಯವಸ್ಥೆ ಸಮಾಜದ ನಂಬಿಕೆಯನ್ನು ಕಳೆಯುವಂತಹ ಘಟನೆಗಳು.
ಈಗ ಈ ವಿಚಾರ ಯಾಕೆ ಎಂದರೆ, ಕಳೆದ ಸೋಮವಾರ ದೆಹಲಿಯ ಜನನಿಬಿಡ ಪ್ರದೇಶದಲ್ಲಿ ಕಾರು ಬಾಂಬ್ ಸ್ಪೋಟ ನಡೆದ ನಂತರ ಮಾಧ್ಯಮಗಳಲ್ಲಿ ರಾಜಕೀಯ ವಲಯದಲ್ಲಿ ಆಗುತ್ತಿರುವ ಚರ್ಚೆಗಳನ್ನು ನೋಡಿದಾಗ ಹಳೆಯ ತಪ್ಪುಗಳನ್ನು ನೆನಪಿಸುವ ಸಂದರ್ಭ ಬಂದಿದೆ. ದೆಹಲಿಯ ಘಟನೆಯ ನಂತರ ಹಲವರನ್ನು ಬಂಧಿಸಲಾಗಿದೆ. ನೈಜ ಅಪರಾಧಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಶಿಕ್ಷೆಗೆ ಗುರಿಪಡಿಸಬೇಕು. “ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು” ಎಂಬುದು ಈ ನೆಲದ ಕಾನೂನಿನ ಸಾರ. ಆದರೆ, ಅಮಾಯಕರನ್ನು ವರ್ಷಗಟ್ಟಲೆ ವಿಚಾರಣೆಯ ಹೆಸರಿನಲ್ಲಿ ಜೈಲಿನಲ್ಲಿ ಬಂಧಿಸಿಟ್ಟು, ನಂತರ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಖುಲಾಸೆ ಮಾಡಿದ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಅಷ್ಟರಲ್ಲಿ ಆತನ ಅರ್ಧ ಆಯಸ್ಸು ಮುಗಿದಿರುತ್ತದೆ. ಭಾರತದಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾ ಅಧಿಕಾರಿಗಳು ಮತ್ತು ಸರ್ಕಾರಗಳನ್ನು ಕುರುಡಾಗಿಸಿದೆ. ಧರ್ಮ ನೋಡಿ ವಿಚಾರಣೆಯನ್ನು ತ್ವರಿತವಾಗಿ ಅಥವಾ ನಿಧಾನವಾಗಿ ನಡೆಸುವ ಮಟ್ಟಿಗೆ ವ್ಯವಸ್ಥೆ ಹದಗೆಟ್ಟಿದೆ.
ಭಯೋತ್ಪಾದನಾ ಕಾನೂನುಗಳಾದ UAPA, TADA, POTA ಮೂಲತಃ ದೇಶದ ಭದ್ರತೆಗಾಗಿ ಮಾಡಲ್ಪಟ್ಟಿದ್ದರೂ, ಇವುಗಳನ್ನು ದುರ್ಬಳಕೆ ಮಾಡುವ ಘಟನೆಗಳು ಹೆಚ್ಚಾಗಿವೆ. 2002ರ ಅಕ್ಷರಧಾಮ ದಾಳಿ ಪ್ರಕರಣದಲ್ಲಿ ತಪ್ಪಾಗಿ ಬಂಧಿತರಾಗಿದ್ದ 127 ಮುಸ್ಲಿಮ್ ಯುವಕರು 19 ವರ್ಷಗಳ ನಂತರ 2021ರಲ್ಲಿ ಖುಲಾಸೆಗೊಂಡರು. 2005ರ ಹೈದರಾಬಾದ್ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ 10 ಜನರನ್ನು 12 ವರ್ಷಗಳ ನಂತರ ನಿರಪರಾಧಿಗಳೆಂದು 2025ರಲ್ಲಿ ಖುಲಾಸೆಗೊಳಿಸಲಾಗಿದೆ. ಇವು ನ್ಯಾಯದ ಹೆಸರಿನಲ್ಲಿ ನಡೆದ ಅನ್ಯಾಯದ ಉದಾಹರಣೆಗಳು.
ನೂರಾರು ಮಂದಿ ಸುಳ್ಳು ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡು ವರ್ಷಗಳ ಕಾಲ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಈ ಅಮಾಯಕರ ಜೀವನದ ದಾರಿ ಕೇವಲ ಕಾನೂನು ಹೋರಾಟವಲ್ಲ, ಇದು ಅವರ ಜೀವನ ನಾಶದ ಕಹಿ ಕಥೆ. ಬಂಧಿತರ ಕುಟುಂಬಗಳು ಕುಗ್ಗಿ ಹೋಗುತ್ತವೆ. ಕುಟುಂಬದ ಸದಸ್ಯರೇ ಸಮಾಜದಿಂದ ದೂರವಾಗುತ್ತಾರೆ, ಏಕೆಂದರೆ “ಭಯೋತ್ಪಾದಕನ ಕುಟುಂಬ” ಎಂಬ ಹಣೆಪಟ್ಟಿ ಅವರಿಗೆ ಸದಾ ಕಾಲ ಕಾಡುವ ಅವಮಾನ.

ಈ ಅನ್ಯಾಯಗಳು ಒಂದೇ ರಾಜ್ಯದಲ್ಲಿ ಮಾತ್ರ ನಡೆಯುತ್ತಿಲ್ಲ — ಬಹುತೇಕ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಹೆಚ್ಚಾಗಿ ವರದಿಯಾಗಿವೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದ ನಂತರ, ಫೇಕ್ ಎನ್‌ಕೌಂಟರ್ ಹಾಗೂ UAPA ಪ್ರಕರಣಗಳು ಹೆಚ್ಚಾದವು. 2024ರಲ್ಲಿ ದೆಹಲಿ ಗಲಭೆ ಪ್ರಕರಣದಲ್ಲಿ ಹಾಶಿಮ್ ಅಲಿ, ಅಬೂಬಕ್ಕರ್ ಮತ್ತು ಇತರರನ್ನು ನಾಲ್ಕು ವರ್ಷಗಳ ನಂತರ ಖುಲಾಸೆಗೊಳಿಸಲಾಯಿತು. ಏಕೆಂದರೆ ಪುರಾವೆಗಳು ಇರಲಿಲ್ಲ. ಆದರೆ ಈ ನಡುವೆ ಅವರ ಕುಟುಂಬಗಳು ಭಯೋತ್ಪಾದಕರೆಂಬ ಅವಮಾನದಲ್ಲಿ ನರಳಿದ್ದವು.
ಗುಜರಾತ್ ರಾಜ್ಯದಲ್ಲಿ 2002ರ ದಂಗೆಯ ನಂತರ ಮುಸ್ಲಿಂ ಯುವಕರ ಮೇಲೆ ಸುಳ್ಳು ಆರೋಪಗಳು ಸಾಮಾನ್ಯವಾಗಿವೆ. ಬಿಜೆಪಿ ಆಡಳಿತದ ರಾಜ್ಯವಾಗಿರುವ ಅಲ್ಲಿ UAPA ಮತ್ತು POTA ಕಾನೂನುಗಳನ್ನು ಹೆಚ್ಚು ಬಳಸಲಾಗುತ್ತಿದೆ. ಗೋದ್ರಾ ಗಲಭೆ ಪ್ರಕರಣದಲ್ಲಿ ನೂರಾರು ಮಂದಿಯನ್ನು ಬಂಧಿಸಲಾಯಿತು. ಆದರೆ ವರ್ಷಗಳ ನಂತರ ಅವರು ಖುಲಾಸೆಗೊಂಡರು. 2019ರಲ್ಲಿ ಹಿಂದುತ್ವ ಭಯೋತ್ಪಾದಕರಿಗೆ ಸಡಿಲಿಕೆ ನೀಡಿದರೆ, ಮುಸ್ಲಿಂ ಯುವಕರನ್ನು ಇನ್ನೂ ಬಂಧಿಸಲಾಗುತ್ತಿದೆ.
ಮಹಾರಾಷ್ಟ್ರದಲ್ಲಿಯೂ ಇದೇ ಪರಿಸ್ಥಿತಿ. 2008ರ ಮಾಲೆಗಾಂವ್ ಬಾಂಬ್ ಸ್ಫೋಟದಲ್ಲಿ ಹಿಂದುತ್ವ ಭಯೋತ್ಪಾದಕರಿಗೆ ಖುಲಾಸೆ ಭಾಗ್ಯ ದೊರೆತಿದ್ದರೆ, ಮುಸ್ಲಿಂ ಯುವಕರನ್ನು ಬಂಧಿಸಲಾಗುತ್ತಿದೆ. 2021ರ ವರದಿ ಪ್ರಕಾರ UAPAಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಕೇವಲ ಶೇ 2ರಷ್ಟು ಜನರಿಗೆ ಮಾತ್ರ ಆರೋಪ ಸಾಬೀತಾಗಿದೆ. ಉಳಿದವರು ವರ್ಷಗಳ ನಂತರ ನಿರಪರಾಧಿಗಳೆಂದು ಹೊರಬರುತ್ತಿದ್ದಾರೆ. ಮಧ್ಯ ಪ್ರದೇಶದಲ್ಲಿ ಧರ್ಮಾಂತರ ಪ್ರಕರಣಗಳ ಹೆಸರಿನಲ್ಲಿ ಮುಸ್ಲಿಂ ಉಲಮಾಗಳನ್ನು ಬಂಧಿಸುವ ಘಟನೆಗಳು ಹೆಚ್ಚಾಗಿವೆ.

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, UAPA ಕಾನೂನಿನ ಬಳಕೆ ಶೇ. 50ಕ್ಕಿಂತ ಹೆಚ್ಚು ಏರಿಕೆಯಾಗಿದೆ. 2019ರ ವರದಿ ಪ್ರಕಾರ, ಕಳೆದ 10 ವರ್ಷಗಳಲ್ಲಿ ನಡೆದ ಶೇ 91ರಷ್ಟು ದ್ವೇಷ ಅಪರಾಧಗಳು ಮೋದಿ ಸರ್ಕಾರದ ಕಾಲದಲ್ಲೇ ನಡೆದಿವೆ. ರಾಷ್ಟ್ರೀಯ ತನಿಖಾ ಏಜೆನ್ಸಿ (NIA) ಹಾಗೂ ರಾಜ್ಯಗಳ ATS ವಿಭಾಗಗಳು ಸಾವಿರಾರು ಮುಸ್ಲಿಮರನ್ನು ಬಂಧಿಸಿವೆ. ಅವರಲ್ಲಿ ಬಹುತೇಕರು ನಂತರ ಖುಲಾಸೆಯಾಗಿದ್ದಾರೆ.
ಇದನ್ನೂ ಓದಿ ಅಮೆರಿಕದಲ್ಲಿ ಕೋಲಾಹಲವೆಬ್ಬಿಸಿದ ಎಪ್‌ಸ್ಟೀನ್ ಫೈಲ್ಸ್, ಇಕ್ಕಟ್ಟಿನಲ್ಲಿ ಡೊನಾಲ್ಡ್ ಟ್ರಂಪ್
ಬಂಧಿಸಿದ ನಂತರ ಅವರನ್ನು ವಿಚಾರಣೆಯ ಹೆಸರಿನಲ್ಲಿ ಕಿರುಕುಳ ನೀಡುವುದು ಇನ್ನೂ ಭಯಾನಕ. ಹಲವರಿಗೆ ವಿದ್ಯುತ್ ಶಾಕ್ ನೀಡಲಾಗಿದೆ, ಹೊಡೆತ, ಅವಮಾನ ಅಷ್ಟೇ ಅಲ್ಲ “ತಪ್ಪು ಒಪ್ಪಿಕೊಳ್ಳಬೇಕು” ಎಂಬ ಒತ್ತಡ. ಕುಟುಂಬಕ್ಕೆ ಆಧಾರವಾಗಿದ್ದವರನ್ನು ಬಂಧಿಸಿದ ನಂತರ ಸಂತ್ರಸ್ತರ ಕುಟುಂಬಗಳು ಸಾಲದಲ್ಲಿ ಮುಳುಗಿವೆ, ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಖುಲಾಸೆಯಾದ ಬಳಿಕವೂ ಸಮಾಜದಲ್ಲಿ ಅವರಿಗೆ ಗೌರವ ಸಿಗುವುದಿಲ್ಲ. “ಟೆರರಿಸ್ಟ್” ಎಂಬ ಗುರುತನ್ನು ಅವರು ಜೀವನವಿಡೀ ಹೊತ್ತುಕೊಳ್ಳಬೇಕಾಗುತ್ತದೆ. ಅವರಿಗೆ ಉದ್ಯೋಗ ಸಿಗುವುದಿಲ್ಲ, ಜನರು ದೂರವಾಗುತ್ತಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯಡಿ ದೇಶ ಸುರಕ್ಷಿತವೆಂಬ ಸುಳ್ಳುಗುಳ್ಳೆಯ ಒಡೆದ ಸ್ಫೋಟ
ಈ ಅಮಾಯಕರಿಗೆ ನ್ಯಾಯ ಸಿಕ್ಕರೂ ಅದು ತುಂಬಾ ತಡವಾಗಿ ಬರುತ್ತಿದೆ. ಅವರ ಬದುಕು, ಸಮಾಜದಲ್ಲಿ ಗೌರವ ಎಲ್ಲವೂ ನಾಶವಾದ ಬಳಿಕ “ಅವರು ನಿರಪರಾಧಿಗಳು” ಎಂದು ಹೇಳುವುದು ಪರಿಹಾರವಲ್ಲ. ಪೊಲೀಸರಿಗೆ ಅಥವಾ ತನಿಖಾ ಅಧಿಕಾರಿಗಳಿಗೆ ತಪ್ಪು ಪ್ರಕರಣದಲ್ಲಿ ಬಂಧಿಸಿದರೆ ಕಠಿಣ ಶಿಕ್ಷೆ ನೀಡಬೇಕು. ಕಾನೂನು ಪ್ರಕ್ರಿಯೆ ಪಾರದರ್ಶಕವಾಗಬೇಕು, ತನಿಖಾ ಸಂಸ್ಥೆಗಳು ರಾಜಕೀಯ ಒತ್ತಡದಿಂದ ಮುಕ್ತವಾಗಿರಬೇಕು. ಇಂತಹ ಪ್ರಕರಣಗಳು ಕೇವಲ ಮುಸ್ಲಿಮರ ವಿಷಯವಲ್ಲ, ಇದು ಸಂಪೂರ್ಣ ನ್ಯಾಯವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಳ್ಳುವ ಅಪಾಯವಾಗಿದೆ. ಯಾವ ಸಮುದಾಯದವರಾದರೂ ಸುಳ್ಳು ಆರೋಪಕ್ಕೆ ಗುರಿಯಾಗಬಹುದು. ನ್ಯಾಯವನ್ನು ಉಳಿಸಲು ಕಾನೂನು ಪ್ರಕ್ರಿಯೆ ಎಲ್ಲರಿಗೂ ಸಮಾನವಾಗಿ ನಡೆಯಬೇಕು.
ಭಾರತದ ಭವಿಷ್ಯ ನ್ಯಾಯ, ಸಮಾನತೆ ಮತ್ತು ನಂಬಿಕೆಯ ಮೇಲೆ ನಿಂತಿದೆ. ಅಮಾಯಕರನ್ನು “ಭಯೋತ್ಪಾದಕ” ಎಂದು ಗುರುತಿಸಿ ಬಂಧಿಸುವುದು ಕಾನೂನು ದುರ್ಬಳಕೆ ಮಾತ್ರವಲ್ಲ — ಅದು ಅಮಾನವೀಯ ಅಪರಾಧ. ನ್ಯಾಯ ವ್ಯವಸ್ಥೆ ಎಲ್ಲರಿಗೂ ಒಂದೇ ತರಹ ಕಾರ್ಯನಿರ್ವಹಿಸಿದಾಗ ಮಾತ್ರ ನಮ್ಮ ಜನತಂತ್ರ ನಿಜವಾಗಿ ಬಲಿಷ್ಠವಾಗುತ್ತದೆ.

ಹಲವಾರು ವರದಿಗಳು, ಮಾನವ ಹಕ್ಕು ಸಂಸ್ಥೆಗಳ ಅಧ್ಯಯನಗಳು ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳ ತನಿಖೆಗಳು ಭಾರತದಲ್ಲಿ ಭಯೋತ್ಪಾದನಾ ಕಾನೂನುಗಳ ದುರ್ಬಳಕೆಯ ಗಂಭೀರ ಚಿತ್ರಣವನ್ನು ನೀಡುತ್ತಿವೆ. Al Jazeera, BBC, The Guardian ಹಾಗೂ Human Rights Watch ಮುಂತಾದ ಸಂಸ್ಥೆಗಳು ಸರ್ಕಾರದ ತನಿಖಾ ಸಂಸ್ಥೆಗಳು ಹೇಗೆ UAPA ಹಾಗೂ ಇತರ ಕಠಿಣ ಕಾನೂನುಗಳನ್ನು ಅಮಾಯಕರ ವಿರುದ್ಧ ಬಳಸುತ್ತಿವೆ ಎಂಬುದನ್ನು ಬಹಿರಂಗಪಡಿಸಿವೆ. ಇವುಗಳಲ್ಲಿ ಬಂಧಿತರಾದವರು ಬಹುಪಾಲು ಮುಸ್ಲಿಂ ಯುವಕರು. “ದೇಶದ ಭದ್ರತೆ” ಎಂಬ ಹೆಸರಿನಲ್ಲಿ ನಡೆಯುವ ಈ ಕ್ರಮಗಳು, ವಾಸ್ತವದಲ್ಲಿ ರಾಜಕೀಯ ಮತ್ತು ಧಾರ್ಮಿಕ ಭೇದಭಾವದ ಫಲ ಎಂದು ಅನೇಕ ವಿಶ್ಲೇಷಕರು ಹೇಳುತ್ತಿದ್ದಾರೆ.
ಈ ವರದಿಗಳಲ್ಲಿ ಸಾಮಾನ್ಯ ಅಂಶವೆಂದರೆ, ಬಂಧಿತರ ವಿರುದ್ಧ ಯಾವುದೇ ದೃಢ ಪುರಾವೆಗಳಿಲ್ಲ. ಆದರೆ ತನಿಖಾ ಪ್ರಕ್ರಿಯೆ ವರ್ಷಗಳ ಕಾಲ ಮುಂದುವರಿಯುತ್ತದೆ. ಹಲವು ವರದಿಗಳು ತಿಳಿಸಿದಂತೆ, 18 ರಿಂದ 20 ವರ್ಷಗಳ ನಂತರ ಖುಲಾಸೆಗೊಂಡವರ ಜೀವನಗಳು ಈಗಾಗಲೇ ಸಂಪೂರ್ಣ ಹಾಳಾಗಿದೆ. ಬಂಧನದ ಸಮಯದಲ್ಲಿ ಕುಟುಂಬಗಳು ಸಾಮಾಜಿಕವಾಗಿ ತಿರಸ್ಕೃತವಾಗುತ್ತವೆ. ಇವು ಕೇವಲ ವೈಯಕ್ತಿಕ ಅನ್ಯಾಯವಲ್ಲ, ಅದು ರಾಜ್ಯದ ನ್ಯಾಯಸಂಸ್ಥೆಗಳ ವೈಫಲ್ಯದ ಪ್ರತೀಕವಾಗಿದೆ. ಕಾನೂನು ಮತ್ತು ತನಿಖಾ ಸಂಸ್ಥೆಗಳು ಧಾರ್ಮಿಕ ಅಥವಾ ರಾಜಕೀಯ ಪ್ರಭಾವದಿಂದ ಮುಕ್ತವಾಗಬೇಕು. ನ್ಯಾಯವು ಕೇವಲ ನ್ಯಾಯಾಲಯದ ತೀರ್ಪಿನಲ್ಲಿ ಅಲ್ಲ, ಅದರ ತತ್ವದಲ್ಲಿ ಪ್ರತಿಫಲಿಸಬೇಕು. ನಿಷ್ಪಕ್ಷಪಾತ ತನಿಖೆ, ಪೊಲೀಸ್ ಹೊಣೆಗಾರಿಕೆ ಮತ್ತು ಅಮಾಯಕರಿಗೆ ಪರಿಹಾರ ನೀಡುವ ವ್ಯವಸ್ಥೆ ಇಲ್ಲದೆ ಜನತಂತ್ರದ ನಂಬಿಕೆ ಉಳಿಯುವುದಿಲ್ಲ. ನಿಜವಾದ ರಾಷ್ಟ್ರಭಕ್ತಿ ಎಂದರೆ ದುರ್ಬಲರ ಹಕ್ಕುಗಳನ್ನು ಕಾಪಾಡುವುದೇ ವಿನಾ ಭಯದ ವಾತಾವರಣದಲ್ಲಿ ಅವರನ್ನು ಮೌನಗೊಳಿಸುವುದಲ್ಲ.
ಜೆಎನ್‌ಯು ವಿದ್ಯಾರ್ಥಿ ನಾಯಕರಾದ ಉಮರ್ ಖಾಲಿದ್ ಸೇರಿದಂತೆ ಏಳು ಮಂದಿ ವಿದ್ಯಾರ್ಥಿ ಮುಖಂಡರನ್ನು ಎನ್‌ಆರ್‌ಸಿ ವಿರುದ್ಧ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಯುಎಪಿಎ ಅಡಿ ಬಂಧಿಸಿ ನಾಲ್ಕು ವರ್ಷ ಆಗುತ್ತಿದೆ. ಆದರೆ, ಇದುವರೆಗೂ ಅವರಿಗೆ ಜಾಮೀನೂ ಸಿಕ್ಕಿಲ್ಲ, ಟ್ರಯಲ್ ಕೂಡಾ ಶುರುವಾಗಿಲ್ಲ. ಇದು ಇಸ್ಲಾಮೋಫೋಬಿಯಾ ಪರಿಣಾಮ ನ್ಯಾಯಾಲಯಗಳೂ ವರ್ತಿಸುತ್ತಿರುವ ರೀತಿಗೆ ತಾಜಾ ಉದಾಹರಣೆ.





