ಲಿಂಗತ್ವ ಅಲ್ಪಸಂಖ್ಯಾತರ ಅಸ್ಮಿತೆಯನ್ನೇ ಅಳಿಸುವ ಮಸೂದೆ: ಆತ್ಮಗೌರವಕ್ಕೆ ಕೊಡಲಿಪೆಟ್ಟು

Date:

ದಶಕಗಳ ಕಾಲ ಅವಮಾನವೆಂಬ ಕಗ್ಗತ್ತಲಿನಿಂದ ಹೊರಬರಲು ನಡೆಸಿದ ಹೋರಾಟಕ್ಕೆ 2014ರ ಸುಪ್ರೀಂ ಕೋರ್ಟ್‌ನ ತೀರ್ಪು ಒಂದು ಬೆಳಕಿನ ಕಿರಣ. ಆದರೆ ಇಂದು ಮಸೂದೆಗೆ ತಿದ್ದುಪಡಿ ತಂದು ಭರವಸೆಯ ಮೇಲೆ ಮಸಿ ಬಳಿಯಾಗುತ್ತಿದೆ. ನಾವೂ ಮನುಷ್ಯರು ಎಂದು ಸಾಬೀತುಪಡಿಸಲು ಲಿಂಗತ್ವ ಅಲ್ಪಸಂಖ್ಯಾತರು ಎಷ್ಟು ಬಾರಿ ಈ ಸಮಾಜದ ಮುಂದೆ ಬೆತ್ತಲಾಗಬೇಕು? ಮನಸ್ಸಿನ ಭಾವನೆಯನ್ನು ಯಾವ ವೈದ್ಯಕೀಯ ಪರೀಕ್ಷೆಯಿಂದ ಅಲೆಯಲು ಸಾಧ್ಯ?

ದಶಕಗಳಿಂದಲೂ ಲಿಂಗತ್ವ ಅಲ್ಪಸಂಖ್ಯಾತರು (Transgenders) ಕೇವಲ ಸಾಮಾಜಿಕವಾಗಿ ಮಾತ್ರವಲ್ಲ, ಆರ್ಥಿಕ, ರಾಜಕೀಯ ಮತ್ತು ಮಾನಸಿಕವಾಗಿ ದಮನಕ್ಕೊಳಗಾದ ಸಮುದಾಯ. ತಮ್ಮ ಘನತೆ, ಗೌರವಕ್ಕಾಗಿ ಶತಮಾನಗಳಿಂದಲೂ ಸಮುದಾಯ ಹೋರಾಟ ನಡೆಸುತ್ತಲೇ ಇದೆ. ಈ ಹಿಂದೆ ಸಂಪ್ರದಾಯ ಎಂಬ ಅಮಾನವೀಯ ನೆಪ ಮುಂದಿಟ್ಟು ಈ ಸಮುದಾಯವನ್ನು ದೂರ ತಳ್ಳಲಾಗುತ್ತಿತ್ತು. ಆದರೆ ವಸಾಹತುಶಾಹಿ ಕಾಲದಲ್ಲಿ ಕಾನೂನುಗಳು, ಪೂರ್ವಾಗ್ರಹ ಪೀಡಿತ ಮನೋಭಾವದಿಂದಾಗಿ ಅಂಚಿಗೆ ತಳ್ಳಲಾಗುತ್ತಿದೆ. ಸಮುದಾಯ ನಡೆಸಿದ ದೀರ್ಘ ಹೋರಾಟದ ಫಲವಾಗಿ 2014ರಲ್ಲಿ ಸಂವಿಧಾನದ 14, 19 ಮತ್ತು 21ನೇ ವಿಧಿಗಳ ಅಡಿಯಲ್ಲಿ ಸಿಗುವ ಸಮಾನತೆ ಮತ್ತು ಘನತೆಯ ಹಕ್ಕುಗಳು ಲಿಂಗತ್ವ ಅಲ್ಪಸಂಖ್ಯಾತರಿಗೂ ದಕ್ಕಿತು. ಆದರೆ ಇದೀಗ ಕೇಂದ್ರ ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಪ್ರಶ್ನಿಸುವಂತಹ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ.

ಕೇಂದ್ರ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಕ್ಕೆ ತಿದ್ದುಪಡಿ ತಂದು ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ–2026 ಅನ್ನು ಸಂಸತ್ತಿನಲ್ಲಿ ಮಂಡಿಸಿದೆ. ಈ ಮಸೂದೆಯಲ್ಲಿ ರಕ್ಷಣೆ ಎಂಬುದು ಬರೀ ಲಿಖಿತವಾಗಿದೆಯೇ ಹೊರತು, ನೈಜವಾಗಿ ಈ ಮದೂದೆ ಹಕ್ಕುಗಳನ್ನು ರಕ್ಷಿಸುವ ಬದಲು, ಲಿಂಗತ್ವ ಅಲ್ಪಸಂಖ್ಯಾತರ ಘನತೆಯನ್ನು ಕಸಿದುಕೊಳ್ಳುವ ಅಸ್ತ್ರವಾಗುತ್ತಿದೆ. ಸದ್ಯ ಈ ಮಸೂದೆ ವಿರುದ್ಧ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ತಿದ್ದುಪಡಿಯು ‘ನಲ್ಸಾ’ (NALSA) ತೀರ್ಪನ್ನು ಉಲ್ಲಂಘಿಸುತ್ತದೆ. ಸದ್ಯ ಸಮುದಾಯ ತಮ್ಮ ಹಕ್ಕಿಗಾಗಿ ನಡೆಸುವ ಹೋರಾಟವನ್ನು ಮತ್ತೆ ಆರಂಭದಿಂದ ಶುರು ಮಾಡುವಂತಾಗಿದೆ.

ಇದನ್ನು ಓದಿದ್ದೀರಾ? ಮೂಲಭೂತ ಹಕ್ಕುಗಳನ್ನು ಕಸಿಯುವ ತಂತ್ರ: ಲಿಂಗತ್ವ ಅಲ್ಪಸಂಖ್ಯಾತರ ಮಸೂದೆ ತಿದ್ದುಪಡಿ ವಿರುದ್ಧ ತೀವ್ರ ಆಕ್ರೋಶ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಏನಿದು ನಲ್ಸಾ ತೀರ್ಪು?

ಸುಪ್ರೀಂ ಕೋರ್ಟ್ 2014ರ ಏಪ್ರಿಲ್ 15ರಂದು ನೀಡಿದ ಐತಿಹಾಸಿಕ ತೀರ್ಪು ನಲ್ಸಾ (NALSA) ತೀರ್ಪು. ಲಿಂಗತ್ವ ಅಲ್ಪಸಂಖ್ಯಾತರನ್ನೂ ಅಧಿಕೃತವಾಗಿ ಗುರುತಿಸಿದ ತೀರ್ಪಿದು. “ಪ್ರತಿಯೊಬ್ಬ ವ್ಯಕ್ತಿಯು ತನ್ನ ಲಿಂಗವನ್ನು ತಾನೇ ನಿರ್ಧರಿಸುವ ಹಕ್ಕನ್ನು ಹೊಂದಿದ್ದಾನೆ. ಯಾವುದೇ ವೈದ್ಯಕೀಯ ಪರೀಕ್ಷೆ ಅಥವಾ ಶಸ್ತ್ರಚಿಕಿತ್ಸೆಯಿಲ್ಲದೆಯೇ ವ್ಯಕ್ತಿಯು ತನ್ನ ಲಿಂಗ ಗುರುತನ್ನು ನಿರ್ಧರಿಸಬಹುದು” ಎಂದು ಈ ತೀರ್ಪು ಹೇಳುತ್ತದೆ. ಹಾಗೆಯೇ ಸಂವಿಧಾನದ ವಿಧಿ 14 (ಸಮಾನತೆ), ವಿಧಿ 15 (ತಾರತಮ್ಯ ವಿರೋಧ), ಮತ್ತು ವಿಧಿ 21 (ಜೀವಿಸುವ ಮತ್ತು ಘನತೆಯ ಹಕ್ಕು) ಅಡಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.

ಈ ತೀರ್ಪಿನ ಫಲವಾಗಿಯೇ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಜಾರಿಗೆ ಬಂದಿದೆ. ಈ ಕಾಯ್ದೆಯ ಪ್ರಕಾರ ಲಿಂಗತ್ವ ಅಲ್ಪಸಂಖ್ಯಾತರು ಜಿಲ್ಲಾ ಮ್ಯಾಜಿಸ್ಟ್ರೇಟ್ (District Magistrate) ಅವರ ಬಳಿ ಅರ್ಜಿ ಸಲ್ಲಿಸಿ ತಮ್ಮ ಗುರುತಿನ ಪ್ರಮಾಣಪತ್ರವನ್ನು ಪಡೆಯಬಹುದು. ಅದಕ್ಕಾಗಿ ಯಾವುದೇ ಶಸ್ತ್ರಚಿಕಿತ್ಸೆ, ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ. ಅದಾದ ಬಳಿಕ ಶಸ್ತ್ರಚಿಕಿತ್ಸೆಯ ಮೂಲಕ ಲಿಂಗ ಬದಲಾವಣೆ ಮಾಡಿಕೊಂಡರೆ, ಪರಿಷ್ಕೃತ ಪ್ರಮಾಣಪತ್ರಕ್ಕಾಗಿಯೂ ಅರ್ಜಿ ಸಲ್ಲಿಸಬಹುದು. ಆದರೆ ಈ ಮೂಲ ಕಾಯ್ದೆಯನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ.

ಹೊಸ ತಿದ್ದುಪಡಿ ಮಸೂದೆಯಲ್ಲಿ ಏನಿದೆ?

ಹೊಸ ತಿದ್ದುಪಡಿ ಮಸೂದೆಯಲ್ಲಿ ಈ ಹಿಂದೆ ಇದ್ದ ವಿಶಾಲವಾದ ‘ಲಿಂಗತ್ವ ಅಲ್ಪಸಂಖ್ಯಾತ’ ವ್ಯಾಖ್ಯಾನವನ್ನು ಕಿರಿದುಗೊಳಿಸಲಾಗಿದೆ. ಕೇವಲ ಜೈವಿಕ ಕಾರಣಗಳಿಂದ ಸಾಮಾಜಿಕ ಬಹಿಷ್ಕಾರಕ್ಕೊಳಗಾದವರಾದ ಹಿಜ್ರಾ, ಕಿನ್ನರ್, ಅರವಾಣಿ, ಜೋಗತಿ ಮೊದಲಾದ ಸಮುದಾಯಕ್ಕೆ ಸೇರಿದವರು ಮಾತ್ರ ತಮ್ಮನ್ನು ತಾವು ಲಿಂಗತ್ವ ಅಲ್ಪಸಂಖ್ಯಾತರು ಎಂದು ಗುರುತಿಸಿಕೊಳ್ಳಬಹುದು. ಹಾಗೆಯೇ ಈ ಹಿಂದಿನಂತೆ ಒಬ್ಬ ವ್ಯಕ್ತಿ ತಾನು ಲಿಂಗತ್ವ ಅಲ್ಪಸಂಖ್ಯಾತ ಎಂದು ಗುರುತಿಸಿಕೊಳ್ಳಲು ಕೇವಲ ಅರ್ಜಿ ಸಲ್ಲಿಸಿದರೆ ಸಾಲದು. ಸರ್ಕಾರ ನೇಮಿಸುವ ‘ವೈದ್ಯಕೀಯ ಮಂಡಳಿ’ಯ ತಪಾಸಣೆ, ಶಿಫಾರಸು ಕಡ್ಡಾಯವಾಗಿದೆ. ಅಂದರೆ ಬೆತ್ತಲಾಗಿ ತಾನು ಲಿಂಗತ್ವ ಅಲ್ಪಸಂಖ್ಯಾತರು ಎಂದು ಸಾಬೀತುಪಡಿಸಬೇಕು. ವೈದ್ಯಕೀಯ ಮಂಡಳಿಯ ವರದಿ ಬಂದ ನಂತರವೂ, ವ್ಯಕ್ತಿಗೆ ಗುರುತಿನ ಚೀಟಿ ನೀಡಬೇಕೇ ಅಥವಾ ಬೇಡವೇ ಎಂಬ ಅಂತಿಮ ನಿರ್ಧಾರದ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.

ಲಿಂಗತ್ವ ಅಲ್ಪಸಂಖ್ಯಾತರ ಮಸೂದೆ
ಬೆಂಗಳೂರಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಮಸೂದೆ ವಿರುದ್ಧ ಪ್ರತಿಭಟನೆ

ಆದರೆ ಈ ತಿದ್ದುಪಡಿಯೇ ಸಂವಿಧಾನಬಾಹಿರ

ನಲ್ಸಾ ತೀರ್ಪಿನ ಪ್ರಕಾರ ಒಬ್ಬ ವ್ಯಕ್ತಿ ತನ್ನ ಲಿಂಗವನ್ನು ತಾನೇ ನಿರ್ಧರಿಸುವ ಹಕ್ಕು ಹೊಂದಿರುತ್ತಾರೆ. ಆದರೆ ಇದೀಗ ಲಿಂಗತ್ವ ಅಲ್ಪಸಂಖ್ಯಾತರು ‘ವೈದ್ಯಕೀಯ ಪ್ರಮಾಣಪತ್ರ’ದ ಅಧೀನಕ್ಕೆ ಒಳಗಾಗಬೇಕಿದೆ. ಇದು ವ್ಯಕ್ತಿಯ ಖಾಸಗಿತನ ಮತ್ತು ದೈಹಿಕ ಸ್ವಾಯತ್ತತೆಯ ಉಲ್ಲಂಘನೆ. ತಾವು ಲಿಂಗತ್ವ ಅಲ್ಪಸಂಖ್ಯಾತರು ಎಂದು ಗುರುತಿಸಿಕೊಳ್ಳಲು ವೈದ್ಯರ ಮುಂದೆ ಬೆತ್ತಲಾಗುವುದು ಈ ಸಮುದಾಯಕ್ಕೆ ಮಾಡುವ ಅವಮಾನವಲ್ಲವೇ? ಲಿಂಗ ನೋಡಿ ಪ್ರಮಾಣಪತ್ರ ನೀಡುವುದಾದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದ ಅಥವಾ ಸಾಂಪ್ರದಾಯಿಕ ಗುಂಪುಗಳಿಗೆ ಸೇರದ ‘ಟ್ರಾನ್ಸ್‌ಮೆನ್’ (Trans-men) ವ್ಯಕ್ತಿಗಳಿಗೆ ಸ್ಥಾನವೆಲ್ಲಿದೆ? ಇವರುಗಳನ್ನು ಕಾನೂನಿನ ರಕ್ಷಣೆಯಿಂದ ಹೊರಗಿಡುವುದಲ್ಲವೇ? ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿರುವುದು ಭ್ರಷ್ಟಾಚಾರ ಮತ್ತು ಕಿರುಕುಳಕ್ಕೆ ದಾರಿ ಮಾಡಿಕೊಡಬಹುದು ಎಂಬ ಆತಂಕವೂ ಇದೆ.

ಇದನ್ನು ಓದಿದ್ದೀರಾ? ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!

ವೈದ್ಯಕೀಯ ಪರೀಕ್ಷೆಯ ಮೂಲಕ ಸಾಬೀತುಪಡಿಸಲು ಸಾಧ್ಯವೇ?

ಅಷ್ಟಕ್ಕೂ ನಾವು ಲಿಂಗತ್ವ ಅಲ್ಪಸಂಖ್ಯಾತರು ಎಂದು ವೈದ್ಯಕೀಯ ಪರೀಕ್ಷೆಯ ಮೂಲಕ ಸಾಬೀತುಪಡಿಸಲು ಸಾಧ್ಯವೇ? ಖಂಡಿತವಾಗಿಯೂ ಇಲ್ಲ. ಒಬ್ಬ ವ್ಯಕ್ತಿಯ ‘ಲಿಂಗದ ಗುರುತಿಸುವಿಕೆ’ (Gender Identity) ಎಂಬುದು ಅವರ ಮನಸ್ಸಿಗೆ ಮತ್ತು ಭಾವನೆಗೆ ಸಂಬಂಧಿಸಿದ್ದೇ ಹೊರತು ಕೇವಲ ಶಾರೀರಿಕ ರಚನೆಗಲ್ಲ. ಅದೆಷ್ಟೋ ಮಂದಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗುವುದಿಲ್ಲ. ಹಾಗಿದ್ದಾಗ ಅವರ ಅಸ್ತಿತ್ವವನ್ನೇ ಈ ಮಸೂದೆ ಪ್ರಶ್ನಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಪ್ರಮುಖ ವೈದ್ಯಕೀಯ ಸಂಸ್ಥೆಗಳ ಪ್ರಕಾರ, ಲಿಂಗದ ಗುರುತಿಸುವಿಕೆ (Gender Identity) ಮತ್ತು ಜೈವಿಕ ಲಿಂಗ (Biological Sex) ಬೇರೆ ಬೇರೆ. ಒಬ್ಬ ವ್ಯಕ್ತಿಯ ದೇಹದ ಅಂಗಾಗಕ್ಕೂ ತಾವು ಗುರುತಿಸಿಕೊಳ್ಳಲು ಬಯಸುವ ಲಿಂಗಕ್ಕೂ ಸಂಬಂಧವಿಲ್ಲ. ಮನಸ್ಸು ತನ್ನನ್ನು ಬೇರೊಂದು ಲಿಂಗದವನೆಂದು ಗುರುತಿಸಿಕೊಳ್ಳಬಹುದು. ಇದನ್ನು ಯಾವುದೇ ರಕ್ತದ ಪರೀಕ್ಷೆ ಅಥವಾ ಸ್ಕ್ಯಾನಿಂಗ್ ಮೂಲಕ ಪತ್ತೆಹಚ್ಚಲು ಸಾಧ್ಯವಿಲ್ಲ. ಅಂದರೆ, ಒಬ್ಬ ವ್ಯಕ್ತಿ ತಾನು ಲಿಂಗತ್ವ ಅಲ್ಪಸಂಖ್ಯಾತ ಎಂದು ಹೇಳಿಕೊಂಡರೆ, ಅದನ್ನು ಒಪ್ಪಿಕೊಳ್ಳಬೇಕೇ ಹೊರತು ಯಾವುದೇ ವೈದ್ಯಕೀಯ ಪುರಾವೆ ಕೇಳುವುದು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ. ಹಾಗೆಯೇ ಕ್ರೋಮೋಸೋಮ್‌ಗಳು (XX ಅಥವಾ XY) ಒಬ್ಬ ವ್ಯಕ್ತಿಯ ಲಿಂಗದ ಭಾವನೆಯನ್ನು ನಿರ್ಧರಿಸುವುದಿಲ್ಲ. ಹಾರ್ಮೋನ್ ಮಟ್ಟಗಳು ಬದಲಾಗುತ್ತಾ ಇರುತ್ತದೆ. ಹಾರ್ಮೋನ್ ಆಧಾರದಲ್ಲಿ ಯಾವುದೇ ವ್ಯಕ್ತಿಯ ಲಿಂಗ ಗುರುತಿಸಲಾಗದು.

ಈ ಬಗ್ಗೆ ಈದಿನ.ಕಾಮ್‌ಗೆ ಪ್ರತಿಕ್ರಿಯಿಸಿರುವ ಲೇಖಕ, ಹಿಂದೂಸ್ತಾನಿ ಸಂಗೀತಗಾರ, ಲಿಂಗತ್ವ ಅಲ್ಪಸಂಖ್ಯಾತ ಪುರುಷ (Trans men) ರೂಮಿ ಹರೀಶ್, “ಲಿಂಗತ್ವ ಅಲ್ಪಸಂಖ್ಯಾತರ ಮಸೂದೆಯನ್ನು ದಿಢೀರ್ ಆಗಿ, ಅತಿ ಕೆಟ್ಟದಾದ ತಿದ್ದುಪಡಿ ಮಾಡಲಾಗಿದೆ. ತರ್ಕ, ಅಧ್ಯಯನವಿಲ್ಲದ ತಿದ್ದುಪಡಿ ಎಂದು ಹೇಳಬಹುದು. ಯಾಕೆಂದರೆ ಈ ಮಸೂದೆ ಅಡಿಯಲ್ಲಿ ಮೂರು ರೀತಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಲಾಗುತ್ತದೆ. ಒಂದು ಹುಟ್ಟಿನಿಂದಲೇ ಲಿಂಗತ್ವ ಅಲ್ಪಸಂಖ್ಯಾತರಾಗಿರುವವರು (Inter Sex). ಇನ್ನೊಂದು ಸಾಂಪ್ರದಾಯಿಕವಾಗಿ ಇರುವ ಹಿಜ್ರಾ, ಕಿನ್ನರ್, ಅರವಾಣಿ ಮೊದಲಾದ ಸಮುದಾಯದವರು. ಮೂರನೆಯದಾಗಿ ಬಲವಂತವಾಗಿ ಲಿಂಗ ಬದಲಾವಣೆಗೆ ಒಳಗಾದವರು. ಇಲ್ಲಿ ಬಲವಂತವಾಗಿ ಲಿಂಗ ಪರಿವರ್ತನೆಗೆ ಒಳಗಾಗಿರುವವರು ಎಂಬ ಕಲ್ಪನೆ ಎಲ್ಲಿಂದ ಹುಟ್ಟುತ್ತದೆ? ಸುಖಾಸುಮ್ಮನೆ ಯಾರಿಗಾದರೂ ಲಿಂಗ ಬದಲಾವಣೆ ಮಾಡಲಾಗುತ್ತದೆಯೇ? ಯಾವುದೇ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದಲ್ಲಿ ಆಯ್ಕೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ನಮ್ಮ ಇಚ್ಛೆಯಂತೆಯೇ ನಾವು ಲಿಂಗ ಬದಲಾವಣೆ ಮಾಡಿಕೊಳ್ಳುವುದು. ನಾವು ಬಲವಂತವಾಗಿ ಲಿಂಗ ಪರಿವರ್ತನೆ ಮಾಡಿಸುತ್ತೇವೆ ಎಂಬುದು ಕಪೋಲಕಲ್ಪಿತ” ಎಂದು ಹೇಳಿದ್ದಾರೆ.

roomi harish
ಲೇಖಕ, ಹಿಂದೂಸ್ತಾನಿ ಸಂಗೀತಗಾರ, ಲಿಂಗತ್ವ ಅಲ್ಪಸಂಖ್ಯಾತ ಪುರುಷ (Trans men) ರೂಮಿ ಹರೀಶ್ . ಚಿತ್ರ: ಫೇಸ್‌ಬುಕ್

“20-25 ವರ್ಷದ ಹಿಂದೆ ನಾವು ಹೋರಾಟವನ್ನು ಆರಂಭಿಸಿದಾಗ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಮಿಥ್ಯ ಮತ್ತು ಸತ್ಯವನ್ನು ಪಟ್ಟಿ ಮಾಡಿ ಮಾಹಿತಿಯನ್ನು ಹಂಚುತ್ತಿದ್ದೆವು. ನಮ್ಮನ್ನು ಅನಗತ್ಯವಾಗಿ ದ್ವೇಷಿಸುವುವವರಿಗೆ ನಿಜಾಂಶ ತಿಳಿಸಲು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಮಿಥ್ಯ, ಸತ್ಯದ ಬಗ್ಗೆ ಮಾಹಿತಿ ನೀಡಿದ್ದೆವು. ಆದರೆ ಈ ಮಸೂದೆ ಎಲ್ಲ ಮಿಥ್ಯಗಳನ್ನು ಒಳಗೊಂಡಿದೆ. ಯಾವುದೂ ನಿಜವಲ್ಲ. ಈ ಮಸೂದೆಯಲ್ಲಿ ಯಾವುದೇ ತರ್ಕವಿಲ್ಲ. ಈ ಕೇಂದ್ರ ಸರ್ಕಾರ ದಿನಕ್ಕೊಂದು ಕಾನೂನು ಜಾರಿ ಮಾಡುತ್ತಿದೆ. ಸಂಸದರು ಕಣ್ಣುಮುಚ್ಚಿ ಇಂತಹ ಮಸೂದೆಗಳನ್ನು ಅಂಗೀಕರಿಸುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಈ ಮಸೂದೆ ನಮ್ಮ trans men ಅಂದರೆ ಹೆಣ್ಣಾಗಿ ಹುಟ್ಟಿ ಗಂಡಾಗಿ ಪರಿವರ್ತನೆ ಆಗುವ ಸಮುದಾಯವನ್ನೇ ಸಮಾಜದಿಂದ ಎತ್ತಿ ಆಚೆ ಬಿಸಾಡುತ್ತದೆ. ಯಾಕೆಂದರೆ ನಮಗೆ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರಂತೆ ಸಾಂಪ್ರಾದಾಯಿಕ ಸಮುದಾಯ, ಗುಂಪುಗಳು ಇಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.

“ಲಿಂಗತ್ವ ಅನ್ನುವುದು ಎಂದು ಆಯ್ಕೆ. ಆದರೆ ಈ ಆಯ್ಕೆಗೆ ಅವಕಾಶ ನೀಡುತ್ತಿಲ್ಲ. ನೀನು ಹೇಗೆ ಹೆಣ್ಣಾಗಿ ಹುಟ್ಟಿ ಗಂಡಸಾಗಲು ಸಾಧ್ಯ ಎಂದು ನೇರವಾಗಿ ಕೇಳುವ ಬದಲು, ಮಸೂದೆ ತಂದು ನಮಗೆ ಅಸ್ತಿತ್ವವೇ ಇಲ್ಲದಂತೆ ಮಾಡಿದ್ದಾರೆ. ನಮ್ಮ ಸಮುದಾಯ ಈಗಾಗಲೇ ನಮ್ಮ ಗುರುತಿಗಾಗಿ ಹೋರಾಡುತ್ತಿದ್ದೇವೆ. ಹೀಗಿರುವಾಗ ಈ ಮಸೂದೆ ತಂದು ನಮ್ಮ ಅಸ್ತಿತ್ವವ್ನೇ ಕಿತ್ತುಕೊಳ್ಳುತ್ತಿದ್ದಾರೆ. ಇವೆಲ್ಲವೂ ಅಮೆರಿಕದ ಪ್ರಭಾವ. ಅಮೆರಿಕದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕನ್ನು ಕಸಿಯಲಾಗಿದೆ. ಈಗ ಭಾರತದಲ್ಲಿಯೂ ಅದೇ ರೀತಿ ಮಾಡಲಾಗುತ್ತಿದೆ. ಇದು ಎಲ್ಲವೂ ಒಂದಕ್ಕೊಂದು ನಂಟು ಹೊಂದಿದೆ. ಸಮಾಜವನ್ನು ಫ್ಯಾಸಿಸಂ ಮೂಲಕ ನಿಯಂತ್ರಿಸುವ ಹುನ್ನಾರವಿದು” ಎಂದು ಆರೋಪಿಸಿದರು.

“ಗಂಡಸರು, ಹೆಂಗಸರ ಬಳಿ ನೀವು ಹೆಣ್ಣು, ಗಂಡೆಂದು ಸಾಬೀತುಪಡಿಸಲು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಲು ಹೇಳುತ್ತಾರೆಯೇ? ನಮಗೆ ಮಾತ್ರ ಯಾಕೆ? ಇದು ನಮಗೆ ಮಾಡುವ ಅವಮಾನ. ನಮಗೆ ಬೆಲೆಯಿಲ್ಲವೇ? ನಮ್ಮ ಬದುಕಿಗೆ ಘನತೆ ಇಲ್ಲವೇ” ಎಂದು ಪ್ರಶ್ನಿಸಿದರು.

ಲಿಂಗತ್ವ ಅಲ್ಪಸಂಖ್ಯಾತರನ್ನು ಕೇವಲ ‘ಅದೃಷ್ಟದ ಸಂಕೇತ’ವಾಗಿ ನೋಡುವ ಈ ಸಮಾಜಕ್ಕೆ ಅವರೊಳಗೂ ಮನುಷ್ಯ ಇರುವುದು ಎಂಬುದು ಅರ್ಥವಾಗುತ್ತದೆಯೇ? ದಶಕಗಳ ಕಾಲ ಅವಮಾನವೆಂಬ ಕಗ್ಗತ್ತಲಿನಿಂದ ಹೊರಬರಲು ನಡೆಸಿದ ಹೋರಾಟಕ್ಕೆ 2014ರ ಸುಪ್ರೀಂ ಕೋರ್ಟ್‌ನ ತೀರ್ಪು ಒಂದು ಬೆಳಕಿನ ಕಿರಣ. “ನಾನು ಯಾರೆಂದು ನಿರ್ಧರಿಸುವ ಹಕ್ಕು ನನಗಿದೆ” ಎಂಬ ವಾಕ್ಯ ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಬದುಕುವ ಭರವಸೆ ತುಂಬಿತ್ತು. ಆದರೆ ಇಂದು ಮಸೂದೆಗ ತಿದ್ದುಪಡಿ ತಂದು ಭರವಸೆಯ ಮೇಲೆ ಮಸಿ ಬಳಿಯಾಗುತ್ತಿದೆ. ನಾವೂ ಮನುಷ್ಯರು ಎಂದು ಸಾಬೀತುಪಡಿಸಲು ಲಿಂಗತ್ವ ಅಲ್ಪಸಂಖ್ಯಾತರು ಎಷ್ಟು ಬಾರಿ ಈ ಸಮಾಜದ ಮುಂದೆ ಬೆತ್ತಲಾಗಬೇಕು? ಮನಸ್ಸಿನ ಭಾವನೆಯನ್ನು ಯಾವ ವೈದ್ಯಕೀಯ ಪರೀಕ್ಷೆಯಿಂದ ಅಲೆಯಲು ಸಾಧ್ಯ? ತಾಯಿ ತನ್ನ ಮಗುವನ್ನು ಪ್ರೀತಿಸುತ್ತಾಳೆ ಎಂದು ಸಾಬೀತುಪಡಿಸಲು ಯಾವುದೇ ಪ್ರಮಾಣಪತ್ರ ಬೇಕಿಲ್ಲ ಎಂದಾದ ಮೇಲೆ ಒಬ್ಬ ವ್ಯಕ್ತಿ ತಾನು ಲಿಂಗತ್ವ ಅಲ್ಪಸಂಖ್ಯಾತ ಎಂದು ಕರೆದುಕೊಳ್ಳಲು ವೈದ್ಯಕೀಯ ಮಂಡಳಿಯ ಅನುಮತಿ ಯಾಕೆ?

ವಾಸ್ತವದಲ್ಲಿ ಈ ಮಸೂದೆ ಕೇವಲ ಕಾಗದದ ಮೇಲೆ ಮಾಡಿರುವ ತಿದ್ದುಪಡಿಯಲ್ಲ. ಇದು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಆತ್ಮಗೌರವಕ್ಕೆ ಒಡ್ಡಿದ ಕೊಡಲಿಪೆಟ್ಟು. ಅಷ್ಟಕ್ಕೂ ನಮ್ಮ ಲಿಂಗ ಯಾವುದೆಂದು ನಿರ್ಧರಿಸುವುದು ಸರ್ಕಾರದ ಕೆಲಸವೇ? ದಶಕಗಳಿಂದ ಹೋರಾಟ ನಡೆಸಿ ಕತ್ತಲಿಂದ ಕೊಂಚ ಬೆಳಕನ್ನು ಕಾಣುತ್ತಿದ್ದಂತೆ ಇದೀಗ ಸರ್ಕಾರವೇ ಕತ್ತಲೆಗೆ ತಳ್ಳುವ ಸಂಚು ನಡೆಸುತ್ತಿರುವುದಲ್ಲವೇ? ವೈದ್ಯಕೀಯ ಪರೀಕ್ಷೆಯ ಮೂಲಕ ಲಿಂಗವನ್ನು ನಿರ್ಧರಿಸುವುದೆಂದರೆ ಅಂತಾರಾತ್ಮದ ಧ್ವನಿಯನ್ನೆ ಕೊಂದಂತೆ. ನಾವು ಗಂಡು, ಹೆಣ್ಣು, ಲಿಂಗತ್ವ ಅಲ್ಪಸಂಖ್ಯಾತರು ಎಂದು ಗುರುತಿಸಿಕೊಳ್ಳಲು ಯಾವ ಪ್ರಮಾಣಪತ್ರವೂ ಸಾಕ್ಷಿಯಲ್ಲ. ನಮ್ಮ ಆತ್ಮ ಗೌರವ, ನಮ್ಮ ಮನಸ್ಸಿನ ಮಿಡಿತವೇ ಪರಮೋಚ್ಚ ಪುರಾವೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...