ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಲಕ್ಷಾಂತರ ಕಾರ್ಮಿಕರ ಅಚ್ಚು ಮೆಚ್ಚಿನ ನಾಯಕರಾದ ಅನಂತ ಸುಬ್ಬರಾವ್ ಅವರನ್ನು ದುಡಿಯುವ ಜನ ಮತ್ತು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಯಾಕೆ ಇಷ್ಟ ಪಡುತ್ತಿದ್ದರೆಂದರೆ ಅವರಲ್ಲಿ ಇರುವ ತಾಯ್ತನ. ಬಹುತೇಕ ರಾಜಕೀಯ ಮತ್ತು ಟ್ರೇಡ್ ಯುನಿಯನ್ ನಾಯಕರಲ್ಲಿ ಅಪರೂಪವಾಗಿದ್ದ ಈ ತಾಯ್ತನ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿತು. ಅವರು ಶಾಸಕರಾಗಲಿಲ್ಲ, ಸಂಸದರಾಗಲಿಲ್ಲ. ಆದರೆ ಅವೆಲ್ಲಕ್ಕಿಂತ ಉನ್ನತವಾದ ದುಡಿಯುವ ಜನರ ಪ್ರೀತಿ ಪಾತ್ರ ನಾಯಕರಾಗಿ ಬೆಳೆದರು.
ಕೊನೆಯುಸಿರೆಳೆಯುವಾಗಲೂ ಅವರಿಗೆ ದುಡಿಯುವ ಜನರ ಬದುಕಿನ ಚಿಂತೆ. ಸಾವಿನ ಸಮ್ಮುಖದಲ್ಲೂ ನಂಬಿದ ಸಿದ್ಧಾಂತಕ್ಕೆ ಅಚಲ ಬದ್ಧತೆ. ಇಂಥವರು ಲಕ್ಷಕ್ಕೊಬ್ಬರು ಸಿಗಬಹುದು. ಅದೂ ನವ ಉದಾರೀಕರಣದ ಕಾಲದಲ್ಲಿ, ಎಲ್ಲವೂ ಮಾರುಕಟ್ಟೆಯ ಸರಕು ಆಗಿರುವಾಗ ಇವರು ಭಿನ್ನವಾಗಿ ವ್ಯವಸ್ಥೆಗೆ ಎದುರಾಗಿ ನಿಂತರು. ಅವರೇ ಈಚೆಗೆ ನಿರ್ಗಮಿಸಿದ ಕಾಮ್ರೆಡ್ ಎಚ್.ವಿ.ಅನಂತ ಸುಬ್ಬರಾವ್.
ಜನವರಿ ೨೯ಕ್ಕೆ ಸಾರಿಗೆ ಕಾರ್ಮಿಕರ ಬೆಂಗಳೂರು ಚಲೋ ಕಾರ್ಯಕ್ರಮ. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಕಾರ್ಮಿಕರು ಬರಲಿದ್ದರು. ರಾಜ್ಯ ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸಿರಲಿಲ್ಲ. ಆದ್ದರಿಂದ ಈ ಪ್ರತಿಭಟನೆ. ಅದರ ಹಿಂದಿನ ದಿನ ಅನಂತ ಸುಬ್ಬರಾವ್ ಮರುದಿನದ ಪ್ರತಿಭಟನೆಯ ತೀವ್ರ ತಯಾರಿಯಲ್ಲಿ ಇದ್ದರು. ತೀವ್ರ ಒತ್ತಡದ ಕ್ಷಣ. ಮಧುಮೇಹ, ರಕ್ತದೊತ್ತಡದ ಸಮಸ್ಯೆ ಇಟ್ಟುಕೊಂಡು ದಿನವಿಡಿ ಸಂಗಾತಿಗಳ ಜೊತೆ ಸಭೆ, ಬಿಡುವಿಲ್ಲದ ಮಾತುಕತೆ, ಮಾತಾಡುತ್ತಲೇ ಉಸಿರು ಚೆಲ್ಲಿದರು. ಕೊನೆಯುಸಿರು ಬಿಡುವಾಗಲೂ ಅದೇ ಶ್ರಮಿಕರ ಚಿಂತೆ.
ಸರಳತೆ, ಸಜ್ಜನಿಕೆ, ಸೌಜನ್ಯಗಳ ಸಾಕಾರ ಮೂರ್ತಿಯಂತಿದ್ದ ಅನಂತ ಸುಬ್ಬರಾವ್ ತಾತ್ವಿಕ ಪ್ರಶ್ನೆಗಳಲ್ಲಿ ಅಷ್ಟೇ ಕಟುವಾಗಿರುತ್ತಿದ್ದರು. ಅದರರ್ಥ ಭಿನ್ನಾಭಿಪ್ರಾಯ ಹೊಂದಿದವರನ್ನು ದ್ವೇಷಿಸುತ್ತಿದ್ದರೆಂದಲ್ಲ, ರಾಜಿ ಮಾಡಿಕೊಳ್ಳದೇ ವೈಯಕ್ತಿಕ ಸ್ನೇಹ ಸಂಬಂಧಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸುತ್ತಿದ್ದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಲಕ್ಷಾಂತರ ಕಾರ್ಮಿಕರ ಅಚ್ಚು ಮೆಚ್ಚಿನ ನಾಯಕರಾದ ಅನಂತ ಸುಬ್ಬರಾವ್ ಅವರನ್ನು ದುಡಿಯುವ ಜನ ಮತ್ತು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಯಾಕೆ ಇಷ್ಟ ಪಡುತ್ತಿದ್ದರೆಂದರೆ ಅವರಲ್ಲಿ ಇರುವ ತಾಯ್ತನ. ಬಹುತೇಕ ರಾಜಕೀಯ ಮತ್ತು ಟ್ರೇಡ್ ಯುನಿಯನ್ ನಾಯಕರಲ್ಲಿ ಅಪರೂಪವಾಗಿದ್ದ ಈ ತಾಯ್ತನ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿತು. ಅವರು ಶಾಸಕರಾಗಲಿಲ್ಲ, ಸಂಸದರಾಗಲಿಲ್ಲ. ಆದರೆ ಅವೆಲ್ಲಕ್ಕಿಂತ ಉನ್ನತವಾದ ದುಡಿಯುವ ಜನರ ಪ್ರೀತಿ ಪಾತ್ರ ನಾಯಕರಾಗಿ ಬೆಳೆದರು.
ಒಂದ ಕಾರ್ಖಾನೆಯಲ್ಲಿ ಕಾರ್ಮಿಕರನ್ನು ಸಂಘಟಿಸುವದು ಸುಲಭ ಒಂದೇ ಕಡೆ ನೂರು, ಇನ್ನೂರು ಕಾರ್ಮಿಕರು ಸಿಗುತ್ತಾರೆ. ಅವರನ್ನು ಒಂದೆಡ ಸಭೆ ಸೇರಿಸಿ ಸಂಘಟಿಸಬಹುದು. ಆದರೆ ರಾಜ್ಯದ ಮೂಲೆ, ಮೂಲೆಗಳಲ್ಲಿ ಹರಡಿದ ರಸ್ತೆ ಸಾರಿಗೆ ಕಾರ್ಮಿಕರನ್ನು ಸಂಘಟಿಸುವದು ಸುಲಭವಲ್ಲ. ಅವರನ್ನು ಸಂಘಟಿಸಲು ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು, ಡಿಪೊಗಳಿಗೆ ಅನಂತಸುಬ್ಬರಾವ್ ನೂರಾರು ಸಲ ಸಂಚರಿಸಿದರು. ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿದರು. ಅವರಂತೆ ಇಡೀ ರಾಜ್ಯವನ್ನು ಸುತ್ತಿದ ಇನ್ನೊಬ್ಬ ನಾಯಕರನ್ನು (ಎಂ.ಡಿ.ನಂಜುಂಡ ಸ್ವಾಮಿ ಅವರನ್ನು ಬಿಟ್ಟು) ನಾನು ನೋಡಿಲ್ಲ. ಕಾಮ್ರೆಡ್ ಎಚ್.ವಿ.ಅನಂತಸುಬ್ಬರಾವ್ ನಿರ್ಗಮನ ಅಕ್ಷರಶಃ ಸಾರ್ವಜನಿಕ ಜೀವನಕ್ಕೆ ತುಂಬಲಾಗದ ನಷ್ಟ. ಅವರನ್ನು ತುಂಬಾ ಹತ್ತಿರದಿಂದ ನೋಡಿದ ಕಳೆದ ಐವತ್ತು ವರ್ಷಗಳಿಂದ ನನ್ನ ಅತ್ಯಂತ ಆತ್ಮೀಯ ಒಡನಾಡಿಯಾಗಿದ್ದ ಅವರು ನಾನು ಅಸ್ವಸ್ಥ ನಾದಾಗ, ಕಷ್ಟದಲ್ಲಿ ಇದ್ದಾಗ ತಕ್ಷಣ ಬಂದು ಸಮಾಧಾನ ಮತ್ತು ಧೈರ್ಯ ಹೇಳಿದವರು. ಅಂತಲೇ ನನ್ನಂಥವರಿಗೆ ಈ ಅಗಲಿಕೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಒಂದೂವರೆ ಲಕ್ಷಕ್ಕೂ ಹೆಚ್ಚು ಕಾರ್ಮಿಕರ ಅಚ್ಚುಮೆಚ್ಚಿನ ನಾಯಕರಾಗಿದ್ದ ಅನಂತ ಸುಬ್ಬರಾವ್ ಅವರಂಥವರು ನಮ್ಮ ಸಾರ್ವಜನಿಕ ಜೀವನಕ್ಕೆ ಒಂದು ಘನತೆಯನ್ನು ತಂದು ಕೊಟ್ಟವರು.
ಅವರದು ಸರಳ, ಸಜ್ಜನಿಕೆಯ ವ್ಯಕ್ತಿತ್ವ. ಅವರ ಬದುಕು ಪಾರದರ್ಶಕವಾಗಿತ್ತು. ನಂಬಿದ ಸಿದ್ಧಾಂತ ಮತ್ತು ಶ್ರಮಜೀವಿಗಳ ಹೋರಾಟದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಅನಂತ ಸುಬ್ಬರಾವ್ ತಮ್ಮನ್ನು ತಾವು ಮೇಣದ ಬತ್ತಿಯಂತೆ ಸುಟ್ಟುಕೊಂಡು ಚಳವಳಿಯನ್ನು ಕಟ್ಟಿದವರು.ಅವರ ಮಾತು ಮತ್ತು ಕೃತಿಯಲ್ಲಿ ಒಂದಿಂಚು ವ್ಯತ್ಯಾಸವೂ ಇರಲಿಲ್ಲ. ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಜನಿಸಿದ ಅನಂತ ಸುಬ್ಬರಾವ್ ಒಂದೊಂದು ಹೆಜ್ಜೆ ಇಡುತ್ತ ಬಹು ಎತ್ತರಕ್ಕೆ ಬೆಳೆದು ನಿಂತವರು. ಜೀವ ವಿಮಾ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ ಬೆಂಗಳೂರಿಗೆ ಬಂದ ಅವರು ವಿಮಾ ನೌಕರರ ಸಂಘಟನೆಯಲ್ಲಿ ಮಾರ್ಕ್ಸ್‌ವಾದದ ಸೈದ್ಧಾಂತಿಕ ದೀಕ್ಷೆಯನ್ನು ಪಡೆದವರು. ವಿಮಾ ಸಂಸ್ಥೆಯಲ್ಲಿ ಹೆಚ್ಚು ಸಂಬಳದ ಪ್ರಮೋಶನ್ ಅವಕಾಶ ಬಂದಾಗ ಅದನ್ನು ತಿರಸ್ಕರಿಸಿ ದುಡಿಯುವ ಜನರ ಹೋರಾಟಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರು. ಅವರು ಕೇವಲ ಕಾರ್ಮಿಕ ನಾಯಕನಲ್ಲ. ಮಾರ್ಕ್ಸ್‌ವಾದ ತತ್ವ, ಸಿದ್ದಾಂತಗಳ ಗಂಭೀರ ಓದುಗರಾಗಿದ್ದರು. ಆದರೆ ಜಡವಾದಿ (ಸೆಕ್ಟೆರಿಯನ್ ಅಲ್ಲ) ಬರೀ ಸಿದ್ಧಾಂತವನ್ನು ಅರಿತುಕೊಂಡು ಅವರು ಸುಮ್ಮನಿರಲಿಲ್ಲ. ಸುಲಿಗೆ ಶೋಷಣೆಯಿಲ್ಲದ ಹೊಸ ಸಮಾಜವನ್ನು ನಿರ್ಮಿಸುವ ಕನಸನ್ನು ನನಸಾಗಿಸಲು ತನ್ನ ಇಡೀ ಬದುಕನ್ನೇ ಸಮರ್ಪಿಸಿಕೊಂಡರು ಅವರ ಮತ್ತು ನನ್ನ ಐದು ದಶಕಗಳ ಪರಿಚಯ, ಮತ್ತು ಒಡನಾಟದಲ್ಲಿ ನಾನು ಕಂಡಂತೆ ಅವರಿಗೆ ಸ್ವಂತದ ಬದುಕಿಗಿಂತ ಲಕ್ಷಾಂತರ ಸಾರಿಗೆ ನೌಕರರ, ಕಾರ್ಮಿಕರ ಬದುಕು ಮುಖ್ಯವಾಗಿತ್ತು.
ಸುಮಾರು ನಾಲ್ಕು ದಶಕಗಳ ಕಾಲ ಬೆಂಬಿಡದೇ ಕಾಡುತ್ತಿದ್ದ ಮಧುಮೇಹ, ನೂರೆಂಟು ಆರೋಗ್ಯದ ಸಮಸ್ಯೆಗಳಿದ್ದರೂ ಅನಂತ ಸುಬ್ಬರಾಯರ ಹೋರಾಟ, ಚಳವಳಿಗಳೆದುರು ಅವೆಲ್ಲವೂ ನಗಣ್ಯವಾಗಿದ್ದವು. ಕಾಮ್ರೆಡ್ ಅನಂತ ಸುಬ್ಬರಾವ್ ಅವರು ದುಡಿಯುವ ಜನರ ಹೋರಾಟವನ್ನು ಯಾವ ಪರಿ ಹಚ್ಚಿಕೊಂಡಿದ್ದರೆಂದರೆ ಅವರು ಕೇವಲ ವೇದಿಕೆಯ ಮೇಲೆ ನಿಂತು ಭಾಷಣ ಮಾಡಿ ಹೋಗುವ ನಾಯಕರಾಗಿರಲಿಲ್ಲ. ಪ್ರತಿಯೊಬ್ಬ ಕಾರ್ಮಿಕನ ಮನೆಗೆ ಹೋಗಿ ಕಷ್ಟ ಸುಖ ಕೇಳುತ್ತಿದ್ದರು. ಆರೋಗ್ಯ ಸಮಸ್ಯೆ ಇದ್ದರೆ ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಸಕಲ ನೆರವನ್ನೂ ನೀಡುತ್ತಿದ್ದರು. ಆಸ್ಪತ್ರೆಗೆ ಸೇರಿದ್ದರೆ ಅಲ್ಲಿ ಹೋಗಿ ವಿಚಾರಿಸುತ್ತಿದ್ದರು. ಅಂತಲೇ ಕಾರ್ಮಿಕರ ಪಾಲಿಗೆ ಅವರು ಕೇವಲ ನೇತಾರ ರಾಗಿರಲ್ಲಿ ಹಿರಿಯಣ್ಣನಂತೆ ಇದ್ದರು. ಅಂತಲೇ ಅನಂತ ಸುಬ್ಬರಾಯರು ಬೆಂಗಳೂರಿನಿಂದ ಒಂದು ಕರೆ ಕೊಟ್ಟರೆ ಸಾಕು ಇಡೀ ರಾಜ್ಯದ ಬಸ್ ಸಂಚಾರ ಸ್ಥಗಿತಗೊಳ್ಳುತ್ತಿತ್ತು. ವೈದ್ಯರು ಸಲಹೆ, ಮಾಡಿ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಇಡೀ ನಾಡನ್ನು ಸುತ್ತುವ ಇನ್ನೊಬ್ಬ ನಾಯಕನನ್ನು ನಾನು ನೋಡಿಲ್ಲ.
ಅನಂತ ಸುಬ್ಬರಾವ್ ಅವರ ಕೇವಲ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಮಾತ್ರ ಹೋರಾಟ ಮಾಡಿದವರಲ್ಲ. ಸಾರ್ವಜನಿಕ ಒಡೆತನದ ರಾಜ್ಯ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಮಸಲತ್ತು ನಡೆದಾಗಲೆಲ್ಲ. ಅದನ್ನು ತಡೆಯಲು ಅವಿಶ್ರಾಂತ ಹೋರಾಟ ಮಾಡಿದವರು ಅನಂತ ಸುಬ್ಬರಾಯರು. ಸಾರಿಗೆ ಸಂಸ್ಥೆಗೆ ಸಂಬ ಅಂಕಿ ಸಂಖ್ಯೆಗಳ ಸದಾ ಅವರ ನಾಲಿಗೆ ಮೇಲೆ ಇರುತ್ತಿದ್ದವು. ಅವರನ್ನು ದಾರಿ ತಪ್ಪಿಸಲು ಯಾವ ಅಧಿಕಾರಿಗೂ ಸಾಧ್ಯವಿರಲಿಲ್ಲ. ಅವರು ಕಾರ್ಮಿಕರೊಂದಿಗೆ ಹೋರಾಟಕ್ಕೆ ಇಳಿದಾಗಲೆಲ್ಲ ಎಂದೂ ಸೋಲನ್ನಪ್ಪಿದವರಲ್ಲ.ಇದು ಅವರ ಬದ್ಧತೆಗೆ ಸಾಕ್ಷಿ. ತಿಂಗಳು ಎರಡು ತಿಂಗಳಿಗೊಮ್ಮೆ ಕರ್ನಾಟಕ ಸುತ್ತಿ ಶ್ರಮಿಕರ ಕಷ್ಟ ಸುಖಗಳನ್ನು ಆಲಿಸದಿದ್ದರೆ ಅವರಿಗೆ ಸಮಾಧಾನವಿರುತ್ತಿರಲಿಲ್ಲ.
ಇದನ್ನೂ ಓದಿ ʼಈ ದಿನʼ ವಿಶೇಷ | ಎಪ್‍ಸ್ಟೀನ್ ಸಂದೇಶಗಳಿಂದ ಬಹಿರಂಗ: ಟ್ರಂಪ್ ಮುಂದೆ ಮೋದಿ ಅಜೆಂಡಾ ತರಲು ಅನಿಲ್ ಅಂಬಾನಿಯಿಂದ ಲೈಂಗಿಕ ಅಪರಾಧಿಯ ಬಳಕೆ!
ಬೆಂಗಳೂರಿನಲ್ಲಿ ಇದ್ದಾಗ ಅವರು ಇಡೀ ದಿನ ಎಐಟಿಯುಸಿ ಕಚೇರಿಯಲ್ಲೇ ಇರುತ್ತಿದ್ದರು. ಇಷ್ಟು ಮಾತ್ರವಲ್ಲ ರಾತ್ರಿ ಆಫೀಸಿನಲ್ಲೇ ಉಳಿಯುತ್ತಿದ್ದರು. ಚಾಪೆ, ಪೇಪರ್ ಗಳನ್ನು ಹಾಸಿಕೊಂಡು ಮಲಗುತ್ತಿದ್ದರು. ಮನೆಗೆ ಹೋದರೆ ಕೆಲಸ ಬಾಕಿ ಉಳಿಯುತ್ತದೆ ಎಂಬ ಆತಂಕ ಅವರದು. ಅನಂತ ಸುಬ್ಬರಾವ್ ಅವರ ಮನೆಯಲ್ಲಿ ಜಾತಿ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಯಾರೇ ಬರಲಿ ಅವರ ಜೊತೆಗೆ ಕುಳಿತು ಊಟ ಮಾಡಬೇಕೆಂದು ಅವರು ಬಯಸುತ್ತಿದ್ದರು. ತಮ್ಮ ತಟ್ಟೆಯನ್ನು ತಾವೇ ತೊಳೆಯುತ್ತಿದ್ದ ಅವರು ಬಹುತೇಕ ಸಲ ಮನೆಯಲ್ಲಿ ಊಟ ಮಾಡಿದ ಎಲ್ಲರ ಪಾತ್ರೆಗಳನ್ನು ತೊಳೆಯುವುದಕ್ಕೆ ಹಿಂಜರಿಯುತ್ತಿರಲಿಲ್ಲ.
ಅವರ ಮಗಳು ಜ್ಯೋತಿ ಜಾತಿ ರಹಿತ ಮದುವೆಗೆ ಮುಂದಾದಾಗ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತ, ದಲಿತ ಸಮುದಾಯದಿಂದ ಬಂದ ಸಾತಿ ಸುಂದರೇಶ್ ಅವರ ಜೊತೆಗೆ ಮಗಳ ಮದುವೆಯನ್ನು ತಾವೇ ಮುಂದೆ ನಿಂತು ಮದುವೆ ಮಾಡಿದರು. ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಒಡನಾಟವನ್ನೂ ಹೊಂದಿದ್ದ ಅನಂತ ಸುಬ್ಬರಾಯರಂಥ ಅಪರೂಪದ ನಾಯಕನನ್ನು ಕಳೆದುಕೊಂಡು ರಾಜ್ಯದ ಕಾರ್ಮಿಕ ಚಳವಳಿ, ಕಮ್ಯುನಿಸ್ಟ್ ಪಕ್ಷ ಮಾತ್ರವಲ್ಲ ಸಾರ್ವಜನಿಕ ಜೀವನದಲ್ಲಿ ಬಹುದೊಡ್ಡ ಶೂನ್ಯ ಆವರಿಸಿದೆ. ಅಪರೂಪದ ಮಾದರಿಯೊಂದು ಕಣ್ಮರೆಯಾಗಿದೆ. ವೈಯಕ್ತಿಕವಾಗಿ ನನಗಂತೂ ಇದು ತುಂಬಾ ಆಘಾತಕಾರಿ ಸಂಗತಿ. ಆದರೆ ಚಳವಳಿಗಳು ಇರುವವರೆಗೆ ಅನಂತಸುಬ್ಬರಾವ್ ಇದ್ದೇ ಇರುತ್ತಾರೆ ಅಂದರೆ ಅತಿಶಯೋಕ್ತಿಯಲ್ಲ.

ಸನತ್ ಕುಮಾರ ಬೆಳಗಲಿ
ಹಿರಿಯ ಪತ್ರಕರ್ತ, ಅಂಕಣಕಾರ




