ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೊಂದರೆಯಲ್ಲಿದ್ದಾರೆ ಎಂದು ಟ್ರಂಪ್ ಅವರ ಅಣ್ಣನ (ಫ್ರೆಡ್ ಟ್ರಂಪ್ ಜೂನಿಯರ್) ಮಗಳು ಮೇರಿ ಎಲ್. ಟ್ರಂಪ್ ಹೇಳಿದ್ದಾರೆ. ಅವರ ಈ ಹೇಳಿಕೆ ಇದೇ ಮೊದಲೇನು ಅಲ್ಲ. ಕಳೆದ ಐದಾರು ತಿಂಗಳುಗಳಿಂದ ಮೇರಿ ಅವರು ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಈಗ, ಇರಾನ್ ಜೊತೆಗಿನ ಸಂಘರ್ಷ, ಆಗ್ಗಾಗ್ಗೆ ಬದಲಾಗುವ ಟ್ರಂಪ್ ಅವರ ಹೇಳಿಕೆಗಳು ಹಾಗೂ ಟ್ರಂಪ್ ಆರೋಗ್ಯದ ವಿಚಾರಗಳು ಚರ್ಚೆಯಲ್ಲಿರುವ ಸಮಯದಲ್ಲಿ ಮೇರಿ ಅವರು ಮತ್ತೆ ‘ಟ್ರಂಪ್ ತೊಂದರೆಯ್ಲಲಿದ್ದಾರೆ’ ಎಂದಿದ್ದಾರೆ. ಇದು ನಾನಾ ರೀತಿಯ ಚರ್ಚೆಗಳಿಗೆ ನಾಂದಿ ಹಾಡಿದೆ.
ಅಂದಹಾಗೆ, ಟ್ರಂಪ್ ಅವರನ್ನು ತೀಕ್ಷ್ಣವಾಗಿ ಟೀಕಿಸುವ ಟೀಕಾಕಾರರಲ್ಲಿ ಮೇರಿ ಕೂಡ ಒಬ್ಬರು. ಅವರು ಕ್ಲಿನಿಕಲ್ ಸೈಕಾಲಜಿಸ್ಟ್ ಮತ್ತು ಲೇಖಕಿ. ಮೇರಿ 2020ರಲ್ಲಿ ಟ್ರಂಪ್ ನಾಯಕತ್ವಕ್ಕೆ ಅನರ್ಹರೆಂದು ಟೀಕಿಸಿ, ‘Too Much and Never Enough: How My Family Created the World’s Most Dangerous Man’ ಎಂಬ ಪುಸ್ತಕ ಬರೆದಿದ್ದರು. ಅದೇ ಪುಸ್ತಕದಲ್ಲಿ ಟ್ರಂಪ್ ಕುಟುಂಬದಲ್ಲಿ ಉಂಟಾದ ಮಾನಸಿಕ ಆಘಾತಗಳು ಮತ್ತು ಪೋಷಣೆ ಹಾಗೂ ಟ್ರಂಪ್ ವರ್ತನೆ ಕುರಿತು ವಿವರಿಸಿದ್ದರು.
ಈಗ, ಟ್ರಂಪ್ 2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ಅವರ ವಿರುದ್ಧ ಮೇರಿ ಅವರ ಟೀಕೆಗಳು ಹೆಚ್ಚು ಮುನ್ನೆಲೆಗೆ ಬರುತ್ತಿವೆ. 2025ರ ಡಿಸೆಂಬರ್ 23ರಂದು ಅವರು ‘ದಿ ಗುಡ್ ಇನ್ ಯುಸ್’ ಎಂಬ ನ್ಯೂಸ್‌ಲೆಟರ್‌ನಲ್ಲಿ ಟ್ರಂಪ್ ಅವರು ‘ಯಾವುದೋ ಭಯಾನಕ ಘಟನೆಯ ಪ್ರಪಾತದ ಅಂಚಿನಲ್ಲಿದ್ದಾರೆ’ ಎಂದು ಬರೆದಿದ್ದರು. ಜೊತೆಗೆ, ಟ್ರಂಪ್ ನಾಯಕತ್ವದಿಂದ ಅಮೆರಿಕದ ಭವಿಷ್ಯದಲ್ಲಿ ಅನಿಶ್ಚಿತತೆ ಉಂಟಾಗಿದೆ ಎಂದು ಟೀಕಿಸಿದ್ದರು.
2025ರ ಡಿಸೆಂಬರ್ 30ರಂದು ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ; “ಟ್ರಂಪ್ ತೀರಾ ಕೆಟ್ಟ ನಾಯಕ. ಆದರೆ, ಅವರನ್ನು ಅಪಾಯಕಾರಿ ಮಾಡುವುದು ಅವರ ಅಸುರಕ್ಷತೆಯ ಭಾವನೆ. ಸಮಯ ಕಳೆದಂತೆ ಅವರು ಹೆಚ್ಚು ಅಸುರಕ್ಷಿತರಾಗುತ್ತಿದ್ದಾರೆ. ಅವರ ಮಾನಸಿಕ, ಭಾವನಾತ್ಮಕ ಹಾಗೂ ದೈಹಿಕ ಸಮಸ್ಯೆಗಳು ಅವರ ನಿರ್ಧಾರಗಳನ್ನು ಪ್ರಭಾವಿಸುತ್ತಿವೆ” ಎಂದು ವಿವರಿಸಿದ್ದರು.
ಅಂತೆಯೇ, 2026ರ ಜನವರಿಯಲ್ಲಿ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿಯೂ ಟ್ರಂಪ್ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸಿದ್ದರು. 2026ರ ಜನವರಿ 24ರಲ್ಲಿ AS.comನಲ್ಲಿ ಪ್ರಕಟವಾದ ಲೇಖನದಲ್ಲಿ ಅವರು ಟ್ರಂಪ್ ಅವರನ್ನು ‘ಈ ದೇಶವನ್ನು ಮುನ್ನಡೆಸಲು ಸಂಪೂರ್ಣವಾಗಿ ಅಸಮರ್ಥ’ ಎಂದು ಕರೆದಿದ್ದರು. ಮತ್ತು ಅವರ ಮಾನಸಿಕ ಸ್ಥಿತಿಯು ಹೆಚ್ಚು ಕುಸಿಯುತ್ತಿದೆ ಎಂದು ಹೇಳಿದ್ದರು.
ಈಗಲೂ, ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿಯೂ ಟ್ರಂಪ್ ಅವರ ಮಾನಸಿಕ ಸ್ಥಿತಿ ಮತ್ತು ನಾಯಕತ್ವದ ಕೊರತೆಯ ಕುರಿತು ನಿರಂತರವಾಗಿ ಚರ್ಚಿಸುತ್ತಿದ್ದಾರೆ. ಟ್ರಂಪ್‌ಗೆ ಅಸುರಕ್ಷತೆ ಮತ್ತು ಭಯ ಕಾಡುತ್ತಿದೆ ಎಂದಿದ್ದಾರೆ.
ಮೇರಿ ಅವರ ಹೇಳಿಕೆಗಳು ಕೇವಲ ಟೀಕೆಯಲ್ಲದೇ, ದೇಶದ ಭವಿಷ್ಯದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿವೆ. ಟ್ರಂಪ್ ಅವರ ನಾಯಕತ್ವದಿಂದ ಅಮೆರಿಕದಲ್ಲಿ ಆರ್ಥಿಕ ಅಸ್ಥಿರತೆ ಮತ್ತು ರಾಜಕೀಯ ಅಸ್ಥಿರತೆ ಹೆಚ್ಚಾಗುತ್ತಿರುವುದನ್ನೂ ಸೂಚಿಸಿವೆ. ಜೊತೆಗೆ, ಟ್ರಂಪ್‌ಗಿರುವ ಸಮಸ್ಯೆಗಳನ್ನೂ ವಿವರಿಸಿವೆ.
ಈ ಲೇಖನ ಓದಿದ್ದೀರಾ?: ಯುದ್ಧದ ಭೀತಿಯಲ್ಲಿ ದಿಢೀರ್ ಕರಗಿದ ಷೇರುದಾರರ 8.7 ಲಕ್ಷ ಕೋಟಿ ಎಲ್ಲಿಗೆ ಹೋಯಿತು?
ಟ್ರಂಪ್ ಅವರಿಗೆ ಸದ್ಯ ನಾನಾ ಸಮಸ್ಯೆ/ಸವಾಲುಗಳು ಎದುರಾಗಿವೆ. 79 ವರ್ಷ ವಯಸ್ಸಿನ ಟ್ರಂಪ್ ’ಮಾಸನಿಕ ಅಸ್ಥಿರತೆ’ಯನ್ನು ಎದುರಿಸುತ್ತಿದ್ದಾರೆ. ಅವರ ಭಾಷಣಗಳಲ್ಲಿ ಆಗಾಗ ಗೊಂದಲ ಮತ್ತು ಪುನರಾವರ್ತನೆಗಳು ಕಾಣುತ್ತವೆ. ಅವರ ನಿರ್ಧಾರಗಳೂ ಆಗ್ಗಾಗ್ಗೆ ಬದಲಾಗುತ್ತವೆ. ಇರಾನ್ ವಿರುದ್ಧದ ಯುದ್ಧದ ಸಮಯದಲ್ಲಿಯೂ ಟ್ರಂಪ್ ಹೇಳಿಕೆಗಳು ಪದೇ-ಪದೇ ಬದಲಾಗಿರುವುದು ಕಂಡುಬಂದಿದೆ.
ಇನ್ನು, ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕದ ಆರ್ಥಿಕತೆಯೂ ಅಸ್ಥಿರತೆಯಲ್ಲಿದೆ. ಉದ್ಯೋಗ ನಷ್ಟ ಮತ್ತು ಹಣದುಬ್ಬರ ಹೆಚ್ಚಾಗಿದೆ. ಟ್ರಂಪ್ ಅವರ ಆರ್ಥಿಕ ನೀತಿಗಳಿಂದಲೇ ಹಣದುಬ್ಬರ ಹೆಚ್ಚಾಗಿದೆ ಎಂಬ ಟೀಕೆಗಳಿವೆ. ಟ್ರಂಪ್ ನೀತಿ-ನಿರೂಪಣೆಗಳನ್ನು ನಿರ್ವಹಿಸುವ/ನಿಯಂತ್ರಿಸುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ ಎಂಬ ಅಭಿಪ್ರಾಯಗಳು ದಟ್ಟವಾಗಿವೆ.
ಈ ನಡುವೆ, ಎಪ್ಸ್ಟೀನ್ ಫೈಲ್ಸ್ ಮತ್ತು ಹಳೆಯ ಪ್ರಕರಣಗಳು ಹಾಗೂ ಅಧಿಕಾರ ದುರುಪಯೋಗದ ಆರೋಪಗಳು ಟ್ರಂಪ್ ಅವರನ್ನು ಕಾಡುತ್ತಿವೆ. ಇದನ್ನು ಮೇರಿ ಅವರು ‘ಏರಿಳಿತದ ಅಧ್ಯಕ್ಷತೆ’ ಎಂದು ಕರೆದಿದ್ದಾರೆ.




