ಟ್ರಂಪ್ ಅವರ “ಅಮೆರಿಕ ಫಸ್ಟ್” ನೀತಿಯು ಅಮೆರಿಕವನ್ನು ಜಾಗತಿಕವಾಗಿ ಏಕಾಂಗಿ ಮಾಡುತ್ತಿದೆ. ಅಮೆರಿಕವು ಸುಂಕದ ಗೋಡೆಗಳನ್ನು ಕಟ್ಟಿಕೊಳ್ಳುತ್ತಾ, ಮತ್ತೊಂದು ಕಡೆ ವಿಶ್ವದಲ್ಲಿ ತನ್ನ ಮಿಲಿಟರಿ ಶಕ್ತಿ ಮತ್ತು ತಿಕ್ಕಲುತನದಿಂದ ಮೂರನೇ ಮಹಾಯುದ್ಧದ ಕಡೆ ಕೊಂಡೊಯ್ಯುತ್ತಿದೆ.
ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಅಧ್ಯಕ್ಷೀಯ ಪರ್ವದ ಮೊದಲ ವರ್ಷವು (2025-2026) ಜಾಗತಿಕ ವಾಣಿಜ್ಯ ಮತ್ತು ಮಿಲಿಟರಿ ರಂಗದಲ್ಲಿ ಅತಂಕಕಾರಿ ಬದಲಾವಣೆಗಳನ್ನು ತಂದಿದೆ. “ಮಾಸ್ಟರ್ ಬಿಸಿನೆಸ್‌ಮ್ಯಾನ್” ಎಂದು ತಮ್ಮನ್ನು ಕರೆದುಕೊಳ್ಳುವ ಟ್ರಂಪ್ ಅವರ ರಕ್ಷಣಾತ್ಮಕ ವ್ಯಾಪಾರ ನೀತಿಗಳು ಮತ್ತು ಸುಂಕದ ಸಮರಗಳು (Tariff Wars) ಅಮೆರಿಕವನ್ನು ಜಗತ್ತಿನಿಂದ ದೂರವಿಡುತ್ತಿವೆ ಎಂಬುದು ಅಂಕಿಅಂಶಗಳಿಂದ ಸ್ಪಷ್ಟವಾಗುತ್ತಿದೆ. ಮತ್ತು “ಶಾಂತಿಯ ಅಭ್ಯರ್ಥಿ” ಎಂದು ಸ್ವಯಂ ಘೋಷಿಸಿಕೊಂಡಿದ್ದರೂ, ಅವರ ಅಧಿಕಾರಾವಧಿಯ ಮೊದಲ ವರ್ಷವು ಅಮೆರಿಕದ ಸಾಮ್ರಾಜ್ಯಶಾಹಿ ನಿರಂತರ ಯುದ್ಧಗಳು ಇನ್ನಷ್ಟು ಆಕ್ರಮಣಕಾರಿಯಾಗಿದೆ.
ಟ್ರಂಪ್ ಸುಂಕದ ಸಮರ: ಅಮೆರಿಕಕ್ಕೆ ಹಿನ್ನಡೆ, ಹೊಸ ಹಾದಿ ಹುಡುಕುತ್ತಿರುವ ಪ್ರಪಂಚ ಟ್ರಂಪ್ ಅವರ ಈ ನೀತಿಗಳಿಂದಾಗಿ ಅಮೆರಿಕವು ಜಗತ್ತಿನ ಸುಮಾರು 40% ಭಾಗದೊಂದಿಗೆ ತನ್ನ ವ್ಯಾಪಾರ ಸಂಬಂಧವನ್ನು ಕಳೆದುಕೊಳ್ಳುತ್ತಿದೆ. ಅಮೆರಿಕದ ಕಸ್ಟಮ್ಸ್ ದತ್ತಾಂಶದ ಪ್ರಕಾರ, 2025ರ ಜನವರಿಯಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಅಮೆರಿಕವು ತನ್ನ 232 ವ್ಯಾಪಾರ ಪಾಲುದಾರರ ಪೈಕಿ 86 ದೇಶಗಳೊಂದಿಗೆ (37%) ವ್ಯಾಪಾರ ವಹಿವಾಟನ್ನು ಕಡಿತಗೊಳಿಸಿದೆ.
ಏಷ್ಯಾದಲ್ಲಿ ಲಾವೋಸ್ (-54%), ಬ್ರೂನೈ (-24.2%) ಮತ್ತು ಚೀನಾ (-23.2%) ಜೊತೆಗಿನ ವ್ಯಾಪಾರ ಕುಸಿದಿದೆ. ಮಧ್ಯಪ್ರಾಚ್ಯ: ಯೆಮೆನ್ (-55.9%) ಮತ್ತು ಇರಾನ್ (-38.5%) ಮೇಲೆ ಕಠಿಣ ನಿರ್ಬಂಧ ಹೇರಲಾಗಿದೆ ಯುರೋಪಿನ 12 ಪ್ರಮುಖ ಆರ್ಥಿಕತೆಗಳು ಕುಸಿತ ಕಂಡಿವೆ. ವಿಶೇಷವಾಗಿ ಗ್ರೀನ್‌ಲ್ಯಾಂಡ್ (-86.6%) ವಿಚಾರದಲ್ಲಿ ಟ್ರಂಪ್ ನಡೆಸುತ್ತಿರುವ “ಸುಂಕದ ಹಠ” (Tariff Tantrum) ಯುರೋಪಿಯನ್ ಒಕ್ಕೂಟವನ್ನು ಕೆರಳಿಸಿದೆ. ಅತ್ತ ಆಫ್ರಿಕಾದಲ್ಲಿ ಎರಿಟ್ರಿಯಾ (-88.8%) ಮತ್ತು ದಕ್ಷಿಣ ಆಫ್ರಿಕಾ (-68.1%) ಅತಿ ಹೆಚ್ಚು ನಷ್ಟ ಅನುಭವಿಸಿವೆ.
ಅಮೆರಿಕವು ಚೀನಾದಿಂದ ಬರುವ ಸರಕುಗಳ ಮೇಲೆ ಶೇ. 40-50 ರಷ್ಟು ಭಾರಿ ಸುಂಕ ಹೇರಿದ್ದರೂ, ಚೀನಾ ತನ್ನ ಆರ್ಥಿಕ ಚೇತರಿಕೆಯನ್ನು ಸಾಬೀತುಪಡಿಸಿದೆ. 2025ರಲ್ಲಿ ಚೀನಾ ಸುಮಾರು $1.2 ಟ್ರಿಲಿಯನ್ ಮೊತ್ತದ ದಾಖಲೆಯ ವ್ಯಾಪಾರ ಹೆಚ್ಚುವರಿಯನ್ನು(Trade Surplus) ಸಾಧಿಸಿದೆ. ಅಮೆರಿಕಕ್ಕೆ ರಫ್ತು ಕಡಿಮೆಯಾದ ಕಾರಣ ಚೀನಾ ತನ್ನ ಗಮನವನ್ನು ಆಗ್ನೇಯ ಏಷ್ಯಾ (ASEAN), ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದತ್ತ ಹರಿಸಿದೆ. ಆಗ್ನೇಯ ಏಷ್ಯಾಕ್ಕೆ ಚೀನಾದ ರಫ್ತು 13% ರಷ್ಟು ಏರಿಕೆಯಾಗಿದೆ.
ಟ್ರಂಪ್ ಆಡಳಿತವು ಭಾರತವನ್ನು “Tariff King” ಎಂದು ಕರೆದು, ಭಾರತೀಯ ಉತ್ಪನ್ನಗಳ ಮೇಲೆ ಆಗಸ್ಟ್ 2025 ರಿಂದ ಒಟ್ಟು 50% ಸುಂಕವನ್ನು ಹೇರಿದೆ. ಪರಿಣಾಮ ಬೀರಿದ ವಲಯಗಳು: ಜವಳಿ, ರತ್ನ ಮತ್ತು ಆಭರಣ, ಚರ್ಮದ ಉದ್ಯಮ ಹಾಗೂ ಕೃಷಿ ಉತ್ಪನ್ನಗಳ ಮೇಲೆ ಈ ಸುಂಕ ನೇರ ಪ್ರಭಾವ ಬೀರಿದೆ. ಸುಂಕ ಏರಿಕೆಯಿಂದಾಗಿ ಭಾರತದ ಜವಳಿ ರಫ್ತುಆತಂಕ ಎದುರಿಸುತ್ತಿದೆ. ಸುಂಕಗಳ ಹೊರತಾಗಿಯೂ, ಭಾರತದ ಔಷಧ (Pharma) ಮತ್ತು ಎಲೆಕ್ಟ್ರಾನಿಕ್ಸ್ ವಲಯಕ್ಕೆ ವಿನಾಯಿತಿ ಸಿಕ್ಕಿದೆ. ಅಲ್ಲದೆ, ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವ ಭಾರತದ ಧೈರ್ಯಕ್ಕೆ ಅಮೆರಿಕ ಸುಂಕದ ಮೂಲಕ ಉತ್ತರ ನೀಡಲು ಯತ್ನಿಸಿದೆ. ಆದರೆ, ಭಾರತವು ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಯುರೋಪಿಯನ್ ಮುಕ್ತ ವ್ಯಾಪಾರ ಸಂಘ (EFTA) ಮತ್ತು ಯುಕೆ ಜೊತೆಗಿನ ಮಾತುಕತೆಯನ್ನು ಚುರುಕುಗೊಳಿಸಿದೆ.
ಮಿಲಿಟರಿ ಹಸ್ತಕ್ಷೇಪ: ಯುದ್ಧಗಳ ಮುಂದುವರಿಕೆ ಮತ್ತು ಹೊಸ ಕಾರ್ಯಾಚರಣೆ ಪ್ರಚಾರದ ಸಮಯದಲ್ಲಿ “ಯುದ್ಧಗಳನ್ನು ಕೊನೆಗೊಳಿಸುವ” ಭರವಸೆ ನೀಡಿದ್ದರೂ, ವಾಸ್ತವದಲ್ಲಿ ಟ್ರಂಪ್ ಹಳೆಯ ಯುದ್ಧಗಳಲ್ಲಿ ಭಾಗಿಯಾಗುವುದನ್ನು ಮುಂದುವರಿಸಿದ್ದಲ್ಲದೆ, ಕೆಲವು ಹೊಸ ಮಿಲಿಟರಿ ಸಂಘರ್ಷಗಳಿಗೆ ನಾಂದಿ ಹಾಡುತ್ತಿದ್ದಾರೆ. ಮಾನಸಿಕ ಸಿಮಿತ ಕಳೆದುಕೊಂಡಿರುವ ಹಾಗೆ “ನಾನು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ, ನಾನು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹನು” ಎಂದು ಹೇಳುತ್ತಾ ತನ್ನಿಂದಲೇ “ಜಗತ್ತಿನಲ್ಲಿ ಅಮೆರಿಕದ ಮಿಲಿಟರಿ ಶ್ರೇಷ್ಠತೆ ಪಡೆದುಕೊಂಡಿದೆ” ಮತ್ತು ಅಮೆರಿಕ ವಿರುದ್ಧ ಇರುವ (ಅಂದರೆ ಚೀನಾ ಮತ್ತು ರಷ್ಯಾ ಜೊತೆ ವ್ಯಾಪಾರ ಮಾಡುವ) ದೇಶಗಳಿಗೆ ನೇರವಾಗಿಯೇ ಸುಂಕ ಅಥವ ಮಿಲಿಟರಿ ಹಸ್ತಕ್ಷೇಪದ ಬೆದರಿಕೆಗಳನ್ನು ಪ್ರತಿದಿನವು ಹಾಕುತ್ತಲೇ ಇದ್ದಾರೆ.
ರಷ್ಯಾ-ಉಕ್ರೇನ್ ಯುದ್ಧವನ್ನು “24 ಗಂಟೆಗಳಲ್ಲಿ” ಮುಗಿಸುವುದಾಗಿ ಹೇಳಿದ್ದ ಟ್ರಂಪ್, ಅಧಿಕಾರಕ್ಕೆ ಬಂದ ನಂತರ ಉಕ್ರೇನ್‌ಗೆ ನೀಡುತ್ತಿದ್ದ ನೆರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ರಷ್ಯಾಕ್ಕೆ ಅನುಕೂಲಕರವಾಗುವಂತಹ ಶಾಂತಿ ಒಪ್ಪಂದಕ್ಕೆ ಉಕ್ರೇನ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಟೀಕೆಗಳಿವೆ. ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧಕ್ಕೆ ಸಂಪೂರ್ಣ ಬೆಂಬಲ ನೀಡುತ್ತಲೇ ಈಗ ವಿವಾದಾತ್ಮಕ ಶಾಂತಿ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದಾರೆ ಮತ್ತು ಗಾಜಾ ಪಟ್ಟಿಯನ್ನು “ವಿಶೇಷ ಆರ್ಥಿಕ ವಲಯ”ವನ್ನಾಗಿ ಪರಿವರ್ತಿಸುವ ಮತ್ತು ಪ್ಯಾಲೆಸ್ತೀನಿಯನ್ನರನ್ನು ಸ್ಥಳಾಂತರಿಸುವ ಯೋಜನೆಯನ್ನು ಅಸ್ತಿತ್ವಕ್ಕೆ ತರುತ್ತಿದ್ದಾರೆ. ಸಿರಿಯಾ, ಇರಾಕ್, ಸೊಮಾಲಿಯಾ, ನೈಜೀರಿಯಾ ಮತ್ತು ಯೆಮೆನ್‌ನಲ್ಲಿ ಭಯೋತ್ಪಾದನಾ ವಿರೋಧಿ ಹೆಸರಿನಲ್ಲಿ ಸರಣಿ ವಾಯುದಾಳಿಗಳನ್ನು ಮುಂದುವರಿಸಲಾಗುತ್ತಿದೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಕೇಂದ್ರದ ತಾರತಮ್ಯ ನೀತಿಯನ್ನು ಪ್ರಶ್ನಿಸುವುದು ತಪ್ಪಲ್ಲ
ಜೂನ್ 2025ರಲ್ಲಿ ಇಸ್ರೇಲ್ ಜೊತೆ ಸೇರಿ ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ “ಬಂಕರ್ ಬಸ್ಟರ್” ಬಾಂಬ್‌ಗಳ ಮೂಲಕ ದಾಳಿ ನಡೆಸಲಾಯಿತು. ಜನವರಿ 3, 2026 ರಂದು ಅಮೆರಿಕದ ವಿಶೇಷ ಪಡೆಗಳು ವೆನೆಜುವೆಲಾ ಮೇಲೆ ದಾಳಿ ನಡೆಸಿ ಅಧ್ಯಕ್ಷ ನಿಕೋಲಸ್ ಮಡುರೋ ಮತ್ತು ಅವರ ಪತ್ನಿಯನ್ನು ಬಂಧಿಸಿ ಅಮೆರಿಕಗೆ ಕರೆತಂದಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ಭದ್ರತೆ ಮತ್ತು “ದಿ ಗೋಲ್ಡನ್ ಡೋಮ್” ಹೆಸರಿನಲ್ಲಿ ರಷ್ಯಾ ಮತ್ತು ಚೀನಾದ ಗುಮ್ಮ ತೋರಿಸುತ್ತಾ ಡೆನ್ಮಾರ್ಕ್‌ಗೆ ಸೇರಿದ ಗ್ರೀನ್‌ಲ್ಯಾಂಡ್ ದ್ವೀಪವನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಡೆನ್ಮಾರ್ಕ್ ದೇಶವು ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕಕ್ಕೆ ಮಾರಾಟ ಮಾಡಲು ಒಪ್ಪದಿದ್ದರೆ, ಯುರೋಪಿನ ಎಂಟು ಪ್ರಮುಖ ಮಿತ್ರರಾಷ್ಟ್ರಗಳ ಮೇಲೆ ಬಾರಿ ಸುಂಕ ಹೇರುವುದಾಗಿ ಅವರು ಎಚ್ಚರಿಸಿದ್ದಾರೆ. ಟ್ರಂಪ್ ಅವರ ಈ ‘ಗ್ರೀನ್‌ಲ್ಯಾಂಡ್ ಕಬಳಿಕೆ’ ಅಮೆರಿಕ ಮತ್ತು ಅದರ ದಶಕಗಳ ಕಾಲದ ಮಿತ್ರರಾಷ್ಟ್ರಗಳ(NATO) ನಡುವಿನ ಸಂಬಂಧವನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ಕೊಂಡೊಯ್ದಿದೆ.
ಟ್ರಂಪ್ ಅವರ “ಅಮೆರಿಕ ಫಸ್ಟ್” ನೀತಿಯು ಅಮೆರಿಕವನ್ನು ಜಾಗತಿಕವಾಗಿ ಏಕಾಂಗಿ ಮಾಡುತ್ತಿದೆ. ಅಮೆರಿಕವು ಸುಂಕದ ಗೋಡೆಗಳನ್ನು ಕಟ್ಟಿಕೊಳ್ಳುತ್ತಾ, ಮತ್ತೊಂದು ಕಡೆ ವಿಶ್ವದಲ್ಲಿ ತನ್ನ ಮಿಲಿಟರಿ ಶಕ್ತಿ ಮತ್ತು ತಿಕ್ಕಲುತನದಿಂದ ಮೂರನೇ ಮಹಾಯುದ್ಧದ ಕಡೆ ಕೊಂಡೊಯ್ಯುತಿದೆ. ಅವರ ಅಧಿಕಾರ ಅವಧಿ ಇನ್ನು ಮೂರು ವರ್ಷಗಳು ಯಾವ ಜಗತ್ತನ್ನು ಯಾವ ಪ್ರಪಾತಕ್ಕೆ ಇಳಿಸುತ್ತದೆಯೊ ಕಾದು ನೊಡಬೇಕಿದೆ.




