ತುಮಕೂರು ಜಿಲ್ಲೆಯಲ್ಲಿ ಸರ್ಕಾರದ ಪಿಟಿಸಿಎಲ್ ಕಾಯ್ದೆಯ ಅನುಷ್ಠಾನ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ. ಹಲವಾರು ವರ್ಷಗಳಿಂದ ಸಾವಿರಾರು ಅರ್ಜಿಗಳು ಬಾಕಿ ಉಳಿದಿದ್ದು, ಭೂಮಿ ಕಳೆದುಕೊಂಡ ಕುಟುಂಬಗಳು ಕಚೇರಿಯಿಂದ ಕಚೇರಿಗೆ ಅಲೆದಾಡುವ ಸ್ಥಿತಿ ಎದುರಿಸುತ್ತಿವೆ. ಭೂಮಿ ಹಿಂಪಡೆಯುವ ಪ್ರಕ್ರಿಯೆ ಕಾನೂನಾತ್ಮಕವಾಗಿದ್ದರೂ, ಆಡಳಿತಾತ್ಮಕ ವಿಳಂಬಗಳು ಮತ್ತು ತಾಂತ್ರಿಕ ಅಡಚಣೆಗಳು ಯೋಜನೆಯನ್ನು ಕುಂಠಿತಗೊಳಿಸುತ್ತಿವೆ ಎನ್ನಲಾಗುತ್ತಿದೆ.
ಸರ್ಕಾರದಿಂದ ಅನುದಾನವಾಗಿ ಭೂಮಿ ಪಡೆದಿದ್ದ ದಲಿತ ಮತ್ತು ಆದಿವಾಸಿ ಕುಟುಂಬಗಳು ಅನಕ್ಷರತೆ, ಬಡತನ, ಸಾಲಬಾಧೆ, ಮಧ್ಯವರ್ತಿಗಳ ಮೋಸ ಅಥವಾ ಕಾನೂನು ಜ್ಞಾನ ಕೊರತೆಯಿಂದ ತಮ್ಮ ಭೂಮಿಯನ್ನು ಕಳೆದುಕೊಂಡಿದ್ದರೆ, ಆ ಭೂಮಿಯನ್ನು ಮತ್ತೆ ಅವರಿಗೇ ಹಿಂತಿರುಗಿಸಿ ಭೂ ಒಡೆಯರನ್ನಾಗಿ ಮಾಡುವ ಉದ್ದೇಶದಿಂದ ಜಾರಿಗೊಳಿಸಲಾದ ಕಾಯ್ದೆಯೇ ಈ ಪಿಟಿಸಿಎಲ್. ಕರ್ನಾಟಕ ಸರ್ಕಾರ 1978ರಲ್ಲಿ PTCL (Scheduled Castes and Scheduled Tribes (Prohibition of Transfer of Certain Lands) Act) ಕಾಯ್ದೆಯನ್ನು ಜಾರಿಗೊಳಿಸಿತ್ತು.
1979ರಿಂದ ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಸಮುದಾಯಗಳಿಗೆ ಭೂಮಿ ವರ್ಗಾವಣೆ ನಿಷೇಧ) ಅಧಿನಿಯಮ- 1978ರನ್ವಯ ಜಿಲ್ಲೆಯ ತುಮಕೂರು, ತಿಪಟೂರು ಹಾಗೂ ಮಧುಗಿರಿ ಉಪವಿಭಾಗದಲ್ಲಿ ಅರ್ಹರಿಗೆ ಭೂಮಿಯನ್ನು ಮರಳಿಸುವ ಕೆಲಸವನ್ನು ಕಂದಾಯ ಇಲಾಖೆ ಮಾಡಿಲ್ಲ. ಪಿಟಿಸಿಎಲ್ ಕಾಯ್ದೆಯಂತೆ ಆಯಾ ನ್ಯಾಯಾಲಯಗಳಲ್ಲಿ ಆದೇಶವಾಗಿದ್ದರೂ ಜಿಲ್ಲೆಯಲ್ಲಿ ಇನ್ನೂ 22 ಪ್ರಕರಣಗಳಲ್ಲಿ ವಾರಸುದಾರರಿಗೆ ಜಮೀನು ಬಿಡಿಸಿಕೊಡಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ತುಮಕೂರು ಉಪವಿಭಾಗದಲ್ಲಿ 7, ತಿಪಟೂರು 9 ಹಾಗೂ ಮಧುಗಿರಿ ಉಪವಿಭಾಗದಲ್ಲಿ 9 ಸೇರಿದಂತೆ ಒಟ್ಟು 22 ಪರಿಶಿಷ್ಟ ಸಮುದಾಯಗಳು ಭೂಮಿಗಾಗಿ ಕಾಯುತ್ತಿವೆ.
ತುಮಕೂರು ಉಪ ವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ಈಗಾಗಲೇ ಇತ್ಯರ್ಥವಾಗಿರುವ 59 ಪ್ರಕರಣಗಳ ಪೈಕಿ ಇನ್ನೂ 22 ಪ್ರಕರಣಗಳಲ್ಲಿ ಭೂಮಿಯನ್ನು ಮರಳಿ ಮೂಲ ವಾರಸುದಾರರಿಗೆ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ತಿಪಟೂರು, ಮಧುಗಿರಿ ಹಾಗೂ ತುಮಕೂರು ಉಪವಿಭಾಗದಲ್ಲಿ ಬರೋಬ್ಬರಿ 621 ಪ್ರಕರಣಗಳು ವಿಚಾರಣೆ ಹಂತದಲ್ಲಿಯೇ ಇದೆ. ಸಾಕಷ್ಟು ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಕೆಯಾಗದಿದ್ದರೂ ಅಧಿಕಾರಿಗಳೇ ಭೂಮಿ ಕೊಡಿಸಲು ಮನಸ್ಸು ಮಾಡುತ್ತಿಲ್ಲ ಎಂಬ ದೂರುಗಳೂ ಕೇಳಿಬಂದಿವೆ.

ಪಿಟಿಸಿಎಲ್ ಕಾಯ್ದೆ ಏನು ಹೇಳುತ್ತದೆ?
ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸರ್ಕಾರ ನೀಡಿದ ಭೂಮಿ ಮಾರಾಟ ಮಾಡದಂತೆ ರಕ್ಷಿಸಲು ‘ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಅಧಿನಿಯಮ-1978’ನ್ನು 1979ರ ಜನವರಿ 1ರಿಂದಲೇ ರಾಜ್ಯದಲ್ಲಿ ಜಾರಿ ಮಾಡಲಾಗಿದೆ ಹಾಗೂ ಭೂಮಿಯು ಮೂಲ ಫಲಾನುಭವಿಗಳು ಅಥವಾ ಅವರ ಉತ್ತರಾಧಿಕಾರಿಗಳಲ್ಲಿ ಉಳಿಯುವುದನ್ನು ಈ ಕಾಯ್ದೆ ಖಚಿತಪಡಿಸುತ್ತದೆ. ಅಕ್ರಮವಾಗಿ ವರ್ಗಾಯಿಸಲಾದ ಭೂಮಿ ಮರಳಿ ನೀಡುವ ನಿಬಂಧನೆ ಹೊಂದಿದೆ. ಸರ್ಕಾರದ ಅನುಮತಿಯಿಲ್ಲದೆ ಒಂದು ನಿರ್ದಿಷ್ಟ ಅವಧಿಗೆ ಮಂಜೂರು ಮಾಡಿದ ಭೂಮಿಯನ್ನು ವರ್ಗಾವಣೆ ಮಾಡುವುದನ್ನು ತಡೆಯುತ್ತದೆ. ಹಿಂದಿನ ಅನಧಿಕೃತ ಮಾರಾಟಗಳನ್ನು ರದ್ದುಗೊಳಿಸಲು ಹಾಗೂ ಹಿಂದಿನಿಂದಲೂ ಉಳಿಮೆ ಮಾಡಿಕೊಂಡಿರುವ ಮೂಲ ಅನುದಾತರಿಗೆ ಭೂಮಿಯನ್ನು
ಹಿಂದಿರುಗಿಸಲು ಸೂಚಿಸುತ್ತದೆ.
ಸರ್ಕಾರದಿಂದ ಮಂಜೂರಾದ ಉಳುಮೆ ಭೂಮಿ ಕಳೆದುಕೊಂಡ ಪರಿಶಿಷ್ಟ ಸಮುದಾಯದ ಫಲಾನುಭವಿಗಳು ಅಥವಾ
ಅವರ ವಾರಸುದಾರರು ಆಯಾ ಉಪವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ಹಕ್ಕುಗಳಿಗಾಗಿ ಹೋರಾಟ ನಡೆಸಿ
ಭೂಮಿ ಹಿಂಪಡೆಯಲು ಅವಕಾಶ ಕಲ್ಪಿಸಿದೆ. ತುಮಕೂರು ಜಿಲ್ಲೆಯಲ್ಲಿ ಪಿಟಿಸಿಎಲ್ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ಜಿಲ್ಲೆಯ ಅಧಿಕಾರಿಗಳು ಉದಾಸೀನ ತೋರುತ್ತಿದ್ದಾರೆ. ಜಿಲ್ಲೆಯಲ್ಲಿ 22 ಪ್ರಕರಣಗಳು ಇನ್ನೂ ಬಾಕಿ ಇದ್ದು ದಲಿತರಿಗೆ ಭೂಮಿ ಮರಳಿಸುವ ಕೆಲಸವಾಗಿಲ್ಲ.
ವಿಳಂಬಕ್ಕೆ ಕಾರಣಗಳೇನು?
ದಾಖಲೆಗಳ ಕೊರತೆ ಮತ್ತು ಗೊಂದಲ: ಬಹುತೇಕ ಫಲಾನುಭವಿಗಳಿಗೆ ಮೂಲ ಅನುದಾನ ಪತ್ರ, ಕಂದಾಯ ದಾಖಲೆಗಳು ಅಥವಾ ವರ್ಗಾವಣೆ ಸಂಬಂಧಿತ ದಾಖಲೆಗಳು ಲಭ್ಯವಿಲ್ಲ. ಕೆಲವೆಡೆ ಹಳೆಯ ದಾಖಲೆಗಳು ನಾಶವಾಗಿವೆ ಅಥವಾ ಸರಿಯಾಗಿ ಸಂರಕ್ಷಿಸಲ್ಪಟ್ಟಿಲ್ಲ. ಇದರಿಂದ ಅರ್ಜಿ ಪರಿಶೀಲನೆಗೆ ವರ್ಷಗಳ ಕಾಲ ಬೇಕಾಗುತ್ತಿದೆ.
ಕಾನೂನು ಪ್ರಕ್ರಿಯೆಯ ಸಂಕೀರ್ಣತೆ: ಪಿಟಿಸಿಎಲ್ ಪ್ರಕರಣಗಳು ಸಾಮಾನ್ಯವಾಗಿ ತಹಶೀಲ್ದಾರ್ ಹಂತದಿಂದ ಆರಂಭವಾಗಿ, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಮತ್ತು ನಂತರ ನ್ಯಾಯಾಲಯಗಳವರೆಗೆ ಹೋಗುತ್ತವೆ. ಪ್ರತಿ ಹಂತದಲ್ಲೂ ಮೇಲ್ಮನವಿ ಸಲ್ಲಿಕೆ, ತಡೆಯಾಜ್ಞೆ (stay), ಪುನರ್ವಿಚಾರಣೆ ನಡೆಯುವುದರಿಂದ ಅಂತಿಮ ತೀರ್ಪು ವರ್ಷಗಳ ಕಾಲ ಬಾಕಿಯಾಗುತ್ತದೆ.
ಭೂಸ್ವಾಧೀನದಾರರ ಪ್ರಭಾವ: ಅನುದಾನ ಭೂಮಿಗಳನ್ನು ಖರೀದಿಸಿಕೊಂಡಿರುವ ಕೆಲವರು ರಾಜಕೀಯ, ಆರ್ಥಿಕ ಮತ್ತು ಕಾನೂನು ಪ್ರಭಾವ ಬಳಸಿ ಪ್ರಕರಣಗಳನ್ನು ವಿಳಂಬಗೊಳಿಸುತ್ತಿದ್ದಾರೆ ಎಂಬ ಆರೋಪಗಳು ಜಿಲ್ಲೆಯಾದ್ಯಂತ ಕೇಳಿಬರುತ್ತಿವೆ. ಇದರಿಂದ ನಿಜವಾದ ಫಲಾನುಭವಿಗಳಿಗೆ ನ್ಯಾಯ ಸಿಗುವುದು ಕಷ್ಟವಾಗುತ್ತಿದೆ.
ಆಡಳಿತಾತ್ಮಕ ನಿರ್ಲಕ್ಷ್ಯ ಮತ್ತು ಸಿಬ್ಬಂದಿ ಕೊರತೆ: ತುಮಕೂರು ಜಿಲ್ಲೆಯ ಕಂದಾಯ ಇಲಾಖೆ ಮೇಲೆ ಈಗಾಗಲೇ ಭಾರೀ ಕೆಲಸದ ಒತ್ತಡವಿದೆ. ಪಿಟಿಸಿಎಲ್‌ಗೆ ವಿಶೇಷವಾಗಿ ನಿಯೋಜಿತ ಸಿಬ್ಬಂದಿ, ಸಮಯಬದ್ಧ ವಿಚಾರಣೆ ಮತ್ತು ಮೇಲ್ವಿಚಾರಣೆ ಇಲ್ಲದ ಕಾರಣ ಪ್ರಕರಣಗಳು ವರ್ಷಗಟ್ಟಲೆ ಮುಂದೂಡಲ್ಪಡುತ್ತಿವೆ.
ಪರಿಣಾಮವಾಗಿ, ಭೂಮಿ ಕಳೆದುಕೊಂಡ ದಲಿತ-ಆದಿವಾಸಿ ಕುಟುಂಬಗಳು ಇನ್ನೂ ಭೂಹೀನರಾಗಿ ಬದುಕುವ ಪರಿಸ್ಥಿತಿಯಲ್ಲಿವೆ. ಭೂಮಿ ಕೇವಲ ಆಸ್ತಿಯಲ್ಲ, ಅದು ಜೀವನಾಧಾರ, ಗೌರವ ಮತ್ತು ಸಾಮಾಜಿಕ ಭದ್ರತೆ. PTCL ಕಾಯ್ದೆಯ ಉದ್ದೇಶ ಈ ಕುಟುಂಬಗಳಿಗೆ ಆ ಭದ್ರತೆಯನ್ನು ಮರಳಿ ನೀಡುವುದೇ ಆಗಿದ್ದರೂ, ವಿಳಂಬದಿಂದ ಆ ಉದ್ದೇಶ ಸರಿಯಾಗಿ ಈಡೇರುತ್ತಿಲ್ಲ.
ಇದನ್ನೂ ಓದಿ: ತುಮಕೂರು | ಕನ್ನಡ ಸಿನಿಮಾಗಳಿಗೆ ಸರಿಯಾದ ಮನ್ನಣೆ ಸಿಗುತ್ತಿಲ್ಲ: ಬರಗೂರು ರಾಮಚಂದ್ರಪ್ಪ
ಈ ಕುರಿತು ಕಾಂಗ್ರೆಸ್ ಮುಖಂಡ ಹೆತ್ತೇನಹಳ್ಳಿ ಮಂಜುನಾಥ್ ಈದಿನಕ್ಕೆ ಪ್ರತಿಕ್ರಿಯಿಸಿ, “ತಿಪಟೂರು, ಮಧುಗಿರಿ ಹಾಗೂ ತುಮಕೂರು ವಿಭಾಗದಲ್ಲಿಯೇ 621 ಪ್ರಕಣಗಳು ವಿಚಾರಣೆಯ ಹಂತದಲ್ಲಿ ಇರುವುದು ತಿಳಿದುಬಂದಿದೆ. ಇದರ ಜವಾಬ್ದಾರಿ ಹೊರುವವರು ಯಾರು? ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗದಿದ್ದರೆ ಪಿಟಿಸಿಎಲ್ ಕಾಯ್ದೆಯನ್ನು ಜಾರಿಗೆ ತಂದಿದ್ದಾರೂ ಯಾವ ಕಾರಣಕ್ಕೆ ಎಂಬ ಪ್ರಶ್ನೆಯನ್ನು ಕೇಳಬೇಕಿದೆ. ದಲಿತರ ಉದ್ದಾರಕ್ಕೆ ಮಾಡಿರುವ ಈ ಕಾನೂನಿನ ಮೇಲಿನ ಉದ್ದೇಶಪೂರ್ವಕ ನಿರ್ಲಕ್ಷ್ಯತೆಯ ಧೋರಣೆಯನ್ನು ಖಂಡಿಸುತ್ತೇವೆ. ಜಿಲ್ಲಾಧಿಕಾರಿಗಳು ಕೂಡಲೇ ಪಿಟಿಸಿಎಲ್ ಕಾಯ್ದೆಯ ಪರಿಣಾಮಕಾರಿ ಜಾರಿಗೆ ಒತ್ತು ನೀಡಿ ದಲಿತರ ಉದ್ದಾರಕ್ಕೆ ಶ್ರಮಿಸಬೇಕು” ಎಂದು ಆಗ್ರಹಿಸಿದರು.
ನ್ಯಾಯಾಲಯಗಳಿಂದ ಆದೇಶ ಬಂದಿದ್ದರೂ ಭೂಮಿಯನ್ನು ಮರಳಿಸಿಕೊಡಲು ಆಡಳಿತ ಯಂತ್ರ ವಿಫಲವಾಗಿರುವುದು ಸಾಮಾಜಿಕ ನ್ಯಾಯದ ಮೇಲಿನ ಗಂಭೀರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ವರ್ಷಗಳಿಂದ ಕಚೇರಿಗಳಿಗೆ ಅಲೆದಾಡುತ್ತಿರುವ ಫಲಾನುಭವಿಗಳಿಗೆ ಕಾಯ್ದೆಯ ಭರವಸೆ ಇನ್ನೂ ಸ್ಪಷ್ಟವಾಗಿಲ್ಲ. ಬಾಕಿ ಉಳಿದಿರುವ ಪ್ರಕರಣಗಳಿಗೆ ಸಮಯಬದ್ಧ ತೀರ್ಮಾನ, ಅಧಿಕಾರಿಗಳ ಹೊಣೆಗಾರಿಕೆ ನಿಗದಿ, ದಾಖಲೆಗಳ ತ್ವರಿತ ವಿಲೇವಾರಿ ಹಾಗೂ ರಾಜಕೀಯ ಆಡಳಿತಾತ್ಮಕ ಹಸ್ತಕ್ಷೇಪವನ್ನು ತಡೆಯುವ ದೃಢ ಕ್ರಮಗಳಿಲ್ಲದೆ ಪಿಟಿಸಿಎಲ್ ಕಾಯ್ದೆಯ ಆಶಯ ಸಾಧನೆಯಾಗದು. ಜಿಲ್ಲಾಡಳಿತ ಈಗಲಾದರೂ ಎಚ್ಚೆತ್ತು, ನ್ಯಾಯಾಲಯದ ಆದೇಶಗಳನ್ನು ತಕ್ಷಣ ಜಾರಿಗೆ ತಂದು ಭೂಮಿ ಕಳೆದುಕೊಂಡ ಪರಿಶಿಷ್ಟ ಸಮುದಾಯದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕಾಗಿದೆ.





