ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ಎನ್ನುವುದು ಅನೇಕ ದಶಕಗಳಿಂದ ಬೇರೂರಿದೆ. ಜ.15ರಂದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ಹೋಗಲಾಡಿಸಲು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಜಾರಿಗೆ ತಂದಿರುವ “ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜಿಸುವ ನಿಯಮ -2026” (Promotion of Equity Regulations 2026) ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ಬುಗಿಲೆದ್ದಿದೆ.
ಉತ್ತರ ಪ್ರದೇಶದಲ್ಲಿ ಆರಂಭವಾದ ಪ್ರತಿಭಟನೆಯ ಕಾವು ದೇಶದ ಎಲ್ಲಾ ರಾಜ್ಯಗಳಿಗೂ ಹಬ್ಬಿದೆ. ಯುಜಿಸಿ ಜಾರಿಗೊಳಿಸಿರುವ ಹೊಸ ನಿಯಮವನ್ನು ಸಂಪೂರ್ಣವಾಗಿ ವಾಪಸು ಪಡೆಯಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ನವದೆಹಲಿಯಲ್ಲಿರುವ ಯುಜಿಸಿ ಪ್ರಧಾನ ಕಚೇರಿಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
2026ರ ಜನವರಿ 15 ರಂದು ಯುಜಿಸಿ ಅಧಿಕೃತವಾಗಿ ಹೊರಡಿಸಿದ ಅಧಿಸೂಚನೆಯಲ್ಲಿ ʼವಿಶ್ವವಿದ್ಯಾಲಯ ಕ್ಯಾಂಪಸ್‌ಗಳಲ್ಲಿ ಪರಿಶಿಷ್ಟ ಜಾತಿ(ಎಸ್‌ಸಿ), ಪರಿಶಿಷ್ಟ ಪಂಗಡ(ಎಸ್‌ಟಿ) ಮತ್ತು ಹಿಂದುಳಿದ ವರ್ಗಗಳ(ಒಬಿಸಿ) ವಿದ್ಯಾರ್ಥಿಗಳಿಗೆ ದೃಢವಾದ ರಕ್ಷಣೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆʼ ಎಂದು ಹೇಳಲಾಗಿದೆ.
ಇದನ್ನು ಓದಿ : ಯುಜಿಸಿಯ ಹೊಸ ನಿಯಮಗಳ ವಿರುದ್ಧ ಯುಪಿಯಲ್ಲಿ ಪ್ರಬಲ ಜಾತಿಗಳ ಪ್ರತಿಭಟನೆ: ಹಲವು ಬಿಜೆಪಿ ನಾಯಕರು ರಾಜೀನಾಮೆ!
ಆದರೆ, ಈ ಹೊಸ ನಿಯಮವು ‘ಜಾತಿ ಆಧಾರಿತ ತಾರತಮ್ಯ’ದ ಮೂಲಕ ʼಸಾಮಾನ್ಯ ವರ್ಗದʼ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ಕುರಿತು ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪೋಸ್ಟ್-ಡಾಕ್ಟರೇಟ್ ಸಂಶೋಧಕ ಮೃತ್ಯುಂಜಯ್ ತಿವಾರಿ ಎಂಬವರು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ತಂದಿರುವ ʼಯುಜಿಸಿ ಹೊಸ ನಿಯಮ- 2026ʼ ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅದೇ ರೀತಿಯಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ವಿನೀತ್ ಜಿಂದಾಲ್ ಎಂಬುವವರು “ಯುಜಿಸಿ ಹೊಸ ನಿಯಮ 3 (ಸಿ) ಅನ್ವಯ, ಜಾತಿ ಆಧಾರಿತ ತಾರತಮ್ಯ ತಡೆಯಲು ಕಾಲೇಜು ಕ್ಯಾಂಪಸ್‌ಗಳಲ್ಲಿ, ವಿಶ್ವವಿದ್ಯಾಲಯ ಸಮಾನ ಅವಕಾಶ ಕೇಂದ್ರಗಳು, ಸಮಾನತೆ ಸಮಿತಿ, ಓಂಬುಡ್ಸ್‌ಮನ್, ಸಹಾಯವಾಣಿ ಸ್ಥಾಪಿಸುವುದರ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ, ಈ ಸೌಲಭ್ಯದ ವ್ಯಾಪ್ತಿಯನ್ನು ಎಸ್‌ಸಿ, ಎಸ್‌ಟಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ನಿಯಮವು ಮೀಸಲಾತಿ ವರ್ಗದಡಿ ಸೇರದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರನ್ನು ರಕ್ಷಿಸುವಲ್ಲಿ ವಿಫಲವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರೆದು, “ಮೀಸಲಾತಿ ವರ್ಗದಡಿ ಸೇರದವರು ತಮ್ಮ ಜಾತಿ ಹೆಸರಿನಲ್ಲಿ ಕಿರುಕುಳ ಅಥವಾ ತಾರತಮ್ಯ ಎದುರಿಸುವ ಸಾಧ್ಯತೆ ಇರುತ್ತದೆ. ಈ ನಿಯಮ ಅಸಾಂವಿಧಾನಿಕ ಮತ್ತು ಸಂವಿಧಾನದ 14ನೇ ವಿಧಿ (ಸಮಾನತೆ ಹಕ್ಕು) 15(1) ವಿಧಿ (ಜಾತಿ ಆಧಾರಿತ ತಾರತಮ್ಯ ನಿಷೇಧ) ಮತ್ತು 21ನೇ ವಿಧಿಯನ್ನು (ಜೀವಿಸುವ ಹಕ್ಕು) ಉಲ್ಲಂಘಿಸುತ್ತದೆ” ಎನ್ನುವುದನ್ನು ಕೋರ್ಟ್ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಇದು ಕೇವಲ ವಿದ್ಯಾರ್ಥಿ ಪ್ರತಿಭಟನೆಯಾಗದೆ ರಾಜಕೀಯವಾಗಿಯೂ ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಪೋಸ್ಟ್ ಮಾಡಿ, ʼನಿಯಮಗಳನ್ನು ವಾಪಸ್ ಪಡೆಯಬೇಕು ಅಥವಾ ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡಬೇಕುʼ ಎಂದು ಒತ್ತಾಯಿಸಿದ್ದಾರೆ.
ʼಕಾನೂನು ಎಲ್ಲರಿಗೂ ಸಮಾನ ರಕ್ಷಣೆಯನ್ನು ನೀಡಬೇಕು ಮತ್ತು ಸರ್ವರನ್ನೂ ಒಳಗೊಳ್ಳಬೇಕು. ಹೀಗಿರುವಾಗ, ಈ ಕಾನೂನುಗಳನ್ನು ಅನುಷ್ಠಾನ ಮಾಡುವಾಗ ಯಾಕೆ ತಾರತಮ್ಯ ಮಾಡಲಾಗಿದೆ? ಸುಳ್ಳು ಆರೋಪ ಮಾಡಿದರೆ ಏನಾಗಬಹುದು? ತಪ್ಪನ್ನು ನಿರ್ಧರಿಸುವುದು ಹೇಗೆ? ಪದಗಳು, ಕ್ರಿಯೆಗಳು ಅಥವಾ ಗ್ರಹಿಕೆಗಳ ಮೂಲಕ ತಾರತಮ್ಯವನ್ನು ವ್ಯಾಖ್ಯಾನಿಸುವುದು ಹೇಗೆ?ʼ ಎಂದು ಪ್ರಶ್ನಿಸಿದ್ದಾರೆ.
ಏನಿದು ಯುಜಿಸಿ ಮಸೂದೆ 2026?
ಇದು ಸಂಸತ್ತಿನಲ್ಲಿ ಅಂಗೀಕಾರವಾದ ಮಸೂದೆಯಲ್ಲದಿದ್ದರೂ, ಯುಜಿಸಿ ಕಾಯ್ದೆಯಡಿ ರೂಪಿಸಲಾದ ಬಲವಾದ ನಿಯಮಾವಳಿಗಳಾಗಿವೆ. ರೋಹಿತ್ ವೇಮುಲ ಮತ್ತು ಪಾಯಲ್ ತದ್ವಿ ಅವರಂತಹ ಪ್ರತಿಭಾವಂತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ದೇಶಾದ್ಯಂತ ತಲ್ಲಣ ಮೂಡಿಸಿದ್ದವು. ಅಂತಹ ದುರಂತಗಳು ಮರುಕಳಿಸದಂತೆ ತಡೆಯಲು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ, ಅವರ ಜಾತಿ ಅಥವಾ ಹಿನ್ನೆಲೆಯನ್ನು ಲೆಕ್ಕಿಸದೆ, ಸಮಾನ ಅವಕಾಶ ಮತ್ತು ಗೌರವಯುತ ವಾತಾವರಣವನ್ನು ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
2012ರ ಯುಜಿಸಿ ನಿಯಮಗಳ ಅನುಷ್ಠಾನವನ್ನು ಪ್ರಶ್ನಿಸಿ ರೋಹಿತ್ ವೇಮುಲಾ ಮತ್ತು ಪಾಯಲ್ ತಡ್ವಿ ಅವರ ತಾಯಂದಿರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ಹೊಸ ನಿಯಮಗಳನ್ನು ಜಾರಿಗೊಳಿಸುವಂತೆ ಯುಜಿಸಿಗೆ ಸೂಚಿಸಿತ್ತು. ಸುಪ್ರೀಂ ಸೂಚನೆಯಂತೆ ಕಳೆದ ವರ್ಷ ಫೆಬ್ರವರಿಯಲ್ಲಿ ಈ ನಿಯಮಗಳ ಕರಡನ್ನು ಬಿಡುಗಡೆ ಮಾಡಲಾಗಿತ್ತು.
ಹೊಸ ನಿಯಮಗಳ ಪ್ರಮುಖ ಅಂಶಗಳು
ಒಬಿಸಿ ವರ್ಗದ ಸೇರ್ಪಡೆ: ಇಲ್ಲಿಯವರೆಗೆ, ಜಾತಿ ತಾರತಮ್ಯದ ದೂರುಗಳನ್ನು ಪರಿಹರಿಸುವ ವ್ಯವಸ್ಥೆಯು ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಸೀಮಿತವಾಗಿತ್ತು. ಆದರೆ ಹೊಸ ನಿಯಮಗಳ ಅಡಿಯಲ್ಲಿ, ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಕೂಡ ತಾರತಮ್ಯದ ವಿರುದ್ಧದ ರಕ್ಷಣಾ ವ್ಯಾಪ್ತಿಗೆ ತರಲಾಗಿದೆ. ಜೊತೆಗೆ ಅಂಗವಿಕಲರು ಮತ್ತು ಮಹಿಳೆಯರಿಗೂ ಈ ರಕ್ಷಣೆ ಅನ್ವಯಿಸುತ್ತದೆ.
ಸಮಾನ ಅವಕಾಶ ಕೋಶ (ಇಒಸಿ): ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು ಕಡ್ಡಾಯವಾಗಿ ‘ಸಮಾನ ಅವಕಾಶ ಕೋಶ’ವನ್ನು ಸ್ಥಾಪಿಸಬೇಕು. ಇದು ಕೇವಲ ಹೆಸರಿಗೆ ಮಾತ್ರವಲ್ಲದೆ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಶೈಕ್ಷಣಿಕ ಮತ್ತು ಆರ್ಥಿಕ ಬೆಂಬಲ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ಸಮಾನತೆ ಸಮಿತಿ ರಚನೆ: ಪ್ರತಿ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಕುಲಪತಿ ಅಥವಾ ಪ್ರಾಂಶುಪಾಲರ ನೇತೃತ್ವದಲ್ಲಿ ‘ಸಮಾನತೆ ಸಮಿತಿ’ಯನ್ನು ರಚಿಸಬೇಕು. ಗಮನಾರ್ಹ ವಿಷಯವೇನೆಂದರೆ, ಈ ಸಮಿತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ, ಮಹಿಳೆಯರು ಮತ್ತು ಅಂಗವಿಕಲ ವರ್ಗಗಳ ಪ್ರತಿನಿಧಿಗಳು ಕಡ್ಡಾಯವಾಗಿ ಇರಬೇಕು. ಈ ಸಮಿತಿಯು ಪ್ರತಿ ಆರು ತಿಂಗಳಿಗೊಮ್ಮೆ ಯುಜಿಸಿಗೆ ವರದಿ ಸಲ್ಲಿಸಬೇಕು.
ದೂರು ಪರಿಹಾರಕ್ಕೆ ದಿನ ನಿಗದಿ: ಯಾವುದೇ ವಿದ್ಯಾರ್ಥಿಯು ತಾರತಮ್ಯದ ದೂರು ನೀಡಿದರೆ, ಅದನ್ನು ವಿಶ್ವವಿದ್ಯಾಲಯ ನಿರ್ಲಕ್ಷಿಸುವಂತಿಲ್ಲ. ದೂರು ಬಂದ 24 ಗಂಟೆಗಳ ಒಳಗೆ ಸಮಾನತೆ ಸಮಿತಿಯು ಪ್ರಾಥಮಿಕ ಕ್ರಮ ಕೈಗೊಳ್ಳಬೇಕು. 15 ಕೆಲಸದ ದಿನಗಳ ಒಳಗೆ ಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸಬೇಕು. ಇದು ಸಂತ್ರಸ್ತರಿಗೆ ತ್ವರಿತ ನ್ಯಾಯ ಸಿಗುವಂತೆ ಮಾಡುತ್ತದೆ.
ಸಂಸ್ಥೆಯ ಮುಖ್ಯಸ್ಥರೇ ನೇರ ಹೊಣೆ: ಕ್ಯಾಂಪಸ್‌ನಲ್ಲಿ ಯಾವುದೇ ತಾರತಮ್ಯ ನಡೆದರೆ, ಅದಕ್ಕೆ ಇಲಾಖೆಯ ಮುಖ್ಯಸ್ಥರು ಅಥವಾ ವಾರ್ಡನ್‌ಗಳ ಮೇಲೆ ಗೂಬೆ ಕೂರಿಸುವಂತಿಲ್ಲ. ಹೊಸ ನಿಯಮದ ಪ್ರಕಾರ, ಕಾಲೇಜಿನ ಪ್ರಾಂಶುಪಾಲರು ಅಥವಾ ವಿವಿ ಕುಲಪತಿಗಳೇ ಇದಕ್ಕೆ ನೇರ ಹೊಣೆಗಾರರಾಗಿರುತ್ತಾರೆ. ತಪ್ಪಿತಸ್ಥ ಸಂಸ್ಥೆಗಳ ಮಾನ್ಯತೆಯನ್ನು ರದ್ದುಗೊಳಿಸುವ ಅಧಿಕಾರವನ್ನೂ ಯುಜಿಸಿ ಹೊಂದಿದೆ.
24/7 ಸಹಾಯವಾಣಿ ಮತ್ತು ಆನ್‌ಲೈನ್ ಪೋರ್ಟಲ್: ವಿದ್ಯಾರ್ಥಿಗಳು ಭಯವಿಲ್ಲದೆ ದೂರು ನೀಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಹೆಲ್ಪ್‌ಲೈನ್ ಮತ್ತು ಆನ್‌ಲೈನ್ ದೂರು ವ್ಯವಸ್ಥೆಯನ್ನು ಕಲ್ಪಿಸಬೇಕು.
ಬಿಜೆಪಿಗೆ ತಿರುಗುಬಾಣವಾದ ಯುಜಿಸಿ ನಿಯಮ?
ಕರ್ಣಿ ಸೇನಾ ಸೇರಿದಂತೆ ಅನೇಕ ಮೇಲ್ಜಾತಿಯ ಸಂಘಟನೆಗಳು ಮೋದಿ ಅವರ ವಿರುದ್ಧ ಬೀದಿಗಿಳಿದಿದ್ದಾರೆ. ಕಟ್ಟಾ ಹಿಂದುತ್ವ ವಾದಿಗಳು ಎಂದು ಹೇಳಿಕೊಳ್ಳುವ ಜನರೇ ಕೇಂದ್ರ ಸರ್ಕಾರ ಯುಜಿಸಿ ಮೂಲಕ ತರಲಿರುವ ಹೊಸ ನಿಯಮ -2026ಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ತಂದಿರುವ ಯುಜಿಸಿ ನಿಯಮ ವಿರೋಧಿಸಿ ಉತ್ತರ ಪ್ರದೇಶ ಬರೇಲಿ ಸಿಟಿ ಮ್ಯಾಜಿಸ್ಟ್ರೇಟ್ ಅಲಂಕಾರ್ ಅಗ್ನಿಹೋತ್ರಿ “ಈಗಾಗಲೇ ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಅಮಾನತಿನ ಬಗ್ಗೆ ಹೇಳುವುದಕ್ಕೆ ಏನೂ ಇಲ್ಲ” ಎಂದಿದ್ದಾರೆ. ಮ್ಯಾಜಿಸ್ಟ್ರೇಟ್ ಅಗ್ನಿಹೋತ್ರಿ ಅವರ ಅಶಿಸ್ತಿನ ವರ್ತನೆ ಮತ್ತು ಸರ್ಕಾರದ ನೀತಿಗಳನ್ನು ವಿಶೇಷವಾಗಿ ಯುಜಿಸಿ ನಿಯಮವನ್ನು ಟೀಕಿಸಿದ್ದರಿಂದ ಕೆಲಸದಿಂದ ಅಮಾನತು ಮಾಡಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.
ಮ್ಯಾಜಿಸ್ಟ್ರೇಟ್ ರಾಜೀನಾಮೆ ಯುಜಿಸಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಇನ್ನಷ್ಟು ಹೆಚ್ಚಾಗಿದೆ. ಇದರ ಬೆನ್ನಲ್ಲೆ, ಲಕ್ನೋದ ಮೇಲ್ವರ್ಗದ ಹತ್ತಕ್ಕೂ ಬಿಜೆಪಿಯ ಮುಖ್ಯ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಬಿಜೆಪಿ ಕಿಸಾನ್ ಮೋರ್ಚಾ ಬುಡಕಟ್ಟು ಮಂಡಲದ ಅಧ್ಯಕ್ಷ ಶ್ಯಾಮ್ ಸುಂದರ್ ತ್ರಿಪಾಠಿ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿಯ ಅನೇಕ ಕಾರ್ಯಕರ್ತರು, ಮುಖಂಡರು ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಮೋದಿ ಅವರಿಗೆ ದಿಕ್ಕಾರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಬಿಜೆಪಿಯ ಪ್ರಮುಖ ಮತದಾರರಾದ ಬ್ರಾಹ್ಮಣರು ಮತ್ತು ಬನಿಯಾಗಳು ಹೊಸ ನಿಯಮವನ್ನು ವಿರೋಧಿಸುತ್ತಿದ್ದಾರೆ.
ಹೊಸ ನಿಯಮ ವಿರೋಧವೇಕೆ?
ಇತಿಹಾಸದುದ್ದಕ್ಕೂ ದಲಿತ, ಆದಿವಾಸಿ ಮತ್ತು ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳು ಪರೋಕ್ಷ ಅಥವಾ ಪ್ರತ್ಯಕ್ಷವಾಗಿ ಶೋಷಣೆಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಐಐಟಿ ಅಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶೇ70ರಷ್ಟು ವಿದ್ಯಾರ್ಥಿಗಳು ತಾರತಮ್ಯವನ್ನು ಅನುಭವಿಸುತ್ತಿರುವ ಸುದ್ದಿ ಬಂದಿರುವುದು ಆತಂಕಕಾರಿ ಸಂಗತಿಯಾಗಿದೆ. ಇದನ್ನು ತಡೆಗಟ್ಟಲು ಸಂವಿಧಾನದಲ್ಲಿರುವ ಸಮಾನತೆಯ ಹಕ್ಕನ್ನು ಸರಿಯಾಗಿ ಜಾರಿಯಾಗಬೇಕೆಂದರೆ, ಯುಜಿಸಿ ತಂದಿರುವ ಹೊಸ ನಿಯಮಗಳು ಅತ್ಯಗತ್ಯವಾಗುತ್ತದೆ.
ಬಹಳ ಹಿಂದೆಯೇ ಬರಬೇಕಿದ್ದ ನಿಯಮ ಈಗ ಬಂದಿದೆ. ಆದರೆ, ಇದನ್ನು ಸ್ವಾಗತಿಸದೆ ವಿರೋಧವೇ ಹೆಚ್ಚಾಗಿ ಕೇಳಿ ಬರುತ್ತಿದೆ. ಈ ನಿಯಮವನ್ನು ಪರಿಚಯಿಸಿದಾಗ ಇಂತಹ ವಿರೋಧವನ್ನು ಬಿಜೆಪಿ ಸಾಮಾನ್ಯವಾಗಿ ನಿರೀಕ್ಷಿಸಿತ್ತು ಅನ್ನಬಹುದು. ಆದಾಗ್ಯೂ ತನ್ನ ಪಕ್ಷದೊಳಗಡೆಯೇ ಬರುತ್ತಿರುವ ವಿರೋಧಕ್ಕೆ ಬಿಜಪಿ ಆಶ್ಚರ್ಯಪಟ್ಟಿರಬಹುದು.
ಶೈಕ್ಷಣಿಕ ಸಂಸ್ಥೆಗಳೊಳಗೆ ಜಾತಿ ತಾರತಮ್ಯ ನಿರ್ಮೂಲ ಮಾಡುವುದು ಎಷ್ಟು ಮುಖ್ಯವೋ, ಯಾವುದೇ ಕಾನೂನು ಅಮಾಯಕರ ವಿರುದ್ಧ ಅಸ್ತ್ರವಾಗದಿರುವುದು ಅಷ್ಟೇ ಮುಖ್ಯ. ಯುಜಿಸಿ ತಂದಿರುವ ಹೊಸ ನಿಯಮ ಕಾಗದದ ಮೇಲಿನ ಅಕ್ಷರವಾಗದೆ ಸರಿಯಾದ ರೀತಿಯಲ್ಲಿ ಅನುಷ್ಟಾನವಾಗಬೇಕು.





