ಕೇಂದ್ರ ಬಜೆಟ್ | ದೂರ, ಬಹು ದೂರ – ಜನರ ಕಲ್ಯಾಣದಿಂದ

Date:

ಬಂಡವಾಳ ವೆಚ್ಚವನ್ನು ಹೆಚ್ಚಿಸಿದರೆ, ಅಂದರೆ ಮೂಲಸೌಕರ್ಯ ಒದಗಿಸಿದರೆ ಖಾಸಗಿಯವರು ಹೂಡಿಕೆ ಮಾಡಲು ಮುಂದೆ ಬರುತ್ತಾರೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಹಾಗೆ ಆಗುತ್ತಿಲ್ಲ. ಖಾಸಗಿ ವಲಯದವರು ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬಂಡವಾಳ ತೊಡಗಿಸುವುದಕ್ಕೆ ಅವರ ಸರಕುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರಬೇಕು. ಆದರೆ ನಮ್ಮ ಆರ್ಥಿಕತೆಯಲ್ಲಿ ಬೇಡಿಕೆ ಹೆಚ್ಚುತ್ತಿಲ್ಲ. ನಿರುದ್ಯೋಗ, ನೈಜ ಕೂಲಿಯ ಇಳಿತ ಇತ್ಯಾದಿ ಅಂಶಗಳು ಸೇರಿಕೊಂಡು ಜನರ ಕೊಳ್ಳುವ ಶಕ್ತಿಯನ್ನು ಅಂದರೆ ಬೇಡಿಕೆಯನ್ನು ಕುಗ್ಗಿಸಿವೆ.

ಭಾರತದ ಆರ್ಥಿಕತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಕೆಲವಕ್ಕೆ ಜಾಗತಿಕ ಬೆಳವಣಿಗೆಗಳು ಕಾರಣವಾದರೆ, ಇನ್ನೊಂದಿಷ್ಟಕ್ಕೆ ಆಂತರಿಕ ಪರಿಸ್ಥಿತಿ ಕಾರಣ. ಟ್ರಂಪ್ ಕಾರಣಕ್ಕೋ ಅಥವಾ ಜಾಗತಿಕ ರಾಜಕೀಯ ಪರಿಸ್ಥಿತಿಯಿಂದಾಗಿಯೋ ಜಾಗತಿಕ ಆರ್ಥಿಕತೆ ಗೊಂದಲದಲ್ಲಿದೆ. ಭಾರತಕ್ಕೆ ಹರಿದು ಬರುತ್ತಿರುವ ವಿದೇಶಿ ಬಂಡವಾಳ ಕಡಿಮೆಯಾಗುತ್ತಿದೆ. ಭಾರತೀಯ ಬಂಡವಾಳಿಗರು ಸೇರಿದಂತೆ ಹೆಚ್ಚಿನ ಬಂಡವಾಳಿಗರಿಗೆ ದೇಶದ ಆರ್ಥಿಕತೆಯ ಬಗ್ಗೆ ನಂಬಿಕೆ ಕಡಿಮೆಯಾಗಿದೆ. ಪಾವತಿ ಸಮತೋಲನ (ಬ್ಯಾಲೆನ್ಸ್ ಆಫ್ ಪೇಮೆಂಟ್) ಆಯತಪ್ಪಿದೆ. ಡಾಲರ್ ಎದುರು ರೂಪಾಯಿ ಕುಸಿಯುತ್ತಿದೆ. ಅಸಮಾನತೆ ತೀವ್ರವಾಗಿದೆ. ನಿರುದ್ಯೋಗ ವಿಪರೀತವಾಗಿದೆ. ಬಹುತೇಕ ಜನರಲ್ಲಿ ಕೊಳ್ಳುವ ಶಕ್ತಿ ಸೊರಗುತ್ತಿದೆ. ಬೇಡಿಕೆ ಕಡಿಮೆಯಾಗಿದೆ. ಸಹಜವಾಗಿಯೇ ಭಾರತದ ಹಾಗೂ ವಿದೇಶಿ ಬಂಡವಾಳಿಗರು ಹೂಡಿಕೆಗೆ ಬೇರೆ ದೇಶಗಳನ್ನು ಹುಡುಕಿಕೊಂಡು ಹೊರಟಿದ್ದಾರೆ. ಹೂಡಿಕೆಯ ಕೊರತೆಯನ್ನು ಸರ್ಕಾರ ತುಂಬಬೇಕಾಗಿದೆ. ಉತ್ಪಾದನಾ ವಲಯದಲ್ಲಿ ಚೇತರಿಕೆ ಕಾಣಿಸುತ್ತಿಲ್ಲ. ಇವೆಲ್ಲವೂ ಸರ್ಕಾರಕ್ಕೆ ಗೊತ್ತಿದೆ. ಈ ವರ್ಷದ ಆರ್ಥಿಕ ಸಮೀಕ್ಷೆಯೂ ಇವುಗಳನ್ನು ಗಮನಿಸಿದೆ.

ಆದರೆ ನಮ್ಮ ವಿತ್ತ ಮಂತ್ರಿಗಳು ಈ ಕುರಿತು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಭಾರತ ಸುಸ್ಥಿತಿಯಲ್ಲಿದೆ ಎನ್ನುವ ಭ್ರಮೆಯನ್ನೇ ಸ್ಥಾಪಿಸ ಹೊರಟಿದ್ದಾರೆ. ಈ ವರ್ಷದ ಬಜೆಟ್ ಪ್ರಸ್ತಾವನೆಯೂ ಆ ಕಥೆಯನ್ನು ಹೇಳಿಕೊಂಡೇ ಪ್ರಾರಂಭವಾಗುತ್ತದೆ. ಈ ಹಣಕಾಸು ವರ್ಷದಲ್ಲಿ ಜಿಡಿಪಿ ೭.೪% ರಷ್ಟು ಏರುತ್ತಿದೆ, ಹಣದುಬ್ಬರ ಶೇಕಡಾ ೨ರಷ್ಟಿದೆ, ಬೆಲೆ ಏರಿಕೆಯ ಬಗ್ಗೆ ಜನಕ್ಕೆ ಆತಂಕ ಬೇಕಾಗಿಲ್ಲ, ನಿರುದ್ಯೋಗ ಕಡಿಮೆಯಾಗಿದೆ, ಕೋಟ್ಯಂತರ ಜನ ಬಡತನ ರೇಖೆಯನ್ನು ದಾಟಿ ಬಂದಿದ್ದಾರೆ, ಸ್ವಲ್ಪವೇ ದೂರದಲ್ಲಿ ವಿಕಸಿತ್ ಭಾರತ ಇದೆ ಅಂತ ನಿರ್ಮಲ ಮೇಡಂ ಹೇಳುತ್ತಿದ್ದಾರೆ.

ನಮ್ಮ ನಿಜವಾದ ಜಿಡಿಪಿ ಎಷ್ಟು ಎನ್ನುವುದರ ಬಗ್ಗೆ ಸಾಕಷ್ಟು ವಿವಾದ ಇದೆ. ಅರವಿಂದ್ ಸುಬ್ರಮಣಿಯನ್ ಅಂತಹವರು ಸರ್ಕಾರದ ಲೆಕ್ಕಾಚಾರ ಕನಿಷ್ಠ ಶೇಕಡಾ ೩.೫ ರಷ್ಟು ಹೆಚ್ಚಿದೆ ಎಂದು ಅಂದಾಜು ಮಾಡಿದ್ದಾರೆ. ನಮ್ಮ ನಾಮಿನಲ್ ಜಿಡಿಪಿಯನ್ನು (ಅಂದರೆ ದೇಶದ ಆರ್ಥಿಕತೆಯಲ್ಲಿ ನಡೆಯುವ ಒಟ್ಟು ವ್ಯವಹಾರಗಳ ರೂಪಾಯಿ ಮೌಲ್ಯ) ೮% ಎನ್ನುವುದನ್ನು ಒಪ್ಪಿಕೊಂಡು, ಅದರಲ್ಲಿ ಹಣದುಬ್ಬರದ ದರವನ್ನು ಕಳೆದು ನಮ್ಮ ನೈಜ ಜಿಡಿಪಿ ದರ ಲೆಕ್ಕ ಹಾಕಿದರೆ ಅದು ತುಂಬಾ ಕಡಿಮೆಯಾಗಿಬಿಡುತ್ತದೆ. ಸರ್ಕಾರದ ಕಂದಾಯ ಸಂಗ್ರಹಣೆ ನಾಮಿನಲ್ ಜಿಡಿಪಿಯನ್ನು ಆಧರಿಸಿರುತ್ತದೆ. ಜನರ ಸಂಪಾದನೆ ಹೆಚ್ಚಾದರೆ, ಆರ್ಥಿಕ ಚಟುವಟಿಕೆಗಳು ಚೆನ್ನಾಗಿ ನಡೆದರೆ, ಸರ್ಕಾರದ ತೆರಿಗೆ ಸಂಗ್ರಹಣೆ ಹೆಚ್ಚುತ್ತದೆ. ಅದು ಕಡಿಮೆಯಾದರೆ ತೆರಿಗೆಯೂ ಕಡಿಮೆಯಾಗುತ್ತದೆ. ಆರ್ಥಿಕ ಅಭಿವೃದ್ಧಿ ಕುಸಿದರೆ ಕಲ್ಯಾಣ ಕಾರ್ಯಕ್ರಮಗಳಿಗೂ ಹಣ ಹೊಂದಿಸುವುದಕ್ಕೆ ಸರ್ಕಾರಕ್ಕೆ ಕಷ್ಟವಾಗುತ್ತದೆ. ಸಾಲ ಕೂಡ ಜಿಡಿಪಿಯ ನಿರ್ದಿಷ್ಟ ಪ್ರಮಾಣವನ್ನು ಮೀರದಂತೆ ನೋಡಿಕೊಳ್ಳುತ್ತೇವೆ ಅಂತ ಒಪ್ಪಿಕೊಂಡಿದ್ದೇವೆ. ಹಾಗಾಗಿ ಇಷ್ಟ ಬಂದ ಹಾಗೆ ಸಾಲ ಮಾಡುವುದಕ್ಕೆ ಆಗುವುದಿಲ್ಲ. ಜೊತೆಗೆ ವಿತ್ತೀಯ ಕೊರತೆಯನ್ನು ಶೇಕಡಾ ೩ಕ್ಕೆ ಇಳಿಸುವುದಕ್ಕೂ ಬದ್ಧರಾಗಿದ್ದೇವೆ. ಈಗ ಅದು ಶೇಕಡಾ ೪.೫% ಇದೆ. ಅದನ್ನು ಇಳಿಸಬೇಕಾದರೆ ಖರ್ಚನ್ನು ತಗ್ಗಿಸಿಕೊಳ್ಳುವುದು ಅನಿವಾರ್ಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

’ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಅಂದರೆ ಆರ್ಥಿಕತೆಯಲ್ಲಿ ಸರ್ಕಾರ ತನ್ನ ಭಾಗವಹಿಸುವಿಕೆಯನ್ನು ಕಡಿಮೆ ಮಾಡಿಕೊಂಡು ದೇಶದ ಬೆಳವಣಿಗೆಯ ಹಾದಿಯನ್ನು ರೂಪಿಸುವುದಕ್ಕೆ ಖಾಸಗಿಯವರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಅಂತ ಸರ್ಕಾರ ಘೋಷಿಸಿ ದಶಕಗಳೇ ಆಗಿವೆ. ಖಾಸಗಿ ಬಂಡವಾಳಿಗರನ್ನು ಉತ್ತೇಜಿಸುವುದಕ್ಕೆ ಕಾರ್ಪೊರೇಟ್ ತೆರಿಗೆಯಲ್ಲಿ ಕಡಿತ ಮಾಡಲಾಯಿತು, ಪಿಎಲ್‌ಐ (ಉತ್ಪಾದನೆ ಆಧಾರಿತ ಉತ್ತೇಜನ) ಅಂತಹ ಯೋಜನೆಗಳನ್ನು ತರಲಾಯಿತು. ಜಿಎಸ್‌ಟಿ ಸುಧಾರಿಸಲಾಯಿತು. ಮೂಲಸೌಕರ್ಯ ಹೆಚ್ಚಿಸುವುದಕ್ಕೆ ಹಣ ತೊಡಗಿಸಲಾಯಿತು. ಆದರೂ ಖಾಸಗಿಯವರಿಗೆ ಬಂಡವಾಳ ತೊಡಗಿಸುವುದಕ್ಕೆ ಉತ್ಸಾಹ ಬರುತ್ತಿಲ್ಲ. ಬಂಡವಾಳ ಹೂಡಿಕೆ ಅವರಿಂದ ಆಗುತ್ತಿಲ್ಲ. ಬೇಡಿಕೆಯ ಕೊರತೆ ಅದಕ್ಕೆ ಬಹುಮುಖ್ಯ ಕಾರಣ. ಜೊತೆಗೆ ಜಾಗತಿಕ ಆರ್ಥಿಕತೆಯಲ್ಲಿ ಅನಿಶ್ಚಿತತೆ ಇದೆ. ವಿದೇಶಿ ನೇರ ಹೂಡಿಕೆ, ರಫ್ತು ಇವೆಲ್ಲವನ್ನೂ ನೆಚ್ಚಿಕೊಂಡು ನಮ್ಮ ಆರ್ಥಿಕತೆಯನ್ನು ಕಟ್ಟುವುದಕ್ಕೆ ಆಗುವುದಿಲ್ಲ. ಆಂತರಿಕ ಮಾರುಕಟ್ಟೆಯನ್ನು ಬೆಳೆಸಬೇಕು. ಖಾಸಗಿಯವರು ಹೂಡಿಕೆ ಮಾಡುತ್ತಿಲ್ಲ, ಹಾಗಾಗಿ ಸರ್ಕಾರಕ್ಕೆ ಬೇರೆ ದಾರಿಯೇ ಇಲ್ಲ; ತಾನೇ ಬಂಡವಾಳ ಹೂಡಬೇಕು. ಸರ್ಕಾರ ಪ್ರಾರಂಭದಲ್ಲಿ ಹೆಚ್ಚಾಗಿಯೇ ಹೂಡಿಕೆ ಮಾಡಿತು, ಈಗಲೂ ಮಾಡುತ್ತಿದೆ. ಆದರೆ ಸರ್ಕಾರದ ವೆಚ್ಚ ಒಟ್ಟು ಮೊತ್ತದಲ್ಲಿ ಹೆಚ್ಚಾಗುತ್ತಿದ್ದರೂ, ಜಿಡಿಪಿಗೆ ಹೋಲಿಸಿದರೆ ಕ್ರಮೇಣ ಕಡಿಮೆಯಾಗುತ್ತಿದೆ. ೨೦೨೪-೨೫ರಲ್ಲಿ ಬಜೆಟ್ಟಿನ ಒಟ್ಟು ವೆಚ್ಚ ಜಿಡಿಪಿಯ ೧೪.೩% ಇತ್ತು. ೨೫-೨೬ರಲ್ಲಿ ಅದು ೧೪.೨% ಆಯಿತು. ಈ ವರ್ಷ ಅದು ೧೩.೬% ಆಗಿದೆ. ಅಂದರೆ ಅದು ಕಡಿಮೆಯಾಗುತ್ತಿದೆ.

ಸರ್ಕಾರ ಪ್ರತಿ ವರ್ಷ ತನ್ನ ಒಟ್ಟು ಖರ್ಚಿನಲ್ಲಿ ರೆವೆನ್ಯೂ ಖರ್ಚನ್ನು ಅಂದರೆ ಸಂಬಳ, ಪಿಂಚಣಿ ಇತ್ಯಾದಿ ತನ್ನ ದೈನಂದಿನ ಖರ್ಚನ್ನು ಕಡಿಮೆ ಮಾಡಿಕೊಳ್ಳುತ್ತಿದೆ. ರಸ್ತೆ, ಬ್ರಿಡ್ಜ್ ಇತ್ಯಾದಿ ದೀರ್ಘಕಾಲೀನ ಉತ್ಪಾದಕ ಸ್ವತ್ತುಗಳ ನಿರ್ಮಾಣಕ್ಕೆ ಹೆಚ್ಚೆಚ್ಚು ಹಣ ಹೂಡತೊಡಗಿದೆ. ೨೦೧೪-೧೫ರಲ್ಲಿ ರೆವೆನ್ಯೂ ವೆಚ್ಚ ಒಟ್ಟು ಬಜೆಟ್ಟಿನ ಶೇಕಡಾ ೮೮ ರಷ್ಟಿತ್ತು. ೨೦೨೬-೨೭ರಲ್ಲಿ ಅದು ೭೭% ಗೆ ಇಳಿದಿದೆ. ಈ ೧೧% ಇಳಿತದಲ್ಲಿ ಸಬ್ಸಿಡಿಯ ಖರ್ಚಿನಲ್ಲಿ ಅತಿ ಹೆಚ್ಚು ಅಂದರೆ ೭% ಕಡಿತವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಬಂಡವಾಳ ಖರ್ಚು ೧೩% ಇದ್ದುದು ೨೩% ಆಗಿದೆ. ಆದರೆ ಅದರ ಏರುತ್ತಿರುವ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ತಗ್ಗುತ್ತಿದೆ. ೨೦೨೩-೨೪ರಲ್ಲಿ ೨೮.೩% ರಷ್ಟು ಏರಿಕೆಯಾಗಿತ್ತು. ಕಳೆದ ವರ್ಷ ಏರಿಕೆಯಾಗಿದ್ದು ಕೇವಲ ೪.೨%. ಆದರೆ ಬಜೆಟ್ಟಿನ ಅಂದಾಜಿನ ಪ್ರಕಾರ ೧೦.೫% ಇರಬೇಕಿತ್ತು. ಈ ವರ್ಷ ಅದು ೧೧.೫% ಏರಿಕೆಯಾಗುತ್ತದೆ ಎನ್ನುವ ಅಂದಾಜಿದೆ. ಹಿಂದಿನ ವರ್ಷಗಳಂತೆಯೇ ಈ ವರ್ಷವೂ ಆದರೆ ಅಂತಿಮವಾಗಿ ಅದು ೫% ರಿಂದ ೬% ರಷ್ಟಾಗಬಹುದು.

ಬಂಡವಾಳ ವೆಚ್ಚವನ್ನು ಹೆಚ್ಚಿಸಿದರೆ, ಅಂದರೆ ಮೂಲಸೌಕರ್ಯ ಒದಗಿಸಿದರೆ ಖಾಸಗಿಯವರು ಹೂಡಿಕೆ ಮಾಡಲು ಮುಂದೆ ಬರುತ್ತಾರೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಹಾಗೆ ಆಗುತ್ತಿಲ್ಲ. ಖಾಸಗಿ ವಲಯದವರು ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಬಂಡವಾಳ ತೊಡಗಿಸುವುದಕ್ಕೆ ಅವರ ಸರಕುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರಬೇಕು. ಆದರೆ ನಮ್ಮ ಆರ್ಥಿಕತೆಯಲ್ಲಿ ಬೇಡಿಕೆ ಹೆಚ್ಚುತ್ತಿಲ್ಲ. ನಿರುದ್ಯೋಗ, ನೈಜ ಕೂಲಿಯ ಇಳಿತ ಇತ್ಯಾದಿ ಅಂಶಗಳು ಸೇರಿಕೊಂಡು ಜನರ ಕೊಳ್ಳುವ ಶಕ್ತಿಯನ್ನು ಅಂದರೆ ಬೇಡಿಕೆಯನ್ನು ಕುಗ್ಗಿಸಿವೆ. ಜನರಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಬಹುದು ಅಂದುಕೊಂಡು ವರಮಾನ ತೆರಿಗೆ ಮಿತಿಯನ್ನು ೭ ಲಕ್ಷದಿಂದ ೧೨ ಲಕ್ಷಕ್ಕೆ ಏರಿಸಲಾಗಿತ್ತು. ಆದರೆ, ಇಂತಹ ಕಾರ್ಯಕ್ರಮಗಳಿಂದ ಅನುಕೂಲವಾಗುವುದು ಮೇಲಿನ ಶೇಕಡಾ ೭ ರಿಂದ ೮% ಜನರಿಗೆ ಮಾತ್ರ. ನಿಜವಾಗಿ ಬೇಡಿಕೆ ಏರಬೇಕಾದರೆ ಸಾಮಾನ್ಯ ಜನರ ಕೊಳ್ಳುವ ಶಕ್ತಿ ಹೆಚ್ಚಬೇಕು, ಅಸಂಘಟಿತ ವಲಯ ಬಲಗೊಳ್ಳಬೇಕು.

ಇದು ಖರ್ಚಿನ ಕಥೆಯಾಯಿತು. ಇನ್ನು ಖರ್ಚಿಗೆ ಬೇಕಾದ ಹಣವನ್ನು ಒಟ್ಟು ಮಾಡುವ ಕೆಲಸ. ತೆರಿಗೆ ಸಂಗ್ರಹಣೆಯೂ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಕಳೆದ ವರ್ಷ ಬಜೆಟ್ ಅಂದಾಜಿಗಿಂತ ಸುಮಾರು ೧೨೦ ಸಾವಿರ ಕೋಟಿಯಷ್ಟು ಕಡಿಮೆ ಸಂಗ್ರಹವಾಗಿತ್ತು. ಜಿಎಸ್‌ಟಿ ಸಂಗ್ರಹವೂ ಸಂಭ್ರಮ ಪಡುವ ಸ್ಥಿತಿಯಲ್ಲಿಲ್ಲ. ಪ್ರತಿ ವರ್ಷ ಹೆಚ್ಚುತ್ತಿದೆ, ಆದರೆ ಹೆಚ್ಚಳದ ಪ್ರಮಾಣ ಕಡಿಮೆಯಾಗುತ್ತಿದೆ. ೨೦೨೬ರಲ್ಲಿ ಜಿಎಸ್‌ಟಿ ಹಿಂದಿನ ವರ್ಷಕ್ಕಿಂತ ೨೨.೧ ಲಕ್ಷ ಕೋಟಿಯಷ್ಟು ಹೆಚ್ಚು ಸಂಗ್ರಹವಾಗಿತ್ತು. ೨೦೨೪ರಲ್ಲಿ ೨೦೨೩ಕ್ಕಿಂತ ೧೧.೭% ರಷ್ಟು ಹೆಚ್ಚು ಸಂಗ್ರಹವಾಗಿತ್ತು. ೨೦೨೫ರಲ್ಲಿ ಅದು ೯.೧% ಆಗಿತ್ತು. ೨೦೨೬ರಲ್ಲಿ ಅದು ೬.೭% ಆಗಿದೆ. ಅಂದರೆ ಜಿಎಸ್‌ಟಿ ಸಂಗ್ರಹದ ಏರಿಕೆಯೂ ಸುಮಾರಾಗಿ ಜಿಡಿಪಿಯಷ್ಟೇ ಆಗುತ್ತಿದೆ. ಅಂದರೆ ಕಂದಾಯ ಹೆಚ್ಚಿನ ವಿತ್ತೀಯ ಅವಕಾಶವನ್ನು ಸರ್ಕಾರಕ್ಕೆ ನೀಡುತ್ತಿಲ್ಲ.

ಸಂಗ್ರಹ ಕಡಿಮೆಯಾದರೆ ಸರ್ಕಾರ ಖರ್ಚು ಕಡಿಮೆ ಮಾಡುತ್ತದೆ. ಅದರ ಹೊಡೆತ ಬೀಳುವುದು ಅಂತಿಮವಾಗಿ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಗ್ರಾಮೀಣ ಬೆಳವಣಿಗೆ ಇತ್ಯಾದಿ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ. ಕಳೆದ ವರ್ಷವೂ ಇದೇ ಆಗಿತ್ತು. ೨೦೨೫-೨೬ರ ಬಜೆಟ್ಟಿನಲ್ಲಿ ಗ್ರಾಮೀಣ ಅಭಿವೃದ್ಧಿಗೆ ೨.೬೫ ಲಕ್ಷ ಕೋಟಿ ಘೋಷಿಸಲಾಗಿತ್ತು, ಆದರೆ ಖರ್ಚಾಗಿದ್ದುದು ೨.೧೨ ಲಕ್ಷ ಕೋಟಿ. ಅಂದರೆ ೨೦% ಕಡಿತ ಮಾಡಲಾಗಿತ್ತು. ಜಲ ಜೀವನ್ ಯೋಜನೆಗೆ ೬೭,೦೦೦ ಕೋಟಿ ಅಂದಾಜಿತ್ತು, ಆದರೆ ನಿಜವಾಗಿ ಖರ್ಚು ಮಾಡಿದ್ದು ಕೇವಲ ೧೭,೦೦೦ ಕೋಟಿ. ಈ ವರ್ಷವೂ ಅದೇ ಆಗುತ್ತಿದೆ.

ನಮ್ಮಲ್ಲಿ ಕೃಷಿ ತುಂಬಾ ಮುಖ್ಯವಾದ ಕ್ಷೇತ್ರ. ಬಡವರು ಅಲ್ಲಿ ಹೆಚ್ಚಿಗೆ ಇದ್ದಾರೆ. ಅದು ಅತಿ ಹೆಚ್ಚು ಉದ್ಯೋಗವನ್ನು ಸೃಷ್ಟಿಸುತ್ತಿರುವ ಕ್ಷೇತ್ರ. ಇಂದು ಜಿಡಿಪಿ ಉತ್ತಮವಾಗಿ ಕಾಣುವುದಕ್ಕೆ, ಹಣದುಬ್ಬರ ನಿಯಂತ್ರಣದಲ್ಲಿರುವಂತೆ ತೋರುವುದಕ್ಕೆ ಕಾರಣ ಕೃಷಿಯಲ್ಲಿ ಉತ್ತಮ ಫಸಲು ಬಂದಿರುವುದು ಹಾಗೂ ರೈತರು ಕನಿಷ್ಠ ಬೆಲೆಗಿಂತ ಕಡಿಮೆ ಬೆಲೆಗೆ ಮಾರಿ ಸಂಕಷ್ಟದಲ್ಲಿರುವುದು. ಕೃಷಿ ಕ್ಷೇತ್ರವನ್ನು ಇಂದು ಹೆಚ್ಚೆಚ್ಚು ಜನ ಉದ್ಯೋಗಕ್ಕಾಗಿ ಆಶ್ರಯಿಸುತ್ತಿದ್ದಾರೆ ಅಂದರೆ ಕೃಷಿಯೇತರ ಕ್ಷೇತ್ರಗಳು ದುರ್ಬಲವಾಗಿವೆ ಎಂದೇ ಅರ್ಥ. ಆರ್ಥಿಕತೆಗೆ ಬೆನ್ನೆಲುಬಾಗಿರುವ ಕೃಷಿ ಸಂಕಷ್ಟದಲ್ಲಿರುವ ಕ್ಷೇತ್ರವೂ ಹೌದು. ಕೃಷಿಗೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಕೇವಲ ಶೇಕಡಾ ೨ರಿಂದ ೩ರಷ್ಟು ಮೊತ್ತವನ್ನು ಹೆಚ್ಚಿಸಲಾಗಿದೆ. ಹಣದುಬ್ಬರದ ದರವನ್ನು ಗಣನೆಗೆ ತೆಗೆದುಕೊಂಡರೆ ಇದು ಕಡಿತವೆಂದೇ ಹೇಳಬೇಕು.

ಈ ವರ್ಷ ಮನರೇಗಾಕ್ಕೆ ೯೫,೬೯೨ ಕೋಟಿ ಘೋಷಿಸಿದ್ದಾರೆ. ಈಗ ಮನರೇಗಾ ಇಲ್ಲ, ಬದಲಿಗೆ ವಿಬಿ ಜಿ ರಾಂ ಜಿ ತರಲಾಗಿದೆ. ಹಣಕಾಸು ಸಚಿವರು ತಮ್ಮ ೯೦ ನಿಮಿಷಗಳ ಬಜೆಟ್ ಭಾಷಣದಲ್ಲಿ ಇದರ ಹೆಸರನ್ನು ಒಮ್ಮೆಯೂ ಉಲ್ಲೇಖಿಸಲಿಲ್ಲ. ೧೨೫ ದಿನಗಳ ಕೆಲಸ ನೀಡಲು ಕನಿಷ್ಠ ೩.೮೪ ಲಕ್ಷ ಕೋಟಿ ಬೇಕಾಗುತ್ತದೆ. ಕೇಂದ್ರದ ಪಾಲು ೬೦% ಅಂದರೆ ಬಜೆಟ್ಟಿನಲ್ಲಿ ೨.೩ ಲಕ್ಷ ಕೋಟಿ ರೂಪಾಯಿ ಇಡಬೇಕಿತ್ತು. ಆದರೆ ಈಗ ನಿಗದಿ ಮಾಡಿರುವ ಹಣದಿಂದ ವರ್ಷಕ್ಕೆ ಕೇವಲ ೫೨ ದಿನಗಳ ಕೆಲಸವನ್ನು ನೀಡಬಹುದು. ಅಷ್ಟೇ ಅಲ್ಲ, ರಾಜ್ಯ ಸರ್ಕಾರಗಳು ಶೇಕಡಾ ೪೦ ರಷ್ಟು ಖರ್ಚನ್ನು ಭರಿಸಬೇಕು. ಬಹುತೇಕ ರಾಜ್ಯಗಳಿಗೆ ಅಷ್ಟು ಹಣ ಹೊಂದಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ ಇದು ಯಶಸ್ವಿಯಾಗುವುದು ಕಷ್ಟ. ಮನರೇಗಾದಿಂದ ಅದರ ಎಲ್ಲಾ ಮಿತಿಗಳ ನಡುವೆಯೂ ಒಂದಿಷ್ಟು ಒಳ್ಳೆಯ ಕೆಲಸ ಆಗಿತ್ತು. ಕಷ್ಟ ಕಾಲದಲ್ಲಿ ಜನರಿಗೆ ಉದ್ಯೋಗ ಸಿಕ್ಕಿತ್ತು. ಇಷ್ಟೊಂದು ದೊಡ್ಡ ಜನಪರ ಕಲ್ಯಾಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಾಧಿಸಬಹುದು ಎನ್ನುವುದಕ್ಕೆ ಅದು ದೊಡ್ಡ ಪುರಾವೆಯಾಗಿತ್ತು.

ಇನ್ನು ಅತ್ಯಂತ ಪ್ರಮುಖ ಕ್ಷೇತ್ರಗಳಾದ ಶಿಕ್ಷಣ ಹಾಗೂ ಆರೋಗ್ಯದ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ವರ್ಷ ಬಜೆಟ್ಟಿನಲ್ಲಿ ಶಿಕ್ಷಣಕ್ಕೆ ೧.೩೯ ಲಕ್ಷ ಕೋಟಿ ಗೊತ್ತು ಮಾಡಲಾಗಿದೆ. ಅದು ಜಿಡಿಪಿಯ ಶೇಕಡಾ ೦.೩೫ ರಷ್ಟಾಗುತ್ತದೆ. ಖಾಸಗಿ ಹೂಡಿಕೆಯೂ ಸೇರಿದರೆ ೪.೫% ರಷ್ಟಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಅದು ಕನಿಷ್ಠ ೬% ಆದರೂ ಇರಬೇಕು. ಜನರ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಶಿಕ್ಷಣ ಹಾಗೂ ಆರೋಗ್ಯ ಎರಡನ್ನೂ ಅನಿವಾರ್ಯವಾಗಿ ಸುಧಾರಿಸಬೇಕು.

ಆರೋಗ್ಯಕ್ಕಾಗಿ ಸರ್ಕಾರ ಮಾಡುತ್ತಿರುವ ಖರ್ಚು ಕೂಡ ತುಂಬಾ ಕಡಿಮೆ. ಅಷ್ಟೇ ಅಲ್ಲ, ಅದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅದು ೨೦೨೧ರಲ್ಲಿ ಜಿಡಿಪಿಯ ೦.೩೭% ಅಷ್ಟಿತ್ತು. ಈ ವರ್ಷದ ಬಜೆಟ್ಟಿನಲ್ಲಿ ಅದು ೦.೨೭% ಆಗಿದೆ. ಇನ್ನೂ ಕಡಿಮೆಯಾದರೆ ಆಶ್ಚರ್ಯವಿಲ್ಲ. ಅದರಲ್ಲೂ ಜನಸಾಮಾನ್ಯರಿಗೆ ಅನುಕೂಲವಾಗಬಹುದಾದ ರಾಷ್ಟ್ರೀಯ ಆರೋಗ್ಯ ಮಿಷನ್, ಪ್ರಧಾನಮಂತ್ರಿ ಸ್ವಾಸ್ತ್ಯ ಸುರಕ್ಷಾ ಯೋಜನೆ, ಪೌಷ್ಟಿಕತೆಗೆ ಸಂಬಂಧಿಸಿದ ಯೋಜನೆಗಳು, ಆರೋಗ್ಯ ಸಂಶೋಧನೆ ಇವೆಲ್ಲಕ್ಕೂ ಅನುದಾನದಲ್ಲಿ ಕಡಿತವಾಗಿದೆ. ವಾಣಿಜ್ಯ ಹಿತಾಸಕ್ತಿ ಇರುವ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಡಿಜಿಟಲ್ ಆರೋಗ್ಯ ಮಿಷನ್ ಇವೆಲ್ಲಕ್ಕೂ ಹೆಚ್ಚಿನ ಹಣವನ್ನು ಒದಗಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಅವುಗಳಿಗೆ ಮೀಸಲಿಟ್ಟಿದ್ದ ಹಣವನ್ನು ಪೂರ್ಣವಾಗಿ ಬಳಸಿಯೂ ಇರಲಿಲ್ಲ. ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ ಹೆಚ್ಚಿನ ಬೇಡಿಕೆ ಇದೆ. ಆಶಾ ಕಾರ್ಯಕರ್ತೆಯರಿಗೆ ವೇತನವನ್ನು ನೀಡುವುದಕ್ಕೂ ಅದು ಬಳಕೆಯಾಗುತ್ತದೆ. ಅದರಲ್ಲಿ ಕಡಿತ ಮಾಡಲಾಗಿದೆ. ಜನ ಕಲ್ಯಾಣ ಕಾರ್ಯಕ್ರಮಕ್ಕೆ ಸಂಬಂಧಿಸಿದ ೧೮ ಕಾರ್ಯಕ್ರಮಗಳಲ್ಲಿ ೧೭ಕ್ಕೆ ಹಣ ಕಡಿತ ಮಾಡಲಾಗಿದೆ.

ಸರ್ಕಾರದ ಸಮಸ್ಯೆ ಅಂದರೆ ಜನರನ್ನು ’ಖರ್ಚು’ ಅಂತ ನೋಡಲಾಗುತ್ತದೆ. ಅವರನ್ನು ’ಆಸ್ತಿ’ ಅಂತ ನೋಡಬೇಕು. ಬೇಡಿಕೆ ಸೃಷ್ಟಿಯಾಗುವುದೇ ಅವರಿಂದ. ಅವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಕಡೆ ಗಮನಕೊಡಬೇಕು. ಬೇಡಿಕೆ ಹೆಚ್ಚದಿದ್ದರೆ ಬಂಡವಾಳ ಹೂಡುವುದಕ್ಕೆ ಉತ್ತೇಜನವಿರುವುದಿಲ್ಲ. ಕೇವಲ ತೆರಿಗೆ ಕಡಿತ ಮಾಡಿದರೆ, ರಸ್ತೆಗಳನ್ನು ನಿರ್ಮಿಸಿದರೆ ಹೂಡಿಕೆ ಹೆಚ್ಚುವುದಿಲ್ಲ. ವರಮಾನ ತೆರಿಗೆ ರಿಯಾಯಿತಿಯಂತಹ ಕ್ರಮಗಳು ತಲುಪುವುದು ಕೇವಲ ಮೇಲಿನ ಶೇಕಡಾ ೮ರಷ್ಟು ಜನಕ್ಕೆ ಮಾತ್ರ. ವರಮಾನ ತೆರಿಗೆ ಕಟ್ಟುವವರೇ ಅವರು. ಹಣ ಉಳಿದರೆ ಅವರು ಕೊಳ್ಳುವುದು ಆಮದು ಪದಾರ್ಥಗಳನ್ನು. ಅದರಿಂದ ಆಮದು ಹೆಚ್ಚುತ್ತದೆ. ದೇಶದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಬೇಕಾದರೆ ಸಾಮಾನ್ಯ ಜನರ ಕೊಳ್ಳುವ ಶಕ್ತಿ ಹೆಚ್ಚಬೇಕು, ಅವರ ವರಮಾನ ಹೆಚ್ಚಬೇಕು. ಶಿಕ್ಷಣ ಮತ್ತು ಆರೋಗ್ಯ ಇವೆಲ್ಲವೂ ಕೈಗೆಟುಕುವಂತಾಗಬೇಕು. ಸರ್ಕಾರ ಅದಕ್ಕೆ ಹೆಚ್ಚು ಗಮನಕೊಡಬೇಕು. ಅದನ್ನು ಸರ್ಕಾರ ಮಾಡಿಲ್ಲ.

ಈ ಸರ್ಕಾರದ ಮತ್ತೊಂದು ಸಮಸ್ಯೆ ಅಂದರೆ ಎಲ್ಲವನ್ನೂ ಕೇಂದ್ರೀಕರಿಸುವುದು. ಅಧಿಕಾರ, ಹಣ, ಆಡಳಿತ ಎಲ್ಲವನ್ನೂ ತನ್ನ ಕೈಯಲ್ಲೇ ಇಟ್ಟುಕೊಳ್ಳುವ ಬಯಕೆ. ಬಹುತೇಕ ಯೋಜನೆಗಳನ್ನು ರೂಪಿಸುವುದು ಅದೇ, ಕೊನೆಗೆ ಜಾರಿಗೊಳಿಸುವ ಜವಾಬ್ದಾರಿಯನ್ನು ರಾಜ್ಯಗಳ ಹೆಗಲಿಗೆ ಹಾಕುತ್ತದೆ. ಮನರೇಗಾ ಉದಾಹರಣೆ ಗಮನಿಸಿದರೆ ಕೇಂದ್ರದ ಮನಸ್ಥಿತಿ ತಿಳಿಯುತ್ತದೆ. ಈವರೆಗೆ ಕೂಲಿಯ ಸಂಪೂರ್ಣ ಖರ್ಚನ್ನು ಕೇಂದ್ರ ನೋಡಿಕೊಳ್ಳುತ್ತಿತ್ತು, ಈಗ ರಾಜ್ಯಗಳಿಗೆ ೪೦% ಖರ್ಚನ್ನು ವಹಿಸಿದೆ. ಈವರೆಗೆ ಏನು ಮಾಡಬೇಕು, ಎಲ್ಲಿ ಮಾಡಬೇಕು ಮತ್ತು ಹೇಗೆ ಮಾಡಬೇಕು ಎನ್ನುವುದನ್ನು ರಾಜ್ಯಗಳು ನಿರ್ಧರಿಸುತ್ತಿದ್ದವು, ಈಗ ಕೇಂದ್ರ ನಿರ್ಧರಿಸುತ್ತದೆ. ಈವರೆಗೆ ಉದ್ಯೋಗ ಜನರ ಹಕ್ಕಾಗಿತ್ತು, ಈಗ ಭಿಕ್ಷೆಯಾಗಿದೆ.

ಇದನ್ನೂ ಓದಿ ಪ್ರಿಯ ಮೋದಿ ಸರ್‌ಗೆ ‘ಈ ದಿನ’ ಬರೆದ ಪ್ರೀತಿಯ ಬಹಿರಂಗ ಪತ್ರ!

ಬಹುತೇಕ ಯೋಜನೆಗಳು, ನಿರ್ಧಾರಗಳ ಪರಿಣಾಮ ರಾಜ್ಯಗಳ ಮೇಲೆ ಆಗುತ್ತದೆ. ಆದರೆ ಯಾವುದಕ್ಕೂ ರಾಜ್ಯಗಳೊಂದಿಗೆ ಚರ್ಚಿಸುವುದಿಲ್ಲ. ಕಾರ್ಪೊರೇಟ್ ತೆರಿಗೆ ಕಡಿತ ಮಾಡಿದಾಗ ರಾಜ್ಯಗಳಿಗೂ ತೆರಿಗೆ ೪೦% ಕಡಿಮೆಯಾಗುತ್ತದೆ. ಅದನ್ನು ರಾಜ್ಯಗಳು ಹೊಂದಿಸಿಕೊಳ್ಳಬೇಕು. ಸಾಮಾಜಿಕ ಕಾರ್ಯಕ್ರಮಗಳನ್ನು ಕೇಂದ್ರ ಕಡಿತ ಮಾಡಿದಾಗ ರಾಜ್ಯಗಳೇ ಅವನ್ನು ನಡೆಸಬೇಕಾಗುತ್ತದೆ. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹಣ ಕಡಿತ ಮಾಡಿದರೆ ಮತ್ತೆ ರಾಜ್ಯಗಳಿಗೆ ತೊಂದರೆಯಾಗುತ್ತದೆ. ರಾಜ್ಯಗಳಿಗೆ ನಿಭಾಯಿಸುವುದಕ್ಕೆ ಆಗದಿದ್ದರೆ ಅಂತಿಮವಾಗಿ ಜನರಿಗೆ ತೊಂದರೆಯಾಗುತ್ತದೆ. ರಾಜ್ಯಗಳ ಹಾಗೂ ಜನರ ಬೆಳವಣಿಗೆಯಾದರಷ್ಟೇ ರಾಷ್ಟ್ರದ ಬೆಳವಣಿಗೆ ಸಾಧ್ಯ ಎನ್ನುವ ಸರಳ ಸತ್ಯ ಕೇಂದ್ರಕ್ಕೆ ಪಥ್ಯವಾಗುತ್ತಿಲ್ಲ. ಒಂದು ಆರ್ಥಿಕತೆ ಬೆಳೆಯುತ್ತಿದೆ ಅಂದರೆ ಜನರ ನೈಜ ವರಮಾನ ಹೆಚ್ಚಬೇಕು, ಉದ್ಯೋಗ ಹೆಚ್ಚಬೇಕು, ಆರೋಗ್ಯ ಸುಧಾರಿಸಬೇಕು, ರಾಜ್ಯಗಳು ಅಭಿವೃದ್ಧಿಯಾಗಬೇಕು ಮತ್ತು ಗ್ರಾಮಗಳು ಬೆಳೆಯಬೇಕು. ಆದರೆ ಬಜೆಟ್ಟುಗಳು ಪ್ರತಿ ವರ್ಷ ಸಾಮಾನ್ಯರ ಹಿತಾಸಕ್ತಿಯಿಂದ ದೂರ ದೂರ ಸರಿಯುತ್ತಿವೆ.

?s=150&d=mp&r=g
ಟಿ ಎಸ್‌ ವೇಣುಗೋಪಾಲ್‌
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...