ಉನ್ನಾವ್ ಸಂತ್ರಸ್ತೆಯ ಹೋರಾಟ ನಮ್ಮೆಲ್ಲರ ಹೋರಾಟ. “ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಆದರೆ ನೀವು ನನ್ನ ಜೊತೆ ನಿಲ್ಲಿ” ಎಂಬ ಆಕೆಯ ಕರೆಗೆ ಪ್ರತಿಕ್ರಿಯಿಸೋಣ. ಏಕೆಂದರೆ, ನಾವು ಒಟ್ಟಾಗಿ ನಿಂತರೆ, ಅಪರಾಧಿಗಳ ಬೆಂಬಲಿಗರು ಸೋಲುತ್ತಾರೆ. ನಮ್ಮ ದೇಶದ ಮಗಳು ಒಂಟಿಯಾಗಿ ಹೋರಾಡದಂತೆ ಮಾಡೋದು ಎಲ್ಲರ ಹೊಣೆಗಾರಿಕೆಯಾಗಬೇಕು.
ನಮ್ಮ ದೇಶದಲ್ಲಿ ನ್ಯಾಯಕ್ಕಾಗಿ ಹೋರಾಡುವುದು ಎಷ್ಟು ಕಷ್ಟ ಇದೆ ಅನ್ನೋದನ್ನ ಹಲವು ಪ್ರಕರಣಗಳು ನಮಗೆ ತೋರಿಸಿಕೊಟ್ಟಿವೆ. ಅತ್ಯಾಚಾರದಂತಹ ಘನಘೋರ ಭಯಾನಕ ದೌರ್ಜನ್ಯದ ಸಂತ್ರಸ್ತೆಯಾಗಿ, ಇಡೀ ಜೀವನವೇ ತಲೆಕೆಳಗಾಗಿದ್ದರೂ, ಕೊನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರಕ್ಕೆ ತುತ್ತಾಗುವುದು ಎಷ್ಟು ನಿರ್ದಯ ಅಲ್ವಾ? ಇದು ಇವತ್ತಿನ ಉನ್ನಾಂವ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಸ್ಥಿತಿ. 2017ರಲ್ಲಿ ಉತ್ತರ ಪ್ರದೇಶದ ಉನ್ನಾಂವ್‌ನಲ್ಲಿ ನಡೆದ ಈ ಘಟನೆ ಇಂದಿಗೂ ನ್ಯಾಯಾಂಗದ ಮೇಲೆ ನಂಬಿಕೆಯನ್ನು ಪರೀಕ್ಷಿಸುತ್ತಿದೆ. ಸಂತ್ರಸ್ತೆಯೊಬ್ಬಳು, ತನ್ನ ಕುಟುಂಬದೊಂದಿಗೆ ಒಟ್ಟಾಗಿ ಹೋರಾಡುತ್ತಾ, ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ: “ಜಾತಿ-ಮತಗಳನ್ನು ಬದಿಗಿಟ್ಟು ನನಗೆ ಬೆಂಬಲ ನೀಡಿ. ನಾನೂ ಈ ದೇಶದ ಮಗಳೇ.” ಈ ಮಾತುಗಳು ಕೇಳಿದರೆ ಹೃದಯ ಕರಗುತ್ತದೆ. ಇದು ನಮ್ಮ ಸಮಾಜದ ನೈತಿಕತೆಯನ್ನು, ನ್ಯಾಯವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಉನ್ನಾವ್ ಪ್ರಕರಣದ ಹಿನ್ನೆಲೆಯನ್ನು ನೆನಪಿಸಿಕೊಳ್ಳೋದಾದರೆ, 2017ರಲ್ಲಿ ಬಿಜೆಪಿಯ ಶಾಸಕನಾಗಿದ್ದ ಕುಲದೀಪ್ ಸಿಂಗ್ ಸೆಂಗರ್ 17 ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡಿದ್ದ. ಈ ಸಂತ್ರಸ್ತೆಯೇ ಇಂದು ನ್ಯಾಯಕ್ಕಾಗಿ ಹೋರಾಡುತ್ತಿರುವ ಉನ್ನಾವ್ ಸಂತ್ರಸ್ತೆ. ಪ್ರಕರಣ ರಾಷ್ಟ್ರವ್ಯಾಪಿ ಗಮನ ಸೆಳೆದ ನಂತರ, 2019ರಲ್ಲಿ ದೆಹಲಿ ನ್ಯಾಯಾಲಯ ಸೆಂಗರ್‌ಗೆ ಜೀವಾವಧಿ ಕಠಿಣ ಶಿಕ್ಷೆ ವಿಧಿಸಿತು. ಆದರೆ ನ್ಯಾಯಾಂಗದ ಹಾದಿಯಲ್ಲಿ ತೊಡಕುಗಳು ಮುಂದುವರೆದಿತ್ತು. ಸೆಂಗರ್ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದರು. 2025ರ ಡಿಸೆಂಬರ್ 23ರಂದು ದೆಹಲಿ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು. ಇದು ಸಾರ್ವಜನಿಕರ ಕೋಪಕ್ಕೆ ಕಾರಣವಾಯಿತು. ಸಾಮಾನ್ಯ ಜನರಲ್ಲಿ ಆಕ್ರೋಶ ಹುಟ್ಟುವಂತೆ ಮಾಡಿತ್ತು. “ಅಪರಾಧಿ ಯಾಕೆ ಬಿಡುಗಡೆಯಾಗುತ್ತಾನೆ? ಸಂತ್ರಸ್ತೆಗೆ ನ್ಯಾಯ ಎಲ್ಲಿದೆ?” ಎಂಬ ಪ್ರಶ್ನೆಗಳು ಹುಟ್ಟಿದ್ದವು. ಆದರೆ ನ್ಯಾಯಾಂಗದ ಮೇಲಿನ ನಂಬಿಕೆಯಿಂದಾಗಿ, ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಇತರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಕೆಲ ಭಾಗಗಳಲ್ಲಿ ಹೋರಾಟ, ಪ್ರತಿಭಟನೆಗಳು ನಡೆದವು. ಡಿಸೆಂಬರ್ 29ರಂದು ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು. ಸೆಂಗರ್ ಜೈಲಿನಲ್ಲೇ ಉಳಿಯಬೇಕು ಎಂದು ಸ್ಪಷ್ಟಪಡಿಸಿತು. ಇದು ಸಂತ್ರಸ್ತೆಗೆ ತಾತ್ಕಾಲಿಕ ಸಮಾಧಾನ ಸಿಕ್ಕರೂ, ಹೋರಾಟ ಮುಂದುವರೆಯುತ್ತಿದೆ.

ಆದರೆ ಈ ನಡುವೆ, ಸಂತ್ರಸ್ತೆಯ ಮೇಲೆ ಹೊಸ ದಾಳಿ ಆರಂಭವಾಗಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರದ ಎರಡು ದಿನಗಳಲ್ಲಿ , ಅಂದರೆ ಕಳೆದ ಕೆಲ ದಿನಗಳಲ್ಲಿ ಸೆಂಗರ್ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಸಂತ್ರಸ್ತೆಯನ್ನೂ, ಅವರ ಪತಿಯನ್ನೂ ಟಾರ್ಗೆಟ್ ಮಾಡಿ ಅಪಪ್ರಚಾರ ಹಬ್ಬಿಸುತ್ತಿದ್ದಾರೆ. “ಇವರು ಯಾರು? ಯಾಕೆ ಹೋರಾಡುತ್ತಿದ್ದಾರೆ? ಇವರ ಉದ್ದೇಶ ಏನು?” ಎಂಬ ಕೊಳಕು ಮಾತುಗಳು, ಫೋಟೋಗಳು, ವೀಡಿಯೋಗಳು ವೈರಲ್ ಆಗುತ್ತಿದೆ. ಇದು ಕೇವಲ ವೈಯಕ್ತಿಕ ದೌರ್ಜನ್ಯ ಮಾತ್ರವಲ್ಲದೇ ಇದು ಅಪರಾಧಿಯನ್ನು ರಕ್ಷಿಸಲು ಸಂತ್ರಸ್ತೆಯನ್ನು ದೌರ್ಬಲ್ಯಗೊಳಿಸುವ ಒಂದು ರಾಜಕೀಯ ಆಟದಂತೆ ಕಾಣಿಸತ್ತೆ. ಸಂತ್ರಸ್ತೆಯೇ ಒಂದು ವೀಡಿಯೋ ಹಂಚಿಕೊಂಡು ಹೇಳಿದ್ದಾರೆ: “ನನ್ನ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ದಯವಿಟ್ಟು ನನಗೆ ಬೆಂಬಲ ನೀಡಿ.”ಈ ವೀಡಿಯೋ ನೋಡಿದರೆ ಕಣ್ಣೀರು ಬರುತ್ತದೆ. ಅವರು ಹೇಳುತ್ತಾರೆ “ನಾನೂ ಕ್ಷತ್ರಿಯ ಸಮುದಾಯದ ಮಗಳೇ. ನಾನೂ ಭಾರತದ ಮಗಳೇ. ದಯವಿಟ್ಟು ನನಗೆ ಧ್ವನಿಯಾಗಿ. ಅಪರಾಧಕ್ಕೆ ಯಾವುದೇ ಜಾತಿಯಿಲ್ಲ” ಅಂತ ಭಾವುಕ ಮನವಿಯನ್ನು ಮಾಡಿದ್ದಾರೆ.
ಸೆಂಗರ್ ಮಗಳು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ (ಟ್ವಿಟರ್) ತಂದೆಯನ್ನು “ನಿರಪರಾಧಿ” ಎಂದು ಕರೆದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ಸಂತ್ರಸ್ತೆಗೆ ಇನ್ನೊಂದು ರೀತಿಯ ಒತ್ತಡವನ್ನ ಸೃಷ್ಟಿಸುತ್ತಿದೆ. ಅಷ್ಟೇ ಅಲ್ಲ ಸೆಂಗರ್ ಪುತ್ರಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜನವರಿ 11ರಂದು ‘ಕ್ಷತ್ರಿಯ ಸಮಾವೇಶ’ ನಡೆಸಲು ಕರೆ ನೀಡಿದ್ದಾರೆ ಎಂದು ಹೇಳಿಕೆಗಳೂ ವೈರಲ್ ಆಗುತ್ತಿವೆ. ಅತ್ಯಾಚಾರ ಪ್ರಕರಣವನ್ನ ಜಾತಿ ರಾಜಕಾರಣವನ್ನಾಗಿ ಮಾಡುವ ಕುತಂತ್ರ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. “ತಂದೆಯನ್ನು ಬೆಂಬಲಿಸಲು ಜಾತಿಯನ್ನು ಬಳಸುತ್ತಿದ್ದಾರೆ. ಆದರೆ ಅಪರಾಧಿಯನ್ನು ಬೆಂಬಲಿಸುವ ಬದಲು, ನ್ಯಾಯಕ್ಕಾಗಿ ನಿಲ್ಲಿ” ಎಂದು ಸಂತ್ರಸ್ತೆ ಕೋರುತ್ತಾರೆ. ಸುಪ್ರೀಂ ಕೋರ್ಟ್ ತಡೆಯೊಡ್ಡಿದ್ದರಿಂದ ಸ್ಥಿತಿ ಸ್ವಲ್ಪ ರಿಲೀಫ್ ಆಗಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿನ ದೌರ್ಜನ್ಯ ಮುಂದುವರಿದಿದೆ.
ಈ ಎಲ್ಲದರ ನಡುವೆ, ನಮ್ಮ ದೇಶ ಎಲ್ಲಿಗೆ ಬಂದು ನಿಂತಿದೆ ಎಂದು ಯೋಚಿಸಬೇಕಾಗುತ್ತದೆ. ಒಂದು ವೇಳೆ ಸಂತ್ರಸ್ತೆಯೇ “ನನಗೆ ಸಹಾಯ ಮಾಡಿ, ರಕ್ಷಣೆ ಕೊಡಿ, ಬೆಂಬಲ ಕೊಡಿ” ಎಂದು ಬೇಡಿಕೊಳ್ಳುವ ಮಟ್ಟಕ್ಕೆ ಬಂದರೆ, ನಾವು ಎಲ್ಲಿ ನಿಂತಿದ್ದೇವೆ? ಅತ್ಯಾಚಾರದಂತಹ ಅಪರಾಧಗಳು ಸಾಮಾನ್ಯವಾಗುತ್ತಿರುವಾಗ, ಅಪರಾಧಿಗಳು ರಾಜಕೀಯ ಅಧಿಕಾರ, ದುಡ್ಡು, ಜಾತಿ-ಮತದ ಬೆಂಬಲದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಸೆಂಗರ್‌ನಂತಹವರು ಬಿಜೆಪಿ ಉಚ್ಚಾಟಿತರಾಗಿದ್ದರೂ, ಅವರ ಬೆಂಬಲಿಗರು ಇನ್ನೂ ಜಾತಿಯ ಹೆಸರಿನಲ್ಲಿ ರ್ಯಾಲಿಗಳನ್ನು ಆಯೋಜಿಸುತ್ತಿದ್ದಾರೆ. ಬಿಜೆಪಿ ಇದೇ ಅತ್ಯಾಚಾರ ಆರೋಪಿ ಸೆಂಗರ್ ಪತ್ನಿಗೆ ತನ್ನ ಪಕ್ಷದ ಕಡೆಯಿಂದ ಟಿಕೆಟ್ ಕೊಟ್ಟು ಗೆಲ್ಲಿಸಿದೆ. ಇದು ವಿಕೃತ ಮನಸ್ಸುಗಳ ಪ್ರದರ್ಶನವಲ್ಲದೇ ಇನ್ನೇನು ಆಗೋಕೆ ಸಾಧ್ಯ? ಇಂತಹವರು ನಮ್ಮ ಸುತ್ತಮುತ್ತಲೇ ಇದ್ದಾರೆ. ಅಧಿಕಾರಿಗಳು, ದುಡ್ಡಿನ ಮದ ನೆತ್ತಿಗೆ ಹತ್ತಿದವರು, ಜಾತಿ-ಮತದ ಅಂಧ ಭಕ್ತರು ಅಪರಾಧಿಗಳನ್ನು ರಕ್ಷಿಸಲು ಸಂತ್ರಸ್ತೆಗೆ ಮಾನಸಿಕ ದೌರ್ಜನ್ಯಕ್ಕೆ ಮುಂದಾಗಿದ್ದಾರೆ.
ಆದರೆ ಇದರಲ್ಲಿ ಒಂದು ಆಶಾಕಿರಣವೂ ಇದೆ. ಸುಪ್ರೀಂ ಕೋರ್ಟ್‌ನ ಆದೇಶವು ಸಂತ್ರಸ್ತೆಗೆ ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಇನ್ನೂ ಬಲಪಡಿಸಿದೆ. ಅದು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. “ಸಂತ್ರಸ್ತೆಗೆ ಕಾನೂನು ಸಹಾಯ ನೀಡಬೇಕು, ಅವರ ಹಕ್ಕುಗಳನ್ನು ರಕ್ಷಿಸಬೇಕು” ಎಂದಿದೆ. ಇದು ಒಂದು ಸಕಾರಾತ್ಮಕ ಹೆಜ್ಜೆ. ಆದರೆ ನ್ಯಾಯಾಂಗ ಏಕೈಕವಲ್ಲ. ಸಮಾಜವೇ ನ್ಯಾಯದ ಭಾಗವಾಗಬೇಕು. ಸಂತ್ರಸ್ತೆಯ ಮನವಿಯಂತೆ, ನಾವು ಜಾತಿ-ಮತಗಳನ್ನು ಮೀರಿ ನಿಲ್ಲಬೇಕು. ಅಪರಾಧಕ್ಕೆ ಜಾತಿ ಇಲ್ಲ, ಮತ ಇಲ್ಲ.

ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತಬೇಕು, ಅಪಪ್ರಚಾರವನ್ನು ವಿರೋಧಿಸಬೇಕು, ಸಂತ್ರಸ್ತೆಯ ಹೋರಾಟಕ್ಕೆ ಒಗ್ಗೂಡಬೇಕು. ಉನ್ನಾವ್ ಸಂತ್ರಸ್ತೆಯ ಹೋರಾಟ ನಮ್ಮೆಲ್ಲರ ಹೋರಾಟ. ಅವರು ಹೇಳಿದಂತೆ, “ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಆದರೆ ನೀವು ನನ್ನ ಜೊತೆ ನಿಲ್ಲಿ.” ಈ ಕರೆಗೆ ಪ್ರತಿಕ್ರಿಯಿಸೋಣ. ಏಕೆಂದರೆ, ನಾವು ಒಟ್ಟಾಗಿ ನಿಂತರೆ, ಅಪರಾಧಿಗಳ ಬೆಂಬಲಿಗರು ಸೋಲುತ್ತಾರೆ. ನಮ್ಮ ದೇಶದ ಮಗಳು ಒಂಟಿಯಾಗಿ ಹೋರಾಡದಂತೆ ಮಾಡೋಣ. ಇದು ನಮ್ಮ ಸಮ ಸಮಾಜದ, ನಮ್ಮ ನ್ಯಾಯವ್ಯವಸ್ಥೆಯ ಭವಿಷ್ಯಕ್ಕಾಗಿ ಮಾಡಬೇಕಾದ ಕೆಲಸ. ಇಲ್ಲದಿದ್ದರೆ, ಇನ್ನೊಂದು ಉನ್ನಾಂವ್ ಹುಟ್ಟಿಕೊಳ್ಳುತ್ತದೆ. ನಾವು ಅದನ್ನು ಬೆಂಬಲದಿಂದ, ಧ್ವನಿಯಿಂದ, ನ್ಯಾಯದಿಂದ ತಡೆಯೋಣ.





