2026ರ ಜನವರಿ 29-30ರ ಹೊತ್ತಿಗೆ, ಅಮೆರಿಕದ ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಭಾರೀ ಇಳಿಕೆ ಕಂಡಿವೆ, ಆದರೆ ಅದೇ ಸಮಯದಲ್ಲಿ ಚೀನಾ, ಭಾರತ ಸೇರಿದಂತೆ ಇತರೆ ಕೆಲವು ಮಾರುಕಟ್ಟೆಗಳಲ್ಲಿ ಬೆಲೆಗಳು ಗಗನಕ್ಕೇರಿವೆ. ಈ ವ್ಯತ್ಯಾಸ ಸಹಜವಾಗಿಯೇ ಆಗಾಗ ಮುಗಿಯಬೇಕು. ಆದರೆ ಅದಾಗುತ್ತಿಲ್ಲ. ಅಂದರೆ, ಕಡಿಮೆ ಬೆಲೆ ಇರುವ ಅಮೆರಿಕದಿಂದ ಚಿನ್ನ–ಬೆಳ್ಳಿ ಖರೀದಿ ಮಾಡಿ, ಹೆಚ್ಚು ಬೆಲೆ ಇರುವ ಚೀನಾಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿಲ್ಲ.
ಸದ್ಯ ಜಗತ್ತಿನ ಸರಕು ಮಾರುಕಟ್ಟೆಗಳಲ್ಲಿ, ವಿಶೇಷವಾಗಿ ಚಿನ್ನ ಮತ್ತು ಬೆಳ್ಳಿಯ ವಿಷಯದಲ್ಲೊಂದು ಅಸಾಮಾನ್ಯ ಪರಿಸ್ಥಿತಿ ನಿರ್ಮಾಣವಾಗಿರುವುದು ಗೊತ್ತೇ ಇದೆ. ಭಾರತವೂ ಸೇರಿದಂತೆ ವಿಶ್ವದಾದ್ಯಂತ 2026ರಲ್ಲಿಯೂ ಬಂಗಾರದ ಮಾರುಕಟ್ಟೆ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದೆ. ಗ್ರಾಹಕರಿಂದ ಹೂಡಿಕೆದಾರರವರೆಗೆ ಎಲ್ಲರ ನೋಟವೂ ಈಗ ಚಿನ್ನ ಬೆಳ್ಳಿಯತ್ತ ತಿರುಗಿದೆ.
ಕಳೆದ ಎರಡು ದಶಕಗಳಲ್ಲಿ ವಿಶ್ವ ಆರ್ಥಿಕತೆಯ ಅಸ್ಥಿರತೆ, ಜಿಯೋಪಾಲಿಟಿಕಲ್ ಸಂಘರ್ಷಗಳು ಮತ್ತು ಮಾರುಕಟ್ಟೆಯ ಏರಿಳಿತದ ಭಯದ ನಡುವೆಯೂ ಹಳದಿ ಮತ್ತು ಬಿಳಿ ಲೋಹಗಳು ತಮ್ಮ ಹೊಳಪು ಕಾಪಾಡಿಕೊಂಡಿವೆ. 2026ರಲ್ಲಿ ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ಏರಿಕೆ ಕಂಡಿದೆ. ಅಷ್ಟಕ್ಕೂ ಚಿನ್ನದ ಬೆಲೆ ಏರಿಳಿತಕ್ಕೆ ಕಾರಣವೇನು? ಇನ್ನು ಎಷ್ಟರವರೆಗೆ ಬೆಲೆ ಏರಿಕೆಯಾಗಬಹುದು? ಹೂಡಿಕೆದಾರರ ಮುಂದಿನ ನಡೆಯೇನು? ಈ ಅಸಾಮಾನ್ಯ ಏರಿಕೆ ಮುಂದಿನ ದಿನಗಳಲ್ಲಿ ಇಳಿಕೆಯಾಗುವ ಮುನ್ಸೂಚನೆಯೇ?

ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಗಳು ಸರಿಯಾಗಿ ಕೆಲಸ ಮಾಡುತ್ತಿದ್ದರೆ, ಒಂದೇ ಸರಕಿಗೆ ವಿಭಿನ್ನ ದೇಶಗಳಲ್ಲಿ ಭಾರಿ ಬೆಲೆ ವ್ಯತ್ಯಾಸ ಇರುವುದಿಲ್ಲ. ಎಲ್ಲಿಯಾದರೂ ಬೆಲೆ ಕಡಿಮೆ ಇದ್ದರೆ, ವ್ಯಾಪಾರಿಗಳು ಅಲ್ಲಿಂದ ಖರೀದಿ ಮಾಡಿ, ಬೆಲೆ ಜಾಸ್ತಿ ಇರುವ ದೇಶಕ್ಕೆ ಮಾರಾಟ ಮಾಡುತ್ತಾರೆ. ಇದನ್ನೇ ಅರ್ಬಿಟ್ರಾಜ್ ಎನ್ನುತ್ತಾರೆ. ಇಂದಿನ ಡಿಜಿಟಲ್ ಯುಗದಲ್ಲಿ, ಇದನ್ನು ಮನುಷ್ಯರಲ್ಲ, ಕಂಪ್ಯೂಟರ್‌ಗಳು (ಅರ್ಬಿಟ್ರಾಜ್ ಬಾಟ್ಸ್) ಕ್ಷಣಾರ್ಧದಲ್ಲಿ ಮಾಡುತ್ತವೆ. ಅಷ್ಟು ವೇಗವಾಗಿ ಬೆಲೆ ವ್ಯತ್ಯಾಸ ಮುಚ್ಚಲ್ಪಡಬೇಕು.
ಆದರೆ ಈಗ ನಡೆಯುತ್ತಿರುವುದು ಸಾಮಾನ್ಯರ ಊಹೆಗೆ ನಿಲುಕದ್ದು!
2026ರ ಜನವರಿ 29-30ರ ಹೊತ್ತಿಗೆ, ಅಮೆರಿಕದ ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಭಾರೀ ಇಳಿಕೆ ಕಂಡಿವೆ, ಆದರೆ ಅದೇ ಸಮಯದಲ್ಲಿ ಚೀನಾ, ಭಾರತ ಸೇರಿದಂತೆ ಇತರೆ ಕೆಲವು ಮಾರುಕಟ್ಟೆಗಳಲ್ಲಿ ಬೆಲೆಗಳು ಗಗನಕ್ಕೇರಿವೆ. ಈ ವ್ಯತ್ಯಾಸ ಸಹಜವಾಗಿಯೇ ಆಗಾಗ ಮುಗಿಯಬೇಕು. ಆದರೆ ಅದಾಗುತ್ತಿಲ್ಲ. ಅಂದರೆ, ಕಡಿಮೆ ಬೆಲೆ ಇರುವ ಅಮೆರಿಕದಿಂದ ಚಿನ್ನ–ಬೆಳ್ಳಿ ಖರೀದಿ ಮಾಡಿ, ಹೆಚ್ಚು ಬೆಲೆ ಇರುವ ಚೀನಾಕ್ಕೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿಲ್ಲ.

ಇದಕ್ಕೆ ಕಾರಣವೇನು?
ಅಮೆರಿಕದ ಜೆಪಿ ಮಾರ್ಗನ್‌ನಂತಹ ದೊಡ್ಡ ಬ್ಯಾಂಕ್‌ಗಳು ಅಮೆರಿಕದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ಕೃತಕವಾಗಿ ತಗ್ಗಿಸಲು ಪ್ರಯತ್ನಿಸುತ್ತಿವೆ. ಆದರೆ ಜಾಗತಿಕ ಮಾರುಕಟ್ಟೆಯ ನಿಜವಾದ ಬೇಡಿಕೆ ಮತ್ತು ಒತ್ತಡವನ್ನು ನಿಯಂತ್ರಿಸಲು ವಿಫಲವಾಗುತ್ತಿವೆ. ಕಾಗದದ ವ್ಯವಹಾರಗಳ ಮೂಲಕ (ಫ್ಯೂಚರ್ಸ್, ಡೆರಿವೇಟಿವ್ಸ್) ಬೆಲೆ ಇಳಿಸಲು ಯತ್ನಿಸಿದರೂ, ಭೌತಿಕ ಚಿನ್ನ–ಬೆಳ್ಳಿಗೆ ಇರುವ ಬೇಡಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆಯನ್ನು ಮೇಲ್ಮುಖವಾಗಿಯೇ ತಳ್ಳುತ್ತಿದೆ.
ಉದಾಹರಣೆಗೆ, ನ್ಯೂಯಾರ್ಕ್‌ನಲ್ಲಿ ಬೆಳ್ಳಿಯ ಬೆಲೆ ಒಂದು ಹಂತದಲ್ಲಿ ಪ್ರತಿ ಔನ್ಸ್ $109–$116ರೊಳಗೆ ಇಳಿದಿದ್ದರೆ, ಚೀನಾ ಮತ್ತು ಭಾರತದಲ್ಲಿ ಅದೇ ಬೆಳ್ಳಿ $120–$135ಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿತ್ತು. ಚಿನ್ನದ ವಿಷಯದಲ್ಲೂ ಇದೇ ಕತೆ ಮುಂದುವರೆದಿತ್ತು. ಅಮೆರಿಕದಲ್ಲಿ ಬೆಲೆ ಇಳಿದರೂ, ಚೀನಾದ ಶಾಂಘೈ ಗೋಲ್ಡ್ ಎಕ್ಸ್‌ಚೇಂಜ್‌ನಲ್ಲಿ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಇನ್ನೂ ಬಹಳ ದುಬಾರಿಯೇ ಇತ್ತು. ಇದು, ಜಾಗತಿಕ ಚಿನ್ನ–ಬೆಳ್ಳಿ ಮಾರುಕಟ್ಟೆಗಳು ಈಗ ಒಂದೇ ರೀತಿಯಲ್ಲಿ ವರ್ತಿಸುತ್ತಿಲ್ಲ, ಭೌತಿಕ ಲೋಹದ ಬೇಡಿಕೆ ಇರುವ ದೇಶಗಳು (ಚೀನಾ, ಭಾರತ) ಮತ್ತು ಕಾಗದದ ಮಾರುಕಟ್ಟೆ ಮೇಲೆ ಅವಲಂಬಿತ ದೇಶಗಳ (ಅಮೆರಿಕ) ನಡುವೆ ಸ್ಪಷ್ಟ ಅಂತರ ಮೂಡುತ್ತಿದೆ ಎನ್ನುವುದನ್ನು ತೋರಿಸುತ್ತದೆ. ಈಗ ಈ ಅಸ್ಥಿರತೆಯ ಮಧ್ಯೆ ಇನ್ನೊಂದು ಭಯಾನಕ ಅಂಶ ಸೇರ್ಪಡೆಯಾಗಿದೆ. ಇರಾನ್ ಮತ್ತು ಅಮೆರಿಕಾ ನಡುವಿನ ಯುದ್ಧದ ಸಾಧ್ಯತೆ.
ಪರ್ಷಿಯನ್ ಗಲ್ಫ್ ಅನ್ನು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುವ ಹಾರ್ಮುಜ್ ಕಣಿವೆ(Strait of Hormuz) ಎಂಬುದು ಜಗತ್ತಿನ ಅತ್ಯಂತ ಪ್ರಮುಖ ಸಾಗಣೆ ದಾರಿಗಳಲ್ಲಿ ಒಂದು. ಜಗತ್ತಿನ ಸುಮಾರು ಶೇ.20–27 ತೈಲ ಮತ್ತು ಶೇ.20 ಎಲ್‌ಎನ್‌ಜಿ(ಗ್ಯಾಸ್) ಇದೇ ದಾರಿಯಿಂದ ಸಾಗುತ್ತದೆ. ಚೀನಾ, ಭಾರತ, ಜಪಾನ್, ದಕ್ಷಿಣ ಕೊರಿಯಾ ಮುಂತಾದ ಏಷ್ಯಾ ದೇಶಗಳು ಇದೇ ಮಾರ್ಗವನ್ನ ಅವಲಂಬಿಸಿವೆ. ಈಗ ಅಮೆರಿಕ ತನ್ನ ಯುದ್ಧನೌಕೆಯನ್ನು ಆ ಪ್ರದೇಶಕ್ಕೆ ಕಳುಹಿಸಿರುವುದರಿಂದ, ʼಯುದ್ಧವಾದರೆ ಹಾರ್ಮುಜ್ ಕಣಿವೆಯನ್ನು ಮುಚ್ಚಿಬಿಡುತ್ತೇವೆʼ ಎಂದು ಸ್ಪಷ್ಟವಾಗಿ ಇರಾನ್ ಎಚ್ಚರಿಸಿದೆ. ಇರಾನ್ ಈ ಮಾತನ್ನು ಕೇವಲ ಬೆದರಿಕೆಯಾಗಿ ಹೇಳುತ್ತಿಲ್ಲ. ಅದು ನೌಕಾಪಡೆ, ಡ್ರೋನ್‌ಗಳು, ಕ್ಷಿಪಣಿ ಬೋಟುಗಳು, ಮತ್ತು ಯುದ್ಧಾಭ್ಯಾಸಗಳ ಮೂಲಕ ತನ್ನ ಸಾಮರ್ಥ್ಯವನ್ನೂ ತೋರಿಸಿಕೊಳ್ಳುತ್ತಿದೆ.

ಒಂದೇ ದಿನಕ್ಕೆ ಈ ಕಣಿವೆ ಸಂಪೂರ್ಣ ಮುಚ್ಚಲ್ಪಡದಿದ್ದರೂ, ಸ್ವಲ್ಪ ಅಡಚಣೆ ಆದರೂ ಸಾಕು, ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $10–$20 ಏರಬಹುದು. ಪರಿಸ್ಥಿತಿ ಗಂಭೀರವಾದರೆ, ತೈಲದ ಬೆಲೆ $100–$120 ಮೀರಬಹುದು. ಇದರಿಂದ ಜಗತ್ತಿನಾದ್ಯಂತ ದುಬಾರಿ, ಮೌಲ್ಯವೃದ್ಧಿ (inflation), ಕೈಗಾರಿಕಾ ವೆಚ್ಚ ಏರಿಕೆ, ಸರಕು ಸರಬರಾಜು ಅಸ್ತವ್ಯಸ್ತ ಎಲ್ಲವೂ ಸೇರಿ ಒಂದು ದೊಡ್ಡ ಆರ್ಥಿಕ ಹೊಡೆತ ಉಂಟಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಜನರು ಮತ್ತು ರಾಷ್ಟ್ರಗಳು ಚಿನ್ನ ಮತ್ತು ಬೆಳ್ಳಿಯತ್ತ ಮುಖ ಮಾಡುತ್ತವೆ. ಈ ಬೇಡಿಕೆಯೇ ಒಂದು ಹಂತದಲ್ಲಿ ಚಿನ್ನದ ಬೆಲೆಯ ಈ ಅಸಾಮಾನ್ಯ ಏರಿಕೆಗೆ ಕಾರಣ ಎನ್ನಬಹುದು.
ಹಳೆಯ ಕಾಲದಲ್ಲಿ ಸಂಕಷ್ಟ ಬಂದಾಗ ಹಣ ಅಮೆರಿಕದ ಡಾಲರ್ ಕಡೆ ಹರಿಯುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಬೇರೆ ಇದೆ. ಜನರು ಹಣಕ್ಕಿಂತ ನಿಜವಾದ ಲೋಹವನ್ನು ಹಿಡಿದಿಡಲು ಹೆಚ್ಚು ಆಸಕ್ತಿ ತೋರಬಹುದು. ಇದು ಹೀಗೆ ಮುಂದುವರೆದರೆ, ಚಿನ್ನ ಮತ್ತು ಬೆಳ್ಳಿಯ ಬೇಡಿಕೆ ಈಗಿರುವುದಕ್ಕಿಂತಲೂ ಹಲವು ಪಟ್ಟು ಹೆಚ್ಚಾಗುತ್ತದೆ ಎಂದು ಲ್ಯಾರಿ ಸಿ ಜಾನ್ಸನ್ ಅವರ ಲೇಖನವೊಂದು ಎಚ್ಚರಿಸಿದೆ.
ಇದರಿಂದ ಯಾರು ಲಾಭ ಪಡೆಯುತ್ತಾರೆ? ಚೀನಾ ಮತ್ತು ರಷ್ಯಾ. ಈ ಎರಡೂ ದೇಶಗಳು ಸೇರಿ ಜಗತ್ತಿನ ಸುಮಾರು 20% ಚಿನ್ನ ಉತ್ಪಾದಿಸುತ್ತವೆ. ಬೆಳ್ಳಿಯ ವಿಷಯದಲ್ಲೂ ಕೆಲವೇ ದೇಶಗಳು ಜಗತ್ತಿನ ಅರ್ಧಕ್ಕಿಂತ ಹೆಚ್ಚು ಉತ್ಪಾದಿಸುತ್ತಿವೆ. ಮೆಕ್ಸಿಕೋ, ಚೀನಾ ಮತ್ತು ಪೆರು. ಅಂದರೆ, ಲೋಹಗಳ ಮೇಲೆ ಹಿಡಿತ ಕೆಲವೇ ರಾಷ್ಟ್ರಗಳ ಕೈಯಲ್ಲಿದೆ. ಟ್ರಂಪ್ ಇನ್ನೂ ರಾಜತಾಂತ್ರಿಕ ಮಾರ್ಗವನ್ನು ಆಯ್ಕೆ ಮಾಡಬಹುದು, ಆದರೆ ಅದಕ್ಕೆ ಅವಕಾಶ ಕೇವಲ 20% ಮಾತ್ರ. ಉಳಿದ 80% ಸಾಧ್ಯತೆ ಯುದ್ಧದತ್ತ ಸಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಅಮೆರಿಕನ್ ಡಾಲರ್‌ನ ಚಲನವಲನ ಕೂಡ ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಚಿನ್ನದ ಅಂತಾರಾಷ್ಟ್ರೀಯ ವ್ಯಾಪಾರ ಡಾಲರ್‌ನಲ್ಲಿ ನಡೆಯುವುದರಿಂದ, ಡಾಲರ್ ದುರ್ಬಲವಾದಾಗ ಚಿನ್ನದ ಬೆಲೆ ಸ್ವಯಂಚಾಲಿತವಾಗಿ ಏರಿಕೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದ ಬಡ್ಡಿದರ ನೀತಿಗಳಲ್ಲಿ ಉಂಟಾದ ಅನಿಶ್ಚಿತತೆ, ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡಬಹುದೆಂಬ ನಿರೀಕ್ಷೆಯಿಂದ ಡಾಲರ್ ಮೇಲಿನ ಒತ್ತಡ ಹೆಚ್ಚಾಯಿತು. ಬಡ್ಡಿದರಗಳು ಕಡಿಮೆಯಾದಾಗ ಬ್ಯಾಂಕ್ ಠೇವಣಿಗಳು ಮತ್ತು ಬಾಂಡ್‌ಗಳ ಆಕರ್ಷಣೆ ಕುಗ್ಗುತ್ತದೆ; ಹಾಗಾಗಿ ಚಿನ್ನವೇ ಆಗಾಗ್ಗೆ ಉತ್ತಮ ಹೂಡಿಕೆ ಆಯ್ಕೆಯಾಗಿ ಕಾಣಿಸುತ್ತದೆ. ಇದರ ಪರಿಣಾಮವಾಗಿ, ಹೂಡಿಕೆದಾರರ ಹಣ ಚಿನ್ನದತ್ತ ಹರಿದು, ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ.
ಇದನ್ನೂ ಓದಿ: ಜಾಗತಿಕ ಆರ್ಥಿಕ ಬಿಕ್ಕಟ್ಟು; ಭದ್ರ ನೆಲೆ ಕಂಡುಕೊಂಡ ಬಂಗಾರ, ಬಡವರ ಕನಸು ಭಗ್ನ
ಚಿನ್ನದ ಬೆಲೆ ತಕ್ಷಣವೇ ಕುಸಿಯಲಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಜಾಗತಿಕ ಅಸ್ಥಿರತೆ ಮುಂದುವರೆದರೆ, ಬಡ್ಡಿದರ ನೀತಿಗಳಲ್ಲಿ ಸ್ಪಷ್ಟತೆ ಬರದಿದ್ದರೆ, ಮತ್ತು ಕರೆನ್ಸಿ ಮಾರುಕಟ್ಟೆಗಳು ಅಲುಗಾಡುತ್ತಲೇ ಇದ್ದರೆ, ಚಿನ್ನದ ಮೇಲೆ ಇರುವ ಒತ್ತಡ ಕಡಿಮೆಯಾಗುವ ಸಾಧ್ಯತೆ ಕಡಿಮೆ. ಆದರೆ ಮಾರುಕಟ್ಟೆಗಳು ಯಾವಾಗಲೂ ಒಂದೇ ದಿಕ್ಕಿನಲ್ಲಿ ಸಾಗುವುದಿಲ್ಲವಲ್ಲ. ಮಧ್ಯಮಾವಧಿಯಲ್ಲಿ ಲಾಭದ ಸಂಗ್ರಹ (profit booking) ಅಥವಾ ಡಾಲರ್ ಬಲ ಪಡೆಯುವ ಸಂದರ್ಭಗಳಲ್ಲಿ ತಾತ್ಕಾಲಿಕ ಇಳಿಕೆಗಳೂ ಸಂಭವಿಸಬಹುದು. ಚಿನ್ನದ ಬೆಲೆ ಏರಿಕೆ ಕೇವಲ ಹೂಡಿಕೆದಾರರ ಲಾಭ-ನಷ್ಟದ ಪ್ರಶ್ನೆಯಲ್ಲ. ಚಿನ್ನ ದುಬಾರಿಯಾಗುತ್ತಿರುವಷ್ಟೂ, ಜಗತ್ತಿನ ಅನಿಶ್ಚಿತತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಜನರು ಭವಿಷ್ಯದ ಮೇಲೆ ವಿಶ್ವಾಸ ಕಳೆದುಕೊಳ್ಳುವಾಗ, ಅವರು ಮತ್ತೆ ಮತ್ತೆ ಹಳೆಯ ಭದ್ರತೆಯ ಸಂಕೇತವಾದ ಚಿನ್ನದತ್ತ ಮರಳುತ್ತಾರೆ. ಈ ಕಾರಣಕ್ಕೇ ಚಿನ್ನದ ಬೆಲೆ ಏರಿಕೆಯನ್ನು ಕೇವಲ ಮಾರುಕಟ್ಟೆ ವಸ್ತುವಾಗಿ ನೋಡಲಾಗುವುದಿಲ್ಲ.





