ವೆನೆಜುವೆಲಾ ಆಡಳಿತದಲ್ಲಿ ಅಮೆರಿಕ ಹಸ್ತಕ್ಷೇಪ; ಸಾರ್ವಭೌಮತ್ವ, ಮಾನವ ಹಕ್ಕುಗಳ ಪತನಕ್ಕೆ ತೆರೆದ ಬಾಗಿಲು

Date:

ವೆನೆಜುವೆಲಾ ಮೇಲಿನ ಅಮೆರಿಕದ ದಾಳಿಯು ಜಾಗತಿಕ ಚರ್ಚೆಯ ವಿಷಯವಾಗಿದ್ದು, ಅದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ. ಈ ಕ್ರಮವನ್ನು ‘ಡಾನ್ರೊ ಸಿದ್ದಾಂತ’ವೆಂದು ಸ್ವತಃ ಟ್ರಂಪ್‍ರವರೇ ಹೇಳಿಕೊಂಡಿದ್ದು, ಇದು 1823ರ ಮನ್ರೊ ಸಿದ್ದಾಂತದ ಹೊಸ ರೂಪವಾಗಿದೆ. ಮನ್ರೊ ಸಿದ್ದಾಂತವು ಅಮೆರಿಕ ಖಂಡಗಳಲ್ಲಿ ಯುರೋಪಿಯನ್ ರಾಷ್ಟ್ರಗಳು ಹೊಸ ವಸಾಹತುಗಳನ್ನು ಸ್ಥಾಪಿಸದಂತೆ ಅಂದಿನ ಅಮೆರಿಕ ಅಧ್ಯಕ್ಷ ಜೇಮ್ಸ್ ಮನ್ರೊ ಅವರು ಮಂಡಿಸಿದ ವಿದೇಶಾಂಗ ನೀತಿಯಾಗಿತ್ತು.

ಅಮೆರಿಕವು ವೆನೆಜುವೆಲಾ ದೇಶದ ರಾಜಧಾನಿ ಕರಾಕಸ್ ಮೇಲೆ ಇದೇ 2026ನೇ ಜನವರಿ ಮೂರರ ಮುಂಜಾನೆ ಮಿಂಚಿನ ದಾಳಿ ನಡೆಸಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೋ ಮತ್ತವರ ಪತ್ನಿಯನ್ನು ಬಂಧಿಸಿ ನ್ಯೂಯಾರ್ಕ್ ಜೈಲಿಗೆ ಕರೆದೊಯ್ದಿದೆ. ಮಾದಕ ವಸ್ತುಗಳ ಭಯೋತ್ಪಾದನಾ ಸಂಸ್ಥೆಯನ್ನು ನಡೆಸುತ್ತಿದ್ದಾರೆಂಬ ಮುಖ್ಯ ಅರೋಪವನ್ನು ನಿಕೋಲಸ್ ಮಡುರೋ ಮೇಲೆ ಹೊರಿಸಲಾಗಿದೆ. ಈ ದಾಳಿಯನ್ನು ‘ಪರಿಪೂರ್ಣ ಸಂಕಲ್ಪ ಕಾರ್ಯಚರಣೆ’(Operation Absolute Resolve)ಎಂದು ಕರೆಯಲಾಗಿದೆ. ಇದು ಮಾದಕ ವಸ್ತುಗಳ ಕಳ್ಳಸಾಗಾಣಿಕೆ, ಮಾದಕ ವಸ್ತು ಭಯೋತ್ಪಾದನೆ, ಸಂಘಟಿತ ಅಪರಾಧ ಮತ್ತು ಅಕ್ರಮ ವಲಸೆಯ ವಿರುದ್ಧದ ಕ್ರಮವಾಗಿದೆ ಎಂದು ತಮ್ಮ ದಾಳಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಸದ್ಯಕ್ಕೆ ವೆನೆಜುವೆಲಾದ ಆಡಳಿತ ಮತ್ತು ತೈಲ ನಿಕ್ಷೇಪಗಳ ಮೇಲೆ ಹಿಡಿತವನ್ನು ಹೊಂದಿ “ನಾವು ವೆನೆಜುವೆಲಾವನ್ನು ನಡೆಸುತ್ತೇವೆ” ಎಂದಿರುವ ಟ್ರಂಪ್ ಮಡುರೋ ಪಕ್ಷದ ಡೆಲ್ಸಿ ರೋಡ್ರಿಗಸ್ ಎಂಬಾಕೆಯನ್ನು ಅಲ್ಲಿನ ಹಂಗಾಮಿ ಅದ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

ವೆನೆಜುವೆಲಾ ದಕ್ಷಿಣ ಅಮೆರಿಕದ ಒಂದು ಸ್ವತಂತ್ರ ದೇಶವಾಗಿದೆ. 2013ರಲ್ಲಿ ಅಧಿಕಾರ ವಹಿಸಿಕೊಂಡ ನಿಕೋಲಸ್ ಮಡುರೋ ಕಾಲದಲ್ಲಿ ಭ್ರಷ್ಟಾಚಾರ ಹೆಚ್ಚಾಗಿ, ದೇಶದ ಆರ್ಥಿಕತೆ ಸಂಪೂರ್ಣ ಕುಸಿದು, ಆಂತರಿಕ ಅಸಮಧಾನವು ಹೆಚ್ಚುತ್ತದೆ. 2024ರ ಚುನಾವಣೆಯಲ್ಲಿ ಮದುರೋ ಅವರು ತಾವೇ ಗೆದ್ದಿರುವುದಾಗಿ ಘೋಷಿಸಿಕೊಂಡಾಗ, ಅಲ್ಲಿನ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೋ ಅವರು ಮಡುರೋ ಸೋತಿರುವುದಕ್ಕೆ ಪುರಾವೆಗಳನ್ನು ಬಿಡುಗಡೆ ಮಾಡುತ್ತಾರೆ. ಆಗ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ವೆನಿಜುವೆಲಾದ ಮೇಲೆ ಭಾರಿ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದು, ಅವು ಅದರ ಆರ್ಥಿಕತೆಯನ್ನು ಇನ್ನೂ ನರಳಿಸುತ್ತಿದೆ. ಅಪಾರ ಪೆಟ್ರೋಲಿಯಂ ಸಂಗ್ರಹ ಹೊಂದಿರುವ ವೆನೆಜುವೆಲಾ ರಷ್ಯಾ, ಚೈನಾ ಮತ್ತು ಇರಾನ್ ಜೊತೆ ವ್ಯಾಪಾರ ವ್ಯವಹಾರದ ಜೊತೆಗೆ ಮಿಲಿಟರಿ ಸಹಾಯವನ್ನೂ ಸಹ ಪಡೆಯುತ್ತಿತ್ತು. ಈ ಸಂಬಂಧಗಳು ಪಶ್ಚಿಮ ರಾಷ್ಟ್ರಗಳ, ಅದರಲ್ಲೂ ಮುಖ್ಯವಾಗಿ ಅಮೆರಿಕದ ನಿರ್ಬಂಧಗಳು, ಸೇನಾ ಮತ್ತು ಆರ್ಥಿಕ ಒತ್ತಡದ ಸಂದರ್ಭದಲ್ಲಿ ವೆನೆಜುವೆಲಾಕ್ಕೆ ರಾಜತಂತ್ರಿಕ ಸಹಕಾರ ನೀಡುವ ಮೂಲಕ ಏಕಶಕ್ತಿ ಅಧಿಪತ್ಯಕ್ಕೆ ಬದಲಾಗಿ ಹಲವು ಶಕ್ತಿಕೇಂದ್ರಗಳ (ಮಲ್ಟಿಪೋಲರ್) ಜಾಗತಿಕ ವ್ಯವಸ್ಥೆಯನ್ನು ಹುಟ್ಟಿಹಾಕಿತ್ತು. ಈ ವ್ಯವಸ್ಥೆಯು ಭೂರಾಜಕಾರಣ ಶಕ್ತಿಯ ಸಮತೋಲನ ಮತ್ತು ರಾಷ್ಟ್ರಗಳ ಸ್ವಾಯತ್ತತೆಯ ಪ್ರಶ್ನೆಗೆ ಸಂಬಂಧಿಸಿದ ಮಹತ್ವದ ಅಂಶವೆಂಬುದು ಭೂರಾಜಕಾರಣ ವಿಶ್ಲೇಷಕರ ಅಭಿಪ್ರಾಯ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವೆನೆಜುವೆಲಾ ಮೇಲಿನ ಅಮೆರಿಕದ ದಾಳಿಯು ಜಾಗತಿಕ ಚರ್ಚೆಯ ವಿಷಯವಾಗಿದ್ದು, ಅದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ. ಈ ಕ್ರಮವನ್ನು ‘ಡಾನ್ರೊ ಸಿದ್ದಾಂತ’ವೆಂದು ಸ್ವತಃ ಟ್ರಂಪ್‍ರವರೇ ಹೇಳಿಕೊಂಡಿದ್ದು, ಇದು 1823ರ ಮನ್ರೊ ಸಿದ್ದಾಂತದ ಹೊಸ ರೂಪವಾಗಿದೆ. ಮನ್ರೊ ಸಿದ್ದಾಂತವು ಅಮೆರಿಕ ಖಂಡಗಳಲ್ಲಿ ಯುರೋಪಿಯನ್ ರಾಷ್ಟ್ರಗಳು ಹೊಸ ವಸಾಹತುಗಳನ್ನು ಸ್ಥಾಪಿಸದಂತೆ ಅಂದಿನ ಅಮೆರಿಕ ಅಧ್ಯಕ್ಷ ಜೇಮ್ಸ್ ಮನ್ರೊ ಅವರು ಮಂಡಿಸಿದ ವಿದೇಶಾಂಗ ನೀತಿಯಾಗಿತ್ತು. ಈ ನೀತಿಯು ರಕ್ಷಣಾಕಾರಿಯಾಗಿ (ಡಿಫೆನ್ಸಿವ್) ರಾಜತಾಂತ್ರಿಕ ಎಚ್ಚರಿಕೆಗಳಿಗೆ ಸೀಮಿತವಾಗಿದ್ದರೆ, ಡೊನಾಲ್ಡ್ ಅವರ ಡಾನ್ರೊ ಸಿದ್ದಾಂತವು ಆಕ್ರಮಣಕಾರಿ ಮತ್ತು ಮಿಲಿಟರಿ ಬಳಕೆಯನ್ನು ಒಳಗೊಂಡಿರುತ್ತದೆ.

ʼದಿ ಗಾರ್ಡಿಯನ್ʼ ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ ಪ್ರೊಫೆಸರ್ ಆಂಡ್ರೆಸ್ ಆಂಟಿಲಾನೊ ಅವರು ವೆನೆಜುವೆಲಾದ ಈ ಬಿಕ್ಕಟ್ಟನ್ನು ಒಂದು ‘ಸಂಪನ್ಮೂಲಗಳ ಯುದ್ಧ’ ಎಂದು ಹೇಳುತ್ತಾ, ಅಲ್ಲಿನ ತೈಲ ಮತ್ತು ರಾಜಕೀಯ ಪ್ರಭಾವ ಹೊಂದಲು ಮಾದಕ ದ್ರವ್ಯದಂತಹ ವಿಷಯವನ್ನು ಕೇವಲ ಒಂದು ನೆಪವಾಗಿ ಅಮೆರಿಕ ಬಳಸಿಕೊಂಡಿದ್ದು, ಇದರ ನಿಜ ಉದ್ದೇಶವು ವೆನೆಜುವೆಲಾದ ಸಂಪತ್ತನ್ನು ಲೂಟಿ ಮಾಡುವುದಾಗಿದೆ ಎಂದು ಹೇಳಿದ್ದಾರೆ. ವಿಶ್ವ ಸಂಸ್ಥೆಯ ಮಹಾಕಾರ್ಯದರ್ಶಿಯವರು ‘ಯಾವುದೇ ದೇಶದ ಆಂತರಿಕ ರಾಜಕೀಯ ವಿಷಯದಲ್ಲಿ ಮತ್ತೊಂದು ದೇಶವು ಸೈನಿಕ ಆಕ್ರಮಣ ನಡೆಸುವುದು ವಿಶ್ವಸಂಸ್ಥೆಯ ಸನ್ನದಿನ (ಚಾರ್ಟರ್) ವಿರುದ್ಧವಾಗಿದ್ದು, ಇದು ಒಂದು ದೇಶದ ಸಾರ್ವಭೌಮತ್ವದ ಮೇಲೆ ನಡೆದ ಆಕ್ರಮಣವಾಗಿದೆ’ ಎಂದಿದ್ದಾರೆ.

ಟ್ರಂಪ್‍ರವರು ವೆನೆಜುವೆಲಾದ ತೈಲ ನಿಕ್ಷೇಪದ ಮೇಲಿನ ತಮ್ಮ ಆಸಕ್ತಿಯನ್ನು 2024ರ ಚುನಾವಣಾ ಭಾಷಣಗಳಲ್ಲಿಯೇ ಹೊರಹಾಕಿದ್ದು, ಅಂದಿನಿಂದಲೇ ಅವರ ಗುರಿಯು ಅಲ್ಲಿನ ಸಂಪತ್ತಿನ ಕಡೆಗಿತ್ತು ಎಂಬುದನ್ನು ಸೂಚಿಸುತ್ತದೆ. ಅವರು ಪ್ರಚಾರದ ಸಂದರ್ಭದಲ್ಲಿ ವೆನೆಜುವೆಲಾದಿಂದ ಬರುವ ಅಕ್ರಮ ವಲಸೆ ಗುಂಪು ಅಮೆರಿಕಕ್ಕೆ ಅಪಾಯಕಾರಿ ಎಂದು ಎಚ್ಚರಿಸಿದ್ದಲ್ಲದೆ, ಕಮ್ಯುನಿಸ್ಟ್ ರಾಷ್ಟ್ರಗಳ (ರಷ್ಯಾ ಚೈನಾ) ಹತೋಟಿಯಿಂದ ವೆನೆಜುವೆಲಾವನ್ನು ಮುಕ್ತಗೊಳಿಸುವ, ಅಲ್ಲಿನ ಅಗ್ಗದ ತೈಲದಿಂದ ಅಮೆರಿಕದ ಗ್ಯಾಸೋಲಿನ್ ಬೆಲೆಗಳನ್ನು ಕಡಿಮೆ ಮಾಡುವ, ಗಡಿಯ ಗೋಡೆಯನ್ನು ಕಟ್ಟುವ ಹಾಗೂ ಅಮೆರಿಕಾದ ಆರ್ಥಿಕತೆಯನ್ನು ಬಲಪಡಿಸುವಂತಹ ಮಾತುಗಳನ್ನು ಅವರ ಭಾಷಣಗಳಲ್ಲಿ ಹರಿಬಿಟ್ಟ ಬಗ್ಗೆ ವರದಿಗಳಿವೆ. ಅಧಿಕಾರಕ್ಕೆ ಬಂದ ನಂತರ ಟ್ರಂಪ್‍ರವರು ನಿಕೋಲಸ್ ಮಡುರೋ ಅವರ ಬಂಧನಕ್ಕೆ ಸಹಕರಿಸುವವರಿಗೆ 50 ಮಿಲಿಯ ಡಾಲರ್ ಬಹುಮಾನ ಘೋಷಣೆಯನ್ನೂ ಸಹ ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಜನವರಿ ಮೂರರಂದು ಸೈನ್ಯ ದಾಳಿಯ ಮೂಲಕ ಅಲ್ಲಿನ ಅಧ್ಯಕ್ಷರನ್ನು ಬಂಧಿಸಿ ವೆನೆಜುವೆಲಾದ ಮೇಲೆ ತಮ್ಮ ನಿಯಂತ್ರಣ ಸಾಧಿಸಿದ್ದಾರೆ. ಇಲ್ಲದ ಶತ್ರುವನ್ನು (ಮಾದಕ ವಸ್ತು ಭಯೋತ್ಪಾದನೆ) ಸೃಷ್ಟಿಸಿ, ಸುಳ್ಳು ಕಥೆಯನ್ನು ಜನರ ಮನದಲ್ಲಿ ಬಿತ್ತುವ ಮೂಲಕ ತಮ್ಮ ಒಳ ಉದ್ದೇಶವನ್ನು ಸಾಧಿಸಿಕೊಳ್ಳುವ ಸರ್ವಾಧಿಕಾರಿಗಳ ಹಳೆಯ ತಂತ್ರವನ್ನೇ ಟ್ರಂಪ್ ಬಳಸುತ್ತಿದ್ದಾರೆನ್ನುವುದು ಕೆಲವರ ಅಭಿಮತವಾಗಿದೆ.

ಟ್ರಂಪ್ ಅವರು ಈ ದಾಳಿಯನ್ನು ನಡೆಸಲು ತಮ್ಮ ಸಂಸತ್ತಿನ ಅನುಮತಿ ಪಡೆಯದೆ, ಅಧ್ಯಕ್ಷೀಯ ಅಧಿಕಾರ ಬಳಸಿಕೊಂಡಿದ್ದಾರೆ. ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸಿಕೊಳ್ಳಬಹುದಾಗಿದ್ದ ಈ ವಿಶೇಷ ಅಧಿಕಾರವನ್ನು ಬಳಸಿಕೊಂಡಿರುವುದು ಅಸಂವಿಧಾನಿಕ ಕ್ರಮವಾಗಿದೆ ಎಂಬುದು ಅಮೆರಿಕ ವಿರೊಧ ಪಕ್ಷದ ಆರೋಪವಾಗಿದೆ. ಅಂತೆಯೇ ವಿಶ್ವ ಸಂಸ್ಥೆಯ ಸನ್ನದಿನ ಪ್ರಕಾರ ಸ್ವಯಂ ರಕ್ಷಣೆಗಾಗಿ ಅಥವಾ ಭದ್ರತಾ ಮಂಡಳಿಯ ಅನುಮತಿ ಇದ್ದರೆ ಮಾತ್ರ ಮತ್ತೊಂದು ದೇಶದ ಮೇಲೆ ದಾಳಿ ಮಾಡಬಹುದು. ಆದರೆ, ವೆನೆಜುವೆಲಾ ಅಮೆರಿಕದ ಮೇಲೆ ದಾಳಿ ನಡೆಸಿಲ್ಲದ ಕಾರಣ, ಅಮೆರಿಕದ ಸೈನಿಕ ದಾಳಿ ರಕ್ಷಣಾತ್ಮಕವಾಗಿಲ್ಲ, ಬದಲಿಗೆ ಆಕ್ರಮಣಕಾರಿಯಾಗಿದೆ ಹಾಗೂ ಒಂದು ದೇಶದ ಅಧ್ಯಕ್ಷರನ್ನು ಮತ್ತೊಂದು ದೇಶದ ಸೈನ್ಯವು ಬಂಧಿಸಿ ತನ್ನ ದೇಶಕ್ಕೆ ಕರೆದೊಯ್ಯುವುದು ಅಂತರರಾಷ್ಟ್ರೀಯ ಕಾನೂನಿನಡಿ ಅತ್ಯಂತ ಗಂಭೀರ ಅಪರಾಧ ಮತ್ತು ಅದು ಆ ದೇಶದ ಸಾರ್ವಭೌಮತ್ವದ ಉಲ್ಲಂಘನೆಯಾಗುತ್ತದೆ ಎನ್ನುವುದು ಹಲವು ರಾಜತಂತ್ರಜ್ಞರ ಅಭಿಪ್ರಾಯವಾಗಿದೆ. ಪ್ರಪಂಚದಲ್ಲಿಯೇ ಅತಿ ದೊಡ್ಡ ತೈಲ ನಿಕ್ಷೇಪ ಹೊಂದಿರುವ ವೆನೆಜುವೆಲಾ ಅಂದಾಜು 300 ಬಿಲಿಯನ್ ಬ್ಯಾರಲ್‍ಗೂ ಹೆಚ್ಚು ಗಟ್ಟಿ (ಕ್ರೂಡ್) ತೈಲ ನಿಕ್ಷೇಪ ಹೊಂದಿರುವುದಾಗಿ ಜನವರಿ 8ರ ಬ್ರಿಟಾನಿಕ ಪತ್ರಿಕೆ ವರದಿ ಮಾಡಿದೆ. ಮಡುರೋ ಬಂಧನದ ನಂತರ, ವೆನಜುವೆಲಾದ ಪ್ರಮುಖ ತೈಲ ಸಂಸ್ಕರಣಾಗಾರಗಳು ಮತ್ತು ತೈಲ ರಫ್ತಿನ ನಿಯಂತ್ರಣವನ್ನು ಸಂಪೂರ್ಣ ಅಮೆರಿಕ ಸರ್ಕಾರ ನಿಯಂತ್ರಿಸುತ್ತಿದೆ ಎಂದು ರಾಯಿಟರ್ಸ್ ಮತ್ತು ಬ್ಲೂಮ್‍ಬರ್ಗ್ ಸಂಸ್ಥೆಗಳು ವರದಿ ಮಾಡಿವೆ.

ಡೊನಾಲ್ಡ್ ಟ್ರಂಪ್‍ರವರು ಈ ದಾಳಿಯಿಂದ ಸಮಾಧಾನ ಹೊಂದಿದಂತೆ ಕಾಣುತ್ತಿಲ್ಲ. ಅವರು ಡೆನ್ಮಾರ್ಕ್‍ನ ಭಾಗವಾದ ಗ್ರೀನ್‍ಲ್ಯಾಂಡ್ ಖರೀದಿಸುವ ಹಾಗೂ ಕ್ಯುಬಾ, ಮೆಕ್ಸಿಕೊ, ಮತ್ತು ಕರಿಬಿಯನ್ ದ್ವೀಪ ಇತ್ಯಾದಿ ಪ್ರದೇಶಗಳ ಮೇಲಿನ ತಮ್ಮ ಆಸಕ್ತಿಯನ್ನು ಬಹಿರಂಗಗೊಳಿಸಿದ್ದಾರೆ. ಗ್ರೀನ್‍ಲ್ಯಾಂಡಿನಲ್ಲಿ ಸ್ಮಾರ್ಟ್‍ಫೊನ್, ಎಲೆಕ್ಟ್ರಿಕ್ ಕಾರು ಮತ್ತು ಯುದ್ಧೋಪಕರಣಗಳ ತಯಾರಿಕೆಗೆ ಅಗತ್ಯವಾದ ಅತಿದೊಡ್ಡ ಪ್ರಮಾಣದ ಅಪರೂಪದ ಭೂಮಿಯ ಖನಿಜಗಳು ಇವೆ. ಇಲ್ಲಿ ಅಮೆರಿಕ ಮಿಲಿಟರಿ ನೆಲೆ ಸ್ಥಾಪನೆಯಾದರೆ ರಷ್ಯಾ ಮತ್ತು ಚೀನಾದ ಮೇಲೆ ನಿಗಾ ಇಡುವುದು ಸುಲಭವಾಗುತ್ತದೆ. ಜೊತೆಗೆ, ಇಲ್ಲಿನ ಮಂಜಗಡ್ಡೆ ಕರಗುತ್ತಿರುವುದರಿಂದ ಹೊಸ ಹಡಗು ಸಂಚಾರ ಮಾರ್ಗಗಳು ಸೃಷ್ಟಿಯಾಗಿ ವ್ಯಾಪಾರಕ್ಕೆ ಅನುಕೂಲವಾಗಲಿದೆ. ಅದೇ ರೀತಿ ಕ್ಯೂಬಾ ಪ್ರವಾಸೋಧ್ಯಮ ಮತ್ತು ರಿಯಲ್ ಎಸ್ಟೇಟ್, ಉತ್ಪಾದನಾ ಕೇಂದ್ರಗಳಿಗೆ ಅನುಕೂಲವಾಗಿರುವ ಮೆಕ್ಸಿಕೊ – ಹೀಗೆ ಇವುಗಳನ್ನು ಸಾರ್ವಭೌಮತ್ವದ ದೇಶಗಳಾಗಿ ನೋಡದೆ, ಒಂದು ಲಾಭ ತರುವ ರಿಯಲ್ ಎಸ್ಟೇಟ್ ವ್ಯವಹಾರವಾಗಿ ಮತ್ತು ಸಂಪನ್ಮೂಲಗಳನ್ನು ದೋಚುವ ವ್ಯಾಪಾರ ಕ್ಷೇತ್ರವಾಗಿ ಕಾಣುವ ಟ್ರಂಪ್‍ರವರ ನಡೆಯು 21ನೇ ಶತಮಾನದ ಹೊಸ ವಸಾಹತುಶಾಹಿ ವ್ಯವಸ್ಥೆಯ ಮರುಹುಟ್ಟಿಗೆ ದಾರಿ ಮಾಡಿದೆ ಎನ್ನುತ್ತಾರೆ ವಿಮರ್ಶಕರು.

ನೈಸರ್ಗಿಕ ಸಂಪನ್ಮೂಲ ಖಜಾನೆಯಾಗಿರುವ ದೇಶಗಳೊಂದಿಗೆ ತನಗಾಗದ ಬಲಿಷ್ಠ ರಾಷ್ಟ್ರಗಳ ವ್ಯಾಪಾರ ಸಂಬಂಧ ಸಹಕಾರಗಳನ್ನು ಮುರಿದು ತಾನು ಜಾಗತಿಕ ಶಕ್ತಿಯ ಕೇಂದ್ರವಾಗಲು ಪ್ರಯತ್ನಿಸುತ್ತಿರುವ ಅಮೆರಿಕ ಪ್ರಸ್ತುತ ಇರಾನ್ ಮೇಲೆ ನೇರ ಯುದ್ಧ ಸಾರಲು ಮುಂದಾಗಿದೆ. ಇರಾನ್ ಸಂಪೂರ್ಣ ಪರಮಾಣು ಶಕ್ತಿಯಾಗುವುದನ್ನು ತಡೆಯಲು ತನ್ನ ಮಿತ್ರ ರಾಷ್ಟ್ರ ಇಸ್ರೇಲ್ ಜೊತೆಗೂಡಿ ಕಳೆದ ವರ್ಷವೇ ಅಮೆರಿಕ ಆಕ್ರಮಣ ನಡೆಸಿತ್ತು. ಪ್ರಸ್ತುತ ಇರಾನಿನಲ್ಲಿ ಆರ್ಥಿಕ ಕುಸಿತ ಮತ್ತು ಮಾನವ ಹಕ್ಕು ನಿರ್ಬಂಧಗಳ ವಿರುದ್ಧ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳನ್ನು ಹತ್ತಿಕ್ಕಲು ಇರಾನ್ ಆಡಳಿತವು ಬಲಪ್ರಯೋಗದ ಮೂಲಕ ಜನರನ್ನು ಕೊಲ್ಲುತ್ತಿದ್ದು ಅದನ್ನು ತಡೆಯಲು ಅಮೆರಿಕ ಯಾವ ಕ್ಷಣದಲ್ಲೂ ಇರಾನಿನ ಮೇಲೆ ಯುದ್ಧ ಸಾರುವುದಾಗಿ ಟ್ರಂಪ್ ಘೋಷಿಸಿದ್ದಾರೆ. ವ್ಯಾಪಾರ ವೃದ್ಧಿಗೆ ಅನುಕೂಲವುಳ್ಳ ಅಪಾರ ಸಂಪನ್ಮೂಲಗಳ ಹಾಗೂ ಆಯಕಟ್ಟು ನೆಲೆ ಹೊಂದಿರುವ ದೇಶಗಳಲ್ಲಿ ಈಗಾಗಲೇ ಇರುವ ಆಂತರಿಕ ಕ್ಷೋಭೆಗಳನ್ನು ನೆಪವಾಗಿಸಿಕೊಂಡು, ಅಲ್ಲಿನ ಆಡಳಿತವನ್ನು ಪಲ್ಲಟಗೊಳಿಸುವ ಮೂಲಕ ತನ್ನ ನಿಯಂತ್ರಣ ಸಾಧಿಸುವುದು ಅಮೆರಿಕದ ಮಾದರಿಯಾಗಿದೆ ಎಂದು ಭೂರಾಜಕಾರಣ ವಿಮರ್ಶಕರು ಹೇಳಿರುತ್ತಾರೆ.

ವೆನೆಜುವೆಲಾ ಅಥವಾ ಇರಾನ್ ದೇಶಗಳಲ್ಲಿ ಪ್ರಜಾಪ್ರಭುತ್ವ ಇಲ್ಲದಿರಬಹುದು. ಕುಸಿದ ಆರ್ಥಿಕ ಪರಿಸ್ಥಿತಿ ಮತ್ತು ಆಡಳಿತ ಅವ್ಯವಸ್ಥೆಯಿಂದಾಗಿ ಅಲ್ಲಿನ ಜನರು ಬದಲಾವಣೆ ಬಯಸುತ್ತಿರುವುದು ನಿಜವೇ ಇದ್ದರೂ, ಅವರು ಮತ್ತೊಂದು ಪ್ರಬಲ ರಾಷ್ಟ್ರದ ಆಳ್ವಿಕೆಗೆ ಒಳಗಾಗಲು ಬಯಸುತ್ತಾರೆನ್ನುವುದು ಇದರರ್ಥವಲ್ಲ. ದಕ್ಷಿಣ ಅಮೆರಿಕ ಖಂಡವು ವಿದೇಶಿ ಆಳ್ವಿಕೆ ಮತ್ತು ಹಸ್ತಕ್ಷೇಪಗಳ ವಿರುದ್ಧ ನಡೆದ ದೀರ್ಘಕಾಲದ ಪ್ರತಿರೋಧದ ಇತಿಹಾಸ ಹೊಂದಿದ್ದು, ವೆನೆಜುವೆಲ ಜನರು ತಮ್ಮ ರಾಷ್ಟ್ರೀಯ ಸಾರ್ವಭೌಮತ್ವದ ಬಗ್ಗೆ ಭಾವನಾತ್ಮಕ ಮನಸ್ಸಿನವರಾಗಿದ್ದಾರೆ. ವೊಲ ಸಂಸ್ಥೆ (WOLA -Washington Office on Latin America),(Hinterlaces polling) ನಡೆಸಿದ ಎರಡೂ ಸಮೀಕ್ಷೆಗಳ ಪ್ರಕಾರ, ಮಡುರೋ ಅವರ ಆಡಳಿತದ ಬಗ್ಗೆ ಸ್ಥಳಿಯರಲ್ಲಿ ಅಸಮಧಾನ ಇದೆಯಾದರೂ, ವೆನೆಜುವೆಲದ ಹೆಚ್ಚಿನ ಜನರು ವಿದೇಶಿ ಮಿಲಿಟರಿ ಆಕ್ರಮಣವನ್ನು ವಿರೋಧಿಸಿರುವುದಲ್ಲದೆ, ನಾಗರಿಕರ ಸಾವು ಹಾಗೂ ಅಂತರ್ಯುದ್ಧದ ಭೀತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇಸ್ರೇಲಿನ ಭಾರತದ ಮಾಜಿ ರಾಯಭಾರಿ ಮತ್ತು ಹಿರಿಯ ರಾಜತಂತ್ರಜ್ಞರಾದ ಗದ್ದಮ್ ಧರ್ಮೇಂದ್ರ ಇವರು ‘ತಮ್ಮ ದೇಶಕ್ಕಾಗಿ ಜೀವಿಸುತ್ತೆವೆ ಎನ್ನುವ ಇರಾನಿಯರು ಅಲ್ಲಿನ ಆಡಳಿತ ವ್ಯವಸ್ಥೆಯೊಳಗೆ ಬದಲಾವಣೆ ಬಯಸುತ್ತಾರೆಯೇ ಹೊರತು, ಹೊರಗಿನ ಆಡಳಿತ ಅವರಿಗೆ ಬೇಕಾಗಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತೆಯೇ ಗ್ರೀನ್‍ಲ್ಯಾಂಡ್ ಮತ್ತು ಡೆನ್ಮಾರ್ಕ್‍ಗಳಲ್ಲಿಯೂ ಸಹ ಪ್ರತಿಭಟನೆಗಳು ನಡೆಯುತ್ತಿರುವ ಕುರಿತು ವರದಿಯಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರವರ ವಿದೇಶಾಂಗ ನೀತಿಯು ಅಂತರರಾಷ್ಟ್ರ ರಾಜತಾಂತ್ರಿಕತೆಯ ಕರಾಳ ಮುಖವನ್ನು ಅನಾವರಣಗೊಳಿಸಿದೆ. ಈ ದಾಳಿಯು ಕೇವಲ ಅಧಿಕಾರ ಮತ್ತು ಆರ್ಥಿಕತೆಯ ಲಾಭದ ಉದ್ದೇಶ ಹೊಂದಿದ್ದು, ಸಣ್ಣ ದೇಶಗಳ ಸಾರ್ವಭೌಮತ್ವ, ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳ ಮೌಲ್ಯವನ್ನು ಕಡೆಗಣಿಸಿದೆ. ಮಾನವ ಹಕ್ಕುಗಳನ್ನು ಹೊಸಕಿಹಾಕುವ ಜೊತೆಗೆ ಭ್ರಷ್ಟತೆ ಅರಾಜಕತೆಗಳನ್ನು ಹುಟ್ಟು ಹಾಕುವ ನಾಯಕರುಗಳು ತಮ್ಮ ಜನರ ಪರಮಾಧಿಕಾರವನ್ನು ಬಲಾಢ್ಯ ರಾಷ್ಟ್ರಗಳಿಗೆ ಒತ್ತೆ ಇಡುತ್ತಾರೆಂಬುದಕ್ಕೆ ವೆನೆಜುವೆಲಾ ಮತ್ತು ಇರಾನ್ ಉದಾಹರಣೆಯಾಗಿದೆ. ಸಾರ್ವಭೌಮತ್ವವು ಒಂದು ದೇಶದ ಪರಮಾಧಿಕಾರವಾಗಿದ್ದು, ಅದನ್ನು ಮತ್ತೊಂದು ದೇಶ ಹಂಚಿಕೊಳ್ಳಲಾಗದು. ಆದರೆ, ಅಮೆರಿಕವು ವೆನೆಜುವೆಲಾದ ಪರಮಾಧಿಕಾರವನ್ನು ಗಾಳಿಗೆ ತೂರಿ, ಅಲ್ಲಿನ ಆಗುಹೋಗುಗಳ ನಿರ್ಧಾರದ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಸಾರ್ವಭೌಮತ್ವ ಎನ್ನುವ ಪದವನ್ನು ಸವಕಳಿಸಿದೆ. ಅಂತರರಾಷ್ಟ್ರೀಯ ಕಾನೂನು ಮತ್ತು ಬಹುಪಕ್ಷೀಯ ಸಂಸ್ಥೆಗಳನ್ನು ಟ್ರಂಪ್ ಕಡೆಗಣಿಸುತ್ತಿರುವುದು ಜಾಗತಿಕ ರಾಜಕಾರಣದ ಕಳವಳಕಾರಿ ವಿದ್ಯಮಾನವಾಗಿದೆ. ಅಮೆರಿಕದ ಈ ವಿದೇಶಾಂಗ ನೀತಿಯು ಬಲಿಷ್ಠ ರಾಷ್ಟ್ರಗಳಿಗೆ ದುರ್ಬಲ ರಾಷ್ಟ್ರಗಳನ್ನು ಆಕ್ರಮಿಸಿಕೊಳ್ಳಬಹುದೆಂಬ ದಾರಿಯಾಗಿ ಸಣ್ಣ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಸಂಚಕಾರ ತಂದಿದೆ.

ವಿಶ್ವಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಅಮೆರಿಕದ ಈ ಮಿಲಿಟರಿ ಕಾರ್ಯಚರಣೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಕುರಿತು ವರದಿಯಾಗಿದೆ. ದಾಳಿಯ ಸಮಯದಲ್ಲಿ ಆಗಿರಬಹುದಾದ ನಾಗರಿಕರ ಸಾವು ನೋವುಗಳು, ಮೂಲಸೌಕರ್ಯಗಳ ಹಾನಿಯಿಂದಾಗಿರುವ ಮೂಲಭೂತ ಸೇವೆಗಳ ಕೊರತೆ, ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರ ರಾಜಕೀಯ ಬಂಧನ, ಪರಿಸ್ಥಿತಿ ಉಂಟು ಮಾಡಿರುವ ಅನಿಶ್ಚಿತತೆ ಮತ್ತು ಭಯ, ದಾಳಿಯ ನಂತರ ಸುಮಾರು 2 ಲಕ್ಷ ಜನರ ವಲಸೆ ಇತ್ಯಾದಿಗಳು ಅಮೆರಿಕ ದಾಳಿಯಿಂದಾಗಿರುವ ನೇರ ಮಾನವ ಹಕ್ಕುಗಳ ಉಲ್ಲಂಘನೆಗೆ ಸಾಕ್ಷಿಯಾಗಿವೆ.

ಇದಲ್ಲದೆ, ಪರೋಕ್ಷವಾಗಿರುವ ಮಾನವ ಹಕ್ಕುಗಳ ಉಲ್ಲಂಘನೆಯು ಬಹು ಆಳ ಮತ್ತು ವ್ಯಾಪಕವಾಗಿದೆ. ಒಬ್ಬ ರಾಜಕೀಯ ನಾಯಕನನ್ನು ಕೆಳಗಿಳಿಸಲು ಅಥವಾ ಅಲ್ಲಿನ ಆಡಳಿತವನ್ನು ಬದಲಿಸಲು, ಇಡೀ ದೇಶದ ಜನರನ್ನು ಹಸಿವು ಮತ್ತು ರೋಗಕ್ಕೆ ತಳ್ಳುವಂತಹ ಸಾಮೂಹಿಕ ಶಿಕ್ಷೆ ಅಂತರರಾಷ್ಟ್ರೀಯ ಕಾನೂನಿನಡಿ ಸಮರ್ಥನೀಯವಲ್ಲ. ಯಾರೋ ಮಾಡಿದ ತಪ್ಪಿಗೆ ಮತ್ತಾರಿಗೋ ಶಿಕ್ಷೆ ಆಗುವುದು ನಾಗರಿಕ ಜಗತ್ತಿನ ನಿಯಮಗಳಿಗೆ ವಿರುದ್ಧವಾಗಿದೆ. ಅಮೆರಿಕ ದಾಳಿಯ ಕಾರಣದಿಂದಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಅಗತ್ಯ ವಸ್ತುಗಳ ಕೊರತೆಯಿಂದ ಬೆಲೆ ಹೆಚ್ಚಾಗಿರುವ ಬಗ್ಗೆ ಮತ್ತು ಸಾರಿಗೆ ವ್ಯವಸ್ಥೆಯ ಸ್ಥಗಿತದಿಂದ ಅವಶ್ಯಕ ವಸ್ತುಗಳ ಸರಬರಾಜು ನಿಂತಿರುವ ಬಗ್ಗೆ ವರದಿಗಳಾಗುತ್ತಿವೆ. ಆಹಾರ, ಆರೋಗ್ಯ ಸೇವೆ, ಜೀವರಕ್ಷಕ ಔಷಧಿ ಮತ್ತು ಉಪಕರಣಗಳ ಕೊರತೆಯಿಂದ ಸಾವು ನೋವುಗಳು ಸಹಜವಾಗುತ್ತವೆ. ಇದು ತಾತ್ಕಲಿಕವೇ ಆದರೂ ಅದರ ದುಷ್ಪರಿಣಾಮವನ್ನು ದುರ್ಬಲರು ತಮ್ಮ ಜೀವನದುದ್ದಕ್ಕೂ ಅನುಭವಿಸಬೇಕಾಗುತ್ತದೆ.

ಮಣಿಪುರ | ಮೋದಿಯವರ ಡಬಲ್‌ ಎಂಜಿನ್‌ ಸರ್ಕಾರದ ವೈಫಲ್ಯಕ್ಕೆ ಅತ್ಯಾಚಾರ ಸಂತ್ರಸ್ತೆ ಸಾವು!

ಜಾಗತಿಕ ರಾಜಕೀಯವು ಒಂದು ನಿರ್ಣಾಯಕ ಘಟಕ್ಕೆ ಬಂದು ನಿಂತಿರುವ ಈ ಹೊತ್ತಿನಲ್ಲಿ ಭಾರತವು ಅತ್ಯಂತ ಸಂಕೀರ್ಣ ಸವಾಲುಗಳನ್ನು ಎದುರಿಸಬೇಕಾಗಿದೆ. ‘ಅಮೆರಿಕ ಮೊದಲು ಮತ್ತು ಅದೇ ವ್ಯಾಪಾರ ವಹಿವಾಟುಗಳ ಕೇಂದ್ರ’ ವೆಂಬ ಧೋರಣೆಯ ಟ್ರಂಪ್ ವಿದೇಶಾಂಗ ನೀತಿಯ ಜೊತೆಗ ರಷ್ಯಾ ಮತ್ತು ಚೈನಾ ನಡುವಿನ ಸಂಘರ್ಷಗಳು ಭಾರತದ ಮೇಲೆ ನೇರ ಪರಿಣಾಮ ಬೀರಲಿವೆ. ಈಗಾಗಲೇ, ಭಾರತವು ರಷ್ಯಾದೊಂದಿಗೆ ತೈಲ ವ್ಯಾಪಾರ ನಡೆಸಿದರೆ ಶೇ.500ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಏಕಾಂಗಿಯಾಗಿ ಭಾರತವೊಂದೇ ಈ ದೊಡ್ಡಣ್ಣನನ್ನು ಎದುರು ಹಾಕಿಕೊಳ್ಳುವಂತಿಲ್ಲವಾದರೂ, ಅಮೆರಿಕದ ಸ್ನೇಹವನ್ನು ಕಾಯ್ದುಕೊಳ್ಳುತ್ತಲೇ ರಾಜತಾಂತ್ರಿಕ ದೃಢತೆಯೊಂದಿಗೆ ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳುವಂತಹ ಸಮತೋಲನ ಸೂತ್ರವನ್ನು ಅಳವಡಿಸಿಕೊಳ್ಳಬೇಕಿದೆ.

WhatsApp Image 2025 11 17 at 5.18.52 PM
ಲತಾಮಾಲ
+ posts

ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಲತಾಮಾಲ
ಲತಾಮಾಲ
ಲತಾಮಾಲ ಅವರು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿರುತ್ತಾರೆ. ಇದರೊಂದಿಗೆ, ಸ್ವತಂತ್ರ ಸಮಾಲೋಚಕರಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮೌಲ್ಯಮಾಪನ, ಅಧ್ಯಯನ ಮತ್ತು ತರಬೇತಿಗಳನ್ನು ನಡೆಸಿಕೊಟ್ಟಿರುತ್ತಾರೆ. ಬರವಣಿಗೆಯನ್ನು ತಮ್ಮ ವೃತ್ತಿಗೆ ಮಾತ್ರ ಸಿಮೀತಗೊಳಿಸಿದ್ದ ಇವರು, ಇತ್ತಿಚೆಗೆ ಪ್ರಸ್ತುತದ ರಾಜಕೀಯ ಆಗುಹೋಗುಗಳ ಕುರಿತಾಗಿ ಪುಸ್ತಕವನ್ನು ಹೊರತಂದಿದ್ದು, 'ಈದಿನ ಡಾಟ್‌ ಕಾಮ್‌'ಗೆ ರಾಜಕೀಯ ಹಾಗೂ ಅಭಿವೃದ್ಧಿ ಸಂಬಂಧಿತ ಲೇಖನಗಳನ್ನು ಬರೆಯುತ್ತಿರುತ್ತಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...