ಟ್ರಂಪ್ ನೇತೃತ್ವದಲ್ಲಿ ನಡೆದ ಏಕಪಕ್ಷೀಯ ಸೇನಾ ದಾಳಿ ಮಡುರೊ ಅವರನ್ನು ಅಪಹರಿಸಿ, ದಕ್ಷಿಣ ಅಮೆರಿಕದ ಈ ಸಂಪನ್ಮೂಲ ಭರಿತ ರಾಷ್ಟ್ರವನ್ನು ಜಾಗತಿಕ ಸಂಘರ್ಷದ ಕೇಂದ್ರವನ್ನಾಗಿಸಿದೆ. ಪ್ರಜಾಪ್ರಭುತ್ವ ಮತ್ತು ಮಾದಕ ತಡೆಯ ನೆಪದ ಹಿಂದೆ ಅಡಗಿರುವುದು ತೈಲ, ಅನಿಲ, ಚಿನ್ನ, ಖನಿಜ ಮತ್ತು ಸಿಹಿನೀರಿನ ಅಪಾರ ಸಂಪತ್ತಿನ ಮೇಲಿನ ಸಾಮ್ರಾಜ್ಯಶಾಹಿ ಹಸಿವು! ಈ ಆಧುನಿಕ ವಸಾಹತುಶಾಹಿ ಲೂಟಿಯ ಕಟು ಸತ್ಯ ಬಯಲಾಗುತ್ತದೆ…
ವೆನೆಜುವೆಲಾದಲ್ಲಿ ಅಮೆರಿಕ ನಡೆಸಿದ ಏಕಪಕ್ಷೀಯ ಸೇನಾ ಕಾರ್ಯಾಚರಣೆ ಮತ್ತು ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಪಹರಿಸಿದ ರೀತಿಯು ಅಂತಾರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಮಾದಕವಸ್ತು ಕಳ್ಳಸಾಗಣೆ ತಡೆಗಟ್ಟುವ ನೆಪವೊಡ್ಡಿ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ನಡೆಸಿದ ಈ ದುರಾಕ್ರಮಣವು, ವಾಸ್ತವದಲ್ಲಿ ಆಧುನಿಕ ಜಗತ್ತಿನ ಅತಿ ದೊಡ್ಡ ‘ಹಗಲು ದರೋಡೆ’ಯಾಗಿದೆ. ದಕ್ಷಿಣ ಅಮೆರಿಕದ ಈ ಪುಟ್ಟ ರಾಷ್ಟ್ರವನ್ನು ದೀರ್ಘಕಾಲದ ಪ್ರಾದೇಶಿಕ ಬಿಕ್ಕಟ್ಟಿನಿಂದ ಜಾಗತಿಕ ಸಂಘರ್ಷದ ಕೇಂದ್ರಬಿಂದುವನ್ನಾಗಿ ಪರಿವರ್ತಿಸಲಾಗಿದೆ. ಈ ಅಮೆರಿಕನ್ ಆಕ್ರಮಣದ ಹಿಂದೆ ಯಾವುದೇ ನೈತಿಕ ಉದ್ದೇಶಗಳಿಲ್ಲ, ಬದಲಾಗಿ ವೆನೆಜುವೆಲಾದ ಒಡಲಲ್ಲಿ ಅಡಗಿರುವ ಅಪಾರ ಇಂಧನ, ಖನಿಜಗಳು, ಲೋಹಗಳು ಮತ್ತು ಸಿಹಿನೀರಿನ ಸಂಪನ್ಮೂಲಗಳನ್ನು ಕಬಳಿಸುವ ಸಾಮ್ರಾಜ್ಯಶಾಹಿ ಹುನ್ನಾರವಷ್ಟೇ ಎದ್ದು ಕಾಣುತ್ತಿದೆ.
ವೆನೆಜುವೆಲಾದ ಒಳಗೆ ಮತ್ತು ಹೊರಗೆ ಈ ಅಮೆರಿಕನ್ ದಬ್ಬಾಳಿಕೆಯ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆಗಳು, ಅಲ್ಲಿನ ಜನಸಾಮಾನ್ಯರ ಆಕ್ರೋಶಕ್ಕೆ ಕನ್ನಡಿ ಹಿಡಿದಿವೆ. ಅಮೆರಿಕ ವೆನೆಜುವೆಲಾವನ್ನು ಕೇವಲ ವಿದೇಶಾಂಗ ನೀತಿಯ ಸಾಮಾನ್ಯ ಸವಾಲಾಗಿ ನೋಡದೆ, ತನ್ನ ಜಾಗತಿಕ ಆಧಿಪತ್ಯವನ್ನು ಕಾಪಾಡಿಕೊಳ್ಳಲು ಅತ್ಯಂತ ಮೌಲ್ಯಯುತವಾದ ಭೌಗೋಳಿಕ ರಾಜಕೀಯ ಬಹುಮಾನವೆಂದು ಪರಿಗಣಿಸುತ್ತದೆ. ಮಡುರೊ ಅವರನ್ನು ಅಧಿಕಾರದಿಂದ ಕಿತ್ತುಹಾಕಿ, ತಮಗೆ ಬೇಕಾದ ‘ಕೈಗೊಂಬೆ ಸರ್ಕಾರ’ವನ್ನು ಸ್ಥಾಪಿಸುವ ಮೂಲಕ, ಅಮೆರಿಕವು ವೆನೆಜುವೆಲಾದ ಸಾರ್ವಭೌಮತೆಯನ್ನು ಕಾಲಡಿ ಹಾಕಿ ತುಳಿದಿದೆ. ಇದು 21ನೇ ಶತಮಾನದ ವಸಾಹತುಶಾಹಿ ಲೂಟಿಯ ಪರಮಾವಧಿಯಾಗಿದ್ದು, ಜಾಗತಿಕ ಪೂರೈಕೆ ಸರಪಳಿ ಮತ್ತು ಅಧಿಕಾರ ಸಮತೋಲನವನ್ನು ತನ್ನ ಲಾಭಕ್ಕೆ ತಿರುಗಿಸಿಕೊಳ್ಳುವ ಅಮೆರಿಕದ ದುರಾಸೆಯನ್ನು ಜಗಜ್ಜಾಹೀರು ಮಾಡಿದೆ.

ಈ ದುರಾಕ್ರಮಣದ ಪ್ರಮುಖ ಗುರಿ ವೆನೆಜುವೆಲಾದ ತೈಲ ಸಂಪತ್ತು. ವೆನೆಜುವೆಲಾವು ವಿಶ್ವದ ಅತಿದೊಡ್ಡ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದಿದೆ. ಇದು ಅಂದಾಜು 300 ಶತಕೋಟಿ ಬ್ಯಾರೆಲ್‌ಗಳಿಗೂ ಅಧಿಕವಾಗಿದ್ದು, ಸೌದಿ ಅರೇಬಿಯಾವನ್ನೂ ಮೀರಿಸುತ್ತದೆ. ಅಮೆರಿಕದ ಹಿತಾಸಕ್ತಿ ಇಲ್ಲಿ ಸ್ಪಷ್ಟವಾಗಿದೆ; ಒಪೆಕ್ (OPEC) ರಾಷ್ಟ್ರಗಳ ತೈಲ ಪೂರೈಕೆ ನಿರ್ವಹಣೆಯ ವಿರುದ್ಧ ಒತ್ತಡ ಹೇರಲು ವೆನೆಜುವೆಲಾದ ತೈಲವನ್ನು ಬಳಸಿಕೊಳ್ಳುವುದು ಅದರ ತಂತ್ರ. ಜಾಗತಿಕ ಬಿಕ್ಕಟ್ಟುಗಳ ಸಮಯದಲ್ಲಿ ತೈಲ ಬೆಲೆಗಳನ್ನು ತನಗೆ ಬೇಕಾದಂತೆ ಸ್ಥಿರಗೊಳಿಸಲು ಅಥವಾ ಅಸ್ಥಿರಗೊಳಿಸಲು, ಮತ್ತು ಇಂಧನ ಮಾರುಕಟ್ಟೆಗಳ ಮೂಲಕ ಜಾಗತಿಕ ಹಣದುಬ್ಬರದ ಮೇಲೆ ಹಿಡಿತ ಸಾಧಿಸಲು ಅಮೆರಿಕ ಹವಣಿಸುತ್ತಿದೆ. ಪಶ್ಚಿಮ ಗೋಳಾರ್ಧದ(ಉತ್ತರ ಮತ್ತು ದಕ್ಷಿಣ ಅಮೆರಿಕಾ) ಇಂಧನ ಹರಿವಿನ ಮೇಲೆ ಏಕಸ್ವಾಮ್ಯ ಸಾಧಿಸಿ, ತನ್ನ ಬಂಡವಾಳ ಮತ್ತು ತಂತ್ರಜ್ಞಾನದ ಮೂಲಕ ವೆನೆಜುವೆಲಾದ ತೈಲವನ್ನು ವಾಷಿಂಗ್ಟನ್‌ನ ನಿಯಮಗಳಿಗೆ ಅನುಗುಣವಾಗಿ ಬಳಸಿಕೊಳ್ಳುವುದು ಟ್ರಂಪ್ ಆಡಳಿತದ ಮೂಲ ಉದ್ದೇಶವಾಗಿದೆ.
ಇದನ್ನು ಓದಿದ್ದೀರಾ? ಯುದ್ಧದ ಹೆಸರಲ್ಲಿ ವ್ಯಾಪಾರ: ಅಮೆರಿಕದ ‘ರಕ್ತಸಿಕ್ತ’ ಅರ್ಥವ್ಯವಸ್ಥೆ ಮತ್ತು ಜಾಗತಿಕ ಅಶಾಂತಿ
ತೈಲದಷ್ಟೇ ಮಹತ್ವದ್ದು ವೆನೆಜುವೆಲಾದಲ್ಲಿರುವ ನೈಸರ್ಗಿಕ ಅನಿಲದ ನಿಕ್ಷೇಪ. ಸುಮಾರು 200 ಟ್ರಿಲಿಯನ್ ಘನ ಅಡಿಗಳಷ್ಟು ನೈಸರ್ಗಿಕ ಅನಿಲವನ್ನು ಹೊಂದಿರುವ ವೆನೆಜುವೆಲಾ, ಇಂಧನ ಆಘಾತಗಳಿಂದ ತತ್ತರಿಸುತ್ತಿರುವ ಜಗತ್ತಿನಲ್ಲಿ ಸುಪ್ತ ಶಕ್ತಿಯಾಗಿ ನಿಂತಿದೆ. ಅಮೆರಿಕದ ಪಾಲಿಗೆ ಇದು ಕೇವಲ ಇಂಧನವಲ್ಲ, ಅದೊಂದು ಭೌಗೋಳಿಕ ರಾಜಕೀಯ ವಿಮೆ. ಯುರೋಪ್ ಮಾರುಕಟ್ಟೆಯಲ್ಲಿ ರಷ್ಯಾ ಮತ್ತು ಇತರ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ಮತ್ತು ಅಟ್ಲಾಂಟಿಕ್ ಸಾಗರದ ಆಚೆಗಿನ ಇಂಧನ ರಾಜತಾಂತ್ರಿಕತೆಯಲ್ಲಿ ತನ್ನ ಚೌಕಾಶಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅಮೆರಿಕ ಈ ಅನಿಲ ಸಂಪತ್ತಿನ ಮೇಲೆ ಕಣ್ಣಿಟ್ಟಿದೆ. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ, ಭವಿಷ್ಯದ ಎಲ್‌ಎನ್‌ಜಿ (LNG) ರಫ್ತು ಮಾರುಕಟ್ಟೆಯನ್ನು ತನ್ನದಾಗಿಸಿಕೊಳ್ಳುವ ಕುಟಿಲ ತಂತ್ರವಿದಾಗಿದೆ.
ಕೈಗಾರಿಕಾ ಮತ್ತು ಮಿಲಿಟರಿ ಶಕ್ತಿಯನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿಯೂ ವೆನೆಜುವೆಲಾ ಅಮೆರಿಕಕ್ಕೆ ಆಯಕಟ್ಟಿನ ತಾಣವಾಗಿದೆ. ಬಿಲಿಯಗಟ್ಟಲೆ ಟನ್‌ಗಳಷ್ಟು ಕಬ್ಬಿಣದ ಅದಿರು ಮತ್ತು ನೂರಾರು ಮಿಲಿಯನ್ ಟನ್‌ಗಳಷ್ಟು ಕಲ್ಲಿದ್ದಲು ನಿಕ್ಷೇಪಗಳು ಇಲ್ಲಿವೆ. ಯಾವುದೇ ದೇಶದ ಮಿಲಿಟರಿ ಉತ್ಪಾದನೆಗೆ ಉಕ್ಕು ಬೆನ್ನೆಲುಬಿದ್ದಂತೆ. ರೈಲ್ವೆ, ಬಂದರುಗಳು ಮತ್ತು ಯುದ್ಧ ಸರಂಜಾಮುಗಳ ತಯಾರಿಕೆಗೆ ಅತ್ಯಗತ್ಯವಾದ ಈ ಸಂಪನ್ಮೂಲಗಳನ್ನು ನಿಯಂತ್ರಿಸುವುದು ಅಮೆರಿಕದ ಯುದ್ಧದಾಹಕ್ಕೆ ನೀರೆರೆದಂತಾಗುತ್ತದೆ. ಜಾಗತಿಕ ರಾಜಕೀಯ ಪೈಪೋಟಿಯಲ್ಲಿ, ಇಂತಹ ಭಾರೀ ಕೈಗಾರಿಕಾ ಸಂಪನ್ಮೂಲಗಳು ಯುದ್ಧದ ಸಮಯದಲ್ಲಿ ‘ಕಾರ್ಯತಂತ್ರದ ಮೀಸಲು’ಗಳಂತೆ ಕಾರ್ಯನಿರ್ವಹಿಸುತ್ತವೆ. ಅಮೆರಿಕದ ರಕ್ಷಣಾ ವಲಯಕ್ಕೆ ಈ ಕಚ್ಚಾ ವಸ್ತುಗಳ ನಿರಂತರ ಪೂರೈಕೆ ಅತ್ಯಗತ್ಯವಾಗಿರುವುದರಿಂದಲೇ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಲ್ಲಿನ ಗಣಿಗಳನ್ನು ವಶಪಡಿಸಿಕೊಳ್ಳಲು ಸಂಚು ರೂಪಿಸಲಾಗಿದೆ.

ಅಮೆರಿಕದ ಕಣ್ಣು ಕುಕ್ಕುತ್ತಿರುವ ಮತ್ತೊಂದು ಸಂಪತ್ತು ‘ಚಿನ್ನ’. 8,000 ಟನ್‌ಗಳಿಗಿಂತಲೂ ಹೆಚ್ಚು ಚಿನ್ನದ ಸಂಪನ್ಮೂಲಗಳನ್ನು ಹೊಂದಿರುವ ವೆನೆಜುವೆಲಾ, ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪಗಳಲ್ಲಿ ಒಂದನ್ನು ತನ್ನದಾಗಿಸಿಕೊಂಡಿದೆ. ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಡಾಲರ್ ಮೌಲ್ಯ ಕುಸಿಯುತ್ತಿರುವ ಮತ್ತು ಸಾಲದ ಒತ್ತಡ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಚಿನ್ನವು ಸಾರ್ವಭೌಮ ಭದ್ರತೆಯನ್ನು ಒದಗಿಸುತ್ತದೆ. ಕಾಗದದ ಹಣದ ಮೇಲಿನ ನಂಬಿಕೆ ಕಡಿಮೆಯಾದಾಗ, ಚಿನ್ನವೇ ವಿಶ್ವಾಸಾರ್ಹತೆಯ ಸಂಕೇತವಾಗುತ್ತದೆ. ಭವಿಷ್ಯದಲ್ಲಿ ಕಮಾಡಿಟಿ-ಬ್ಯಾಕ್ಡ್ (Commodity-backed) ಹಣಕಾಸು ವ್ಯವಸ್ಥೆ ಜಾರಿಗೆ ಬಂದರೆ, ವೆನೆಜುವೆಲಾದ ಚಿನ್ನದ ಮೇಲೆ ನಿಯಂತ್ರಣ ಸಾಧಿಸುವ ಅಮೆರಿಕ ಆರ್ಥಿಕವಾಗಿಯೂ ತನ್ನ ಅಧಿಪತ್ಯವನ್ನು ಮುಂದುವರಿಸಲು ಹಾದಿ ಸುಗಮವಾಗಲಿದೆ.
ಆಧುನಿಕ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಚೀನಾದ ಪ್ರಾಬಲ್ಯವನ್ನು ಮುರಿಯಲು ಅಮೆರಿಕಕ್ಕೆ ವೆನೆಜುವೆಲಾದ ಖನಿಜಗಳು ಬೇಕೇ ಬೇಕು. ಅಲ್ಲಿನ ಮಣ್ಣಿನಲ್ಲಿರುವ ಅಗಾಧ ಪ್ರಮಾಣದ ನಿಕಲ್, ತಾಮ್ರ ಮತ್ತು ಫಾಸ್ಫೇಟ್‌ಗಳು ಇನ್ನೂ ಬಳಕೆಯಾಗದೆ ಉಳಿದಿವೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳು, ಸೆಮಿಕಂಡಕ್ಟರ್‌ಗಳು ಮತ್ತು ರಕ್ಷಣಾ ತಂತ್ರಜ್ಞಾನಕ್ಕೆ ಈ ಖನಿಜಗಳು ಕಚ್ಚಾ ವಸ್ತುಗಳಾಗಿವೆ. ಪ್ರಸ್ತುತ ಈ ಪೂರೈಕೆ ಸರಪಳಿಯ ಮೇಲೆ ಚೀನಾ ಹಿಡಿತ ಸಾಧಿಸಿದೆ. ಅದನ್ನು ಮುರಿಯಲು ಮತ್ತು ಭವಿಷ್ಯದ ತಂತ್ರಜ್ಞಾನ ಯುದ್ಧದಲ್ಲಿ ಮೇಲುಗೈ ಸಾಧಿಸಲು ಅಮೆರಿಕ ವೆನೆಜುವೆಲಾವನ್ನು ಬಲಿಪಶು ಮಾಡುತ್ತಿದೆ. ಇದು ಕೇವಲ ಇಂದಿನ ಅಗತ್ಯವಲ್ಲ, ಇದು ವೆನೆಜುವೆಲಾದ ಮಣ್ಣಿನಲ್ಲಿ ಅಡಗಿರುವ ದೀರ್ಘಕಾಲೀನ ಕಾರ್ಯತಂತ್ರದ ಲಾಭವಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಭವಿಷ್ಯದ ಜಗತ್ತು ಎದುರಿಸಲಿರುವ ನೀರಿನ ಬಿಕ್ಕಟ್ಟನ್ನು ಮನಗಂಡು ಅಮೆರಿಕ ನಡೆಸಿರುವ ತಂತ್ರಗಾರಿಕೆ ಇಲ್ಲಿದೆ. ವೆನೆಜುವೆಲಾವು ವಿಶ್ವದ ಶೇ 2 ರಷ್ಟು ನವೀಕರಿಸಬಹುದಾದ ಸಿಹಿನೀರಿನ ಸಂಗ್ರಹವನ್ನು ತನ್ನದಾಗಿಸಿಕೊಂಡಿದೆ. ಹವಾಮಾನ ಬದಲಾವಣೆಯಿಂದ ತತ್ತರಿಸಲಿರುವ ಮುಂದಿನ ದಿನಗಳಲ್ಲಿ, ತೈಲಕ್ಕಿಂತ ನೀರು ಹೆಚ್ಚು ಮೌಲ್ಯಯುತವಾಗಲಿದೆ. ದೀರ್ಘಕಾಲೀನ ಆಹಾರ ಮತ್ತು ಕೃಷಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಜಲಸಂಪತ್ತು ನಿರ್ಣಾಯಕ. ಕೃಷಿ ರಫ್ತುಗಳ ಮೂಲಕ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇದು ನೆರವಾಗುತ್ತದೆ. ಅಮೆರಿಕದ ಕಾರ್ಪೊರೇಟ್ ಶಕ್ತಿಗಳು ಈ ಅಮೂಲ್ಯ ಜಲಸಂಪನ್ಮೂಲವನ್ನು ಖಾಸಗೀಕರಣಗೊಳಿಸಿ, ಲಾಭ ಮಾಡಿಕೊಳ್ಳುವ ಹುನ್ನಾರವನ್ನು ಹೊಂದಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಒಟ್ಟಾರೆಯಾಗಿ, ವೆನೆಜುವೆಲಾ ಮೇಲಿನ ಈ ದಾಳಿಯು ಅಮೆರಿಕದ ಸಾಮ್ರಾಜ್ಯಶಾಹಿ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಅಮೆರಿಕದ ಕಾರ್ಯಾಚರಣೆಯ ನಂತರ, ವೆನೆಜುವೆಲಾ ಕೇವಲ ಪ್ರಾದೇಶಿಕ ಬಿಕ್ಕಟ್ಟಿನ ತಾಣವಾಗಿ ಉಳಿದಿಲ್ಲ; ಬದಲಾಗಿ, ಇಂಧನ, ಪೂರೈಕೆ ಸರಪಳಿ ಮತ್ತು ಆರ್ಥಿಕ ಶಕ್ತಿಯ ಮೇಲಿನ ಜಾಗತಿಕ ಸ್ಪರ್ಧೆಯ ನಿರ್ಣಾಯಕ ಕೇಂದ್ರವಾಗಿ ಬದಲಾಗಿದೆ. ಡ್ರಗ್ಸ್ ವಿರುದ್ಧದ ಹೋರಾಟ ಅಥವಾ ಪ್ರಜಾಪ್ರಭುತ್ವದ ಮರುಸ್ಥಾಪನೆ ಎಂಬುದೆಲ್ಲವೂ ಕೇವಲ ತೋರಿಕೆಯ ಮಾತುಗಳು. ಅದರ ಅಂತರಾಳದಲ್ಲಿರುವುದು ಸಂಪನ್ಮೂಲಗಳ ಲೂಟಿ ಮತ್ತು ಜಾಗತಿಕ ಪ್ರಭುತ್ವದ ವಿಸ್ತರಣೆ. ವೆನೆಜುವೆಲಾದ ಜನತೆ ತಮ್ಮ ದೇಶದ ಸಂಪತ್ತಿನ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ ಮತ್ತು ಅಮೆರಿಕದ ಕಾರ್ಪೊರೇಟ್ ಕುಳಗಳು ಆ ಸಂಪತ್ತಿನ ಮೇಲೆ ರಣಹದ್ದುಗಳಂತೆ ಮುಗಿಬೀಳುತ್ತಿವೆ ಎಂಬುದೇ ಇಂದಿನ ಕಟು ಸತ್ಯ.





