ರಾಜ್ಯ ಸರ್ಕಾರದ ಮುಂಬರುವ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಕೃತಿ ಸೌಂದರ್ಯದ ಜತೆಗೆ ಸವಾಲುಗಳನ್ನೂ ಒಟ್ಟಾಗಿ ಹೊದ್ದಿರುವ ಉತ್ತರ ಕನ್ನಡ ಜಿಲ್ಲೆಯು ಈ ಬಾರಿಯಾದರೂ ಸರ್ಕಾರ ಭರವಸೆ ನೀಡುವುದು ಬಿಟ್ಟು ಅಭಿವೃದ್ಧಿಯ ಭಾಗ್ಯ ಕರುಣಿಸಲಿದೆಯೇ ಎಂದು ಆಶಾಭಾವನೆಯಿಂದ ನೋಡುತ್ತಿದೆ.
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲಾ ಯೋಜನಾ ಸಮಿತಿಯು ಈಗಾಗಲೇ ಸುಮಾರು 13,800 ಕೋಟಿ ರೂಪಾಯಿಗಳ ಬೃಹತ್ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಬಾರಿ ಕೇವಲ ಅಂಕಿ-ಅಂಶಗಳ ಆಟವಾಗದೆ, ಜಿಲ್ಲೆಯ ದಶಕಗಳ ಕಾಲದ ಜ್ವಲಂತ ಸಮಸ್ಯೆಗಳಿಗೆ ಬಜೆಟ್‌ನಲ್ಲಿ ಪರಿಹಾರ ಸಿಗಲಿದೆಯೇ ಎಂದು ಜಿಲ್ಲೆಯ ಜನರು ಎದುರು ನೋಡುತ್ತಿದ್ದಾರೆ.
ಅಂಕಿ-ಅಂಶಗಳಲ್ಲಿ ಯಾರಿಗೆ ಎಷ್ಟು ಪಾಲು?
ಜಿಲ್ಲಾ ಯೋಜನಾ ಸಮಿತಿಯು ಜಿಲ್ಲೆಯ 46 ಇಲಾಖೆಗಳ ಬೇಡಿಕೆಗಳನ್ನು ಕ್ರೋಢೀಕರಿಸಿ ಸಲ್ಲಿಸಿರುವ ಈ ಪ್ರಸ್ತಾವನೆಯಲ್ಲಿ ಪ್ರಮುಖವಾಗಿ ಪೌರಾಡಳಿತ ಇಲಾಖೆಗೆ 3,671 ಕೋಟಿ ರೂಪಾಯಿ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ 2,474 ಕೋಟಿ ರೂಪಾಯಿಗಳ ಬೇಡಿಕೆ ಇಡಲಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳ ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಸುಮಾರು 6,667 ಕೋಟಿ ರೂಪಾಯಿಗಳನ್ನು ಮೀಸಲಿಡುವಂತೆ ಮನವಿ ಮಾಡಲಾಗಿದೆ. ವಿಶೇಷವೆಂದರೆ, 15 ವರ್ಷಗಳಿಂದ ನಿಷ್ಕ್ರಿಯವಾಗಿದ್ದ ಜಿಲ್ಲಾ ಯೋಜನಾ ಸಮಿತಿಯು ಈ ಬಾರಿ ತರಾತುರಿಯಲ್ಲಾದರೂ ಸಭೆ ನಡೆಸಿ ಜನರ ಧ್ವನಿಯನ್ನು ಸರ್ಕಾರದ ಮಟ್ಟಕ್ಕೆ ತಲುಪಿಸುವ ಪ್ರಯತ್ನ ಮಾಡಿದೆ.
ಇತ್ತೀಚೆಗೆ ಮುಖ್ಯಮಂತ್ರಿಗಳು ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿರುವುದು ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಹೆಜ್ಜೆಯಾಗಿದೆ. ಆದರೆ ಕಟ್ಟಡ ನಿರ್ಮಾಣ ಮತ್ತು ಉದ್ಘಾಟನೆಯಷ್ಟೇ ಸಾಕಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಆಸ್ಪತ್ರೆಯಲ್ಲಿ ಪರಿಣಿತ ವೈದ್ಯರು, ಸುಸಜ್ಜಿತ ಪ್ರಯೋಗಾಲಯಗಳು ಮತ್ತು ತುರ್ತು ಚಿಕಿತ್ಸಾ ಸೌಲಭ್ಯಗಳಿಗೆ ವಿಶೇಷ ಅನುದಾನ ಮೀಸಲಿಡಬೇಕು. ಜೊತೆಗೆ ಶಿರಸಿ ಆಸ್ಪತ್ರೆಗೆ ಜಿಲ್ಲಾ ಆಸ್ಪತ್ರೆ ಹುದ್ದೆ ನೀಡಬೇಕು ಹಾಗೂ ಅರಣ್ಯದಂಚಿನ ಗ್ರಾಮಗಳಿಗೂ ಸಮರ್ಪಕ ಆರೋಗ್ಯ ಸೇವೆ ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ.
ಉದ್ಯೋಗಾವಕಾಶದ ಕೊರತೆ:
ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆಗಳ ಕೊರತೆಯಿಂದ ಜಿಲ್ಲೆಯ ಸುಶಿಕ್ಷಿತ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು ಹಾಗೂ ಹೊರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಸ್ಥಳೀಯ ಸಂಪನ್ಮೂಲ ಆಧಾರಿತ ಪರಿಸರ ಸ್ನೇಹಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬಜೆಟ್‌ನಲ್ಲಿ ಪ್ರೋತ್ಸಾಹ ನೀಡಿದರೆ ಮಾತ್ರ ವಲಸೆ ತಡೆಯಲು ಸಾಧ್ಯ. ಉದ್ಯೋಗ ಸೃಷ್ಟಿ ಯೋಜನೆಗಳು ಜಾರಿಯಾದರೆ ಯುವಶಕ್ತಿಯನ್ನು ಜಿಲ್ಲೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವೆಂಬುದು ತಜ್ಞರ ಅಭಿಪ್ರಾಯ.
ಪ್ರವಾಸೋದ್ಯಮದ ಕಾಶಿಗೆ ಬೇಕಿದೆ ಕಾಯಕಲ್ಪ:
ಜಲಪಾತಗಳ ಜಿಲ್ಲೆ, ಪ್ರವಾಸಿ ತಾಣಗಳ ಬೀಡು ಎಂದು ಹೆಸರಾಗಿದ್ದರೂ ಉತ್ತರ ಕನ್ನಡದ ಪ್ರವಾಸೋದ್ಯಮ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಜೋಗ್ (ಜಿಲ್ಲೆಯ ಗಡಿ ಭಾಗ), ಉಂಚಳ್ಳಿ, ವಿಭೂತಿ, ಮಾಗೊಡ ಫಾಲ್ಸ್, ಸಾತೋಡ ಫಾಲ್ಸ್, ಶರಾವತಿ ಹಿನ್ನೀರಿನ ಪ್ರದೇಶ, ಅಪ್ಸರಕೊಂಡ, ಯಾಣ, ಮುರ್ಡೇಶ್ವರ, ಗೋಕರ್ಣ ಸೇರಿದಂತೆ ಅನೇಕ ಪ್ರಕೃತಿ ದತ್ತವಾಗಿ ಬಂದಿರುವ ಜಲಪಾತಗಳು ಹಾಗೂ ಕರಾವಳಿಯ ಬೀಚ್‌ಗಳಲ್ಲಿ ಮೂಲಸೌಕರ್ಯ ವೃದ್ಧಿ, ಸುಸಜ್ಜಿತ ರಸ್ತೆಗಳು ಮತ್ತು ಪ್ರವಾಸಿಗರ ಭದ್ರತೆಗೆ ಬಜೆಟ್‌ನಲ್ಲಿ ಬಲ ಸಿಗಬೇಕಿದೆ.


ಪ್ರವಾಸೋದ್ಯಮವನ್ನೇ ಒಂದು ಉದ್ಯಮವಾಗಿ ಪರಿಗಣಿಸಿ ಬಜೆಟ್‌ನಲ್ಲಿ ಯೋಜನೆಗಳನ್ನು ಘೋಷಿಸಿದರೆ ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಚೈತನ್ಯ ಸಿಗಲಿದೆ.
ಜಿಲ್ಲೆಯ ಸುದೀರ್ಘ ಕರಾವಳಿ ತೀರದ ಮೀನುಗಾರರು ಸೀಮೆಎಣ್ಣೆ ಸಬ್ಸಿಡಿ, ಹೂಳೆತ್ತುವಿಕೆ ಮತ್ತು ಸುಸಜ್ಜಿತ ಮೀನುಗಾರಿಕಾ ಬಂದರುಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. “ಪ್ರತಿ ಬಾರಿಯೂ ಬಜೆಟ್‌ನಲ್ಲಿ ನಮಗೆ ಭರವಸೆಗಳೇ ಸಿಗುತ್ತವೆ, ಆದರೆ ಸಮುದ್ರದ ಅಲೆಗಳಷ್ಟೇ ನಮ್ಮ ಸಮಸ್ಯೆಗಳು ನಿರಂತರವಾಗಿವೆ. ಸೀಮೆಎಣ್ಣೆ ಸಬ್ಸಿಡಿ ಹಣ ಸಕಾಲಕ್ಕೆ ಸಿಗಬೇಕು ಮತ್ತು ಮಳೆಗಾಲದಲ್ಲಿ ನಮ್ಮ ಜೀವ ರಕ್ಷಣೆಗೆ ಬೇಕಾದ ಆಧುನಿಕ ಉಪಕರಣಗಳನ್ನು ಸರ್ಕಾರವೇ ಒದಗಿಸಬೇಕು” ಎಂದು ಸ್ಥಳೀಯ ಮೀನುಗಾರ ಮುಖಂಡರೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಮೀನುಗಾರಿಕೆ ಇಲಾಖೆಗೆ ಪ್ರಸ್ತಾವಿಸಿರುವ 439 ಕೋಟಿ ರೂಪಾಯಿಗಳಲ್ಲಿ ಈ ಬೇಡಿಕೆಗಳಿಗೆ ಮೊದಲ ಆದ್ಯತೆ ಸಿಗಬೇಕಿದೆ.
ಜಿಲ್ಲೆಯ ಆರ್ಥಿಕ ಬೆನ್ನೆಲುಬಾಗಿರುವ ಅಡಕೆ ಹಾಗೂ ಕಾಳುಮೆಣಸು ಬೆಳೆಗಾರರು ಇಂದು ಹಲವು ರೋಗಬಾಧೆ ಹಾಗೂ ಬೆಲೆ ಕುಸಿತದ ಭೀತಿಯಲ್ಲಿದ್ದಾರೆ. ಹಳದಿ ಎಲೆ ರೋಗ ಹಾಗೂ ಕೊಳೆರೋಗದಿಂದ ಕಂಗೆಟ್ಟಿರುವ ರೈತರಿಗೆ ಈ ಬಜೆಟ್‌ನಲ್ಲಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆಯಾಗಬೇಕಿದೆ. ಕೇವಲ ಪರಿಹಾರ ಧನ ನೀಡದೆ, ವೈಜ್ಞಾನಿಕವಾಗಿ ರೋಗ ತಡೆಗಟ್ಟಲು ಸಂಶೋಧನಾ ಕೇಂದ್ರಗಳಿಗೆ ಅನುದಾನ ಹಾಗೂ ಬೆಳೆ ವಿಮೆಯ ಸರಳೀಕರಣಕ್ಕೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
ಮಳೆಗಾಲದ ಭೀತಿ ಮತ್ತು ಗುಡ್ಡ ಕುಸಿತದ ಆತಂಕ:
ಕಳೆದ ಕೆಲವು ವರ್ಷಗಳಿಂದ ಮಳೆಗಾಲ ಬಂತೆಂದರೆ ಉತ್ತರ ಕನ್ನಡದ ಜನತೆ ನಡುಗುವಂತಾಗಿದೆ. ಕಳೆದ 2 -3 ವರ್ಷಗಳಿಂದ ಮಳೆಗಾಲದಲ್ಲಿ ಸಂಭವಿಸಿದ ಗುಡ್ಡ ಕುಸಿತದಂತಹ ಘಟನೆಗಳು ಮರುಕಳಿಸದಂತೆ ತಡೆಯಲು ‘ಶಾಶ್ವತ ಭೂಕುಸಿತ ತಡೆ ಯೋಜನೆ’ಯ ಅಗತ್ಯವಿದೆ.

ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ವೈಜ್ಞಾನಿಕ ಕಾಮಗಾರಿ ನಡೆಸಲು ಮತ್ತು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ವಿಶೇಷ ಅನುದಾನವನ್ನು ಜಿಲ್ಲೆಯ ಜನರು ನಿರೀಕ್ಷಿಸುತ್ತಿದ್ದಾರೆ.
ಅಘನಾಶಿನಿ-ವರದಾ ನದಿ ಜೋಡಣೆಯಂತಹ ಯೋಜನೆಗಳು ಜಿಲ್ಲೆಯ ಪರಿಸರದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಜನರಲ್ಲಿ ಆತಂಕವಿದೆ. ಇತ್ತ ದಶಕಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡುವ ವಿಚಾರವು ಕೇವಲ ಚುನಾವಣಾ ಭರವಸೆಯಾಗಿಯೇ ಉಳಿದಿದೆ. ಈ ಬಜೆಟ್‌ನಲ್ಲಿ ಅತಿಕ್ರಮಣದಾರರ ಸಮಸ್ಯೆ ಇತ್ಯರ್ಥಕ್ಕೆ ಕಾನೂನಾತ್ಮಕ ಹೋರಾಟಕ್ಕೆ ಪೂರಕವಾದ ನಿಧಿ ಅಥವಾ ಯೋಜನೆ ಘೋಷಣೆಯಾಗಲಿ ಎಂಬುದು ಹತ್ತಾರು ಸಾವಿರ ಕುಟುಂಬಗಳ ಹಕ್ಕೊತ್ತಾಯವಾಗಿದೆ.
ಒಟ್ಟಾರೆಯಾಗಿ, 13,800 ಕೋಟಿ ರೂಪಾಯಿಗಳ ಈ ಬೃಹತ್ ಪ್ರಸ್ತಾವನೆಯಲ್ಲಿ ಎಷ್ಟು ಯೋಜನೆಗಳಿಗೆ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿಸಲಿದ್ದಾರೆ? ಉತ್ತರ ಕನ್ನಡದ ಜನರ ಪಾಲಿಗೆ ಈ ಬಜೆಟ್ ‘ಭಾಗ್ಯ’ ತರಲಿದೆಯೇ ಅಥವಾ ಕೇವಲ ‘ಭರವಸೆ’ಯಾಗಿಯೇ ಉಳಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

“ಪ್ರತಿ ಸಲ ಬಜೆಟ್‌ನಲ್ಲಿ ಮೀನುಗಾರರಿಗೆ ಯೋಜನೆ ಘೋಷಣೆಯಾಗುತ್ತದೆ. ಆದರೆ, ಅದು ನಮ್ಮ ಕೈ ಸೇರುವಾಗ ತುಂಬಾ ತಡವಾಗುತ್ತದೆ. ನಮಗೆ ಮುಖ್ಯವಾಗಿ ಮಳೆಗಾಲದಲ್ಲಿ ಕಡಲು ಅಬ್ಬರಿಸಿದಾಗ ಬದುಕಲು ವಿಶೇಷ ಪರಿಹಾರ ಪ್ಯಾಕೇಜ್ ಬೇಕು ಮತ್ತು ಡೀಸೆಲ್, ಸೀಮೆಎಣ್ಣೆ ಸಬ್ಸಿಡಿ ಹಣ ನೇರವಾಗಿ ನಮ್ಮ ಖಾತೆಗೆ ತಕ್ಷಣ ಜಮೆಯಾಗಬೇಕು. ಈ ಬಜೆಟ್‌ನಲ್ಲಾದರೂ ನಮ್ಮ ಜೆಟ್ಟಿಗಳ ಹೂಳೆತ್ತುವ ಕೆಲಸಕ್ಕೆ ಹಾಗೂ ಕೇಣಿ ಬಂದರು ಯೋಜನೆಗೆ ಶಾಶ್ವತ ಪರಿಹಾರ ಸಿಗುವಂತಾಗಲಿ” ಎನ್ನುತ್ತಾರೆ ಸ್ಥಳೀಯ ಮೀನುಗಾರ ಮುಖಂಡ ಗಣಪತಿ ತಾಂಡೇಲ್.
ಅಡಕೆ ಬೆಳೆಗಾರ ಮಂಜುನಾಥ ಹೆಗಡೆ, “ಅಡಿಕೆ ಬೆಳೆಯೇ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬು. ಆದರೆ ಈಗ ಹಳದಿ ಎಲೆ ರೋಗ ಮತ್ತು ಕೊಳೆರೋಗ ನಮ್ಮನ್ನು ಬೀದಿಗೆ ತರುತ್ತಿವೆ. ಬಜೆಟ್‌ನಲ್ಲಿ ಈ ರೋಗಗಳಿಗೆ ವೈಜ್ಞಾನಿಕ ಪರಿಹಾರ ಕಂಡುಹಿಡಿಯಲು ಸಂಶೋಧನಾ ಕೇಂದ್ರಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಬೆಳೆ ನಷ್ಟವಾದಾಗ ರೈತರಿಗೆ ಅಲೆದಾಟವಿಲ್ಲದೆ ತಕ್ಷಣ ಪರಿಹಾರ ಸಿಗುವಂತಾಗಲಿ. ಹಾಗೂ ಮಳೆ ಮಾಪನ ಯಂತ್ರಗಳ ದುರಸ್ತಿ ಕಾರ್ಯವಾಗಲಿ ಹಾಗೂ ಕಾಳುಮೆಣಸು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು” ಎಂದು ಕೇಳಿಕೊಂಡಿದ್ದಾರೆ.

“ನಮ್ಮ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಂದಿರುವುದು ಖುಷಿಯ ವಿಚಾರ, ಜೊತೆಗೆ ನಮಗೆ ಇಲ್ಲೇ ಉನ್ನತ ಶಿಕ್ಷಣ ಮತ್ತು ಉದ್ಯೋಗ ನೀಡುವ ವಿಶ್ವವಿದ್ಯಾಲಯಗಳು ಹಾಗೂ ಕಾರ್ಖಾನೆಗಳು ಬರಬೇಕು. ಪ್ರತಿ ಬಾರಿ ಪದವಿ ಮುಗಿಸಿದ ಮೇಲೆ ಕೆಲಸ ಹುಡುಕಿ ಬೆಂಗಳೂರು ಅಥವಾ ಬೇರೆ ರಾಜ್ಯಗಳಿಗೆ ಉದ್ಯೋಗ ಅರಸಿ ಹೋಗುವುದು ತಪ್ಪಬೇಕು. ನಮ್ಮ ಜಿಲ್ಲೆಯ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ನಮಗೆ ಸ್ಥಳೀಯವಾಗಿ ಕೆಲಸ ಸಿಗುವಂತಹ ಕೌಶಲ ಅಭಿವೃದ್ಧಿ ಯೋಜನೆಗಳನ್ನು ಸರ್ಕಾರ ಘೋಷಿಸಬೇಕು ಹಾಗೂ ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಇರುವ ಮೊಬೈಲ್ ನೆಟ್ವರ್ಕ್ ಸಮಸ್ಯೆ ಮತ್ತು ಸಾರಿಗೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು” ಎಂದು ಯಲ್ಲಾಪುರದ ಬಿ.ಎಡ್ ವಿದ್ಯಾರ್ಥಿನಿ ಅಂಜಲಿ ನಾಯ್ಕ್ ತಿಳಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ | 5 ಸಾವಿರ ಅಪಘಾತ, 700ಕ್ಕೂ ಹೆಚ್ಚು ಸಾವು; ರಸ್ತೆಗಳೋ ಮೃತ್ಯು ಕೂಪಗಳೋ?
ಈ ಬಾರಿ ಬಜೆಟ್‌ನಲ್ಲಿ ಭರವಸೆಗಳ ಊದುವುದ ಬಿಟ್ಟು, ಅಗತ್ಯ ಅನುದಾನ, ಕಾರ್ಯಗತಗೊಳಿಸುವ ಸ್ಪಷ್ಟ ರೋಡ್‌ಮ್ಯಾಪ್ ಮತ್ತು ಸ್ಥಳೀಯ ಅಗತ್ಯಗಳಿಗೆ ತಕ್ಕ ಯೋಜನೆಗಳು ಘೋಷಣೆಯಾಗಬೇಕಿವೆ. ಇಲ್ಲದಿದ್ದರೆ, ಪ್ರಕೃತಿ ಸಂಪತ್ತಿನಿಂದ ಶ್ರೀಮಂತವಾಗಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದ ಉತ್ತರ ಕನ್ನಡ ಜಿಲ್ಲೆ ಮತ್ತೊಮ್ಮೆ ನಿರೀಕ್ಷೆಗಳಲ್ಲೇ ಉಳಿಯಬೇಕಾದೀತು. ಈ ಬಜೆಟ್ ಉತ್ತರ ಕನ್ನಡದ ಜನರ ಪಾಲಿಗೆ ʼಭಾಗ್ಯʼವಾಗುತ್ತದೆಯೇ ಅಥವಾ ಎಂದಿನಂತೆ ʼಭರವಸೆʼಯಲ್ಲೇ ಸೀಮಿತವಾಗುತ್ತದೆಯೇ ಎಂಬುದನ್ನು ಜನತೆ ಕಾದು ನೋಡುತ್ತಿದೆ.




