ದೇಶಾದ್ಯಂತ ಸದ್ಯ ʼಗ್ಯಾಸ್ʼ ಗಂಡಾಂತರ ಶುರುವಾಗಿದೆ. ಅದರ ಬಿಸಿ ಕರ್ನಾಟದಕ್ಕೂ ತಟ್ಟುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಅಡುಗೆ ಅನಿಲ ಭಾರೀ ಸದ್ದು ಮಾಡುತ್ತಿದೆ. ಹಿಂದೆ ಕೋವಿಡ್-19 ಕಾಲದಲ್ಲಿ ಎದುರಾಗಿದ್ದಂತಹ ಒಂದು ಬಗೆಯ ಅನಿಶ್ಚಿತತೆ ಮತ್ತು ಭಯ ಈಗ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ವಿಚಾರದಲ್ಲೂ ಕಾಣಿಸಿಕೊಳ್ಳುತ್ತಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಕಾರ್ಮೋಡ ಮತ್ತು ಇಂಧನ ಆಮದಿನ ವ್ಯತ್ಯಯದ ಸುದ್ದಿಗಳು ಜನರಲ್ಲಿ ಆತಂಕ ಸೃಷ್ಟಿಸಿದ್ದು, ಸಿಲಿಂಡರ್ ಸಿಗುವುದಿಲ್ಲವೇನೋ ಎಂಬ ಭಯದಿಂದ ಗ್ರಾಹಕರು ಮುಗಿಬಿದ್ದು ಬುಕಿಂಗ್ ಮಾಡುತ್ತಿದ್ದಾರೆ. ಈ ಅನಗತ್ಯ ಆತುರವೇ ಈಗ ಜಿಲ್ಲೆಯಲ್ಲಿ ಕೃತಕ ಅಭಾವಕ್ಕೆ ದಾರಿ ಮಾಡಿಕೊಟ್ಟಿದೆ. ಅದರಲ್ಲೂ ಗೃಹಿಣಿಯರು ಈ ಆತಂಕದಿಂದ ಹೆಚ್ಚು ತಡವರಿಸುತ್ತಿದ್ದು, ತಾವು ನೆಮ್ಮದಿಯಾಗಿರದೇ ಮನೆಯ ಗಂಡಸರಿಗೂ ನೆಮ್ಮದಿ ಕೊಡದೇ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ಹೆಚ್ಚಿದ ಬೇಡಿಕೆ, ವಿಳಂಬವಾಗುತ್ತಿರುವ ಪೂರೈಕೆ: ಸಾಮಾನ್ಯವಾಗಿ ಜಿಲ್ಲೆಯಲ್ಲಿ ದಿನವೊಂದಕ್ಕೆ 200 ರಿಂದ 300 ರಷ್ಟಿದ್ದ ಬುಕಿಂಗ್ ಪ್ರಮಾಣ ಈಗ ದಿಢೀರನೆ ಒಂದು ಸಾವಿರದ ಗಡಿ ದಾಟಿದೆ. ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲವಾದರೂ, ಬೇಡಿಕೆ ಏಕಾಏಕಿ ಹೆಚ್ಚಾಗಿರುವುದರಿಂದ ಮನೆ ಬಾಗಿಲಿಗೆ ಬರಬೇಕಾದ ಸಿಲಿಂಡರ್ ಒಂದೆರಡು ದಿನ ತಡವಾಗುತ್ತಿದೆ. ಈ ವಿಳಂಬವೇ ಜನರ ಭಯವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಸದ್ಯ ವಾಣಿಜ್ಯ ಉದ್ದೇಶದ ಸಿಲಿಂಡರ್ ವಿತರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಇದು ಹೋಟೆಲ್ ಉದ್ಯಮ ಮತ್ತು ಸಮಾರಂಭಗಳ ಅಡುಗೆಯ ಮೇಲೆ ಬಿಸಿ ಮುಟ್ಟಿಸಿದೆ.
ಅಂಕಿ-ಅಂಶಗಳ ಇಣುಕು ನೋಟ: ಜಿಲ್ಲೆಯ ಅಡುಗೆ ಅನಿಲದ ಬಳಕೆಯ ಚಿತ್ರಣ ಗಮನಾರ್ಹವಾಗಿದೆ. ಒಟ್ಟು 4,23,036 ಗ್ರಾಹಕರನ್ನು ಹೊಂದಿರುವ ಜಿಲ್ಲೆಯಲ್ಲಿ, 1,54,477 ಜನರು ಒಂದು ಸಿಲಿಂಡರ್ ಸಂಪರ್ಕ ಹೊಂದಿದ್ದರೆ, 2,68,559 ಜನರು ಎರಡು ಸಿಲಿಂಡರ್ ಸಂಪರ್ಕ ಹೊಂದಿದ್ದಾರೆ.
ಜಿಲ್ಲೆಯ ದೈನಂದಿನ ಅವಶ್ಯಕತೆಗೆ ಸುಮಾರು 9,300 ಸಿಲಿಂಡರ್‌ಗಳು ಬೇಕಾಗುತ್ತವೆ. ತಾಲೂಕುವಾರು ನೋಡುವುದಾದರೆ, ಶಿರಸಿಯಲ್ಲಿ ಅತಿ ಹೆಚ್ಚು ಅಂದರೆ 64,934 ಸಂಪರ್ಕಗಳಿದ್ದರೆ, ಕಾರವಾರದಲ್ಲಿ 51,763, ಭಟ್ಕಳ 51,584, ಹಳಿಯಾಳ 32,447, ಅಂಕೋಲಾ 28,224, ಮುಂಡಗೋಡಿನಲ್ಲಿ 27,604, ದಾಂಡೇಲಿ 27,380, ಯಲ್ಲಾಪುರ 24,153, ಸಿದ್ದಾಪುರದಲ್ಲಿ 20,850, ಹೊನ್ನಾವರ 18,770 ಹಾಗೂ ಕುಮಟಾದಲ್ಲಿ 12,214 ಅಡುಗೆ ಅನಿಲ ಸಂಪರ್ಕಗಳಿವೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲೆಯಲ್ಲಿ ಸದ್ಯ ಯಾವುದೇ ಗಂಭೀರವಾದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗೃಹ ಬಳಕೆ, ಹಾಸ್ಟೆಲ್ ಹಾಗೂ ಶಾಲೆಗಳಿಗೆ ಅಗತ್ಯವಿರುವಷ್ಟು ಸಿಲಿಂಡರ್‌ಗಳು ಲಭ್ಯವಿವೆ. ಕೇವಲ ವಾಣಿಜ್ಯ ಉದ್ದೇಶದ ಅನಿಲ ಪೂರೈಕೆಯಲ್ಲಿ ಮಾತ್ರ ವ್ಯತ್ಯಯ ಉಂಟಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿ, ಮುಗಿಬಿದ್ದು ಬುಕಿಂಗ್ ಮಾಡಬಾರದು ಎಂದು ಅವರು ವಿನಂತಿಸಿದ್ದಾರೆ. ಇನ್ನೊಂದು ವಾರದೊಳಗೆ ಪರಿಸ್ಥಿತಿ ಮತ್ತೆ ಸಹಜ ಸ್ಥಿತಿಗೆ ಮರಳಲಿದೆ ಎನ್ನುವುದು ಇಲಾಖೆಯ ವಿಶ್ವಾಸ.
ಹಾಸ್ಟೆಲ್ ಮತ್ತು ಶಾಲೆಗಳಿಗೂ ಬಿಸಿ: ಗ್ಯಾಸ್ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯದಿಂದಾಗಿ ವಸತಿ ನಿಲಯಗಳಲ್ಲಿಯೂ ಆತಂಕ ಶುರುವಾಗಿದೆ. ಚಪಾತಿ ಮತ್ತು ದೋಸೆಯಂತಹ ತಿನಿಸುಗಳನ್ನು ಸದ್ಯಕ್ಕೆ ಬೇಯಿಸದಿರಲು ಚರ್ಚೆಗಳು ನಡೆಯುತ್ತಿವೆ. ಅದರ ಬದಲಾಗಿ ಅನ್ನ ಸಾರು ಕೊಡಲು ಮತ್ತು ಊಟದ ಮೆನುವಿನಲ್ಲಿ ಬದಲಾವಣೆ ತರುವ ಸಾಧ್ಯತೆಯಿದೆ ಎಂದು ಹಾಸ್ಟೆಲ್ ವಾರ್ಡನ್ ಒಬ್ಬರು ಹೇಳಿದ್ದಾರೆ. ಅದೇ ರೀತಿ ಮದ್ಯಾಹ್ನದ ಬಿಸಿಯೂಟ ತಯಾರಿಸಲು ಗ್ಯಾಸ್ ಸಿಲಿಂಡರ್ ಬೇಡಿಕೆ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ಶಾಲೆಗಳಿಗೆ ತಕ್ಷಣಕ್ಕೆ ಹೊಸ ಸಿಲಿಂಡರ್ ಸಿಗುತ್ತಿಲ್ಲ ಎಂದು ಶಿಕ್ಷಕರು ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ ಗ್ಯಾಸ್ ಕೊರತೆಯಿಂದ ಹೋಟೆಲ್ ಬಂದ್ ಆಗಿರುವ ಬಗ್ಗೆ ವರದಿಯಾಗಿಲ್ಲ. ಇನ್ನೊಂದೆಡೆ ಮದುವೆ ಮನೆಯ ಬಾಣಸಿಗರು ಕೂಡ ಅಡುಗೆ ಸಿಲಿಂಡರ್‌ಗಾಗಿ ಪರದಾಡುತ್ತಿದ್ದಾರೆ. ಕೆಲವರು ಮದುವೆ ಮನೆಯವರ ಬಳಿಯೇ ಸಿಲಿಂಡರ್ ವ್ಯವಸ್ಥೆ ಮಾಡಿ ಎಂದು ಹೇಳುತ್ತಿರುವ ಮಾತುಗಳು ಕೇಳಿಬರುತ್ತಿವೆ.
ಈ ಆತಂಕದ ನಡುವೆಯೇ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿ ಜನರಿಗೆ ಧೈರ್ಯ ತುಂಬಿದ್ದಾರೆ. ಜಿಲ್ಲೆಯಲ್ಲಿ ದಾಸ್ತಾನು ಸಾಕಷ್ಟಿದ್ದು, ಜನರು ಅನಗತ್ಯವಾಗಿ ಮುಗಿಬಿದ್ದು ಬುಕಿಂಗ್ ಮಾಡಿ ಕೃತಕ ಅಭಾವ ಸೃಷ್ಟಿಸಬಾರದು ಎಂದು ವಿನಂತಿಸಿದ್ದಾರೆ. ವಿಶೇಷವಾಗಿ ಹಾಸ್ಟೆಲ್, ಆಸ್ಪತ್ರೆ ಮತ್ತು ಅಂಗನವಾಡಿಗಳಿಗೆ ಯಾವುದೇ ಅಡಚಣೆಯಾಗದಂತೆ ಸಿಲಿಂಡರ್ ಒದಗಿಸಲು ತೈಲ ಕಂಪನಿಗಳಿಗೆ ಸೂಚಿಸಿದ್ದಾರೆ. ಅಕ್ರಮವಾಗಿ ಸಿಲಿಂಡರ್ ದಾಸ್ತಾನು ಮಾಡುವವರ ವಿರುದ್ಧ ‘ಅಗತ್ಯ ವಸ್ತುಗಳ ಕಾಯ್ದೆ 1955’ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಂಟ್ರೋಲ್ ರೂಂ ಸಂಖ್ಯೆ 08382 229857 ಗೆ ಸಂಪರ್ಕಿಸಲು ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ | ಯುದ್ಧದ ಆತಂಕದ ನಡುವೆಯೂ ಕಾರವಾರಕ್ಕೆ ಬಂದಿಳಿದ ಯುಎಇ ಬಿಟುಮೆನ್ ಹಡಗು
ಯುದ್ಧದ ಸುದ್ದಿಯಿಂದ ಗ್ಯಾಸ್ ಸಿಗಲ್ಲ ಅಂತ ಎಲ್ಲರೂ ಹೇಳುತ್ತಿದ್ದಾರೆ. ಹಾಗಾಗಿ ಮುನ್ನೆಚ್ಚರಿಕೆಯಿಂದ ಬುಕ್ ಮಾಡಿದ್ದೇವೆ. ಆದರೆ ಮೊದಲೆಲ್ಲಾ ಹೇಳಿದ ಕೂಡಲೇ ಬರುತ್ತಿತ್ತು, ಈಗ ಕಾಯುವಂತಾಗಿದೆ ಎನ್ನುತ್ತಾರೆ ಕಾರವಾರದ ಗೃಹಿಣಿ ಸುಜಾತ.
ಇನ್ನು ಮುಂಡಗೋಡ ಹೋಟೆಲ್ ಮಾಲಿಕ ಶಿವು ಮತ್ತಿಗಟ್ಟಿ ಅವರು ಈ ದಿನ ಮಾಧ್ಯಮದೊಂದಿಗೆ ಮಾತನಾಡಿ “ವಾಣಿಜ್ಯ ಸಿಲಿಂಡರ್ ಸಿಗದೇ ಇರುವುದರಿಂದ ಅಡುಗೆಗೆ ತುಂಬಾ ತೊಂದರೆಯಾಗುತ್ತಿದೆ. ಕೆಲವು ಖಾದ್ಯಗಳನ್ನು ಸದ್ಯಕ್ಕೆ ತಯಾರಿಸದಿರಲು ನಿರ್ಧರಿಸಿದ್ದೇವೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಒಟ್ಟಾರೆ, ಜಿಲ್ಲೆಯಲ್ಲಿ ಅಡುಗೆ ಅನಿಲದ ದಾಸ್ತಾನು ಸಾಕಷ್ಟಿದ್ದರೂ, ಜನರ ಮನಸ್ಸಿನಲ್ಲಿರುವ ಯುದ್ಧದ ಭೀತಿ ಮತ್ತು ‘ಅಭಾವವಾಗಬಹುದು’ ಎಂಬ ಊಹೆ ಮಾತ್ರ ಕೃತಕ ಸಮಸ್ಯೆಯನ್ನು ತಂದೊಡ್ಡಿದೆ. ಜನರು ಸಂಯಮ ಕಾಯ್ದುಕೊಂಡರೆ ಶೀಘ್ರವೇ ಎಲ್ಲವೂ ಸುಗಮವಾಗಲಿದೆ.




