ವಿಶ್ವದ ಅತಿ ದೊಡ್ಡ ಸಾಮಾಜಿಕ ಭದ್ರತಾ ಯೋಜನೆ ಎಂಬ ಮೆಚ್ಚುಗೆಗೆ ಪಾತ್ರವಾಗಿದ್ದ ಮನರೇಗಾ ಯೋಜನೆಗೆ, ಕೇಂದ್ರ ಬಿಜೆಪಿ ಸರ್ಕಾರ ವಿಬಿ-ಜಿ ರಾಮ್ ಜಿ ಎಂದು ಹೆಸರು ಬದಲಿಸಿದೆ. ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿ ಕಲ್ಪನೆ ಹೊಂದಿದ್ದ ಗಾಂಧೀ ಹೆಸರನ್ನು ನೇಪಥ್ಯಕ್ಕೆ ಸರಿಸುವ ಜೊತೆಗೆ ಸ್ವರಾಜ್ಯದ ಕನಸನ್ನು ಭಗ್ನಗೊಳಿಸುವ ಹುನ್ನಾರ ಹೂಡಿದೆ ಎನ್ನುವುದು ಹಲವು ಕಾರ್ಮಿಕ ಸಂಘಟನೆಗಳ ಆರೋಪ.
ಜನಪರ ಸಂಘಟನೆಗಳು, ವಿರೋಧ ಪಕ್ಷಗಳು ಕೇಂದ್ರದ ಜನವಿರೋಧಿ ಧೊರಣೆಯನ್ನು ಖಂಡಿಸುತ್ತಿರುವ ನಡುವೆಯೇ ಸಂಸತ್ ನಲ್ಲಿ ವಿಧೇಯಕ ಅಂಗೀಕಾರವಾಗಿದೆ. ರಾಷ್ಟ್ರಪತಿಗಳೂ ಅಂಕಿತ ಹಾಕಿದ್ದಾರೆ.
ಯುಪಿಎ ಸರ್ಕಾರ ತಂದ ಮಹತ್ವದ ಕಾಯ್ದೆಗಳಲ್ಲಿ ಮನರೇಗಾ ಕೂಡ ಒಂದು. ಗ್ರಾಮೀಣ ಭಾಗದ ಅನಕ್ಷರಸ್ಥ ನಿರುದ್ಯೋಗಿಗಳಿಗೆ ಉದ್ಯೋಗ ಖಾತ್ರಿ ಮಾಡುವ ಈ ಕಾಯಿದೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದಿತ್ತು. ಭಾರತದಲ್ಲಿ ಹೊಸ ಆರ್ಥಿಕ ಮಾದರಿ ಹುಟ್ಟು ಹಾಕಿದ್ದು ಈಗ ಇತಿಹಾಸ. ಗ್ರಾಮೀಣ ಭಾಗದ ಮಹಿಳೆಯರು, ದುರ್ಬಲ ವರ್ಗದವರು, ದಲಿತರು, ತಳ ಸಮುದಾಯಗಳು ನೆಮ್ಮದಿಯಿಂದ, ಗೌರವದಿಂದ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದ ಮನರೇಗಾ ಹಳ್ಳಿಯ ಜನರ ಜೀವನಕ್ಕೆ ಹೊಸ ದಿಕ್ಕು ತೋರಿಸಿತ್ತು. ಹಾಗೆ ಮೂಲ ಸೌಕರ್ಯ, ಪರಿಸರ ರಕ್ಷಣೆಯಂತಹ ಮಹತ್ವದ ಕೆಲಸಗಳು ಈ ಯೋಜನೆಯಿಂದ ಸಾಧ್ಯವಾಗಿತ್ತು.
ಗ್ರಾಮೀಣ ಕುಟುಂಬಗಳ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕನಿಷ್ಠ ನೂರು ದಿನಗಳ ಉದ್ಯೋಗ ಒದಗಿಸುವುದು ಸರ್ಕಾರದ ಕಾನೂನು ಬದ್ಧ ಜವಬ್ದಾರಿ ಎಂದು 2005ರಲ್ಲಿ ಮನರೇಗಾ ಜಾರಿಗೆ ಬಂತು. ಕೂಲಿಯ ಹಣವನ್ನು ನೇರ ಬ್ಯಾಂಕ್, ಅಂಚೆ ಖಾತೆಗೆ ಜಮೆ ಮಾಡುವ ಮೂಲಕ ಹಳ್ಳಿಯ ಜನರನ್ನು ಬ್ಯಾಂಕ್ ವ್ಯವಹಾರದಲ್ಲಿ ತೊಡಗುವಂತೆಯೂ ಮಾಡಿತ್ತು. 15 ದಿನದ ಒಳಗೆ ಕೆಲಸ ಸಿಗದಿದ್ದರೆ ನಿರುದ್ಯೋಗ ಭತ್ಯೆ ನೀಡುವುದನ್ನು ಖಚಿತಗೊಳಿಸಲಾಗಿತ್ತು ಮತ್ತು ಕನಿಷ್ಠ ಮೂರನೇ ಒಂದು ಭಾಗದಷ್ಟು ಮಹಿಳಾ ಕಾರ್ಮಿಕರು ಆಗಿರಬೇಕು ಎಂಬ ನಿಯಮ ಮಹಿಳೆಯರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿತ್ತು. ಹಳ್ಳಿಯ ರಸ್ತೆಗಳು, ಕಾಲುವೆಗಳು, ಕೆರೆಗಳು, ಒಡ್ಡುಗಳ ನಿರ್ಮಾಣ, ಜಲ ಸಂರಕ್ಷಣೆ, ಬದು ನಿರ್ಮಾಣ, ಸಸಿ ನಡೆವುದು ಇತ್ಯಾದಿ ಮಹತ್ವದ ಕೆಲಸಗಳನ್ನು ಮನರೇಗಾ ಮಾಡಿ ಮಾದರಿಯೊಂದನ್ನು ನಿರ್ಮಿಸುವ ಮೂಲಕ ಗ್ರಾಮೀಣಾಭಿವೃದ್ಧಿ ಕನಸಿಗೆ ನೀರೆರೆದು ಪೋಷಿಸಿತ್ತು.
ಗುಡ್ಡಗಾಡು ಹಳ್ಳಿಗಳು, ಬರ ಪೀಡಿತ ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ಮಳೆ ಬೆಳೆ ಕೊರತೆಯಿಂದ ನಗರದತ್ತ ಜನ ಗುಳೆ ಹೋಗುತ್ತಾರೆ. ಈಗಲೂ ಅದೇನು ಸಂಪೂರ್ಣವಾಗಿ ನಿಂತಿಲ್ಲವಾದರೂ ಮನರೇಗಾ ಯೋಜನೆ ಸ್ವಾವಲಂಬಿ ಬದುಕಿಗೆ ಆಧಾರವೊಂದನ್ನು ಒದಗಿಸುವ ಪರಿಣಾಮಕಾರಿ ಯೋಜನೆಯಾಗಿತ್ತು. ಉದ್ಯೋಗ ಪಡೆಯುವುದು ನಮ್ಮ ಹಕ್ಕು ಎಂದು ಆತ್ಮಾಭಿಮಾನದಿಂದ ಹೇಳುವ ರೀತಿಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಈ ಯೋಜನೆ ಅನುಷ್ಠಾನ ಅರ್ಥಪೂರ್ಣತೆಯನ್ನು ತಂದುಕೊಟ್ಟಿದ್ದಂತೂ ಸತ್ಯ.
ಆದರೆ ಇಂದಿನ ಕೇಂದ್ರ ಸರ್ಕಾರ ಜನಹಿತವನ್ನು ಕಡೆಗಣಿಸಿ ಹೆಸರು ಬದಲಾಯಿಸುವ ಜಿದ್ದಿಗೆ ಬಿದ್ದು ಕಾಂಗ್ರೆಸ್ ಮೇಲಿನ ಸೇಡನ್ನು ತೀರಿಸಿಕೊಳ್ಳಲು ಹೊರಟಿದೆ. ಕಾಂಗ್ರೆಸ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ. ಆದರೂ ಸಮಾಧಾನಗೊಳ್ಳದ ಕೇಂದ್ರ ಸರ್ಕಾರ ತನ್ನ ನೀತಿಗಳನ್ನು ಜನವಿರೋಧಿಯಾಗಿ ರೂಪಿಸುವ ಮೂಲಕ ದೇಶದ ಬಡಜನರ ಹಕ್ಕುಗಳ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡುತ್ತಿದೆ.
ʼವಿಬಿ-ಜಿ ರಾಮ್ ಜಿʼ ಎಂದು ಮರುನಾಮಕರಣ ಮಾಡಿ ಯೋಜನೆಯ ಸ್ವರೂಪವನ್ನೇ ಬದಲಿಸಿದೆ. ಮನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ಹಣ ನೀಡುವಾಗಲೇ ಕೂಲಿಯ ಅನುದಾನ ಬಿಡುಗಡೆ ಮಾಡುವುದು ವಿಳಂಬವಾಗುತ್ತಿತ್ತು. ಈ ಹೊಸ ಮಸೂದೆಯಲ್ಲಿ ಕೇಂದ್ರದ ಪಾಲು ಶೇ. 60, ರಾಜ್ಯದ ಪಾಲು ಶೇ. 40 ರಷ್ಟು ಎಂದು ಮಾಡಲಾಗಿದೆ. ರಾಜ್ಯಗಳಿಂದ ಜಿಎಸ್ ಟಿ ಸೇರಿದಂತೆ ಹಲವು ರೂಪದ ತೆರಿಗೆ ಕೇಂದ್ರಕ್ಕೆ ಹರಿಯುತ್ತಿರುವಾಗ ರಾಜ್ಯಗಳು ಈ ಯೋಜನೆಗೆ ಹಣ ಹೊಂದಾಣಿಕೆ ಹೇಗೆ ಮಾಡುತ್ತವೆ? ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಾದ ಪಾಲಿನಲ್ಲಿ ವಂಚನೆ ಮಾಡಲಾಗಿದೆ. ಈಗ ಬಗ್ಗೆ ರಾಜ್ಯ ಸರ್ಕಾರ ಪ್ರತಿಭಟನೆಯೂ ಮಾಡಿಯಾಗಿದೆ. ಮನವಿ ಮೇಲೆ ಮನವಿ ಮಾಡಿದರೂ ಜಪ್ಪಯ್ಯ ಎನ್ನುತ್ತಿಲ್ಲ ಕೇಂದ್ರ ಸರ್ಕಾರ.
ಇದನ್ನೂ ಓದಿ: ಗ್ರಾಮೀಣ ಬಡವರ ಉದ್ಯೋಗದ ಹಕ್ಕು ಕಸಿಯುವ ವಿಬಿ ಜಿ ರಾಮ್ ಜಿ ಮಸೂದೆಯ ಹುನ್ನಾರ: ಸಿಪಿಐಎಂ ಆರೋಪ
ಈ ಹೊಸ ಯೋಜನೆಯಲ್ಲಿ ಶೇ.60, ಶೇ.40 ರಷ್ಟು ಪಾಲು ಹಂಚಿಕೆ ಮಾಡಲು ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಲಿವೆಯೇ ಎಂಬ ಪ್ರಶ್ನೆಯೂ ಉದ್ಭವಾಗುತ್ತದೆ. ಆದ್ದರಿಂದ ಮನರೇಗಾ ಕೂಲಿಯನ್ನೇ ನಂಬಿಕೊಂಡಿದ್ದ ಹಳ್ಳಿಗಾಡಿನ ಹೆಣ್ಣು ಮಕ್ಕಳು ಆಂತಕ್ಕೀಡಾಗಿದ್ದಾರೆ. ಈಗ ಕೇಂದ್ರ ಮಂಡಿಸಿರುವ ಮಸೂದೆ ಅನುಷ್ಠಾನವಾಗಬೇಕಾದರೆ ಎದುರಾಗುವ ಸವಾಲು ಒಂದೆರಡಲ್ಲ. ಕಾಂಗ್ರೆಸ್ ತಂದ ಯೋಜನೆಗಳನ್ನೆಲ್ಲಾ ಮರುನಾಮಕರಣ ಮಾಡುವ ಕೀಳು ಮಟ್ಟಕ್ಕೆ ಇಳಿದಿರುವ ಬಗ್ಗೆ ಹಳ್ಳಿಹಳ್ಳಿಗಳಲ್ಲೂ ಈಗ ಚರ್ಚೆ ಶುರುವಾಗಿದೆ.
ಕೇಂದ್ರ ಸರ್ಕಾರ ತಂದಿರುವ ವಿಬಿ-ಜಿ ರಾಮ್ ಜಿ ಯೋಜನೆ ವೈಜ್ಞಾನಿಕವಾಗಿಲ್ಲ. ಬಡವರ ಘನತೆಯ ಬದುಕಿನ ಖಾತ್ರಿಯಿಂದ ಹೊರಗುಳಿದೆ. ಮನರೇಗಾ ಯೋಜನೆಯಲ್ಲಿ ಉದ್ಯೋಗ ಭದ್ರತೆಯೊಂದಿಗೆ ನಿರುದ್ಯೋಗ ಭತ್ಯೆಯೂ ದೊರೆಯುತ್ತಿತ್ತು. ಈಗ ಅದರ ಬಗ್ಗೆ ಕೇಂದ್ರ ಚಕಾರ ಎತ್ತುತ್ತಿಲ್ಲ. ಗಾಂಧಿಯ ಹೆಸರನ್ನು ಬದಲಿಸುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಈ ಯೋಜನೆಯ ಮಸೂದೆಯನ್ನು ಜಾರಿಗೆ ತಂದು ಗಾಂಧಿಯ ಸ್ವರಾಜ್ಯ ಕನಸಿಗೆ ಕೊಳ್ಳಿ ಇಟ್ಟಿದೆ. ಈ ಹೊಸ ಮಸೂದೆ ಬಡ ರಾಜ್ಯಗಳಿಗೆ ಹೊರೆಯಾಗಿ ಅಭಿವೃದ್ಧಿ ಕುಂಠಿತವಾಗಲಿದೆ.
ವಿಬಿ-ಜಿ ರಾಮ್ ಜಿ ಯೋಜನೆಯ ಬಗ್ಗೆ ದೇಶದಾದ್ಯಂತ ಪ್ರಚಾರ ಮಾಡಲು ಅದೆಷ್ಟು ಹಣ ಹೊಂದಿಸಬೇಕು? ಹೊಸದಾದ ಜಾಬ್‌ಕಾರ್ಡ್ಗಳನ್ನು ನೀಡಬೇಕು, ಈಗಿರುವ ಜಾಬ್ ಕಾರ್ಡ್‌ಗಳ ಹೆಸರುಗಳನ್ನು ಅಳಿಸಿ ಮತ್ತೆ ಕೂಲಿ ಕಾರ್ಮಿಕರು, ರೈತರಿಂದ ದಾಖಲೆಗಳನ್ನು ಪಡೆದು ಪರಿಶೀಲಿಸುವುದು ಸುಲಭದ ಕೆಲಸವೇನಲ್ಲ. ಬೋರ್ಡ್ ನಿರ್ಮಾಣ ಸೇರಿದಂತೆ ಹಲವು ಪ್ರಕ್ರಿಯೆಗಳಿಗೆ ದೇಶಾದ್ಯಂತ ಸಾವಿರಾರು ಕೋಟಿ ರೂಗಳನ್ನು ಪೋಲು ಮಾಡುವುದು ಉಚಿತವಲ್ಲ. ಆದರೂ ಕೇಂದ್ರ ಈ ದುಸ್ಸಾಹಸಕ್ಕೆ ಕೈ ಹಾಕಿ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎನ್ನುತ್ತಾರೆ ರೈತ ಲೋಕೇಶ್.
ಯಾವುದೇ ಮಾಸೂದೆ ಜಾರಿ ಮಾಡುವ ಮುನ್ನ ಸಾಧಕ ಬಾಧಕ ಚರ್ಚೆ ಮಾಡುವುದು, ಸಂಬಂಧಿಸಿದ ರೈತರೋ, ಕೂಲಿ ಕಾರ್ಮಿಕರೋ ಅಥವಾ ಕ್ಷೇತ್ರ ತಜ್ಞರಿಂದ ಸಮಾಲೋಚನೆ ನಡೆಸುವುದು ಪ್ರಜಾಪ್ರಭುತ್ವದ ಸೌಂದರ್ಯ.
ಇದರ ತದ್ವಿರುದ್ಧವಾಗಿ ನಡೆಯುವ ಮೂಲಕ ಕೇಂದ್ರ ಸರ್ಕಾರ ತನ್ನ ರಾಜಕೀಯ ಬಣ್ಣವನ್ನು ಬಯಲುಗೊಳಿಸಿಕೊಳ್ಳುತ್ತಿದೆ.
ಚರ್ಚೆಗೆ ಆಸ್ಪದ ಕೊಡದೆಯೆ ವಿಕಸಿತ ಭಾರತ – ರೋಜಗಾರ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ ) 2025 ಮಸೂದೆಯನ್ನು ರಚಿಸಿದೆ. ಈ ಮಸೂದೆ ಮನರೇಗಾ – 2005 ಅನ್ನು ಪೂರ್ಣ ಪ್ರಮಾಣದಲ್ಲಿ ಕಿತ್ತೊಗೆಯುವ ಹುನ್ನಾರವಾಗಿದೆ. ಉದ್ಯೋಗ ಖಾತ್ರಿಯನ್ನು ಕೇಂದ್ರ ಸರ್ಕಾರದ ಬಿಗಿ ಮುಷ್ಠಿಯಿಂದ ಕೇಂದ್ರೀಕೃತ ವಿವೇಚನಾಯುಕ್ತ, ಬಜೆಟ್ ನ್ನು ನಿಯಂತ್ರಿಸುವ ಯೋಜನೆಯನ್ನಾಗಿ ಬದಲಾಯಿಸಲು ಹೊರಟಿದೆ. ರಾಜ್ಯವಾರು “ಬಜೆಟ್ ಹಂಚಿಕೆ”ಯನ್ನು ಕೇಂದ್ರ ಸರಕಾರ ನಿರ್ಧರಿಸುತ್ತದೆ ಹಾಗೂ ಯಾವುದೇ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರಕಾರಗಳೇ ಭರಿಸಬೇಕು ಎಂಬುದು ಸರಿಯಲ್ಲ.
ಪ್ರತಿ ರಾಜ್ಯದಲ್ಲಿ ಒದಗಿಸಲಾಗುವ ಮಾನವ ದಿನಗಳ ಸಂಖ್ಯೆಯ ಮೇಲೆ ಮಿತಿಯನ್ನು ಹೇರುತ್ತದೆ. ಈಗಿರುವ ಬಜಟ್‌ನಲ್ಲಿ ಕೇಂದ್ರ ಸರ್ಕಾರವು ಪ್ರತಿ ಕುಟುಂಬಕ್ಕೆ ವರ್ಷಕ್ಕೆ 50 ದಿನಗಳ ಕೆಲಸವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಬಜೆಟ್‌ನ್ನು ಕೇಂದ್ರ ಸರಕಾರವೆ ಮಿತಿಗೊಳಿಸುವ ಮೂಲಕ ಹೆಚ್ಚುವರಿ ಹಣವನ್ನು ಸಂಗ್ರಹಿಸಲು ರಾಜ್ಯಗಳ ಮೇಲೆ ಇನ್ನಷ್ಟು ಹಣದ ಹೊರೆ ಹಾಕುತ್ತಿದೆ. ಈ ಮೂಲಕ ಬಿಜೆಪಿ ಸರ್ಕಾರ 125 ದಿನಗಳ ಉದ್ಯೋಗದ ಹುಸಿ ಭರವಸೆ ನೀಡುತ್ತಿದೆ ಎಂದು ಗ್ರಾಮೀಣ ಕೂಲಿಕಾರರ ಸಂಘಟನೆಯ ತುಮಕೂರು ಜಿಲ್ಲಾ ಸಂಚಾಲಕಿ ಕೆ ಸೌಮ್ಯ ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ʼಮನರೇಗಾ’ vs ʼವಿಬಿ-ಜಿ ರಾಮ್‌ಜಿʼ | ಅದು ಬದುಕಿನ ಭರವಸೆ, ಇದು ರಾಜಕೀಯ ಅಸ್ತ್ರ?
“ಇದು ಗಾಂಧಿಯನ್ನು ಮತ್ತು ಗ್ರಾಮ್ಯ ಭಾರತವನ್ನು ಕೊಲ್ಲುವ ಕೆಲಸ ಇದಕ್ಕೆ ಬಿಹಾರ ಚುನಾವಣೆಯ ವರೆಗೆ ಬಿಜೆಪಿ ಕಾಯುತ್ತಲಿತ್ತು ಎಂದು ವಕೀಲ ಕಿಶೋರ್ ಹೇಳಿದ್ದಾರೆ.”
“ಯಾವುದೇ ಚರ್ಚೆ ಇಲ್ಲದೆ ಅಥವಾ ವೈಜ್ಞಾನಿಕ ಸಮೀಕ್ಷೆಯಿಲ್ಲದೆ ರಾತ್ರೋರಾತ್ರಿ ಮಸೂದೆ ಮಂಡನೆಯಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ನ್ಯಾಯಬದ್ಧವಾಗಿದ್ದರೆ ಸಂಸತ್‌ನಲ್ಲಿ ಚರ್ಚೆಗಿಟ್ಟು ಮಸೂದೆ ಪಾಸ್ ಮಾಡಬೇಕಿತ್ತು. ಕೇಂದ್ರ ಸರ್ಕಾರ ಕಳ್ಳನಂತೆ ವರ್ತಿಸುತ್ತಿರುವುದರ ಹಿಂದೆ ಏನೋ
ಮಸಲತ್ತು ಅಡಗಿದೆ ಎಂಬ ಅನುಮಾನ ದಟ್ಟವಾಗಿ ಆವರಿಸಿದೆ. ಯಾವುದೇ ಸರ್ಕಾರ ಜನರಿಗೆ ನೌಕರಿ ಖಾತರಿ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ವಿಬಿ-ಜಿ ಯೋಜನೆಯಲ್ಲಿ ಈ ಅಂಶದ ಬಗ್ಗೆ ಕೇಂದ್ರ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ್ ಹೆತ್ತೇನಹಳ್ಳಿ ಈದಿನ ಡಾಟ್ ಕಾಮ್ ಗೆ ಪ್ರತಿಕ್ರಿಯಿಸಿದರು.
ಒಟ್ಟಾರೆ ಗ್ರಾಮೀಣ ಭಾಗದ ಬಡವರ ಬದುಕಿಗೆ ಆಸರೆಯಾಗಿದ್ದ ಗಾಂಧೀ ಹೆಸರಿನ ‘ಮನರೇಗಾ’ ಯೋಜನೆಯ ಹೆಸನ್ನು ಬದಲಿಸುವ ಜೊತೆಗೆ ಗಾಂಧೀ ಪರಿಕಲ್ಪನೆಯನ್ನು ತೆರೆಮರೆಗೆ ಸರಿಸುವ ಹುನ್ನಾರವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.





