ಈ ಬಿಕ್ಕಟ್ಟನ್ನು ಜಾಗತಿಕ ರಾಜಕೀಯದ ದೃಷ್ಟಿಕೋನದಿಂದ ನೋಡಿದಾಗ, ದೂರದ ರಷ್ಯಾ ಮತ್ತು ಚೀನಾದಂತಹ ದೇಶಗಳು ಉರಿಯುವ ಮನೆಯಲ್ಲಿ ಗಳ ಹಿರಿದುಕೊಳ್ಳಲು ಮುಂದಾದವು. ಅಮೆರಿಕವನ್ನು ವಿರೋಧಿಸುವವರು “ನಮ್ಮ ಗೆಳೆಯರು” ಎಂದು ಅವು ಸಾರಿದವು. ಆದರೆ ಈ ಎರಡೂ ದೇಶಗಳು ನಾಗರಿಕರ ಕಣ್ಣೀರು ಒರೆಸುವ ಯಾವುದೇ ಕೆಲಸ ಮಾಡದೆ, ಕೇವಲ ತಮ್ಮ ಹಿತಾಸಕ್ತಿಯನ್ನು ಮಾತ್ರ ಬಯಸಿದವು.
ಜಗತ್ತಿನ ಅತಿ ದೊಡ್ಡ ತೈಲನಿಕ್ಷೇಪವನ್ನು ಹೊಂದಿ ಶ್ರೀಮಂತ ದೇಶವೆನಿಸಿಕೊಂಡಿದ್ದ ವೆನೆಜುವೆಲಾ ಇಂದು ಅಕ್ಷರಶಃ ನರಕ ಸದೃಶವಾಗಿದೆ. ಅಲ್ಲಿ ನಡೆಯುತ್ತಿರುವ ರಾಜಕೀಯ ಆಟದಲ್ಲಿ ಸಾಮಾನ್ಯ ನಾಗರಿಕ ಬಲಿಪಶುವಾಗಿದ್ದಾನೆ. ಎಡಪಂಥೀಯ ಹ್ಯೂಗೊ ಚಾವೇಸ್ ಎಂಬ ಇಲ್ಲಿಯ ಹಿಂದಿನ ಅಧ್ಯಕ್ಷ, ಬಲಪಂಥೀಯರ ಕೈಯ್ಯಲ್ಲಿದ್ದ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಜನಪ್ರಿಯ ಆಡಳಿತ ನಡೆಸಿದ್ದ. ಅದರೊಂದಿಗೆ ನೆರೆಯ ಬಲಾಢ್ಯ ರಾಷ್ಟ್ರಗಳ ಕೆಂಗಣ್ಣಿಗೂ ಗುರಿಯಾಗಿದ್ದ. ಅಮೆರಿಕದ ಎಂಬ ದೊಡ್ಡಣ್ಣನ ನೆರಳಲ್ಲಿ ಬೆಳೆದ ವೆನೆಜುವೆಲಾ “ನಾನೂ ದೊಡ್ಡವನಾಗಿದ್ದೇನೆ” ಎಂದು ತೈಲ ಉತ್ಪಾದನೆಯನ್ನು ತನ್ನಲ್ಲಿಯೇ ಉಳಿಸಿಕೊಂಡಾಗ ಚಿನ್ನದ ಮೊಟ್ಟೆಯಿಡುವ ಕೋಳಿ ಕೈತಪ್ಪಿದ್ದಕ್ಕಾಗಿ ಕೆರಳಿ ನಿಂತನು ದೊಡ್ಡಣ್ಣ. ಹತ್ತಾರು ವರ್ಷ ಇವರೊಂದಿಗೆ ಸಂಘರ್ಷ ಮಾಡಿ ಆಡಳಿತ ನೀಡಿದ ಚಾವೊಸ್ ಮರಣದ ನಂತರ ನಿಕೊಲಸ್ ಮಡುರೋ ಎಂಬ ಕಾರು ಚಾಲಕ ಆ ದೇಶದ ಅಧ್ಯಕ್ಷನಾದ.
ಅಂದಿನಿಂದಲೇ ವೆನೆಜುವೆಲಾದ ಕೆಟ್ಟ ದಿನಗಳು ಪ್ರಾರಂಭವಾದವು. ನೆರೆಯ ಅಮೆರಿಕ ನಿರ್ಭಂಧ (sanctions) ವಿಧಿಸಿತು. ಅಲ್ಲಿಯ ತೈಲ ಭಾವಿಗಳು ತೈಲವನ್ನೆತ್ತದೆ ಕಮರಿದವು. ತೈಲ ಮಾರಿ ವಿಲಾಸಿ ಜೀವನ ನಡೆಸಿ ಸೋಮಾರಿಗಳಾಗಿದ್ದ ಸ್ಥಳಿಯರು ‘ಕಾಯಕ’ ಎಂಬುದನ್ನೆ ಮರೆತಿದ್ದರು. ತಿನ್ನುವ ಆಹಾರದೊಂದಿಗೆ ಎಲ್ಲವನ್ನೂ ವಿದೇಶದಿಂದಲೇ ಆಮದು ಮಾಡಿಕೊಂಡು ಆಮದನ್ನೆ ಅವಲಂಬಿಸಿ, ಸ್ವ-ಉತ್ಪಾದನೆ ಎಂದರೆ ಕೇವಲ ಖನಿಜಸಂಪತ್ತಿನ ಮಾರಾಟ ಮಾತ್ರ ಎಂದುಕೊಂಡಿದ್ದರು. ಇತ್ತ ಅಮೆರಿಕೆಯೊಂದಿಗೆ ಹಳಸಿದ ಗೆಳತನದಿಂದ ಬಲಾಢ್ಯ ಅಮೆರಿಕನ್ನರು “ನಮ್ಮ ಸಹಾಯವಿಲ್ಲದೆ ನೀವು ಹೇಗೆ ಬದಕುತ್ತೀರಿ ನೋಡೋಣ” ಎಂದು ಬಿಟ್ಟರು. ಡಾಲರ್ ಹರಿವು ನಿಂತು ಹೋಯಿತು.
ಹಣದ ಬೇಡಿಕೆ ಹೆಚ್ಚಾದಂತೆ, ಅರ್ಥಿಕ ನೀತಿಯ ಗಂಧಗಾಳಿಯಿಲ್ಲದ ಸ್ಥಳಿಯ ಆಡಳಿತ ಬೊಲಿವರ್ (ಸ್ಥಳೀಯ ಕರೆನ್ಸಿ) ಗಳನ್ನು ಹೆಚ್ಚಾಗಿ ಮುದ್ರಿಸಿದರು. ಉತ್ಪಾದನೆಯಿಲ್ಲದ ದೇಶದಲ್ಲಿ ಡಿಮಾಂಡ್ & ಸಪ್ಲೈ ಅಂಕೆ ತಪ್ಪಿತು. ಬೊಲಿವರ್ ಮೌಲ್ಯ ಕುಸಿಯಿತು. ಚೀಲದ ತುಂಬಾ ಹಣ ಹೊತ್ತೊಯ್ದರೂ ಒಂದು ಹೊತ್ತಿನ ಊಟಕ್ಕೆ ಬೇಕಾದ ಪ್ರದಾರ್ಥ ಸಿಗದಂತಾಯಿತು. ಮಾಲ್ ಗಳು ಬಿಕೋ ಎನ್ನತೊಡಗಿದವು. ನಿರುದ್ಯೋಗ ತಲೆದೋರಿತು. ಕೆಲಸವಿಲ್ಲದೆ ಜನ ಕಂಗಾಲಾದರು. ಭೀಕರ ಹಣದುಬ್ಬರ ಅಲ್ಲಿನ ಜನರಿಗೆ ಊಟಕ್ಕೂ ಗತಿಯಿಲ್ಲದಂತೆ ಮಾಡಿತ್ತು. ಹಸಿವು ಮತ್ತು ಔಷಧಗಳ ಕೊರತೆಯಿಂದ ಜನ ಕಂಗಾಲಾದರು. ಜೀವ ಉಳಿಸಿಕೊಳ್ಳಲು ಲಕ್ಷಾಂತರ ಜನರು ದೇಶ ಬಿಟ್ಟು ವಲಸೆ ಹೋಗಲಾರಂಭಿಸಿದರು. ನೆರೆಯ ಕ್ಯೂಬಾ ಸಾಧ್ಯವಾದ ಸಹಾಯ ಮಾಡಿತು. ಆದರೆ, ಅದು ಅರೆ ಕಾಸಿನ ಮಜ್ಜಿಗೆಯಾಗಿ ಪರಿಣಮಿಸಿತು.

ದೂರದ ರಷ್ಯಾ ಮತ್ತು ಚೀನಾ ದೇಶಗಳು ವೆನೆಜುವೆಲಾ ಅಮೆರಿಕೆಯ ಕುಣಿಕೆಯಿಂದ ತಪ್ಪಿಸಿಕೊಂಡದ್ದಕ್ಕೆ ಸಂತೋಷಗೊಂಡವು. ಉರಿಯುವ ಮನೆಯಲ್ಲಿ ಗಳ ಹಿರಿದುಕೊಳ್ಳಲು ಅವುಗಳು ಮುಂದಾದವು. ಅಮೆರಿಕೆಯನ್ನು ಯಾರು ವಿರೋಧಿಸುತ್ತಾರೋ “ಅವರು ನಮ್ಮ ಸ್ನೇಹಿತ” ಎಂದರು. ಆದರೆ ಇವರಿಬ್ಬರೂ ವೆನೆಜುವೆಲಾ ಪ್ರಜೆಗಳ ಕಣ್ಣೀರ ಒರೆಸುವ ಕಾರ್ಯ ಮಾಡದೆ ಕೇವಲ ತಮ್ಮ ತಮ್ಮ ಹಿತಾಸಕ್ತಿಗೆ ಅದನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಚಿಂತಿಸುತ್ತಿದ್ದರು.
ಆದರೆ, ಒಣ ಉಪದೇಶ ಹಸಿದ ಹೊಟ್ಟೆಯನ್ನು ತುಂಬಿಸುವುದಿಲ್ಲ. ವೆನೆಜುವೆಲಾ ಎಂಬ ಶ್ರೀಮಂತ ದೇಶ ದಿನದಿಂದ ದಿನಕ್ಕೆ ಬಡವಾಗಲಾರಂಭಿಸಿತು. ಅಲ್ಲಿಯ ಸರ್ವಾಧಿಕಾರಿ ನಿಕೊಲಸ್ ಮಡುರೋ ಎಂಬ ಮೂರ್ಖ ತನ್ನ ಸ್ವಹಿತವನ್ನೆ ಬಯಸುತ್ತ ದೇಶದ ಹಿತವನ್ನು ಮರೆತುಬಿಟ್ಟ.
ವೆನೆಜುವೆಲಾದ ಕಚ್ಚಾ ತೈಲಗಾಗಿಯೇ ನಿರ್ಮಿಸಿದ ಅಮೆರಿಕೆಯ ಕಚ್ಚಾತೈಲ ಸಂಸ್ಕರಣ ಘಟಕಗಳಿಗೆ ಕಚ್ಚಾ ಮಾಲು ಸಿಗದಂತಾಯಿತು. ವೆನೆಜುವಿಲಾ ತೈಲವಿಲ್ಲದೆ ಅವುಗಳು ದಿವಾಳಿ ಹಂತವನ್ನು ತಲುಪುವ ಮಟ್ಟಕ್ಕಿಳಿದವು. ಇದರಿಂದ ಅಮೆರಿಕೆಯ ಸಾಲದ ಹೊರೆ ಹೆಚ್ಚಾಗಲಾರಂಭಿಸಿತು. ನಾಗಾಲೋಟದಲ್ಲಿ ಮುಂದುವರಿಯುತ್ತಿರುವ ಚೀನಾದ ಬೆಳವಣಿಗೆ ನೋಡುತ್ತ ಕುಳಿತುಕೊಳ್ಳಲಾಗದ ಅಮೆರಿಕೆ ಇದಕ್ಕೊಂದು ಅಂತ್ಯ ಹಾಡಲೇಬೇಕೆಂದು ನಿರ್ಧರಿಸಿತು. ಜನೆವರಿ ೧ರಂದು ಇಪ್ಪತ್ತು ವಿಮಾನಗಳಿಗೆ ಹಸಿರು ನಿಶಾನೆ ತೋರಿಸಿತು. ಎರಡು ಗಂಟೆಯ ಅವಧಿಯಲ್ಲಿ ವೆನೆಜುವೆಲಾ ರಾಷ್ಟ್ರಪತಿಯನ್ನೇ ಬಂಧಿಸಿ ತನ್ನಲ್ಲಿ ತಂದಿಟ್ಟುಕೊಂಡಿತು. “ಬಲಿಷ್ಠ ರಾಷ್ಟ್ರವು ಸಾರ್ವಭೌಮ ದೇಶದ ಮೇಲೆ ಯುದ್ಧ ಮಾಡಿ ಅಥವಾ ಆರ್ಥಿಕ ಹಸ್ತಕ್ಷೇಪದ ಮೂಲಕ ವಸಾಹತು ನೀತಿಯನ್ನು ಮುಂದುವರಿಸುತ್ತಿವೆ” ಎಂದು ರಷ್ಯಾ- ಚೀನಾ ದೇಶಗಳು ಪ್ರತಿಕ್ರಿಯೆ ನೀಡಿದವು. ಭಾರತ ತನ್ನ ಅಸ್ಪಷ್ಟ ನಿಲುವು ಪ್ರಕಟಿಸಿತು. ಭಾರತಕ್ಕೆ ಈ ಸಮಸ್ಯೆಯನ್ನು ‘ಒಂದು ಕಡೆ ದರಿ, ಇನ್ನೊಂದು ಕಡೆ ಪುಲಿ’ ಎಂಬಂತಾಗಿದೆ. ಅಮೆರಿಕದಂತಹ ದೊಡ್ಡಣ್ಣನನ್ನು ಎದುರು ಹಾಕಿಕೊಳ್ಳುವ ಶಕ್ತಿಯಿಲ್ಲದ ಮತ್ತು ಮಾನವೀಯತೆಯಿಂದ ದೂರ ಸರಿಯಲು ಮನಸ್ಸಿಲ್ಲದ ಇಕ್ಕಟ್ಟಿನಲ್ಲಿ ನಮ್ಮ ದೇಶವಿದೆ. ಅಭಿವೃದ್ಧಿಯ ಹಾದಿಯಲ್ಲಿರುವಾಗ ನಾವು ಜಗತ್ತಿಗೆ ದಾರಿ ತೋರಿಸಲು ಹೊರಡುವುದು ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಮುಡಿದಂತಾಗಬಹುದು’. ಜಗತ್ತಿನ ಶಾಂತಿಯನ್ನು ಕಾಪಾಡಬೇಕಾದ ‘ವಿಶ್ವಸಂಸ್ಥೆ’ ಎಂಬ ‘ಹಲ್ಲಿಲ್ಲದ ಹಾವಿನ’ ಸಂಸ್ಥೆಗೆ ಬುದ್ಧಿ ಹೇಳುವ ತಾಕತ್ತಿಲ್ಲದೆ ತಣ್ಣನೆಯ ಶಾಂತಿಯ ಮಂತ್ರ ಜಪಿಸಿದೆ.
ಇದಕ್ಕೆ ಪರ್ಯಾಯವೇ ಇಲ್ಲವೆ? ವಿಶ್ವಸಂಸ್ಥೆ ಪರ್ಯಾಯವಾಗಿ ಮತ್ತೊಂದು ಸಂಸ್ಥೆಯನ್ನು ಕಟ್ಟಿದರೆ ಸಮಸ್ಯೆಗೆ ಪರಿಹಾರ ಸಿಗಬಹುದೆ? ಹೊಸ ಸಂಸ್ಥೆಯನ್ನು ಕಟ್ಟಿದರೂ ಅಲ್ಲಿನ ಸದಸ್ಯರು ಕೂಡ ಹೊಸ ಸಂಸ್ಥೆಯಲ್ಲೂ ಮತ್ತದೆ ಬಲಾಢ್ಯ ರಾಷ್ಟ್ರಗಳೇ ಸದಸ್ಯರಾಗುವುದರಿಂದ, ಅದು ‘ಹೊಸ ಬಾಟಲಿಯಲ್ಲಿ ಹಳೆಯ ಮದ್ಯ’ ಸುರುವಿದಂತಾಗುವ ಭಯ ಇದ್ದೇ ಇದೆ.
ಇನ್ನೊಂದು ಪ್ರಶ್ನೆ; ಸ್ಥಳೀಯ ಆಡಳಿತಗಾರನೇ ಸರ್ವಾಧಿಕಾರಿಯಾಗಿ ಜನರ ಬದುಕನ್ನು ನರಕಕ್ಕೆ ತಳ್ಳಿದಾಗ ‘ಸಾರ್ವಭೌಮತ್ವ’ ಎಂಬ ಪದ ಕೇವಲ ಅವನ ರಕ್ಷಾಕವಚವಾಗುವುದಿಲ್ಲವೆ? ಹೌದು, ಸಾರ್ವಭೌಮತ್ವ ದೇಶವೆಂಬ ಹಣೆಪಟ್ಟಿ ನಾಗರಿಕನ ಹೊಟ್ಟೆ ತುಂಬಿಸದು. ವೆನೆಜುವೆಲಾ ನಾಗರಿಕನ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ; ಒಬ್ಬ ಸರ್ವಾಧಿಕಾರಿಯಿಂದ ಮುಕ್ತಿ ಪಡೆಯಲು ಹೋಗಿ ಮತ್ತೊಂದು ದೇಶದ ಆರ್ಥಿಕ ಗುಲಾಮಗಿರಿಗೆ ಸಿಲುಕುವ ಅಪಾಯದಲ್ಲಿದೆ.
ಇದಕ್ಕೆ ಕೊನೆಯಿಲ್ಲವೆ?; ವೆನೆಜುವೆಲಾದಲ್ಲಿ ಆಂತರಿಕ ಕ್ರಾಂತಿ ಸಾಧ್ಯವಿಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಹಿಡಿ ಅನ್ನಕ್ಕಾಗಿ ಹೋರಾಡುತ್ತಿರುವ ಅಸಹಾಯಕ ನಾಗರಿಕ ಸರ್ವಾಧಿಕಾರಿಯ ಸುಸಜ್ಜಿತ ಸೈನ್ಯದ ಎದುರು ನಿಲ್ಲಲು ಹೇಗೆ ಸಾಧ್ಯ? ವೆನೆಜುವೆಲಾದಲ್ಲಿ ಬದಲಾವಣೆಯ ಕಿಡಿಗಳೇನೋ ಇವೆ. ಆದರೆ, ಬಡತನವೆಂಬ ನಿರಂತರ ಮಳೆಯು ಆ ಕಿಡಿಯು ಬೆಂಕಿಯಾಗಿ ಪ್ರಜ್ವಲಿಸದಂತೆ ತಡೆಯುತ್ತಿದೆ. ಬಡತನವೇ ಅಲ್ಲಿನ ಸರ್ವಾಧಿಕಾರಿಯ ಅತಿದೊಡ್ಡ ಆಸ್ತಿಯಾಗಿದೆ.
ಇದನ್ನೂ ಓದಿ ರಷ್ಯಾ ತೈಲ ಖರೀದಿ ನಿಲ್ಲಿಸದಿದ್ದರೆ ಭಾರತದ ಮೇಲೆ ಮತ್ತಷ್ಟು ಸುಂಕ: ಟ್ರಂಪ್ ಎಚ್ಚರಿಕೆ
ಇದಕ್ಕೆ ಒಂದೇ ಪರಿಹಾರ; ಬಲಿಷ್ಠ ರಾಷ್ಟ್ರಗಳು ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಅಲ್ಲಿನ ಜನರ ಮೂಲಭೂತ ಸೌಲಭ್ಯಗಳಿಗೆ ಆಧ್ಯತೆ ನೀಡಿದಾಗ ಮಾತ್ರ ಬದಲಾವಣೆ ಸಾಧ್ಯ. ಅಮೆರಿಕ ಎಂಬ ದೊಡ್ಡಣ್ಣ ತನ್ನ ಸೋದರ ರಾಷ್ಟ್ರವನ್ನು ಲೂಟಿ ಮಾಡದೆ ತಮ್ಮನನ್ನು ರಕ್ಷಿಸುವ ಜವಾಬ್ದಾರಿ ಹೊರಬೇಕು. ಅಲ್ಲಿಯವರೆಗೂ ವೆನೆಜುವೆಲಾದ ಸಾಮಾನ್ಯ ಪ್ರಜೆಯು ಬಲಾಢ್ಯರ ಚದುರಂಗದಾಟದಲ್ಲಿ ಕೇವಲ ದಾಳವಾಗಿ ಉಳಿಯಬೇಕಾಗಿರುವುದೊಂದು ಒಂದು ಕರಾಳ ಸತ್ಯ.

ಜಿ ಬಿ ಪಾಟೀಲ್
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ




