ವಿಜಯಪುರ ನೆಲಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಲೇ ಬಂದಿದೆ. ಈ ಅನ್ಯಾಯದ ಪಾಪ ಕಾರ್ಯದಲ್ಲಿ ಜನಪ್ರತಿನಿಧಿಗಳ ಪಾಲೂ ದೊಡ್ಡದಿದೆ. ಈ ಪಾಪವನ್ನು ಜಿಲ್ಲೆಯ ಜನರು ಹೋರಾಟದಿಂದ ಮಾತ್ರ ತೊಳೆಯಲು ಸಾಧ್ಯವಿದೆ, ಇಲ್ಲಿ ಎಲ್ಲವೂ ಜನ ಹೋರಾಟ ಮಾಡಿಯೇ ಪಡೆಯಬೇಕು ಎನ್ನುವ ಸ್ಥಿತಿಯುಂಟಾಗಿದೆ ಎನ್ನುತ್ತಾರೆ ಜಿಲ್ಲೆಯ ಜನರು
ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ 50 ದಿನಗಳನ್ನು ಪೂರೈಸಲಿದೆ. ಸೆಪ್ಟೆಂಬರ್ 18ರಂದು ಸುರಿವ ಮಳೆಯ ಮಧ್ಯ ಆರಂಭವಾದ ಹೋರಾಟ ಅಪಾರ ಜನ ಬೆಂಬಲ ಪಡೆಯುತ್ತಲೇ ಹೊರಟಿದೆ. ರಾಜ್ಯ ಸರಕಾರ ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟನರ್ ಶಿಪ್) ಮಾದರಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುತ್ತಿರುವುದರ ವಿರುದ್ದ ಜಿಲ್ಲೆಯ ಜನತೆ ಒಂದಾಗಿದ್ದಾರೆ. ಪಿಪಿಪಿ ಜಾರಿಯಾದರೆ ಸರಕಾರಿ ಆಸ್ಪತ್ರೆಯೂ ಸಹಜವಾಗಿ ಖಾಸಗೀಕರಣಗೊಂಡು ಆರೋಗ್ಯ ಸೌಲಭ್ಯಗಳು ಕ್ರಮೇಣ ಮಾಯವಾಗುತ್ತವೆ ಎಂಬುದನ್ನು ತಿಳಿದು ಜನ ಹೋರಾಟಕ್ಕಿಳಿದಿದ್ದಾರೆ. ಒಂದಿಂಚು ಜಾಗವಿಲ್ಲದೆಡೆ ಸರಕಾರಿ ಕಾಲೇಜು ಮಾಡಿ ದೇಶದಲ್ಲೇ ಅತಿ ಹೆಚ್ಚು ಅಂದರೆ ಸುಮಾರು 149 ಎಕರೆ ಜಮೀನು ಹೊಂದಿರುವೆಡೆ ಸರಕಾರ ಪಿಪಿಪಿ ಜಾರಿಮಾಡುತ್ತಿದೆ. ಅದರಲ್ಲೂ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಉತ್ತಮ ಆಸ್ಪತ್ರೆ ಎಂಬ ಪ್ರಶಸ್ತಿಗೆ ಹಲವು ಬಾರಿ ಭಾಜನವಾಗಿದೆ. ಇದನ್ನು ಬಲಪಡಿಸುವುದು ಬಿಟ್ಟು ಪಿಪಿಪಿ ಹೆಸರಲ್ಲಿ ಇರುವ ಸರಕಾರಿ ಆಸ್ಪತ್ರೆಯನ್ನೂ ಖಾಸಗಿಯವರ ಉಡಿಗೆ ಹಾಕುವುದು ಜಿಲ್ಲೆಯ ಜನತೆಯನ್ನು ಮತ್ತಷ್ಟು ಕೆರಳಿಸಿದೆ.
ಪ್ರತಿ ದಿನಕ್ಕೆ ಅಂದಾಜು 1,500ಕ್ಕೂ ಹೆಚ್ಚು ಒಳ ರೋಗಿ ಹಾಗೂ ಹೊರರೋಗಿಗಳ ದಾಖಲಾತಿ ಇದೆ. ಜಿಲ್ಲಾಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ದೊಡ್ಡ ಕಟ್ಟಡ, ಪಂಚಕರ್ಮ ಮತ್ತು ಪ್ರಕೃತಿ ಚಿಕಿತ್ಸಾಲಯ ಸೌಲಭ್ಯ ಕಟ್ಟಡಹೊಂದಿದೆ. 670 ಬೆಡ್‌ಗಳ ಜನರಲ್ ಆಸ್ಪತ್ರೆ, 150 ಬೆಡ್‌ಗಳು ತಾಯಿ ಮತ್ತು ಮಕ್ಕಳ ಆಸ್ಪತ್ರೆ, 60 ಬೆಡ್‌ಗಳ ಟ್ರಾಮಾಸೆಂಟರ್ ಇದೆ. ತುರ್ತು ನಿಗಾ ಘಟಕ, ಆಕ್ಸಿಜನ್ ಪ್ಲಾಂಟ್, ತುರ್ತು ಅಪಘಾತ ಘಟಕ, ಹೈಟೆಕ್ ಶವಾಗಾರ ಸೇರಿದಂತೆ ಎಲ್ಲ ಸೌಲಭ್ಯಗಳು ಇವೆ. ಈಗಾಗಲೇ ಬಿ.ಎಸ್‌ಸಿ ನರ್ಸಿಂಗ್ ಕಾಲೇಜು ಇತರೆ ವೃತ್ತಿಪರ ಪ್ಯಾರಾ ಮೆಡಿಕಲ್ ಕೋರ್ಸ್‌ಗಳು ಸ್ವಂತ ಕಟ್ಟಡ ಹೊಂದಿ ಕಾರ್ಯನಿರ್ವಹಿಸುತ್ತಿವೆ.
ಒಟ್ಟಿನಲ್ಲಿ ಒಂದು ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳೂ ಇಲ್ಲಿವೆ, ಅತ್ಯಾಧುನಿಕ ಮತ್ತು ಸುಸಜ್ಜಿತ ಆಸ್ಪತ್ರೆ ಇಲ್ಲಿದೆ. ಇಷ್ಟೆಲ್ಲಾ ಇದ್ದರೂ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಆರಂಭಿಸುತ್ತಿರುವುದು ಜಿಲ್ಲೆಯ ಜನತೆಗೆ ಬಗೆದ ದ್ರೋಹವಲ್ಲದೇ ಮತ್ತೇನು? ಆದುದರಿಂದ ಈ ಹೋರಾಟ ಈಗ ವಿಜಯಪುರ ಜನರ ಸ್ವಾಭಿಮಾನದ ಮತ್ತು ಭಾವನಾತ್ಮಕ ಹೋರಾಟವಾಗಿ ಪರಿವರ್ತನೆ ಹೊಂದಿದೆ. ಪ್ರತಿಭಟನೆ, ರ್ಯಾಲಿ, ಪಂಜಿನ ಮೆರವಣಿಗೆ, ರಕ್ತ ಸಹಿ ಸಂಗ್ರಹ, ಪತ್ರ ಚಳವಳಿ, ಹೀಗೆ ವಿಧವಿಧವಾದ ಚಳವಳಿಗಳನ್ನೂ ಸಂಘಟಿಸುತ್ತಾ ಹೋರಾಟ ನಿತ್ಯವೂ ನಿರಂತರವಾಗಿಯೂ ನಡೆಯುತ್ತಿದೆ. ಜನರಷ್ಟೇ ಅಲ್ಲ ಜಿಲ್ಲೆಯಲ್ಲಿನ ರಸ್ತೆಗಳು, ರಂಗೋಲಿಗಳು, ಗೋಡೆಗಳು ತಮ್ಮ ಹಕ್ಕನ್ನು ಕೇಳುತ್ತಿವೆ.

ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರಾಜ್ಯದ ರಾಜಕಾರಣ ವಿಜಯಪುರವನ್ನು ನಿರ್ಲಕ್ಷಿಸುತ್ತಿದೆ ಎಂಬ ಭಾವ ವಿಜಯಪುರ ಜನರಲ್ಲಿ ಆಳವಾಗಿ ಮೂಡುತ್ತಿದೆ. ಯಾಕೆಂದರೆ ಈ ಹಿಂದೆ ಉತ್ತರ ಕರ್ನಾಟಕದ ಮದ್ಯ ಭಾಗದಲ್ಲಿರುವ ವಿಜಯಪುರಕ್ಕೆ ಹೈಕೋರ್ಟ್ ಸಹಜವಾಗಿಯೇ ಆಗುತ್ತದೆ ಎಂದು ಬಯಸಿದ್ದರು. ಅಂದಿನ ರಾಜಕೀಯ ಹಿತಸಕ್ತಿಗಳು ಕಲಬುರ್ಗಿ ಮತ್ತು ಧಾರವಾಡಕ್ಕೆ ಸಂಚಾರಿ ಪೀಠಗಳೆಂದು ಎರಡು ಪೀಠಗಳನ್ನು ಮಾಡಿತು. ತತ್ಪರಿಣಾಮ ಈಗ ಎರಡೂ ಪೀಠಗಳು ಪೀಠಗಳಂತೆ ಕೆಲಸ ನಿರ್ವಹಿಸಲಾಗದೇ ಬಣಗುಡುತ್ತಿವೆ, ಚೈತನ್ಯವಿಲ್ಲದ ದೇಹದಂತೆ!! ವಿಜಯಪುರದಲ್ಲಿ ಹೆಜ್ಜೆ ಹೆಜ್ಜೆಗೊಂದು ಐತಿಹಾಸಿಕ ಸ್ಮಾರಕಗಳಿದ್ದರೂ ಇತಿಹಾಸ ಮತ್ತು ಪ್ರಾರ್ಚ್ಯಶಾಸ್ತ್ರದ ವಲಯ ಕಛೇರಿಯೂ ಧಾರವಾಡದಲ್ಲಿದೆ. ದೋಣಿ ನದಿ ಹೂಳೆತ್ತುವುದು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ರೈಲ್ವೆ ವಲಯವೂ ಹುಬ್ಬಳ್ಳಿ ಪಾಲಾಯಿತು. ಸೂಕ್ತ ರೈಲ್ವೆ ಸೌಲಭ್ಯಗಳಿಲ್ಲ. ಇರುವ ರೈಲುಗಳು ಸಮಯಕ್ಕನುಗುಣವಾಗಿಲ್ಲ. ಜಿಲ್ಲೆಯಲ್ಲಿ ಸಾವಿರಾರು ಜನ ಕೆಲಸ ಮಾಡುವ ಶ್ರಮಾಧಾರಿತ ಕೈಗಾರಿಕೆ ಜಿಲ್ಲೆಯಲ್ಲಿ ಒಂದೂ ಇಲ್ಲ. ಇಲ್ಲಿ ಐಟಿಐ, ಡಿಪ್ಲೊಮಾ, ಮುಗಿಸಿರುವ ಮಕ್ಕಳು ದೂರದ ಮುಂಬೈ, ಹೈದರಾಬಾದ್, ಬೆಂಗಳೂರು, ಗೋವಾಗೆ ಕೆಲಸಕ್ಕೆಂದು ವಲಸೆ ಹೋಗಬೇಕು. ತಂದೆ ತಾಯಿಗಳಿದ್ದರೂ ಮಕ್ಕಳು ಅಲ್ಲಿ ಅನಾಥರಂತಿರಬೇಕು. ಇಲ್ಲಿ ಹಳ್ಳಿಗಳಲ್ಲಿ ಮಕ್ಕಳಿದ್ದರೂ ಅನಾಥರಂತೆ ಇವರು ಜೀವನಮಾಡಬೇಕು. ಎಂಥ ದುರಂತವಿದು!
ಹೈದರಬಾದ್ ಕರ್ನಾಟಕಕ್ಕಂಟಿಕೊಂಡಿರುವ ತಾಲ್ಲೂಕುಗಳನ್ನು ಒಳಗೊಂಡ ವಿಜಯಪುರ ಜಿಲ್ಲೆ ಪುನರ್ಜನ್ಮ ಪಡೆದರೂ 371 ಜೇ ಅಧಿನಿಯಮ ಈ ಜಿಲ್ಲೆಗೆ ದಕ್ಕಲಿಲ್ಲ, ಆದರೆ ಆದಾಯ ತರುವ ವಿಜಯಪುರದ ಕೆ.ಎಸ್.ಆರ್.ಟಿ.ಸಿ ಮತ್ತು ಉಚ್ಚ ನ್ಯಾಯಾಲಯ ಮಾತ್ರ ಹೈದರಾಬಾದ್ ಕರ್ನಾಟಕಕ್ಕೆ ಒಳಪಟ್ಟವು, ಎಂಥ ವಿಪರ್ಯಾಸ!! ಮುಂದೆ ವಿಜಯಪುರ ಜಿಲ್ಲೆಯಿಂದ ಬಾಗಲಕೋಟೆ ಪ್ರತ್ಯೇಕವಾದಾಗ ಕೃಷ್ಣಾ ನದಿ ಮತ್ತದರ ನೀರಾವರಿ ಕ್ಷೇತ್ರಗಳು ಬಾಗಲಕೋಟೆಯ ಪಾಲಾದವು. ಮತ್ತೆ ವಿಜಯಪುರದಲ್ಲಿ ಉಳಿದದ್ದು ಅದೇ ಬರಡು ನೆಲ. ಆಲಮಟ್ಟಿಯಲ್ಲಿ ಅಪಾರ ನೀರಿದ್ದರೂ, ಅದು ಜಿಂದಾಲ್ ಫ್ಯಾಕ್ಟರಿಗೆ ಹರಿಯುತ್ತಿತ್ತೆ ಹೊರತು ವಿಜಯಪುರದ ಜನತೆಗೆ ಕುಡಿಯಲು ಹರಿಯುತ್ತಿರಲಿಲ್ಲ. ಹದಿನೈದು ದಿನಕ್ಕೊಮ್ಮೆ ಕುಡಿಯುವ ನೀರು ದೊರೆಯುವ ಸ್ಥಿತಿಯಲ್ಲಿತ್ತು ವಿಜಯಪುರ. ಬ್ರಾಡ್‌ಗೇಜ್ ಆಗಲಿ, ಕೃಷ್ಣೆಯ ನೀರನ್ನಾಗಲಿ ಜನ ಹೋರಾಟ ಮಾಡಿಯೇ ಪಡೆದದ್ದು. ಜನಪ್ರತಿನಿಧಿಗಳು ಕನಸು ಹೊತ್ತು ತಮ್ಮ ಮುನ್ನೋಟ ಮತ್ತು ಇಚ್ಛಾಶಕ್ತಿಯಿಂದ ಮಾಡಿದ ಉದಾಹರಣೆಗಳು ವಿಜಯಪುರ ಜಿಲ್ಲೆಯಲ್ಲಿ ಸಿಗುವುದೇ ಅಪರೂಪ.
‘ವಿಜಯಪುರ ನೆಲಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಲೇ ಬಂದಿದೆ. ಈ ಅನ್ಯಾಯದ ಪಾಪಕಾರ್ಯದಲ್ಲಿ ಜನಪ್ರತಿನಿಧಿಗಳ ಪಾಲೂ ದೊಡ್ಡದಿದೆ. ಈ ಪಾಪವನ್ನು ಜಿಲ್ಲೆಯ ಜನರು ಹೋರಾಟದಿಂದ ಮಾತ್ರ ತೊಳೆಯಲು ಸಾಧ್ಯವಿದೆ, ಇಲ್ಲಿ ಎಲ್ಲವೂ ಜನ ಹೋರಾಟ ಮಾಡಿಯೇ ಪಡೆಯಬೇಕು’ ಎನ್ನುವ ಸ್ಥಿತಿಯುಂಟಾಗಿದೆ ಎನ್ನುತ್ತಾರೆ ಜಿಲ್ಲೆಯ ಸಾಹಿತಿಗಳು, ಚಿಂತಕರು.
ಅತ್ತ ರಾಜ್ಯ ಸರ್ಕಾರ ತನ್ನ ವೋಟ್ ಬ್ಯಾಂಕ್‌ಗಾಗಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ರಾಯಭಾರಿಯನ್ನಾಗಿಸಿ ಕೈ ತೊಳೆದುಕೊಂಡಿತೆ ಹೊರತು ಬಸವಣ್ಙನ ನೆಲದ ಜನರ ಜೀವನ ಮೇಲೆತ್ತಲು ಯಾವುದೇ ಪ್ರಯತ್ನ ಮಾಡಲಿಲ್ಲ. ಬದಲಾಗಿ ಪಿಪಿಪಿ ಹೆಸರಲ್ಲಿ ಬಡವರಿಗೆಂದೆ ಇದ್ದ ಅತ್ಯುತ್ತಮ ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು ಮತ್ತದರ ಸೌಲಭ್ಯ, ಅಪಾರ ಭೂಮಿಯನ್ನೂ ಕಿತ್ತುಕೊಳ್ಳುತ್ತಿದೆ. ಈಗಲಾದರೂ ಜಿಲ್ಲೆಯ ರಾಜಕಾರಣಿಗಳು ಎಚ್ಚೆತ್ತುಕೊಳ್ಳಬೇಕಿದೆ. ತಾವು ಆಳರಸರಲ್ಲ ಜನಪ್ರತಿನಿಧಿಗಳು, ಜನರಿಗೆ ಬದ್ದವಾಗಿರಬೇಕು ಎಂಬರಿವು ಹೊಂದಬೇಕಿದೆ. ಈಗಲಾದರೂ ತಮ್ಮ ಒಣಪ್ರತಿಷ್ಠೆ, ಒಳಾಸಕ್ತಿ, ಹೊರನೋಟ, ವೈ ಮನಸ್ಸು ಎಲ್ಲವನ್ನೂ ಪಕ್ಕಕ್ಕಿಟ್ಟು ಜಿಲ್ಲೆಗೆ ಏನಾದರೂ ಕೊಡುಗೆ ನೀಡುವತ್ತ ಚಿಂತಿಸಲಿ. ಆಗ ಜನರಿಗೂ ಮತ್ತು ರಾಜಕಾರಣಿಗಳು ಇಬ್ಬರಿಗೂ ಧನ್ಯತೆಯ ಭಾವ ಮೂಡುತ್ತದೆ.

ವಿಜಯಪುರದ ಜನತೆ ತಮ್ಮೆಲ್ಲ ಜಾತಿ, ಧರ್ಮ, ಭಾಷೆ, ಪ್ರಾಂತ್ಯ, ತತ್ವ, ಸಿದ್ದಾಂತ, ವೈಚಾರಿಕತೆ ಸೇರಿದಂತೆ ಎಲ್ಲ ಸಂಕುಚಿತತೆಗಳನ್ನು ಮೀರಿ ಇಂದು ಒಂದಾಗಿ ಹೋರಾಡುತ್ತಿದ್ದಾರೆ. ‘ಆ ಮತದ ಈ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ’ ಎಂಬ ಕವಿ ಕುವೆಂಪುರವರ ಆಶಯದಂತೆ ಎಲ್ಲ ಎಲ್ಲೆಗಳ ಮೀರಿ ಹೆಗಲಿಗೆ ಹೆಗಲು ಕೊಟ್ಟು ಜನ ಒಂದಾಗಿದ್ದಾರೆ. ಯಾರ ಮಾತು ಯಾರೂ ಕೇಳದ ದುರಂತ ಸನ್ನಿವೇಶಗಳಿಗೆ ಸಾಕ್ಷಿಯಾಗಿರುವ ದುರಿತ ದಿನಗಳಲ್ಲಿ ಎಡಪಂಥ, ಬಲಪಂಥ, ಆ ಪಂಥ, ಈ ಪಂಥ, ಹಿಂದೂ ಮುಸ್ಲಿಂ… ಎಲ್ಲವನ್ನೂ ಪಕ್ಕಕ್ಕಿಟ್ಟು ಎಲ್ಲರೂ ಒಂದಾಗಿ ಸಮಗ್ರ ಜಿಲ್ಲೆಯ ಅಭಿವೃದ್ದಿಗೆ ಟೊಂಕ ಕಟ್ಟಿನಿಂತಿದ್ದಾರೆ. ಜಾತಿವಾದ, ಕೋಮುವಾದಗಳು ಹೆಚ್ಚು ಸಂಕೀರ್ಣಗೊಂಡು ಜನತೆಯ ಐಕ್ಯತೆ ಒಡೆಯುತ್ತಿರುವ ಈ ದಿನಗಳಲ್ಲಿ ಜನತೆ ತಮ್ಮ ಹಕ್ಕಿಗಾಗಿ ಒಂದಾಗಿದ್ದಾರೆ. ಜಿಲ್ಲೆಯ ಶಾಸಕರೊಬ್ಬರು ಹಿಂದೂ- ಮುಸ್ಲಿಂ ಎಂದು ರಾಜ್ಯದೆಲ್ಲೆಡೆ ಬೆಂಕಿ ಹಚ್ಚುತ್ತಾ ತಿರುಗುತ್ತಿರುವಾಗ ಇಲ್ಲಿನ ಜನರು ಮಾತ್ರ ತಮಗಾಗುತ್ತಿರುವ ಅನ್ಯಾಯದ ವಿರುದ್ದ ಒಂದಾಗಿ ಎಲ್ಲಾ ಜಾತಿ, ಧರ್ಮ, ಸಂಘಟನೆ, ಪಕ್ಷಗಳು, ಹೀಗೆ ಎಲ್ಲ ಎಲ್ಲೆಗಳನ್ನು ಮರೆತು ಹೋರಾಡುತ್ತಾ ರಾಜ್ಯದಲ್ಲಿಯೇ ಒಂದು ಅನನ್ಯ ಮಾದರಿಯ ಹೋರಾಟ ಸೃಷ್ಟಿಸಿದ್ದಾರೆ. ವಿಜಯಪುರದ ಜನತೆ ಹೋರಾಡುತ್ತಿರುವುದು ಸರಕಾರಿ ವೈದ್ಯಕೀಯ ಕಾಲೇಜಿಗಾಗಿ ಎಂಬ ಮೇಲ್ಮೈಯ ಸತ್ಯವು ಆಳದಲ್ಲಿ ಕಾರ್ಪೋರೇಟ್ ಮನೆತನಗಳ ವಿರುದ್ದವೇ ಇದೆ. ಇದುವೇ ಇಂದಿನ ಮತ್ತು ಮುಂದಿನ ಎಲ್ಲ ಹೋರಾಟಗಳ ಒಳ ತಿರುವೂ ಕೂಡಾ.
ಹೋದಲ್ಲೆಲ್ಲಾ ‘ನಾನು ಅಹಿಂದದಿಂದ ಬಂದಿದ್ದೇನೆ, ಬಡವರ ಪರವಾಗಿದ್ದೇನೆ’ ಎಂದು ಪ್ರತಿಪಾದಿಸುವ ಮುಖ್ಯಮಂತ್ರಿಗಳು ತಮ್ಮ ಸರಕಾರ ಜಾರಿಗೊಳಿಸ ಹೊರಟ ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟ್‌ನರ್ ಶಿಪ್) ನೀತಿಯು ಶ್ರೀಮಂತರ ಪರವಾದ ನೀತಿಯಾಗಿದ್ದು ಇದು ಹಿಂದುಳಿದ, ಬಡವರ, ಜನಸಾಮನ್ಯರ ಸಾರ್ವಜನಿಕ ಆರೋಗ್ಯ ಸೌಲಭ್ಯವನ್ನೇ ಕಿತ್ತುಕೊಳ್ಳುತ್ತದೆ ಎನ್ನುವ ಸತ್ಯವರಿಯಬೇಕು. ಪಿಪಿಪಿ ಮಾದರಿಯು ಇಡೀ ದೇಶದಲ್ಲೇ ವಿಫಲವಾದ ನೀತಿ ಎಂಬುದು ಇತಿಹಾಸ ಎತ್ತಿ ತೋರಿಸುತ್ತಿದೆ. ಇದು ಮನವರಿಕೆಯಾಗಲು ದೊಡ್ಡ ದೊಡ್ಡ ಗ್ರಂಥಗಳೇ ಓದಬೇಕಿಲ್ಲ ಮತ್ತು ಯಾವ ಹೈ ಕಮಾಂಡೂ ಹೇಳಬೇಕಿಲ್ಲ. ಮುಖ್ಯಮಂತ್ರಿಯವರು ಗಟ್ಟಿ ನಿರ್ಧಾರ ಮಾಡಿ ಬರೀ ವಿಜಯಪುರವಷ್ಟೇ ಅಲ್ಲ ಇಡೀ ರಾಜ್ಯದಲ್ಲಿಯ ಕೋಲಾರ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ರಾಮನಗರ ಸೇರಿದಂತೆ ಈ ಎಲ್ಲಾ ಜಿಲ್ಲೆಗಳಲ್ಲಿನ ಖಾಸಗಿ ಸಹಭಾಗಿತ್ವ ನೀತಿಯನ್ನು ಕೈ ಬಿಡಬೇಕು. ಆಗ ಮಾತ್ರವೇ ಮೂಖ್ಯಮಂತ್ರಿಗಳ ಬಡವರ ಕಾಳಜಿಗೆ ಒಂದು ಅರ್ಥಬರುತ್ತದೆ.

ಕರ್ನಾಟಕವೆಂದರೆ ಬರೀ ಬೆಂಗಳೂರಲ್ಲ, ಹೈದರಾಬಾದ್ ಕರ್ನಾಟಕವೆಂದರೆ ಬರೀ ಕಲಬುರ್ಗಿಯಲ್ಲ ಅಥವಾ ಉತ್ತರ ಕರ್ನಾಟಕವೆಂದರೆ ಬರೀ ಧಾರವಾಡವೂ ಅಲ್ಲ. ಈ ಜಿಲ್ಲೆಗಳ ಸುತ್ತಲೂ ಸಾಕಷ್ಟು ಅನ್ಯಾಯಕ್ಕೊಳಗಾದ ಮತ್ತು ಅವಶ್ಯಕವಾಗಿ ತುಂಬಾ ಗಮನ ಕೊಡಬೇಕಾದ ಹಲವಾರು ಜಿಲ್ಲೆಗಳಿವೆ, ಅವುಗಳ ಏಳ್ಗೆಯೂ ನಮ್ಮದೇ ಜವಾಬ್ದಾರಿ ಎಂಬ ಅರಿವು ರಾಜ್ಯದ ಚುಕ್ಕಾಣಿ ಹಿಡಿದ ರಾಜಕಾರಣಿಗಳಿಗೆ ಇರಬೇಕು. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ತಾರತಮ್ಯ ನೀತಿ ತೊರೆದು ಸಮಗ್ರ ರಾಜ್ಯದ ಏಳ್ಗೆಗೆ ಮನಸ್ಸು ತುಡಿಯಬೇಕು. ಆಗ ಮಾತ್ರವೇ ಇಡೀ ಕರ್ನಾಟಕ ಅಭಿವೃದ್ದಿಯಾಗುತ್ತದೆ.
‘ನಾವು ಗೆಲ್ಲುವವರೆಗೂ ಹೋರಾಡುತ್ತೇವೆ ಹಿಂದೆ ಹೆಜ್ಜೆ ಇಡುವ ಮಾತೇ ಇಲ್ಲ. ಜನ ಹೋರಾಟಕ್ಕೆ ಗದ್ದುಗೆಗಳು ಉರುಳಿವೆ. ರಾಜ ಮಹಾರಾಜರು ತರಗೆಲೆಗಳಂತೆ ಉರುಳಿದ್ದಾರೆ. ಸರಕಾರಗಳೇ ತಲೆ ಕೆಳಗಾಗಿವೆ. ಇನ್ನೂ ಸರಕಾರಿ ವೈದ್ಯಕೀಯ ಕಾಲೇಜು ಪಡೆಯುವುದು ಯಾವ ಲೆಕ್ಕ’ ಎನ್ನುತ್ತಾರೆ ವಿಜಯಪುರ ಹೋರಾಟ ಸಮಿತಿಯ ಹಿರಿಯ ಮುಖಂಡರುಗಳು. ‘ನಮ್ಮ ಹಕ್ಕನ್ನು ನಾವು ಕೇಳೋಣ. ನಮ್ಮ ಜಿಲ್ಲೆಗಾಗುತ್ತಿರುವ ಅನ್ಯಾಯವನ್ನು ಪ್ರಶ್ನಿಸೋಣ. ಜನರ ಬೆನ್ನಿಗೆ ಚೂರಿ ಇರಿಯುವ ಕುತಂತ್ರವನ್ನು ಸೋಲಿಸೋಣ. ಬಡವರ ಆರೋಗ್ಯ ಮತ್ತು ಶಿಕ್ಷಣ ಹಕ್ಕನ್ನು ಉಳಿಸೋಣ. ನಮ್ಮ ನೆಲದ ಋಣ ತೀರಿಸಲು ಇದಕ್ಕಿಂತ ಮತ್ತೊಂದು ಅವಕಾಶ ಬೇಕೆ?’ ಎನ್ನುತ್ತಾರೆ ಇಲ್ಲಿನ ವಿದ್ಯಾರ್ಥಿ ಯುವಕರು.
‘ರಕ್ತ ಹರಿಸೇವು, ಪ್ರಾಣಕೊಟ್ಟೇವು; ಆದರೆ ಸರಕಾರಿ ವೈದ್ಯಕೀಯ ಕಾಲೇಜು ಬಿಡಲಾರೆವು’ ಎಂಬ ಘೋಷಣೆಗಳು ಯುಜನರ ಮನದಲ್ಲೂ, ವಿಜಯಪುರದ ಬೀದಿ ಬೀದಿಗಳಲ್ಲೂ ಮೊಳಗುತ್ತಿದೆ. ಸರಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಂಡರೆ ಒಳ್ಳೆಯದು, ಇಲ್ಲದಿದ್ದರೆ ಮಡುಗಟ್ಟಿದ ಜನರ ಆಕ್ರೋಶ ಸಿಡಿದು ಹೊರಬಂದರೆ ಏನಾಗುತ್ತದೆ ಎಂಬುದು ಈಗಾಗಲೇ ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಉತ್ತರಕೊಟ್ಟಿವೆ.

ಹೆಚ್.ಟಿ. ಭರತಕುಮಾರ
ಲೇಖಕರು,
ಸಾಮಾಜಿಕ ಕಾರ್ಯಕರ್ತರು, ವಿಜಯಪುರ




