ನುಡಿ ನಮನ | ಕಿಟಕಿ ದಾಟಿ ಮಾಯವಾದರು ವಿನೋದ ಕುಮಾರ್ ಶುಕ್ಲಾ

Date:

ವಿನೋದ್ ಕುಮಾರ್ ಶುಕ್ಲ ಅವರ ಅಗಲಿಕೆ ಭಾರತೀಯ ಸಾಂಸ್ಕೃತಿಕ ಲೋಕದಲ್ಲಿ ಖಾಲಿತನವನ್ನುಂಟು ಮಾಡಿದೆ. ಮನುಷ್ಯ ಬದುಕನ್ನು ಸರಳವಾಗಿಸಿಕೊಂಡಷ್ಟೂ ಸಂತೋಷವಾಗಿರುತ್ತಾನೆ ಎಂಬ ಪಾಠವನ್ನು ಶುಕ್ಲಾ ತಮ್ಮ ಓದುಗರಿಗೆ ಕಲಿಸಿದರು. ಅವರದೇ ಒಂದು ಕೃತಿಯ (1981)ಶೀರ್ಷಿಕೆಯಂತೆ “ವೊಹ್ ಆದ್ಮಿ ಚಲಾ ಗಯಾ ನಯಾ ಗರಮ್ ಕೋಟ್ ಪಹಿನ್ಕರ್ ವಿಚಾರ ಕೀ ತರಹ” ಎನ್ನುವಂತೆ ಶುಕ್ಲಾ ಸದ್ದಿಲ್ಲದೇ ಎದ್ದು ನಡೆದರು.

ಹಿಂದಿ ಸಾಹಿತ್ಯದ ಶ್ರೇಷ್ಠ ಕವಿ – ಕಾದಂಬರಿಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕಾರದಿಂದ ಸಮ್ಮಾನಿತರಾಗಿದ್ದ ವಿನೋದ ಕುಮಾರ್ ಶುಕ್ಲಾ ಅವರು ಡಿ.23 ರಂದು ಇಹಲೋಕ ತ್ಯಜಿಸಿದರು. ಬದುಕಿದ್ದರೆ ಜನವರಿ 1, 2026ಕ್ಕೆ ಅವರಿಗೆ 89 ವರ್ಷ ವಯಸ್ಸಾಗುತ್ತಿತ್ತು. ಹಿಂದಿ ಸಾಹಿತ್ಯದಲ್ಲಿ ಕವಿ ಅಜ್ಞೇಯರ ನಂತರ ಗದ್ಯ ಮತ್ತು ಕಾವ್ಯ ಎರಡರಲ್ಲೂ ತಮ್ಮ ಆಳವಾದ ಸಾಹಿತ್ಯ ಅಭಿವ್ಯಕ್ತಿಗೆ ಹೆಸರುವಾಸಿಯಾದ ಕೆಲವೇ ಕೆಲವು ಜನರಲ್ಲಿ ಶುಕ್ಲಾಜಿ ಒಬ್ಬರಾಗಿದ್ದರು. ಅವರ ಭಾಷೆ ಕಾವ್ಯಮಯ. ಸರಳವಾದ ಸಣ್ಣ ಸಣ್ಣ ವಾಕ್ಯಗಳು, ಕೆಲವೊಮ್ಮೆ ವ್ಯಾಕರಣವೇ ಇರುವುದಿಲ್ಲ. ವ್ಯಾಕರಣ ಹಾಗೂ ಕಥನ ಶೈಲಿಯನ್ನು ಮೀರುವ ವಿಶಿಷ್ಟವಾದ ಭಾಷೆಯೊಂದನ್ನು ತಾವೇ ಸೃಷ್ಟಿಸಿಕೊಂಡಿದ್ದರು ಶುಕ್ಲಾಜಿ. ಸಾಮಾನ್ಯವಾದ ಸಂಗತಿಗಳನ್ನು ಅಸಾಮಾನ್ಯಗೊಳಿಸುವ ಕಲೆ ಶುಕ್ಲಾ ಅವರಿಗೆ ಸಿದ್ಧಿಸಿತ್ತು. 

ಕಳೆದ ವರ್ಷ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಯಾವುದೋ ಒಂದು ಕಾರ್ಯಕ್ರಮಕ್ಕೆ ಹೋದವಳು ವಿನೋದ ಕುಮಾರ್ ಶುಕ್ಲಾರ “ದೀವಾರ್ ಮೇ ಏಕ್ ಖಿಡಕಿ ರೆಹತಿ ಥೀ” ಕಾದಂಬರಿಯನ್ನು ಕೊಂಡುತಂದಿದ್ದೆ. ಓದತೊಡಗಿದಂತೆ ಅದು ಎಷ್ಟು ಆವರಿಸಿಕೊಂಡಿತೆಂದರೆ ಅಲ್ಲಿನ ಭಾಷೆ, ಕಿಟಕಿಯಾಚೆಗಿನ ಯಕ್ಷಲೋಕ, ಬಾಡಿಗೆ ಮನೆಯೊಂದರಲ್ಲಿ ಹೊಸ ಸಂಸಾರವನ್ನು ಆರಂಭಿಸಿರುವ ಮಧ್ಯಮ ವರ್ಗದ ದಂಪತಿಗಳ ಪ್ರೇಮ, ಕನಸುಗಳ ಮೂಲಕ ಅವರು ಕಾಣುವ ಸ್ವಪ್ನಲೋಕ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. ಅಲ್ಲಿ ದಂಪತಿಗಳಷ್ಟೇ ಇಲ್ಲ, ರಘುವರನ ಮಾ, ಬಾಬೂಜಿ, ಒಬ್ಬ ಪುಟ್ಟ ತಮ್ಮನಿದ್ದಾನೆ. ರಘುವರನ ಕಚೇರಿಯ ಸಹೋದ್ಯೋಗಿ, ಒಂದು ಆನೆ, ಆನೆಯ ಮಾವುತ, ಮರದಲ್ಲಿ ಕುಳಿತು ಕಾಲಹರಣ ಮಾಡುವ ಹುಡುಗ, ನದಿ, ಪರ್ವತ ಎಲ್ಲವೂ ಇವೆ. ಮಾಯಕಾತಿಯಂತಹ ’ಅಮ್ಮಾ’ ಇದ್ದಾಳೆ. ಗದ್ಯ ಓದುತ್ತ ಓದುತ್ತ ಅದು ಪದ್ಯವಾಗಿರುತ್ತದೆ. ಸುಂದರ ವಿಹಂಗಮವಾದ ಚಿತ್ರಣ. ಓದುಗರಿಗೂ ಅದು ಕಿಟಕಿಯಾಗಿ ಅಷ್ಟೇ ಉಳಿಯುವುದಿಲ್ಲ. ಕಿಟಕಿಯ ರೂಪಕದ ಮೂಲಕ ವಿನೋದ ಕುಮಾರ್ ಶುಕ್ಲಾ ಇಡೀ ಮನುಷ್ಯ ಬದುಕಿನ ಆಗುಹೋಗು, ವರ್ತಮಾನ ಭವಿಷ್ಯತ್ತಿನ ರಸಮಯವಾದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಕಾದಂಬರಿಯನ್ನು ಪೂರ್ತಿ ಓದಿದ ಬಳಿಕ ಅನುವಾದಿಸಬೇಕೆಂದು ತೀವ್ರವಾಗಿ ಅನಿಸತೊಡಗಿತ್ತು. ಯಾರನ್ನು ವಿಚಾರಿಸಲಿ ಎಂದುಕೊಳ್ಳುತ್ತಿರುವಾಗ ಆಗಷ್ಟೇ ಮಯೂರದಲ್ಲಿ ನಾಗ ಎಚ್ ಹುಬ್ಳಿ ಅವರ ವಿನೋದ ಕುಮಾರ್ ಶುಕ್ಲ ಸಂದರ್ಶನ ಪ್ರಕಟಗೊಂಡಿದ್ದು ಕಣ್ಣಿಗೆ ಬಿತ್ತು. ಸರಿ ನಾಗಾ ಅವರನ್ನೇ ವಿಚಾರಿಸಿದೆ. ಅದು ಈಗಾಗಲೇ ಅನುವಾದಗೊಂಡಿದೆ. ಆದರೆ ಅನುವಾದಕರ ಬಗ್ಗೆ ಮಾಹಿತಿಯಿಲ್ಲವೆಂದರು. ಇತ್ತೀಚೆಗೆ ಮಾನ್ಯ ತೇಜಸ್ವಿ ಕಟ್ಟಿಮನಿ ಅವರು ಅನುವಾದಿಸಿದ್ದು ತಿಳಿಯಿತು. ಅಚ್ಚರಿಯೆಂದರೆ ಆ ಪುಸ್ತಕವೂ ನನ್ನ ಬಳಿಯೇ ಇತ್ತು. ಅನುವಾದದ ವಿಚಾರ ಕೈಬಿಟ್ಟೆನಾದರೂ ಗೋಡೆಯ ಮೇಲಿನ ಆ ಕಿಟಕಿ, ಪಾತ್ರಧಾರಿಗಳಾದ ರಘುವರ ಪ್ರಸಾದ ಹಾಗೂ ಸೋನ್ಸಿ ಕಾಡುತ್ತಲೇ ಇದ್ದರು ಒಳಗೆ.   

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಕೃತಿಗೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇದನ್ನು ಆಧುನಿಕ ಕಾಲದ ಶ್ರೇಷ್ಠ ಕೃತಿಯೆಂದು ಪರಿಗಣಿಸಲಾಗಿದೆ. ಶುಕ್ಲಾಜಿ ಯಾವತ್ತೂ ಬಾಲ್ಯದ ಮುಗ್ಧತೆಯನ್ನು ಕಳೆದುಕೊಳ್ಳುವುದಿಲ್ಲ. ’ಬಚಪನ್ ಬಹುತ್ ಯಾದ್ ಆತಾ ಹೈ” ಎನ್ನುತ್ತಾರೆ.  ಅವರ ರಚನೆಗಳಲ್ಲಿ ನೆಲಮೂಲದ ಸಾಂದ್ರತೆಯನ್ನು ಕಾಣಬಹುದು. ಅವರನ್ನುತ್ತಾರೆ- “ನೀವು ಎಷ್ಟು ಸ್ಥಳೀಯರಾಗಿರುತ್ತಿರೋ, ಅಷ್ಟೇ ವೈಶ್ವಿಕರಾಗುತ್ತೀರಿ. ವಿಶಾಲವಾದ ವೈಶ್ವಿಕತೆಯಲ್ಲಿ ನೀವು ನಿಮ್ಮ ವಿಶಾಲವಾದ ಸ್ಥಳೀಯತೆಯನ್ನು ಕಟೆದು ನಿಲ್ಲಿಸಿದರೆ ಅದು ಎಲ್ಲಕ್ಕಿಂತ ಹೆಚ್ಚಿನ ವೈಶ್ವಿಕತೆಯಾಗುವುದು.  ನೀವು ನಿಮ್ಮ ಸ್ಥಳೀಯತೆಯನ್ನು (ನೆಲಮೂಲ ಸಂಸ್ಕೃತಿಯನ್ನು) ಜೋಪಾನವಾಗಿಡಿ. ನೀವು ಜೋಪಾನವಾಗಿಟ್ಟದ್ದೇ ನೀವು ಬಾಳಿದ ಬದುಕಾಗಿರುತ್ತದೆ. ನಿಮ್ಮ ಬಾಲ್ಯ, ಬಾಲ್ಯದಲ್ಲಿ ನೀವು ಕಂಡ ಭೂಗೋಳವಿದೆಯಲ್ಲ ಅದು ಮತ್ತೆ ಮತ್ತೆ ನಿಮ್ಮ ಸ್ಮೃತಿಯಲ್ಲಿ ಮರುಕಳಿಸುವಂತಿರಬೇಕು. ಮತ್ತು ಅದನ್ನು ಮತೆ ಮತ್ತೆ ಮೆಲುಕು ಹಾಕುತ್ತಿರಬೇಕು” ಎನ್ನುತ್ತಾರೆ. 

ಈಗಲೂ ನನ್ನ ಸ್ಮೃತಿಯಲ್ಲಿ “ಗೋಡೆಯಲ್ಲಿ ಒಂದು ಕಿಟಕಿ ಇತ್ತು” ಒಂದು ಪುಳಕ, ಮಾಯಾಲೋಕದ ಅಸಂಗತಗಳ ಹಾಗೂ ವರ್ತಮಾನದ ಸ್ವಪ್ನ. ಒಬ್ಬ ಸರಳ ಶಾಲಾ ಶಿಕ್ಷಕನಾಗಿದ್ದ ರಘುವರ ಪ್ರಸಾದ ಮತ್ತು ಅವನ ಪತ್ನಿ ಸೋನ್ಸಿಯನ್ನು ನೆನೆದಾಗಲೆಲ್ಲ ಅಲ್ಲಲ್ಲಿ ಮುದ್ದಣ ಮನೋರಮೆ ನೆನಪಾದರೆ ಕಿಟಕಿಯಿಂದಾಚೆ ಅವರು ಕಾಣುವ ಮಾಯಾಲೋಕ ಚಿತ್ತಾಲರ ಹನೂರನ್ನೂ, ಕಂಬಾರರ ಚಕೋರಿಯನ್ನೂ ನೆನಪಿಸುವ ಒಂದು ಊರಿನ ಮಧ್ಯಮ ವರ್ಗದ ಸಾಧಾರಣ ಪಾತ್ರಗಳ ಸಾಧಾರಣ ಕತೆಯಲ್ಲಿ ಅಸಾಧಾರಣವಾದುದನ್ನು ವಿನೋದ ಕುಮಾರ್ ಶುಕ್ಲಾ ನಮಗೆ ಕಾಣಿಸುತ್ತಾರೆ. 

ಈ ಕಾದಂಬರಿಯಲ್ಲಿ ಯಾವುದೇ ಖಳನಾಯಕರು ಅಥವಾ ಯಾವುದೇ ರೀತಿಯ ಸಾಮಾಜಿಕ ಹೋರಾಟ ಇರಲಿಲ್ಲ. ಹೂವುಗಳು ಅರಳುವುದರಿಂದ ಕಸಾಯಿಖಾನೆಗಳು ಮುಚ್ಚಲ್ಪಡದಿದ್ದರೂ, ಈ ಅರಳುವಿಕೆಯ ಕ್ರಿಯೆಯು ದೌರ್ಜನ್ಯಗಳ ವಿರುದ್ಧ ಪ್ರತಿರೋಧವನ್ನು ಬೀರುತ್ತದೆ ಎಂದು ರಘುವರ್ ಪ್ರಸಾದ್ ಪಾತ್ರದ ಮೂಲಕ ಶುಕ್ಲಾಜಿ ವಿವರಿಸುತ್ತಾರೆ. ಸೌಂದರ್ಯದ ರಹಸ್ಯಗಳು ಮಾನವರ ನೈಸರ್ಗಿಕ ವೇಗದಲ್ಲಿವೆ; ಈ ವಿಷಯ ಈ ಕಾದಂಬರಿಯ ಮೂಲತತ್ವವಾಗಿದೆ. ಪ್ರಪಂಚದ ವೇಗದ ವೇಗವು ನಮ್ಮ “ವರ್ತಮಾನ”ವನ್ನು ನಮ್ಮಿಂದ ಕಸಿದುಕೊಂಡಿದೆ. ವಿನೋದ್ ಶುಕ್ಲಾಜಿ ಪದೇ ಪದೇ “ವರ್ತಮಾನ”ವನ್ನು ಒತ್ತಿಹೇಳುತ್ತಾರೆ ಮತ್ತು ಕಾದಂಬರಿ ಕೂಡ “ಇಂದಿನ ಬೆಳಿಗ್ಗೆ” ನೊಂದಿಗೆ ಪ್ರಾರಂಭವಾಗುತ್ತದೆ. ಸೂರ್ಯ, ಚಂದ್ರ, ನಕ್ಷತ್ರಗಳು, ಹಗಲುಗಳು, ರಾತ್ರಿಗಳು, ಪ್ರಾಣಿಗಳು ಮತ್ತು ಪಕ್ಷಿಗಳು ಸಹ – ಅವರು “ಇಂದಿನ” ಮಸೂರದ ಮೂಲಕ ಅವೆಲ್ಲವನ್ನೂ ಕಂಡರು; ಕಿಟಕಿಯಿಂದ ಗೋಚರಿಸುವ ಮರಗಳು ಇಂದಿನ ಮರಗಳಾಗಿದ್ದವು.

ಓದುಗಳಾಗಿ ನನಗಷ್ಟೇ ಅಲ್ಲ, ಅದು  ಹಿಂದಿ ಸಾಹಿತ್ಯಲೋಕದಲ್ಲಿಯೂ ಸಂಚಲವನ್ನು ಹುಟ್ಟಿಸಿತ್ತೆಂದು ಅನೇಕ ಹಿರಿಯ ಕವಿಗಳು ಹೇಳುತ್ತಾರೆ. ವ್ಯಾಕರಣ, ವಾಕ್ಯ ರಚನೆ ಎಲ್ಲದರಲ್ಲೂ ಶುಕ್ಲಾ ಅಭೂತಪೂರ್ವ ಪ್ರಯೋಗ ಮಾಡಿದ್ದಾರೆ. ವಾಕ್ಯಗಳು ವಾಕ್ಯಗಳಾಗುವುದಿಲ್ಲ, ಎಲ್ಲೋ ತುಂಡಾಗುತ್ತವೆ, ಒಂದರ ಅರ್ಥದಲ್ಲಿ ಒಂದರ ಪದದಲ್ಲಿ ಇನ್ನೊಂದು ಸೇರುತ್ತದೆ, ಇಲ್ಲಾ ಕಳಚಿಕೊಂಡು ಅಲ್ಲೇ ಉಳಿದುಹೋಗಿರುತ್ತದೆ.

ಸರಳವೆಂದುಕೊಂಡದ್ದು ಗಹನವಾಗಿರುತ್ತದೆ. ಗದ್ಯವೂ ಅಷ್ಟೇ ಪದ್ಯವೂ ಅಷ್ಟೇ. ಕೆಲವೊಮ್ಮೆ ಅರೆ… ಇದೇನು ಬರೆದಿದ್ದಾರೆ? ಹೀಗೇಕೆ ಎಂದು ಅನುವಾದಿಸುವಾಗ ಅಚ್ಚರಿಪಟ್ಟಿದ್ದೇನೆ ಅವರ ಭಾಷಾ ಪ್ರಯೋಗ ನೋಡಿ.  ವಿನೋದ ಕುಮಾರ್ ಅವರ ಮೇಲೆ ಇನ್ನೊಬ್ಬ ಪ್ರಖರ ಕವಿ ಮುಕ್ತಿಬೋಧರ ಪ್ರಭಾವ ತುಂಬಾ ಇದೆಯೆಂದು ಹಿರಿಯ ಕವಿ ನರೇಶ್ ಸಕ್ಸೆನಾ ಹೇಳುತ್ತಾರೆ. ಉದ್ಯೋಗದ ಮೇಲೆ ’ಮುಕ್ತಿಭೋದ’ರು ಛತ್ತೀಸಗಡದ ರಾಜನಂದಾಗಾಂವದಲ್ಲಿ ವರ್ಗವಾಗಿ ಹೋದಾಗ ವಿನೋದ ಕುಮಾರ್ ಶುಕ್ಲಾ ಅವರಿಗೆ ಈ ಕವಿಯ ಸಾನಿಧ್ಯ ಲಭಿಸಿತ್ತು. ನಿತ್ಯವೂ ಅವರನ್ನು ಕಾಣಲು ಹೋಗುತ್ತಿದ್ದರಂತೆ. ಹೀಗೆ ಮುಕ್ತಿಬೋಧರ ಸಾನಿಧ್ಯದಲ್ಲಿ ಪ್ರಭಾವದಲ್ಲಿ ವಿನೋದ ಕುಮಾರರ ಸಾಹಿತ್ಯ ಪ್ರತಿಭೆ ಅರಳುತ್ತದೆ.

ಕೆಲವು ಸಾಲುಗಳು ಓದುಗರಿಗಾಗಿ ಇಲ್ಲಿ ಉಲ್ಲೇಖಿಸದೇ ಇರಲಾರೆ.

“मन की खिड़की और बड़ी होती तो ठीक था। मन का हाथी बड़ा है।”

“ಮನಸ್ಸಿನ ಕಿಟಕಿ ಇನ್ನಷ್ಟು ದೊಡ್ಡದಾಗಿರುತ್ತಿದ್ದರೆ ಒಳ್ಳೆಯದಿತ್ತು, ಮನಸ್ಸಿನ ಆನೆ ದೊಡ್ಡದು”

ರಘುವರ್ ಪ್ರಸಾದ್ ಸೈಕಲ್ ಕೆಟ್ಟುಹೋದಾಗ ಆನೆಯ ಮೇಲೆ ಕುಳಿತು ಶಾಲೆಗೆ ಹೋಗುತ್ತಾರೆ. ತನ್ನ ಕಲ್ಪನೆಯ ವಿಶಾಲತೆಯನ್ನು ಕಿಟಕಿಗೆ ಹೋಲಿಸುವಾಗ. ಮನಸ್ಸು ಆನೆಯಂತೆ ದೊಡ್ಡದು, ಆದರೆ ದೈಹಿಕ ಮಿತಿಗಳು ಸಣ್ಣವು. ಇದು ಕೃತಿಯ ಕಾಲ್ಪನಿಕಯ ಥೀಮ್ ಅನ್ನು ಬಲಪಡಿಸುತ್ತದೆ.

“ओझल हो गए के पीछे-पीछे ओझल होकर ही जाया जा सकता था।”

“ಅದೃಶ್ಯವಾಗಿ ಹೋದವರ ಹಿಂದೆ ಅದೃಶ್ಯರಾಗಿಯೇ ಹೋಗಬಹುದು”

“हाथी आगे-आगे निकलता जाता था और पीछे हाथी की खाली जगह छूटती जाती थी।”

“ಆನೆ ಮುಂದೆ ಮುಂದೆ ಹೋಗುತ್ತಿತ್ತು, ಹಿಂದೆ ಆನೆ ಬಿಟ್ಟ ಖಾಲಿ ಸ್ಥಳ ಉಳಿದುಕೊಳ್ಳುತ್ತಿತ್ತು”

ಆನೆಯನ್ನು ಜೀವನದ ಸ್ಥಿರತೆಯ ಪ್ರತೀಕ, ಖಾಲಿ ಸ್ಥಳವು ಕಳೆದುಹೋದ ಕ್ಷಣಗಳನ್ನು ಅದು ಉಂಟು ಮಾಡುವ ಸಂವೇದನೆಗಳನ್ನು ಒತ್ತಿ ಹೇಳುತ್ತದೆ.

ಇಂತಹ ಮಾಯಕ ಸಾಲುಗಳು ಓದುಗರನ್ನು ಹಿಡಿದಿಡುತ್ತವೆ. 

ವಿನೋದ ಕುಮಾರ್ ಶುಕ್ಲಾ ಅವರ ಪ್ರಮುಖ ಕೃತಿಗಳಲ್ಲಿ “ನೌಕರ್ ಕಿ ಕಮೀಜ್ ( 1979- ಮಣಿಕೌಲ್ ಚಲನಚಿತ್ರವಾಗಿಸಿದ್ದಾರೆ), ’ಖಿಲೇಗಾ ತೋ ದೇಖೇಂಗೆ-1996’, ದೀವಾರ್ ಮೇ ಖೀಡಕಿ ರೆಹತಿ ಥೀ-1997,   ಕವನ ಸಂಗ್ರಹಗಳಲ್ಲಿ “ಲಗಬಗ್ ಜೈಹಿಂದ್”,  ಸಬ್ ಕುಛ್ ಹೋನಾ ಬಚಾ ರಹೇಗಾ”, ಅತಿರಿಕ್ತ ನಹೀ -2000, ಕವಿತಾ ಸೇ ಲಂಬೀ ಕವಿತಾ’ 2001, ಆಕಾಶ ಧರತೀ ಕೋ ಖಟಖಟಾತಾ ಹೈ-  2006 ಹಾಗೂ ಕಭೀ ಕೇ ಬಾದ್ ಅಭೀ –  2012 ಗಳಲ್ಲದೇ ಮಕ್ಕಳ ಸಾಹಿತ್ಯವನ್ನೂ ರಚಿಸಿದ್ದಾರೆ.

ಹತಾಶೆಯಿಂದ ಒಬ್ಬ ವ್ಯಕ್ತಿ ಕುಸಿದುಹೋಗಿದ್ದ

ವ್ಯಕ್ತಿಯ ಗುರುತಿರಲಿಲ್ಲ ನನಗೆ

ಹತಾಶೆಯನ್ನು ಬಲ್ಲವನಾಗಿದ್ದೆ

ಆದ್ದರಿಂದ ನಾನು ಆ ವ್ಯಕ್ತಿಯ ಬಳಿಗೆ ಹೋಗಿ

ಕೈ ಮುಂದೆ ಚಾಚಿದೆ

ನನ್ನ ಕೈಹಿಡಿದುಕೊಂಡು ಅವ ಎದ್ದು‌ನಿಂತ

ನನ್ನ ಗುರುತಿರಲಿಲ್ಲ ಅವನಿಗೆ

ನನ್ನ ಕೈಚಾಚುವಿಕೆಯನ್ನು ಬಲ್ಲವನಾಗಿದ್ದ

ನಾವಿಬ್ಬರೂ ಜೊತೆಯಾಗಿ ನಡೆದೆವು

ಇಬ್ಬರಿಗೂ ಒಬ್ಬರಿಗೊಬ್ಬರ ಗುರುತಿದ್ದಿಲ್ಲ

ಕೂಡಿ ನಡೆಯುವುದು ಗೊತ್ತಿತ್ತು. 

ವಿನೋದ್ ಕುಮಾರ್ ಶುಕ್ಲ ಅವರ ಅಗಲಿಕೆ ಭಾರತೀಯ ಸಾಂಸ್ಕೃತಿಕ ಲೋಕದಲ್ಲಿ ಖಾಲಿತನವನ್ನುಂಟು ಮಾಡಿದೆ. ಮನುಷ್ಯ ಬದುಕನ್ನು ಸರಳವಾಗಿಸಿಕೊಂಡಷ್ಟೂ ಸಂತೋಷವಾಗಿರುತ್ತಾನೆ ಎಂಬ ಪಾಠವನ್ನು ಶುಕ್ಲಾ ತಮ್ಮ ಓದುಗರಿಗೆ ಕಲಿಸಿದರು. ಅವರದೇ ಒಂದು ಕೃತಿಯ (1981)ಶೀರ್ಷಿಕೆಯಂತೆ “ವೊಹ್ ಆದ್ಮಿ ಚಲಾ ಗಯಾ ನಯಾ ಗರಮ್ ಕೋಟ್ ಪಹಿನ್ಕರ್ ವಿಚಾರ ಕೀ ತರಹ” ಎನ್ನುವಂತೆ ಶುಕ್ಲಾ ಸದ್ದಿಲ್ಲದೇ ಎದ್ದು ನಡೆದರು. ಸಂಘರ್ಷ, ಸಂಕಟಗಳೇ ತುಂಬಿಕೊಂಡಿರುವ ಈ ಜಗತ್ತಿನಲ್ಲಿ ನಾವೂ ಅವರು ಸೃಷ್ಟಿಸಿದ ಮಾಯಾ ಕಿಟಕಿಯ ಮೂಲಕವೇ ಸುಂದರವಾದ ಲೋಕವನ್ನು ಕಾಣುವಂತಾಗಲಿ ಎಂದು ಆಶಿಸುತ್ತೇನೆ.

WhatsApp Image 2025 11 17 at 5.18.15 PM
ರೇಣುಕಾ ನಿಡಗುಂದಿ
+ posts

ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ರೇಣುಕಾ ನಿಡಗುಂದಿ
ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...