‘ದಿ ಕ್ಯಾರವಾನ್’ ನಡೆಸಿದ RSS ಕುರಿತ ವಿಶೇಷ ತನಿಖಾ ವರದಿಯ ಅನುವಾದ ಮಾಲಿಕೆ ಆರು ಕಂತುಗಳಲ್ಲಿ ‘ಈ ದಿನ’ ದಲ್ಲಿ ಪ್ರಕಟವಾಗಲಿದೆ. ಮೊದಲ ಎರಡು ಕಂತು ಈಗಾಗಲೇ ಪ್ರಕಟವಾಗಿದೆ. ಇಲ್ಲಿದೆ ಮೂರನೇ ಕಂತು.
…….ಆದರೆ ವಿಷಯ ಕೇವಲ ಸಂಘವು ಹಲವಾರು ಮುಖವಾಡ ಸಂಸ್ಥೆಗಳ ಮೂಲಕ ಕೆಲಸ ಮಾಡುತ್ತದೆ ಎನ್ನುವುದಲ್ಲ. ವೇದ ಮಂದಿರದ ಉದಾಹರಣೆ ಮತ್ತು ನಮ್ಮ ಸಂಶೋಧನೆಯು ಇನ್ನೂ ಆಳವಾದ ಪ್ರಶ್ನೆಯನ್ನು ಎತ್ತುತ್ತವೆ. ಸರಳವಾಗಿ ಹೇಳುವುದಾದರೆ, ಜಮ್ಮು–ಕಾಶ್ಮೀರದಲ್ಲಿನ ಸಂಘದ ಚಟುವಟಿಕೆಗಳ ಅರ್ಧಕ್ಕಿಂತ ಹೆಚ್ಚು ಒಂದೇ ಆಸ್ತಿಗೆ ಸಂಬಂಧಪಟ್ಟಿರುವುದಾದರೆ, ಆರೆಸ್ಸೆಸ್ಸನ್ನು ನಾವು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬ ನಮ್ಮ ಮೂಲ ಕಲ್ಪನೆಗಳನ್ನೇ—ಹಾಗೂ ಅದು “ಪ್ರೇರೇಪಿಸುತ್ತದೆ” ಎನ್ನಲಾಗುವ ಹಿಂದೂತ್ವದ ಸಹಜ ವಿಸ್ತರಣೆಯ ಕಲ್ಪನೆಯನ್ನು—ಮತ್ತೆ ಪರಿಶೀಲಿಸಬೇಕಾಗುತ್ತದೆ. ಸಂಘದ ಅತ್ಯಂತ ಮೂಲಭೂತ ವ್ಯವಸ್ಥೆಯನ್ನು ನಾವು ಮತ್ತೆ ಗಮನಿಸಬೇಕಾಗಿದೆ.
ನಾವು ಸಂಘದ ಸಂಪರ್ಕ ಜಾಲವನ್ನು ಆಳವಾಗಿ ಶೋಧಿಸಿದಾಗ, ಜಮ್ಮುವಿನ ‘ವೇದ ಮಂದಿರ’ದ ಪ್ರಕರಣವು ಕೇವಲ ಒಂದು ಅಪವಾದವಲ್ಲ ಎಂಬುದು ಸ್ಪಷ್ಟವಾಯಿತು. ಜಮ್ಮುವಿನಲ್ಲಿ ನಮಗೆ ಕಂಡುಬಂದ ಅಂಶಗಳು, ವಾಸ್ತವವಾಗಿ ಸಂಘದ 46 ‘ಪ್ರಾಂತ’ಗಳಿಗೂ (ಪ್ರಾಂತ್ಯಗಳು) ಅನ್ವಯಿಸುತ್ತವೆ. ಪ್ರತಿಯೊಂದು ಪ್ರಾಂತವೂ ಪ್ರಚಾರಕರು, ಕಾರ್ಯವಾಹರು (ಪ್ರಧಾನ ಕಾರ್ಯದರ್ಶಿಗಳು) ಮತ್ತು ಸಂಘಚಾಲಕರ (ಸಂಯೋಜಕರು) ನೇತೃತ್ವದಲ್ಲಿ, ವಿವಿಧ ಆಡಳಿತಾತ್ಮಕ ಸ್ತರದ ಪದಾಧಿಕಾರಿಗಳ ಮೇಲ್ವಿಚಾರಣೆಗೆ ಒಳಪಟ್ಟಿದೆ. ಅಲ್ಲದೆ, ಸಂಘದ ಪ್ರಮುಖ ಸಹವರ್ತಿ ಸಂಸ್ಥೆಗಳು ಪ್ರತಿಯೊಂದು ಪ್ರಾಂತದಲ್ಲೂ ತಮ್ಮದೇ ಆದ ಪ್ರತ್ಯೇಕ ಹೆಸರು ಅಥವಾ ಸ್ವರೂಪಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ; ‘ವಿದ್ಯಾ ಭಾರತಿ’ಯು ಪಂಜಾಬ್‌ನಲ್ಲಿ ‘ಸರ್ವಹಿತಕಾರಿ ಶಿಕ್ಷಾ ಸಮಿತಿ’ಯಾಗಿ, ‘ಸೇವಾ ಭಾರತಿ’ಯು ಕರ್ನಾಟಕದಲ್ಲಿ ‘ಹಿಂದೂ ಸೇವಾ ಪ್ರತಿಷ್ಠಾನ’ವಾಗಿ ಮತ್ತು ‘ವನವಾಸಿ ಕಲ್ಯಾಣ ಆಶ್ರಮ’ವು ಜಾರ್ಖಂಡ್‌ನಲ್ಲಿ ‘ವನವಾಸಿ ಕಲ್ಯಾಣ ಕೇಂದ್ರ’ವಾಗಿ ಗುರುತಿಸಿಕೊಂಡಿವೆ.
ಈ ಪ್ರತಿಯೊಂದು ಸಹವರ್ತಿ ಸಂಸ್ಥೆಗಳನ್ನೂ, ಹೊಸದಾಗಿ ತಮ್ಮದೇ ಆದ ಉಪಸಂಸ್ಥೆಗಳನ್ನು ಸ್ಥಾಪಿಸುವಂತೆ ಪ್ರೋತ್ಸಾಹಿಸಲಾಗುತ್ತದೆ. ಮುಂದುವರಿದು, ಈ ಉಪಸಂಸ್ಥೆಗಳು ಮತ್ತೆ ತಮ್ಮದೇ ಆದ ಶಾಖೆಗಳನ್ನು ತೆರೆಯುವಂತೆ ಉತ್ತೇಜಿಸಲಾಗುತ್ತದೆ. ಉದಾಹರಣೆಗೆ, ಉತ್ತರಾಖಂಡದ ಸಿತಾರ್‌ಗಂಜ್‌ನಲ್ಲಿರುವ ‘ಬಾರಾ ರಾಣಾ ಸ್ಮಾರಕ ಛಾತ್ರಾವಾಸ’ ಎಂಬ ಸಣ್ಣ ವಿದ್ಯಾರ್ಥಿನಿಲಯಕ್ಕೂ ಮತ್ತು ಆರೆಸ್ಸೆಸ್‌ಗೂ ಇರುವ ನಂಟನ್ನು ಪತ್ತೆಹಚ್ಚುವಾಗ ಮೂರು ಹಂತದ ಸಂಪರ್ಕ ಕೊಂಡಿಗಳು ಕಂಡುಬಂದವು. ಮೊದಲಿಗೆ, ಈ ಛಾತ್ರಾವಾಸವು ‘ಬಾರಾ ರಾಣಾ ಸ್ಮಾರಕ ಸಮಿತಿ’ಗೆ ಸೇರಿದ್ದು; ಈ ಸಮಿತಿಯನ್ನು ‘ವನವಾಸಿ ಕಲ್ಯಾಣ ಆಶ್ರಮ’ದ ಪ್ರಾಂತೀಯ ಘಟಕವಾದ ‘ಸೇವಾ ಪ್ರಕಲ್ಪ ಸಂಸ್ಥಾನ’ವು ಸ್ಥಾಪಿಸಿದೆ. ಅಂತಿಮವಾಗಿ, ಈ ‘ವನವಾಸಿ ಕಲ್ಯಾಣ ಆಶ್ರಮ’ವು ಆರೆಸ್ಸೆಸ್ ಅಧಿಕೃತವಾಗಿ ಅಂಗೀಕರಿಸಿರುವ ಮೂರು ಡಜನ್ ಸಹವರ್ತಿ ಸಂಸ್ಥೆಗಳಲ್ಲಿ ಒಂದಾಗಿದೆ.

ನಾಗರಿಕ ಸಮಾಜದಲ್ಲಿ ವಿಸ್ತಾರವಾದ ಜಾಲವೊಂದನ್ನು ಕಟ್ಟುವ ಈ ವಿಧಾನವು, ಸಾಂಪ್ರದಾಯಿಕ ರಾಜಕೀಯ ಜಾಲಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಅಸ್ತಿತ್ವದಲ್ಲಿರುವ ಇತರ ಸಂಸ್ಥೆಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬದಲಿಗೆ, ತನ್ನ ಜಾಲವನ್ನು ವಿಸ್ತರಿಸಲು ಉದ್ದೇಶಪೂರ್ವಕವಾಗಿಯೇ ಹೊಸ ಸಂಸ್ಥೆಗಳನ್ನು ಹುಟ್ಟುಹಾಕುವುದು ಈ ವಿಧಾನದ ವೈಶಿಷ್ಟ್ಯ. ಹೀಗೆ ಸೃಷ್ಟಿಯಾದ ಸಂಸ್ಥೆಗಳು ಕೇಂದ್ರ ನಾಯಕತ್ವದ ನಿಯಂತ್ರಣಕ್ಕೆ ಒಳಪಟ್ಟಿರುವಂತೆ ನೋಡಿಕೊಳ್ಳಲಾಗುತ್ತದೆ. ನಾನು ಇದನ್ನು ಬೇರೊಂದು ಕಡೆ ‘ಸಾಂಸ್ಥಿಕ ಪ್ರಸರಣ’ (organisational diffusion) ಎಂದು ಕರೆದಿದ್ದೇನೆ. ಅಂದರೆ, ‘ಕೇಂದ್ರ ಜಾಲದ ಮುಖ್ಯಸ್ಥರು ಸಂಕೀರ್ಣವಾದ ಕೆಲಸದ ವಿಭಜನೆಯನ್ನು ತೆರೆಮರೆಯಲ್ಲಿಯೇ ನಿರ್ವಹಿಸಲು ಅನುಕೂಲವಾಗುವಂತೆ, ದೊಡ್ಡ ಸಂಖ್ಯೆಯಲ್ಲಿ ‘ಪ್ರಾಕ್ಸಿ’ (proxy) ಅಥವಾ ಬದಲಿ ನಾಗರಿಕ ಸೇವಾ ಸಂಸ್ಥೆಗಳನ್ನು ವ್ಯೂಹಾತ್ಮಕವಾಗಿ ಸೃಷ್ಟಿಸುವುದು’ ಎಂದರ್ಥ.
ಈ ‘ಸಾಂಸ್ಥಿಕ ಪ್ರಸರಣ’ದ ವಿಧಾನವು ಸಂಘದ ಪಾಲಿಗೆ ‘ಹಿಮದ ಮೇಲೆ ಉರುಳುತ್ತಿರುವ ಹಿಮದ ಚೆಂಡಿನಂತೆ’ (snowball effect) ಗಾತ್ರದಲ್ಲಿ ಹಿರಿದಾಗುತ್ತಾ ಹೋಗುವ ಪರಿಣಾಮವನ್ನು ಉಂಟುಮಾಡುತ್ತದೆ. ಈ ಜಾಲವು ವಿಸ್ತರಿಸುತ್ತಲೇ ಹೋದರೂ, ಅದು ಅಂತಿಮವಾಗಿ ಸಂಘದ ಅಧಿಕಾರಕ್ಕೇ ಒಳಪಟ್ಟಿರುತ್ತದೆ. ಇದರ ಪರಿಣಾಮವಾಗಿ, ಪರಸ್ಪರರ ನಡುವೆ ಸಡಿಲವಾದ ಅಥವಾ ಅನೇಕ ಬಾರಿ ಗಡಿರೇಖೆಯೇ ಇಲ್ಲದಂತಹ ಹಲವಾರು ಅಸ್ತಿತ್ವಗಳು ಸೃಷ್ಟಿಯಾಗುತ್ತವೆ. ಜಮ್ಮುವಿನ ಪ್ರಕರಣದಂತೆಯೇ, ನಾವು ಪರಿಶೀಲಿಸಿದ ಬಹುತೇಕ ಕಡೆಗಳಲ್ಲೆಲ್ಲ ಈ ಸಂಸ್ಥೆಗಳ ನಡುವಿನ ಗಡಿರೇಖೆಗಳು ಮಾಯವಾಗಿರುವುದು ಕಂಡುಬಂದಿದೆ.
ಬೆಂಗಳೂರಿನಲ್ಲಿ, ಅಭ್ಯುದಯ (ಕೇಶವ ಕೃಪಾ ಸಂವರ್ಧನಾ ಸಮಿತಿ ಎಂದೂ ಕರೆಯಲ್ಪಡುತ್ತದೆ) ತನ್ನ ವಿಳಾಸವನ್ನು ಯೂತ್ ಫಾರ್ ಸೇವಾ, ವಿದ್ಯಾ ಚೇತನ ಮತ್ತು ಸ್ಥಳೀಯ ಸೇವಾ ಭಾರತಿ ಕಚೇರಿಯೊಂದಿಗೆ ಹಂಚಿಕೊಳ್ಳುತ್ತದೆ. ಅಕೋಳದಲ್ಲಿರುವ ಆದರ್ಶ ಸಂಸ್ಕಾರ ಮಂಡಲ್, ತನ್ನ ಕಚೇರಿಯನ್ನು ಡಾ. ಹೆಡ್ಗೆವಾರ್ ರಕ್ತಪೇಢಿ ಬ್ಲಡ್ ಬ್ಯಾಂಕ್‌ನೊಂದಿಗೆ ಹಂಚಿಕೊಳ್ಳುತ್ತದೆ. ಕೆಲವೆಡೆ ಈ ಸಂಪರ್ಕಗಳು ಸ್ಪಷ್ಟವಾಗಿ ಎದ್ದು ತೋರುತ್ತವೆ. ಉದಾಹರಣೆಗೆ, ಚಿನ್ನ ಭಂಡಾರ ಜನಕಮ್ಮ ಸಂಜೀವ ರಾವ್ ಎಜುಕೇಶನಲ್ ಚಾರಿಟಬಲ್ ಪಬ್ಲಿಕ್ ಟ್ರಸ್ಟ್, ಸೇವಾ ಭಾರತಿ ಟ್ರಸ್ಟ್ ಮತ್ತು ದೇಶ ಸೇವಾ ಸಮಿತಿ ಕಡಾತನಾಡ – ಇವುಗಳ ಕಚೇರಿಗಳು ಆಯಾ ಸ್ಥಳೀಯ ಆರ್‌ಎಸ್‌ಎಸ್ ಕಚೇರಿಗಳ ಒಳಗೇ ಇವೆ.
ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಹ್ಯೂಸ್ಟನ್‌ನ ಪಶ್ಚಿಮ ಉಪನಗರಗಳಲ್ಲೂ ಇಂತಹದ್ದೇ ಮಾದರಿಗಳು ಕಂಡುಬರುತ್ತವೆ. ಅಮೆರಿಕದಲ್ಲಿ ಸಂಘದ ಪ್ರಮುಖ ಕುಟುಂಬವೆಂದು ಗುರುತಿಸಿಕೊಂಡಿರುವ ‘ಭುಟಾಡಾ’ ಕುಟುಂಬದ ಒಡೆತನದ ‘ಸ್ಟಾರ್ ಪೈಪ್ ಪ್ರಾಡಕ್ಟ್ಸ್’ ಕಂಪನಿಗೆ ಸೇರಿದ ಗೋದಾಮು (warehouse), ‘ಕೇಶವ ಸ್ಮೃತಿ’ ಎಂಬ ಹೆಸರನ್ನು ಪಡೆದುಕೊಂಡಿದೆ. ಆ ಸಂಸ್ಥೆಯ ಕರಪತ್ರಗಳ ಪ್ರಕಾರ, ‘ಕೇಶವ ಸ್ಮೃತಿ’ಯು ಸಂಘದ ಸಾಗರೋತ್ತರ ವಿಭಾಗವಾದ ‘ಹಿಂದೂ ಸ್ವಯಂಸೇವಕ ಸಂಘ’ದ (HSS) “ನೈಋತ್ಯ ಹ್ಯೂಸ್ಟನ್ ಕಚೇರಿ”ಯಾಗಿದೆ. ರಮೇಶ್ ಭುಟಾಡಾ ಅವರು ದೀರ್ಘಕಾಲದವರೆಗೆ ಎಚ್‌ಎಸ್‌ಎಸ್‌ನ ಉಪಾಧ್ಯಕ್ಷರಾಗಿದ್ದಾರೆ. ಆನ್‌ಲೈನ್ ಡೈರೆಕ್ಟರಿಗಳಲ್ಲಿ ಇದೇ ವಿಳಾಸವನ್ನು ‘ವಿಎಚ್‌ಪಿ ಆಫ್ ಅಮೆರಿಕ’ದ ಕೇಂದ್ರ ಕಚೇರಿ ಎಂದೂ ನಮೂದಿಸಲಾಗಿದೆ. ಇದು, ಅಮೆರಿಕದಲ್ಲಿರುವ ಎರಡು ಅತಿದೊಡ್ಡ ಹಿಂದುತ್ವ ಸಂಘಟನೆಗಳನ್ನು ಪ್ರತ್ಯೇಕ ಸಂಸ್ಥೆಗಳೆಂದು ಪರಿಗಣಿಸಬೇಕೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.
ಆದರೆ, ಈ ಚಿತ್ರಣವು ಇಲ್ಲಿಗೇ ನಿಲ್ಲದೆ ಇನ್ನಷ್ಟು ಸಂಕೀರ್ಣವಾಗುತ್ತಾ ಹೋಗುತ್ತದೆ. ಸಾಕಷ್ಟು ಚರ್ಚೆಯಲ್ಲಿರುವ ‘4018 ವೆಸ್ಟ್‌ಹಾಲೋ ಪಾರ್ಕ್‌ವೇ’ ಎಂಬ ವಿಳಾಸವು, ಸುಮಾರು ಅರ್ಧ ಡಜನ್ ಇತರ ಪ್ರಕರಣಗಳೊಂದಿಗೂ ತಳುಕು ಹಾಕಿಕೊಂಡಿರುವುದು ಪತ್ತೆಯಾಗಿದೆ. ಇದು ಮೋದಿ ಅವರೊಂದಿಗೆ ನಿಕಟ ಒಡನಾಟ ಹೊಂದಿರುವ ಮತ್ತು ಭುಟಾಡಾ ಸಹ-ಸಂಸ್ಥಾಪಕರಾಗಿರುವ ಯೋಗ ಪ್ರತಿಷ್ಠಾನ ‘ಎಸ್-ವ್ಯಾಸ’ದ (SVYASA) ವಿಳಾಸವಾಗಿ; ಸ್ಥಳೀಯವಾಗಿ ಸಂಘದ ನಿಯಂತ್ರಣದಲ್ಲಿರುವ ‘ಹಿಂದೂಸ್ ಆಫ್ ಗ್ರೇಟರ್ ಹ್ಯೂಸ್ಟನ್’ ಸಂಘಟನೆಯ ಕೇಂದ್ರ ಕಚೇರಿಯಾಗಿ; ‘ವಿಎಚ್‌ಪಿ ಆಫ್ ಅಮೆರಿಕ’ ಮತ್ತು ಎಚ್‌ಎಸ್‌ಎಸ್ ನಡೆಸುವ ವಿವಿಧ ಯುವ ಶಿಬಿರಗಳ ತಾಣವಾಗಿ; ನಿವೇದಿತಾ ಭಿಡೆ ಅವರಂತಹ ಭಾರತ ಮೂಲದ ಆರೆಸ್ಸೆಸ್ ನಾಯಕರು ಭಾಷಣ ಮಾಡುವ ಸ್ಥಳವಾಗಿ; ಮತ್ತು ಎಚ್‌ಎಸ್‌ಎಸ್‌ನಿಂದ ಗುಪ್ತವಾಗಿ ನಿರ್ವಹಿಸಲ್ಪಡುವ ನಿಧಿ ಸಂಗ್ರಹಣಾ ಘಟಕವಾದ ‘ಸೇವಾ ಇಂಟರ್‌ನ್ಯಾಷನಲ್’ನ ವಿಳಾಸವಾಗಿಯೂ ಗುರುತಿಸಿಕೊಂಡಿದೆ. ಸೇವಾ ಇಂಟರ್‌ನ್ಯಾಷನಲ್, ಒಳ ಉದ್ದೇಶದ ಅರಿವಿಲ್ಲದ ದಾನಿಗಳಿಂದ ಮಿಲಿಯನ್ ಗಟ್ಟಲೆ ಡಾಲರ್ ದೇಣಿಗೆಯನ್ನು (2021ರಲ್ಲಿ ಟ್ವಿಟರ್‌ನ ಮಾಜಿ ಕಾರ್ಯನಿರ್ವಾಹಕ ಜಾಕ್ ಡಾರ್ಸೆ ನೀಡಿದ 2.5 ಮಿಲಿಯನ್ ಡಾಲರ್ ಅನುದಾನವೂ ಸೇರಿದಂತೆ) ಸ್ವೀಕರಿಸಿ, ಆ ಹಣವನ್ನು ಭಾರತದಲ್ಲಿರುವ ಸಂಘಕ್ಕೆ ರವಾನಿಸುತ್ತದೆ.

ಭೌಗೋಳಿಕ ಗಡಿಗಳನ್ನು ಮೀರಿ, ಸಂಘ ಪರಿವಾರದಾದ್ಯಂತ ಭುಟಾಡಾ ಕುಟುಂಬದ ಪ್ರಭಾವದ ಕುರುಹುಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಉದಾಹರಣೆಗೆ, ರಾಜ್‌ಕೋಟ್‌ನಲ್ಲಿರುವ ಭುಟಾಡಾ ಕುಟುಂಬದ ಒಡೆತನದ ‘ಸ್ಟಾರ್ ಪೈಪ್ ಫೌಂಡ್ರಿ’ ಸಂಸ್ಥೆಯು, ಆರೆಸ್ಸೆಸ್ ಸಂಯೋಜಿತ ಚಿಂತಕರ ಚಾವಡಿಯಾದ (think tank) ‘ವಿಷನ್ ಇಂಡಿಯಾ ಫೌಂಡೇಶನ್’ನ ಪ್ರಮುಖ ಪ್ರಾಯೋಜಕ ಸಂಸ್ಥೆಯಾಗಿದೆ. ಪ್ರಸ್ತುತ ‘ಋಷಿಹುಡ್ ಯೂನಿವರ್ಸಿಟಿ’ ಎಂದು ಮರುನಾಮಕರಣಗೊಂಡಿರುವ ಈ ಸಂಸ್ಥೆಯು, ಆರೆಸ್ಸೆಸ್‌ನ ಮಾಜಿ ಪ್ರಚಾರಕ ಮತ್ತು ಭಾರತೀಯ ಜನಸಂಘದ ನಾಯಕ ದೀನದಯಾಳ್ ಉಪಾಧ್ಯಾಯ ಅವರ ‘ಚೇತನವನ್ನು ಜಾಗೃತಗೊಳಿಸಲು’ ಶ್ರಮಿಸುತ್ತಿರುವ ‘ಏಕಾತ್ಮ ಮಾನವತಾವಾದದ ಉಪಕ್ರಮ’ವನ್ನು (Integral Humanism Initiative) ನಡೆಸುತ್ತಿದೆ. ಅತ್ತ, ಸಂಘದ ಇತರ ಹಲವಾರು ಸಂಘಟನೆಗಳಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ನೀಡುವ ‘ಭುಟಾಡಾ ಫ್ಯಾಮಿಲಿ ಫೌಂಡೇಶನ್’ ಕೂಡ ‘ಕೇಶವ ಸ್ಮೃತಿ’ಯ ವಿಳಾಸವನ್ನೇ ಹೊಂದಿದೆ.
ಅಮೆರಿಕದಲ್ಲಿರುವ ಸಂಘದ ಸಹವರ್ತಿ ರಾಜಕಾರಣಿಗಳಿಗೆ ಧನಸಹಾಯ ನೀಡುವ ‘ಹಿಂದೂ ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿ’ (HAPAC) ಮೂಲಕ, ಈ ಕುಟುಂಬದ ಹಣವನ್ನು ಅಮೆರಿಕದ ರಾಜಕೀಯದಲ್ಲೂ ಬಳಸಲಾಗುತ್ತಿದೆ. ಅಮೆರಿಕದಲ್ಲಿ ಸಂಘದ ಪರವಾಗಿ ಲಾಬಿ ಮಾಡಿದ ಇತಿಹಾಸವಿರುವ ‘ಹಿಂದೂ ಅಮೆರಿಕನ್ ಫೌಂಡೇಶನ್’ (HAF) ಎಂಬ ಪ್ರತಿಪಾದನಾ ಗುಂಪಿಗೆ, ಈ HAPAC ಒಂದು ಸಹೋದರ ಸಂಸ್ಥೆಯಾಗಿದೆ. ರಮೇಶ್ ಭುಟಾಡಾ ಅವರ ಪುತ್ರ ಋಷಿ ಮತ್ತು ಅವರ ಸಂಬಂಧಿ ಕವಿತಾ ಪಲ್ಲೋಡ್ ಇಬ್ಬರೂ ದೀರ್ಘಕಾಲದಿಂದ HAF ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ.
ರಮೇಶ್ ಅವರು ಇನ್ನೂ ವಿವಿಧ ಸಂಸ್ಥೆಗಳ ನಿರ್ದೇಶಕರಾಗಿದ್ದಾರೆ: ಕುಖ್ಯಾತ ಹಿಂದೂ ಪಾರಮ್ಯವಾದಿ ನಾಯಕಿ ಋತಂಬರಾ ಅವರಿಗಾಗಿ ನಿಧಿ ಸಂಗ್ರಹಿಸುವ ಪ್ರತಿಷ್ಠಾನವಾದ ‘ಪರಂ ಶಕ್ತಿ ಪೀಠ್ ಆಫ್ ಅಮೆರಿಕ’; ಇತರ ಎಚ್‌ಎಸ್‌ಎಸ್ ಪದಾಧಿಕಾರಿಗಳೊಂದಿಗೆ ಸೇರಿ ಅವರು ನಡೆಸುವ ‘ಹಿಂದೂ ಸೊಸೈಟಿ ಆಫ್ ಅಮೆರಿಕ’; ಹಾಗೂ ಬಾಬಾ ರಾಮ್‌ದೇವ್ ಅವರ ವಿದೇಶಿ ಘಟಕವಾಗಿ ಕಾರ್ಯನಿರ್ವಹಿಸುವ ‘ಪತಂಜಲಿ ಯೋಗಪೀಠ್ ಫೌಂಡೇಶನ್’ – ಇವುಗಳಲ್ಲಿ ಪ್ರಮುಖವಾದುವು. ವಿದೇಶಿ ಆರೆಸ್ಸೆಸ್ ಕಾರ್ಯಕರ್ತರಿಗಾಗಿ ಆಯೋಜಿಸಲಾಗಿದ್ದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಹಿರಿಯ ಭುಟಾಡಾ (ರಮೇಶ್) ಸ್ವತಃ ಭಾರತಕ್ಕೆ ಬಂದಿದ್ದರು ಎಂಬ ಅಂಶವು, ಭೌಗೋಳಿಕವಾಗಿ ಎಷ್ಟೇ ದೂರದಲ್ಲಿದ್ದರೂ ತನ್ನ ಈ ಅಂಗಸಂಸ್ಥೆಗಳನ್ನು ಸಂಘಟಿಸುವಲ್ಲಿ ಸಂಘವು ಎಂತಹ ಪಾತ್ರ ವಹಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಭುಟಾಡಾ ಕುಟುಂಬದ ಸುತ್ತ ಹೆಣೆದುಕೊಂಡಿರುವ ಈ ಪ್ರಭಾವದ ದಟ್ಟಣೆಯು ಕೇವಲ ಅಮೆರಿಕಕ್ಕೆ ಮಾತ್ರ ಸೀಮಿತವಾದುದಲ್ಲ. ತುಲನಾತ್ಮಕವಾಗಿ ಸಣ್ಣ ಸಂಖ್ಯೆಯ ವ್ಯಕ್ತಿಗಳು, ಅದರಲ್ಲೂ ವಿಶೇಷವಾಗಿ ‘ಪ್ರಚಾರಕ’ರು, ಹೇಗೆ ಗಮನಾರ್ಹ ಪ್ರಭಾವ ಬೀರಬಲ್ಲರು ಎಂಬುದನ್ನು ನಮ್ಮ ದತ್ತಾಂಶಗಳು ಹೆಚ್ಚು ಹೆಚ್ಚು ಸ್ಪಷ್ಟಪಡಿಸಿವೆ.
ಮೊದಲ ಕಂತು RSS ಬೃಹತ್ ಗೌಪ್ಯ ಜಾಲವು ಅಧಿಕಾರವನ್ನು ಹೇಗೆ ನಿರ್ಮಿಸುತ್ತಿದೆ ಮತ್ತು ನಿರ್ವಹಿಸುತ್ತಿದೆ?
ಉದಾಹರಣೆಗೆ, ಆರ್‌ಎಸ್‌ಎಸ್‌ನ ಕಾರ್ಮಿಕ ವಿಭಾಗವಾದ ‘ಭಾರತೀಯ ಮಜ್ದೂರ್ ಸಂಘ’ದ (BMS) ಅಸ್ತಿತ್ವಕ್ಕೆ ಬಹುತೇಕ ದತ್ತೋಪಂತ್ ಠೇಂಗ್ಡಿ ಅವರೇ ಕಾರಣಕರ್ತರು. ಬಿಎಂಎಸ್‌ನ ಬಹುತೇಕ ಎಲ್ಲ ಅಂಗಸಂಸ್ಥೆಗಳ ಗೋಡೆಗಳ ಮೇಲೂ ಈ ಪ್ರಚಾರಕರ ಭಾವಚಿತ್ರ ಇಂದಿಗೂ ರಾರಾಜಿಸುತ್ತಿರುವುದನ್ನು ಕಾಣಬಹುದು. ಸಂಘದ ಅನೇಕ ಅಂಗಸಂಸ್ಥೆಗಳಂತೆಯೇ, ವಿವಿಧ ಎಡಪಂಥೀಯ ಗುಂಪುಗಳ ಐತಿಹಾಸಿಕವಾಗಿ ಪ್ರಬಲವಾಗಿದ್ದ ಸಂಘಟನಾ ಶಕ್ತಿಗೆ ಒಂದು ‘ಪ್ರತಿಕ್ರಿಯೆ’ಯಾಗಿ ಬಿಎಂಎಸ್ ಅನ್ನು ಸ್ಪಷ್ಟವಾಗಿ ರೂಪಿಸಲಾಗಿತ್ತು. ಆದರೆ, ಬಿಎಂಎಸ್ ಬಗ್ಗೆ ಅಗತ್ಯವಿರುವಷ್ಟು ಅಧ್ಯಯನಗಳು ನಡೆದಿಲ್ಲ ಮತ್ತು ಅದರ ನೈಜ ಬಲ ಏನೆಂಬುದು ಅಸ್ಪಷ್ಟವಾಗಿಯೇ ಉಳಿದಿದೆ. ಐದು ಸಾವಿರ ಸಂಯೋಜಿತ ಒಕ್ಕೂಟಗಳ ಮೂಲಕ ತಾನು ಒಂದು ಕೋಟಿ ಸದಸ್ಯತ್ವವನ್ನು ಹೊಂದಿರುವುದಾಗಿ ಅದು ಹೇಳಿಕೊಳ್ಳುತ್ತದೆಯಾದರೂ, ಈ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲದೇ ಇರುವುದು ಅಚ್ಚರಿಗೊಳಿಸುತ್ತದೆ.
ಇದೇ ವೇಳೆಗೆ, ಕೇರಳದಲ್ಲಿ ಇಪ್ಪತ್ತೈದು ವರ್ಷಗಳ ಕಾಲ ವಿವೇಕಾನಂದ ಕೇಂದ್ರದ ನೇತೃತ್ವ ವಹಿದ್ದ ಪ್ರಚಾರಕ ಪಿ. ಪರಮೇಶ್ವರನ್ ಅವರು ಸಂಘದ ಮುಖವಾಣಿಯಾದ ‘ಕೇಸರಿ’, ತಿರುವನಂತಪುರಂನಲ್ಲಿರುವ ಸಂಘದ ಥಿಂಕ್ ಟ್ಯಾಂಕ್ ಭಾರತೀಯ ವಿಚಾರ ಕೇಂದ್ರಂ ಹಾಗೂ ಅದರ ತ್ರೈಮಾಸಿಕ ಸಂಶೋಧನಾ ನಿಯತಕಾಲಿಕ ‘ಪ್ರಗತಿ’, ಇಂಟರ್ನ್ಯಾಷನಲ್ ಫೋರಮ್ ಫಾರ್ ಇಂಡಿಯಾಸ್ ಹೆರಿಟೇಜ್ ಮತ್ತು ಕೇರಳದಲ್ಲಿ ಭಗವದ್ಗೀತೆಯನ್ನು ಜನಪ್ರಿಯಗೊಳಿಸುವ ವೇದಿಕೆಯಾದ ಗೀತಾ ಸ್ವಾಧ್ಯಾಯ ಸಮಿತಿ – ಇವುಗಳನ್ನು ಸ್ಥಾಪಿಸುವಲ್ಲಿ ಅಥವಾ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಎರಡನೇ ಕಂತು ‘ಅಂಗಗಳ ಸಹಿತ ಸಂಘದ ಜಾಡು ಹಿಡಿಯುವ ಕೆಲಸ ತಲೆ ಸುತ್ತು ತರುವುದು ಖಚಿತ; RSSಗೆ ಬೇಕಿರುವುದೂ ಇದೇ’
ಈ ಉದಾಹರಣೆಗಳು ಮತ್ತು ಅವುಗಳನ್ನು ಬೆಸೆಯುವ ಸಂಪರ್ಕಗಳ ದಟ್ಟಣೆಯು ನಮಗೆ ಅನಿವಾರ್ಯವಾಗಿ ಮತ್ತು ಖಚಿತವಾಗಿ ಒಂದೇ ದಿಕ್ಕನ್ನು ತೋರಿಸಿದವು: ಅದೇನೆಂದರೆ, ‘ಸಂಘ’ವು ಯಾವಾಗಲೂ ಒಂದೇ ರಾಜಕೀಯ ಅಸ್ತಿತ್ವದಂತೆ (political organism) ಕಾರ್ಯನಿರ್ವಹಿಸುತ್ತಿದೆ. ಹಾಗೂ, ಸಂಘವು ಹೀಗಿಲ್ಲ ಎಂದು ವಾದಿಸುತ್ತಿದ್ದ ನಾಯಕತ್ವವೇ ಉದ್ದೇಶಪೂರ್ವಕವಾಗಿ ಈ ವ್ಯವಸ್ಥೆಯನ್ನು ರೂಪಿಸಿದೆ.
ಅದರೊಳಗೆ ಗಮನಾರ್ಹವಾದ ಆಂತರಿಕ ಭಿನ್ನತೆಗಳಿವೆ, ಜೊತೆಗೆ ಪರಸ್ಪರ ಪೈಪೋಟಿ ನೀಡುವ ಹಿತಾಸಕ್ತಿಗಳು, ಅಹಂಗಳು ಮತ್ತು ಸಾಮರ್ಥ್ಯಗಳೂ ಇವೆ. ಆದರೆ ಸಂಘದ ಈ ಕಣ್ಕಟ್ಟು ಅಥವಾ ಮರೆಮಾಚುವ ತಂತ್ರಗಳನ್ನು (smoke and mirrors) ದಾಟಿ ನೋಡಿದಾಗ, ಅದರ ಕುರುಹುಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ‘ಕೇಶವ’ನಂತಹ ಹೆಸರುಗಳು, ವಿವಿಧ ಸಂಘಟನೆಗಳ ನಾಯಕತ್ವದಲ್ಲಿ ಆಯಕಟ್ಟಿನ ಜಾಗದಲ್ಲಿರುವ ಆರೆಸ್ಸೆಸ್ ಪದಾಧಿಕಾರಿಗಳು ಮತ್ತು ಪ್ರಮುಖ ಅನಿವಾಸಿ ದಾನಿಗಳಿಂದ ಹರಿದುಬರುವ ಹಣ – ಇವೆಲ್ಲವೂ ಸ್ಪಷ್ಟವಾಗಿ ಗೋಚರಿಸುತ್ತವೆ.
ಅತ್ಯಂತ ಮುಖ್ಯವಾದ ಸಂಗತಿಯೆಂದರೆ, ತಾನು ಏನಾಗಿದ್ದೇನೆ ಮತ್ತು ತನ್ನನ್ನು ತಾನು ಹೇಗೆ ನೋಡಿಕೊಳ್ಳುತ್ತೇನೆ ಎಂಬ ಬಗ್ಗೆ ಸ್ವತಃ ಆರ್‌ಎಸ್‌ಎಸ್‌ಗೆ ಮೊದಲಿನಿಂದಲೂ ಸ್ಪಷ್ಟ ಅರಿವಿದೆ. ವಾಸ್ತವವಾಗಿ, ಸಂಘದ ಈ ಜಾರಿಕೊಳ್ಳುವ ತಂತ್ರಗಳಿಗೆ ಮರುಳಾಗದೆ, ಅದರ ಆಂತರಿಕ ಪ್ರಕಟಣೆಗಳಲ್ಲಿ ಅಡಕವಾಗಿರುವ ಸಂದೇಶದ ತಿರುಳನ್ನು ಗಮನಿಸಿದರೆ, ಒಂದೇ ರಾಜಕೀಯ ಘಟಕವಾಗಿ ಅವುಗಳ ನಡುವಿನ ಒಗ್ಗಟ್ಟು ಸ್ಪಷ್ಟವಾಗುತ್ತದೆ.
(ನಾಳೆ ಅನುವಾದ ಮಾಲಿಕೆ -4)
ಅನುವಾದ- ಚೇತನಾ ತೀರ್ಥಹಳ್ಳಿ





