ಬಿಹಾರದಲ್ಲಿ ಚುನಾವಣೆ ದಿನಾಂಕ ಘೋಷಣೆಗೆ ವಾರ ಬಾಕಿ ಇರುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಿಳಾ ರೋಜ್ಗಾರ್ ಯೋಜನೆ ಜಾರಿಗೊಳಿಸಿದ್ದರು. ಆದರೆ ಚುನಾವಣಾ ಆಯೋಗ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಎರಡನೇ ಹಂತದ ಮತದಾನ ಮುಗಿದಿದ್ದು, ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ. ಈ ಮಧ್ಯೆ ಭಾರತದ ಚುನಾವಣಾ ಆಯೋಗ, ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆ (ಎಂಎಂಆರ್‌ವೈ) ಯಡಿ ಮಹಿಳಾ ಫಲಾನುಭವಿಗಳಿಗೆ ತಲಾ ₹10,000 ನೀಡುತ್ತಿರುವುದರ ಬಗ್ಗೆ ಮೌನವಹಿಸಿರುವುದು, ಹಿಂದೆ ತಮಿಳುನಾಡಿನಲ್ಲಿ ಇದೇ ರೀತಿಯ ಯೋಜನೆಗಳನ್ನ ಕೊಟ್ಟಾಗ ಆಯೋಗವು ತೆಗೆದುಕೊಂಡ ನಿಲುವು ಈಗ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲ ಚುನಾವಣಾ ಆಯೋಗಕ್ಕೆ ಪ್ರಜೆಗಳು ಸೋಷಿಯಲ್ ಮೀಡಿಯಾ ಮೂಲಕ ಹಲವು ಪ್ರಶ್ನೆಗಳನ್ನ ಕೇಳುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆಯ (Model Code of Conduct) ಅನುಸಾರವಾಗಿ ಇಂತಹ ಯೋಜನೆಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಬಿಹಾರ ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ನಿತೀಶ್ ಕುಮಾರ್ ಸರ್ಕಾರ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಸುಮಾರು 75 ಲಕ್ಷ ಮಹಿಳೆಯರಿಗೆ ತಲಾ ₹10,000 ನೀಡುವ ಉದ್ದೇಶವಿದೆ. ಇದು ರಾಜ್ಯದಿಂದಲೇ ಹಣಕಾಸು ನೀಡುವ ಸಹಾಯ ಯೋಜನೆಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 26 ರಂದು ಇದನ್ನು ಉದ್ಘಾಟನೆ ಮಾಡಿದ್ದಾರೆ. ಮೋದಿ ಉದ್ಘಾಟನೆ ಮಾಡಿದ ಕೆಲವು ದಿನಗಳ ಅಂತರದಲ್ಲಿ, ಅಂದ್ರೆ ಅಕ್ಟೋಬರ್ 6ಕ್ಕೆ ಚುನಾವಣಾ ಆಯೋಗ ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸುವುದಾಗಿ ಘೋಷಣೆ ಮಾಡತ್ತೆ. ಮೊದಲ ಹಂತ ನವೆಂಬರ್ 6 ಎರಡನೇ ಹಂತ ನವೆಂಬರ್ 11 ರಂದು ಮತ್ತು ಫಲಿತಾಂಶ ನವೆಂಬರ್ 14ರಂದಯ ಹೊರಬೀಳಲಿದೆ ಅಂತ ಚುನಾವಣಾ ಆಯೋಗ ಘೋಷಣೆ ಮಾಡತ್ತೆ.
ಬಿಹಾರದಲ್ಲಿ ಚುನಾವಣೆ ದಿನಾಂಕ ಘೋಷಣೆಗೆ ವಾರ ಬಾಕಿ ಇರುವಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಿಳಾ ರೋಜ್ಗಾರ್ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ, ಚುನಾವಣಾ ಆಯೋಗ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ.
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಇದರ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ. ವಿರೋಧ ಪಕ್ಷದ ಪ್ರಕಾರ, ಆಡಳಿತ ಪಕ್ಷ ನೀಡಿರುವ ಯೋಜನೆ ʼಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತೆʼ. ಈ ಬಗ್ಗೆ ಆರ್‌ಜೆಡಿ ಸಂಸದ ಮನೋಜ್ ಝಾ ಅವರು ಆಯೋಗಕ್ಕೆ ಪತ್ರ ಬರೆದು ದೂರು ನೀಡಿದ್ದಾರೆ. ಆದರೂ, ಆಯೋಗವು ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿದೆ.

ಹಾಗಾದ್ರೆ ಚುನಾವಣಾ ನೀತಿ ಸಂಹಿತೆ ಎಂದರೇನು? “ಚುನಾವಣಾ ಆಯೋಗದಿಂದ ಚುನಾವಣೆ ಸಮಯದಲ್ಲಿ ಒಂದಿಷ್ಟು ರೂಲ್ಸ್ ಆಂಡ್ ರೆಗ್ಯೂಲೇಷನ್ಸ್‌ಗಳನ್ನು ನಿಗದಿಪಡಿಸಲಾಗಿರುತ್ತದೆ. ಚುನಾವಣೆಯ ಸಮಯದಲ್ಲಿ ಸರ್ಕಾರ ಮತದಾರರನ್ನು ಪ್ರಭಾವಿಸುವಂತಹ ಯಾವುದೇ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಹಾಗಿಲ್ಲ ಅಂತ ಈ ನೀತಿ ಸಂಹಿತೆ ಹೇಳುತ್ತದೆ”. ಈ ನೀತಿ ಸಂಹಿತೆಯ ಉದ್ದೇಶ ನ್ಯಾಯಸಮ್ಮತ ಮತ್ತು ಸಮಾನ ಚುನಾವಣಾ ಪ್ರಕ್ರಿಯೆ ನಡೆಯಬೇಕು ಅನ್ನೋದು.
ಇದು ಚುನಾವಣೆ ಘೋಷಣೆಯಾದ ನಂತರ ಜಾರಿಗೆ ಬರುತ್ತದೆ ಮತ್ತು ಚುನಾವಣೆ ಮುಗಿಯುವವರೆಗೆ ಅನ್ವಯವಾಗುತ್ತದೆ. ಇದು ಮುಖ್ಯ ನಿಯಮಗಳು ಹೀಗಿವೆ.
* ಸರ್ಕಾರಿ ಯೋಜನೆಗಳನ್ನು ಹೊಸದಾಗಿ ಘೋಷಿಸುವುದು ಅಥವಾ ಹಣ ವಿತರಣೆ ಮಾಡುವುದು ನಿಷೇಧ.
* ಮತದಾರರನ್ನು ಪ್ರಭಾವಿಸುವಂತಹ ಜಾಹೀರಾತುಗಳು, ಭಾಷಣಗಳು ಅಥವಾ ಕಾರ್ಯಕ್ರಮಗಳನ್ನು ನಡೆಸುವುದು ತಪ್ಪು.
* ಧರ್ಮ, ಜಾತಿ ಅಥವಾ ಹಣದ ಆಧಾರದಲ್ಲಿ ಮತ ಕೇಳುವುದು ನಿಷೇಧ.
* ಎಲ್ಲಾ ಪಕ್ಷಗಳಿಗೆ ಸಮಾನ ಅವಕಾಶ ನೀಡುವುದು.
ಆದರೆ, ಚುನಾವಣಾ ಆಯೋಗವು ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರ ಜಾರಿ ಮಾಡಿದ ಬಿಜೆಪಿ ನೇರ ಮತ ಖರೀದಿಗಿಳಿದರೂ ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿರುವುದು ನಿಜವಾಗಿಯೂ ಅಚ್ಚರಿಯ ವಿಚಾರ. ಇದು ಈ ಹಿಂದಿನ ವರ್ಷಗಳಲ್ಲಿ ಚುನಾವಣಾ ಆಯೋಗ ಬೇರೆ ಬೇರೆ ರಾಜ್ಯಗಳಲ್ಲಿ ಇದೇ ರೀತಿಯ ಯೋಜನೆಗಳನ್ನು ಜಾರಿಗೆ ತಂದಾಗ ಯಾವ ನಿಲುವನ್ನು ತಳೆದಿತ್ತು, ಆದ್ರೆ ಈಗ ಯಾಕೆ ಹೀಗಿದೆ ಅನ್ನೋ ಪ್ರಶ್ನೆ ಉದ್ಭವಿಸಲು ಕಾರಣ ಆಗಿದೆ. ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ನಡೆದ ಘಟನೆ ಹಾಗೂ ಈಗ ಬಿಹಾರದಲ್ಲಿ ನಡೀತಾ ಇರುವ ಚುನಾವಣೆಯನ್ನ ಹೋಲಿಕೆ ಮಾಡುವಂತೆ ಆಗಿದೆ.

ಚುನಾವಣಾ ಆಯೋಗದ ಕಠಿಣ ನಿಲುವು
ತಮಿಳುನಾಡಿನಲ್ಲಿ ಕಳೆದ 20-25 ವರ್ಷಗಳಲ್ಲಿ ಎರಡು ಬಾರಿ ಚುನಾವಣಾ ಆಯೋಗವು ಕಲ್ಯಾಣ ಯೋಜನೆಗಳ ಜಾರಿಯನ್ನು ತಡೆಹಿಡಿದಿದೆ. ಆದ್ರೆ ಈಗ ಬಿಹಾರದಲ್ಲಿ ನಡೀತಾ ಇರೋದಕ್ಕೆ ಇದು ಸಂಪೂರ್ಣವಾಗಿ ವಿರುದ್ಧವಾಗಿದೆ.
ರೈತರಿಗೆ ನಗದು ಸಹಾಯ ಯೋಜನೆ (2003-2004)
2003ರ ಮಾರ್ಚ್‌ನಲ್ಲಿ, ಜಯಲಲಿತಾ ನೇತೃತ್ವದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸರ್ಕಾರವು ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಯೋಜನೆಯನ್ನು ಹಿಂಪಡೆದು ಬದಲಿಗೆ, ನಗದು ಸಹಾಯ ಯೋಜನೆಯನ್ನು ಜಾರಿ ಮಾಡತ್ತೆ. ಈ ಯೋಜನೆಯಡಿ ಸುಮಾರು 9.4 ಲಕ್ಷ ಸಣ್ಣ ಮತ್ತು ಮಧ್ಯಮ ರೈತರಿಗೆ ನೀಡುವಂತೆ ಯೋಜಿಸಲಾಗತ್ತದೆ.
3-ಹಾರ್ಸ್‌ಪವರ್ ಪಂಪ್‌ಸೆಟ್‌ಗಳನ್ನು ಬಳಸುವ ರೈತರಿಗೆ ವರ್ಷಕ್ಕೆ ಎರಡು ಬಾರಿ ₹500 ಮತ್ತು 5-ಹಾರ್ಸ್‌ಪವರ್ ಅಥವಾ ಅದಕ್ಕಿಂತ ಹೆಚ್ಚಿನವರಿಗೆ ₹625 ನೀಡುವುದು, ಹಾಗೂ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ₹100 ನೀಡುವುದು ಇದರ ಭಾಗವಾಗಿತ್ತು. ಎಲ್ಲಾ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಬೇಕು ಮತ್ತು ಅರ್ಹರಿಗೆ ಅಕ್ಟೋಬರ್ ಮತ್ತು ಏಪ್ರಿಲ್‌ನಲ್ಲಿ ಪೋಸ್ಟಲ್ ಮನಿ ಆರ್ಡರ್ ಮೂಲಕ ಹಣವನ್ನು ಮರುಪಾವತಿಸುವ ವ್ಯವಸ್ಥೆಯನ್ನ ಜಾರಿ ಮಾಡಲಾಗಿತ್ತು.
ನಂತರದ ದಿನಗಳಲ್ಲಿ ಈ ಯೋಜನೆಯನ್ನು ಉಳಿದ ರೈತರಿಗೂ ವಿಸ್ತರಿಸಲಾಗತ್ತೆ ಮತ್ತು ಚುನಾವಣಾ ದಿನಾಂಖ ಘೋಷಣೆ ಆಗೋದಕ್ಕೂ ಮೊದಲೇ ಆದೇಶವನ್ನೂ ಹೊರಡಿಸಲಾಗತ್ತರ.
ಆದರೆ, 2004ರ ಮೇ 6ರಂದು ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹಿರಿಯ ರೈತ ನಾಯಕ ಎಂ.ಆರ್. ಶಿವಸಾಮಿ ಅವರು ಹೇಳಿದಂತೆ, ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಯಾರಿಗೂ ಹಣ ಕೊಡಬಾರದು ಅಂತ ಚುನಾವಣಾ ಆಯೋಗ 2004ರ ಮಾರ್ಚ್ 22ರಂದು ಅಂದಿನ ಮುಖ್ಯ ಚುನಾವಣಾ ಅಧಿಕಾರಿ ಮೃತ್ಯುಂಜಯ ಸಾರಂಗಿ ಅವರು ಜಿಲ್ಲಾ ಕಲೆಕ್ಟರ್‌ಗಳಿಗೆ ಸುತ್ತೋಲೆ ಕಳುಹಿಸಿ, ಮನಿ ಆರ್ಡರ್ ವಿತರಣೆಯನ್ನು ಚುನಾವಣೆ ಮುಗಿಯುವವರೆಗೆ ನಿಲ್ಲಿಸುವಂತೆ ಆದೇಶಿಸುತ್ತಾರೆ. ಈ ಯೋಜನೆ ಚುನಾವಣಾ ದಿನಾಂಕವನ್ನ ಘೋಷಣೆ ಮಾಡೋದಕ್ಕೂ ಮೊದಲೇ ಜಾರಿಯಲ್ಲಿತ್ತು, ಆದರೂ ಕೂಡ ಆಯೋಗವು ಅದನ್ನು ತಾತ್ಕಾಲಿಕವಾಗಿ ನಿಲ್ಲಿಸತ್ತೆ.

ಉಚಿತ ಬಣ್ಣದ ಟಿವಿ ವಿತರಣೆ ಯೋಜನೆ (2011)
2011ರ ಮಾರ್ಚ್ ಆರಂಭದಲ್ಲಿ, ಚುನಾವಣಾ ಆಯೋಗವು ವಿಧಾನಸಭಾ ಚುನಾವಣಾ ದಿನಾಂಕವನ್ನ ಘೋಷಿಸಿದ ನಂತರ, ಉಚಿತ ಬಣ್ಣದ ಟಿವಿಗಳನ್ನ ಕೊಡುವುದಾಗಿ ಘೋಷಿಸಿದ್ದ ನಿರ್ಧಾರಕ್ಕೆ ಚುನಾವಣಾ ಆಯೋಗ ಕತ್ತರಿ ಪ್ರಯೋಗ ಮಾಡುತ್ತದೆ. ಟಿವಿ ವಿತರಣೆಯನ್ನು ಚುನಾವಣೆ ಮುಗಿಯುವವರೆಗೆ ನಿಲ್ಲಿಸುವಂತೆ ಜಿಲ್ಲಾ ಕಲೆಕ್ಟರ್‌ಗಳಿಗೆ ಸೂಚನೆ ನೀಡುತ್ತದೆ.
ಇದು ಅಂದಿನ ಡಿಎಂಕೆ ಸರ್ಕಾರದ ಬಹಳ ಜನಪ್ರಿಯ ಯೋಜನೆಯಾಗಿತ್ತು, ಇದು 2006ರ ಸೆಪ್ಟೆಂಬರ್‌ನಿಂದ ಜಾರಿಯಲ್ಲಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನ ಸುಮಾರು 1.62 ಕೋಟಿ ಟಿವಿಗಳನ್ನು ವಿತರಿಸಲಾಗಿತ್ತು ಮತ್ತು ಇನ್ನೂ ಸುಮಾರು 9 ಲಕ್ಷ ಟಿವಿಗಳನ್ನ ನೀಡಬೇಕಿತ್ತು. ಆದರೂ, ಆಯೋಗ ಚುನಾವಣೆಯ ಸಮಯದಲ್ಲಿ ವಿತರಣೆಯನ್ನು ಸ್ಟಾಪ್ ಮಾಡಿಸಿತ್ತು.

ಈ ಎರಡೂ ಯೋಜನೆಗಳು ಚುನಾವಣಾ ದಿನಾಂಕ ಘೋಷಣೆ ಆಗೋದಕ್ಕೂ ಮೊದಲೇ ಜಾರಿಯಾಗಿತ್ತು, ಆದರೂ ಆಯೋಗವು ಅಂತಹ ಯೋಜನೆಗಳನ್ನ ತಾತ್ಕಾಲಿಕವಾಗಿ ನಿಲ್ಲಿಸಿ, ಚುನಾವಣಾ ಪ್ರಕ್ರಿಯೆಗೆ ಅಡ್ಡಿಯಾಗದೇ ಇರೋ ರೀತಿ ನೋಡಿಕೊಂಡಿತ್ತು. ಯಾಕಂದ್ರೆ ಆಡಳಿತ ಪಕ್ಷಗಳು ಚುನಾವಣೆ ಸಮಯದಲ್ಲಿ ಮತದಾರರನ್ನು ತಮ್ಮ ಯೋಜನೆಗಳ ಮೂಲಕ ಸೆಳೆಯುವ ಸಾಧ್ಯತೆಯನ್ನು ತಪ್ಪಿಸುವ ಉದ್ದೇಶದಿಂದ.
ಆದರೆ ಬಿಹಾರದಲ್ಲಿ ಏನಾಯ್ತು?
ಬಿಹಾರದಲ್ಲಿ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಯನ್ನು ಚುನಾವಣೆಯ ಸಮಯದಲ್ಲಿ ಜಾರಿಗೆ ತರಲಾಗಿದೆ. ತಮಿಳುನಾಡಿನಲ್ಲಿ ಮಾಡಿದ ರೀತಿಯಲ್ಲಿ ಬಿಹಾರದಲ್ಲಿ ಯಾಕೆ ಇಂತಹ ಯೋಜನೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸೋಕೆ ಸಾಧ್ಯ ಇಲ್ಲ? ನಿಷೇಧಿಸೋಕೆ ಸಾಧ್ಯ ಇಲ್ವಾ? ಅಥವಾ ನಿಷೇಧ ಮಾಡೋಕೆ ಚುನಾವಣಾ ಆಯೋಗಕ್ಕೆ ಮನಸಿಲ್ವಾ? ಈ ಪ್ರಶ್ನೆಯಿಂದ ಚುನಾವಣಾ ಆಯೋಗ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯ ಇಲ್ಲ ಅಲ್ವಾ?

ತಮಿಳುನಾಡಿನಲ್ಲಿ ಚುನಾವಣಾ ಆಯೋಗ ಕಠಿಣ ಕ್ರಮಗಳನ್ನು ಕೈಗೊಂಡಿತ್ತು ಆದರೆ ಬಿಹಾರದಲ್ಲಿ ಮೌನವಹಿಸಿರುವುದು ಕಾರಣ ಏನು? ಇದಕ್ಕೆ ರಾಜಕೀಯ ಅಥವಾ ಪಕ್ಷಗಳ ಪ್ರಭಾವ ಕಾರಣವೇ? ವಿರೋಧ ಪಕ್ಷಗಳು ಇದನ್ನು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಕರೆಯುತ್ತಿವೆ ಮತ್ತು ಆಯೋಗದ ಮೇಲೆ ಒತ್ತಡ ಹೇರುತ್ತಿವೆ. ಇದು ಕೇವಲ ವಿರೋಧ ಪಕ್ಷ ಮಾತ್ರ ಉಲ್ಲಂಘನೆ ಅಂತ ಕರೆಯೋದಕ್ಕ ನಾಡಿನ ಪ್ರತಿಯೊಬ್ಬ ಪ್ರಜೆಯೂ ಈಗ ಇದನ್ನ ಚುನಾವಣಾ ಉಲ್ಲಂಘನೆ ಅಂತ ಕರೆದು ಇದಕ್ಕೆ ವಿರೋಧ ವ್ಯಕ್ತಪಡಿಸುವ ತುರ್ತಿದೆ.

ಚುನಾವಣಾ ನೀತಿ ಸಂಹಿತೆಯು ಭಾರತದಲ್ಲಿ ಪ್ರಜಾಪ್ರಭುತ್ವದ ಮೂಲಸ್ತಂಭವಾಗಿದ್ದು, ಇದು ಎಲ್ಲಾ ಪಕ್ಷಗಳಿಗೆ ಸಮಾನ ಅವಕಾಶ ನೀಡುತ್ತದೆ. ಚುನಾವಣಾ ಆಯೋಗದ ಇಂತಹ ದ್ವಂದ್ವ ನಿಲುವು ಚುನಾವಣಾ ಆಯೋಗದ ನಿಷ್ಪಕ್ಷಪಾತ ನಡೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.
ಚುನಾವಣೆಯ ಸಮಯದಲ್ಲಿ ಆಡಳಿತ ಪಕ್ಷಗಳ ಯೋಜನೆಗಳು ಮತದಾರರನ್ನು ಪ್ರಭಾವಿಸದಂತೆ ನೋಡಿಕೊಳ್ಳುವುದು ಮುಖ್ಯ ಅಲ್ಲವೇ? ತಮಿಳುನಾಡಿನಲ್ಲಿ ಚುನಾವಣಾ ಆಯೋಗ ತೆಗೆದುಕೊಂಡ ಕಠಿಣ ನಿಲುವನ್ನ ಬಿಹಾರದಲ್ಲಿ ತೆಗೆದುಕೊಳ್ಳೋಕೆ ಯಾಕೆ ಸಾಧ್ಯ ಆಗ್ತಿಲ್ಲ? ಚುನಾವಣಾ ನೀತಿ ಸಂಹಿತೆ ಅಂದ ಮೇಲೆ ಅದು ಇಡೀ ರಾಷ್ಟ್ರಕ್ಕೆ ಒಂದೇ ನೀತಿ ಸಂಹಿತೆ ಅಲ್ಲವೇ? ಅಥವಾ ಬೇರೆ ಬೇರೆ ರಾಜ್ಯಕ್ಕೆ ಬೇರೆ ಬೇರೆ ನೀತಿ ಸಂಹಿತೆ ಇದೆಯಾ ಎಂಬ ಪ್ರಶ್ನೆ ಮೂಡುತ್ತದೆ.





