ಇಂದು ‘ಕೊರಿಯನ್’ ಮಕ್ಕಳನ್ನು ಅಪಾರವಾಗಿ ಸೆಳೆಯುತ್ತಿದೆ. ನೀವು ಮಕ್ಕಳೊಂದಿಗೆ ಮಾತನಾಡಿ ನೋಡಿದರೆ, ಕೊರಿಯನ್ ಬಗ್ಗೆ ಅವರಲ್ಲಿರುವ ಸೆಳೆತ ನಿಮಗೂ ಗೊತ್ತಾಗುತ್ತದೆ. ಸೀರೀಸ್‌ಗಳು, ವೀಡಿಯೋಗಳು, ಆಟಗಳು ಮತ್ತು ಅದರ ಭಾಷೆಯ ಮೂಲಕ ಅದು ಮಕ್ಕಳ ಮನಸ್ಸಿಗೆ ನುಗ್ಗುತ್ತಿದೆ. ಕೆಲ ಮಕ್ಕಳು ಕೊರಿಯನ್ ಶೈಲಿಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ.
ಉತ್ತರ ಪ್ರದೇಶದ ಘಾಝಿಯಾಬಾದ್‌ನಲ್ಲಿ ಬುಧವಾರ ಒಂಬತ್ತನೇ ಮಹಡಿಯಿಂದ ಹಾರಿ ಅಪ್ರಾಪ್ತ ವಯಸ್ಸಿನ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಡೀ ದೇಶದಲ್ಲಿ ಕಳವಳ ಸೃಷ್ಟಿಸಿದೆ. ಇದು ಕೇವಲ ಒಂದು ಕುಟುಂಬದ ದುರಂತವಲ್ಲ. ಇದು ಇಂದಿನ ನಮ್ಮ ಸ್ಮಾರ್ಟ್‌ಫೋನ್ ಬದುಕು, ಮಕ್ಕಳ ಮನೋಲೋಕ ಮತ್ತು ಪೋಷಕರಾಗಿ ನಾವು ಎಲ್ಲಿ ಕೈ ತಪ್ಪಿಸುತ್ತಿದ್ದೇವೆ ಎಂಬುದರ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿರುವ ಘಟನೆ.
ಮೃತರಾದ ನಿಶಿಕಾ (16), ಪ್ರಾಚಿ (14), ಪಖಿ (12) ಕಳೆದ ಮೂರು ವರ್ಷಗಳಿಂದ ಮೊಬೈಲ್‌ನಲ್ಲಿ ಕೊರಿಯನ್ ಆಟಗಳು ಮತ್ತು ವೀಡಿಯೋಗಳಲ್ಲಿ ಮುಳುಗಿದ್ದರು ಎಂದು ಮಕ್ಕಳ ತಂದೆ ಚೇತನ್ ಕುಮಾರ್ ತಿಳಿಸಿದ್ದಾರೆ. ಆ ಮಕ್ಕಳ ಜಗತ್ತು ನಿಧಾನವಾಗಿ ಪರದೆಯೊಳಗಿನ ಬದುಕಿಗೆ ಸೀಮಿತವಾಗಿತ್ತು ಎಂದು ಅವರು ಕಣ್ಣೀರಿನಿಂದ ನಿಟ್ಟುಸಿರು ಬಿಡುತ್ತಾರೆ. “ಇಂತಹ ದುಸ್ಥಿತಿ ಯಾರಿಗೂ ಬರಬಾರದು” ಎಂಬ ಅವರ ಮಾತು, ಒಬ್ಬ ತಂದೆಯ ಅಸಹಾಯಕತೆಯನ್ನು ಹೇಳುತ್ತದೆ.
ಇದನ್ನು ಓದಿದ್ದೀರಾ? ಟಾಸ್ಕ್ ಆಧಾರಿತ ಆನ್‌ಲೈನ್ ಗೇಮ್; ಮೂವರು ಸೋದರಿಯರ ದಾರುಣ ಅಂತ್ಯ
ಈ ಪ್ರಕರಣವು ಕೊರಿಯನ್ ಸಂಸ್ಕೃತಿಯ ಮೇಲಿನ ಅತಿಯಾದ ಮೋಹದ ಗಂಭೀರ ಪರಿಣಾಮಕ್ಕೆ ನಿದರ್ಶನವಾಗಿದೆ ಎಂದು ಮನಃಶಾಸ್ತ್ರಜ್ಞೆ ವಂದನಾ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳಲ್ಲಿ ಇಂತಹ ಅತಿಯಾದ ಆಸಕ್ತಿ ನಿಧಾನವಾಗಿ ಅವರನ್ನು ವಾಸ್ತವ ಬದುಕಿನಿಂದ ದೂರಕ್ಕೆ ತಳ್ಳುತ್ತದೆ ಎಂದು ಅವರು ಎಚ್ಚರಿಸುತ್ತಾರೆ.
ಪೊಲೀಸರು ವಶಪಡಿಸಿಕೊಂಡ ಡೈರಿಯಲ್ಲಿ ಬಾಲಕಿಯರು “ನಾವು ಕೊರಿಯನ್ ಅನ್ನು ಪ್ರೀತಿಸುತ್ತೇವೆ… ಇದು ನಿಜವಾದ ಜೀವನ ಕಥೆ” ಎಂದು ಬರೆದಿದ್ದಾರೆ. “ಕೊರಿಯನ್ ನಮ್ಮ ಜೀವನ. ಅದನ್ನು ತ್ಯಜಿಸಲು ಒತ್ತಾಯಿಸುತ್ತಿದ್ದೀರಿ. ನಿಮ್ಮ ಒತ್ತಡಕ್ಕಿಂತ ಸಾವೇ ಲೇಸು… ಕ್ಷಮಿಸಿ ಅಪ್ಪಾ” ಎಂಬ ಸಾಲುಗಳು ಆ ಮಕ್ಕಳ ಮನಸ್ಸಿನಲ್ಲಿ ಬೆಳೆದಿದ್ದ ಒತ್ತಡದ ತೀವ್ರತೆಯನ್ನು ಬಿಚ್ಚಿಡುತ್ತವೆ.
ಒಂದು ಕಾಲದಲ್ಲಿ ವೀಡಿಯೋ ಗೇಮ್‌ಗಳ ಹುಚ್ಚು ಮಕ್ಕಳನ್ನು ಹೇಗೆ ತನ್ನೊಳಗೆ ಸೆಳೆದುಕೊಂಡಿತ್ತೆಂಬುದು ನಮಗೆ ಗೊತ್ತೇ ಇದೆ. ಆಟ ಎನ್ನುವ ಹೆಸರಿನಲ್ಲಿ ಆರಂಭವಾದ ಅಭ್ಯಾಸ, ಕೆಲ ಮಕ್ಕಳಲ್ಲಿ ವಾಸ್ತವ ಜಗತ್ತಿನಿಂದ ದೂರ ಹೋಗುವ ವ್ಯಸನವಾಗಿ ಬದಲಾಯಿತು. ಮಾನಸಿಕ ಅಸ್ಥಿರತೆ, ಒಂಟಿತನ, ಸಾಮಾಜಿಕ ಸಂಪರ್ಕ ಕಡಿಮೆಯಾಗುವಂತಹ ಪರಿಣಾಮಗಳು ದೇಶದ ಹಲವು ಕಡೆ ಕಂಡುಬಂದವು. ಪರಿಸ್ಥಿತಿ ಪೋಷಕರು ಮಕ್ಕಳ ಅಂತ್ಯಕ್ರಿಯೆ ಮಾಡಬೇಕಾದಷ್ಟು ಗಂಭೀರವಾದಾಗ, ಕೆಲವು ಗೇಮ್‌ಗಳನ್ನು ಸರ್ಕಾರವೇ ನಿಷೇಧಿಸಬೇಕಾಯಿತು. ಆದರೆ ಸಮಸ್ಯೆ ಅಲ್ಲಿ ಮುಗಿಯಲಿಲ್ಲ. ಅದು ಹೊಸ ರೂಪ ತೊಟ್ಟಿದೆ ಎಂಬುದನ್ನು ಘಾಝಿಯಾಬಾದ್‌ನ ಘಟನೆ ನಮಗೆ ಹೇಳುತ್ತಿದೆ!
ಇಂದು ‘ಕೊರಿಯನ್’ ಮಕ್ಕಳನ್ನು ಅಪಾರವಾಗಿ ಸೆಳೆಯುತ್ತಿದೆ. ನೀವು ಮಕ್ಕಳೊಂದಿಗೆ ಮಾತನಾಡಿ ನೋಡಿದರೆ, ಕೊರಿಯನ್ ಬಗ್ಗೆ ಅವರಲ್ಲಿರುವ ಸೆಳೆತ ನಿಮಗೂ ಗೊತ್ತಾಗುತ್ತದೆ. ಸೀರೀಸ್‌ಗಳು, ವೀಡಿಯೋಗಳು, ಆಟಗಳು ಮತ್ತು ಅದರ ಭಾಷೆಯ ಮೂಲಕ ಅದು ಮಕ್ಕಳ ಮನಸ್ಸಿಗೆ ನುಗ್ಗುತ್ತಿದೆ. ಕೆಲ ಮಕ್ಕಳು ಕೊರಿಯನ್ ಶೈಲಿಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಅವರಂತೆಯೇ ಬದುಕಬೇಕು ಎಂಬ ಕನಸು ಕಾಣುತ್ತಿದ್ದಾರೆ. “ದೊಡ್ಡವರಾದರೆ ಕೊರಿಯನ್‌ಗೆ ಹೋಗೋಣ್ವಾ?” ಎಂದು ಹೆತ್ತವರ ಮುಂದೆ ಆಸೆ ವ್ಯಕ್ತಪಡಿಸುತ್ತಿರುವ ಮಕ್ಕಳಿದ್ದಾರೆ. ಆದರೆ ಈ ಸೆಳೆತ ಏಕೆ ಇಷ್ಟು ಗಟ್ಟಿಯಾಗಿದೆ ಎಂಬ ಪ್ರಶ್ನೆಗೆ ನನ್ನಲ್ಲಂತೂ ಸ್ಪಷ್ಟ ಉತ್ತರ ಇಲ್ಲ.
ಸ್ಕೂಲ್ ಪಾಠದ ಭಾರ, ಅಂಕಗಳ ಒತ್ತಡ, ನಿರಂತರ ಸ್ಪರ್ಧೆ ಮತ್ತು “ಮೊಬೈಲ್‌ನಲ್ಲಿ ಮುಳುಗ್ತಾರೆ” ಎಂಬ ಹಿರಿಯರ ಟೀಕೆಗಳು ಮಕ್ಕಳ ಮನಸ್ಸಿಗೆ ಒತ್ತಡವಾಗುತ್ತಿವೆಯೇ? ಆ ಒತ್ತಡದಿಂದ ದೂರ ಹೋಗಲು ಅವರು ತಮ್ಮದೇ ಒಂದು ಕಲ್ಪಿತ ಜಗತ್ತಿನ ಕಡೆ ತಿರುಗುತ್ತಿದ್ದಾರೇನೋ ಎಂಬ ಅನುಮಾನ ಕಾಡುತ್ತದೆ. ಅಂದರೆ ಇದು ಕೇವಲ ವಿದೇಶಿ ಸಂಸ್ಕೃತಿಯ ಮೆಚ್ಚುಗೆ ಅಲ್ಲ. ಇದು ಗುರುತು ಹುಡುಕುವ ವಯಸ್ಸಿನ ಮಕ್ಕಳಿಗೆ ಸಿಗುವ ಒಂದು ರೀತಿಯ ಎಸ್ಕೇಪ್.

ಪರದೆಯೊಳಗಿನ ಜಗತ್ತು ಅವರಿಗೆ ಸುಂದರವಾಗಿ, ಶಿಸ್ತುಬದ್ಧವಾಗಿ, ಕನಸಿನಂತೆ ಕಾಣುತ್ತದೆ. ಅಲ್ಲಿ ಪ್ರಶ್ನೆಗಳಿಲ್ಲ. ಅಲ್ಲಿ ಗದರಿಕೆಯಿಲ್ಲ. ಅಲ್ಲಿ ಅವರು ಯಾರಾಗಬೇಕೆಂದರೂ ಆಗಬಹುದು. ವಾಸ್ತವ ಜಗತ್ತಿನಲ್ಲಿ ಸಿಗದ ಶಾಂತಿ, ಅಲ್ಲಿ ಸುಲಭವಾಗಿ ಸಿಗುತ್ತದೆ. ಅಂತಹ ಒಂದು ಲೋಕವನ್ನು ಕೊರಿಯನ್ ವೀಡಿಯೋಗಳು ಮತ್ತು ಸೀರೀಸ್‌ಗಳು ಮಕ್ಕಳಿಗೆ ಕೊಡುತ್ತಿವೆ ಎನ್ನುವ ಭಾವ ಮೂಡುತ್ತದೆ.
ಆದರೆ ಪೋಷಕರು ಆ ಜಗತ್ತನ್ನು ಏಕಾಏಕಿ ಕತ್ತರಿಸಲು ಹೋದರೆ, ಮಕ್ಕಳಿಗೆ ಅದು ಕಾಳಜಿಯಾಗಿ ಕಾಣುವುದಿಲ್ಲ. ಅದು ಪ್ರೀತಿಯ ಬದುಕೊಂದನ್ನು ಕಳೆದುಕೊಳ್ಳುವಂತೆ ಕಾಣಬಹುದು. ಸ್ವಾತಂತ್ರ್ಯದ ಹರಣದಂತೆ ಅನುಭವವಾಗಬಹುದು. ಆಗ ಮಾತು ಕಡಿಮೆಯಾಗುತ್ತದೆ. ಮೌನ ಹೆಚ್ಚಾಗುತ್ತದೆ. ಆ ಮೌನವೇ ಅಪಾಯಕಾರಿ. ಆಗ ಶಿಕ್ಷೆ, ಮೊಬೈಲ್ ಫೋನ್ ಅಲಭ್ಯತೆ ಅನಾಹುತ ತಂದೊಡ್ಡಬಲ್ಲದು. ಘಾಝಿಯಾಬಾದ್‌ನಲ್ಲಿ ಅದೇ ನಡೆದಿದೆ.
ಮಕ್ಕಳ ಕೈಯಿಂದ ಮೊಬೈಲ್ ಕಿತ್ತುಕೊಳ್ಳುವ ಆತುರಕ್ಕಿಂತ ಮೊದಲು, ಅವರ ಮನಸ್ಸನ್ನು ಕೇಳುವ ತಾಳ್ಮೆ ಬೆಳೆಸಬೇಕು. ಪರದೆ ಒಳಗೆ ಮಕ್ಕಳಿಗೆ ಏನು ಸಿಗುತ್ತಿದೆ ಅನ್ನೋದನ್ನು ಅರ್ಥಮಾಡಿಕೊಳ್ಳಬೇಕು. ನಿಯಂತ್ರಣ ಅಗತ್ಯವೇ, ಆದರೆ ಸಂಭಾಷಣೆ ಅದಕ್ಕಿಂತ ಮುಖ್ಯ. “ಬಿಡು” ಎನ್ನುವ ಮೊದಲು “ಏಕೆ ನಿನಗೆ ಇದು ಇಷ್ಟ?” ಎಂದು ಕೇಳುವ ಧೈರ್ಯ ಇರಲಿ. ಮಕ್ಕಳ ಮೌನವನ್ನು ಸಿಂಪಲ್ ಆಗಿ ನೋಡಬಾರದು. ಯಾಕೆಂದರೆ ಮಕ್ಕಳು ನಮ್ಮೊಂದಿಗೆ ಸಂಭಾಷಣೆ ನಿಲ್ಲಿಸಿ ಮೌನವಾಗುವಾಗ, ಒಂಟಿಯಾಗಿ ಇರಲು ಬಯಸುವಾಗ ಅವರು ಏನನ್ನೋ ಹೇಳಲು ಪ್ರಯತ್ನಿಸುತ್ತಿರುತ್ತಾರೆ ಎಂದರ್ಥ. ಮೊಬೈಲ್ ಕೊಡದೇ ಇರೋದು ಪ್ರಾಕ್ಟಿಕಲ್ ಅಲ್ಲ, ಕೊಟ್ಟರೆ ಸಮಯಮಿತಿ ಹಾಕೋದು ಮುಖ್ಯ. ಒಟ್ಟಿನಲ್ಲಿ ಮಕ್ಕಳ ವಿಷಯದಲ್ಲಿ ಸೂಕ್ಷ್ಮತೆ, ತಾಳ್ಮೆ ಮತ್ತು ಮಾನವೀಯತೆ ಅತ್ಯಗತ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




