ಯಾವುದೇ ಅಭಿವೃದ್ಧಿಯಾದರೂ ವೈಜ್ಞಾನಿಕ ದೃಷ್ಟಿಕೋನವಿರಲಿ; ಜನಪರವಾಗಿರಲಿ. ರೈತರ ದುಡಿಮೆ ಮತ್ತು ಆಹಾರ ವ್ಯವಸ್ಥೆ ಕಾಪಿಟ್ಟುಕೊಳ್ಳುವ ಜವಾಬ್ದಾರಿಯೂ ಸರ್ಕಾರಕ್ಕಿರಲಿ...
ಅತಿ ಹೆಚ್ಚು ಸಂಚಾರದಟ್ಟಣೆ, ಜನದಟ್ಟಣೆ ಇರುವ ಮಹಾನಗರಗಳಾದ ದೆಹಲಿ ಮತ್ತು ಬೆಂಗಳೂರಿನಲ್ಲಿ ಹೈಪರ್‌ಲೂಪ್, ಮೆಟ್ರಿನೋ ಪಾಡ್ ಟ್ಯಾಕ್ಸಿ ಮತ್ತು 135 ಸೀಟುಗಳ ವಿದ್ಯುತ್‌ಚಾಲಿತ ತ್ವರಿತ ಸಮೂಹ ಸಾರಿಗೆ ಬಸ್ ವ್ಯವಸ್ಥೆ ಮೊದಲಾದವುಗಳನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಹೈಪರ್‌ಲೂಪ್ ಪರಿಚಯಿಸುವ ಬಗ್ಗೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಚರ್ಚೆಯು ಮತ್ತೆ ಮುನ್ನೆಲೆಗೆ ಬಂದಿದೆ. ಚೆನ್ನೈನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಚೆನ್ನೈಗೆ ಬರೀ 30 ನಿಮಿಷದಲ್ಲಿ ಪ್ರಯಾಣ ಮಾಡಬಹುದು ಎಂಬ ವಿಚಾರದಿಂದಾಗಿಯೇ ಹೈಪರ್‌ಲೂಪ್ ಹೆಚ್ಚು ಸುದ್ದಿಯಲ್ಲಿದೆ.
ಸದ್ಯ ವಿಶ್ವದಲ್ಲಿ ಯಾವುದೇ ದೇಶ ಪ್ರಯಾಣಿಕರ ಸಾರಿಗೆ ವ್ಯವಸ್ಥೆಯಾಗಿ ಹೈಪರ್‌ಲೂಪ್ ರೈಲು ಬಳಸುತ್ತಿಲ್ಲ. ಕೆಲವು ದೇಶಗಳಷ್ಟೆ ಅಭಿವೃದ್ಧಿ, ಪ್ರಯೋಗವನ್ನು ನಡೆಸುತ್ತಿವೆ. ಆ ದೇಶಗಳ ಪೈಕಿ ಭಾರತವೂ ಒಂದು. ಹೈಪರ್‌ಲೂಪ್ ಅಭಿವೃದ್ಧಿ ವಿಚಾರಕ್ಕೆ ಬಂದರೆ ಮುಂಚೂಣಿಯಲ್ಲಿರುವುದು ಭಾರತ. ಐಐಟಿ ಮದ್ರಾಸ್ ಮತ್ತು ಟಿಯುಟಿಆರ್ ಈ ಅತಿ ವೇಗದ ರೈಲಿನ ಅಭಿವೃದ್ಧಿ ಪ್ರಯತ್ನದಲ್ಲಿದೆ. ಉಳಿದಂತೆ ಅಮೆರಿಕ, ಜಪಾನ್ ಮತ್ತು ಚೀನಾದಂತಹ ಇತರ ದೇಶಗಳು ಸಹ ಹೈಪರ್‌ಲೂಪ್ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿವೆ.
ಇದನ್ನು ಓದಿದ್ದೀರಾ? ದೆಹಲಿಯಲ್ಲಿ ದಟ್ಟವಾದ ಮಂಜು: 110 ವಿಮಾನ, 25 ರೈಲುಗಳ ಸಂಚಾರಕ್ಕೆ ತೊಂದರೆ
ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಉದ್ಯಮಿ, ಟೆಸ್ಲಾ, ಎಕ್ಸ್ ಮೊದಲಾದ ಸಂಸ್ಥೆಗಳ ಮಾಲೀಕ ಎಲಾನ್ ಮಸ್ಕ್ ಈ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದ್ದು. ಬಳಿಕ ಹಲವು ದೇಶಗಳು ಪ್ರಯಾಣಿಕರ ಮತ್ತು ಸರಕು ಸಾಗಣೆ ನಿಟ್ಟಿನಲ್ಲಿ ಹೈಪರ್‌ಲೂಪ್ ಅಭಿವೃದ್ಧಿಯತ್ತ ಮುಖಮಾಡಿವೆ. ಭಾರತ ಮಾತ್ರ ಯಾವ ಮಾರ್ಗದಲ್ಲಿ ಹೈಪರ್‌ಲೂಪ್ ನಿರ್ಮಿಸಲಾಗುವುದು ಎಂಬುದನ್ನು ಘೋಷಿಸಿದೆ.
ಬೆಂಗಳೂರಿನಲ್ಲಿ ಹೈಪರ್‌ಲೂಪ್
ಹೈಪರ್‌ಲೂಪ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜೀಸ್(HTT) 2016ರಲ್ಲಿ ಭಾರತ ಸರ್ಕಾರದೊಂದಿಗೆ ಚೆನ್ನೈ ಮತ್ತು ಬೆಂಗಳೂರು ನಡುವೆ 30 ನಿಮಿಷಗಳಲ್ಲಿ 345 ಕಿಮೀ (214 ಮೈಲಿ) ಕ್ರಮಿಸಬಲ್ಲ ಹೈಪರ್‌ಲೂಪ್ ನಿರ್ಮಿಸುವ ಒಪ್ಪಂದ ಮಾಡಿಕೊಂಡಿದೆ. ಹಾಗೆಯೇ 2018ರಲ್ಲಿ ಅಮರಾವತಿ, ವಿಜಯವಾಡದ ನಡುವೆ 6 ನಿಮಿಷಗಳ ಸಂಚಾರದ ಹೈಪರ್‌ಲೂಪ್ ನಿರ್ಮಾಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶ ಸರ್ಕಾರದೊಂದಿಗಿನ ಒಪ್ಪಂದಕ್ಕೂ HTT ಸಹಿ ಹಾಕಿದೆ ಎಂದು ವರದಿಗಳು ಹೇಳುತ್ತವೆ.
ಇನ್ನು 2018ರ ಫೆಬ್ರವರಿ 22ರಂದು ಹೈಪರ್‌ಲೂಪ್ ಒನ್, ಮುಂಬೈ ಮತ್ತು ಪುಣೆ ನಡುವೆ ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಮೆಮೊರಂಡಮ್(ಜ್ಞಾಪಕ ಪತ್ರ) ಮಾಡಿಕೊಂಡಿದೆ. ಪ್ರಸ್ತುತ ಇರುವ 180 ನಿಮಿಷಗಳ ಸಂಚಾರ ಸಮಯವನ್ನು 20 ನಿಮಿಷಗಳಿಗೆ ಇಳಿಸುವ ಯೋಜನೆ ಇದಾಗಿದೆ. 2016ರಲ್ಲಿ, ಇಂದೋರ್ ಮೂಲದ ಡಿನ್‌ಕ್ಲಿಕ್ಸ್ ಗ್ರೌಂಡ್ ವರ್ಕ್ಸ್‌ನ ಡಿಜಿಡಬ್ಲ್ಯೂ ಹೈಪರ್‌ಲೂಪ್ ಮುಂಬೈ ಮತ್ತು ದೆಹಲಿ ನಡುವೆ ಇಂದೋರ್, ಕೋಟಾ ಮತ್ತು ಜೈಪುರ ಮೂಲಕ ಹೈಪರ್‌ಲೂಪ್ ಕಾರಿಡಾರ್ ಅನ್ನು ನಿರ್ಮಿಸುವ ಪ್ರಸ್ತಾಪ ಮಾಡಿದೆ. ಇದಕ್ಕೆ ಪೂರಕವಾಗಿ ವಿಶ್ವಾದ್ಯಂತ, ಕಾಲೇಜು ಮಟ್ಟದ ಹೈಪರ್‌ಲೂಪ್ ಸ್ಪರ್ಧೆಯನ್ನು ತಮಿಳುನಾಡಿನ ತೈಯೂರಿನ ಕಾಲೇಜು ಕ್ಯಾಂಪಸ್‌ಗಳಲ್ಲಿ 2025ರ ಫೆಬ್ರವರಿಯಲ್ಲಿ 21-25ರವರೆಗೆ ನಡೆಸಲಾಗಿದೆ. ಐದು ವರ್ಷದಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿಯಿದೆ.
ಇದನ್ನು ಓದಿದ್ದೀರಾ? ಚೀನಾದಿಂದ ಬೆಂಗಳೂರಿಗೆ ಆಗಮಿಸಿದ ನಮ್ಮ ಮೆಟ್ರೋದ ಮೊದಲ ಚಾಲಕ ರಹಿತ ರೈಲು
ಹೈಪರ್‌ಲೂಪ್: ವಾಸ್ತವವೇನು?
ಒಂದು ಟ್ಯೂಬ್‌ನಂತಿರುವ ಹೈಪರ್‌ಲೂಪ್‌ನಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಸುಮಾರು 350 ಕಿ.ಮೀ ದೂರವನ್ನು ಕೇವಲ 30 ನಿಮಿಷಗಳಲ್ಲಿ ಪ್ರಯಾಣಿಸುವ ವಿಚಾರ ಬಂದಾಗ ಹಲವು ಮಂದಿ ನಿಬ್ಬೆರಗಾದರು. ಗಂಟೆಗೆ 1,000 ಕಿಮೀವರೆಗೆ ಅತ್ಯಂತ ವೇಗದಲ್ಲಿ ಪ್ರಯಾಣಿಸುವ ಯೋಜನೆ ಇದಾಗಿದ್ದು, ತಂತ್ರಜ್ಞಾನ ಅಷ್ಟೊಂದು ವೇಗವಾಗಿ ಬೆಳೆದಿದೆ ಎಂಬ ಅಭಿಪ್ರಾಯಗಳು ಮೂಡಿಬಂತು. ಆದರೆ ವಾಸ್ತವದಲ್ಲಿ ಹೈಪರ್‌ಲೂಪ್ ತಂತ್ರಜ್ಞಾನ ಸಂಪೂರ್ಣವಾಗಿ ಅಭಿವೃದ್ಧಿಯಾಗಿ ಕಾರ್ಯರೂಪಕ್ಕೆ ಬರಲು ಇನ್ನೂ ಹತ್ತು ವರ್ಷಗಳು ಬೇಕಾಗಲಿದೆ ಎನ್ನುತ್ತಾರೆ ‘ಆವಿಷ್ಕಾರ್ ಹೈಪರ್‌ಲೂಪ್’ ಎಂಬ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಮದ್ರಾಸ್‌ನ ಪದವಿಪೂರ್ವ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳನ್ನು ಒಳಗೊಂಡ 50ಕ್ಕೂ ಹೆಚ್ಚು ಜನರ ತಂಡ.
ಎರಡು ವರ್ಷಗಳ ಹಿಂದೆ ವಿದ್ಯಾರ್ಥಿ ತಂಡದ ನಾಯಕಿ ಮೇಧಾ ಕೊಮ್ಮಜೋಸ್ಯುಲಾ ‘ದಿ ಪ್ರಿಂಟ್’ಗೆ ತಿಳಿಸಿರುವಂತೆ, ಇದೇ ವೇಗದಲ್ಲಿ ಅಭಿವೃದ್ಧಿ ಕಾರ್ಯ ಸಾಗಿದರೆ ಮುಂದಿನ 10 ವರ್ಷಗಳಲ್ಲಿ ಹೈಪರ್‌ಲೂಪ್ ರೈಲನ್ನು ನಿರ್ಮಿಸಲು ಸಾಧ್ಯವಾಗಬಹುದು. ಇದರ ಒಟ್ಟಾರೆ ವೆಚ್ಚ 6ರಿಂದ 10 ಬಿಲಿಯನ್ ಡಾಲರ್ ಅಂದರೆ 600ರಿಂದ 1,000 ಕೋಟಿ ರೂಪಾಯಿಯಷ್ಟು ಎಂದು ಹೇಳಲಾಗಿದೆ.
ಇತರೆ ಸಾರಿಗೆ ವ್ಯವಸ್ಥೆಗಳಿಗೆ ಹೋಲಿಸಿದಾಗ ಹೈಪರ್‌ಲೂಪ್ ಪರಿಸರಕ್ಕೆ ಕೊಂಚ ಕಡಿಮೆ ಪ್ರಭಾವ ಬೀರುತ್ತದೆ. ಆದರೆ ಭೂಮಿಯ ಸ್ವಾಧೀನದಂತಹ ಸಮಸ್ಯೆಗಳು ಖಂಡಿತ ಉದ್ಭವಿಸಲಿವೆ. ಇನ್ನು ಹತ್ತು ವರ್ಷದಲ್ಲಿ ಅಭಿವೃದ್ಧಿ ನೆಪದಲ್ಲಿ ಇನ್ನೆಷ್ಟು ರೈತರ ಫಲವತ್ತಾದ ಭೂಮಿಗೆ ಸರ್ಕಾರದ ಕಣ್ಣು ಬೀಳಲಿದೆಯೋ, ದೇವನಹಳ್ಳಿ ರೈತ ಹೋರಾಟದಂತೆ ಅದೆಷ್ಟು ರೈತ ಹೋರಾಟಕ್ಕೆ ನಾವು-ನೀವು ಸಾಕ್ಷಿಯಾಗಬೇಕಾಗಬಹುದು ಎಂಬ ಆತಂಕವೂ ಇದೆ. ಯಾವುದೇ ಅಭಿವೃದ್ಧಿಯಾದರೂ ವೈಜ್ಞಾನಿಕ ದೃಷ್ಟಿಕೋನವಿರಲಿ; ಜನಪರವಾಗಿರಲಿ. ರೈತರ ದುಡಿಮೆ ಮತ್ತು ಆಹಾರ ವ್ಯವಸ್ಥೆ ಕಾಪಿಟ್ಟುಕೊಳ್ಳುವ ಜವಾಬ್ದಾರಿಯೂ ಸರ್ಕಾರಕ್ಕಿರಲಿ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




