ಹೊಸದಾಗಿ ಬಿಡುಗಡೆಯಾಗಿರುವ ಈ ದಾಖಲೆಗಳು, ಕೆಲವು ರಾಜಮನೆತನದವರು ಎಪ್ಸ್ಟೀನ್ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಈ ಹಿಂದೆ ನೀಡಿದ್ದ ಸಾರ್ವಜನಿಕ ಸ್ಪಷ್ಟನೆಗಳು ಸುಳ್ಳೆಂದು ಸಾಬೀತುಪಡಿಸುತ್ತಿವೆ.
ಸದ್ಯಕ್ಕೆ ಜಾಗತಿಕ ಮಟ್ಟದಲ್ಲಿ ಟ್ರಂಪ್ ಹುಚ್ಚಾಟಗಳು, ಸುಂಕ ಹೇರಿಕೆ ಹಾಗೂ ಜಾಗತಿಕ ಒಪ್ಪಂದಗಳ ಕುರಿತಾದ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿಯೇ, ಬೃಹತ್ ಲೈಂಗಿಕ ಅಪರಾಧಿಯ ಜೆಫ್ರಿ ಎಪ್ಸ್ಟೀನ್ ಕುರಿತ ಗಂಭೀರ ವಿಚಾರಗಳೂ ಬಹಿರಂಗಗೊಂಡಿವೆ. ಅಮೆರಿಕದ ನ್ಯಾಯ ಮಂಡಳಿ ಬಿಡುಗಡೆ ಮಾಡಿದ ಕೆಲವು ದಾಖಲೆಗಳು ಜಾಗತಿಕ ಪ್ರಭಾವಿಗಳನ್ನು ಪೇಚಿಗೆ ಸಿಲುಕಿಸಿದೆ. ಆತನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಂಪರ್ಕ ಹೊಂದಿದ್ದರು. ವಿದೇಶಾಂಗ ಭೇಟಿಗಳಲ್ಲೂ ಆತನ ಪ್ರಭಾವವಿತ್ತು ಎಂಬ ವಿಚಾರಗಳು ಬೆಳಕಿಗೆ ಬಂದಿವೆ. ಇದೀಗ, ಆತನ ಸಂಪರ್ಕ, ಸ್ನೇಹ ಸಂಬಂಧಗಳು ಹಲವು ರಾಜಮನೆತನಗಳವರೆಗೂ ವಿಸ್ತರಿಸಿತ್ತು ಎಂಬುದೂ ಬಹಿರಂಗಗೊಂಡಿದೆ.
ಎಪ್ಸ್ಟೀನ್ ಪ್ರಭಾವಿ ರಾಜಕಾರಣಿಗಳು ಮತ್ತು ಶ್ರೀಮಂತರೊಂದಿಗೆ ದೀರ್ಘಕಾಲದ ಸಂಪರ್ಕ ಹೊಂದಿದ್ದನು. ಆತ, 2019ರಲ್ಲಿ ಲೈಂಗಿಕ ಕಳ್ಳಸಾಗಣೆ ಆರೋಪದಲ್ಲಿ ಶಿಕ್ಷೆಗೊಳಗಾಗಿ, ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು, ಅಮೆರಿಕ ಅಧ್ಯಕ್ಷ ಟ್ರಂಪ್, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಬಿಲ್ ಗೇಟ್ಸ್, ಎಲಾನ್ ಮಸ್ಕ್ ಹಾಗೂ ಇತರ ಅನೇಕರೊಂದಿಗೆ ನಿಕಟತೆ ಹೊಂದಿದ್ದ ಎಂಬುದನ್ನು ಇತ್ತೀಚಿಗೆ ಬಿಡುಗಡೆಯಾದ ‘Epstine file’ ಬಹಿರಂಗಪಡಿಸಿದೆ. ಅಲ್ಲದೆ, ಕೆಲವು ರಾಜಮನೆತನದ ಸದಸ್ಯರು ಮತ್ತು ಅವರ ಸಹವರ್ತಿಗಳು ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿಯ ಕುಖ್ಯಾತಿಯನ್ನು ಪದೇ ಪದೇ ನಿರ್ಲಕ್ಷಿಸಿ, ಆತನನ್ನು ಹೊಗಳುತ್ತಾ ಹಣ, ಉಡುಗೊರೆಗಳನ್ನು ಕೊಡುವ ಮೂಲಕ ಆತನೊಂದಿಗೆ ಅನ್ಯೋನ್ಯತೆ ಹೊಂದಿದ್ದರು ಎಂಬುದಕ್ಕೆ ಹಲವು ಪುರಾವೆಗಳನ್ನು ಬಹಿರಂಗಪಡಿಸಿದೆ.
ಎಪ್ಸ್ಟೀನ್ ತನ್ನ ಹಣದ ಪ್ರಭಾವ ಮತ್ತು ಹೆಣ್ಣುಮಕ್ಕಳನ್ನು ಕಳ್ಳಸಾಗಣೆ ಮಾಡಿ ಲೈಂಗಿಕ ಕುಕೃತ್ಯಕ್ಕೆ ಒದಗಿಸುವ ಮೂಲಕ ಅತ್ಯಂತ ಪ್ರಭಾವಶಾಲಿ, ಸ್ಥಾನಮಾನ ಹೊಂದಿದ ಹಾಗೂ ಶ್ರೀಮಂತ ವ್ಯಕ್ತಿಗಳೊಂದಿಗೆ ಸಂಬಂಧ ಬೆಳೆಸಿದ್ದನು. ಆತ ರಾಜಮನೆತನದವರು ಮತ್ತು ಅವರ ಆಪ್ತರೊಂದಿಗೆ ಎಷ್ಟು ಆಪ್ತತೆ ಹೊಂದಿದ್ದನೆಂಬುದನ್ನು ಈಗ ಬಿಡುಗಡೆಯಾಗಿರುವ ನೂರಾರು ಪಠ್ಯ ಸಂದೇಶಗಳು, ಇಮೇಲ್‌ಗಳು, ಫೋಟೋಗಳು ಮತ್ತು ವಿಡಿಯೋಗಳು ತೋರಿಸುತ್ತವೆ.

ಬ್ರಿಟಿಷ್ ಮಾಜಿ ಡಚೆಸ್ ಒಬ್ಬರು ಜೆಫ್ರಿ ಎಪ್ಸ್ಟೀನ್ ಅವರನ್ನು ‘ನಾನು ಸದಾ ಹಂಬಲಿಸುತ್ತಿದ್ದ ಸಹೋದರ’ ಎಂದು ಕರೆದ್ದರು. ಎಪ್ಸ್ಟೀನ್‌ನ ಲೈಂಗಿಕ ಕಳ್ಳಸಾಗಣೆ ಅಪರಾಧಗಳು ಬೆಳಕಿಗೆ ಬಂದ ನಂತರವೂ ನಾರ್ವೆಯ ಭಾವಿ ರಾಣಿ ‘ನನ್ನ ಕ್ರೇಜಿ ಸ್ನೇಹಿತನನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಬರೆದಿದ್ದರು. ಸೌದಿ ರಾಜಮನೆತನದ ಸಲಹೆಗಾರರೊಬ್ಬರು ಎಪ್ಸ್ಟೀನ್ ಅವರೊಂದಿಗೆ ಅಸಭ್ಯ ಮತ್ತು ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದರು ಎಂದು ‘ಎಪ್ಸ್ಟೀನ್ ಫೈಲ್’ ವಿವರಿಸುತ್ತದೆ.
ಸೌದಿ ಅರೇಬಿಯಾದ ರಾಜಮನೆತನದ ಸಲಹೆಗಾರ ಮತ್ತು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಆಪ್ತ ರಫತ್ ಅಲ್-ಸಬ್ಬಾಗ್ ಅವರು ಫ್ಲೋರಿಡಾದಲ್ಲಿರುವ ತಮ್ಮ ಮನೆಯಲ್ಲಿದ್ದ ಎಪ್ಸ್ಟೀನ್‌ಗೆ ಕಳಿಸಿದ ಸಂದೇಶದಲ್ಲಿ, ‘ನೀವು ಅಲ್ಲಿ ಸಾಕಷ್ಟು ಹುಡುಗಿಯರ ಕಾಲುಗಳನ್ನು ಅಗಲಿಸುತ್ತಿದ್ದೀರಿ ಎಂದು ನನಗೆ ಖಾತ್ರಿಯಿದೆ’ ಎಂದು ಬರೆದಿದ್ದರು.
“ಎಪ್ಸ್ಟೀನ್ ಹೆಚ್ಚು ಪ್ರಭಾವಶಾಲಿ ಮತ್ತು ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳೊಂದಿಗೆ ಒಡನಾಟ ಬೆಳೆಸಿ, ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದ್ದ. ರಾಜಮನೆತನದ ಕೆಲವು ಸದಸ್ಯರು ಎಪ್ಸ್ಟೀನ್ ಜತೆಗಿನ ವ್ಯವಹಾರಿಕ ಸಂಬಂಧವನ್ನು ಸ್ನೇಹವಾಗಿ ಪರಿವರ್ತಿಸಲು ಅವಕಾಶ ಮಾಡಿಕೊಟ್ಟಿದ್ದರು. ಆದ್ದರಿಂದಲೇ, ಈ ರಾಜಮನೆತನದವರು ತನಗೆ ಉಪಯುಕ್ತ ಸ್ನೇಹಿತರೆಂದು ಎಪ್ಸ್ಟೀನ್ ಕಂಡುಕೊಂಡಿದ್ದ. ಅವರ ನಂಬಿಕೆಯನ್ನು ಗಳಿಸುತ್ತಿದ್ದ” ಎಂದು ನಾರ್ವೆ ರಾಜಮನೆತನದ ಇತಿಹಾಸಕಾರ ಎಡ್ ಓವೆನ್ಸ್ ಹೇಳಿದ್ದಾರೆ.
ಎಪ್ಸ್ಟೀನ್ನ ಕೃತ್ಯಗಳು ಬಯಲಾಗಿ, ಆತನಿಗೆ 2008ರಲ್ಲಿ ಶಿಕ್ಷೆಯಾದಾಗಲೂ, ರಾಜಮನೆತನಗಳು ಆತನನ್ನು ದೂರವಿಡಲಿಲ್ಲ. ಬದಲಾಗಿ, ಆತನಿಗಾಗಿ ಮರುಗಿದ್ದರು. ನಾರ್ವೆಯ ಕ್ರೌನ್ ಪ್ರಿನ್ಸೆಸ್ ಮೆಟ್ಟೆ-ಮಾರಿಟ್ ಅವರು 2012ರಲ್ಲಿ ಆತನಿಗೆ ಕಳಿಸಿದ ಇ-ಮೇಲ್ ಸಂದೇಶದಲ್ಲಿ ‘ನೀವು ನನ್ನ ಆಪ್ತರು’ ಎಂದು ಬರೆದಿದ್ದರು.

ಎಪ್ಸ್ಟೀನ್ ಮತ್ತು ರಾಜಮನೆತನದವರ ನಡುವಿನ ಸಂವಹನವು ಯುವತಿಯರನ್ನು ಬೆನ್ನಟ್ಟುವ ಕುರಿತಾದ ಉಲ್ಲೇಖಗಳಿಂದ ತುಂಬಿದೆ. ನಾರ್ವೆಯ ಕ್ರೌನ್ ಪ್ರಿನ್ಸೆಸ್‌ಗೆ ಎಪ್ಸ್ಟೀನ್ ಕಳಿಸಿದ್ದ ಒಂದು ಇಮೇಲ್‌ನಲ್ಲಿ, ತಾನು 24 ಮತ್ತು 25 ವರ್ಷ ವಯಸ್ಸಿನ ಇಬ್ಬರು ನಾರ್ವೇ ಯುವತಿಯರನ್ನು ಭೇಟಿಯಾಗಿದ್ದಾಗಿಯೂ, ತನಗೆ ಓಸ್ಲೋ ಇಷ್ಟವೆಂದೂ ಹೇಳಿಕೊಂಡಿದ್ದ.
ಆ ಇಮೇಲ್ಗೆ H.K.H. ಕ್ರೊನ್ಪ್ರಿನ್ಸೆಸ್ಸೆನ್ ಎಂಬ ಹೆಸರಿನ ಖಾತೆಯಿಂದ ಪ್ರತಿಕ್ರಿಯಿಸಿದ್ದ ರಾಜಕುಮಾರಿ, “ಹುಡುಗಿಯರಿಗೆ 24 ಮತ್ತು 25 ವರ್ಷವೇ? ನನಗೂ ಓಸ್ಲೋ ಇಷ್ಟ” ಎಂದು ಬರೆದಿದ್ದರು.
ಎಪ್ಸ್ಟೀನ್ ಮತ್ತು ಸೌದಿ ಅರೇಬಿಯಾದ ರಾಯಲ್ ಕೋರ್ಟ್‌ನ ಹಿರಿಯ ಸಲಹೆಗಾರ ರಾಫತ್ ಅಲ್-ಸಬ್ಬಾಗ್ ನಡುವೆ 2016 ಮತ್ತು 2017ರನಡುವೆ ಪಠ್ಯ ಸಂದೇಶಗಳು ಮತ್ತು ಇಮೇಲ್‌ಗಳ ಸುರಿಮಳೆಯೇ ಇದೆ. ಆ ವರ್ಷಗಳಲ್ಲಿ ಅಧಿಕಾರಕ್ಕೇರಿದ್ದ ಪ್ರಿನ್ಸ್ ಮೊಹಮ್ಮದ್ ಅವರು ಅಮೆರಿಕದೊಂದಿಗೆ ಸ್ನೇಹ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಿದ್ದರು. ಆ ಸಮಯದಲ್ಲಿ, ಅಲ್-ಸಬ್ಬಾಗ್ ಅವರು ಎಪ್ಸ್ಟೀನ್ ಮೂಲಕ ಸಿಲಿಕಾನ್ ವ್ಯಾಲಿ ಮತ್ತು ಇತರೆಡೆ ಜನರೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸಿದ್ದರು. ಅಲ್-ಸಬ್ಬಾಗ್‌ಗೆ ಎಪ್ಸ್ಟೀನ್ ಈದ್‌ನ ಮುಸ್ಲಿಂ ರಜಾದಿನ ಮತ್ತು ರಂಜಾನ್ ತಿಂಗಳಲ್ಲಿ ಶುಭಾಶಯಗಳನ್ನು ಕಳುಹಿಸಿದ್ದ. ರಾಜಕೀಯ, ವ್ಯವಹಾರ ಮತ್ತು ತೈಲ ಮಾರುಕಟ್ಟೆಗಳ ಕುರಿತು ಎಪ್ಸ್ಟೀನ್ ಸಲಹೆಗಳನ್ನು ನೀಡಿದ್ದ. ಅಲ್ಲದೆ, ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಪ್ರಚಾರದ ಕುರಿತು ತನ್ನ ಒಳನೋಟವನ್ನು ಅಲ್ ಸಬ್ಬಾಗ್ ಜೊತೆ ಎಪ್ಸ್ಟೀನ್ ಹಂಚಿಕೊಂಡಿದ್ದ.
2016ರಲ್ಲಿ ಪ್ರಿನ್ಸ್ ಮೊಹಮ್ಮದ್ ಅವರನ್ನು ಭೇಟಿಯಾಗಲು ಹಲವಾರು ತಿಂಗಳುಗಳ ಕಾಲ ಅಲ್ ಸಬ್ಬಾಗ್ ಅವರನ್ನು ಎಪ್ಸ್ಟೀನ್ ಪದೇ-ಪದೇ ಒತ್ತಾಯಿಸಿದ್ದ. 2016ರ ನವೆಂಬರ್‌ನಲ್ಲಿ ಸೌದಿಗೆ ತೆರಳಿದ್ದ ಎಪ್ಸ್ಟೀನ್, ‘ರಾಯಲ್ ಪ್ರೋಟೋಕಾಲ್’ನಿಂದ ಸಹಾಯ ಪಡೆದುಕೊಂಡಿದ್ದ. ರಾಜಾತಿಥ್ಯ ಅನುಭವಿಸಿದ್ದ. ಎಪ್ಸ್ಟೀನ್ ತನ್ನ ಮನೆಯಲ್ಲಿ ಪ್ರಿನ್ಸ್ ಮೊಹಮ್ಮದ್ ಜೊತೆಗಿನ ಫೋಟೋವನ್ನು ಇಟ್ಟುಕೊಂಡಿದ್ದು. ಆದರೂ, ಅವರಿಬ್ಬರ ಭೇಟಿ ಯಾವಾಗ, ಎಲ್ಲಿ ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಪ್ರಿಯ ಮೋದಿ ಸರ್‌ಗೆ ‘ಈ ದಿನ’ ಬರೆದ ಪ್ರೀತಿಯ ಬಹಿರಂಗ ಪತ್ರ!
ಎಪ್ಸ್ಟೀನ್‌ನ ಕುಖ್ಯಾತಿಗಳ ಕುರಿತು ಅಲ್-ಸಬ್ಬಾಗ್ ಅವರಿಗೆ ಚೆನ್ನಾಗಿಯೇ ತಿಳಿದಿತ್ತು ಎಂಬುದು ಅವರಿಬ್ಬರ ನಡುವಿನ ಇ-ಮೇಲ್ ವ್ಯವಹಾರವು ಸ್ಪಷ್ಟವಾಗಿ ತೋರುತ್ತದೆ. ಒಂದು ಸಂದೇಶದಲ್ಲಿ, ಅಲ್-ಸಬ್ಬಾಗ್ ಅವರು “ತನ್ನ ಕನ್ಯತ್ವವನ್ನು 13,000 ಡಾಲರ್‌ಗೆ ಮಾರಾಟ ಮಾಡಲು ದುಬೈಗೆ ಹೋಗಿದ್ದ ರಷ್ಯಾದ ಸೌಂದರ್ಯವತಿ” ಕುರಿತ ಸುದ್ದಿ ಲೇಖನವನ್ನು ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಎಪ್ಸ್ಟೀನ್, “ಅಂತಿಮವಾಗಿ ನೀವು ನನಗೆ ಉಪಯುಕ್ತವಾದದ್ದನ್ನು ಕಳುಹಿಸಿದ್ದೀರಿ” ಎಂದಿದ್ದ.
ಬ್ರಿಟನ್‌ನಲ್ಲಿ, ಪ್ರಿನ್ಸ್ ಆಂಡ್ರ್ಯೂ ಮೌಂಟ್ಬ್ಯಾಟನ್ ಮತ್ತು ಎಪ್ಸ್ಟೀನ್ ಸ್ನೇಹದ ಪರಿಣಾಮಗಳನ್ನು ರಾಜಮನೆತನವು ವರ್ಷಗಳಿಂದ ಅನುಭವಿಸುತ್ತಿದೆ. ಹೀಗಾಗಿಯೇ, ಆಂಡ್ರ್ಯೂ ಅವರ ಬಿರುದುಗಳನ್ನು ಕಿಂಗ್ ಚಾರ್ಲ್ಸ್ III 2025ರ ಸೆಪ್ಟೆಂಬರ್‌ನಲ್ಲಿ ಹಿಂಪಡೆದಿದ್ದರು. ಇದೀಗ, ಎಪ್ಸ್ಟೀನ್ ಫೈಲ್ಸ್‌ನಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಆಂಡ್ರ್ಯೂ ಅವರು ಮಹಿಳೆಯೊಬ್ಬರ ಮೇಲೆ ಬಿದ್ದಿರುವಂತೆ ಕಂಡುಬಂದಿದೆ.
ಈ ಫೈಲ್‌ಗಳಲ್ಲಿ ಎಪ್ಸ್ಟೀನ್ ಮತ್ತು ಆಂಡ್ರ್ಯೂ ಮೌಂಟ್ಬ್ಯಾಟನ್ ಅವರ ಮಾಜಿ ಪತ್ನಿ ಮತ್ತು ಒಂದು ಕಾಲದಲ್ಲಿ ಡಚೆಸ್ ಆಫ್ ಯಾರ್ಕ್ ಆಗಿದ್ದ ಸಾರಾ ಫರ್ಗುಸನ್ ನಡುವಿನ ಇ-ಮೇಲ್ ವ್ಯವಹಾರಗಳನ್ನು ಕೂಡ ಬಹಿರಂಗಪಡಿಸಿದೆ. ಎಪ್ಸ್ಟೀನ್ ತನ್ನ ಲೈಂಗಿಕ ಅಪರಾಧಗಳಿಗೆ 2008ರಲ್ಲಿ ಶಿಕ್ಷೆಗೊಳಗಾದ ನಂತರವೂ ಎಪ್ಸ್ಟೀನ್ ಮತ್ತು ಸಾರಾ ಫರ್ಗುಸನ್ ನಡುವೆ ಇಮೇಲ್ ವ್ಯವಹಾರಗಳು ನಡೆದಿವೆ ಎಂಬುದನ್ನು ಫೈಲ್‌ಗಳು ತೋರಿಸಿವೆ.

2009ರ ಇಮೇಲ್‌ನಲ್ಲಿ, ಎಪ್ಸ್ಟೀನ್ ಅವರು ಹೀಥ್ರೋದಿಂದ ಮಿಯಾಮಿಗೆ ಪ್ರಯಾಣಿದ್ದ ಸಾರಾ ಫರ್ಗುಸನ್ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ ಪ್ರಿನ್ಸೆಸ್ ಯುಜೆನಿ ಮತ್ತು ಪ್ರಿನ್ಸೆಸ್ ಬೀಟ್ರಿಸ್ಡಚೆಸ್ ಅವರ ವಿಮಾನ ಪ್ರಯಾಣಕ್ಕೆ ಹಣ ಪಾವತಿಸಿದ್ದಾನೆ ಎಂದು ಹೇಳಲಾಗಿದೆ. 2010ರಲ್ಲಿ, ಮತ್ತೊಂದು ಇಮೇಲ್ ಸಂದೇಶದಲ್ಲಿ, ಫರ್ಗುಸನ್ ಅವರು ಎಪ್ಸ್ಟೀನ್‌ನನ್ನು ‘ಒಬ್ಬ ದಂತಕಥೆ’ ಎಂದು ಬಣ್ಣಿಸಿದ್ದಾರೆ. “ಮೈ ಲವ್, ನಿಮ್ಮ ಔದಾರ್ಯ ಮತ್ತು ದಯೆಗೆ ಕೃತಜ್ಞತೆಯನ್ನು ವಿವರಿಸಲು ನನ್ನಲ್ಲಿ ನಿಜವಾಗಿಯೂ ಪದಗಳಿಲ್ಲ. ನಾನು ನಿಮ್ಮ ಸೇವೆಯಲ್ಲಿದ್ದೇನೆ. ನನ್ನನ್ನು ಮದುವೆಯಾಗು” ಎಂದು ತಮಾಷೆ ಮಾಡಿದ್ದಾರೆ ಎಂಬುದನ್ನು ವಿವರಿಸಿದೆ.
ಹೊಸದಾಗಿ ಬಿಡುಗಡೆಯಾಗಿರುವ ಈ ದಾಖಲೆಗಳು, ಕೆಲವು ರಾಜಮನೆತನದವರು ಎಪ್ಸ್ಟೀನ್ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಈ ಹಿಂದೆ ನೀಡಿದ್ದ ಸಾರ್ವಜನಿಕ ಸ್ಪಷ್ಟನೆಗಳು ಸುಳ್ಳೆಂದು ಸಾಬೀತುಪಡಿಸುತ್ತಿವೆ. ನಾರ್ವೆಯ ರಾಜಕುಮಾರಿ ಮೆಟ್ಟೆ-ಮಾರಿಟ್ ಸೋಮವಾರ ಹೇಳಿಕೆಯೊಂದನ್ನು ನೀಡಿದ್ದು, ಎಪ್ಸ್ಟೀನ್‌ನ ಹಿನ್ನೆಲೆಯನ್ನು ಸರಿಯಾಗಿ ತನಿಖೆ ಮಾಡದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಸಂತ್ರಸ್ತರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ನಾರ್ವೇ ರಾಜಮನೆತನದ ವಕ್ತಾರರು ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.




