ಕರ್ನಾಟಕ ಹಲವಾರು ಜ್ವಲಂತ ಸಮಸ್ಯೆಗಳ ಸುಳಿಗೆ ಸಿಲುಕಿದೆ. ಈ ಸಲ ಅತಿವೃಷ್ಟಿಯಿಂದ ಕೈಗೆ ಬರುವ ಮುನ್ನವೇ ರೈತರ ಬೆಳೆಗಳು ಹಾಳಾಗಿವೆ. ಬಾಲಕಿಯರ ನಾಪತ್ತೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ನಿರಂತರವಾಗಿ ಅನ್ಯಾಯವಾಗುತ್ತಲೇ ಇದೆ. ಕನ್ನಡ ಪ್ರಾಥಮಿಕ ಶಾಲೆಗಳು ಒಂದೊಂದಾಗಿ ಮುಚ್ಚಿ ಹೋಗುವ ಅಪಾಯ ಎದುರಾಗಿದೆ. ಇಂಥ ಪರಿಸ್ಥಿತಿಯಲ್ಲಿ ಮಾಧ್ಯಮಗಳ ಆದ್ಯತೆ ಯಾವುದಾಗಿರಬೇಕು?
ರಾಜ್ಯದಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಬಗ್ಗೆ ಊಹಾಪೋಹಗಳ ಸುತ್ತಲೂ ಚರ್ಚೆ ನಡೆಯುತ್ತಲೇ ಇದೆ. ಇದರ ಜೊತೆ, ಜೊತೆಗೆ ಮುಖ್ಯ ಪ್ರತಿಪಕ್ಷವಾದ ಬಿಜೆಪಿ ಈ ಸರ್ಕಾರದ ಪತನದ ಹಗಲು ಕನಸನ್ನು ಕಾಣುತ್ತಲೇ ಇದ್ದಾರೆ. ತಾನೇನು ಎಂಬಂತೆ ಕುಮಾರಣ್ಣ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಮಾತಿನ ಬಾಣ ಬಿಡುತ್ತಲೇ ಇದ್ದಾರೆ. ಈ ನಡುವೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷದಲ್ಲೂ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ವದಂತಿಗಳ ಸಾಮ್ರಾಜ್ಯದಲ್ಲಿ ತೇಲಿ ಬರುತ್ತಲೇ ಇದು. ಸರ್ಕಾರ ರಚನೆಯಾಗುವಾಗ ವರಿಷ್ಠರ ಸಮ್ಮುಖದಲ್ಲಿ ಮಾಡಿಕೊಂಡ ಒಪ್ಪಂದಂತೆ ಮೊದಲ ಎರಡೂವರೆ ವರ್ಷ ಸಿದ್ಧರಾಮಯ್ಯನವರು, ನಂತರದ ಅವಧಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರು ಮುಖ್ಯಮಂತ್ರಿಯಾಗಬೇಕಾಗುತ್ತದೆ. ಅಂತಲೇ ಮಾಧ್ಯಮಗಳು ಅದರಲ್ಲೂ ದೃಶ್ಯ ಮಾಧ್ಯಮಗಳು ‘ನವೆಂಬರ್ ಬಂತು, ಸಿದ್ಧರಾಮಯ್ಯನವರು ಡಿಕೆಶಿ ಅವರಿಗೆ ಬಿಟ್ಟು ಕೊಡುತ್ತಾರಾ…’ ಎಂಬ ಸುದ್ದಿಗಳನ್ನು ತಮ್ಮ ವಾಹಿನಿಗಳ ಮೂಲಕ ಸೃಷ್ಟಿಸುತ್ತಲೇ ಇವೆ.
ಕರ್ನಾಟಕ ಹಲವಾರು ಜ್ವಲಂತ ಸಮಸ್ಯೆಗಳ ಸುಳಿಗೆ ಸಿಲುಕಿದೆ. ಈ ಸಲ ಅತಿವೃಷ್ಟಿಯಿಂದ ಕೈಗೆ ಬರುವ ಮುನ್ನವೇ ರೈತರ ಬೆಳೆಗಳು ಹಾಳಾಗಿವೆ. ಬಾಲಕಿಯರ ನಾಪತ್ತೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ನಿರಂತರವಾಗಿ ಅನ್ಯಾಯವಾಗುತ್ತಲೇ ಇದೆ. ಕನ್ನಡ ಪ್ರಾಥಮಿಕ ಶಾಲೆಗಳು ಒಂದೊಂದಾಗಿ ಮುಚ್ಚಿ ಹೋಗುವ ಅಪಾಯ ಎದುರಾಗಿದೆ. ಇಂಥ ಪರಿಸ್ಥಿತಿಯಲ್ಲಿ ಮಾಧ್ಯಮಗಳ ಆದ್ಯತೆ ಯಾವುದಾಗಿರಬೇಕು? ಮುಖ್ಯಮಂತ್ರಿಗಳು, ಮಂತ್ರಿಗಳು ಮತ್ತು ಪ್ರತಿಪಕ್ಷಗಳ ನಾಯಕರ ಮುಂದೆ ಮೈಕ್ ಹಿಡಿದು ಯಾವ ಪ್ರಶ್ನೆಯನ್ನು ಕೇಳಬೇಕು? ಆದರೆ ಮಾಧ್ಯಮಗಳ ಆದ್ಯತೆ ಬದಲಾಗಿದೆ. ಯಾರೇ ರಾಜಕಾರಣಿಗಳು ಎದುರಿಗೆ ಸಿಕ್ಕರೆ ಮುಂದಿನ ಮುಖ್ಯಮಂತ್ರಿ ಯಾರು? ಸಂಪುಟ ಪುನಾರಚನೆ ಯಾವಾಗ? ಎಂಬಂಥ ಪ್ರಶ್ನೆಗಳೇ ಎದುರಾಗುತ್ತವೆ.
ಬಿಹಾರ ಚುನಾವಣೆ | ಮಹಾಘಟಬಂಧನ್ ಭರಪೂರ ಭರವಸೆ; ಕಾರ್ಯಸಾಧುವೇ?
ಇಂಥ ಪ್ರಶ್ನೆಗಳು ಎದುರಾದಾಗ ಸಹಜವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, “ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ” ಎಂದು ಹೇಳುತ್ತಾರೆ. ಮತ್ತೊಮ್ಮೆ ಈ ಪ್ರಶ್ನೆ ಬಂದಾಗ, “ಯಾರು ಮುಖ್ಯಮಂತ್ರಿ ಎಂಬುದನ್ನು ಶಾಸಕರು ಮತ್ತು ಪಕ್ಷದ ವರಿಷ್ಟರು ತೀರ್ಮಾನಿಸುತ್ತಾರೆ” ಎಂದು ಹೇಳುತ್ತಾರೆ. ಇದೇ ಪ್ರಶ್ನೆಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರಿಗೆ ಕೇಳಿದಾಗ, “ವರಿಷ್ಠರ ತೀರ್ಮಾನಕ್ಕೆ ಬಿಟ್ಟಿದ್ದು” ಎಂದು ನುಡಿಯುತ್ತಾರೆ. ಈ ನಡುವೆ ಯತೀಂದ್ರ ಸಿದ್ಧರಾಮಯ್ಯ ಅವರು ಇತ್ತೀಚೆಗೆ ಬೆಳಗಾವಿಗೆ ಹೋದಾಗ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದರು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಮಾತಾಡುತ್ತ, “ಸಿದ್ಧರಾಮಯ್ಯನವರ ಉತ್ತರಾಧಿಕಾರಿ ಸತೀಶ ಜಾರಕಿಹೊಳಿ ಅವರು” ಎಂದು ಹೇಳಿದರೆಂದು ಮಾಧ್ಯಮಗಳಲ್ಲಿ ವರದಿಯಾಯಿತು. ಇದು ದೊಡ್ಡ ಸುದ್ದಿಯಾಗಿ ಡಿ ಕೆ ಶಿವಕುಮಾರ್ ಸೇರಿ ಪ್ರಮುಖ ರಾಜಕಾರಣಿಗಳ ಮುಂದೆ ಪ್ರತಿಕ್ರಿಯೆಗಾಗಿ ಟಿ.ವಿ. ಮೈಕುಗಳು ಬಂದವು. “ಅದು ಅವರ ಅಭಿಪ್ರಾಯ” ಎಂಬ ಪ್ರತಿಕ್ರಿಯೆಗಳು ಬಂದವು. ಈ ಬಗ್ಗೆ ತಕ್ಷಣ ಸ್ಪಷ್ಟೀಕರಣ ನೀಡಿದ ಯತೀಂದ್ರ ಅವರು, “ಸತೀಶ ಜಾರಕಿಹೊಳಿ ಅವರು ಮುಂದಿನ ಮುಖ್ಯಮಂತ್ರಿ ಎಂದು ನಾನು ಹೇಳಿಲ್ಲ, ಬದಲಾಗಿ, “ಸಿದ್ಧರಾಮಯ್ಯನವರ ಸೈದ್ಧಾಂತಿಕ ಹಾಗೂ ಅಹಿಂದ ಉತ್ತರಾಧಿಕಾರಿ ಸತೀಶ ಜಾರಕಿಹೊಳಿ” ಎಂದು ಮಾತ್ರ ಹೇಳಿದೆ ಎಂದು ವಿವರಿಸಿದರು. ಇದು ನಿಜ, ಯತೀಂದ್ರ ಅವರ ವಿಡಿಯೋ ಗಮನಿಸಿದಾಗ ಅವರು ಮುಂದಿನ ಮುಖ್ಯಮಂತ್ರಿ ಎಂದು ಹೇಳಿಯೇ ಇರಲಿಲ್ಲ.
ಇದನ್ನೂ ಓದಿ ವ್ಯಕ್ತಿ ವಿಶೇಷ | ಸಿದ್ದು ನಂತರ ಅಹಿಂದದ ಉತ್ತರಾಧಿಕಾರಿಯೇ ಸತೀಶ್ ಜಾರಕಿಹೊಳಿ?
ಏತನ್ಮಧ್ಯೆ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು ಪತ್ರಕರ್ತರ ಯಾವುದೋ ಪ್ರಶ್ನೆ ಗೆ ಉತ್ತರಿಸುತ್ತ,”ಪಕ್ಷದ ಶಾಸಕರ ಬೆಂಬಲವಿದ್ದರೆ ಮಾತ್ರ ಮುಖ್ಯಮಂತ್ರಿ” ಎಂದು ಹೇಳುತ್ತ ವರಿಷ್ಠರ ತೀರ್ಮಾನ ಅಂತಿಮ ಎಂದು ನಂತರ ಹೇಳಿದರು. ಇದಕ್ಕೆ ಪ್ರತಿಯಾಗಿ ಡಿ ಕೆ ಶಿವಕುಮಾರ ಅವರು “ಹೈ ಕಮಾಂಡ್ ತೀರ್ಮಾನವೇ ಕೊನೆಯದು” ಎಂದರು. ನಂತರ ಮತ್ತೆ ಸಾವರಿಸಿಕೊಂಡು “ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೇಳಿದರೆ ಮುಗಿಯಿತು” ನನ್ನ ಪ್ರತಿಕ್ರಿಯೆ ಅನಗತ್ಯ ಎಂದರು. ಈ ವಿದ್ಯಮಾನಗಳನ್ನೆಲ್ಲ ಗಮನಿಸಿದರೆ, ಮಾಧ್ಯಮಗಳಲ್ಲಿ ಬರುವ ಸುದ್ದಿಗಳಂತೆ ಡಿ ಕೆ ಶಿವಕುಮಾರ್ ಕೆಲವರ ಊಹೆಯಂತೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುವದು ಸುಳ್ಳು ಎಂಬುದು ಖಚಿತವಾಗುತ್ತದೆ. ಜೈಲಿಗೆ ಹಾಕಿ ಒತ್ತಡ ಹೇರಿದಾಗಲೂ ಅವರು ಬಿಜೆಪಿಗೆ ಹೋಗಲಿಲ್ಲ. ಜೊತೆಗೆ ಶಾಸಕರ ಬಹುಮತದ ಬೆಂಬಲವೂ ದೊರೆಯುವುದಿಲ್ಲ ಎಂಬುದು ಅವರಿಗೆ ಗೊತ್ತಿದೆ. ಹೈಕಮಾಂಡ್ ತೀರ್ಮಾನವೆಂಬದು, ಕೇವಲ ಸೋನಿಯಾ ಗಾಂಧಿ, ರಾಹುಲ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರ ಇಲ್ಲವೇ ದಿಲ್ಲಿಯಲ್ಲಿ ಕುಳಿತ ನಾಲ್ಕೈದು ನಾಯಕರ ತೀರ್ಮಾನವೆಂದು ಅರ್ಥವಲ್ಲ. ದಿಲ್ಲಿಯಿಂದ ವರಿಷ್ಠರು ಕಳಿಸುವ ವೀಕ್ಷಕರು ಬಂದು ಪ್ರತಿಯೊಬ್ಬ ಕಾಂಗ್ರೆಸ್ ಶಾಸಕನ ಅಭಿಪ್ರಾಯವನ್ನು ಸಂಗ್ರಹಿಸಿ, ಯಾರಿಗೆ ಬಹುಮತದ ಬೆಂಬಲವಿದೆಯೋ ಅವರ ಹೆಸರನ್ನು ಅಂತಿಮಗೊಳಿಸಿ ವರಿಷ್ಠರ ಮೂಲಕ ಪ್ರಕಟಿಸುತ್ತಾರೆ. ಆ ಧೈರ್ಯದಿಂದಲೇ ಸಿದ್ಧರಾಮಯ್ಯನವರು “ಐದು ವರ್ಷ ನಾನೇ ಮುಖ್ಯಮಂತ್ರಿ” ಎಂದು ಹೇಳುತ್ತಾರೆ. ಇದು ಮಾತ್ರವಲ್ಲದೇ ಪಕ್ಷಕ್ಕೆ ಓಟು ತಂದು ಕೊಡುವ ಮಾಸ್ ಲೀಡರ್ ಯಾರೆಂಬ ಅಂಶವೂ ಪರಿಗಣಿಸಲ್ಪಡುತ್ತದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಇನ್ನು ಎರಡೂವರೆ ವರ್ಷ ಸಿದ್ಧರಾಮಯ್ಯನವರೇ ಮುಖ್ಯಮಂತ್ರಿ ಎಂಬುದು ಬಹುತೇಕ ಖಚಿತವಾಗುತ್ತದೆ. ಇದೇ ಅಂಶವನ್ನು ಗಮನಿಸಿಯೇ ಸಿದ್ಧರಾಮಯ್ಯನವರು” ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಡ ಬರುತ್ತಿದೆ ಎಂದು ಹೇಳಿದ್ದಾರೆ. ಅಂತಲೆ ಡಿ ಕೆ ಶಿವಕುಮಾರ, “ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಹೇಳಿದ ಮೇಲೆ ಮುಗಿಯಿತು. ನಾನೂ ಅದಕ್ಕೆ ಬದ್ಧ” ಎಂದು ಹೇಳಿದ್ದಾರೆ.

ಸನತ್ ಕುಮಾರ ಬೆಳಗಲಿ
ಹಿರಿಯ ಪತ್ರಕರ್ತ, ಅಂಕಣಕಾರ




