ಷೇರುಪೇಟೆಯನ್ನು ದೇಶದ ಆರ್ಥಿಕತೆಯ ನಾಡಿಮಿಡಿತವನ್ನು ಅಳೆಯುವ ಮಾಪಕ ಎನ್ನಲಾಗುತ್ತದೆ. ಆದರೆ, ಇದು ನಮ್ಮ ಆರ್ಥಿಕತೆಯ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುವುದಿಲ್ಲ. ಷೇರುಪೇಟೆಯು ಮುಖ್ಯವಾಗಿ ಸಂಘಟಿತ ವಲಯದ ಕಾರ್ಪೊರೇಟ್ ಕಂಪನಿಗಳ ಭವಿಷ್ಯದ ಗಳಿಕೆಯ ನಿರೀಕ್ಷೆಗಳನ್ನು ಮಾತ್ರ ಆಧರಿಸಿರುತ್ತದೆ
ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ಧದ ಕಾರ್ಮೋಡಗಳು ಕೇವಲ ಭೌಗೋಳಿಕ ಗಡಿಗಳಿಗೆ ಸೀಮಿತವಾಗಿರದೆ, ಜಾಗತಿಕ ಮಾರುಕಟ್ಟೆ ಸೇರಿದಂತೆ ಭಾರತದ ಷೇರುಪೇಟೆಯಲ್ಲೂ ಭಾರೀ ತಲ್ಲಣವನ್ನು ಸೃಷ್ಟಿಸಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣದಲ್ಲಿ ದಿಢೀರ್ 8.7 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಬೃಹತ್ ನಷ್ಟ ಸಂಭವಿಸಿದ್ದು, ಹೂಡಿಕೆದಾರರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಕಣ್ಣೆದುರೇ ಇಷ್ಟೋಂದು ಭಾರಿ ಮೊತ್ತ ಕರಗಿ ಹೋದಾಗ, ಈ ಹಣ ಎಲ್ಲಿಗೆ ಹೋಯಿತು ಮತ್ತು ಇದು ದೇಶದ ಆರ್ಥಿಕತೆಗೆ ಬೀಳುವ ನೈಜ ಪೆಟ್ಟೇ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ.
ಷೇರುಪೇಟೆಯಲ್ಲಿನ ದಿನನಿತ್ಯದ ಏರಿಳಿತಗಳಿಂದ ಆಗುವ ನಷ್ಟ ಅಥವಾ ಲಾಭವನ್ನು ಪ್ರಾಥಮಿಕವಾಗಿ ಕಾಗದದ ಮೇಲಿನ ಲೆಕ್ಕಾಚಾರ ಎಂದು ಕರೆಯಲಾಗುತ್ತದೆ. ಅಂದರೆ, ನೀವು ಖರೀದಿಸಿದ ಷೇರಿನ ಬೆಲೆ ದಿಢೀರ್ ಕುಸಿದಾಗ, ನೀವು ಅದನ್ನು ವಾಸ್ತವಿಕವಾಗಿ ನಷ್ಟಕ್ಕೆ ಮಾರಾಟ ಮಾಡದ ಹೊರತು ಆ ನಷ್ಟ ನೈಜವಾಗುವುದಿಲ್ಲ; ಅದು ಕೇವಲ ಲೆಕ್ಕದ ಪುಸ್ತಕದಲ್ಲಿ ಹಾಗೂ ಪರದೆಯ ಮೇಲೆ ಮಾತ್ರ ಮೌಲ್ಯ ಕಳೆದುಕೊಂಡಿರುತ್ತದೆ. ಅಂದರೆ, ಭಾರತೀಯ ಕಂಪನಿಗಳ ಮೌಲ್ಯಮಾಪನ ಅಷ್ಟರಮಟ್ಟಿಗೆ ತಗ್ಗಿದೆ ಎಂದೇ ಅರ್ಥ. ಇದು ಕೇವಲ ಕಾಗದಕ್ಕೆ ಸೀಮಿತವಾದರೂ, ಮುಂದಿನ ದಿನಗಳಲ್ಲಿ ಕಂಪನಿಗಳ ಬಂಡವಾಳ ಕ್ರೋಢೀಕರಣ, ಸಾಲ ಪಡೆಯುವ ಸಾಮರ್ಥ್ಯ ಹಾಗೂ ಹೂಡಿಕೆದಾರರ ಕೊಳ್ಳುವ ಶಕ್ತಿ ಮೇಲೆ ಇದು ಬಹುದೊಡ್ಡ ಮಟ್ಟದ ನೈಜ ಪರಿಣಾಮವನ್ನು ಬೀರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಷೇರುಪೇಟೆಯಲ್ಲಿ ಡಿಜಿಟಲೀಕರಣದ ಪ್ರಭಾವದಿಂದಾಗಿ ಸಾಮಾನ್ಯ ಜನರ ಪಾಲ್ಗೊಳ್ಳುವಿಕೆ ಗಣನೀಯವಾಗಿ ಹೆಚ್ಚಾಗಿದೆ. ಪ್ರಸ್ತುತ ಭಾರತದಲ್ಲಿ ಡಿಮ್ಯಾಟ್ ಖಾತೆಗಳ ಸಂಖ್ಯೆ 15 ಕೋಟಿ ಗಡಿ ದಾಟಿದ್ದು, ಇವರನ್ನು ಚಿಲ್ಲರೆ ಹೂಡಿಕೆದಾರರು ಎಂದು ಕರೆಯಲಾಗುತ್ತದೆ.
ಸಂಖ್ಯೆಯಲ್ಲಿ ಇವರು ಸಾಗರದಷ್ಟಿದ್ದರೂ, ಮಾರುಕಟ್ಟೆಯ ದಿಕ್ಕನ್ನು ಕ್ಷಣಾರ್ಧದಲ್ಲಿ ಬದಲಿಸುವ ಶಕ್ತಿ ಇರುವುದು ವಿದೇಶಿ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರ ಕೈಯಲ್ಲಿ. ಈ ಸಾಂಸ್ಥಿಕ ಹೂಡಿಕೆದಾರರ ಸಂಖ್ಯೆ ಬೆರಳಣಿಕೆಯಷ್ಟಿದ್ದರೂ, ಅವರೂ ಮಾರುಕಟ್ಟೆಗೆ ಸುರಿಯುವ ಬಂಡವಾಳ ಲಕ್ಷಾಂತರ ಕೋಟಿ ರೂಪಾಯಿಗಳಿಷ್ಟಿರುತ್ತದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಸಂಭವಿಸುವ ಬಹುತೇಕ ಏರುಪೇರುಗಳು ಇವರ ಚಲನವಲನಗಳನ್ನು ಅವಲಂಬಿಸಿರುತ್ತದೆ.
ಇದನ್ನು ಓದಿದ್ದೀರಾ? ಕೊರಳಿಗೆ ಸುತ್ತಿಕೊಂಡ ಇರಾನ್ ಯುದ್ಧ; ಅಮೆರಿಕದಲ್ಲಿ ತೈಲ ಬಿಕ್ಕಟ್ಟು – ಟ್ರಂಪ್ ಜನಪ್ರಿಯತೆಗೆ ಕುತ್ತು
ಮಾರುಕಟ್ಟೆಯಲ್ಲಿ ದಿಢೀರ್ ಮತ್ತು ತೀವ್ರತರವಾದ ಕುಸಿತ ಕಂಡುಬಂದು, ಬಹುಪಾಲು ಷೇರುಗಳು ನಷ್ಟದ ಕೆಂಪು ಬಣ್ಣದಲ್ಲಿ ಮುಳುಗಿದಾಗ ಅದನ್ನು ಪೇಟೆಯ ಭಾಷೆಯಲ್ಲಿ ‘ರಕ್ತಪಾತ’ ಎಂದು ಕರೆಯಲಾಗುತ್ತದೆ. ಅದೇ ರೀತಿ, ಷೇರುಗಳ ಬೆಲೆ ನಿರಂತರವಾಗಿ ಕುಸಿಯುವ ಹಾಗೂ ಹೂಡಿಕೆದಾರರಲ್ಲಿ ಭೀತಿ ತುಂಬಿ ತುಂಬಿರುವ ನಿರಾಶಾದಾಯಕ ಸ್ಥಿತಿಯನ್ನು ‘ಕರಡಿ ಕುಣಿತ’ ಪ್ರತಿನಿಧಿಸುತ್ತದೆ.
ಕರಡಿಯು ತನ್ನ ಪಂಜದಿಂದ (ಕಾಲು ಅಥವಾ ಕೈಯಂತಹ ಭಾಗ) ಕೆಳಮುಖವಾಗಿ ದಾಳಿ ಮಾಡುವ ಕಾರಣ ಈ ಹೆಸರು ರೂಢಿಯಲ್ಲಿದೆ. ಇದಕ್ಕೆ ತದ್ವಿರುದ್ಧವಾಗಿ, ಮಾರುಕಟ್ಟೆ ಏರುಮುಖವಾಗಿ ಸಾಗುತ್ತಿರುವಾಗ ಮತ್ತು ಆರ್ಥಿಕತೆಯ ಬಗ್ಗೆ ಅಪಾರ ಆಶಾವಾದವಿರುವಾಗ, ತನ್ನ ಕೊಂಬುಗಳಿಂದ ಮೇಲಕ್ಕೆ ಚಿಮ್ಮಿಸುವ ಸ್ವಭಾವದ ಗೂಳಿಗೆ ಹೋಲಿಸಿ ‘ಗೂಳಿ ನಲಿವು’ ಎಂದು ಬಣ್ಣಿಸಲಾಗುತ್ತದೆ.
ಷೇರುಪೇಟೆಯನ್ನು ದೇಶದ ಆರ್ಥಿಕತೆಯ ನಾಡಿಮಿಡಿತವನ್ನು ಅಳೆಯುವ ಮಾಪಕ ಎನ್ನಲಾಗುತ್ತದೆ. ಆದರೆ, ಇದು ನಮ್ಮ ಆರ್ಥಿಕತೆಯ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುವುದಿಲ್ಲ. ಷೇರುಪೇಟೆಯು ಮುಖ್ಯವಾಗಿ ಸಂಘಟಿತ ವಲಯದ ಕಾರ್ಪೊರೇಟ್ ಕಂಪನಿಗಳ ಭವಿಷ್ಯದ ಗಳಿಕೆಯ ನಿರೀಕ್ಷೆಗಳನ್ನು ಮಾತ್ರ ಆಧರಿಸಿರುತ್ತದೆ.
ಭಾರತದಂತಹ ದೇಶದಲ್ಲಿ ಬೃಹತ್ ಪ್ರಮಾಣದಲ್ಲಿರುವ ಅಸಂಘಟಿತ ವಲಯ, ಸಣ್ಣ ವ್ಯಾಪಾರಗಳು ಮತ್ತು ಕೃಷಿಯ ಪಾಲು ಷೇರುಪೇಟೆಯಲ್ಲಿ ನೇರವಾಗಿ ಪ್ರತಿಫಲಿಸುವುದಿಲ್ಲ. ಆದಾಗ್ಯೂ, ಮಧ್ಯಪ್ರಾಚ್ಯದಂತಹ ಬಿಕ್ಕಟ್ಟುಗಳಿಂದ ಕಚ್ಚಾತೈಲದ ಬೆಲೆ ಏರಿಕೆಯಾದರೆ ಅದು ಭಾರತದ ಹಣದುಬ್ಬರವನ್ನು ಹೆಚ್ಚಿಸುತ್ತದೆ ಮತ್ತು ಕಂಪನಿಗಳ ಲಾಭಾಂಶವನ್ನು ಕಡಿತಗೊಳಿಸುತ್ತದೆ. ಇದರ ಸುಳಿವನ್ನು ಅರಿತೇ ಷೇರುಪೇಟೆ ಮೊದಲೇ ಕುಸಿಯುತ್ತದೆ. ಈ ಅರ್ಥದಲ್ಲಿ, ಷೇರು ಮಾರುಕಟ್ಟೆಯು ಮುಂಬರುವ ಆರ್ಥಿಕ ಸಂಕಷ್ಟಗಳ ಮುನ್ಸೂಚನೆ ನೀಡುವ ಕನ್ನಡಿಯಾಗಿ ಅತ್ಯಂತ ನಿಖರವಾಗಿ ಕಾರ್ಯನಿರ್ವಹಿಸುತ್ತದೆ.





