'ಲಿವಿಂಗ್ ವಾಲ್ಸ್ ಆಫ್ ಲರ್ನಿಂಗ್' ಯೋಜನೆ ಮೂಲಕ ಕೊಳೆಗೇರಿಗಳ ಗೋಡೆಗಳ ಮೇಲೆ ಭಿತ್ತಿಚಿತ್ರಗಳನ್ನು ಬಿಡಿಸಿ, ಅವುಗಳನ್ನು ಶೈಕ್ಷಣಿಕ ಸಾಧನಗಳಾಗಿ ಬಳಸಿಕೊಂಡಿದ್ದಾರೆ. ಗೋಡೆಗಳನ್ನು ತಮ್ಮ ಕಲೆ ಪ್ರದರ್ಶನಕ್ಕಾಗಿ ಬಳಸದೆ ಕಲೆ ಮೂಲಕವೇ ಅಕ್ಷರಮಾಲೆ, ಸಂಖ್ಯೆಗಳು, ವಿಜ್ಞಾನ, ಆರೋಗ್ಯ ಮತ್ತು ನೈರ್ಮಲ್ಯ, ಪರಿಸರ ಜಾಗೃತಿ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೋಧಿಸುವ ಕಾರ್ಯವನ್ನು ಮಾಡಿದ್ದಾರೆ.
ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಗಾಧವಾದ ಕೊಡುಗೆಯನ್ನು ನೀಡಿರುವ ಶಿಕ್ಷಕಿ, ಸಾಮಾಜಿಕ ಕಾರ್ಯಕರ್ತೆ ರೂಬಲ್ ನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ‘ಜಾಗತಿಕ ಶಿಕ್ಷಕ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ. ದುಬೈನಲ್ಲಿ ನಡೆದ ಸಮಾರಂಭದಲ್ಲಿ ರೂಬಲ್ ನಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದ್ದು 2015ರಲ್ಲಿ ಜಾಗತಿಕ ಶಿಕ್ಷಕ ಪ್ರಶಸ್ತಿಯನ್ನು ಸ್ಥಾಪಿಸಿದ ವರ್ಕಿ ಫೌಂಡೇಶನ್ ಈ ಪ್ರಶಸ್ತಿಯನ್ನು ಘೋಷಿಸುತ್ತದೆ.
ಶಿಕ್ಷಣ ಕ್ಷೇತ್ರದ ‘ನೊಬೆಲ್ ಪ್ರಶಸ್ತಿ’ ಎಂದೇ ಪರಿಗಣಿಸಲಾಗುವ ‘ಜಾಗತಿಕ ಶಿಕ್ಷಕ ಪ್ರಶಸ್ತಿ’ಯು 1 ಮಿಲಿಯನ್ ಡಾಲರ್ (ಸುಮಾರು ₹8.3 ಕೋಟಿ) ಬಹುಮಾನ ಮೊತ್ತವನ್ನು ಒಳಗೊಂಡಿದೆ. ‘ವರ್ಲ್ಡ್ ಗವರ್ನಮೆಂಟ್ ಸಮಿಟ್’ನಲ್ಲಿ ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 20220ರಲ್ಲಿ ಮಹಾರಾಷ್ಟ್ರದ ಪರಿತೇವಾಡಿ ಗ್ರಾಮದ ಶಿಕ್ಷಕರಾದ ರಂಜಿತ್ ಸಿನ್ಹಾ ಡಿಸಾಲೆ ಮೊದಲ ಬಾರಿಗೆ ಈ ಪ್ರಶಸ್ತಿ ಪಡೆದಿದ್ದು, ಇದೀಗ ರೂಬಲ್ ನಾಗಿ ಶಿಕ್ಷಣ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನು ಓದಿದ್ದೀರಾ? ವ್ಯಕ್ತಿಚಿತ್ರ | ಮಲಯಾಳಂ ಚಿತ್ರರಂಗದ ಹೆಮ್ಮೆ ಶ್ರೀನಿವಾಸನ್
ಭಾರತೀಯ ಶಿಕ್ಷಕಿ ರೂಬಲ್ ನಾಗಿ ಯಾರು?
1980ರ ಜುಲೈ 8ರಂದು ಜಮ್ಮು ಮತ್ತು ಕಾಶ್ಮೀರದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ರೂಬಲ್ ನಾಗಿ ಸೇನಾ ಅಧಿಕಾರಿಯ ಮಗಳು. ತಂದೆಯ ಉದ್ಯೋಗದ ಕಾರಣದಿಂದಾಗಿ ದೇಶದ ವಿವಿಧ ಭಾಗಗಳಲ್ಲಿರುವ ಮಿಲಿಟರಿ ಕ್ಯಾಂಟೋನ್ಮೆಂಟ್‌ಗಳಲ್ಲಿ ತಮ್ಮ ಬಾಲ್ಯವನ್ನು ಕಳೆದವರು. ತಮ್ಮ ಆರಂಭಿಕ ಶಿಕ್ಷಣವನ್ನು ಆರ್ಮಿ ಸ್ಕೂಲ್‌ನಲ್ಲಿ ಪೂರೈಸಿದ್ದು, ನಂತರ ಲಂಡನ್‌ನ ಸ್ಲೇಡ್ ಸ್ಕೂಲ್ ಆಫ್ ಫೈನ್ ಆರ್ಟ್‌ನಲ್ಲಿ ಕಲಾ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ.
ರೂಬಲ್ ಅವರನ್ನು ವೈದ್ಯರನ್ನಾಗಿಸಬೇಕು ಎಂಬುದು ಅವರ ತಂದೆಯವರ ಬಯಕೆಯಾಗಿತ್ತು. ಆದರೆ ರೂಬಲ್ ಬಾಲ್ಯದಿಂದಲೇ ಸೃಜನಶೀಲ ಕೆಲಸಗಳಲ್ಲಿ ಮತ್ತು ಕಲೆಯ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದವರು. ಶಾಲಾ ದಿನಗಳಲ್ಲೇ ಬಣ್ಣ ಮತ್ತು ಶಿಲ್ಪಕಲೆಗಳಲ್ಲಿ ಪ್ರಯೋಗಗಳನ್ನು ಪ್ರಾರಂಭಿಸಿದ್ದರು. ತಂದೆಯ ಉದ್ಯೋಗದಿಂದಾಗಿ ವಿವಿಧ ರಾಜ್ಯಗಳಲ್ಲಿ ಬೆಳೆದ ರೂಬಲ್ ಅವರಿಗೆ ವಿಭಿನ್ನ ಭಾಷೆಗಳು, ಉಡುಪುಗಳು ಮತ್ತು ಸಂಸ್ಕೃತಿಗಳ ಪರಿಚಯವಿದ್ದು, ಈ ಅನುಭವವೂ ಅವರ ಕಲಾತ್ಮಕ ಬೆಳವಣಿಗೆಗೆ ಪ್ರಮುಖ ಪ್ರೇರಣೆಯಾದವು.

ಶಿಲ್ಪಕಲೆ, ಕಲಾಕೃತಿಗಳು ಮತ್ತು ವರ್ಣಚಿತ್ರಗಳಲ್ಲಿ ಪರಿಣತಿ ಹೊಂದಿರುವ ನಾಗಿ ಅವರ ಸುಮಾರು 800ಕ್ಕೂ ಹೆಚ್ಚು ಭಿತ್ತಿಚಿತ್ರಗಳನ್ನು (Murals) ವಿಶ್ವದಾದ್ಯಂತ 150ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಮುಂಬೈ ನಗರದ ಸೌಂದರ್ಯೀಕರಣಕ್ಕಾಗಿ ಹಲವು ಕಲಾಕೃತಿಗಳನ್ನು ಸ್ಥಾಪಿಸಿದ್ದಾರೆ. ನವದೆಹಲಿಯ ರಾಷ್ಟ್ರಪತಿ ಭವನದ ಮ್ಯೂಸಿಯಂನಲ್ಲಿ ಪ್ರದರ್ಶನ ನೀಡಲು ಆಹ್ವಾನ ಪಡೆದ ಮೊದಲ ಕಲಾವಿದೆ ಎಂಬ ಹೆಗ್ಗಳಿಕೆಯೂ ರೂಬಲ್ ಅವರಿಗೆ ಸಲ್ಲುತ್ತದೆ.
ರೂಬಲ್ ಸಾಮಾಜಿಕ ಕಾರ್ಯಗಳು
ರೂಬಲ್ ಕಲೆಯಲ್ಲಿ ಮಾತ್ರವಲ್ಲ ತಮ್ಮ ಕಲೆಯ ಮೂಲಕ ಸಾಮಾಜಿಕ ಕಾರ್ಯಗಳನ್ನೂ ಮಾಡಿದವರು. ರೂಬಲ್ ಮುಂಬೈನಲ್ಲಿ ರೂಬಲ್ ನಾಗಿ ಆರ್ಟ್ ಫೌಂಡೇಶನ್ (RNAF) ಎಂಬ ಎನ್‌ಜಿಒ ಸ್ಥಾಪಿಸಿದ್ದು ಈ ಸಂಸ್ಥೆಯು ಮುಖ್ಯವಾಗಿ ಕಲೆಯ ಮೂಲಕ ಸಮುದಾಯದ ಅಭಿವೃದ್ಧಿ ಮತ್ತು ಶಿಕ್ಷಣವನ್ನು ಉತ್ತೇಜಿಸುವ ಕಾರ್ಯ ಮಾಡುತ್ತಾ ಬಂದಿದೆ. ಈ ಸಂಸ್ಥೆ ಮಿಸಾಲ್ ಮುಂಬೈ/ಮಿಸಾಲ್ ಇಂಡಿಯಾ ಎಂಬ ಕೊಳೆಗೇರಿ ರೂಪಾಂತರ ಉಪಕ್ರಮವನ್ನು ಆರಂಭಿಸಿದ್ದು, 1,50,000ಕ್ಕೂ ಹೆಚ್ಚು ಮನೆಗಳಿಗೆ ಬಣ್ಣ ಹಚ್ಚುವ ಮೂಲಕ ನೈರ್ಮಲ್ಯ ಮತ್ತು ಸೌಂದರ್ಯೀಕರಣದ ಜಾಗೃತಿ ಮೂಡಿಸಿದ್ದಾರೆ.
ಇದನ್ನು ಓದಿದ್ದೀರಾ? ವ್ಯಕ್ತಿಚಿತ್ರ | ಅಚ್ಯುತಾನಂದನ್- ಕೇರಳ ರಾಜಕಾರಣದ ದಂತಕಥೆ
‘ಲಿವಿಂಗ್ ವಾಲ್ಸ್ ಆಫ್ ಲರ್ನಿಂಗ್’ ಯೋಜನೆ ಮೂಲಕ ಕೊಳೆಗೇರಿಗಳ ಗೋಡೆಗಳ ಮೇಲೆ ಭಿತ್ತಿಚಿತ್ರಗಳನ್ನು ಬಿಡಿಸಿ, ಅವುಗಳನ್ನು ಶೈಕ್ಷಣಿಕ ಸಾಧನಗಳಾಗಿ ಬಳಸಿಕೊಂಡಿದ್ದಾರೆ. ಗೋಡೆಗಳನ್ನು ತಮ್ಮ ಕಲೆ ಪ್ರದರ್ಶನಕ್ಕಾಗಿ ಬಳಸದೆ ಕಲೆ ಮೂಲಕವೇ ಅಕ್ಷರಮಾಲೆ, ಸಂಖ್ಯೆಗಳು, ವಿಜ್ಞಾನ, ಆರೋಗ್ಯ ಮತ್ತು ನೈರ್ಮಲ್ಯ, ಪರಿಸರ ಜಾಗೃತಿ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೋಧಿಸುವ ಕಾರ್ಯವನ್ನು ಮಾಡಿದ್ದಾರೆ. ಮುಖ್ಯವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಸುವುದು ಮತ್ತು ಸಮುದಾಯದಲ್ಲಿ ಕಲಿಕೆಯ ವಾತಾವರಣವನ್ನು ನಿರ್ಮಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿತ್ತು. ಇದರಿಂದಾಗಿ ಹತ್ತು ಲಕ್ಷ ಮಕ್ಕಳು ಶಿಕ್ಷಣದತ್ತ ಆಕರ್ಷಣೆಗೊಳ್ಳಲು ಸಾಧ್ಯವಾಗಿದೆ ಎಂದು ವರದಿಗಳು ಹೇಳುತ್ತವೆ.

ರೂಬಲ್ ನಾಗಿ ಆರ್ಟ್ ಫೌಂಡೇಶನ್‌ನಿಂದ ಮಹಿಳಾ ಸಬಲೀಕರಣ ಕಾರ್ಯಗಳನ್ನೂ ಮಾಡಿದೆ. ಸ್ಟುಡಿಯೋ ಸಕ್ಷಮ್ (Studio Saksham) ಎಂಬ ಮಹಿಳಾ ನೇತೃತ್ವದ ಯೋಜನೆ ಮೂಲಕ ಗ್ರಾಮೀಣ ಮತ್ತು ಕೊಳೆಗೇರಿ ಪ್ರದೇಶದ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಿ ಅವರನ್ನು ಉದ್ಯಮಿಗಳನ್ನಾಗಿ ರೂಪಿಸುವ ಕೆಲಸವನ್ನು ರೂಬಲ್ ಅವರು ತಮ್ಮ ಸಂಸ್ಥೆ ಮೂಲಕ ಮಾಡಿದ್ದಾರೆ. ಮುಂಬೈ ಮತ್ತು ಕಾಶ್ಮೀರದಂತಹ ಪ್ರದೇಶಗಳಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಕೌಶಲ್ಯ ಕೇಂದ್ರಗಳನ್ನು ತೆರೆದಿದ್ದಾರೆ. ಹಾಗೆಯೇ ಲಾಕ್‌ಡೌನ್ ಮತ್ತು ಇತರ ತುರ್ತು ಸಂದರ್ಭಗಳಲ್ಲಿ ಕೊಳೆಗೇರಿ ಪ್ರದೇಶದ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆ ಮತ್ತು ವೈಯಕ್ತಿಕ ನೈರ್ಮಲ್ಯದ ಬಗ್ಗೆ ಕಾರ್ಯಾಗಾರಗಳನ್ನು ಇದೇ ಸಂಸ್ಥೆ ಮೂಲಕ ರೂಬಲ್ ನಡೆಸಿದ್ದಾರೆ.
ಶಿಕ್ಷಣ ತಜ್ಞೆಯಾದ ರೂಬಲ್ ನಾಗಿ ಸಾಮಾಜಿಕ ಕಾರ್ಯ ಹಾಗೂ ಕಲಾ ಕ್ಷೇತ್ರದಲ್ಲಿನ ಸಾಧನೆಗಾಗಿ ಅನೇಕ ಪ್ರತಿಷ್ಠಿತ ಗೌರವಗಳನ್ನು ಪಡೆದಿದ್ದಾರೆ. ಆ ಪೈಕಿ ಇತ್ತೀಚೆಗೆ ಲಭಿಸಿದ ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಕೂಡಾ ಒಂದು. 2013ರಲ್ಲಿ ಕಲೆ ಮತ್ತು ಸಾಮಾಜಿಕ ಸೇವೆಯಲ್ಲಿನ ಅವರ ಗಮನಾರ್ಹ ಕೊಡುಗೆಗಾಗಿ ಜಿಜಾಮಾತಾ ಪ್ರಶಸ್ತಿ ಪಡೆದಿದ್ದಾರೆ. ಅದೇ ವರ್ಷ ಅತ್ಯುತ್ತಮ ಮಹಿಳಾ ಕಲಾವಿದೆ (Best Woman Artist) ವಿಭಾಗದಲ್ಲಿ GR8 ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 2017ರಲ್ಲಿ MAP ನೋಬಲ್ ಆರ್ಟಿಸ್ಟ್ ಪ್ರಶಸ್ತಿ, ಮಹಿಳಾ ಸಬಲೀಕರಣ ಮತ್ತು ಸಮಾಜ ಸುಧಾರಣೆಯ ಕೆಲಸಗಳಿಗಾಗಿ ಹಲೋ! ಊರ್ಜಾ ಪ್ರಶಸ್ತಿ (HELLO! Urja Award) ಪ್ರಶಸ್ತಿ, IFEFA ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




