ರವಿದಾಸ ಜಯಂತಿಗೆ ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ ಉತ್ತರಪ್ರದೇಶದಿಂದ ರವಿದಾಸಿಯಾಗಳು ದೊಡ್ಡ ಸಂಖ್ಯೆಯಲ್ಲಿ ತೆರಳುತ್ತಾರೆ. ಬ್ರಿಟನ್, ಅಮೆರಿಕೆ ಮತ್ತು ಯೂರೋಪಿನ ಇತರೆ ದೇಶಗಳಿಂದಲೂ ಸಾವಿರಾರು ಮಂದಿ ಶ್ರದ್ಧಾಳುಗಳು ಬರುತ್ತಾರೆ. ರವಿದಾಸ್ ಮತ್ತು ಅಂಬೇಡ್ಕರ್ ಚಿತ್ರಗಳಿರುವ ಭಿತ್ತಿಪತ್ರಗಳನ್ನು ಹಿಡಿದು ಸಾಗುತ್ತಾರೆ. ಇಬ್ಬರ ಕುರಿತು ಹಾಡು ಕಟ್ಟಿ ಹಾಡುತ್ತಾರೆ. ಅಂಬೇಡ್ಕರ್ ಅವರ ಐತಿಹಾಸಿಕ ಕೃತಿ ‘ಜಾತಿವಿನಾಶ’ದ (Annihilation of Caste) ಹಿಂದಿ ಮತ್ತು ಪಂಜಾಬಿ ಅನುವಾದಗಳ ನೂರಾರು ಪ್ರತಿಗಳು ಮಾರಾಟ ಆಗುತ್ತವೆ. ರವಿದಾಸ-ಅಂಬೇಡ್ಕರ್ ಕ್ಯಾಲೆಂಡರುಗಳು ಸಾವಿರಾರು ಸಂಖ್ಯೆಯಲ್ಲಿ ದೂರ ದೂರದ ದಲಿತರ ಮನೆಗಳಿಗೆ ಪಯಣಿಸುತ್ತವೆ. ಫ್ರೇಂ ಹಾಕಿಸಿಕೊಂಡು ಹಾದಿ ಬೀದಿಗಳಲ್ಲಿ ಕುಳಿತು ಚಪ್ಪಲಿ ಹೊಲಿಯುವವರ ಹಿನ್ನೆಲೆಯಲ್ಲಿ ತೂಗುತ್ತವೆ.
ಸಂತ ರವಿದಾಸ ಅಥವಾ ರೈದಾಸ ಅವರು, ಜಾತಿ ಆಧಾರಿತ ಏಣಿಶ್ರೇಣಿ ವ್ಯವಸ್ಥೆ ಮತ್ತು ಸಂಪ್ರದಾಯಗಳು-ಆಚರಣೆಗಳ ವಿರುದ್ಧ ಬಂಡೆದ್ದವರು. ನಿರ್ಗುಣ ನಿರಾಕಾರ ಭಕ್ತಿಯನ್ನು ನಂಬಿದವರು. ಅವರನ್ನು ಚಮ್ಮಾರರ ಗುರು ಎಂಬ ಅಭಿದಾನಕ್ಕೆ ಸೀಮಿತಗೊಳಿಸಲಾಗಿರುವುದು ನಮ್ಮ ಜಾತಿವ್ಯವಸ್ಥೆಯ ದೊಡ್ಡ ದುಷ್ಟಗುಣ. ಉತ್ತರಪ್ರದೇಶ- ಪಂಜಾಬ್- ಹರಿಯಾಣದಲ್ಲಿ ಇಂದು ರವಿದಾಸ ಜಯಂತಿಯನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗಿದೆ.
ಕಾಯಕವೇ ಕೈಲಾಸ ಎಂಬ ಕರ್ನಾಟಕದ ವಚನ ಚಳವಳಿಯ ಮೌಲ್ಯ ರವಿದಾಸರ ನಂಬಿಕೆಗಳಲ್ಲಿ ಪ್ರತಿಫಲಿತವಾಗಿತ್ತು. ಸಂತರೆಂದು ಕರೆಯಿಸಿಕೊಂಡ ನಂತರವೂ ಅವರು ಚಮ್ಮಾರಿಕೆಯ ಕಾಯಕವನ್ನು ಬಿಟ್ಟುಕೊಟ್ಟಿರಲಿಲ್ಲ. ಯಾವ ಕೆಲಸವೂ ಕೀಳಲ್ಲ ಎಂಬುದು ಅವರ ಸಂದೇಶವಾಗಿತ್ತು. ತಾರತಮ್ಯ ಅಸಮಾನತೆ- ದುಃಖ- ಬವಣೆಗಳಿಲ್ಲದ ನಾಡನ್ನು (ಬೇ-ಗಮ್ ಪುರ) ನಿರ್ಮಿಸುವ ಕನಸು ಕಂಡಿದ್ದರು. ‘ಯುಟೋಪಿಯಾ’ ಪರಿಕಲ್ಪನೆಯನ್ನು ನೀಡಿದ ಕಾರ್ಲ್ ಮಾರ್ಕ್ಸ್ ಗಿಂತ ನೂರಾರು ವರ್ಷಗಳ ಮೊದಲೇ ಹೊಮ್ಮಿದ್ದ ಪರಿಕಲ್ಪನೆ ‘ಬೇ-ಗಮ್ ಪುರ’ ಎಂಬುದು ರವಿದಾಸರ ಅನುಯಾಯಿಗಳ ಹೆಮ್ಮೆ.
ರವಿದಾಸರ ಅನುಯಾಯಿಗಳು ಅಂಬೇಡ್ಕರ್ ವಿಚಾರಗಳು ಮತ್ತು ಅಂಬೇಡ್ಕರ್ ರಾಜಕಾರಣದ ಪ್ರಬಲ ಪ್ರತಿಪಾದಕರು. ತಾವು ನಂಬಿದ ಸಂತ ಉಳಿಸಿ ಹೋಗಿರುವ ಆಧ್ಯಾತ್ಮಿಕ ಪರಂಪರೆಯಲ್ಲಿ ತಮ್ಮ ಅಸ್ಮಿತೆಯನ್ನು ನೇಯ್ದುಕೊಂಡಿದ್ದಾರೆ. ಅಂಬೇಡ್ಕರ್ ಅವರು ರವಿದಾಸರ ಮತ್ತೊಂದು ರೂಪ ಎಂದು ಭಾವಿಸಿದ್ದಾರೆ. ಇಬ್ಬರ ಅರಿವಿನ ಪರಂಪರೆಗಳನ್ನೂ ಒಂದೇ ಸಾಮಾಜಿಕ-ರಾಜಕೀಯ ಅಸ್ಮಿತೆಯಲ್ಲಿ ಬೆಸೆದು ಅದನ್ನು ಹೃದಯದಲ್ಲಿ ಧರಿಸಿದ್ದಾರೆ. ಜಾತಿ ವ್ಯವಸ್ಥೆಯ ಹಿಂದೂವಾದ ಮತ್ತು ಕಾಲಕ್ರಮೇಣ ಹಿಂದೂವಾದದ ಮೇಲು ಕೀಳಿನ ಭಾವನೆಯನ್ನು ಮೈಗೂಡಿಸಿಕೊಂಡ ಸಿಖ್ ಧರ್ಮದಿಂದ ದೂರ ನಿಂತಿದ್ದಾರೆ.
ರವಿದಾಸರು ಬದುಕಿದ್ದಾಗ ಅವರ ತತ್ವ ಮತ್ತು ವಚನಗಳು ಜಾತಿ, ವರ್ಗದ ಎಲ್ಲೆಯನ್ನು ದಾಟಿ ಜನಪ್ರಿಯವಾಗಿದ್ದವು. ಪೂರ್ವಾಶ್ರಮದಲ್ಲಿ ರಜಪೂತ ರಾಜಕುಮಾರಿಯಾಗಿದ್ದ ಸಂತ ಮೀರಾಬಾಯಿ ರವಿದಾಸರ ಶಿಷ್ಯೆಯಾಗಿದ್ದುಂಟು. ತಮ್ಮ ಹಿರಿಯ ಸಮಕಾಲೀನ ಸಂತ ಕಬೀರದಾಸರ ರಚನೆಗಳಲ್ಲಿನ ಕದನೋತ್ಸಾಹ ರವಿದಾಸರಲ್ಲಿ ಇರಲಿಲ್ಲ. ಮೃದುಸ್ವಭಾವದವರೂ, ದೊಡ್ಡ ಮನಸ್ಸಿನ ಕ್ಷಮಾಗುಣ ಹೊಂದಿದ್ದು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಬಲ್ಲವರಾಗಿದ್ದರು. ಬಹುಜನರಿಗೆ ಇಷ್ಟವಾದರು. ರವಿದಾಸರ 41 ವಚನಗಳನ್ನು ಸಿಖ್ ಪವಿತ್ರ ಗ್ರಂಥ ‘ಗುರುಗ್ರಂಥ ಸಾಹೇಬ’ದಲ್ಲಿ ಸೇರಿಸಲಾಗಿದೆ.
ರವಿದಾಸರು ಜನಿಸಿದ ವಾರಾಣಸಿಯ ಸೀರ್ ಗೋವರ್ಧನಪುರದಲ್ಲಿ ಅವರಿಗೆಂದು ದೊಡ್ಡ ದೇವಾಲಯವನ್ನು ಕಟ್ಟಲಾಗಿದೆ. ಪ್ರತಿವರ್ಷ ಅಲ್ಲಿ ಜರುಗುವ ರವಿದಾಸ ಜಯಂತಿಗೆ ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ ಉತ್ತರಪ್ರದೇಶದಿಂದ ರವಿದಾಸಿಯಾಗಳು ದೊಡ್ಡ ಸಂಖ್ಯೆಯಲ್ಲಿ ತೆರಳುತ್ತಾರೆ. ಬ್ರಿಟನ್, ಅಮೆರಿಕೆ ಮತ್ತು ಯೂರೋಪಿನ ಇತರೆ ದೇಶಗಳಿಂದಲೂ ಸಾವಿರಾರು ಮಂದಿ ಶ್ರದ್ಧಾಳುಗಳು ಬರುತ್ತಾರೆ. ರವಿದಾಸ್ ಮತ್ತು ಅಂಬೇಡ್ಕರ್ ಚಿತ್ರಗಳಿರುವ ಭಿತ್ತಿಪತ್ರಗಳನ್ನು ಹಿಡಿದು ಸಾಗುತ್ತಾರೆ. ಇಬ್ಬರ ಕುರಿತು ಹಾಡು ಕಟ್ಟಿ ಹಾಡುತ್ತಾರೆ. ಅಂಬೇಡ್ಕರ್ ಅವರ ಐತಿಹಾಸಿಕ ಕೃತಿ ‘ಜಾತಿವಿನಾಶ’ದ (Annihilation of Caste) ಹಿಂದಿ ಮತ್ತು ಪಂಜಾಬಿ ಅನುವಾದಗಳ ನೂರಾರು ಪ್ರತಿಗಳು ಮಾರಾಟ ಆಗುತ್ತವೆ. ರವಿದಾಸ-ಅಂಬೇಡ್ಕರ್ ಕ್ಯಾಲೆಂಡರುಗಳು ಸಾವಿರಾರು ಸಂಖ್ಯೆಯಲ್ಲಿ ದೂರ ದೂರದ ದಲಿತರ ಮನೆಗಳಿಗೆ ಪಯಣಿಸುತ್ತವೆ. ಫ್ರೇಂ ಹಾಕಿಸಿಕೊಂಡು ಹಾದಿ ಬೀದಿಗಳಲ್ಲಿ ಕುಳಿತು ಚಪ್ಪಲಿ ಹೊಲಿಯುವವರ ಹಿನ್ನೆಲೆಯಲ್ಲಿ ತೂಗುತ್ತವೆ.
ಪಂಜಾಬಿನಲ್ಲಿ ಮೇಲ್ಜಾತಿಗಳ ದಾಳಿಗಳಿಗೆ ಎದುರಾಗಿ ಬೇ ಗಮ್ ಪುರ ಟೈಗರ್ ಫೋರ್ಸ್, ರವಿದಾಸ ಸೇನಾ ಹಾಗೂ ಅಂಬೇಡ್ಕರ್ ಸೇನಾಗಳು ನಿಂತಿವೆ. ಉತ್ತರಪ್ರದೇಶದಲ್ಲಿ ಭೀಮ್ ಆರ್ಮಿ ತಲೆ ಎತ್ತಿದೆ.
ಉತ್ತರಪ್ರದೇಶ ಮತ್ತು ಪಂಜಾಬ್- ಹರಿಯಾಣದಲ್ಲಿ ನಿರಂತರ ಮರುಕಳಿಸುವ ಜಾತಿ ಘರ್ಷಣೆಗಳಲ್ಲಿ ಮೇಲ್ಜಾತಿಗಳ ದೌರ್ಜನ್ಯಗಳ ವಿರುದ್ಧ ಸೆಟೆದು ನಿಲ್ಲುವ ದಲಿತರ ಪೈಕಿ ರವಿದಾಸರ ಅನುಯಾಯಿಗಳು ಮುಂಚೂಣಿಯಲ್ಲಿ ಕಂಡು ಬರುತ್ತಾರೆ. ರವಿದಾಸರು ಬದುಕಿದ್ದಾಗ ಗುರು ನಾನಕರು ಮತ್ತು ಕಬೀರದಾಸರು ಮುಂಬೆಳಕಿನಲ್ಲಿರುತ್ತಾರೆ. ಇತಿಹಾಸದಲ್ಲಿ ಹೀಗೆ ಅದುಮಿ ಹೋದ ರೈದಾಸರ ಮಹತ್ವ, ಈಗ ಕಥನಗಳ ಕಥನವಾಗಿ ಚೀರುತ್ತದೆ ಎಂಬುದಾಗಿ ಸಮಾಜಶಾಸ್ತ್ರಜ್ಞರು ವ್ಯಾಖ್ಯಾನಿಸಿದ್ದಾರೆ. ಈ ಮಾತಿಗೆ ಇತ್ತೀಚಿನ ಉದಾಹರಣೆ ಎಂಟು ವರ್ಷಗಳ ಹಿಂದೆ ಪಶ್ಚಿಮೀ ಉತ್ತರಪ್ರದೇಶದ ಸಹಾರಣಪುರ ಜಿಲ್ಲೆಯ ಶಬ್ಬೀರಪುರದಲ್ಲಿ ಜರುಗಿದ ರಜಪೂತ- ಚಮ್ಮಾರ ಘರ್ಷಣೆ.
ಇದನ್ನೂ ಓದಿ ಈ ದಿನ ಸಂಪಾದಕೀಯ |ಮುಂಬಯಿ TISS ವಿದ್ಯಾರ್ಥಿಗಳ ಕ್ಯಾಂಪಸ್ ರಾಜಕೀಯ ದಮನ ಸಲ್ಲದು!
ಶಬ್ಬೀರಪುರದ ರಜಪೂತರು ರಾಣಾಪ್ರತಾಪ ಉತ್ಸವದ ಮೆರವಣಿಗೆ ತೆಗೆದಿದ್ದರು. ಮೆರವಣಿಗೆ ದಲಿತ ವಸತಿ ಪ್ರದೇಶಗಳನ್ನು ಹಾಯುತ್ತಲಿತ್ತು. ಕಿವಿ ಗಡಚಿಕ್ಕುವ ಡಿ.ಜೆ.ಸಂಗೀತದ ಅಬ್ಬರವನ್ನು ತಗ್ಗಿಸಬೇಕೆಂಬ ದಲಿತರ ಮನವಿಗೆ ಬೆಲೆ ಸಿಗಲಿಲ್ಲ. ಪೊಲೀಸರು ಮಧ್ಯಪ್ರವೇಶದ ನಂತರ ಸಂಗೀತದ ಅಬ್ಬರ ಅಡಗಿತು. ಅವಮಾನವೆಂದು ಬಗೆದ ರಜಪೂತರು ತಲವಾರುಗಳು, ಬಂದೂಕುಗಳು, ಕಲ್ಲುಗಳನ್ನು ಹಿಡಿದು ದಲಿತರ ಮನೆಗಳ ಮೇಲೆ ದಾಳಿ ನಡೆಸಿದರು. ಅಂಬೇಡ್ಕರ್ ಪ್ರತಿಮೆಯನ್ನು ಭಗ್ನಗೊಳಿಸಿದರು. ಸಂತ ರವಿದಾಸರ ದೇವಾಲಯಕ್ಕೆ ನುಗ್ಗಿ ಪ್ರತಿಮೆ ಉರುಳುಸಿ ಮೂತ್ರ ವಿಸರ್ಜಿಸಿದರು. ಮನೆಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟರು. ಅಂಬೇಡ್ಕರ್ ಪಟಗಳು, ಪುಸ್ತಕಗಳು, ಒಲೆ ಮೇಲಿನ ಅಡುಗೆ, ಕಾಳು ಕಡ್ಡಿಗಳು, ಮೋಟರ್ ಸೈಕಲ್, ಟೀವಿ ಸೆಟ್ಟುಗಳನ್ನು ಸುಟ್ಟು ಹಾಕಿದರು. ನಗನಾಣ್ಯ ದೋಚಿದರು. ಪಾತ್ರೆ ಪಡಗಗಳನ್ನೂ ಬಿಡದೆ ಕೊಚ್ಚಿ ಹಾಕಿದರು. ಅಡ್ಡ ಬಂದವರ ಮೇಲೆ ತಲವಾರುಗಳ ಬೀಸಿದರು. ಬಂದೂಕಿನ ಗುಂಡುಗಳು ಸಿಡಿದವು ಕೂಡ. ಮೂಕ ಜಾನುವಾರುಗಳನ್ನೂ ಬಿಡದೆ ಥಳಿಸಿದರು. ಹೆಣ್ಣುಮಕ್ಕಳ ಬಟ್ಟೆ ಹರಿದರು. ಸ್ತನ ಕತ್ತರಿಸುವ ಪ್ರಯತ್ನಗಳು ಜರುಗಿದವು. ಹಲ್ಲೆಕೋರರಿಂದ ರಕ್ಷಿಸಲು ಮಕ್ಕಳನ್ನು ಮಂಚಗಳೊಳಗೆ ಮುಚ್ಚಿಡಲಾಯಿತು. ಮುಖ್ಯಮಂತ್ರಿ ಆದಿತ್ಯನಾಥ ಖುದ್ದು ರಜಪೂತ ಕುಲಕ್ಕೆ ಸೇರಿದವರು. ದಾಳಿಕೋರರಿಗೆ ಪೊಲೀಸರ ಸಂಪೂರ್ಣ ‘ಸಹಕಾರ’ವಿತ್ತು. ಅಂಬೇಡ್ಕರ್ ಗೆ ಧಿಕ್ಕಾರ, ಜೈ ಶ್ರೀರಾಮ್, ಜೈ ರಾಣಾ ಪ್ರತಾಪ್ ಘೋಷಣೆಗಳು ಮೊಳಗಿದವು. ದಲಿತ ಹೆಣ್ಣುಮಕ್ಕಳನ್ನು ಬೆದರಿಸಿ ಅವರಿಂದ ‘ಜೈ ಬೋಲೋ ರಾಜಪುತಾನಾ’ ಘೋಷಣೆ ಕೂಗಿಸಲಾಯಿತು. ಕೊಳವೆ ಬಾವಿಗಳ ಹ್ಯಾಂಡ್ ಪಂಪುಗಳನ್ನು ಕಡಿದು ಹಾಕಲಾಯಿತು. ಹಲ್ಲೆಕೋರರ ಮೇಲೆ ಎಫ್.ಐ.ಆರ್. ದಾಖಲಿಸಿ ಕ್ರಮ ಜರುಗಿಸಬೇಕೆಂಬ ದಲಿತರ ಆಗ್ರಹಕ್ಕೆ ಜಿಲ್ಲಾಡಳಿತ ಕಿವುಡಾಯಿತು. ”ಭೀಮ್ ಆರ್ಮಿ”ಎಂಬ ಯುವ ದಲಿತ ಸಂಘಟನೆಯ ಮುಂದಾಳಾತ್ವದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು ರಜಪೂತ ದಲಿತ ಯುವಕರಿಬ್ಬರು ಮಡಿದರು. 180 ದಲಿತ ಕುಟುಂಬಗಳು ಕಾಲುವೆಯೊಂದರ ಬಳಿ ಗುಂಪುಗೂಡಿ ಹಿಂದೂ ದೇವ ದೇವತೆಗಳ ಪ್ರತಿಮೆಗಳನ್ನು ನೀರಿಗೆ ವಿಸರ್ಜಿಸಿ ಕೈ ತೊಳೆದುಕೊಂಡರು. ತಮ್ಮನ್ನು ಘನತೆಯಿಂದ ನಡೆಸಿಕೊಳ್ಳದೆ ಗುಲಾಮರಂತೆ ಕಾಣುವ ಧರ್ಮ ಮತ್ತು ಅದರ ತಥಾಕಥಿತ ಮೇಲ್ಜಾತಿಗಳ ಸಹವಾಸ ಬೇಡವೆಂದು ಸಿಡಿದು ನಿಂತರು.
ಇಂಗ್ಲಿಷ್ ನಲ್ಲಿ ಗೇಲ್ ಓಮ್ವೆಟ್ ಅವರು ಬರೆದಿರುವ ‘Seeking Begumpura: The social vision of Anticaste intellectuals’ ಕೃತಿಯ ಕನ್ನಡಾನುವಾದ ‘ಬೇಗಂಪುರ’. ಹಿರಿಯ ಚಿಂತಕ- ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ಅವರು ಈ ಕೃತಿಯನ್ನು ಬೇಗಂಪುರ ಹೆಸರಿನಲ್ಲಿ ಅನುವಾದಿಸಿದ್ದಾರೆ. ‘ಜೀರುಂಡೆ’ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ.

ಡಿ ಉಮಾಪತಿ
ʼಈ ದಿನ.ಕಾಮ್ʼನ ಗೌರವ ಸಂಪಾದಕರು. ʼದೆಹಲಿ ನೋಟʼ, ʼಪದ ಕುಸಿಯೇ ನೆಲವಿಲ್ಲʼ ಇವರ ಮಹತ್ವದ ಕೃತಿಗಳು. ಕರ್ನಾಟಕ ಸರ್ಕಾರ ಸ್ಥಾಪಿಸಿರುವ ʼವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪ್ರಶಸ್ತಿʼ ಪುರಸ್ಕೃತರು.




