ಭೂಮಿಯಲ್ಲಿ ಹೂತಿರುವ ಅಥವಾ ಅಡಗಿಸಿಟ್ಟಿರುವ ಯಾವುದೇ ಐತಿಹಾಸಿಕ ಅಥವಾ ಪ್ರಾಚೀನ ನಿಧಿ ಕಂಡುಬಂದರೆ, ಅದನ್ನು ಸರ್ಕಾರಕ್ಕೆ ಒಪ್ಪಿಸಬೇಕು; ಪತ್ತೆ ಮಾಡಿದವರಿಗೆ ನಿಧಿಯ ಮೌಲ್ಯದ ಒಂದು ಭಾಗ ಸಿಗಬಹುದು. ಇದು ಪ್ರಾಚೀನ ಕಲಾಕೃತಿಗಳ ಸಂರಕ್ಷಣೆ ಮತ್ತು ಸರ್ಕಾರದ ನಿಯಂತ್ರಣಕ್ಕೆ ಒಳಪಡುತ್ತದೆ.
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮಕ್ಕೆ ದೊಡ್ಡ ಇತಿಹಾಸವೇ ಇದೆ. ಜಿಲ್ಲಾ ಕೇಂದ್ರ ಗದಗದಿಂದ ಹನ್ನೊಂದು ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮವನ್ನು ದೇವಾಲಯಗಳ ಸ್ವರ್ಗ ಎಂದೂ ಕರೆಯುತ್ತಾರೆ. ಹೊಯ್ಸಳರು ಮತ್ತು ಚಾಲುಕ್ಯರ ಕಾಲದ ಹಲವು ಶಾಸನಗಳಿವೆ. ಈ ಗ್ರಾಮದಲ್ಲಿ, ಕುಟುಂಬವೊಂದು ಮನೆ ನಿರ್ಮಾಣಕ್ಕೆ ಮುಂದಾದಾಗ ಚಿನ್ನದ ಆಭರಣಗಳ ರೂಪದಲ್ಲಿರುವ ನಿಧಿ ಸಿಕ್ಕಿದೆ. ನಿಧಿ ಇರುವ ಜಾಗವನ್ನು ನಾಗರಹಾವು ಕಾಯುತ್ತಿರುತ್ತದೆ. ಇಂತಹ ನಿಧಿಯನ್ನು ಸ್ವಂತಕ್ಕೆ ಬಳಸಿಕೊಂಡರೆ ತೊಂದರೆಯ ಮೇಲೆ ತೊಂದರೆ ಉಂಟಾಗುತ್ತದೆ ಎನ್ನುವ ಭೀತಿಯಿಂದ, ನಿಧಿ ಸಿಕ್ಕ ಭೂಮಿಯ ಮಾಲೀಕರು ಚಿನ್ನವನ್ನು ಗದಗ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದು, ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರಾಮಾಣಿಕರು ಸಿಗುವುದೇ ಅಪರೂಪ ಎನ್ನುವ ಈ ಕಾಲದಲ್ಲಿ, ಅಸಲಿಗೆ ಆ ಕುಟುಂಬ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಬೇಕಿತ್ತೇ? ತಾವೇ ಬಳಸಿಕೊಳ್ಳಬಹುದಿತ್ತಲ್ಲವೇ? ಎನ್ನುವ ಮಾತುಗಳೂ ಕೂಡ ಕೇಳೀಬರತೊಡಗಿವೆ. ಹೀಗಿರುವಾಗ ಭೂಮಿಯಡಿ ಸಿಗುವ ನಿಧಿಗೆ ನಮ್ಮ ನೆಲದ ಕಾನೂನು ಏನು ಹೇಳುತ್ತದೆ ಎನ್ನುವುದನ್ನು ನೋಡಬೇಕಾಗುತ್ತದೆ.
ಭೂಮಿಯಡಿ ಸಿಗುವ ನಿಧಿ: ಕಾನೂನು ಮತ್ತು ಇತಿಹಾಸ
ಖಾಸಗಿ ಭೂಮಿಯಾಗಲಿ ಅಥವಾ ಸರ್ಕಾರದ ಒಡೆತನದ ಭೂಮಿಯಾಗಲಿ, ಅಲ್ಲಿ ನಿಧಿ ಸಿಕ್ಕಿದ್ದೇ ಆದಲ್ಲಿ ಅದರ ಮಾಲೀಕತ್ವ ಯಾರಿಗೆ ಎನ್ನುವ ವಿಚಾರದ ಕುರಿತು ಭಾರತದ ನೆಲದಲ್ಲಿ ಸ್ಪಷ್ಟವಾದ ಕಾನೂನು ಇದೆ. ಬಹಳ ಹಿಂದಿನ ಕಾಲದ ಕಾನೂನು ಇದಾಗಿದ್ದರೂ ಕೂಡಾ, ನಿಯಮ ಎನ್ನುವುದು ಇದೆ. ಇದಕ್ಕೆ 1878ರ ‘ಭಾರತೀಯ ನಿಧಿ ಸಂಗ್ರಹ ಕಾಯ್ದೆ'(Indian Treasure Trove Act, 1878) ಎಂದು ಕರೆಯಲಾಗುತ್ತದೆ. ಇಲ್ಲಿ ರೂಪಿಸಲಾಗಿರುವ ನಿಯಮವನ್ನು ಭಾರತದ ಎಲ್ಲ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಾಲನೆ ಮಾಡಲಾಗುತ್ತದೆ.
ಭಾರತದ ಮಣ್ಣಿನಲ್ಲಿ ಸಿಗುವ ಐತಿಹಾಸಿಕ ವಸ್ತುಗಳನ್ನು ರಕ್ಷಿಸುವುದು ಮತ್ತು ಅವುಗಳನ್ನು ಸರ್ಕಾರದ ನಿಯಂತ್ರಣದಲ್ಲಿ ಇರಿಸುವುದು ಭಾರತೀಯ ನಿಧಿ ಕಾಯ್ದೆ 1878ರ ಮೂಲ ಉದ್ದೇಶವಾಗಿದೆ. ಬ್ರಿಟಿಷ್ ಕಾಲದಲ್ಲಿ ದೇಶಾದ್ಯಂತ ಹಲವು ನಿಧಿ ಸಿಕ್ಕಿದ್ದರಿಂದ, ಅದನ್ನು ನಿರ್ವಹಿಸುವ ಕಾನೂನು ಅಗತ್ಯವಾಗಿತ್ತು. ಹಾಗಾಗಿ ಭಾರತೀಯ ನಿಧಿ ಕಾಯ್ದೆಯನ್ನು ಜಾರಿಗೆ ತರಲಾಯಿತು.
ನಿಧಿ ಎಂದರೇನು? ಕಾನೂನು ವ್ಯಾಖ್ಯಾನವೇನು?
ನಿಧಿ ಕಾಯ್ದೆ(Treasure Act) ಹೇಳುವುದೇನೆಂದರೆ, ಭೂಮಿಯಲ್ಲಿ ಹೂತಿರುವ ಅಥವಾ ಅಡಗಿಸಿಟ್ಟಿರುವ ಯಾವುದೇ ಐತಿಹಾಸಿಕ ಅಥವಾ ಪ್ರಾಚೀನ ನಿಧಿ ಕಂಡುಬಂದರೆ, ಅದನ್ನು ಸರ್ಕಾರಕ್ಕೆ ಒಪ್ಪಿಸಬೇಕು; ಪತ್ತೆ ಮಾಡಿದವರಿಗೆ ನಿಧಿಯ ಮೌಲ್ಯದ ಒಂದು ಭಾಗ ಸಿಗಬಹುದು. ಇದು ಪ್ರಾಚೀನ ಕಲಾಕೃತಿಗಳ ಸಂರಕ್ಷಣೆ ಮತ್ತು ಸರ್ಕಾರದ ನಿಯಂತ್ರಣಕ್ಕೆ ಒಳಪಡುತ್ತದೆ.
ಈ ಕಾಯ್ದೆಯ ಪ್ರಕಾರ, ಭೂಮಿಯಲ್ಲಿ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಸ್ಥಳದಲ್ಲಿ ಮರೆಮಾಚಿದ ಯಾವುದೇ ಮೌಲ್ಯಯುತ ವಸ್ತು ಅಥವಾ ಭಾರತದ ಕರೆನ್ಸಿ 10 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚು ಬೆಲೆಬಾಳುವ ವಸ್ತುಗಳು ಭೂಮಿಯೊಳಗೆ ಪತ್ತೆಯಾದ ಪಕ್ಷದಲ್ಲಿ, ಅದು ಯಾರದೇ ಸ್ವತ್ತೂ ಆಗುವುದಿಲ್ಲ. ಅಂದರೆ, ಒಂದು ವೇಳೆ, ಖಾಸಗಿ ಜಾಗದಲ್ಲಿ ನಿಧಿ ಪತ್ತೆಯಾದರೆ, ಅದರ ಮಾಲೀಕರು, ಜಾಗದ ಒಡೆಯನಾಗುವುದಿಲ್ಲ ಎನ್ನುವುದು ಈ ಕಾಯಿದೆಯಲ್ಲಿ ಉಲ್ಲೇಖವಾಗಿರುವ ಪ್ರಮುಖ ಅಂಶವಾಗಿದೆ. ಈ ಕಾಯಿದೆ ರೂಪಿಸುವ ವೇಳೆ, ಮೊತ್ತವನ್ನು ಹತ್ತು ರೂಪಾಯಿಯ ಬದಲು 0.15 ಡಾಲರ್ ಅಥವಾ 0.10 ಪೌಂಡ್ ಎಂದು, ಕಾಯಿದೆಯಲ್ಲಿ ನಮೂದಿಸಲಾಗಿದ್ದು, ಚಿನ್ನ, ಬೆಳ್ಳಿ, ನಾಣ್ಯಗಳು, ಆಭರಣಗಳು, ಪ್ರಾಚೀನ ವಸ್ತುಗಳು ಇವೆಲ್ಲವೂ ನಿಧಿಯ ಅಡಿಯಲ್ಲಿ ಬರುತ್ತವೆ. ಐತಿಹಾಸಿಕ ಮೌಲ್ಯವಿದ್ದರೆ, ಅದನ್ನು ಪುರಾತತ್ವ ಇಲಾಖೆಯ ಮೂಲಕ ಸಂರಕ್ಷಿಸಬೇಕು ಎಂಬುದು ಈ ಕಾನೂನಿನ ಉದ್ದೇಶವಾಗಿದೆ.
ಕಾಯ್ದೆಯ ಹಿನ್ನೆಲೆಯಲ್ಲಿ ಬ್ರಿಟಿಷ್ ಸಾಮ್ರಾಜ್ಯವಾದಿ ಉದ್ದೇಶಗಳೂ ಇದ್ದವು. ಅಂದಿನ ಕಾಲದಲ್ಲಿ ಸಿಕ್ಕ ನಿಧಿಗಳನ್ನು ಬ್ರಿಟನ್‌ಗೆ ತೆಗೆದುಕೊಂಡು ಹೋಗುವ ಸಾಧ್ಯತೆಯನ್ನು ತಪ್ಪಿಸಿ, ಸ್ಥಳೀಯ ಸರ್ಕಾರವೇ ನಿಯಂತ್ರಿಸಲಿ ಎಂಬ ಉದ್ದೇಶವಾಗಿತ್ತು. ಸ್ವಾತಂತ್ರ್ಯದ ನಂತರ ಈ ಕಾಯ್ದೆಯನ್ನು ಭಾರತ ಸರ್ಕಾರ ಉಳ್ಳಿಸಿಕೊಂಡಿತು.
ಕರ್ನಾಟಕ ಕಾಯ್ದೆಯಲ್ಲಿಯೂ ಕೂಡ ಇದೇ ವ್ಯಾಖ್ಯಾನವಿದೆ. ಆದರೆ ಅದು ಭೂಮಿಯಲ್ಲಿ ಮರೆಮಾಚಿದ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ವಸ್ತುವನ್ನು ನಿಧಿ ಎಂದು ಹೇಳುತ್ತದೆ. ಒಂದು ವೇಳೆ ಅದು 100 ವರ್ಷಗಳ ಹಿಂದೆ ಮರೆಮಾಚಿದ್ದರೆ, ಇದನ್ನು ಓನರ್‌ಲೆಸ್ ಎಂದು ಘೋಷಿಸುವ ವ್ಯವಸ್ಥೆ ಇದೆ.
ಭಾರತೀಯ ನಿಧಿ ಕಾಯ್ದೆ ಹಳೆಯ ಕಾನೂನು. ಆದರೂ ಇದಕ್ಕೆ ಸಾಕಷ್ಟು ಬಾರಿ ತಿದ್ದುಪಡಿಯನ್ನು ತರಲಾಗಿಲ್ಲ. ಆದರೆ ಕೆಲವು ರಾಜ್ಯಗಳು ಅದನ್ನು ಸ್ಥಳೀಯ ಅಗತ್ಯಗಳಿಗೆ ತಗ್ಗಿಸಿ ತಿದ್ದುಪಡಿ ಮಾಡಿ ಹೊಸ ಕಾಯ್ದೆಗಳನ್ನು ಜಾರಿಗೆ ತಂದವು. ಉದಾಹರಣೆಗೆ, ಹಿಮಾಚಲ ಪ್ರದೇಶದಲ್ಲಿ 3-A ಸೆಕ್ಷನ್ ಸೇರಿಸಿ, ನಿಧಿ ಹುಡುಕುವ ಅನುಮತಿಗಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ರಾಜ್ಯದಲ್ಲಿಯೂ ಕರ್ನಾಟಕ ನಿಧಿ ಕಾಯ್ದೆ, 1962(Karnataka Treasure Trove Act, 1962)ನ್ನು ಜಾರಿಗೊಳಿಸಲಾಗಿದೆ. ಇದು ಭಾರತೀಯ ಕಾಯ್ದೆಯನ್ನು ವಿಸ್ತರಿಸಿ ಸ್ಥಳೀಯಗೊಳಿಸಿದೆ. ಇದರ ಮೂಲಕ ವಿವಿಧ ಪ್ರದೇಶಗಳಲ್ಲಿದ್ದ ವಿಭಿನ್ನ ಕಾಯ್ದೆಗಳನ್ನು ಏಕೀಕರಿಸಲಾಯಿತು(ಉದಾ. ಮೈಸೂರು ಏರಿಯಾ, ಬಾಂಬೆ ಏರಿಯಾ). ಇದು ಭಾರತೀಯ ಕಾಯ್ದೆಯ ಮುಖ್ಯ ಅಂಶಗಳನ್ನು ಉಳಿಸಿಕೊಂಡಿದ್ದರೂ, ಸ್ಥಳೀಯ ಅಧಿಕಾರಿಗಳ ಪಾತ್ರವನ್ನು ಬಲಪಡಿಸಿದೆ.
ನಿಧಿ ಸಿಕ್ಕಾಗ ಏನು ಮಾಡಬೇಕು? ಕಾನೂನು ಪ್ರಕ್ರಿಯೆ ಏನು?
ಭೂಮಿಯೊಳಗೆ ನಿಧಿ ಸಿಕ್ಕಿದ ಪಕ್ಷದಲ್ಲಿ ಅದು ಕಾಯಿದೆಯ ಪ್ರಕಾರ, ಅವರ ಸ್ವತ್ತಾಗುವುದಿಲ್ಲ. ಹಾಗಾಗಿ ಈ ಬಗ್ಗೆ ನಿಧಿ ಸಿಕ್ಕ ತಕ್ಷಣ, ಸಿಕ್ಕವರು(ಫೈಂಡರ್) ಮತ್ತು ಸ್ಥಳದ ಮಾಲೀಕರು ಹತ್ತಿರದ ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್‌ಗೆ ಮಾಹಿತಿ ನೀಡಬೇಕು.
ಸಿಕ್ಕ ವಸ್ತುವಿನ ಸಂಪೂರ್ಣ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡಬೇಕು
ಸಿಕ್ಕ ವಸ್ತುವಿನ ಬಗ್ಗೆ ಮೌಕಿಕವಾಗಿ ಮಾಹಿತಿಯನ್ನು ನೀಡದೇ, ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕಾಗುತ್ತದೆ. ಅದರಲ್ಲಿ, ಸಿಕ್ಕ ವಸ್ತುವಿನ ಬಗ್ಗೆ ಸಂಪೂರ್ಣವಾದ ಮಾಹಿತಿ, ಅದರ ಈಗಿನ ಅಂದಾಜು ಮಾರುಕಟ್ಟೆ ಬೆಲೆ, ಯಾವ ದಿನಾಂಕ ಮತ್ತು ಸಮಯದಂದು ಸಿಕ್ಕಿತು ಎಂಬ ವಿವರ, ನಿಧಿ ಸಿಕ್ಕ ವೇಳೆ ಯಾರೆಲ್ಲ ಇದ್ದರು, ಅವರ ಮಾಹಿತಿಯ ವಿವರವನ್ನು ಅಧಿಕಾರಿಗಳಿಗೆ ನೀಡಬೇಕಾಗುತ್ತದೆ. ಸಿಕ್ಕ ವಸ್ತುಗಳನ್ನು ಸರ್ಕಾರಿ ಖಜಾನೆಯಲ್ಲಿ( Government Treasury) ಠೇವಣಿ ಇಡಬೇಕು ಅಥವಾ ಅಧಿಕಾರಿಗಳ ಭದ್ರತೆಯಲ್ಲಿ ಇರಿಸಬೇಕು. ಅಗತ್ಯಬಿದ್ದಾಗ ಅದನ್ನು ವಾಪಸ್ ಒದಗಿಸುವ ಭರವಸೆಯನ್ನು ಪಡೆದುಕೊಂಡು, ನಿಧಿ ಸಿಕ್ಕವರಿಗೆ ಅದನ್ನು ವಾಪಸ್ ನೀಡುವ ನಿರ್ಧಾರವನ್ನು ಜಿಲ್ಲಾಡಳಿತ ತೆಗೆದುಕೊಳ್ಳುತ್ತದೆ.
ಒಂದು ವೇಳೆ ನಿಧಿ ಸಿಕ್ಕ ಬಗ್ಗೆ ಮಾಹಿತಿ ನೀಡದಿದ್ದರೆ ದಂಡ ಅಥವಾ ಒಂದು ವರ್ಷದವರೆಗೆ ಜೈಲು ಶಿಕ್ಷೆಯಾಗಬಹುದು. ಇಲ್ಲದಿದ್ದರೆ ಎರಡೂ ಶಿಕ್ಷೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಅಂಶ ಕಾನೂನಿನಲ್ಲಿ ಪ್ರಸ್ತಾಪವಾಗಿದೆ.
ಜಿಲ್ಲಾಡಳಿತ ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತದೆ
ಕಾಯಿದೆಯ ಪ್ರಕಾರ, ನಿಧಿ ಸಿಕ್ಕಿದ ನಂತರ ಜಿಲ್ಲಾಡಳಿತ ಈ ಬಗ್ಗೆ ಸಮಗ್ರ ತನಿಖೆಯನ್ನು ನಡೆಸುತ್ತದೆ. ನಿಧಿಯ ನಿಜವಾದ ಮಾಲೀಕರು ಯಾರು ಎಂದು ಸಾಬೀತು ಪಡಿಸುವ ಅಂಶಗಳು/ದಾಖಲೆಗಳು ಇವೆಯೇ ಎನ್ನುವುದನ್ನು ಪರಿಶೀಲಿಸಲಾಗುತ್ತದೆ. ಪ್ರಮುಖವಾಗಿ, ನಿಧಿಯನ್ನು ಹೂತಿಟ್ಟ ವ್ಯಕ್ತಿಯ ವಂಶಸ್ಥರು/ಪೂರ್ವಜರು ಯಾರಾದರೂ ಇದ್ದಾರೆಯೇ ಎನ್ನುವುದನ್ನು ಮೊದಲು ಜಿಲ್ಲಾಡಳಿತ ಪರಿಶೀಲಿಸುತ್ತದೆ. ಸಾರ್ವಜನಿಕ ಅಧಿಸೂಚನೆ ಹೊರಡಿಸಲಾಗುತ್ತದೆ. ಬಳಿಕ ಹಕ್ಕುದಾರರು 4-6 ತಿಂಗಳೊಳಗೆ ಬರಬೇಕೆಂದು ತಿಳಿಸಲಾಗುತ್ತದೆ. ನಿಧಿ 100 ವರ್ಷಗಳ ಹಿಂದೆ ಮರೆಮಾಚಿದ್ದರೆ, ಸಿವಿಲ್ ಕೋರ್ಟ್‌ನಲ್ಲಿ ಮೊಕದ್ದಮೆಗೆ ಅವಕಾಶ ನೀಡುತ್ತಾರೆ. ಒಂದು ವೇಳೆ, ನಿಧಿಯ ಮಾಲೀಕತ್ವವನ್ನು ರುಜುವಾತು ಪಡಿಸುವ ದಾಖಲೆಗಳು ಇಲ್ಲದೇ ಇದ್ದರೆ ಅಥವಾ ನಿಧಿ ಸಿಕ್ಕ ವ್ಯಕ್ತಿಯು ಹೇಳುವ ಅಂಶದಲ್ಲಿ ಸತ್ಯಾಂಶ ಇದೆ ಎನ್ನುವುದರ ಬಗ್ಗೆ ಸಂದೇಹವಿದ್ದರೆ, ಒಂದು ವೇಳೆ ಹಕ್ಕುದಾರರಿಲ್ಲದಿದ್ದರೆ, ಆ ನಿಧಿಯನ್ನು ಮಾಲೀಕ ರಹಿತ(ಓನರ್‌ಲೆಸ್) ನಿಧಿ ಎಂದು ಘೋಷಿಸಲಾಗುತ್ತದೆ.
ಕರ್ನಾಟಕದಲ್ಲಿ ಇದೇ ಪ್ರಕ್ರಿಯೆ ಇದೆ. ಆದರೆ ಜಿಲ್ಲಾಧಿಕಾರಿ ನಿಧಿಯ ಬಗ್ಗೆ ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸಿ, ಪುರಾತತ್ವ ನಿರ್ದೇಶಕರಿಗೆ ಸೂಚಿಸುತ್ತಾರೆ.
ನಿಧಿ ಯಾರಿಗೆ ಸೇರುತ್ತದೆ?
ಮಾಲೀಕ ರಹಿತ ನಿಧಿ ಎಂದು ಘೋಷಿತವಾದ(ಓನರ್‌ಲೆಸ್ ಘೋಷಣೆಯ ನಂತರ) ಬಳಿಕ ನಿಧಿ ಸಿಕ್ಕವರು ಸ್ಥಳದ ಮಾಲೀಕರಾಗಿದ್ದರೆ ಆಸ್ತಿ ಮಾಲೀಕರು ಮತ್ತು ಸರ್ಕಾರಕ್ಕೆ ಪಾಲು ಹೋಗುತ್ತದೆ. ಮಾಲೀಕರಾಗದಿದ್ದರೆ, ವಿಭಾಗ(ನೋಡಿದವರಿಗೆ ಗರಿಷ್ಠ 1 ಲಕ್ಷ ರೂಪಾಯಿವರೆಗೆ, ಅಥವಾ ಒಪ್ಪಂದದಂತೆ) ಮಾಡಲಾಗುತ್ತದೆ. ಒಪ್ಪಂದಕ್ಕೆ ತಕ್ಕಂತೆ ಜಿಲ್ಲಾಡಳಿತ ಆದ್ಯತೆ ನೀಡುತ್ತದೆ. ಈ ಕಾನೂನು, ಐತಿಹಾಸಿಕ ವಸ್ತುಗಳಿಗೆ ಒಳಪಡುವುದಿಲ್ಲ. ಅದಕ್ಕಾಗಿ, ಬೇರೊಂದು ಕಾನೂನು ಇದೆ.
ಮಾಲೀಕರ ಭೂಮಿಯೊಳಗೆ ಸಿಕ್ಕ ನಿಧಿ ಸರ್ಕಾರಕ್ಕೆ ಬೇಕಿದ್ದರೆ, ಭೂಮಿಯ ಮೌಲ್ಯಕ್ಕೆ 1/5 ಭಾಗ ಹೆಚ್ಚುವರಿ ನೀಡಿ ಸ್ವಾಧೀನಪಡಿಸಿಕೊಳ್ಳಬಹುದು. ಸಾರ್ವಜನಿಕ ಜಮೀನಿನಲ್ಲಿ ಸಿಕ್ಕರೆ, ಅದು ಸರ್ಕಾರಕ್ಕೆ ಸೇರಿದ್ದು. ಖಾಸಗಿ ಜಮೀನಿನಲ್ಲಿ ಸಿಕ್ಕಿದಾಗ ವರದಿ ಮಾಡದಿದ್ದರೆ, ಆಗಲೂ ಸರ್ಕಾರಕ್ಕೆ ಸೇರುತ್ತದೆ.
ಪ್ರಾಚೀನ ವಸ್ತುಗಳು ಮತ್ತು ಕಲಾ ನಿಧಿಗಳ ಕಾಯ್ದೆ(ಆಂಟಿಕ್ವಿಟೀಸ್ ಅಂಡ್ ಆರ್ಟ್ ಟ್ರೆಷರ್ಸ್ ಆಕ್ಟ್)
1972ರ ‘ಪ್ರಾಚೀನ ವಸ್ತುಗಳು ಮತ್ತು ಕಲಾ ನಿಧಿಗಳ ಕಾಯ್ದೆ‘ (Antiquities and Art Treasures Act, 1972) ಪ್ರಕಾರ, ಐತಿಹಾಸಿಕ ಅಥವಾ ಪುರಾತತ್ವ ಮಹತ್ವವನ್ನು ಹೊಂದಿರುವ ವಸ್ತುಗಳು ಭೂಮಿಯೊಳಗೆ ಸಿಕ್ಕಿದ್ದೇ ಆದಲ್ಲಿ ಇಂಡಿಯನ್ ಟ್ರೆಷರ್ ಟ್ರೋವ್ ಆಕ್ಟ್‌ನಿಂದ ವಿನಾಯತಿ ಇದೆ. ನೂರು ವರ್ಷಗಳಿಗಿಂತ ಹಳೆಯದಾದ ಯಾವುದೇ ಹಸ್ತಪ್ರತಿ/ ದಾಖಲೆಗಳೂ ಸಿಕ್ಕಿದರೆ ಅದನ್ನು ಪುರಾತನ ವಸ್ತು ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಐತಿಹಾಸಿಕ ವಸ್ತುಗಳನ್ನು ಸಂರಕ್ಷಣೆಗಾಗಿ ಸ್ವಾಧೀನ ಪಡಿಸುವ ಅಧಿಕಾರವನ್ನು ಇಲಾಖೆ ಹೊಂದಿದೆ. ಆದರೆ, ಯಾರಿಗೆ ವಸ್ತುಗಳು ಸಿಕ್ಕಿರುತ್ತವೆಯೋ ಅಂಥವರು ಸಿಕ್ಕ ವಸ್ತುಗಳ ಮೇಲೆ ಪರಿಹಾರ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಭಾರತದಲ್ಲಿ ಸಿಕ್ಕ ಪ್ರಸಿದ್ಧ ನಿಧಿಗಳು ಮತ್ತು ಕಾನೂನು ಪ್ರಕರಣಗಳು: ಭಾರತದಲ್ಲಿ ಹಲವು ನಿಧಿ ಸಿಕ್ಕಿದ್ದು, ಅವುಗಳ ಕಾನೂನು ಹೋರಾಟಗಳು ಆಸಕ್ತಿದಾಯಕವಾಗಿವೆ.
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ನಿಧಿ (ಕೇರಳ, 2011): ದೇವಸ್ಥಾನದ ಭೂಮಿಯಡಿ ಕಲ್ಲರಗಳಲ್ಲಿ ಸುಮಾರು 22 ಬಿಲಿಯನ್ ಡಾಲರ್ ಮೌಲ್ಯದ ಚಿನ್ನ, ಆಭರಣಗಳು ಸಿಕ್ಕವು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತೆರೆಯಲಾಯಿತು. ತ್ರಾವಣಕೋರ್ ರಾಜಕುಟುಂಬದ ಹಕ್ಕನ್ನು ಉಳಿಸಿಕೊಂಡು, ದೇವಸ್ಥಾನದ ನಿರ್ವಹಣೆಗೆ ಅವರಿಗೆ ಅಧಿಕಾರ ನೀಡಲಾಯಿತು. ಆದರೆ ಸರ್ಕಾರದ ಮೇಲ್ವಿಚಾರಣೆ ಇದೆ. ಇದು ನಿಧಿ ಕಾಯ್ದೆಯಡಿ ಬಂದಿದ್ದರೂ, ದೇವಸ್ಥಾನದ ಸ್ವತ್ತು ಎಂದು ನಿರ್ಧರಿಸಲಾಯಿತು.
ಪಟಿಯಾಲಾ ನೆಕ್ಲೇಸ್(ಪಂಜಾಬ್, 20ನೇ ಶತಮಾನ): ಪಟಿಯಾಲಾ ರಾಜಕುಟುಂಬದ ನಿಧಿ ಸಿಕ್ಕಿದ್ದು, ಕಾಯ್ದೆಯ ಮೂಲಕ ಸರ್ಕಾರಿ ಮೇಲ್ವಿಚಾರಣೆಯಲ್ಲಿ ಸಂರಕ್ಷಣೆ ಮಾಡಲಾಯಿತು. ಇದು ಐತಿಹಾಸಿಕ ಮೌಲ್ಯದ ಉದಾಹರಣೆ.
ಹರಿಯಾಣಾ ಗೋಲ್ಡ್ ಹೋರ್ಡ್ (2000ಗಳು): ಹರಿಯಾಣದಲ್ಲಿ ಸಿಕ್ಕ ಚಿನ್ನದ ನಿಧಿ, ಕಾಯ್ದೆಯ ಮೂಲಕ ಸರ್ಕಾರಿ ಸ್ವಾಧೀನಕ್ಕೆ ಬಂದಿತು ಮತ್ತು ಪುರಾತತ್ವ ಅಧ್ಯಯನಕ್ಕೆ ಬಳಸಲಾಯಿತು.
ಕಾಶ್ಮೀರದ ಮಹಾರಾಜರ ನಿಧಿ(1984): ಕಾಶ್ಮೀರದಲ್ಲಿ ಟ್ರಂಕ್‌ಗಳಲ್ಲಿ 30-50 ಮಿಲಿಯನ್ ಡಾಲರ್ ಮೌಲ್ಯದ ನಿಧಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ರಾಜಕುಟುಂಬ ಮತ್ತು ಸರ್ಕಾರದ ನಡುವೆ ಹೋರಾಟ ನಡೆಯಿತು. ಬಳಿಕ ಅಂತಿಮವಾಗಿ ಆಂಟಿಕ್ವಿಟೀಸ್ ಅಕ್ಟ್ ಅಡಿ ತನಿಖೆ ಮಾಡಲಾಯಿತು.
ಲಕ್ಕುಂಡಿ ನಿಧಿ(ಕರ್ನಾಟಕ, 2026): ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ಅಗೆಯುವಾಗ 100 ವರ್ಷಗಳ ಹಳೆಯ ಚಿನ್ನದ ಆಭರಣಗಳು ಸಿಕ್ಕವು. ಸಿಕ್ಕ ಹುಡುಗನ ಪ್ರಾಮಾಣಿಕತೆಯನ್ನು ಮೆಚ್ಚಿ ಸರ್ಕಾರ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದು, ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದೆ. ಇದು ಕರ್ನಾಟಕ ಕಾಯ್ದೆಯಡಿ ನಿರ್ವಹಣೆಯಾಗಿದೆ.
ಆಭರಣಗಳು ಸಿಕ್ಕ ತಕ್ಷಣ ಮುಚ್ಚಿಟ್ಟುಕೊಳ್ಳದೇ, ದೇವರ ಮುಂದಿಟ್ಟು ಸರ್ಕಾರಕ್ಕೆ ಮಾಹಿತಿ ನೀಡಿದ ಕುಟುಂಬ ಮತ್ತು ಯುವಕನ ಪ್ರಾಮಾಣಿಕತೆ ಶ್ಲಾಘನೀಯವಾಗಿದೆ. ಇಂದಿನ ಕಾಲದಲ್ಲಿ ಒಂದು ರೂಪಾಯಿ ಸಿಕ್ಕರೂ ಯಾರೂ ಬಿಡುವುದಿಲ್ಲ. ಅಂಥದ್ದರಲ್ಲಿ ಇಷ್ಟು ಬಂಗಾರ ಸಿಕ್ಕರೂ ಆಸೆ ಪಡದೆ ಸರ್ಕಾರಕ್ಕೆ ಒಪ್ಪಿಸಿರುವುದು ದೊಡ್ಡ ಕೆಲಸ. ಈ ಪ್ರಾಮಾಣಿಕತೆಗಾಗಿ ಸರ್ಕಾರ ಆ ಕುಟುಂಬಕ್ಕೆ ಸೂಕ್ತ ಪ್ರೋತ್ಸಾಹ ಅಥವಾ ಬಹುಮಾನ ನೀಡಬೇಕು ಎಂಬುದು ಸಾರ್ವಜನಿಕರ ಮಾತುಗಳಾಗಿವೆ.
ನಿಧಿ ಸಿಕ್ಕರೆ ತಕ್ಷಣ ವರದಿ ಮಾಡಬೇಕು. ಇದರಿಂದ ಬಹುಮಾನ ಸಿಗಬಹುದು ಮತ್ತು ಐತಿಹಾಸಿಕ ಸಂಪತ್ತು ರಕ್ಷಣೆಯಾಗುತ್ತದೆ. ಮೆಟಲ್ ಡಿಟೆಕ್ಟರ್ ಬಳಸುವವರು ಅನುಮತಿ ಪಡೆಯಬೇಕು. ಒಂದು ವೇಳೆ ಕಾಯ್ದೆಯನ್ನು ಉಲ್ಲಂಘಿಸಿದರೆ ಶಿಕ್ಷೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.





