ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ಮತ್ತು ಬೀದರ್‌ನ ಶಾಲಾ ನಾಟಕವೊಂದರಲ್ಲಿ ಸಿಎಎ ವಿರುದ್ಧ ಮಾತನಾಡಿದ್ದಕ್ಕೆ ಮಕ್ಕಳ ಮೇಲೆ ದೇಶದ್ರೋಹ ಪಕ್ರರಣ ದಾಖಲಿಸುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ತನ್ನದೇ ಮಿತ್ರಪಕ್ಷ ವಂದೇ ಮಾತರಂ ಗೀತೆ ಹೇರಿಕೆ ವಿರೋಧಿಸಿದಾಗ ಮೌನ ತಾಳುವುದೇಕೆ?
ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ದೇಶಭಕ್ತಿಯ ಅಳತೆಗೋಲಾಗಿ ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಬಳಸುತ್ತಿದೆ. ದೇಶದ ಗುಪ್ತ ಮಾಹಿತಿಯನ್ನು ಇತರೆ ದೇಶಕ್ಕೆ ನೀಡಿದರೂ ಪರವಾಗಿಲ್ಲ ‘ವಂದೇ ಮಾತರಂ’ ಎಂದು ಹೇಳಿದರೆ ಸಾಕು ಆತ ದೇಶಭಕ್ತ ಎಂದು ಹೇಳುವ ಜಾಯಮಾನ ಬಿಜೆಪಿಯದ್ದು. ಆದರೆ ನಾಗಾಲ್ಯಾಂಡ್‌ನಂತಹ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಈ ನಿಲುವು ಬದಲಾಗಿದೆ. ಅಧಿಕಾರ ಉಳಿಸಿಕೊಳ್ಳಲು ನಮ್ಮ ಸಿದ್ಧಾಂತವನ್ನೇ ಬುಡಮೇಲು ಮಾಡಿಕೊಳ್ಳಲು ಸಜ್ಜು ಎಂಬಂತೆ ವರ್ತಿಸುತ್ತಿದೆ ಬಿಜೆಪಿ.
“ವಂದೇ ಮಾತರಂ ಅಥವಾ ಭಾರತ್ ಮಾತಾ ಕಿ ಜೈ ಎಂದು ಹೇಳದವರು, ವಂದೇ ಮಾತರಂ ಗೀತೆ ಹಾಡದವರು ದೇಶದ್ರೋಹಿಗಳು” ಎಂಬುದು ಬಿಜೆಪಿಯ ವಾದ. ಈ ವಿಚಾರದಲ್ಲೇ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮುಂಚಿತವಾಗಿ ಲೋಕಸಭೆಯಲ್ಲಿ ವಂದೇ ಮಾತರಂ ಬಗ್ಗೆ ಚರ್ಚೆಗೆಳೆದು, ಕಾಂಗ್ರೆಸಿಗರು ದೇಶದ್ರೋಹಿಗಳು ಎಂಬ ಪಟ್ಟ ಕಟ್ಟಲು ಶತ ಪ್ರಯತ್ನ ಮಾಡಿತ್ತು. ಹಿಂದೂ ದೇವತೆಗಳ ಉಲ್ಲೇಖ ಇರುವುದರಿಂದ ಒಂದೇ ಧರ್ಮಕ್ಕೆ ಸಂಬಂಧಿಸಿದ ಗೀತೆ ಇದಾಗುತ್ತದೆ. ಆದ್ದರಿಂದ ವಂದೇ ಮಾತರಂ ಹೇರಿಕೆ ಮಾಡುವುದು ಸರಿಯಲ್ಲ ಎಂಬ ವಾದ ವಿಪಕ್ಷಗಳದ್ದು. ಈ ವಾದ ಮಾಡಿದವರೆಲ್ಲರೂ ಬಿಜೆಪಿ ಪಾಲಿಗೆ ದೇಶದ್ರೋಹಿಗಳಾದರು. ಆದರೆ ನಾಗಾಲ್ಯಾಂಡ್‌ನಲ್ಲಿ ಬಿಜೆಪಿಗೆ ತನ್ನ ಮಿತ್ರಪಕ್ಷ ‘ನಾಗಾ ಪೀಪಲ್ಸ್ ಫ್ರಂಟ್’ ಮಾತ್ರ ದೇಶದ್ರೋಹಿಯಂತೆ ಕಂಡಿಲ್ಲ ಎಂಬುದು ವಿಸ್ಮಯ.
ಇದನ್ನು ಓದಿದ್ದೀರಾ? ‘ವಂದೇ ಮಾತರಂ’ ವಿರೋಧಿಸುವುದು ದೇಶದ್ರೋಹಕ್ಕಿಂತ ಕಡಿಮೆಯಲ್ಲ: ಯೋಗಿ ಆದಿತ್ಯನಾಥ್
ನಾಗಾಲ್ಯಾಂಡ್ ವಿಶ್ವವಿದ್ಯಾಲಯದ ಘಟಿಕೋತ್ಸವವೊಂದರಲ್ಲಿ ವಂದೇ ಮಾತರಂ ಗೀತೆಯನ್ನು ನುಡಿಸಿದಾಗ ಅಲ್ಲಿನ ವಿದ್ಯಾರ್ಥಿಗಳು ಎದ್ದು ನಿಲ್ಲದೆ ಕುಳಿತುಕೊಳ್ಳುವ ಮೂಲಕ ಪ್ರತಿಭಟಿಸಿದ್ದಾರೆ. ಅಷ್ಟಕ್ಕೂ ನಾಗಾಲ್ಯಾಂಡ್ ವಿದ್ಯಾರ್ಥಿಗಳು ಕೇವಲ ಒಂದು ಗೀತೆಗೆ ತೋರಿದ ವಿರೋಧವಲ್ಲ, ಬದಲಾಗಿ ಅಲ್ಲಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ಮಿತೆಯ ಪ್ರಶ್ನೆಯನ್ನು ಎತ್ತಿದ್ದಾರೆ. ಈ ಪ್ರತಿಭಟನೆಗೆ ಬಿಜೆಪಿ ಮಿತ್ರಪಕ್ಷ ನಾಗಾ ಪೀಪಲ್ಸ್ ಫ್ರಂಟ್ (NPF) ಬೆಂಬಲ ನೀಡಿದೆ.
ಬಂಕಿಮಚಂದ್ರ ಚಟರ್ಜಿಯವರು ಬರೆದ ‘ವಂದೇ ಮಾತರಂ’ ಗೀತೆಯ ಕೆಲವು ಚರಣಗಳಲ್ಲಿ ಹಿಂದೂ ದೇವತೆಗಳಾದ ದುರ್ಗೆ ಮತ್ತು ಲಕ್ಷ್ಮಿಯ ಉಲ್ಲೇಖವಿದೆ. ಆದರೆ ನಮ್ಮದು ಸೌಹಾರ್ದ ದೇಶ. ಹಾಗಿರುವಾಗ ಒಂದು ಧರ್ಮದ ನಂಬಿಕೆಯನ್ನು ಇನ್ನೊಂದು ಧರ್ಮದ ಮೇಲೆ ಹೇರುವುದು ಸಂವಿಧಾನ ವಿರೋಧಿ ನಡೆ. ತೀವ್ರ ವಿರೋಧಗಳಿದ್ದರೂ ಫೆಬ್ರವರಿಯಲ್ಲಿ ಕೇಂದ್ರ ಗೃಹ ಸಚಿವಾಲಯವು ಸರ್ಕಾರಿ ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ ಎಲ್ಲಾ 6 ಚರಣಗಳನ್ನು ಹಾಡುಬೇಕು ಎಂದು ಆದೇಶಿಸಿದೆ. ಅದರಂತೆ ನಾಗಾಲ್ಯಾಂಡ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಂದೇ ಮಾತರಂ ಹಾಡು ನುಡಿಸಲಾಗಿದೆ.
ಆದರೆ ಇದು ಸಂವಿಧಾನದ 371(A) ವಿಧಿಯನ್ನು ವಿರೋಧಿಸಿದಂತೆ ಎಂಬುದು ವಿದ್ಯಾರ್ಥಿಗಳ ಆರೋಪ. ಸಂವಿಧಾನದ 371(A) ವಿಧಿಯು ನಾಗಾಲ್ಯಾಂಡ್ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ನಿಬಂಧನೆಗಳನ್ನು ಒಳಗೊಂಡಿದೆ. ಈ ವಿಧಿ ಪ್ರಕಾರ ಸಂಸತ್ತು ಮಾಡುವ ಯಾವುದೇ ಕಾಯ್ದೆಗಳು ನಾಗಾಲ್ಯಾಂಡ್ ರಾಜ್ಯ ವಿಧಾನಸಭೆಯ ಒಪ್ಪಿಗೆಯಿಲ್ಲದೆ ಆ ರಾಜ್ಯಕ್ಕೆ ಅನ್ವಯಿಸುವುದಿಲ್ಲ. ಕೇಂದ್ರದ ಯಾವುದೇ ಕಾನೂನು ಅಥವಾ ಆದೇಶವು ನಾಗಾಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತಿದ್ದರೆ ಅದನ್ನು ವಿರೋಧಿಸುವ ಹಕ್ಕು ಅವರಿಗಿದೆ. ವಿದ್ಯಾರ್ಥಿಗಳು ಈ ಪ್ರಶ್ನೆಯನ್ನು ಎತ್ತಿದ್ದಾರೆ, ಒಂದು ಧರ್ಮದ ದೇವತೆಗಳ ಉಲ್ಲೇಖವಿರುವ ಗೀತೆ ತಮ್ಮ ಧಾರ್ಮಿಕ ಮತ್ತು ಸಾಮಾಜಿಕ ಪದ್ಧತಿಗೆ ವಿರುದ್ಧವಾದುದ್ದು ಎಂದು ಧ್ವನಿ ಎತ್ತಿದ್ದಾರೆ. ಉಳಿದೆಡೆ ಈ ವಾದವನ್ನು ವಿರೋಧಿಸುವ, ದೇಶದ್ರೋಹಿಗಳೆಂದು ಕರೆಯುವ ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ನಾಗಾಲ್ಯಾಂಡ್ ವಿಚಾರದಲ್ಲಿ ಮಾತ್ರ ಮೌನವಾಗಿದ್ದಾರೆ.
ಅಷ್ಟಕ್ಕೂ ನಾಗಾಲ್ಯಾಂಡ್ ಒಂದು ಕ್ರೈಸ್ತ ಬಹುಸಂಖ್ಯಾತ ರಾಜ್ಯ. ‘ವಂದೇ ಮಾತರಂ’ ಎಂದರೆ ತಾಯ್ನಾಡನ್ನು ದೇವತೆಯಾಗಿ ಪೂಜಿಸುವುದು ಎಂದರ್ಥ. ಇದು ಸ್ಪಷ್ಟವಾಗಿ ಕ್ರೈಸ್ತ ಧರ್ಮದ ಏಕದೇವೋಪಾಸನೆಯ ನಂಬಿಕೆಗೆ ವಿರುದ್ಧವಾಗಿದೆ. ಅಷ್ಟು ಮಾತ್ರವಲ್ಲದೆ ಈ ಗೀತೆಯಲ್ಲಿ ಭಾರತ ಮಾತೆಯನ್ನು ‘ದುರ್ಗಾ ದೇವಿ’ಗೆ ಹೋಲಿಸಲಾಗಿದೆ, ದೇಶವು ಸಮೃದ್ಧಿಯಿಂದ ಕೂಡಿದ್ದು, ಕಮಲದ ಹೂವಿನ ಮೇಲೆ ನೆಲೆಸಿರುವ ‘ಲಕ್ಷ್ಮಿ ದೇವಿ’ಯಂತೆ ಕಂಗೊಳಿಸುತ್ತಿದೆ ಎಂಬ ಉಲ್ಲೇಖವಿದೆ. ಭಾರತ ಮಾತೆಯನ್ನು ಜ್ಞಾನ ಮತ್ತು ವಿದ್ಯೆಯ ದೇವತೆಯಾದ ‘ಸರಸ್ವತಿ’ಗೆ ಹೋಲಿಸಲಾಗಿದೆ. ಇವೆಲ್ಲವೂ ಹಿಂದೂ ಧರ್ಮ ಪಾಲಿಸುವವರ ನಂಬಿಕೆ. ಹಾಗಿದ್ದಾಗ ಇತರೆ ಧರ್ಮ ಪಾಲಿಸುವವರು ಒಪ್ಪಲು ಹೇಗೆ ಸಾಧ್ಯ? ಒಪ್ಪಬೇಕು ಎಂದು ಹೇಳುವುದು ಹೇರಿಕೆಯಲ್ಲವೇ?
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಂದೇ ಮಾತರಂ ಕಡ್ಡಾಯದ ಹಿಂದಿರುವುದು ದೇಶಭಕ್ತಿಯಲ್ಲ, ಪಶ್ಚಿಮ ಬಂಗಾಳ ಗೆಲ್ಲುವುದು!
ಅಷ್ಟಕ್ಕೂ ಮೋದಿಗೆ ಎನ್‌ಪಿಎಫ್ ದೇಶದ್ರೋಹಿ ಆಗಲ್ಲವೇಕೆ?
ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ ಪೈಕಿ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಸಿಕ್ಕಿಂ, ಮಿಜೋರಾಂ ಹೊರತುಪಡಿಸಿ ಉಳಿದೆಡೆ ಬಿಜೆಪಿ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಅಧಿಕಾರಕ್ಕಾಗಿ ತನ್ನ ನಿಲುವುಗಳನ್ನೇ ಬದಲಾಯಿಸಿಕೊಂಡು ಸಾಗುತ್ತಿದೆ. ಅದರಲ್ಲೂ ಮುಖ್ಯವಾಗಿ NPF, NDPP ಮೈತ್ರಿ ಬಿಜೆಪಿಗೆ ಅನಿವಾರ್ಯವಾಗಿದೆ. ಮಿತ್ರಪಕ್ಷಗಳನ್ನೇ ದೇಶದ್ರೋಹಿ ಎಂದರೆ ಮೈತ್ರಿ ಕಳೆದುಕೊಳ್ಳುವ ಭೀತಿ ಬಿಜೆಪಿಯದ್ದು. ಅದಕ್ಕಾಗಿ ಗಾಳಿ ಬಂದ ಕಡೆ ಬಿಜೆಪಿ ತೂರಿಕೊಳ್ಳುತ್ತಿದೆ!
ಹಾಗೆಯೇ ಈಶಾನ್ಯ ಭಾರತದ ಬುಡಕಟ್ಟು ಸಂಸ್ಕೃತಿಯು ಭಿನ್ನವಾದುದ್ದು. ಇದರ ಅರಿವು ಬಿಜೆಪಿಯ ಹಿರಿಯ ನಾಯಕರುಗಳಿಗಿದೆ. ಆದ್ದರಿಂದ ಇತರೆ ರಾಜ್ಯಗಳಂತೆ ಈಶಾನ್ಯ ರಾಜ್ಯಗಳಲ್ಲಿ ಹಿಂದುತ್ವ ಅಜೆಂಡಾವನ್ನು ನೇರವಾಗಿ ಹೇರುವ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿಲ್ಲ. ಈ ರಾಜ್ಯಗಳಲ್ಲಿ ತನ್ನ ಹಿಂದುತ್ವವನ್ನು ಬಿಜೆಪಿ ಹೇರಲು ಹೋದರೆ ಜನಾಂಗೀಯ ಸಂಘರ್ಷ ಕಟ್ಟಿಟ್ಟ ಬುತ್ತಿ. ಅಷ್ಟು ಮಾತ್ರವಲ್ಲದೆ ನಾಗಾ ಬಂಡುಕೋರರೊಂದಿಗೆ (NSCN-IM) ಕೇಂದ್ರ ಸರ್ಕಾರ ಶಾಂತಿ ಮಾತುಕತೆಗೆ ಇಳಿದಿದೆ. ಹೀಗಿರುವಾಗ ಸಾಂಸ್ಕೃತಿಕ ವಿಷಯಗಳ ಮೇಲೆ ಸಂಘರ್ಷಕ್ಕಿಳಿದರೆ ಬಿಜೆಪಿ ಇರುವ ಅಲ್ಪ ಅಧಿಕಾರವನ್ನೂ ಕಳೆದುಕೊಳ್ಳುವುದು ಪಕ್ಕ. ಅಂದರೆ ತನ್ನ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ‘ಡಬಲ್ ಸ್ಟಾಂಡರ್ಡ್’ಗೆ ಜೋತುಬಿದ್ದಿದೆ.
ಈ ಸಂದರ್ಭದಲ್ಲಿ ನಾವು ಬಿಜೆಪಿಯನ್ನು ಕೇಳಬೇಕಾದ ಪ್ರಶ್ನೆಗಳು ಹಲವಿದೆ. ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ಮತ್ತು ಬೀದರ್‌ನ ಶಾಲಾ ನಾಟಕವೊಂದರಲ್ಲಿ ಸಿಎಎ ವಿರುದ್ಧ ಮಾತನಾಡಿದ್ದಕ್ಕೆ ಮಕ್ಕಳ ಮೇಲೆ ದೇಶದ್ರೋಹ ಪಕ್ರರಣ ದಾಖಲಿಸುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ತನ್ನದೇ ಮಿತ್ರಪಕ್ಷ ವಂದೇ ಮಾತರಂ ಗೀತೆ ಹೇರಿಕೆ ವಿರೋಧಿಸಿದಾಗ ಮೌನ ತಾಳುವುದೇಕೆ? ಬಿಜೆಪಿಗೆ ದೇಶಪ್ರೇಮ, ದೇಶಭಕ್ತಿಗಿಂತ ಅಧಿಕಾರ ಮಿಗಿಲಾಯಿತೇ? ಬಿಜೆಪಿ ದೇಶಪ್ರೇಮವು ಅಧಿಕಾರದಲ್ಲಿರುವ ಮಿತ್ರಪಕ್ಷಗಳಿಗೆ ಒಂದು ರೀತಿ ಮತ್ತು ವಿರೋಧ ಪಕ್ಷದವರಿಗೆ ಅಥವಾ ವಿದ್ಯಾರ್ಥಿಗಳಿಗೆ ಇನ್ನೊಂದು ರೀತಿಯೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




