ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ರೈತ ಕುಟುಂಬಗಳ ಯುವಕರಿಗೆ ‘ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ’ ಎಂಬ ಸಂಕಷ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮನನೊಂದ ರೈತ ಕುಟುಂಬಗಳು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ವಿನೂತನ ಮನವಿ ಸಲ್ಲಿಸಿದ್ದಾರೆ. ‘ರೈತ ಯುವಕರನ್ನು ವಿವಾಹವಾಗುವ ಹೆಣ್ಣುಮಕ್ಕಳಿಗೆ ಕನಿಷ್ಠ 10 ಲಕ್ಷ ರೂ. ಠೇವಣಿ, ಕೃಷಿ ಅಥವಾ ಕೃಷಿಪೂರಕ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸರ್ಕಾರವೇ ಭದ್ರತೆ ನೀಡಿ ಬಡ್ಡಿರಹಿತ ಸಾಲ ಒದಗಿಸಿ ಉತ್ತೇಜನ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
ಮಂಗಳವಾರ, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ 2026-27ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ರೈತ ಮುಖಂಡರು ಈ ಬೇಡಿಕೆ ಸಲ್ಲಿಸಿದ್ದಾರೆ. ರೈತ ಮಕ್ಕಳು, ರೈತ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗದಿರುವುದು ವಿಷಾದನೀಯ. ಇದೊಂದು ಸಾಮಾಜಿಕ ಪೀಡುಗಾಗಿದೆ. ಈ ಸಮಸ್ಯೆಗೆ ಕಾರಣ ಏನು ಎಂಬುದನ್ನ ಕಂಡುಹಿಡಿಯಬೇಕು ಎಂದಿದೆ. ಮುಂದುವರೆದು, ಈ ಬಾರಿಯ ಆಯವ್ಯಯ ಕೃಷಿ ವಲಯಕ್ಕೆ ಮೊದಲ ಆದ್ಯತೆ ನೀಡಬೇಕು. ದೂರದೃಷ್ಟಿಯ ಕಾರ್ಯಕ್ರಮಗಳನ್ನ ರೂಪಿಸಬೇಕು. ರೈತರ ಮಗನನ್ನು ಮದುವೆಯಾಗುವ ಹೆಣ್ಣು ಮಗಳಿಗೆ ಸರ್ಕಾರಿ ಕೆಲಸದಲ್ಲಿ 20%ರಷ್ಟು ಮೀಸಲಾತಿ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ಮನವಿ ಮಾಡಿದ್ದಾರೆ.
ಇದೇ ರೀತಿ, ಕಳೆದ ವರ್ಷವೂ ವಿವಾಹಕ್ಕೆ ವಧು ಸಿಗದೆ ನೊಂದಿದ್ದ ರೈತ ಮಕ್ಕಳ ತಂಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿತ್ತು. ಯುವ ರೈತರನ್ನು ಮದುವೆ ಆಗುವ ಯುವತಿಯರಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವಂತೆ ಒತ್ತಾಯಿಸಿದ್ದರು.

ವಯಸ್ಸು 40 ಆಯ್ತು ಮದುವೆಗೆ ಹುಡುಗಿ ಸಿಗ್ತಿಲ್ಲ, ಕಂಕಣಭಾಗ್ಯ ಕರುಣಿಸು ಎಂದು ಮಂಡ್ಯ ಜಿಲ್ಲೆಯ ಅವ್ವೇರಹಳ್ಳಿಯ 40 ಜನ ಅವಿವಾಹಿತರು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಗೆ ತೆರಳಿ ಹಕರೆಯನ್ನೂ ಹೊತ್ತಿದ್ದರು. ‘ವಿವಾಹಕ್ಕಾಗಿ ಹುಡುಗಿ ನೋಡಲು ಹೋದರೆ ಬೆಂಗಳೂರಿನಲ್ಲಿ ಇದ್ದೀರಾ? ಎಂಜಿನಿಯರ್? ಡಾಕ್ಟರ್? ಅಥವಾ ಸರ್ಕಾರಿ ಉದ್ಯೋಗ ಇದೀಯಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದರಿಂದ ಮದುವೆಯಾಗಲು ಹೆಣ್ಣು ಸಿಗದೇ ವಯಸ್ಸು 40 ದಾಟುತ್ತಿದೆ’ ಎಂದು ತಮ್ಮ ಅಳಲು ತೋಡಿಕೊಂಡಿದ್ದರು.
ರಾಜ್ಯದ ಬಹುತೇಕ ಹಳ್ಳಿಗಳಲ್ಲಿ ಮದುವೆಯ ಅವಕಾಶಕ್ಕಾಗಿ ಕಾಯುತ್ತಲೇ ಇರುವ ಯುವ ಕೃಷಿಕರು, ನಿರುದ್ಯೋಗಿಗಳು ಹೆಣ್ಣು ಸಿಗದೇ ಒದ್ದಾಡುವಂತಾಗಿದೆ. ನಗರಗಳಲ್ಲಿ ವಾಸವಿರುವ ಚಿಕ್ಕ ಕೆಲಸ, ಕಡಿಮೆ ಸಂಬಳದ ಹುಡುಗರಿಗೆ ಸುಲಭವಾಗಿ ಹೆಣ್ಣು ಸಿಗುತ್ತಿವೆ. ಆದರೆ, ಹಳ್ಳಿಗಳಲ್ಲಿ ಮೂರ್ನಾಲ್ಕು ಎಕರೆ ಜಮೀನು, ಉತ್ತಮ ಸಂಪಾದನೆ ಇದ್ದರೂ ವಧು ಸಿಗುತ್ತಿಲ್ಲ. ಕೃಷಿ ಕಾರ್ಮಿಕರು, ಸ್ಥಳೀಯವಾಗಿ ಸಣ್ಣಪುಟ್ಟ ಕೆಲಸ ಮಾಡುವವರು, ಅಡುಗೆ ಮಾಡುವವರಿಗೆ ಹೆಣ್ಣು ಕೊಡುವ ಮಾತೇ ಇಲ್ಲ. ಇದು ಈಗ ಸಾಮಾಜಿಕ ಸಮಸ್ಯೆಯಾಗಿ ಬದಲಾಗಿದೆ. 2022ರ ನವೆಂಬರ್‌ನಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ನಡೆದಿದ್ದ ವಧು ವರರ ಸಮಾವೇಶವು ಈ ಗಂಭೀರ ಸಮಸ್ಯೆಯನ್ನು ತೆರೆದಿಟ್ಟಿತ್ತು. ಅಲ್ಲಿ 250 ವಧುಗಳು ನೋಂದಾಯಿಸಿದ್ದರೆ, ವರರ ಸಂಖ್ಯೆ 20 ಸಾವಿರಕ್ಕೂ ಅಧಿಕವಿತ್ತು.
15 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಹೆಣ್ಣುಮಕ್ಕಳಿಗೆ ಗಂಡು ಹುಡುಕುವುದೇ ಪೋಷಕರಿಗೆ ಕಷ್ಟವಾಗಿತ್ತು. ಕೇಳಿದಷ್ಟು ವರದಕ್ಷಿಣೆ ನೀಡಲು ಸಿದ್ಧವಾಗಿದ್ದರೂ ವರ ಸಿಗುತ್ತಿರಲಿಲ್ಲ. ಈಗ ವರನ ಕಡೆಯವರು ‘ವಧು ದಕ್ಷಿಣೆ ಕೊಡುತ್ತೇವೆ’ ಎಂದರೂ ಹೆಣ್ಣು ಸಿಗುತ್ತಿಲ್ಲ.
ಈ ಬದಲಾವಣೆಗೆ ಹಲವಾರು ಕಾರಣಗಳಿರಬಹುದು. ಶೈಕ್ಷಣಿಕ ಸ್ಥಿತಿ ಬದಲಾವಣೆ, ಹೆಣ್ಣುಮಕ್ಕಳ ಮತ್ತು ಪೋಷಕರ ನಿರೀಕ್ಷೆ ಹೆಚ್ಚಾಗಿರುವುದು, ಸ್ವತಂತ್ರವಾಗಿ ಬದುಕಬೇಕೆಂಬ ಹೆಣ್ಣುಮಕ್ಕಳ ಇರಾದೆ, ಕೆಲವು ಸಮುದಾಯಗಳಲ್ಲಿ ಲಿಂಗಾನುಪಾತದಲ್ಲಿನ ಅಸಮಾನತೆ, ಕೃಷಿಯಲ್ಲಿ ಆದಾಯವಿಲ್ಲ ಮತ್ತು ಕೃಷಿ ಕೆಲಸ ಕೀಳೆಂಬ ಭಾವನೆ ಬೇರೂರಿವುದು, ಹಳ್ಳಿಗಳಲ್ಲಿ ಸೌಲಭ್ಯಗಳ ಕೊರತೆ, ನಗರ ಪ್ರದೇಶಗಳಲ್ಲಿ ಬದುಕು ಸುಲಭ ಎಂಬ ಗ್ರಹಿಕೆ, ಅಂತರ್ಜಾತಿ ವಿವಾಹದ ಪರಿಕಲ್ಪನೆಗೆ ಸಮಾಜ ಸಂಪೂರ್ಣವಾಗಿ ತೆರೆದುಕೊಳ್ಳದಿರುವುದು ಪ್ರಮುಖ ಕಾರಣಗಳಾಗಿವೆ.
ಈ ಸುದ್ದಿ ಓದಿದ್ದೀರಾ? ಶಿವಾಜಿ ಯಾರು? ಚಿಂತಕ ಗೋವಿಂದ ಪಾನ್ಸರೆ ಪುಸ್ತಕದೊಳಗಿಂದ ಶಿವಾಜಿ ಮಹಾರಾಜರ ಚರಿತ್ರೆ
ಈ ದಿನ.ಕಾಮ್ ಜತೆಗೆ ಮಾತನಾಡಿದ ರೈತ ಸಂಘದ ಮುಖಂಡೆ ನಂದಿನಿ ಜಯರಾಮ್, “ರಾಜ್ಯದಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ಕಡಿಮೆಯಾಗಿದೆ. ಇರೋ ಹೆಣ್ಣುಮಕ್ಕಳು ಕೃಷಿ ಭಾಗದಲ್ಲಿ ಇರುವ ಸಮಸ್ಯೆಗಳನ್ನ ಎದುರಿಸುವಷ್ಟು ಶಕ್ತರಾಗಿರಲ್ಲ. ರಸ್ತೆ, ಕುಡಿಯುವ ನೀರಿನ ಸಮಸ್ಯೆ, ಆಸ್ಪತ್ರೆ, ಶಾಲೆ, ಬಸ್ ಸೇರಿದಂತೆ ಹಲವಾರು ಸಮಸ್ಯೆಗಳಿರುತ್ತವೆ. ಗ್ರಾಮೀಣ ಭಾಗದಲ್ಲಿ ಗಂಡು ಎನ್ನುವ ಅಹಂ ಹೆಚ್ಚಾಗಿಯೇ ಇರುತ್ತದೆ. ರೈತರ ಆತ್ಮಹತ್ಯೆಯನ್ನ ಚಿಕ್ಕವಯಸ್ಸಿನಿಂದ ನೋಡುತ್ತ ಬೆಳೆದಿರುತ್ತಾರೆ. ಎಲ್ಲ ಹೆಣ್ಣುಮಕ್ಕಳು ನಾವು ಅನುಭವಿಸಿದ ನೋವನ್ನ ನಮ್ಮ ಮಕ್ಕಳ ಅನುಭವಿಸಬಾರದು ಎನ್ನುವ ಮನಸ್ಥಿತಿಯಲ್ಲಿರುತ್ತಾರೆ. ಇವೆಲ್ಲವೂ ಸಾಮಾಜಿಕವಾಗಿವೆ. ದುಡ್ಡು ಕೊಟ್ಟ ತಕ್ಷಣ ಮದುವೆಯಾಗಿಬಿಡುತ್ತಾರೆ ಎಂದರೆ ಇಲ್ಲ. ಈ ಎಲ್ಲದರ ಬಗ್ಗೆಯೂ ಸರ್ಕಾರಕ್ಕೆ ನಿಜಕ್ಕೂ ಕಳಕಳಿಯಿದ್ದರೇ, ವೈಜ್ಞಾನಿಕ ಬೆಲೆ ನಿಗದಿ ಮಾಡಲಿ. ಆದರೆ, ಮಾರುಕಟ್ಟೆಗೆ ಸಂಬಂಧಿಸಿದಂತೆ ಯಾವ ಸರ್ಕಾರಗಳು ಮಾತಾಡುವುದಿಲ್ಲ” ಎಂದರು.
ಸರ್ಕಾರಿ ನೌಕರನೇ ಬೇಕೆನ್ನುವ ಜನರು ದೇಶಕ್ಕೆ ಅನ್ನ ಹಾಕುವ ಯುವ ರೈತರನ್ನು ಅಸಡ್ಡೆಯಿಂದ ನೋಡುತ್ತಿದ್ದಾರೆ. ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಯುವ ರೈತರಿಗೆ ಮದುವೆಯಾಗಲು ಹೆಣ್ಣು ಸಿಗದಿರುವುದು ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಸ್ಥಿರ ಆದಾಯದ ಕೊರತೆ, ಕೃಷಿಯಲ್ಲಿನ ಅನಿಶ್ಚಿತತೆ ಮತ್ತು ನಗರ ಜೀವನದ ಆಕರ್ಷಣೆಯಿಂದಾಗಿ, ಪೋಷಕರು ರೈತರಿಗೆ ಹೆಣ್ಣು ಕೊಡಲು ಹಿಂಜರಿಯುತ್ತಿದ್ದಾರೆ.
ಈ ಹಿಂದಿನಿಂದಲೂ ಈ ರೀತಿಯ ಬೇಡಿಕೆಯನ್ನ ರೈತ ಸಂಘಟನೆಗಳು ಸರ್ಕಾರದ ಮುಂದಿಡುತ್ತಿವೆ. ಆದರೆ, ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ದೇಶದ ಬೆನ್ನೆಲುಬಾಗಿರುವ ರೈತರ ಜೀವನ, ಕೃಷಿಯನ್ನ ಕಾಪಾಡಿಕೊಳ್ಳಬೇಕಿದೆ.




