ಸೋನಮ್ ಮತ್ತು ಸ್ಥಳೀಯ ಜನರ ಆತಂಕಗಳೇನು, ನಿಜ ಸ್ಥಿತಿಯೇನು ಎಂಬುದು ತಿಳಿಯುವುದು ಮುಖ್ಯ. ಈಗಾಗಲೇ ತಮ್ಮ ವಿರುದ್ಧ ದೇಶದ್ರೋಹ ಪ್ರಕರಣವನ್ನೂ ದಾಖಲಿಸಲಾಗಿರುವ ಬಗ್ಗೆ ಮಾಹಿತಿ ಲಭಿಸಿದೆ ಎನ್ನುತ್ತಾರೆ ಸೋನಮ್. ಲಡಾಖ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಮ್ಮ ಮೇಲೆ ದೇಶದ್ರೋಹದ ಎಫ್‌ಐಆರ್ ದಾಖಲಿಸಲಾಗಿದೆ. ಇದು ಇನ್ನೂ ಬಹಿರಂಗವಾಗಿಲ್ಲ ಎನ್ನುತ್ತಾರೆ ಸೋನಮ್! ಅಂದರೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರೆ ದೇಶವನ್ನು ಪ್ರಶ್ನಿಸಿದಂತೆ ಆಗುವುದೇ?
2009ರಲ್ಲಿ ಬಿಡುಗಡೆಯಾದ ಜನಪ್ರಿಯ ಬಾಲಿವುಡ್ ಸಿನಿಮಾ ‘ಥ್ರೀ ಇಡಿಯಟ್ಸ್’ನ ಮೂರು ಪ್ರಮುಖ ಪಾತ್ರಗಳಲ್ಲಿ ಆಮಿರ್ ಖಾನ್ ನಟನೆಯ ರಾಂಚೋ (ರಣಚೋಢ್ ದಾಸ್ ಛಾಂಚದ್) ನೀವು ಮರೆತಿರಲಿಕ್ಕಿಲ್ಲ. ಸಿನಿಮಾದ ಈ ಪಾತ್ರಕ್ಕೆ ಸ್ಪೂರ್ತಿಯಾಗಿದ್ದು ಇಂಜಿನಿಯರ್, ಶೈಕ್ಷಣಿಕ ಸುಧಾರಕ, ಪರಿಸರವಾದಿ, ಸದ್ಯ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕೆಂದು ಕೋರಿ ನಿರಂತರ ಹೋರಾಟ ನಡೆಸುತ್ತಿರುವ ಸೋನಮ್ ವಾಂಗ್‌ಚುಕ್. ಲಡಾಖ್‌ನಲ್ಲಿ ನೀರಿನ ಶೇಖರಣೆಗಾಗಿ ಹಿಮಸ್ತೂಪ ಎಂಬ ಕೃತಕ ಹಿಮನದಿ ನಿರ್ಮಿಸುವ ತಮ್ಮ ಸಂಶೋಧನೆಗಳ ಮೂಲಕವೇ ಹೆಸರುವಾಸಿಯಾಗಿರುವ ಸೋನಮ್, ಲಡಾಖ್‌ನ ಸುಸ್ಥಿರ ಬೆಳವಣಿಗೆ ಮತ್ತು ಗ್ರಾಮೀಣ ಶಿಕ್ಷಣಕ್ಕಾಗಿ ನೀಡಿದ ಕೊಡುಗೆ ಅಗಾಧ. ಸೋನಮ್ ಸಾಧನೆಗಳಿಗಾಗಿ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಆದರೆ ಹಲವು ತಿಂಗಳುಗಳಿಂದ ಸೋನಮ್ ಮೇಲೆ ಕೇಂದ್ರ ಸರ್ಕಾರದ ಕಣ್ಣು ಬಿದ್ದಿದೆ. ಇದೀಗ ಲೇಹ್‌ನಲ್ಲಿ ನಡೆದ ಹಿಂಸಾಚಾರದ ಬಳಿಕ ಅದಕ್ಕೆ ಸೋನಮ್ ಅವರನ್ನೇ ಹೊಣೆಗಾರರನ್ನಾಗಿಸಲು ಕೇಂದ್ರ ಯತ್ನಿಸುತ್ತಿದೆ. ಅವರ ಬಂಧನವನ್ನೂ ಮಾಡಲಾಗಿದೆ.
ನಮ್ಮ ಪಕ್ಷ ಗೆದ್ದರೆ ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ಲಡಾಖ್ ಅನ್ನು ಸೇರಿಸುವುದಾಗಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ 2019ರ ಲೋಕಸಭೆ ಚುನಾವಣೆಗೂ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ 2024ರ ಚುನಾವಣೆಯಲ್ಲಿ ಗೆದ್ದು ಬಂದರೂ, ಈವರೆಗೂ ತನ್ನ ಭರವಸೆಯನ್ನು ಪೂರೈಸಿಲ್ಲ. ಕೇಂದ್ರದ ಭರವಸೆಯನ್ನು ನಂಬಿಕೊಂಡಿದ್ದ ಸೋನಮ್ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದವರು. ಕೇಂದ್ರಕ್ಕೆ ಬೆಂಬಲ ನೀಡಿ ಚೀನಾ ವಸ್ತುಗಳನ್ನು ಬಹಿಷ್ಕರಿಸಲು ಕರೆ ನೀಡಿದವರು. ಆದರೆ ಇಂದು ಬಿಜೆಪಿ ಆಟವನ್ನು ಅರ್ಥೈಸಿಕೊಂಡಿರುವ ಸೋನಮ್ ತಿಳಿ ಹಾಸ್ಯದೊಂದಿಗೆ ಮೋದಿ ಕಾಲೆಳೆಯುತ್ತಿದ್ದಾರೆ. ಇದರಿಂದಾಗಿಯೇ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಾಮೂಲಿನಂತೆ ಸರ್ಕಾರದ ಅಸ್ತ್ರಗಳಾದ ಸಿಬಿಐ, ಇಡಿ ದಾಳಿಗೂ ಗುರಿಯಾಗುತ್ತಿದ್ದಾರೆ.
ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ | ಶಿಖರಗಳ ನಡುವೆ ಸಾಗಿದಷ್ಟು ಸಿಕ್ಕಿದ್ದು ನೆಮ್ಮದಿ
ಲಡಾಖ್‌ನ ಭೂಮಿ, ಸಂಸ್ಕೃತಿ ಮತ್ತು ಸಂಪನ್ಮೂಲಗಳ ರಕ್ಷಣೆಗಾಗಿ ಲಡಾಖ್ ಅನ್ನು ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು, ಲಡಾಖ್‌ಗೆ ರಾಜ್ಯತ್ವ ಸ್ಥಾನಮಾನ ನೀಡಬೇಕು, ಸ್ಥಳೀಯ ಉದ್ಯೋಗಕ್ಕಾಗಿ ಸಾರ್ವಜನಿಕ ಸೇವಾ ಆಯೋಗ(ಪಿಎಸ್‌ಎ) ರಚಿಸಬೇಕು, ಲೇಹ್ ಮತ್ತು ಕಾರ್ಗಿಲ್‌ಗೆ ತಲಾ ಒಂದು ಲೋಕಸಭೆ ಸ್ಥಾನ ನೀಡಬೇಕು ಎಂಬ ಒಟ್ಟು ಪ್ರಮುಖ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟುಕೊಂಡು 2019ರ ನಂತರದಿಂದ ಆರಂಭವಾಗಿರುವ ಹೋರಾಟದಲ್ಲಿ 2023ರ ಬಳಿಕ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು ಸೋನಮ್ ವಾಂಗ್‌ಚುಕ್. ಅದಕ್ಕೆ ಪ್ರಮುಖ ಕಾರಣ ಈಗಾಗಲೇ ಸಮಾಜದಲ್ಲಿ ಸೋನಮ್‌ಗೆ ಇರುವ ಹೆಸರು ಮತ್ತು ಗುರುತು. ಈ ಪ್ರಸಿದ್ಧಿಯನ್ನು ಲಡಾಖ್‌ಗೆ ಹೋಗಿದ್ದ ನಮ್ಮ ತಂಡ ಪ್ರತಿಭಟನಾ ಸ್ಥಳದಲ್ಲಿ ಕಣ್ಣಾರೆ ಕಂಡಿತು. ಸ್ಥಳೀಯರು ಸೋನಮ್‌ಗೆ ನೀಡುವ ಗೌರವ, ಬೆಂಬಲ ಯಥೇಚ್ಛ. ಸೋನಮ್ ಉಪವಾಸ ಕುಳಿತ ಕೂಡಲೇ ನಾವು ಉಪವಾಸ ಕೂರುವುದಾಗಿ ಮುಂದೆ ಬರುವ ಯುವ, ಹಿರಿಯ ಮುಖಗಳು ಹತ್ತಾರು.
1966ರಲ್ಲಿ ಜನಿಸಿದ ಸೋನಮ್ ಕೆಲಸ- ಕಾರ್ಯಗಳು ಹೆಚ್ಚು ಪ್ರಸಿದ್ಧವಾಗಿದ್ದು ‘ಥ್ರೀ ಇಡಿಯಟ್ಸ್’ ಸಿನಿಮಾದ ಬಳಿಕ. ಲಡಾಖ್‌ನ ಸ್ಥಳೀಯ ಜನರಿಗೆ, ರೈತರಿಗೆ ಜೀವನಾಡಿಯಾದ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ‘ಹಿಮ ಸ್ತೂಪ’ ಯೋಜನೆಯ ನಂತರ. ಹಾಗೆಯೇ ಪರ್ಯಾಯ ಶಿಕ್ಷಣ ವ್ಯವಸ್ಥೆಯ ಕಣ್ಣೋಟ ಹೊಂದಿರುವ ಲಡಾಖ್‌ನ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳುವಳಿ(Students’ Educational and Cultural Movement of Ladakh-SECMOL) ಸಂಸ್ಥಾಪಕರು ವಾಂಗ್‌ಚುಕ್ . ಆದರೆ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದಂತೆ ದೇಶದ್ರೋಹದ ಪಟ್ಟವನ್ನು ಸೋನಮ್ ಗೆ ಕಟ್ಟಲಾಗುತ್ತಿದೆ.
ನಿರಂತರವಾಗಿ ಸಂಶೋಧನೆ ಮೊದಲಾದವುಗಳಲ್ಲಿ ತೊಡಗಿಕೊಂಡಿದ್ದ ಸೋನಮ್ ಲಡಾಖ್ ಅನ್ನು ಗಣಿಗಾರಿಕೆ ಲಾಬಿಯಿಂದ ರಕ್ಷಿಸಬೇಕು, ಲಡಾಖ್‌ಗೆ ರಾಜ್ಯತ್ವ ಮತ್ತು ಆರನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂಬಹ ಬೇಡಿಕೆಗಳನ್ನು ಮುಂದಿಟ್ಟು 2023ರ ಜನವರಿಯಿಂದ ನಿರಂತರ ಪ್ರತಿಭಟನೆಗಳಲ್ಲಿ ತೊಡಗಿದ್ದಾರೆ. ಸದ್ಯ ಕೇಂದ್ರ ಸರ್ಕಾರ ಮಾತುಕತೆಗೆನೋ ಕರೆದಿದೆ. ಆದರೆ ಅಕ್ಟೋಬರ್ 6ರಂದು. ಈ ಸುದೀರ್ಘ ವಿಳಂಬವನ್ನು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ಈ ವಿಳಂಬವೇ ಯುವಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಹಿಂಸಾಚಾರದ ಬೆನ್ನಲ್ಲೇ ಸದ್ಯ ಸೆಪ್ಟೆಂಬರ್ 27ರಂದು ಮಾತುಕತೆಗೆ ಕರೆದಿದೆ.
2024ರ ಮಾರ್ಚ್‌ನಿಂದ ಈವರೆಗೆ ನಾಲ್ಕು ಬಾರಿ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದಾರೆ. ಈ ವರ್ಷದ(2025) ಆಗಸ್ಟ್‌ನಿಂದ ಲೇಹ್ ಅಪೆಕ್ಸ್ ಬಾಡಿ(ಎಲ್‌ಎಬಿ) ಭಾಗವಾಗಿರುವ ಸೋನಮ್ ಸೆಪ್ಟೆಂಬರ್ 10ರ ಬುಧವಾರದಿಂದ ಸದ್ಯ ಐದನೇ ಬಾರಿಗೆ ಉಪವಾಸ ನಡೆಸಿದ್ದಾರೆ. ಇದಕ್ಕೂ ಮುನ್ನ ಸರ್ವ ಧರ್ಮೀಯ ಪ್ರಾರ್ಥನೆಯನ್ನು ನಡೆಸಲಾಗಿದೆ. ಆರಂಭದಲ್ಲಿ 35 ದಿನಗಳ ಸತ್ಯಾಗ್ರಹ ಘೋಷಿಸಲಾಗಿತ್ತು, ಆದರೆ ಹಿಂಸಾಚಾರದ ಕಾರಣ 15 ದಿನದಲ್ಲೇ ಸೋನಮ್ ಉಪವಾಸ ನಿಲ್ಲಿಸಿದ್ದಾರೆ.

2023ರಿಂದ ಈವರೆಗಿನ ತಮ್ಮ ಹೋರಾಟದ ಹಾದಿಯಲ್ಲಿ ಸೋನಮ್ ಎದುರಿಸಿದ ಸವಾಲು ಒಂದೆರೆಡಲ್ಲ. ಇವು ನೇರವಾಗಿ ಸೋನಮ್‌ಗೆ ಮಾತ್ರವಲ್ಲದೆ ಪರೋಕ್ಷವಾಗಿ ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಲಡಾಖ್(HIAL) ವಿದ್ಯಾರ್ಥಿಗಳ ಬದುಕುಗಳ ಮೇಲೆ ಪರಿಣಾಮ ಬೀರಿದೆ. ಸೋನಮ್ ಅವರೇ ಹೇಳುವಂತೆ ಸಿಬಿಐ, ಇಡಿ ಅಸ್ತ್ರ ಪ್ರಯೋಗಗಳೂ ನಡೆದಿವೆ. ಇವೆಲ್ಲವನ್ನೂ ಕರ್ನಾಟಕ ಸೇರಿ ಎಂಟು ರಾಜ್ಯಗಳ ಜೊತೆ ಮಾತುಕತೆ ವೇಳೆ ಸೋನಮ್ ವಾಂಗ್‌ಚುಕ್ ವಿವರಿಸಿದ್ದಾರೆ.
ಸೋನಮ್ ಮತ್ತು ಸ್ಥಳೀಯ ಜನರಿಗೆ ಇರುವ ಆತಂಕ, ನೈಜ ಸ್ಥಿತಿ ಏನು?
ಹಲವು ವರ್ಷಗಳಿಂದ ಲಡಾಖ್‌ನಲ್ಲಿ ಪರಿಸರ ವ್ಯವಸ್ಥೆಗೆ ಹಾನಿ ಆಗಬಾರದೆಂದು ಹೋರಾಟ ನಡೆಸುತ್ತಿರುವ ಸೋನಮ್ ಮತ್ತು ಸ್ಥಳೀಯ ಜನರಿಗಿರುವುದು ತಮ್ಮ ಸಂಸ್ಕೃತಿ, ಭೂಮಿ, ತಮ್ಮ ಉದ್ಯೋಗಕ್ಕೆ ಧಕ್ಕೆ ಉಂಟಾಗುವ ಆತಂಕ. ಅಂತಹ ಎಲ್ಲ ಅನಾಹುತಗಳು ಈಗಾಗಲೆ ಆಗುತ್ತಿವೆ ಎಂಬುದನ್ನು ಲಡಾಖಿಗಳು ಉದಾಹರಣೆ ಸಹಿತ ವಿವರಿಸುತ್ತಾರೆ. ಸೋನಮ್ ಅವರೇ ಹೇಳುವಂತೆ ಸುಮಾರು 40,000 ಎಕರೆಗಳ ಬೃಹತ್ ಸೋಲಾರ್ ಪಾರ್ಕ್ ಯೋಜನೆಯು ಲಡಾಖ್‌ನ ಪರಿಸರ ವ್ಯವಸ್ಥೆಯ ಮೇಲೆ ಅಗಾಧವಾದ ದುಷ್ಪರಿಣಾಮ ಬೀರಲಿದೆ.
ಒಟ್ಟು ಆರು ಸಾವಿರ ಕೋಟಿ ಬಜೆಟ್‌ನಲ್ಲಿ ಲಡಾಖ್ ಹಿಲ್ ಕೌನ್ಸಿಲ್‌ಗೆ ಬಳಸಿಕೊಳ್ಳಲು ಲಭ್ಯವಿರುವುದು ಬರೀ 600 ಕೋಟಿ ರೂಪಾಯಿ ಬಜೆಟ್. ಉಳಿದೆಲ್ಲ ಮೊತ್ತ ಹೊರ ರಾಜ್ಯದವರ ನಿಯಂತ್ರಣದಲ್ಲಿದೆ. ಅಂದರೆ 370ನೇ ವಿಧಿ ರದ್ದಾದ ಬಳಿಕ ಯಾವುದೇ ಯೋಜನೆಯಲ್ಲಿ ಸ್ಥಳೀಯರಿಗೆ ಸ್ಥಾನಮಾನವಿಲ್ಲ, ಹೊರ ರಾಜ್ಯಗಳವರಿಗೆ ಅಪಾರ ಆದ್ಯತೆ. ಉದ್ಯೋಗದಲ್ಲಿಯೂ ಇದೇ ದುಸ್ಥಿತಿ. ಕಳೆದ ಆರು ವರ್ಷದಿಂದ ಯಾವುದೇ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ, ಲಡಾಖಿಗಳಿಗೆ ಉದ್ಯೋಗ ಅವಕಾಶವೇ ಇಲ್ಲ ಎನ್ನುತ್ತಾರೆ ಲೇಹ್ ಅಪೆಕ್ಸ್ ಬಾಡಿ ನಾಯಕರು.
ಸಮಜಾಯಿಷಿಯ ಬದಲು ಸೇಡಿಗೆ ಮುಂದಾಗಿದೆಯೇ ಸರ್ಕಾರ?
2019ರಲ್ಲಿ ಚುನಾವಣೆಗೂ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಆರನೇ ಪರಿಚ್ಛೇದಕ್ಕೆ ಸೇರಿಸುವ ಮೂಲಕ ಲಡಾಖಿಗಳ ರಕ್ಷಣೆ ಮಾಡಲಾಗುವುದು ಭರವಸೆ ನೀಡಿದ್ದ ಬಿಜೆಪಿ ಇದೀಗ ಹಿಂದೆ ಸರಿದಿದೆ. ಅಷ್ಟು ಮಾತ್ರವಲ್ಲದೆ ಲಡಾಖಿಗಳ ಪರ ಬೆಂಬಲಕ್ಕೆ ನಿಂತವರಿಗೆ, ಲಡಾಖ್‌ನ ಬೇಡಿಕೆಯ ಬಗ್ಗೆ ಧ್ವನಿ ಎತ್ತಿದವರಿಗೆ ಕೇಂದ್ರದ ಏಜೆನ್ಸಿಗಳನ್ನು ಬೆಂಬಿಟ್ಟು ಬೆದರಿಸುವ ದಾರಿ ತುಳಿದಿದೆ. ಸೋನಮ್ ವಿರುದ್ಧವೂ ಇಂತಹ ಬೆದರಿಕೆ ಅಸ್ತ್ರಗಳನ್ನು ಈಗಾಗಲೇ ಪ್ರಯೋಗಿಸಲಾಗಿದೆ. ಯಾರು ಬಿಜೆಪಿ ಅಥವಾ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಾರೋ ಅವರ ವಿರುದ್ಧ ಕೇಂದ್ರ ಏಜೆನ್ಸಿಗಳ ಪ್ರಯೋಗವನ್ನು ಮಾಡಿರುವ ನಿದರ್ಶನಗಳು ಹಲವಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ – ಹೀಗೆ ಹಲವು ವಿಪಕ್ಷ ನಾಯಕರುಗಳ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಪ್ರಯೋಗವನ್ನು ಮಾಡಿದೆ. ಅದರಂತೆಯೇ ಈಗ ಲಡಾಖ್‌ನಲ್ಲಿ ಕೇಂದ್ರಕ್ಕೆ ಗುರಿಯಾಗಿರುವುದು ಸೋನಮ್ ವಾಂಗ್‌ಚುಕ್.
ಪರಿಶಿಷ್ಟ ಪಂಗಡಗಳ(ಎಸ್‌ಟಿ) ಜನರಿರುವ ಲಡಾಖ್‌ನಲ್ಲಿ ಆದಾಯ ತೆರಿಗೆಯ ಸೆಕ್ಷನ್ 10(26)ರ ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿಯಿದೆ. ಆದರೆ ತೆರಿಗೆ ಪಾವತಿಸುವಷ್ಟು ಆದಾಯವಿದೆ ಎಂಬ ಕಾರಣ ಸೋನಮ್ ಅವರು ತಾವಾಗಿಯೇ ತೆರಿಗೆ ಪಾವತಿಸುತ್ತಿದ್ದಾರೆ. “ಲಡಾಖ್‌ನಲ್ಲಿ ತೆರಿಗೆ ಪಾವತಿಸಬೇಕಾಗಿಲ್ಲ. ಆದರೂ ನಾನು ತೆರಿಗೆ ನೀಡುವುದು ನನ್ನ ಕರ್ತವ್ಯ ಎಂದು ಪರಿಗಣಿಸಿ ಪಾವತಿಸುತ್ತಿದ್ದೇನೆ. ಆದರೆ ನನ್ನ ನಿವಾಸ, ಸಂಸ್ಥೆಗಳ ಮೇಲೆ ಇಡಿ, ಸಿಬಿಐ ದಾಳಿ ನಡೆಸಲಾಗುತ್ತಿದೆ. ನಮ್ಮ ಧ್ವನಿಯನ್ನು ಹತ್ತಿಕ್ಕಿ, ಬೆದರಿಸುವ ಪ್ರಯತ್ನ ಇದಾಗಿದೆ ಎನ್ನುತ್ತಾರೆ. ಲಡಾಖ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ದೇಶದ್ರೋಹ ಎಫ್‌ಐಆರ್ ದಾಖಲಿಸಲಾಗಿದೆ. ಇದು ಇನ್ನೂ ಬಹಿರಂಗವಾಗಿಲ್ಲ ಎಂಬುದು ಸೋನಮ್ ಆರೋಪ! ಅಂದರೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರೆ ದೇಶವನ್ನು ಪ್ರಶ್ನಿಸಿದ್ದಂತೆಯೇ?
ಜತೆಗೆ ಸೋನಮ್ ಮತ್ತು ಡಾ. ಗೀತಾಂಜಲಿ ಸ್ಥಾಪಿಸಿದ HIAL ವಿಶ್ವವಿದ್ಯಾಲಯಕ್ಕೆ ನೀಡಿದ್ದ ಜಾಗದ ಗುತ್ತಿಗೆಯನ್ನು ರದ್ದು ಮಾಡಲಾಗಿದೆ, ಇದರಿಂದಾಗಿ ಸ್ಥಳೀಯ ವಿದ್ಯಾರ್ಥಿಗಳ ಓದು ಬರೆಹಕ್ಕೆ ಹಿನ್ನೆಡೆಯಾಗಿದೆ. ಕೇಂದ್ರವು ತನ್ನ ರಾಜಕೀಯಕ್ಕೆ ವಿದ್ಯಾರ್ಥಿಗಳನ್ನು ಬಲಿಕೊಡುತ್ತಿದೆ. ಹಾಗೆಯೇ ವಿದೇಶಿ ವಹಿವಾಟು ನಡೆಸಿದ ಆರೋಪದಲ್ಲಿ HIAL ವಿಶ್ವವಿದ್ಯಾಲಯದ ವಿರುದ್ದ ಸಿಬಿಐ ತನಿಖೆ ಆರಂಭಿಸಲಾಗಿದೆ. ಈ ಬಗ್ಗೆ ಸೋನಮ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನನ್ನನ್ನು ಒಳಗೊಂಡಂತೆ ದೇಶದ ವಿವಿಧ ಭಾಗಗಳ 14 ಜನರ ನಿಯೋಗದೊಂದಿಗೆ ಮಾತನಾಡಿದ ಸೋನಮ್ ಅವರು, “ಹೌದು ನಮ್ಮ ಸಂಸ್ಥೆಯು ವಿದೇಶಿ ಹಣವನ್ನು ಪಡೆದಿದೆ. ನಮ್ಮ ವಿದ್ಯಾರ್ಥಿಗಳು ಹಲವು ಸಂಶೋಧನೆಗಳನ್ನು ಮಾಡುತ್ತಾರೆ. ಈ ಸಂಶೋಧನೆಯನ್ನು ವಿದೇಶದ ಒಂದು ಸಂಸ್ಥೆಗೆ ಮಾರಾಟ ಮಾಡಿ ಅದಕ್ಕೆ ಪ್ರತಿಯಾಗಿ ಆದಾಯವನ್ನು ಪಡೆಯಲಾಗಿದೆ. ಇದು ದೇಶಕ್ಕೆ ಹೆಮ್ಮೆಯ ವಿಚಾರವಾಗಬೇಕು. ಆದರೆ ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರಂತರವಾಗಿ ಒಂದಲ್ಲ ಒಂದು ರೀತಿಯ ದಾಳಿ ನಡೆಸುತ್ತಿದೆ” ಎಂದಿದ್ದಾರೆ.

ತಮ್ಮ ಈ ಸತ್ಯಾಗ್ರಹವು ವಿಪಕ್ಷಗಳ ಹೋರಾಟ ಎಂಬಂತೆ ಬಿಂಬಿಸುತ್ತಿರುವ ಬಗ್ಗೆ ಸೋನಮ್ ವಾಂಗ್‌ಚುಕ್ ವಿಷಾದ ವ್ಯಕ್ತಪಡಿಸಿದ್ದಾರೆ. “ವಿರೋಧ ಪಕ್ಷ ಮಾತ್ರವಲ್ಲ ಆಡಳಿತ ಪಕ್ಷದ ಕೆಲವು ನಾಯಕರುಗಳೂ ಕೂಡಾ ನಮ್ಮ ಈ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ದೆಹಲಿಯಲ್ಲಿ ನಾವು ಪಾದಯಾತ್ರೆ ನಡೆಸಿದಾಗ ವಿಪಕ್ಷಗಳ ನಾಯಕರು ಬೆಂಬಲ ಪ್ರಕಟಿಸಿದರು. ಆದರೆ ಬಿಜೆಪಿಯ ಕೆಲವು ನಾಯಕರು ರಾತ್ರಿಯ ವೇಳೆ ಯಾರಿಗೂ ತಿಳಿಯದಂತೆ ಬಂದು ಬೆಂಬಲ ವ್ಯಕ್ತಪಡಿಸಿ ಹೋಗಿದ್ದಾರೆ. ಮೇಲಿನ ನಾಯಕರು(ಕೇಂದ್ರ) ಈ ಹೋರಾಟವನ್ನು ವಿರೋಧಿಸುತ್ತಿದ್ದಾರೆ. ನಮ್ಮ ವಿರುದ್ಧ ಆಂದೋಲನವನ್ನೂ ಮಾಡುತ್ತಿದ್ದಾರೆ” ಎನ್ನುತ್ತಾರೆ ಸೋನಮ್ ವಾಂಗ್‌ಚುಕ್.
“ಹಿಲ್ ಕೌನ್ಸಿಲ್ ಚುನಾವಣೆಯಲ್ಲಿಯೂ ಬಿಜೆಪಿ ಹಲವು ಭರವಸೆಗಳನ್ನು ನೀಡಿತ್ತು. ಸಂರಕ್ಷಣೆಯ ಭರವಸೆಗಳ ನಂಬಿ ಬಹುಮತದೊಂದಿಗೆ ಬಿಜೆಪಿಯನ್ನು ಗೆಲ್ಲಿಸಿದ್ದಾರೆ ಜನ. ಈ ಹಿಂದೆ 370ರ ವಿಧಿ ಜಾರಿಯಲ್ಲಿದ್ದಾಗ ಲಡಾಖ್‌ನಲ್ಲಿ ನಮ್ಮ ಜಲ, ಜಮೀನು, ಸಂಸ್ಕೃತಿಗೆ ರಕ್ಷಣೆಯಿತ್ತು. ಈಗ ಆ ರಕ್ಷಣಾ ಕವಚ ಕುಸಿದು ಬಿದ್ದಿದೆ. ಸದ್ಯ ಲಡಾಖ್ ನಲ್ಲಿ ಯಾರೂ ಬೇಕಾದರೂ, ಏನು ಬೇಕಾದರೂ ಮಾಡಬಹುದು, ಎಷ್ಟು ಭೂಮಿಯನ್ನು ಬೇಕಾದರೂ ಕಬಳಿಸಬಹುದು. ಇದು ಪ್ರಸ್ತುತ ಸ್ಥಿತಿ”
“ಲಡಾಖ್‌ನ ಸಂಪನ್ಮೂಲಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ, ಉತ್ಪಾದಿತ ವಿದ್ಯುತ್ ಅನ್ನು ದೆಹಲಿ, ಚಂಡೀಗಢಕ್ಕೆ ಸರಬರಾಜು ಮಾಡಲಾಗುತ್ತದೆ, ಅಲ್ಲಿ ಕಾರ್ಪೋರೇಟ್ ಸಂಸ್ಥೆಗಳು ವಿದ್ಯುತ್ ದುರ್ಬಳಕೆ ಮಾಡುತ್ತದೆ. ಆದರೆ ಇಲ್ಲಿ ಜನರು ಹಗಲು-ರಾತ್ರಿ ಕಷ್ಟಪಡುತ್ತಾರೆ. ಲಡಾಖಿಗಳು ದೇಶದ ಇತರೆ ಭಾಗದ ಜನರಿಗೂ ಸಹಾಯ ಮಾಡಲು ಬಯಸುತ್ತಾರೆ. ಆದರೆ ಲಡಾಖ್ ಅನ್ನು ಹಾನಿಗೊಳಿಸಿ ದೇಶದ ಇತರೆ ಭಾಗಕ್ಕೆ ಲಾಭ ಉಂಟು ಮಾಡುವುದು ಹೇಗೆ? ಆರನೇ ಪರಿಚ್ಛೇದ ಇದ್ದಿದ್ದರೆ, ನಮ್ಮದೇ ಸಣ್ಣ ಆಡಳಿತವಿದ್ದರೆ ಮಾತ್ರ ನಮಗೆ ಈ ರಕ್ಷಣೆ ಸಿಗಲು ಸಾಧ್ಯ”
“ಲಡಾಖ್ ಅನ್ನು ಆರನೇ ಪರಿಚ್ಛೇದಕ್ಕೆ ಸೇರಿಸಿದರೆ ಕೇಂದ್ರ ಸರ್ಕಾರವು ತನಗೆ ಬೇಕಾದ ಹಾಗೆ ಲಡಾಖ್ ಭೂಮಿಯನ್ನು ಬಳಸಿಕೊಳ್ಳಲು ಸಾಧ್ಯವಾಗದು. ಈ ಕಾರಣದಿಂದಾಗಿ ಅವರೇ ನೀಡಿದ ಭರವಸೆಯನ್ನು ಈಗ ಈಡೇರಿಸುತ್ತಿಲ್ಲ. ವಿಶ್ವದ ಅತಿ ದೊಡ್ಡ ಸೌರ ಸ್ಥಾವರ ಚೀನಾದಲ್ಲಿದೆ. ಅದಕ್ಕೂ ಮೂರು ಪಟ್ಟು ದೊಡ್ಡ ಸ್ಥಾವರವನ್ನು ಈಗ ಲಡಾಖ್‌ನಲ್ಲಿ ಸ್ಥಾಪಿಸಲಾಗುತ್ತಿದೆ. ಇದು ಮೊದಲ ಕೇವಲ ಆರಂಭ…ಅಂತ್ಯ ಅಲ್ಲ. ಮುಂದೆ ಇಂತಹ ಹಲವು ಯೋಜನೆಗಳು ಅನಾವರಣಗೊಳ್ಳಲಿವೆ. ಕ್ರಮೇಣ ಇಲ್ಲಿನ ಖನಿಜಗಳನ್ನು ಲೂಟಿ ಮಾಡುವ ಗುರಿ ಕಾರ್ಪೊರೇಟ್ ದೊರೆಗಳದ್ದು. ಈ ಹಿಂದೆ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಪ್ರವಾಸದೋದ್ಯಮಕ್ಕೂ ಕೆಲಮಟ್ಟಿಗೆ ಅಡೆತಡೆಗಳಿದ್ದವು. ಆದರೆ ಈಗ ಅದ್ಯಾವುದೂ ಇಲ್ಲ. ಉಪರಾಜ್ಯಪಾಲರಿಗೆ ಬೇಕಾದವರಿಗೆ ಇಲ್ಲಿ ಬೇಕು ಬೇಕಾದ ಯೋಜನೆಗಳು ಸಿಗುತ್ತವೆ. ಅವರು ಮೂರು ವರ್ಷ ಅಧಿಕಾರದಲ್ಲಿರುತ್ತಾರೆ, ಹೋಗುತ್ತಾರೆ, ಆದರೆ ಇವೆಲ್ಲವುದರ ದುಷ್ಪರಿಣಾಮವನ್ನು ನಾವು ಶಾಶ್ವತವಾಗಿ ಅನುಭವಿಸಬೇಕಾಗುತ್ತದೆ ಎಂಬುದು ಸೋನಮ್ ಅಳಲು.
“ಲಡಾಖ್ ಒಂದು ಮರುಭೂಮಿ, ಇಲ್ಲಿ ಸಾಕಷ್ಟು ನೀರಿಲ್ಲ, ಜಮೀನಿಲ್ಲ. ಪ್ರಸ್ತುತ ಜಾರಿಗೊಳ್ಳುವ ಪ್ರತಿಯೊಂದು ಅಭಿವೃದ್ಧಿ ಯೋಜನೆಗೂ ಲಕ್ಷಾಂತರ ಜನರು ಇಲ್ಲಿಗೆ ಬರಬೇಕಾಗುತ್ತದೆ. ಯೋಜನೆ ಪೂರ್ಣವಾದ ಬಳಿಕ ಅದರ ಅನುಷ್ಠಾನಕ್ಕೆ 70 ಸಾವಿರದಷ್ಟು ಉದ್ಯೋಗಿಗಳು ಬೇಕಾಗುತ್ತಾರೆ ಎಂದು ಹೇಳಲಾಗುತ್ತಿದೆ. ಇಂತಹ ಹತ್ತು ಯೋಜನೆಗಳು ಬಂದರೆ ಆರು ಲಕ್ಷ ಜನರು ಲಡಾಖ್‌ಗೆ ಬರಬೇಕಾಗುತ್ತದೆ. ಇಲ್ಲಿ ಮೂರು ಲಕ್ಷ ಜನ ಬದುಕುವುದೇ ಕಷ್ಟ. ಹಾಗಿರುವಾಗ ಇಷ್ಟೊಂದು ಜನರು ಬಂದು ನೆಲೆಸಿದರೆ ಇಲ್ಲಿನ ಪರಿಸರಕ್ಕೆ ಖಂಡಿತವಾಗಿಯೂ ಹೊರೆಯಾಗುತ್ತದೆ. ಅಷ್ಟು ಮಾತ್ರವಲ್ಲದೆ ಇಲ್ಲಿನ ಜನರಿಗೆ ಅವಕಾಶ ಕಡಿಮೆಯಾಗುತ್ತದೆ ಎಂಬುದು ಲಡಾಖಿಗಳ ಆತಂಕ” ಎನ್ನುತ್ತಾರೆ ಸೋನಮ್ ವಾಂಗ್‌ಚುಕ್.

ಸೋನಮ್ ಅವರಿಗೆ ಬೆಂಬಲ ನೀಡಿ ಹಲವು ಮಂದಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ. ನಾನು ಸೇರಿದಂತೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಸಂದೀಪ್ ಪಾಂಡೆ ನೇತೃತ್ವದ ಇತರೆ ರಾಜ್ಯಗಳ ನಿಯೋಗದ ಎಲ್ಲರೂ ಒಂದು ದಿನ ಉಪವಾಸ ಕುಳಿತು ಲಡಾಖ್‌ನ ಜನರ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದೆವು. ಈ ಸತ್ಯಾಗ್ರಹದ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿರುವ ಲೇಹ್ ಮಹಿಳೆ ಸೋನಮ್ ಪಲ್‌ದೇಸೆ, “ವಯಸ್ಸಾದವರೂ ಸೇರಿ ನಾವು ಹಲವು ಮಹಿಳೆಯರು ಮನೆ-ಮಠ ಬಿಟ್ಟು ಸತ್ಯಾಗ್ರಹ ಕುಳಿತಿದ್ದೇವೆ. ನಾವು ಸರ್ಕಾರದ ಬಳಿ ಚಂದ್ರನನ್ನು ತಂದು ಕೊಡಿ ಎಂಬ ಅಸಾಧ್ಯ ಬೇಡಿಕೆ ಇಟ್ಟಿಲ್ಲ, ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇನೆ. ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಪೂರೈಸುವಂತೆ ನಾವು ಕೇಳುತ್ತಿದ್ದೇವೆ. ಐದು ವರ್ಷದಿಂದ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುತ್ತಲೇ ಇದ್ದೇವೆ. ಜೀವ ಇರುವವರೆಗೂ ಈ ಹೋರಾಟ ಮುಂದುವರೆಸುತ್ತೇವೆ” ಎಂದಿದ್ದಾರೆ.
ಹೀಗೆ ಸೋನಮ್ ಇತ್ತೀಚೆಗೆ ‘ಲೇಹ್ ಅಪೆಕ್ಸ್ ಬಾಡಿ’ ಭಾಗವಾದರೂ ಸ್ಥಳೀಯವಾಗಿ ಮಾತ್ರವಲ್ಲದೆ ಕಾರ್ಗಿಲ್ ಡೆಮಾಕ್ರೆಟಿಕ್ ಅಲೆಯನ್ಸ್ ಕೂಡಾ ಸೋನಮ್ ಬೆಂಬಲಕ್ಕೆ ನಿಂತಿದೆ. ಇದೀಗ ಒಟ್ಟು ಎಂಟು ರಾಜ್ಯಗಳ ಒಂದು ನಿಯೋಗವು ದೆಹಲಿವರೆಗೂ ಈ ಪ್ರತಿಭಟನೆ ಕಾವು ವಿಸ್ತರಿಸುವ, ದೇಶದ ಇತರೆ ರಾಜ್ಯಗಳಲ್ಲಿಯೂ ಲಡಾಖ್ ಜನರ ಬೇಡಿಕೆಗಳ ಪರವಾಗಿ ಧ್ವನಿ ಎತ್ತುವ ನಿರ್ಧಾರ ಮಾಡಿದೆ. ಆದರೆ ಲಡಾಖ್‌ನ ಈ ಹೋರಾಟವನ್ನು ವಿಪಕ್ಷಗಳ ಹೋರಾಟ ಎಂಬಂತೆ ಬಿಂಬಿಸುತ್ತಿರುವ ಬಿಜೆಪಿ, ಈ ಹಿಂದೆ ಮೋದಿ ಯೋಜನೆಗಳಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಬೆಂಬಲ ನೀಡಿದ್ದ ಸೋನಮ್ ಅವರನ್ನು ವಿಪಕ್ಷಗಳ ಓರ್ವ ನಾಯಕರಂತೆ ಕಾಣುವುದು, ಅಪಪ್ರಚಾರ ಮಾಡುವುದು ಖೇದಕರ. ಇವೆಲ್ಲವುದರ ಹಿಂದೆ ಲಡಾಖ್‌ನ ಸಂಪನ್ಮೂಲಗಳನ್ನು ನಿಧಾನವಾಗಿ ಕೊಳ್ಳೆಹೊಡೆಯುವ ಹುನ್ನಾರ, ಈ ಮೂಲಕ ಹಿಮಾಚಲ, ಉತ್ತರಾಖಂಡದಂತಹ ಪ್ರಾಕೃತಿಕ ವಿಪತ್ತುಗಳಿಗೆ ಲಡಾಖ್ ಸೀಮೆಯನ್ನೂ ನೂಕುವ ಎಲ್ಲ ಸಾಧ್ಯತೆಗಳಿವೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




