ಮಾನವ ಮತ್ತು ಇಲಿಗಳಲ್ಲಿ ಪ್ರೊಟೀನ್‌ಗಳಿಗೆ ಕಾರಣವಾಗುವ ಜೀನ್‌ಗಳಲ್ಲಿ ಸುಮಾರು ಶೇ.95ರಷ್ಟು ಜೀನ್‌ಗಳು ಒಂದೇ ರೀತಿಯವುಗಳಿವೆ. (Human Genome Project ಮತ್ತು National Institutes of Health (NIH) ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಇದನ್ನು ದಾಖಲಿಸಿವೆ.
ಮಾನವನ ಜೀವ ಉಳಿಸುವ ಲಸಿಕೆ, ಕ್ಯಾನ್ಸರ್ ಚಿಕಿತ್ಸೆಯ ಹೊಸ ಔಷಧಿ, ಹುಟ್ಟಿನಿಂದಲೇ ಬರುವ ಕೆಲ ಅಪರೂಪದ ಕಾಯಿಲೆಗಳಿಗೆ ಬೇಕಾದ ಚಿಕಿತ್ಸೆ ಸೇರಿದಂತೆ ಮಾನವನ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಹಾಗೂ ಪ್ರಯೋಗಗಳು ನೇರವಾಗಿ ಮಾನವನ ಮೇಲೆಯೇ ಆರಂಭವಾಗುವುದಿಲ್ಲ. ಆ ಪ್ರಯೋಗಗಳ ಮೊದಲ ಹಂತದಲ್ಲಿ ವಿಜ್ಞಾನಿಗಳು ಆಯ್ಕೆ ಮಾಡಿಕೊಳ್ಳುವುದು ಇಲಿಗಳನ್ನು. ಭಾರತ ಸೇರಿದಂತೆ ಜಗತ್ತಿನಾದ್ಯಂತ ದಶಕಗಳಿಂದ ನಡೆಯುತ್ತಿರುವ ಈ ಸಂಶೋಧನೆಗಳು ವೈದ್ಯಕೀಯ ವಿಜ್ಞಾನಕ್ಕೆ ಎಷ್ಟು ನೆರವಾಗಿವೆ, ಜೊತೆಗೆ ಅವುಗಳ ಮಿತಿಗಳೇನು ಎಂಬ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
ವೈದ್ಯಕೀಯ ಮತ್ತು ಜೀವಶಾಸ್ತ್ರ ಸಂಶೋಧನೆಗಳ ಇತಿಹಾಸ ತಿರುವಿದರೆ, ಇಲಿಗಳು ಮಾನವ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಆವಿಷ್ಕಾರಗಳಲ್ಲಿ ಮಹತ್ವದ ಪಾತ್ರವಹಿಸಿರುವುದು ತಿಳಿಯುತ್ತದೆ. ಅಮೆರಿಕ, ಯೂರೋಪ್, ಚೀನಾ, ಜಪಾನ್ ಸೇರಿದಂತೆ ಹಲವು ದೇಶಗಳು ಕ್ಯಾನ್ಸರ್, ಲಸಿಕೆ, ಮಧುಮೇಹ, ಹೃದ್ರೋಗ, ನರರೋಗ ಹಾಗೂ ಹುಟ್ಟು ರೋಗಗಳ ಅಧ್ಯಯನಕ್ಕಾಗಿ ಇಲಿಗಳನ್ನು ಪ್ರಯೋಗಾತ್ಮಕ ಮಾದರಿಯಾಗಿ ಬಳಸಿಕೊಂಡಿವೆ. ಮಾನವನಿಗಿಂತ ಗಾತ್ರದಲ್ಲಿ ತೀರಾ ಚಿಕ್ಕದಾಗಿದ್ದರೂ, ಅವುಗಳ ರಚನೆ, ದೇವ ವ್ಯವಸ್ಥೆಯ ಸಾಮ್ಯತೆಯ ಕಾರಣದಿಂದ ಇಲಿಗಳು ವಿಜ್ಞಾನಿಗಳಿಗೆ ಅತ್ಯಂತ ವಿಶ್ವಾಸಾರ್ಹ ಪ್ರಾಯೋಗಿಕ ವಸ್ತುಗಳಾಗಿವೆ.
ಪ್ರಯೋಗಗಳಲ್ಲಿ ಇಲಿಗಳನ್ನೇ ಬಳಸಿಕೊಳ್ಳಲು ಮುಖ್ಯ ಕಾರಣಗಳು:
ಇಲಿಗಳನ್ನು ಅತ್ಯಂತ ಸೂಕ್ತ ಪ್ರಯೋಗಾತ್ಮಕ ಮಾದರಿಗಳೆಂದು ವಿಜ್ಞಾನಿಗಳು ಪರಿಗಣಿಸಲು ಪ್ರಮುಖ ಕಾರಣ, ಮಾನವ ಮತ್ತು ಇಲಿಗಳ ನಡುವೆ ಇರುವ ಜೈವಿಕ ಹಾಗೂ ಜನ್ಯ ಸಾಮ್ಯತೆ. ಅಂದಾಜಿನ ಪ್ರಕಾರ, ಮಾನವ ಮತ್ತು ಇಲಿಗಳಲ್ಲಿ ಪ್ರೋಟೀನ್‌ಗಳಿಗೆ ಕಾರಣವಾಗುವ ಜೀನ್‌ಗಳಲ್ಲಿ ಸುಮಾರು ಶೇ.95ರಷ್ಟು ಜೀನ್‌ಗಳು ಒಂದೇ ರೀತಿಯವುಗಳಿವೆ. (Human Genome Project ಮತ್ತು National Institutes of Health (NIH)
ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಇದನ್ನು ದಾಖಲಿಸಿವೆ. ಮಾನವನಲ್ಲಿ ರೋಗಗಳಿಗೆ ಸಂಬಂಧಿಸಿದ ಬಹುತೇಕ ಜೀನ್‌ಗಳು ಇಲಿಗಳಲ್ಲಿಯೂ ಇವೆ ಎಂಬುದು ಪ್ರಯೋಗಾತ್ಮಕವಾಗಿ ಸಾಬೀತಾಗಿದೆ. ಈ ಕಾರಣದಿಂದ ಮಧುಮೇಹ, ಕ್ಷಯ, ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳ ಅಧ್ಯಯನಕ್ಕೆ ಇಲಿಗಳು ಬಳಕೆಯಾಗುತ್ತಿವೆ. ಇಲಿಗಳ ಸಂಪೂರ್ಣ ಜೀನ್ ಸಂರಚನೆ ಈಗಾಗಲೇ ನಕ್ಷೆಗೊಳಿಸಲ್ಪಟ್ಟಿರುವುದರಿಂದ, ನಿರ್ದಿಷ್ಟ ಜೀನ್‌ಗಳನ್ನು ಆನ್ ಅಥವಾ ಆಫ್ ಮಾಡುವ ಮೂಲಕ ಅವುಗಳ ಪರಿಣಾಮವನ್ನು ಸುಲಭವಾಗಿ ಅಧ್ಯಯನ ಮಾಡಬಹುದು. ಮಾನವನಲ್ಲಿ ಈ ರೀತಿಯ ಪ್ರಯೋಗ ನಡೆಸುವುದು ಅಸಾಧ್ಯ.
ಇಲಿಗಳನ್ನೇ ಆಯ್ಕೆ ಮಾಡಿಕೊಳ್ಳಲು ಇನ್ನೊಂದು ಪ್ರಮುಖ ಕಾರಣ, ಅವುಗಳ ಕಡಿಮೆ ಆಯುಷ್ಯ. ಸಾಮಾನ್ಯವಾಗಿ ಇಲಿಗಳು ಕೇವಲ ಎರಡರಿಂದ ಮೂರು ವರ್ಷಗಳವರೆಗೆ ಮಾತ್ರ ಜೀವಿಸುತ್ತವೆ. ಇದರಿಂದ ರೋಗಗಳ ಬೆಳವಣಿಗೆ, ವೃದ್ಧಾಪ್ಯ ಹಾಗೂ ದೇಹದ ಬದಲಾವಣೆಗಳನ್ನು ಅಲ್ಪ ಸಮಯದಲ್ಲೇ ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಒಳ್ಳೆಯ ಅವಕಾಶ ಸಿಗುತ್ತದೆ. ಜೊತೆಗೆ ಇಲಿಗಳು ವೇಗವಾಗಿ ಸಂತಾನೋತ್ಪತ್ತಿ ಮಾಡುವುದರಿಂದ, ಒಂದೇ ಸಮಯದಲ್ಲಿ ಹೆಚ್ಚು ಸಂಖ್ಯೆಯ ಇಲಿಗಳು ಹಾಗೂ ಕಡಿಮೆ ಅವಧಿಯಲ್ಲಿ ಹೆಚ್ಚು ತಲೆಮಾರುಗಳು ಸಂಶೋಧನೆಗೆ ಲಭ್ಯವಾಗುತ್ತವೆ. ಕಡಿಮೆ ಗರ್ಭಾವಧಿ ಮತ್ತು ದೊಡ್ಡ ಪ್ರಮಾಣದ ಸಂತಾನವು ಸಂಶೋಧಕರಿಗೆ ನಿರಂತರ ಅಧ್ಯಯನ ಸಾಮಗ್ರಿಯನ್ನು ಒದಗಿಸುತ್ತದೆ.
ಹಿಂದಿನ ಸಾಂಕ್ರಾಮಿಕ ರೋಗಗಳ ಸಂಶೋಧನೆಯಲ್ಲಿ ಇದೇ ಇಲಿಗಳು ಪ್ರಮುಖ ಪಾತ್ರ ವಹಿಸಿದ್ದವು. ಇನ್ಫ್ಲೂಯೆನ್ಸಾ, ಹೆಪಟೈಟಿಸ್, ಎಬೋಲಾ ಸೇರಿದಂತೆ ಅನೇಕ ಅಪಾಯಕಾರಿ ಸೋಂಕು ರೋಗಗಳ ಅಧ್ಯಯನಕ್ಕೆ ಇಲಿಗಳನ್ನು ಬಳಸಲಾಗಿದೆ. ಇತ್ತೀಚೆಗೆ ಕೋವಿಡ್-19 ಸಂಶೋಧನೆಯಲ್ಲೂ ಇಲಿಗಳೇ ಪ್ರಮುಖ ಸಾಧನ. ಮಾನವ ಕೋಶಗಳನ್ನು ಪ್ರಯೋಗಾಲಯದಲ್ಲಿ ಪ್ರತ್ಯೇಕವಾಗಿ ಅಧ್ಯಯನ ಮಾಡಬಹುದು. ಆದರೆ, ಸೋಂಕಿನ ಸಮಯದಲ್ಲಿ ರೋಗನಿರೋಧಕ ವ್ಯವಸ್ಥೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಜೀವಂತ ಪ್ರಾಣಿ ಮಾದರಿಯೇ ಅಗತ್ಯವಾಗುತ್ತದೆ.

ಕೋವಿಡ್-19 ಸಂಶೋಧನೆಗಾಗಿ ವಿಜ್ಞಾನಿಗಳು ʼಹ್ಯೂಮನೈಸ್ಡ್ ಇಲಿಗಳುʼ ಎಂಬ ವಿಶೇಷವಾಗಿ ಜೀನ್ ಬದಲಾಯಿಸಿದ ಇಲಿಗಳನ್ನು ಅಭಿವೃದ್ಧಿಪಡಿಸಿದರು. ಈ ಇಲಿಗಳಲ್ಲಿ ಮಾನವ ದೇಹದಲ್ಲಿರುವ ACE2 ಎಂಬ ರಿಸೆಪ್ಟರ್ ಅನ್ನು ಸೇರಿಸಲಾಗಿತ್ತು. ಇದೇ ರಿಸೆಪ್ಟರ್‌ಗೆ SARS-CoV-2 ವೈರಸ್ ಅಂಟಿಕೊಂಡು ಕೋಶಗಳಿಗೆ ಪ್ರವೇಶಿಸುತ್ತದೆ. ಈ ಹ್ಯೂಮನೈಸ್ಡ್ ಇಲಿಗಳ ಮೂಲಕ ವೈರಸ್ ಹರಡುವ ರೀತಿ, ದೇಹದ ರೋಗನಿರೋಧಕ ಪ್ರತಿಕ್ರಿಯೆ ಮತ್ತು ಲಸಿಕೆಗಳ ಪರಿಣಾಮವನ್ನು ವಿಜ್ಞಾನಿಗಳು ಕಡಿಮೆ ಸಮಯದಲ್ಲಿ ಕಂಡುಕೊಳ್ಳಲು ಸಾಧ್ಯವಾಯಿತು.
SARS (Severe Acute Respiratory Syndrome) ಮತ್ತು MERS (Middle East respiratory syndrome) ಕುರಿತ ಹಿಂದಿನ ಸಂಶೋಧನೆಗಳು ಕೋವಿಡ್-19 ಅಧ್ಯಯನಕ್ಕೆ ಬಲವಾದ ನೆಲೆ ಒದಗಿಸಿದ್ದವು. ಆ ಹಿಂದಿನ ಅಧ್ಯಯನಗಳ ಫಲಿತಾಂಶಗಳೇ ಕೋವಿಡ್-19 ಸಂಶೋಧನೆ ಅತ್ಯಂತ ವೇಗವಾಗಿ ಮುಂದುವರಿಯಲು ಸಹಾಯ ಮಾಡಿದವು. ಈ ಪ್ರಕ್ರಿಯೆಯಲ್ಲಿ ಹ್ಯೂಮನೈಸ್ಡ್ ಇಲಿಗಳು ಪ್ರಯೋಗಾಲಯ ಅಧ್ಯಯನ ಮತ್ತು ಮಾನವ ಕ್ಲಿನಿಕಲ್ ಪ್ರಯೋಗಗಳ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಕೋವಿಡ್-19 ಸಂದರ್ಭದಲ್ಲಿ ಅಭಿವೃದ್ಧಿಪಡಿಸಲಾದ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಸುರಕ್ಷತೆ ಮತ್ತು ರೋಗನಿರೋಧಕ ಪ್ರತಿಕ್ರಿಯೆಯನ್ನು ಮೊದಲ ಹಂತದಲ್ಲಿ ಇಲಿಗಳಲ್ಲೇ ಪರೀಕ್ಷಿಸಲಾಯಿತು. ಈ ಪ್ರಯೋಗಗಳಲ್ಲಿ ಲಸಿಕೆಗಳು ಸುರಕ್ಷಿತವಾಗಿದ್ದು, ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಉಂಟುಮಾಡುತ್ತವೆ ಎಂಬುದು ದೃಢಪಟ್ಟ ನಂತರವೇ ಮಾನವ ಪರೀಕ್ಷೆಗೆ ಅನುಮತಿ ದೊರಕಿತು. ಈ ಪ್ರಕರಣದಲ್ಲಿ ಇಲಿಗಳ ಮೇಲೆ ನಡೆದ ಪ್ರಯೋಗಗಳು ಯಶಸ್ವಿಯಾಗಿದ್ದು, ಮಾನವನಲ್ಲಿಯೂ ಅದೇ ಫಲಿತಾಂಶ ಕಾಣಿಸಿಕೊಂಡಿತು. ಇದೇ ರೀತಿ ಕ್ಯಾನ್ಸರ್ ಸಂಶೋಧನೆಯಲ್ಲಿ ಭಾರತದಲ್ಲಿನ IISC, Tata Memorial Centre ಹಾಗೂ ICMR ಸಂಸ್ಥೆಗಳು ಇಲಿಗಳನ್ನು ಬಳಸಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ, ಔಷಧದ ಪರಿಣಾಮ ಮತ್ತು ಕ್ಷ- ಕಿರಣ ಚಿಕಿತ್ಸೆಯ ಪ್ರತಿಕ್ರಿಯೆಗಳನ್ನು ಅಧ್ಯಯನ ಮಾಡಿವೆ. ಕೆಲವು ಔಷಧಗಳು ಇಲಿಗಳಲ್ಲಿ ಉತ್ತಮ ಪರಿಣಾಮ ತೋರಿದರೂ, ಮಾನವನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡದ ಉದಾಹರಣೆಗಳೂ ಇವೆ.

ಅಮೆರಿಕ ಮತ್ತು ಯೂರೋಪ್‌ನಲ್ಲಿ ಕ್ಯಾನ್ಸರ್, ಅಲ್ಜೈಮರ್, ಪಾರ್ಕಿನ್ಸನ್, ಹೃದಯಾಘಾತ ಮತ್ತು ಇತರೆ ರೋಗಗಳ ಅಧ್ಯಯನದಲ್ಲಿ ಇಲಿಗಳನ್ನು ವ್ಯಾಪಕವಾಗಿ ಬಳಸಲಾಗಿದೆ. ಜೀನ್ ತಿದ್ದುಪಡಿ ತಂತ್ರಜ್ಞಾನವಾದ ಕ್ರಿಸ್ಪರ್ (CRISPR) ಮೊದಲು ಇಲಿಗಳಲ್ಲಿ ಯಶಸ್ವಿಯಾಗಿ ಪ್ರಯೋಗಿಸಲ್ಪಟ್ಟ ಬಳಿಕವೇ ಮಾನವನ ಮೇಲೆ ಬಳಸಲ್ಪಟ್ಟಿದೆ. ಚೀನಾ ಮತ್ತು ಜಪಾನ್‌ನಲ್ಲಿ ನರರೋಗ, ಸ್ಟೆಮ್ ಸೆಲ್ ಸಂಶೋಧನೆ ಹಾಗೂ ಅಂಗಾಂಗ ಪುನರುತ್ಪಾದನೆ ಕ್ಷೇತ್ರಗಳಲ್ಲೂ ಇಲಿಗಳು ಪ್ರಮುಖ ಪಾತ್ರ ವಹಿಸಿವೆ. ಆದರೆ ವಿಜ್ಞಾನಿಗಳೇ ಒಪ್ಪಿಕೊಳ್ಳುವಂತೆ, ಇಲಿಗಳಲ್ಲಿ ಯಶಸ್ವಿಯಾದ ಎಲ್ಲಾ ಪ್ರಯೋಗಗಳು ಮಾನವನಲ್ಲಿಯೂ ಯಶಸ್ವಿಯಾಗುತ್ತವೆ ಎಂಬ ಭರವಸೆ ಇಲ್ಲ. ಒಂದು ಅಂದಾಜಿನ ಪ್ರಕಾರ, ಇಲಿಗಳಲ್ಲಿ ಯಶಸ್ವಿಯಾದ ಔಷಧಗಳಲ್ಲಿ ಕೇವಲ ಶೇ.60ರಿಂದ 70ರಷ್ಟು ಮಾತ್ರ ಮಾನವನಲ್ಲಿ ಪರಿಣಾಮಕಾರಿಯಾಗುತ್ತವೆ. ಉಳಿದವುಗಳು ಅಡ್ಡ ಪರಿಣಾಮ ಉಂಟುಮಾಡುತ್ತವೆ ಅಥವಾ ಸಂಪೂರ್ಣವಾಗಿ ವಿಫಲವಾಗುತ್ತವೆ.
ಇಲಿಗಳು ಮತ್ತು ಮಾನವನ ಶೇ.95ರಷ್ಟು ಜೀನ್ ಸಾಮ್ಯತೆಯಿಂದ ಮಾನವ ದೇಹದಲ್ಲಿ ಕಂಡುಬರುವ ಅನೇಕ ರೋಗಗಳನ್ನು ಇಲಿಗಳಲ್ಲಿ ಕೃತಕವಾಗಿ ಉಂಟುಮಾಡಿ ಅಧ್ಯಯನ ಮಾಡಬಹುದು. ಇತರ ದೊಡ್ಡ ಪ್ರಾಣಿಗಳಿಗಿಂತ ಇಲಿಗಳನ್ನು ಸಾಕುವುದು ಮತ್ತು ಪ್ರಯೋಗಾಲಯದಲ್ಲಿ ನಿರ್ವಹಿಸುವುದು ಕಡಿಮೆ ವೆಚ್ಚದ ಕೆಲಸವಾಗಿರುವುದೂ ವಿಜ್ಞಾನಿಗಳಿಗೆ ಅನುಕೂಲವಾಗಿದೆ. ಪ್ರಯೋಗಕ್ಕೆ ಇಲಿಗಳ ಆಯ್ಕೆಗೆ ಇದೂ ಒಂದು ಮುಖ್ಯ ಕಾರಣ.
ಯಾವುದೇ ಪ್ರಯೋಗ ಅನುಕೂಲ ಹಾಗೂ ಅನಾನುಕೂಲಗಳೆಂಬ ಎರಡು ಮುಖ ಹೊಂದಿರುತ್ತದೆ. ಮಾನವ ದೇಹ ಮತ್ತು ಇಲಿಗಳ ದೇಹ ಸಂಪೂರ್ಣವಾಗಿ ಒಂದೇ ಅಲ್ಲ. ಕೆಲವು ರೋಗಗಳು ಇಲಿಗಳಲ್ಲಿ ಮಾನವನ ದೇಹದಲ್ಲಿರುವಂತೆ ಇರುವುದಿಲ್ಲ. ಇದರಿಂದ ಔಷಧಗಳು ಇಲಿಗಳಲ್ಲಿ ಸುರಕ್ಷಿತವೆನಿಸಿದರೂ ಮಾನವನಲ್ಲಿ ಅಪಾಯಕಾರಿಯಾಗುವ ಸಾಧ್ಯತೆ ಇದೆ. ಜತೆಗೆ ಪ್ರಾಣಿಗಳ ಮೇಲೆ ಪ್ರಯೋಗ ನಡೆಸುವುದು ಮಾನವೀಯವೇ ಎಂಬ ಪ್ರಶ್ನೆ ಹಲವು ವರ್ಷಗಳಿಂದ ಬಾರಿ ಬಾರಿ ಏಳುತ್ತಲೇ ಇದೆ. ಈ ಹಿನ್ನೆಲೆ ಜಾಗತಿಕವಾಗಿ ʼ3Rʼ (Replace, Reduce, Refine) ತತ್ವವನ್ನು ಅನುಸರಿಸಲಾಗುತ್ತದೆ. ಅಂದರೆ ಸಾಧ್ಯವಾದಲ್ಲಿ ಪ್ರಾಣಿಗಳ ಬದಲಿಗೆ ಪರ್ಯಾಯ ತಂತ್ರಜ್ಞಾನ ಬಳಸುವುದು, ಅಗತ್ಯವಿರುವಷ್ಟು ಮಾತ್ರ ಪ್ರಾಣಿಗಳ ಬಳಕೆ ಮಾಡುವುದು ಮತ್ತು ಪ್ರಯೋಗಗಳಿಂದ ಉಂಟಾಗುವ ನೋವನ್ನು ಕಡಿಮೆ ಮಾಡುವುದು.
ಇತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ಆಧಾರಿತ ಮಾದರಿಗಳು, ಕೃತಕ ಬುದ್ಧಿಮತ್ತೆ, 3D ಕೋಶ ಸಂಸ್ಕೃತಿ ಮತ್ತು ಆರ್ಗನಾಯ್ಡ್ ತಂತ್ರಜ್ಞಾನಗಳ ಬೆಳವಣಿಗೆಯಿಂದ ಇಲಿಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಭವಿಷ್ಯದಲ್ಲಾದರೂ ಇಲಿಗಳ ಬಳಕೆ ಸಂಪೂರ್ಣವಾಗಿ ನಿಲ್ಲುವ ಸಾಧ್ಯತೆ ಕಡಿಮೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.
ಪ್ರಯೋಗಗಳಲ್ಲಿ ಪ್ರಾಣಿಗಳ ಬಳಕೆಗೆ ಕೆಲ ಮಿತಿಗಳೂ ಇವೆ:
ಪ್ರಾಣಿಗಳನ್ನು ಪ್ರಯೋಗಗಳಲ್ಲಿ ಬಳಸುವ ವಿಚಾರದಲ್ಲಿ ಜಗತ್ತಿನಾದ್ಯಂತ ವಿರೋಧಗಳಿದ್ದರೂ ಸಂಪೂರ್ಣ ನಿಷೇಧ ವಿಧಿಸಲಾಗಿಲ್ಲ. ಹಾಗೆಂದು ಮನಸೋ ಇಚ್ಛೆ ಬಳಸಬಹುದು ಎಂಬ ಅರ್ಥವೂ ಅಲ್ಲ. ಇಂದಿನ ವಿಜ್ಞಾನ ಸಂಶೋಧನೆಗಳಲ್ಲಿ ಪ್ರಾಣಿಗಳ ಬಳಕೆಯನ್ನು ನಿಯಂತ್ರಿಸುವ ಕಟ್ಟುನಿಟ್ಟಾದ ಕಾನೂನುಗಳು, ನೈತಿಕ ಮಾರ್ಗಸೂಚಿಗಳು ಮತ್ತು ಅನುಮತಿ ವ್ಯವಸ್ಥೆಗಳು ಅಸ್ತಿತ್ವದಲ್ಲಿವೆ.
ಭಾರತದಲ್ಲಿ Prevention of Cruelty to Animals Act-1960 ಅಡಿಯಲ್ಲಿ ಪ್ರಾಣಿಗಳಿಗೆ ಅನಗತ್ಯ ನೋವು ನೀಡುವುದನ್ನು ನಿಷೇಧಿಸಲಾಗಿದೆ. ಇದರಡಿಯಲ್ಲಿ ಕಾರ್ಯನಿರ್ವಹಿಸುವ CPCSEA (Committee for the Purpose of Control and Supervision of Experiments on Animals) ಸಮಿತಿ, ಯಾವ ಪ್ರಯೋಗಕ್ಕೆ ಯಾವ ಪ್ರಾಣಿಯನ್ನು ಬಳಸಬಹುದು, ಎಷ್ಟು ಸಂಖ್ಯೆಯಲ್ಲಿ ಬಳಸಬಹುದು, ನೋವು ಹೇಗೆ ಕಡಿಮೆ ಮಾಡಬೇಕು ಎಂಬುದನ್ನು ನಿಗದಿಪಡಿಸುತ್ತದೆ. ಯಾವುದೇ ಸಂಶೋಧನಾ ಸಂಸ್ಥೆ CPCSEA ಅನುಮತಿ ಇಲ್ಲದೆ ಪ್ರಾಣಿಗಳ ಮೇಲೆ ಪ್ರಯೋಗ ನಡೆಸುವಂತಿಲ್ಲ.
ಇದನ್ನೂ ಓದಿ: ಆನುವಂಶಿಕ ಕಾಯಿಲೆ ʼಥಲಸ್ಸೇಮಿಯಾʼ ಕುರಿತು ನಿಮಗೆಷ್ಟು ಗೊತ್ತು?
ಭಾರತದಲ್ಲಿ ವಿಶೇಷವಾಗಿ ಕಾಸ್ಮೆಟಿಕ್ಸ್ ಪರೀಕ್ಷೆಗಾಗಿ ಪ್ರಾಣಿಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶಾಂಪೂ, ಕ್ರೀಮ್, ಮೇಕಪ್ ಉತ್ಪನ್ನಗಳಿಗಾಗಿ ಪ್ರಾಣಿಗಳ ಮೇಲೆ ಪರೀಕ್ಷೆ ನಡೆಸುವುದು ಕಾನೂನು ಬಾಹಿರ. ಆದರೆ ವೈದ್ಯಕೀಯ, ಲಸಿಕೆ, ಔಷಧ ಮತ್ತು ಗಂಭೀರ ರೋಗ ಸಂಶೋಧನೆಗಳಲ್ಲಿ ಪ್ರಾಣಿಗಳ ಬಳಕೆಯನ್ನು ನಿರ್ದಿಷ್ಟ ಷರತ್ತುಗಳೊಂದಿಗೆ ಅನುಮತಿಸಲಾಗಿದೆ. ಯೂರೋಪಿಯನ್ ಯೂನಿಯನ್‌ನಲ್ಲಿಯೂ ಕಾಸ್ಮೆಟಿಕ್ಸ್ ಪರೀಕ್ಷೆಗೆ ಪ್ರಾಣಿಗಳ ಬಳಕೆಗೆ ಸಂಪೂರ್ಣ ನಿಷೇಧವಿದೆ. ಅಮೆರಿಕ, ಬ್ರಿಟನ್, ಜಪಾನ್ ಮೊದಲಾದ ದೇಶಗಳಲ್ಲಿ ಪ್ರಾಣಿಗಳ ಬಳಕೆ ಕಾನೂನಾತ್ಮಕವಾಗಿದ್ದರೂ, 3R ತತ್ವ ಕಡ್ಡಾಯವಾಗಿದೆ.
ಇಂದಿನ ಮಟ್ಟಿಗೆ ಎಲ್ಲಾ ವೈದ್ಯಕೀಯ ಸಂಶೋಧನೆಗಳನ್ನು ಪ್ರಾಣಿಗಳಿಲ್ಲದೆ ನಡೆಸುವುದು ಸಾಧ್ಯವಿಲ್ಲ. ಲಸಿಕೆಗಳು, ಔಷಧಗಳ ಸುರಕ್ಷತೆ ಮತ್ತು ದೇಹದ ಸಂಪೂರ್ಣ ಪ್ರತಿಕ್ರಿಯೆಗಳನ್ನು ತಿಳಿಯಲು ಜೀವಂತ ಪ್ರಾಣಿ ಮಾದರಿಗಳು ಇನ್ನೂ ಅಗತ್ಯವಾಗಿವೆ. ಇದೇ ಸಮಯದಲ್ಲಿ, ಪ್ರಾಣಿಗಳ ಬಳಕೆಯನ್ನು ಹಂತಹಂತವಾಗಿ ಕಡಿಮೆ ಮಾಡುವ ದಿಕ್ಕಿನಲ್ಲಿ ಕೃತಕ ಬುದ್ಧಿಮತ್ತೆ, ಕೋಶ ಸಂಶೋಧನೆ, ಆರ್ಗನಾಯ್ಡ್ ತಂತ್ರಜ್ಞಾನಗಳ ಬಳಕೆಯೇನೋ ಹೆಚ್ಚುತ್ತಿರುವುದು ಸಮಾಧಾನಕರ. ಈ ಪ್ರಯೋಗಗಳು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಪ್ರಾಣಿಗಳ ಬಳಕೆ ಕಡಿಮೆಯಾಗಬೇಕಿದೆ ಎನ್ನುವುದು ಪ್ರಾಣಿ ದಯಾಸಂಘ, ಪ್ರಾಣಿ ಪರ ಹೋರಾಟಗಾರರ ಎಂದಿನ ಆಗ್ರಹ.





