ಈ ಸಮಾಜದಲ್ಲಿ ಹೆಣ್ಣು ಮತ್ತು ಗಂಡು ನಡುವೆ ಭೇದಭಾವ ಅನಾದಿಕಾಲದಿಂದಲೂ ಇದೆ. ಅದು ಆಧುನಿಕ ಯುಗದಲ್ಲಿಯೂ ಮುಂದುವರೆದಿರುವುದು ದುರಂತವೇ ಸರಿ. ಸಮಾಜದ ರಚನೆ, ಸಂಸ್ಕೃತಿ, ಆರ್ಥಿಕ ವ್ಯವಸ್ಥೆ ಹಾಗೂ ಧಾರ್ಮಿಕ ನಂಬಿಕೆಗಳಿಂದ ಹುಟ್ಟಿಕೊಂಡ ಈ ಅಸಮಾನತೆ, ಹೆಣ್ಣುಮಕ್ಕಳ ಬದುಕಿನುದ್ದಕ್ಕೂ ಸಮಸ್ಯೆಗಳನ್ನ ತಂದೊಡ್ಡಿದೆ. ಗಂಡು ಶಕ್ತಿಯ ಪ್ರತಿಬಿಂಬ, ಕುಟುಂಬದ ಪೋಷಕ, ನಾಯಕನ ಛಾಯೆ ಹೊಂದಿರುವಂತೆ ಬಿಂಬಿಸಿ ಹೆಣ್ಣನ್ನು ಮನೆಗೆಲಸಗಳಿಗೆ ಮಾತ್ರ ಸೀಮಿತಗೊಳಿಸಿ ಅವರ ಶಿಕ್ಷಣ, ಉದ್ಯೋಗ, ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು. ಈ ಪಿಡುಗು ಸಮಾಜದ ಕಲ್ಪನೆಯಲ್ಲಿ ನೆಲೆಯೂರಿ ಹೆಣ್ಣು – ಗಂಡು ಎಂಬ ಭೇದಭಾವ ನೆಲೆಯೂರಿತು. ಈ ಸಮಾಜದ ಪರಿಕಲ್ಪನೆಯಲ್ಲಿಯೇ ಇರುವ ಕೆಲವರು ಗರ್ಭದಲ್ಲಿರುವಾಗಲೇ ಹೆಣ್ಣು ಎಂದು ತಿಳಿದ ಬಳಿಕ ಭ್ರೂಣ ಹತ್ಯೆ ಮಾಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಹೆಣ್ಣು ಮಗು ಹುಟ್ಟಿತಂದು ಕೊಲೆ ಮಾಡಿಬಿಡುತ್ತಾರೆ.
ಹೌದು, ಗಂಡು ಮಗುವೇ ಬೇಕು ಎಂಬ ಕಾರಣದಿಂದ ಹೆಣ್ಣುಮಗು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ತಾಯಿಯೊಬ್ಬರು ಕೊಂದ ಘಟನೆ ಪಶ್ಚಿಮ ಬಂಗಾಳದ ಘಾಜಿಯಾಬಾದ್‌ನಲ್ಲಿ ನಡೆದಿದೆ. ಡಿಸೆಂಬರ್ 5ರಂದು ಈ ಘಟನೆ ಬೆಳಕಿಗೆ ಬಂದಿದೆ.
ಝರ್ನಾ ಎಂಬ 22 ವರ್ಷದ ಮಹಿಳೆ ಹೆರಿಗೆಯಾದ ಕೇವಲ 45 ನಿಮಿಷಗಳಲ್ಲಿ ನವಜಾತ ಹೆಣ್ಣು ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ ಸದ್ಯ ಬಂಧಿತರಾಗಿದ್ದಾರೆ.
ನೆಹರೂ ನಗರದ ನಿವಾಸಿ ವಿನಯ್ ರಾವತ್ ಅವರ ಮನೆಯ ಚಾವಣಿ ಮೇಲೆ ನವಜಾತ ಹೆಣ್ಣು ಮಗುವಿನ ದೇಹ ಬಿದ್ದಿತ್ತು. ಇದನ್ನು ಗಮನಿಸಿದ ರಾವತ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ವೇಳೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಎಸಿಪಿ ಉಪಾಸನಾ ಪಾಂಡೆ ಅವರು, “ಮಗು ಜನಿಸಿ ಕೆಲವೇ ಗಂಟೆಗಳಾಗಿರಬಹುದು” ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಮೂಲದ ಶಂಕರ್ ಸೇನ್ ಎಂಬುವವರು ನೆಹರೂ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರ ಅತ್ತಿಗೆ ಝರ್ನಾ ಗರ್ಭಿಣಿಯಾಗಿದ್ದರು. ಸುಮಾರು ಒಂದು ತಿಂಗಳ ಹಿಂದೆ ಅಲ್ಲಿಗೆ ಬಂದಿದ್ದರು.

“ನಾವು ಬಡವರು. ಹಾಗಾಗಿ, ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಂಡೆವು. ನವಜಾತ ಹೆಣ್ಣು ಮಗು ಹುಟ್ಟಿದಾಗಲೇ ಉಸಿರಾಡುತ್ತಿರದ ಕಾರಣ ಮಗು ಸತ್ತಿರಬಹುದು ಎಂದು ಭಾವಿಸಿ ಹತ್ತಿರದ ಖಾಲಿ ಜಾಗದಲ್ಲಿ ಮಗುವನ್ನು ಬಿಸಾಡುವುದಕ್ಕೆ ಪ್ರಯತ್ನ ಪಟ್ಟೆವು. ಆದರೆ, ಮಗು ನೆರೆ ಮನೆಯವರ ಚಾವಣಿ ಮೇಲೆ ಬಿದ್ದಿದೆ” ಎಂದು ಝರ್ನಾ ಹೇಳಿಕೊಂಡಿದ್ದಳು.
ತನಿಖೆ ಶುರು ಮಾಡಿದ ಪೊಲೀಸರು ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸತ್ಯ ಬಯಲಾಗಿದೆ. ಝರ್ನಾ ಹೇಳಿದ್ದಕ್ಕೆ ವಿರುದ್ಧವಾಗಿ ವರದಿ ಬಂದಿತ್ತು. ಅಂದರೆ, ಮಗು ಜೀವಂತವಾಗಿದ್ದಾಗಲೇ ಗಂಭೀರವಾಗಿ ಗಾಯಗೊಂಡಿತ್ತು ಎಂದು ವರದಿ ತಿಳಿಸಿದೆ.
ಮರಣೋತ್ತರ ವರದಿಯ ಪ್ರಕಾರ, ಮಗುವಿನ ತಲೆಬುರುಡೆ ಒಡೆದಿತ್ತು. ಮಗುವಿನ ಕೈ ಮತ್ತು ಕಾಲುಗಳು ಮುರಿದಿದ್ದವು. ಮಗು ಜನನದ ಒಂದು ಗಂಟೆಯೊಳಗೆ ಈ ಗಾಯಗಳಾಗಿವೆ. ಸತ್ಯ ಆಚೆ ಬಂದ ಬಳಿಕ ತಪ್ಪು ತಾನೇ ಮಾಡಿರುವುದಾಗಿ ಝರ್ನಾ ಒಪ್ಪಿಕೊಂಡಿದ್ದಾಳೆ.
ನವಜಾತ ಮಗುವನ್ನು ಕೊಲೆ ಮಾಡಿದ ಆರೋಪಿ ಝರ್ನಾ ಬಿಹಾರದ ದರ್ಭಾಂಗದ ಬಾದಲ್ ಎಂಬುವವರನ್ನು ಕಳೆದ ವರ್ಷ ಮದುವೆಯಾಗಿದ್ದಳು. ಗಂಡು ಮಗು ಬೇಕೆಂಬ ಬಯಕೆಯಿಂದ ಗರ್ಭಿಣಿಯಾದ ಸ್ವಲ್ಪ ತಿಂಗಳ ನಂತರ ಖಾಸಗಿ ಆಸ್ಪತ್ರೆಗೆ ತೆರಳಿ ಭ್ರೂಣಲಿಂಗ ಪರೀಕ್ಷೆ ಮಾಡಿಸಿಕೊಂಡಿದ್ದಳು. ಪರೀಕ್ಷೆಯಲ್ಲಿ ಹೆಣ್ಣು ಮಗು ಎಂದು ತಿಳಿದಿತ್ತು. ಆಗಲೇ ಗರ್ಭಪಾತ ಮಾಡಿಸಿಕೊಳ್ಳಲು ಮುಂದಾದಳು, ಆದರೂ ವೈದ್ಯಕೀಯ ತೊಡಕುಗಳಿಂದ ಗರ್ಭಪಾತ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ವಂದೇ ಮಾತರಂ | ಲೋಕಸಭೆಯ ಬಿಜೆಪಿ ನಿಲುವಿನಿಂದ ಅಂತರ ಕಾಯ್ದುಕೊಂಡ ಜೆಡಿಯು!
ಹೆಣ್ಣು ಮಗು ಬೇಡವೇ ಬೇಡ ಎಂದು ನಿರ್ಧರಿಸಿದ್ದ ಝರ್ನಾ ಕೆಲವು ಮಹಿಳೆಯರ ಸಲಹೆ ಪಡೆದು ಕೆಲವು ಔಷಧಿಗಳನ್ನು ಸೇವಿಸಲು ನಿರ್ಧರಿಸಿದ್ದಳು. ಹೀಗಾಗಿ, ಆಕೆಯ ಆರೋಗ್ಯವೂ ಹದಗೆಟ್ಟಿತ್ತು. ಆ ಘಾಜಿಯಾಬಾದ್‌ನ ನೆಹರೂ ನಗರದಲ್ಲಿರುವ ತನ್ನ ಸಹೋದರಿ ಸವಿತಾ ಅವರ ಮನೆಗೆ ನವೆಂಬರ್ 14ರಂದು ಬಂದಿದ್ದಳು. ಡಿ.5ರಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಲು ಎಲ್ಲರೂ ಒತ್ತಾಯಿಸಿದರೂ ಕೂಡ ಝರ್ನಾ ನಿರಾಕರಿಸಿದ್ದಳು. ಹೀಗಾಗಿ, ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದ ಆಕೆ ತನ್ನ ಸಹೋದರಿಯ ಮನೆಯ ಟೆರೇಸ್‌ನಿಂದ ಖಾಲಿ ಜಾಗದಲ್ಲಿ ಮಗುವನ್ನು ಬಿಸಾಡುವ ಯೋಜನೆ ರೂಪಿಸಿಕೊಂಡಿದ್ದಳು. ಆದರೆ, ಮಗು ಪಕ್ಕದ ಮನೆಯ ಚಾವಣಿ ಮೇಲೆ ಬಿದ್ದಿದೆ. BNS ಸೆಕ್ಷನ್ 91ರ ಅಡಿಯಲ್ಲಿ ಝರ್ನಾ ಮೇಲೆ ಪ್ರಕರಣ ದಾಖಲಾಗಿದೆ.
ಹೆಣ್ಣು ಮಗು ಎಂಬ ಕಾರಣಕ್ಕೆ ಇಂತಹ ಕೊಲೆಗಳು ಕರ್ನಾಟಕದಲ್ಲೂ ನಡೆಯುತ್ತಿವೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮಲಂಗಿ ಗ್ರಾಮದಲ್ಲಿ 2025ರ ನವೆಂಬರ್‌ನಲ್ಲಿ ದಾರುಣ ಘಟನೆಯೊಂದು ನಡೆದಿತ್ತು. ಹೆಣ್ಣು ಮಗು ಹುಟ್ಟಿದ ಕೋಪಕ್ಕೆ ತಾಯಿಯೇ ತನ್ನ ಮೂರು ದಿನದ ಹಸುಗೂಸನ್ನು ಕತ್ತು ಹಿಸುಕಿ ಕೊಂದಿದ್ದರು.
ಇನ್ನೊಂದು ಘಟನೆಯಲ್ಲಿ, 2025ರ ಸೆಪ್ಟೆಂಬರ್‌ನಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್‌ನಲ್ಲಿ ಎರಡು ತಿಂಗಳ ಹಸುಗೂಸನ್ನು ಹೆಣ್ಣು ಮಗು ಎನ್ನುವ ಕಾರಣಕ್ಕೆ ಹೆತ್ತ ತಾಯಿಯೇ ಕಾಲುವೆಗೆ ಎಸೆದು ಕೊಂದ ಘಟನೆ ನಡೆದಿತ್ತು.
ಮತ್ತೊಂದು ಘಟನೆಯಲ್ಲಿ, ಹೆಣ್ಣು ಮಗು ಎಂದು ಪತಿ ತಾತ್ಸಾರ ಮಾಡಿದ್ದಕ್ಕೆ ತಾಯಿ ತನ್ನ 12 ದಿನದ ಕಂದಮ್ಮನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರದಲ್ಲಿ 2018ರ ಮಾರ್ಚ್‌ನಲ್ಲಿ ನಡೆದಿತ್ತು.
ಇನ್ನೂ ಮಗು ಗರ್ಭದಲ್ಲಿರುವಾಗಲೇ ಮಗುವು ಹೆಣ್ಣು ಎಂದು ತಿಳಿದ ಬಳಿಕ ಮಗುವನ್ನು ಕೊಲೆ ಮಾಡುವ ನಿರ್ದಯಿ ತಾಯಿಯಂದಿರು ಇದ್ದಾರೆ. 2023ರಲ್ಲಿ ಹೆಣ್ಣು ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡುತ್ತಿದ್ದ ನಾಲ್ವರು ವೈದ್ಯರು ಸೇರಿ 9 ಮಂದಿ ಆರೋಪಿಗಳನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿತ್ತು. ಆರೋಪಿಗಳು ಸುಮಾರು 2 ವರ್ಷಗಳಿಂದ ನಿರಂತರವಾಗಿ 900 ಹೆಣ್ಣು ಭ್ರೂಣ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿತ್ತು.

ಆರೋಗ್ಯ ಇಲಾಖೆಯು 1994ರಲ್ಲಿ ರಚನೆಗೊಂಡಿರುವ ಪಿ.ಸಿ.ಪಿ.ಎನ್.ಡಿ.ಟಿ. ಕಾಯ್ದೆಯನ್ವಯ ಲಿಂಗ ಪತ್ತೆಯನ್ನು ನಿಷೇಧಿಸಿದೆ. ಆದರೂ ಭ್ರೂಣಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಇದರಿಂದ ಲಿಂಗಾನುಪಾತದಲ್ಲಿ ಭಾರೀ ವ್ಯತ್ಯಾಸವಿದೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಸೈಕೋ ಥೆರಪಿಸ್ಟ್ ಅನುಪಮಾ ಮಾತನಾಡಿ, “ತಾಯಂದಿರು ಮಕ್ಕಳನ್ನು ಕೊಲೆ ಮಾಡುತ್ತಾರೆ. ಹಿಂಸೆ ಮಾಡುತ್ತಾರೆಂದರೆ ಅವರಿಗೆ ತೀವ್ರವಾದ ಮಾನಸಿಕ ತೊಂದರೆ ಇರಬಹುದು. ಸಾಮಾಜಿಕ ಒತ್ತಡ ಸೇರಿದಂತೆ ಯಾವುದಾದರೂ ಕಾರಣಗಳಿಂದ ಖಿನ್ನತೆಗೆ ಒಳಗಾಗಿರಬಹುದು. ಯಾಕೆ ಹೀಗೆ ನಡೆದುಕೊಳ್ಳುತ್ತಾರೆ ಎಂದು ಒಂದು ನಿರ್ದಿಷ್ಟ ಕಾರಣ ಕೊಡಲು ಸಾಧ್ಯವಿಲ್ಲ. ಪ್ರಕರಣ ಬಗ್ಗೆ ತಿಳಿದುಕೊಳ್ಳದೇ ಏನಾಗಿದೆ ಎಂದು ಹೇಳಲು ಕಷ್ಟವಾಗುತ್ತದೆ. ಆದರೆ, ಪ್ರಸವಾನಂತರದ ಖಿನ್ನತೆ ಎಂಬುದು ಕೆಲವು ಮಹಿಳೆಯರಲ್ಲಿ ಕಾಣುವ ಪ್ರಮುಖ ಕಾರಣವಾಗಬಹುದು. ಕುಟುಂಬ ಬೆಂಬಲದ ಕೊರತೆ, ಒಂಟಿತನ, ಸಾಮಾಜಿಕ ಬೆಂಬಲದ ಕೊರತೆ, ಒತ್ತಡ ಇವುಗಳು ಕೂಡ ಈ ರೀತಿಯ ಪ್ರಕರಣಗಳಿಗೆ ಕಾರಣವಾಗಬಹುದು. “ಹೆಣ್ಣು ಮಗು ಮಾಡಿಕೊಂಡಿದ್ದೀಯಾ, ಗಂಡು ಮಗು ಮಾಡಿಕೊಂಡಿಲ್ಲ” ಎಂಬ ಒತ್ತಡ. ಸಮಾಜ ಏನು ಎನ್ನುತ್ತದೆ ಎನ್ನುವ ಭಯ. ಹೆಣ್ಣು ಮಗು ಬೇಕೆಂದು ಮಹಿಳೆಗೆ ಹಿಂಸೆ ಕೊಡುವುದು, ಗಂಡು ಮಕ್ಕಳಿಗಾಗಿ ಭಯದ ವಾತಾವರಣ ಸೃಷ್ಟಿ ಮಾಡುವುದು, ಸಡನ್ ಆಗಿ ಬೇರೆ ಬೇರೆ ಕಾರಣಗಳಿಂದ ಈ ರೀತಿಯ ಘಟನೆಗಳು ನಡೆಯಬಹುದು” ಎಂದು ಹೇಳಿದರು.
ಗಂಡು, ಹೆಣ್ಣು ಎನ್ನುವ ಭೇದ-ಭಾವ ಮನಸ್ಸಿನಿಂದ ತೆಗೆದು ಹಾಕಬೇಕು. ಗಂಡು ಮಗು ಹುಟ್ಟಿದಾಗ ಎಷ್ಟು ಸಂಭ್ರಮ ಪಡುತ್ತೇವೋ ಅಷ್ಟೇ ಪ್ರಮಾಣದಲ್ಲಿ ಹೆಣ್ಣು ಮಗು ಹುಟ್ಟಿದಾಗಲೂ ಸಂತಸ ಪಡಬೇಕು. ಆ ಮೂಲಕ ಮಕ್ಕಳಲ್ಲಿನ ತಾರತಮ್ಯ ಹೋಗಲಾಡಿಸಬೇಕು. ಹೆಣ್ಣು ಮಗುವಿಗೆ ಶಿಕ್ಷಣ, ಪ್ರೀತಿ, ವಾತ್ಸಲ್ಯ, ಸುರಕ್ಷತೆ ಹಾಗೂ ಪೋಷಣೆ ದೊರೆಯುವಂತೆ ನೋಡಿಕೊಳ್ಳಬೇಕು.
ಹೆಣ್ಣುಮಕ್ಕಳ ಪ್ರತಿಭೆ, ಬುದ್ದಿಮತ್ತೆ, ಶ್ರಮ ಎಲ್ಲವೂ ಗಂಡಸರಿಗಿಂತ ಕಡಿಮೆ ಎಂದು ಸಮಾಜದಲ್ಲಿ ನಿರ್ಮಿಸಲಾದ ತಪ್ಪು ಕಲ್ಪನೆಗಳನ್ನ ಹೋಗಲಾಡಿಸಬೇಕಿದೆ. ಈ ಅಸಮಾನತೆಯ ಬೇರುಗಳನ್ನು ಸಂಪೂರ್ಣವಾಗಿ ಕಿತ್ತುಹಾಕಲು ಕೇವಲ ಕಾನೂನುಗಳು ಅಥವಾ ಚಳವಳಿಗಳು ಮಾತ್ರ ಸಾಕಾಗುವುದಿಲ್ಲ. ಮಾನವನ ಮನಸ್ಸಿನ ಪರಿವರ್ತನೆ ಅನಿವಾರ್ಯವಾಗಿದೆ.




