ಮೊನ್ನೆ ಮೊನ್ನೆಯವರೆಗೂ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಅಬ್ಬರಿಸುತ್ತಿದ್ದ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ, ಇತ್ತೀಚೆಗೆ ಮೋದಿ ಸರ್ಕಾರದ ವಿರುದ್ಧವೇ ಸರಣಿ ಪ್ರಶ್ನೆಗಳು, ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ. ಅರ್ನಬ್‌ಗೆ ನಿಜಕ್ಕೂ ಜ್ಞಾನೋದಯವಾಗಿದೆಯಾ?
ಪತ್ರಿಕೋದ್ಯಮದ ಪಾವಿತ್ರ್ಯತೆಯನ್ನು ಪಾತಾಳಕ್ಕಿಳಿಸಿದ ಪತ್ರಕರ್ತರ ಪೈಕಿ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಬ್ ಗೋಸ್ವಾಮಿ ಕೂಡ ಒಬ್ಬರು. ಸುಳ್ಳನ್ನು ಸತ್ಯವೆಂಬಂತೆ ಪದೇಪದೇ ದೊಡ್ಡ ಗಂಟಲಿನಿಂದ ಅರಚಿ ಹೇಳುತ್ತಾರೆ. ಇವರುಗಳೇ ಏರ್ಪಡಿಸುವ ಚರ್ಚಾಕೂಟಗಳಲ್ಲಿ ಇವರೇ ನ್ಯಾಯವನ್ನು ನಿರ್ಧರಿಸುತ್ತಾರೆ. ಟಿ ಆರ್ ಪಿ ಏರಿಕೆಗೆ, ಹಣ ಗಳಿಸಲು ಸುಳ್ಳನ್ನು ಬಿತ್ತಿ ಬೆಳೆವ ಭರಾಟೆಯಲ್ಲಿ ನೈಜ ಪತ್ರಿಕೋದ್ಯಮವನ್ನು ಪಾತಾಳಕ್ಕೆ ತಳ್ಳಿದ್ದಾರೆ. ಸದಾ ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಪರ ತುತ್ತೂರಿ ಊದುತ್ತ, ಕಾಂಗ್ರೆಸ್ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ಅಬ್ಬರಿಸುತ್ತಿದ್ದ ಅರ್ನಬ್ ಗೋಸ್ವಾಮಿ ಅವರು ಕಳೆದ ಎರಡು ವಾರಗಳಿಂದ ಬದಲಾಗಿದ್ದಾರೆ. ಅರ್ನಬ್ ನಿಜಕ್ಕೂ ಬದಲಾದರಾ? Nation wants to know…
ಹೌದು, ಅರ್ನಬ್ ಗೋಸ್ವಾಮಿಯ ಈ ಬದಲಾವಣೆ ಭಾರತದ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಭಾರೀ ಅಚ್ಚರಿ ಮೂಡಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಕಟ್ಟಾ ಬೆಂಬಲಿಗನೆಂದು ಗೋಸ್ವಾಮಿ ಅವರನ್ನು ದೀರ್ಘಕಾಲದಿಂದ ಪರಿಗಣಿಸಲಾಗಿದೆ. ಬಿಜೆಪಿ ಸರ್ಕಾರದ ಮೇಲಿನ ತಮ್ಮ ಒಲವು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಹೊಗಳೊಭಟ್ಟರೆಂದು ಅರ್ನಬ್ ಗೋಸ್ವಾಮಿ ಅವರನ್ನು ಟೀಕಿಸಲಾಗುತ್ತಿತ್ತು. ಟೀಕೆಗಳಿಗೆ ಕಾರಣಗಳೂ ಇದ್ದವು. ಆದರೆ, ಈಗ ಅರ್ನಬ್ ಗೋಸ್ವಾಮಿ, ಮೋದಿ ಸರ್ಕಾರದ ವಿರುದ್ಧವೇ ಸರಣಿ ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ. ಸರ್ಕಾರದ ಆದ್ಯತೆಗಳ ಬಗ್ಗೆ ಈಗ ಪ್ರಶ್ನೆ ಮಾಡಿದ್ದಾರೆ.
ಅರ್ನಬ್ ಅವರ ಈ ಯು ಟರ್ನ್ ಡಿಸೆಂಬರ್ ಮಧ್ಯದಲ್ಲಿ ಸಂಭವಿಸಿದೆ. ಅರ್ನಬ್ ಗೋಸ್ವಾಮಿ ಮೊದಲು ದೆಹಲಿ ಮತ್ತು ಇತರ ಹಲವಾರು ನಗರಗಳನ್ನು ಕಾಡುತ್ತಿರುವ ವಾಯು ಮಾಲಿನ್ಯ ಮತ್ತು ಅಪಾಯಕಾರಿ ಮಟ್ಟದಲ್ಲಿರುವ ವಾಯು ಗುಣಮಟ್ಟ ಸೂಚ್ಯಂಕವನ್ನು ಸರ್ಕಾರ ಸರಿಯಾಗಿ ನಿರ್ವಹಿಸುವಂತೆ ಒತ್ತಾಯಿಸಿ ಜನರು ಎದ್ದು ನಿಲ್ಲಬೇಕೆಂದು ಕರೆ ಕೊಟ್ಟಿದ್ದರು.
ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ವಿಶ್ವದ ಅತ್ಯಂತ ಕಲುಷಿತ ಪ್ರದೇಶಗಳಲ್ಲಿ ಸೇರಿವೆ ಎಂಬುದು ನಾಚಿಕೆಗೇಡಿನ ವಿಷಯ ಎಂದು ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಉತ್ತರದಿಂದ ದಕ್ಷಿಣ ಮತ್ತು ಪೂರ್ವದಿಂದ ಪಶ್ಚಿಮದವರೆಗಿನ ತನ್ನ ಅನೇಕ ನಗರಗಳಲ್ಲಿ ಕಳಪೆ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಭಾರತವು ಜಾಗತಿಕವಾಗಿ ಅಗ್ರಸ್ಥಾನದಲ್ಲಿದೆ. ಇದು ನಾಗರಿಕರಲ್ಲಿ ತೀವ್ರ ಶ್ವಾಸಕೋಶ, ಹೃದಯ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಾಲಿನ್ಯದಿಂದಾಗಿ ದೇಶವು ಉಸಿರುಗಟ್ಟಿಸುತ್ತಿರುವಾಗ ಮತ್ತು ಜನರು ಬಳಲುತ್ತಿರುವಾಗ, ಸಂಸತ್ತಿನಲ್ಲಿ ವಂದೇ ಮಾತರಂನಂತಹ ಘೋಷಣೆಗಳ ಮೇಲಿನ ಚರ್ಚೆಗಳು ಮೇರಿ ಆಂಟೋನೆಟ್ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಶುದ್ಧ ಗಾಳಿ ಮತ್ತು ಉತ್ತಮ ಗಾಳಿಯ ಗುಣಮಟ್ಟವನ್ನು ಖಚಿತಪಡಿಸಿದರೆ ಮಾತ್ರ ಜನರು ಬಿಜೆಪಿಗೆ ಮತ ಚಲಾಯಿಸಬೇಕು ಎಂದಿದ್ದರು.
ಮರುದಿನ, ಅರ್ನಬ್ ಗೋಸ್ವಾಮಿ ಅವರು ಮತ್ತೊಂದು ವಿಡಿಯೋದಲ್ಲಿ ಇಂದೋರ್ನ ಬಿಜೆಪಿ ನಾಯಕಿಯೊಬ್ಬರನ್ನು ಟೀಕಿಸಿದರು. “ಬಿಜೆಪಿ ನಾಯಕಿ ತಮ್ಮ ಕುಟುಂಬದ ವಿವಾಹವನ್ನು ಅದ್ದೂರಿಯಾಗಿ ನಡೆಸಿದ್ದಾರೆ. ಅವರು ಕೇವಲ ಪಟಾಕಿಗಳಿಗಾಗಿ ಸುಮಾರು 70 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಉದ್ಯಮಿಗಳಿಗೆ ಆಡಂಬರದ ವಿವಾಹಗಳು ಅವರ ವೈಯಕ್ತಿಕ ಆಯ್ಕೆಯಾಗಿರಬಹುದು. ಆದರೆ, ರಾಜಕಾರಣಿಗಳು ತಮ್ಮ ಸ್ವಂತ ರಾಜ್ಯವು ಬಡತನ, ಸಂಕಷ್ಟ ಮತ್ತು ಬಗೆಹರಿಯದ ಸಾರ್ವಜನಿಕ ಸಮಸ್ಯೆಗಳಿಂದ ಬಳಲುತ್ತಿರುವಾಗ ತಮ್ಮ ನಾಚಿಕೆಗೇಡಿನ ಸಂಪತ್ತಿನ ಪ್ರದರ್ಶನಗಳಲ್ಲಿ ತೊಡಗಬಾರದು” ಎಂದು ಟೀಕಿಸಿದ್ದರು.
ಮಧ್ಯಪ್ರದೇಶದ ರೇವಾದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ವೈದ್ಯಕೀಯ ಸಹಾಯವಿಲ್ಲದೆ ಎರಡು ಗಂಟೆಗಳ ಕಾಲ ಪ್ರವಾಹದ ಹೊಡೆತಕ್ಕೆ ಸಿಲುಕಿ ನಿಧನರಾದರು. ಥಲಸ್ಸೆಮಿಯಾದಿಂದ ಬಳಲುತ್ತಿರುವ ರಾಜ್ಯದಲ್ಲಿ ಆರು ಮಕ್ಕಳು ರಕ್ತ ವರ್ಗಾವಣೆಯ ನಂತರ ಎಚ್ ಐ ವಿ ಪಾಸಿಟಿವ್ ಬಂದಿದೆ. ಇಂತಹ ದುರಂತಗಳು ನಡೆಯುತ್ತಿರುವ ಸಮಯದಲ್ಲಿ ರಾಜಕಾರಣಿಗಳ ಅತಿಯಾದ ಪ್ರದರ್ಶನಗಳು ಯುವಕರ ಕೋಪವನ್ನು ಕೆರಳಿಸಬಹುದು ಎಂದು ಅವರು ಎಚ್ಚರಿಸಿದರು. ಯುವಜನರಲ್ಲಿ ಹತಾಶೆ ಹೆಚ್ಚಾದರೆ, ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದಂತೆ Gen Z ಶೈಲಿಯ ಪ್ರತಿಭಟನೆಯು ಭಾರತದಲ್ಲಿ ಭುಗಿಲೇಳಬಹುದು ಎಂದು ಎಚ್ಚರಿಸಿದರು.
ಬಿಜೆಪಿ ಆಡಳಿತದ ಸಮ್ಮಿಶ್ರ ರಾಜ್ಯಗಳ ಬಿಜೆಪಿ ನಾಯಕರು ಖಾಸಗಿ ಜೆಟ್ಗಳಲ್ಲಿ ಆಗಾಗ್ಗೆ ಪ್ರಯಾಣ ಮತ್ತು ಆಡಂಬರದ ವೈಯಕ್ತಿಕ ಕಾರ್ಯಕ್ರಮಗಳು ಸೇರಿದಂತೆ ಐಷಾರಾಮಿ ಜೀವನಶೈಲಿಯನ್ನು ಹೆಚ್ಚಾಗಿ ಪ್ರದರ್ಶಿಸುತ್ತಿದ್ದಾರೆ. ಇಂತಹ ನಡವಳಿಕೆಯು ಯುವಕರಲ್ಲಿ ಆಳವಾದ ಅಸಮಾಧಾನವನ್ನು ಉಂಟುಮಾಡಬಹುದು ಎಂದು ಗೋಸ್ವಾಮಿ ಎಚ್ಚರಿಸಿದರು.
ಇನ್ನು ಕಳೆದೊಂದು ತಿಂಗಳಿನಿಂದ ಅರಾವಳಿ ಬೆಟ್ಟದ ಸಾಲುಗಳು ಸುದ್ದಿಯಲ್ಲಿದೆ. ಈ ಅರಾವಳಿ ಬೆಟ್ಟದ ಸಾಲು ಗುಜರಾತ್ನಿಂದ ರಾಜಸ್ಥಾನದ ಮೂಲಕ ಹರಿಯಾಣದವರೆಗೂ ವ್ಯಾಪಿಸಿದೆ. ಶತಕೋಟಿ ವರ್ಷಗಳಷ್ಟು ಹಳೆಯದಾದ ಈ ಅರಾವಳಿ ಬೆಟ್ಟಗಳ ರಕ್ಷಣೆ ಮಾಡುವಲ್ಲಿ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ವಿಫಲವಾಗಿದೆ. ಇನ್ನು ಅರಾವಳಿ ಬೆಟ್ಟಗಳನ್ನು ದೊಡ್ಡ ಬಿಲಿಯನೇರ್ ಕಂಪನಿಗಳಿಂದ ರಕ್ಷಿಸಲಾಗದೇ ಕೇಂದ್ರ ಮತ್ತು ಸುಪ್ರೀಂ ಕೈಕಟ್ಟಿ ಕುಳಿತಿರುವ ಅಸಮರ್ಥತೆಯನ್ನು ಗೋಸ್ವಾಮಿ ಟೀಕಿಸಿದ್ದಾರೆ.
100 ಮೀಟರ್ ಎತ್ತರದ ಮಿತಿ ಆಧರಿಸಿ ಅರಾವಳಿ ಬೆಟ್ಟಗಳಲ್ಲಿ ಗಣಿಗಾರಿಕೆ ನಡೆಸಬಹುದು ಎಂಬ ಸುಪ್ರೀಂ ತೀರ್ಪು ಬಂದ ನಂತರ ಪರಿಸರ ವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಾವಳಿಯನ್ನು ಸಂರಕ್ಷಿಸುವ ಕರೆ ನೀಡಿದ್ದಾರೆ. ಇದು ನೈಸರ್ಗಿಕ ಅಪಾಯವನ್ನುಂಟು ಮಾಡುತ್ತದೆ. ದೆಹಲಿ-ಎನ್ ಸಿ ಆರ್, ಹರಿಯಾಣ ಮತ್ತು ರಾಜಸ್ಥಾನದಾದ್ಯಂತ ವ್ಯಾಪಕ ಗಣಿಗಾರಿಕೆ ಮತ್ತು ಅರಣ್ಯನಾಶಕ್ಕೆ ಕಾರಣವಾಗಬಹುದು. ಇದು ಈ ಪ್ರದೇಶದಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಮೇಲೆ ವಿನಾಶಕಾರಿ ಪರಿಣಾಮ ಬೀರಬಹುದು.
“ನೀವು ಬೆಟ್ಟಗಳನ್ನು ನಾಶಮಾಡಬಹುದು. ಆದರೆ, ಇದನ್ನ ನೋಡಿಕೊಂಡು ಭಾರತದ ನಾಗರಿಕರಾದ ನಾವು ಬಾಯಿ ಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವ ಎಂದು ನಾನು ನಂಬಿದ್ದೇನೆ. ಇದು ಪ್ರಜಾಪ್ರಭುತ್ವವಾಗಿದ್ದರೆ, ಯಾವ ಪ್ರಜಾಪ್ರಭುತ್ವದ ನಿಯಮದಡಿಯಲ್ಲಿ ನೀವು ಎರಡು ಶತಕೋಟಿ ವರ್ಷಗಳಷ್ಟು ಹಳೆಯದಾದ ಪರಿಸರ ರಚನೆಯನ್ನು – ಜೀವಂತ ಪರ್ವತ ವ್ಯವಸ್ಥೆಯನ್ನು ನಾಶಮಾಡಬಹುದು ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ” ಎಂದು ಗೋಸ್ವಾಮಿ ಕೇಳಿದ್ದರು.
#SaveTheAravallis ಅಭಿಯಾನಕ್ಕೆ ಪ್ರಧಾನಿ ಕಚೇರಿ ಮತ್ತು ಪರಿಸರ ಸಚಿವಾಲಯ ಮಧ್ಯಪ್ರವೇಶಿಸಬೇಕು, ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದರು. ಅವರು ವಿಫಲವಾದರೆ, “ನಾವು ವಿಕ್ಷಿತ್ ಭಾರತವಾಗುವುದಿಲ್ಲ. ನಾವು ಪರಿಸರ ನಾಶವಾದ ಭಾರತವಾಗುತ್ತೇವೆ” ಎಂದು ಹೇಳಿದ್ದಾರೆ. “ಸರ್ಕಾರ ಮಧ್ಯಪ್ರವೇಶಿಸಬೇಕು. ದೇಶದ ಮಾಧ್ಯಮಗಳು ತನ್ನ ಕೆಲಸವನ್ನು ಮಾಡುವುದಿಲ್ಲ ಎಂದು ಭಾವಿಸಬಾರದು” ಎಂದು ಅವರು ಹೇಳಿದರು.
ಅಷ್ಟೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಗೋಸ್ವಾಮಿ ಸರ್ಕಾರ ಅಥವಾ ಬಿಜೆಪಿಯನ್ನು ಹಲವಾರು ವಿಷಯಗಳ ಮೇಲೆ ಟೀಕಿಸುತ್ತಿರುವುದು ಕಂಡುಬಂದಿದೆ. ದೆಹಲಿ ವಾಯು ಮಾಲಿನ್ಯವನ್ನು ನಿಭಾಯಿಸಲು ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾದ ಬಿಜೆಪಿ ನೇತೃತ್ವದ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಇತ್ತೀಚಿನ ಇಂಡಿಗೋ ವಿಮಾನ ರದ್ದತಿ ವೈಫಲ್ಯದ ಬಗ್ಗೆ, ರಿಪಬ್ಲಿಕ್ ಭಾರತ್‌ನಲ್ಲಿ ಮೋದಿ ಸರ್ಕಾರವನ್ನು ಟೀಕಿಸಿದ ಗೋಸ್ವಾಮಿ, “ಭಾರತ ಕೇಳುತ್ತಿದೆ. ಮೋದಿ ಸರ್ಕಾರ ಏನು ಮಾಡುತ್ತಿದೆ?” ಎಂದು ಉದ್ಗರಿಸಿದರು. ವಿಮಾನ ನಿಲ್ದಾಣಗಳಲ್ಲಿನ ಪರಿಸ್ಥಿತಿ ಬಸ್ ಮತ್ತು ರೈಲು ನಿಲ್ದಾಣಗಳಿಗಿಂತ ಕೆಟ್ಟದಾಗಿದೆ ಮತ್ತು ಸರ್ಕಾರವು ‘ಇಂಡಿಗೋ ಬ್ಲ್ಯಾಕ್ಮೇಲ್’ಗೆ ಒಳಗಾಗಿ ಮೌನವಾಗಿದೆ ಎಂದು ಅವರು ಆರೋಪಿಸಿದರು.
ಗೋಸ್ವಾಮಿ ಅವರ ಇತ್ತೀಚಿನ ಪ್ರೈಮ್‌ಟೈಮ್ ಚರ್ಚೆಗಳು ನಾಲ್ಕು ರೀತಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಿವೆ. ಒಂದು, ಸರ್ಕಾರವನ್ನು ಪ್ರಶ್ನಿಸಿದ್ದಕ್ಕಾಗಿ ಜನರು ಅವರನ್ನು ಹೊಗಳುತ್ತಿದ್ದಾರೆ; ಎರಡು, ಅಂತಿಮವಾಗಿ ಪತ್ರಕರ್ತರಾಗಿ ತಮ್ಮ ಕೆಲಸವನ್ನು ನಿರ್ವಹಿಸಿದ್ದಕ್ಕಾಗಿ, ಅಂದರೆ ಅಧಿಕಾರವನ್ನು ಹೊಣೆಗಾರರನ್ನಾಗಿ ಮಾಡುವುದಕ್ಕಾಗಿ ಶ್ಲಾಘಿಸಲಾಗುತ್ತಿದೆ; ಮೂರು, ವಿಷಯಗಳು ತುಂಬಾ ಹದಗೆಟ್ಟಿವೆ ಎಂದು ಜನರು ವ್ಯಂಗ್ಯವಾಡುತ್ತಿದ್ದಾರೆ. ಅವರು ಕೂಡ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ; ಮತ್ತು ನಾಲ್ಕು, ಈ ಬದಲಾವಣೆಯ ಹಿಂದಿನ ಕಾರಣದ ಬಗ್ಗೆ ಜನರು ಊಹಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಅರ್ನಬ್ ಗೋಸ್ವಾಮಿ ಅವರು ಇನ್ನೂ ಹಲವು ವಿಚಾರಗಳಲ್ಲಿ ಮೋದಿ ಸರ್ಕಾರ ಮತ್ತುಬಿಜೆಪಿಯನ್ನು ಟೀಕಿಸುವ ಸಾಧ್ಯತೆಗಳಿವೆ. ಗೋಸ್ವಾಮಿ ಏನೆಲ್ಲಾ ಮಾಡಬಹುದು ಕಾದುನೋಡೋಣ.. ಆದರೆ, ಅವರ ಹಠಾತ್ ಯೂ-ಟರ್ನ್ನಿಂದ ಅನೇಕ ಜನರು ಆಶ್ಚರ್ಯಚಕಿತರಾಗಿದ್ದಾರೆ. ಈಗಲಾದರೂ ಗೋಸ್ವಾಮಿಗೆ ಬುದ್ದಿಬಂದಂತಿದೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಹಲವರು ದಿಟ್ಟ ಮತ್ತು ನಿರ್ಭೀತ ಪತ್ರಿಕೋದ್ಯಮವೆಂದು ಶ್ಲಾಘಿಸುತ್ತಿದ್ದಾರೆ.
ಡಿಸೆಂಬರ್ ಮಧ್ಯದಲ್ಲಿ ಸ್ಪಷ್ಟವಾಗಿ ಕಂಡುಬಂದ ಗೋಸ್ವಾಮಿ ಅವರ ಈ ಯು-ಟರ್ನ್, ದೆಹಲಿಯ ತೀವ್ರ ವಾಯು ಮಾಲಿನ್ಯ ಬಿಕ್ಕಟ್ಟನ್ನು ಸರ್ಕಾರ ನಿರ್ವಹಿಸುವ ರೀತಿ, ಸಂಸದೀಯ ಆದ್ಯತೆಗಳು ಮತ್ತು ಹೊಣೆಗಾರಿಕೆ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿತ್ತು. ಮುಂದುವರೆದು ನಾನಾ ಸಮಸ್ಯೆಗಳನ್ನು ಪ್ರಶ್ನಿಸಲಾರಂಭಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಗೋದಿ ಮಾಧ್ಯಮವಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿಯವರು ಹೊಗಳುಭಟ್ಟರಾಗಿದ್ದಾರೆ ಎಂದೇ ಟೀಕೆಗೆ ಗುರಿಯಾಗಿದ್ದ ಗೋಸ್ವಾಮಿ ಅವರ ಬದಲಾವಣೆಗಳ ಕುರಿತು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅರ್ನಬ್ ಬದಲಾಗಿದ್ದೇ ಆದರೆ ಅದು ನಿಜಕ್ಕೂ ಅಚ್ಚರಿಯ ಬೆಳವಣಿಗೆ. ಸದಾ ಕಾಂಗ್ರೆಸ್, ರಾಹುಲ್ ಗಾಂಧಿ, ಸೋನಿಯಾಗಾಂಧಿಯವರನ್ನು ಟೀಕಿಸುತ್ತ, ಮೋದಿಯವರನ್ನು ಹೊಗಳುವ ಭರದಲ್ಲಿ ಸುಳ್ಳು ಉತ್ಪ್ರೇಕ್ಷಿತ ಸುದ್ದಿಗಳನ್ನು ಹರಡುತ್ತಾ ಯುವ ಸಮೂಹದಲ್ಲಿ ಕೋಮುದ್ವೇಷ ಹರಡುತ್ತ ಮಾಧ್ಯಮ ಧರ್ಮವನ್ನು ಮರೆತಿದ್ದರು.
ತನ್ನ ಚಾನೆಲ್ ನ ಬಿದ್ದು ಹೋದ TRP ಮೇಲೆತ್ತುವ ಕಸರತ್ತು ಅರ್ನಬ್ ಮಾಡುತ್ತಿದ್ದಾರೆ ಎಂದು ವೀಕ್ಷಕರು ಗೇಲಿ ಮಾಡುತ್ತಿದ್ದಾರೆ.




