ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ ದೇಶದಲ್ಲಿರುವ ಒಟ್ಟು ಎಲ್‌ಪಿಜಿ ಶೇಖರಣಾ ಸಾಮರ್ಥ್ಯ ಕೇವಲ 1.4 ಲಕ್ಷ ಟನ್‌ಗಳು ಮಾತ್ರ. ಅಂದರೆ, ಹಡಗುಗಳ ಪೂರೈಕೆ ನಿಂತರೆ ಈ ದಾಸ್ತಾನು ಕೇವಲ ಎರಡು ದಿನಗಳ ಬಳಕೆಗೆ ಮಾತ್ರ ಸಾಕಾಗುತ್ತದೆ. ಈ ಬಿಕ್ಕಟ್ಟು ಕೇಂದ್ರ ಸರ್ಕಾರದ ಗಂಭೀರ ವೈಫಲ್ಯಗಳನ್ನು ಬಟಾಬಯಲು ಮಾಡಿದೆ
ಒಂದೆಡೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ತುಂಬಿಸಿಕೊಳ್ಳಲು ಯಾವುದೇ ಅಡೆತಡೆಗಳಿಲ್ಲ, ಡೀಸೆಲ್ ಪೂರೈಕೆಯಲ್ಲಿ ಕಿಂಚಿತ್ತೂ ವ್ಯತ್ಯಯವಿಲ್ಲ. ಆದರೆ, ಇನ್ನೊಂದೆಡೆ ಗ್ಯಾಸ್ ಏಜೆನ್ಸಿಗಳ ಮುಂದೆ ಖಾಲಿ ಸಿಲಿಂಡರ್‌ಗಳನ್ನು ಹಿಡಿದು ನಿಂತಿರುವ ಜನರ ಉದ್ದನೆಯ ಸಾಲುಗಳು, ಆತಂಕದಿಂದ ಆನ್‌ಲೈನ್ ಬುಕಿಂಗ್‌ಗೆ ಮುಗಿಬೀಳುತ್ತಿರುವ ಗ್ರಾಹಕರು. ದೇಶಾದ್ಯಂತ ಈಗ ಎಲ್ಲೆಡೆ ಕೇಳಿಬರುತ್ತಿರುವ ಪ್ರಮುಖ ಸುದ್ದಿ- ‘ಅಡುಗೆ ಅನಿಲದ ತೀವ್ರ ಕೊರತೆ’. ಹೌದು, ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಎನ್‌ಜಿ ದೇಶದಲ್ಲಿ ಧಾರಾಳವಾಗಿ ಲಭ್ಯವಿದ್ದರೂ, ಕೇವಲ ಎಲ್‌ಪಿಜಿ ಬಿಕ್ಕಟ್ಟು ಮಾತ್ರ ಭಾರತೀಯರನ್ನು ಹೈರಾಣಾಗಿಸಿದೆ. ಹೋಟೆಲ್ ಉದ್ಯಮ ತತ್ತರಿಸಿದೆ, ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೂ ಕುತ್ತು ಬಂದಿದೆ. ಇದು ಕೇವಲ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವೋ ಅಥವಾ ಸರ್ಕಾರದ ಕಾರ್ಯತಂತ್ರದ ವೈಫಲ್ಯವೋ ಎಂಬ ಗಂಭೀರ ಚರ್ಚೆ ಹುಟ್ಟಿಕೊಂಡಿದೆ.
ಪ್ರಸ್ತುತ ಈ ಬಿಕ್ಕಟ್ಟಿನ ಮೂಲ ಪಶ್ಚಿಮ ಏಷ್ಯಾದಲ್ಲಿದೆ. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ಭುಗಿಲೆದ್ದಿರುವ ಸಂಘರ್ಷದ ಪರಿಣಾಮವಾಗಿ ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಕೊಂಡಿಯಾದ ‘ಹಾರ್ಮುಜ್ ಜಲಸಂಧಿ’ ಮುಚ್ಚಲ್ಪಟ್ಟಿದೆ. ಭಾರತವು ತನ್ನ ವಾರ್ಷಿಕ ಎಲ್‌ಪಿಜಿ ಬಳಕೆಯ ಶೇ. 60ರಷ್ಟನ್ನು ಆಮದು ಮಾಡಿಕೊಳ್ಳಲಿದ್ದು, ಇದರಲ್ಲಿ ಶೇ. 90ರಷ್ಟು ಪಾಲು ಬರುವುದು ಇದೇ ಹಾರ್ಮುಜ್ ಜಲಸಂಧಿಯ ಮೂಲಕವೇ. ಕಡಲ ಮಾರ್ಗ ಬಂದ್ ಆಗಿರುವುದರಿಂದ ಗಲ್ಫ್ ರಾಷ್ಟ್ರಗಳಿಂದ ಭಾರತದತ್ತ ಬರಬೇಕಿದ್ದ ಎಲ್‌ಪಿಜಿ ಹಡಗುಗಳು ಮಾರ್ಗಮಧ್ಯೆಯೇ ಸಿಲುಕಿವೆ.
ಮತ್ತೊಂದೆಡೆ, ಪೆಟ್ರೋಲ್ ಮತ್ತು ಡೀಸೆಲ್ ಕೂಡ ಕಚ್ಚಾ ತೈಲದಿಂದಲೇ ಉತ್ಪಾದನೆಯಾದರೂ, ಭಾರತವು ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ತನ್ನ ಬೃಹತ್ ದೇಶೀಯ ರಿಫೈನರಿಗಳಲ್ಲಿ ಅದನ್ನು ಸಂಸ್ಕರಿಸುತ್ತದೆ. ದೇಶೀಯ ಬೇಡಿಕೆಗಿಂತಲೂ ಹೆಚ್ಚಿನ ಸಂಸ್ಕರಣಾ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ಜೊತೆಗೆ ಕಚ್ಚಾ ತೈಲ ಸಂಗ್ರಹಕ್ಕಾಗಿ ಭಾರತದ ಬಳಿ ಬೃಹತ್ ಭೂಗತ ತೈಲ ಸಂಗ್ರಹಾಗಾರಗಳ ವ್ಯವಸ್ಥೆಯಿದೆ. ಎಲ್‌ಎನ್‌ಜಿ ಪೂರೈಕೆಗೆ ಸಂಬಂಧಿಸಿದಂತೆ ವಿವಿಧ ರಾಷ್ಟ್ರಗಳೊಂದಿಗೆ ದೀರ್ಘಾವಧಿಯ ಒಪ್ಪಂದಗಳಿದ್ದು, ವಿಭಿನ್ನ ಮಾರ್ಗಗಳ ಮೂಲಕ ಪೂರೈಕೆಯಾಗುತ್ತಿರುವುದರಿಂದ ಅಲ್ಲಿ ತಕ್ಷಣಕ್ಕೆ ಬಿಕ್ಕಟ್ಟು ಕಾಡುತ್ತಿಲ್ಲ.
ಆದರೆ, ಎಲ್‌ಪಿಜಿ ಬಳಕೆಯ ಸ್ಥಿತಿ ತೀರಾ ಸೂಕ್ಷ್ಮವಾಗಿದೆ. ದೇಶದಲ್ಲಿ ಪ್ರಸ್ತುತ 33.21 ಕೋಟಿ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಸಂಪರ್ಕಗಳಿದ್ದರೂ, ಇಡೀ ದೇಶದಲ್ಲಿರುವ ಒಟ್ಟು ಎಲ್‌ಪಿಜಿ ಶೇಖರಣಾ ಸಾಮರ್ಥ್ಯ ಕೇವಲ 1.4 ಲಕ್ಷ ಟನ್‌ಗಳು ಮಾತ್ರ. ಅಂದರೆ, ಹಡಗುಗಳ ಪೂರೈಕೆ ನಿಂತರೆ ಈ ದಾಸ್ತಾನು ಕೇವಲ ಎರಡು ದಿನಗಳ ಬಳಕೆಗೆ ಮಾತ್ರ ಸಾಕಾಗುತ್ತದೆ. ಈ ಬಿಕ್ಕಟ್ಟು ಕೇಂದ್ರ ಸರ್ಕಾರದ ಗಂಭೀರ ವೈಫಲ್ಯಗಳನ್ನು ಬಟಾಬಯಲು ಮಾಡಿದೆ. ಯುದ್ಧದಂತಹ ತುರ್ತು ಪರಿಸ್ಥಿತಿಯನ್ನು ಎದುರಿಸಲು ಕಚ್ಚಾ ತೈಲಕ್ಕೆ ಬೃಹತ್ ಭೂಗತ ಸಂಗ್ರಹಾಗಾರಗಳನ್ನು ನಿರ್ಮಿಸಿದ ಸರ್ಕಾರ, ದೈನಂದಿನ ಅತ್ಯಗತ್ಯವಾಗಿರುವ ಎಲ್‌ಪಿಜಿಗೆ ಅಂತಹ ಯಾವುದೇ ಬೃಹತ್ ಮೀಸಲು ಸಂಗ್ರಹಾಗಾರಗಳನ್ನು ನಿರ್ಮಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಇದನ್ನು ಓದಿದ್ದೀರಾ? ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ
ಈ ದೂರದೃಷ್ಟಿಯ ಕೊರತೆಯೇ ಇಂದಿನ ಹಾಹಾಕಾರಕ್ಕೆ ಪ್ರಮುಖ ಕಾರಣ. ಜೊತೆಗೆ, ಶೇ. 90ರಷ್ಟು ಆಮದಿಗೆ ಕೇವಲ ಗಲ್ಫ್ ರಾಷ್ಟ್ರಗಳು ಮತ್ತು ಒಂದೇ ಮಾರ್ಗವನ್ನು ನೆಚ್ಚಿಕೊಂಡಿದ್ದು ಸರ್ಕಾರದ ರಾಜತಾಂತ್ರಿಕ ಹಾಗೂ ಆರ್ಥಿಕ ಕಾರ್ಯತಂತ್ರದ ಲೋಪವನ್ನು ಎತ್ತಿ ತೋರಿಸುತ್ತದೆ. ವಿರೋಧ ಪಕ್ಷದ ನಾಯಕರು ಕೂಡ ಇದೇ ವಿಚಾರವಾಗಿ ಕೇಂದ್ರದ ವಿಫಲ ವಿದೇಶಾಂಗ ನೀತಿಯೇ ಇಂದಿನ ಗ್ಯಾಸ್ ಕೊರತೆಗೆ ಕಾರಣ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಿಕ್ಕಟ್ಟಿನಿಂದಾಗಿ ವಾಣಿಜ್ಯ ಸಿಲಿಂಡರ್ ಬೆಲೆ ದಿಢೀರ್ ಏರಿಕೆಯಾಗಿದೆ. ದೆಹಲಿಯಲ್ಲಿ ಗೃಹಬಳಕೆ ಸಿಲಿಂಡರ್ ದರ 913 ರೂಪಾಯಿ ತಲುಪಿದ್ದರೆ, ವಾಣಿಜ್ಯ ಸಿಲಿಂಡರ್ ದರ 1,884 ರೂಪಾಯಿಗೆ ಜಿಗಿದಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಎಚ್ಚೆತ್ತಿರುವ ಸರ್ಕಾರ, ‘ಅಗತ್ಯ ವಸ್ತುಗಳ ಕಾಯ್ದೆ- 1955’ ಅನ್ನು ಜಾರಿಗೊಳಿಸಿದ್ದು, ಪೆಟ್ರೋಕೆಮಿಕಲ್ ಕಾರ್ಖಾನೆಗಳಿಗೆ ಹೋಗಬೇಕಿದ್ದ ಪ್ರೋಪೇನ್ ಮತ್ತು ಬ್ಯೂಟೇನ್ ಅನಿಲಗಳನ್ನು ಗೃಹಬಳಕೆಯ ಎಲ್‌ಪಿಜಿ ಉತ್ಪಾದನೆಗೆ ಬಳಸುವಂತೆ ರಿಫೈನರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಕಾಳಸಂತೆಯಲ್ಲಿ ಸಿಲಿಂಡರ್‌ಗಳು ಮಾರಾಟವಾಗುವುದನ್ನು ತಡೆಯಲು ಒಂದು ಸಿಲಿಂಡರ್ ಬುಕ್ ಮಾಡಿದ ಬಳಿಕ, ಮತ್ತೊಂದು ಸಿಲಿಂಡರ್ ಬುಕಿಂಗ್‌ಗೆ ಕನಿಷ್ಠ 25 ದಿನಗಳ ಅಂತರವನ್ನು ಕಡ್ಡಾಯಗೊಳಿಸಲಾಗಿದೆ ಹಾಗೂ ಇ-ಕೆವೈಸಿ ಮಾಡಿಸುವುದನ್ನು ಅನಿವಾರ್ಯ ಮಾಡಲಾಗಿದೆ. ಇವೆಲ್ಲವನ್ನು ಗಮನಿಸಿದರೆ, ಇಂಧನ ಕ್ಷೇತ್ರದಲ್ಲಿ ಬಲವಾದ ತಳಪಾಯ ಹೊಂದಿರುವ ದೇಶ, ಅಡುಗೆ ಅನಿಲದ ವಿಷಯದಲ್ಲಿ ತೋರಿದ ನಿರ್ಲಕ್ಷ್ಯವು ಭಾರತದ ಇಂಧನ ಭದ್ರತೆಯ ಅತಿದೊಡ್ಡ ಲೋಪವಾಗಿದ್ದು, ಭವಿಷ್ಯದಲ್ಲಿ ಬೃಹತ್ ಎಲ್‌ಪಿಜಿ ಸಂಗ್ರಹಾಗಾರಗಳ ನಿರ್ಮಾಣವೊಂದೇ ಇದಕ್ಕೆ ಶಾಶ್ವತ ಪರಿಹಾರವಾಗಿದೆ.





